ಮಂಗಳವಾರ, ಅಕ್ಟೋಬರ್ 20, 2020
23 °C
ಪುಟಾಣಿಗಳ ‘ಬೀಜ ಲೋಕ’ದ ಬೆರಗು: ಲಾಕ್‌ಡೌನ್‌ ಕಲಿಸಿದ ‘ಪಾಸಿಟಿವ್’ ಪಾಠ

PV Web Exclusive| ಕೋವಿಡ್ ಕಾಲದಲ್ಲಿ ಪುಟಾಣಿಗಳು ಸೃಷ್ಟಿಸಿದ ‘ಜೀವಚೈತನ್ಯ’ದ ಕತೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್–19 ಸಾಂಕ್ರಾಮಿಕ ಕಾಯಿಲೆ ಸೃಷ್ಟಿಸಿದ ಬಿಕ್ಕಟ್ಟು ಅಷ್ಟಿಷ್ಟಲ್ಲ. ದಿನಬೆಳಗಾದರೆ ಗೋಳಿನ ಕತೆಗಳ ಸರಮಾಲೆ ಮನಸ್ಸನ್ನು ಆವರಿಸಿ ಅವ್ಯಕ್ತ ದುಗುಡಗಳು ಹೆಪ್ಪುಗಟ್ಟುತ್ತವೆ. ‘ನೆಗೆಟಿವ್’ ಕತೆಗಳ ನಾಗಾಲೋಟದ ನಡುವೆ, ಈ ‘ಪಾಸಿಟಿವ್’ ಕತೆ ಖುಷಿ ಮೂಡಿಸುವಂತಿದೆ. ಇದು ಕೋವಿಡ್ ಕಾಲದಲ್ಲಿ ಪುಟಾಣಿಗಳು ಸೃಷ್ಟಿಸಿದ ಜೀವಚೈತನ್ಯದ ಕತೆ...

ವಾರದ ಹಿಂದೆ ಊರಿಗೆ ಹೋದಾಗ ಆತ್ಮೀಯರೊಬ್ಬರು ಮಾತಿಗೆ ಸಿಕ್ಕರು. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು, ಮಾಸ್ಕ್ ಧರಿಸದೇ ಓಡಾಡುವವರು, ಮಾರುಕಟ್ಟೆಯಲ್ಲಿ ಪ್ರಚಾರ ಪಡೆದುಕೊಳ್ಳುತ್ತಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳು ಹೀಗೆ ಮಾತಿನ ಎಲ್ಲ ಮಗ್ಗುಲುಗಳಲ್ಲೂ ಕೊರೊನಾವೇ ಸುತ್ತುತ್ತಿತ್ತು. ಹಾಗೆ ಹೇಳುತ್ತ ಅವರು, ‘ಈ ಲಾಕ್‌ಡೌನ್ ಸುಮಾರು ಮಕ್ಳಿಗೆ ಹೊಸ ಪಾಠ ಕಲ್ಸಿದೆ ಗೊತ್ತಿದ್ಯಾ? ತರಕಾರಿ ಹಿತ್ಲು ಬೆಳ್ಸಿದಾರೆಹ್ಯಾಂಗೆ ಗೊತ್ತುಂಟಾ’ ಎನ್ನುತ್ತ ಅಚ್ಚರಿಯೊಂದನ್ನು ಬಿಚ್ಚಿಟ್ಟರು.

ಅವರ ಕತೆ ನನ್ನಲ್ಲಿ ಕುತೂಹಲ ಹುಟ್ಟಿಸಿತು. ಮಕ್ಕಳ ಪಾಲಕರ ಮೊಬೈಲ್ ನಂಬರ್ ಸಂಗ್ರಹಿಸಿ, ಅವರ ಮನೆಗೆ ಹೋಗಲು ನಿರ್ಧರಿಸಿದೆ.

ಅಶ್ವಿನಿ ಸರ್ಕಲ್, ಶಿರಸಿ ಪೇಟೆಯ ಮಧ್ಯಭಾಗದಲ್ಲಿದೆ. ಇಲ್ಲಿನ ಮನೆಯೊಂದರ ಹಿಂಭಾಗದಲ್ಲಿರುವ ಪುಟ್ಟ ಹಿತ್ತಲು ಈಗ ಆ ಮನೆಯ ಐವರು ಮಕ್ಕಳ ಕೌತುಕದ ಜಗತ್ತು. ಅಲ್ಲಿ ಬೀನ್ಸ್, ಸೌತೆಕಾಯಿ, ಉದ್ದ ಬೀನ್ಸ್ (ಸ್ಥಳೀಯ ಭಾಷೆಯಲ್ಲಿ ಅಂಗಿಕಸೆ ಸೋಡಿಗೆ) ಬಳ್ಳಿಗಳ ಚಪ್ಪರಗಳು ಮೇಲೆದ್ದಿವೆ. ಹಾಗಲ, ಹಾಲುಗುಂಬಳ ಬಳ್ಳಿಗಳು ಹೂ ಅರಳಿಸಿವೆ. ಬೆಂಡೆ ಗಿಡ ಕಾಯಿ ಬಿಟ್ಟಿದೆ. ಪಾಲಕ್ ಗಿಡ ಚಿಗುರೊಡೆಯುತ್ತಿದೆ. ಕೋವಿಡ್ ಕಾಲದ ಮನೆಯ ಪಾಠಶಾಲೆಯಲ್ಲಿ ಮಕ್ಕಳು ತರಕಾರಿ ಬೆಳಸುವ ಹೊಸ ‘ಆಟ’ ಕಲಿತಿದ್ದಾರೆ.

ಏನಿದು ಹೊಸ ಆಟ?

ವಕೀಲ ಪ್ರದೀಪ ಹೆಗಡೆ ಅವರ ಮಗ ಪ್ರತೀಕ್ ಏಳನೇ ತರಗತಿಯ ವಿದ್ಯಾರ್ಥಿ. ಶಾಲೆ ಇನ್ನೂ ಪ್ರಾರಂಭವಾಗಿಲ್ಲವೆಂದು ಬೇಸರ ಕಳೆಯಲು ಅಜ್ಜಿ ಮನೆಗೆ ಹೋಗಿದ್ದ ಪ್ರತೀಕನಿಗೆ, ಅಂಗಳದಲ್ಲಿ ಅಜ್ಜಿ ಬೆಳೆಸಿದ ಅಂಗಿಕಸೆ ಸೋಡಿಗೆಯ ಬಳ್ಳಿಯ ಸೆಳೆತ ಮೂಡಿದೆ. ಅಜ್ಜಿಯ ಬಳಿ ಇದ್ದ ತರಕಾರಿ ಬೀಜ ತಂದು ತಾನೂ ತರಕಾರಿ ಬೆಳೆಸಬೇಕೆಂಬ ಆಸೆ ಚಿಗುರೊಡೆದಿದೆ. ಪೇಟೆಮನೆಗೆ ಬಂದವನೇ ಹಿಂಭಾಗದ ಹಿಡಿ ಜಾಗದಲ್ಲಿ ವೋಳಿ ಸಿದ್ಧ ಮಾಡಿ ಸೋಡಿಗೆ ಬೀಜ ಹಾಕಿದ್ದಾನೆ. ಅದು ಮೊಳಕೆಯೊಡೆದು ಎಲೆಗಳು ಕವಲಾಗುತ್ತಿದ್ದಂತೆ, ಅವನ ತಂಗಿ ಸಾನಿಕಾ, ಸಹೋದರರಾದ ಅಲೋಕ್, ಆರ್ಯನ್–ಅಶ್ವಿನ್ ಹೀಗೆ ಎಲ್ಲರಲ್ಲೂ ತರಕಾರಿ ಬೆಳೆಸುವ ಕನಸು ಮೂಡಿದೆ.

ಹೀಗೆ ತಿಂಗಳ ಹಿಂದೆ ಮಕ್ಕಳು ಕಂಡ ಕನಸು ಈಗ ಗಿಡ–ಬಳ್ಳಿಗಳಲ್ಲಿ ಟಿಸಿಲೊಡೆದಿದೆ. ಈಗ ದಿನವಿಡೀ ಈ ಮಕ್ಕಳಿಗೆ ತರಕಾರಿ ಹಿತ್ತಲೇ ಆಟದ ಪ್ರಪಂಚ. ‘ಶಾಲೆ ಇದ್ದಾಗ ಅಕ್ಟೋಬರ್ ಮತ್ತು ಮೇ ರಜೆಯಲ್ಲಿ ಮಾತ್ರ ಅಜ್ಜನ ಮನೆಗೆ ಹೋಗುವುದಾಗಿತ್ತು. ಸಾಮಾನ್ಯವಾಗಿ ವರ್ಷವಿಡೀ ಅಲ್ಲಿರುವ ಬದನೆ ಗಿಡಗಳನ್ನು ಮಾತ್ರ ಮಕ್ಕಳು ನೋಡುತ್ತಿದ್ದರು. ಈ ಬಾರಿ ರಜೆ ಇದ್ದಿದ್ದಕ್ಕೆ ಪ್ರತೀಕ್ ಅಜ್ಜನಮನೆಯಲ್ಲಿ ಉಳಿದು, ಗದ್ದೆ ಉಳುವುದನ್ನು ಕಲಿತ. ಅಲ್ಲಿ ಬೆಳೆದ ತರಕಾರಿ ಬಳ್ಳಿ ಕಂಡು ತಾನು ಬೆಳೆಸಿದ್ದಾನೆ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು ಆತನ ಅಮ್ಮ ಸ್ಮಿತಾ.

ಬೆಳಗಾದರೆ ಸಾಕು ತರಕಾರಿ ಬಳ್ಳಿ ನೋಡಲು ಓಡುತ್ತಾರೆ. ಜಗುಲಿಯಲ್ಲಿರುವುದಕ್ಕಿಂತ ಹಿತ್ತಲಿನಲ್ಲೇ ಹೆಚ್ಚು ಕಾಲ ಕಳೆಯುತ್ತಾರೆ. ಬಳ್ಳಿ ನಿನ್ನೆಗಿಂತ ಹೆಚ್ಚು ಉದ್ದವಾಗಿದೆ, ಮೊಗ್ಗು ಹೂ ಅರಳಿಸಿದೆ, ಹೊಸ ಎಲೆ ಮೂಡಿದೆ.. ಹೀಗೆ ಬೆರಗಿನ ಲೋಕವೊಂದು ಅವರೆದುರು ಅನಾವರಣಗೊಂಡಿದೆ. ಈ ಮಕ್ಕಳು ಗಿಡಗಳ ಬೆಳವಣಿಗೆ ಗಮನಿಸುವುದನ್ನು ಕಲಿತಿದ್ದಾರೆ. ಎಷ್ಟು ದಿನಕ್ಕೆ ಬಳ್ಳಿ ದೊಡ್ಡದಾಗಿ ಹೂ ಬಿಟ್ಟು, ಫಲ ನೀಡುತ್ತದೆ ಎಂದು ಲೆಕ್ಕ ಹಾಕುವುದನ್ನು ತಿಳಿದಿದ್ದಾರೆ.

ಮೊಬೈಲ್ ಸೆಳೆತ ಬದಿಗೊತ್ತಿದ ಕಾಯಿಪಲ್ಲೆ

ಮೊಬೈಲ್, ಟಿ.ವಿ, ಸ್ಕ್ರೀನ್‌ಗಳ ಮುಂದೆ ಸಮಯ ಕಳೆಯುತ್ತಿದ್ದ ಮಕ್ಕಳ ಆಕರ್ಷಣೆಯ ಕ್ಷೇತ್ರ ಬದಲಾಗಿದೆ. ‘ಬೀಜ ಲೋಕ’ದ ಕುತೂಹಲ ಅವರನ್ನು ಸೂಚಿಗಲ್ಲಿನಂತೆ ಸೆಳೆದಿದೆ. ತಾವೇ ತರಕಾರಿ ಬೆಳೆಸಲು ಆರಂಭಿಸಿದ ಮೇಲೆ ಈ ಮಕ್ಕಳು ಪಾಲಕರ ಜೊತೆ ತರಕಾರಿ ಮಾರುಕಟ್ಟೆಗೆ ಹೋಗಲು ಶುರು ಮಾಡಿದ್ದಾರೆ. ಮುಸ್ಸಂಜೆಯ ವೇಳೆ ರಸ್ತೆ ಬದಿಯಲ್ಲಿ ತರಕಾರಿ ಮಾರುವ ರೈತನ ಬಳಿ ಹೋಗಿ ಮಾತನಾಡಲಾರಂಭಿಸಿದ್ದಾರೆ.

‘ಈ ತರಕಾರಿ ಬೆಳೆಸುವುದು ಹೇಗೆ? ಇದು ಗಿಡದಲ್ಲಿ ಮೂಡುವ ಕಾಯಿಯಾ? ಬಳ್ಳಿಯಲ್ಲಿ ಬೆಳೆಯುವ ಜಾತಿಯಾ? ಬೀಜ ಹಾಕಿ ಬೆಳೆಸಬೇಕಾ? ಹೆಣೆ ನೆಟ್ಟು ಬೆಳೆಸಬಹುದಾ ಹೀಗೆ ನೂರೆಂಟು ಪ್ರಶ್ನೆಗಳನ್ನು ತರಕಾರಿ ಮಾರುವವನ ಬಳಿ ಕೇಳುತ್ತಾರೆ. ಉತ್ತರ ಸಿಕ್ಕಾಗಲೇ ಮಕ್ಕಳಿಗೆ ಸಮಾಧಾನ’ ಎಂದು ನಗುತ್ತಿದ್ದರು ಸ್ಮಿತಾ.

‘ತರಕಾರಿಯೇ ಈಗ ಅವರ ಮಾತಿನ ಕೇಂದ್ರಬಿಂದು. ಇಬ್ಬರು ಒಟ್ಟಿಗೆ ಸೇರಿದರೆ, ತರಕಾರಿ ಬೀಜಗಳ ಬಗ್ಗೆ ಚರ್ಚಿಸುತ್ತಾರೆ. ನಮಗೆ ಈ ಸುದ್ದಿ ಕೇಳಿ ಕೇಳಿ ‘ನಿಂಗಳ್ ಆ ಬೀಜದ ಕತೆ ಬಿಡ್ರೊ’ ಎಂದು ಓಡಿಸುವಷ್ಟು ಅವರ ಕಾಯಿಪಲ್ಲೆ ಪ್ರಪಂಚ ವಿಸ್ತರಣೆಯಾಗಿದೆ. ಹೊಸದಾಗಿ ಈಗ ಧಾನ್ಯಗಳು ಸೇರಿಕೊಂಡಿವೆ. ಯಾವ ಹಂಗಾಮಿನಲ್ಲಿ ಯಾವ ಧಾನ್ಯ ಬೆಳೆಯುತ್ತಾರೆ ಎಂಬುದು ಅವರ ಹೊಸ ಟಾಪಿಕ್. ಮನೆಗೆ ನೆಂಟರು ಬಂದರೆ, ನಿಮ್ಮ ಮನೆಯಲ್ಲಿ ಯಾವ ತರಕಾರಿ ಬೆಳೆಸಿದ್ದೀರಿ, ಇನ್ನೇನು ಬೆಳೆಯುತ್ತೀರಿ ಎಂದು ಅವರ ಬೆನ್ನುಬೀಳುತ್ತಾರೆ. ಫೋನ್‌ ಬಂದರೆ ಅಲ್ಲೂ ಇದೇ ಸುದ್ದಿ’ ಎನ್ನುತ್ತ ಬದಲಾದ ಮಕ್ಕಳ ಆಸಕ್ತಿ, ಅವರ ನಡುವಿನ ಸಣ್ಣ ಪೈಪೋಟಿ, ಸಸಿಗಳಿಗೆ ನೀರುಣಿಸುವಾಗಿನ ಒಗ್ಗಟ್ಟು ಇವನ್ನೆಲ್ಲ ಹೇಳುವಾಗ ಮನೆಮಂದಿಗೆ ಸಂತಸ.

ಹಳ್ಳಿಯ ಒಡನಾಟವಿರುವ ಹಲವಾರು ಮಕ್ಕಳಲ್ಲಿ ‘ಲಾಕ್‌ಡೌನ್’ ನೆಲಮೂಲದ ಜ್ಞಾನ ಬಿತ್ತಿದೆ. ಶಾಲೆಗೆ ರಜೆಯಿರುವ ಕಾರಣ ಹಳ್ಳಿಗೆ ಹೋಗಿ ಕಾಲ ಕಳೆಯುವ ಮಕ್ಕಳು, ಆನ್‌ಲೈನ್ ಪಾಠದ ಬಿಡುವಿನಲ್ಲಿ ಗುಡ್ಡ–ಬೆಟ್ಟ, ತೋಟ ತಿರುಗಲು ಕಲಿತಿದ್ದಾರೆ. ಕೆಸರು ಗದ್ದೆ ಉಳುವುದು, ಭತ್ತದ ನೆಟ್ಟಿ(ನಾಟಿ) ಮಣ್ಣಿನ ನಂಟನ್ನು ಬೆಳೆಸಿದೆ. ಹಸಿರಿನ ಸಾಂಗತ್ಯ ಮಕ್ಕಳ ಲವಲವಿಕೆಯನ್ನು ಇಮ್ಮಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು