ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day| ಸಾಲು ಮರದ ‘ಪಿಗ್ಮಿ ಕಲೆಕ್ಟರ್’

ಮಾಧವ್ ಉಳ್ಳಾಲ್ ಹೆದ್ದಾರಿ ಬದಿಯ ಗಿಡಗಳಿಗೆ ಆಶ್ರಯದಾತ
Last Updated 5 ಜೂನ್ 2022, 5:00 IST
ಅಕ್ಷರ ಗಾತ್ರ

ಮಂಗಳೂರು: ಮಾಧವ್‌ ಉಳ್ಳಾಲ್, ವೃತ್ತಿಯಲ್ಲಿ ಇವರೊಬ್ಬ ಪಿಗ್ಮಿ ಕಲೆಕ್ಟರ್. ಗಿಡ–ಮರಗಳನ್ನು ಅಮ್ಮನಂತೆ ಪೋಷಿಸುವ ಇವರು, ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಬೆಳೆಯುತ್ತಿರುವ ಸಾಲು ಮರಗಳಿಗೆ ಆಶ್ರಯದಾತರು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರಿನ ನಂತೂರು ವೃತ್ತದಿಂದ ತಲಪಾಡಿವರೆಗೆ 14 ಕಿ.ಮೀ ಅಂತರದಲ್ಲಿ ಔಷಧ ಗಿಡಗಳು, ಕದಂಬ, ಹೊಂಗೆ, ಹೊನ್ನೆ, ಅರ್ಜುನ, ಕೋಕಂ, ಹೊಳೆ ದಾಸವಾಳ ಹೀಗೆ ಸಸ್ಯ ವೈವಿಧ್ಯಗಳು ಕಣ್ಣಿಗೆ ಬೀಳುತ್ತವೆ. ಈ ಹಸಿರು ಖಜಾನೆಗೆ ಕಾರಣೀಕರ್ತರು ಮಾಧವ್ ಉಳ್ಳಾಲ್. ಇದಕ್ಕೆ ಅವರು ‘ಬ್ರಹ್ಮಶ್ರೀ ನಾರಾಯಣಗುರು ಸಾಲು ಮರಗಳು’ ಎಂದು ಹೆಸರಿಸಿದ್ದಾರೆ.

‘ಹೆದ್ದಾರಿ ಬದಿ ಸಾಲಿನಲ್ಲಿ 2300ಕ್ಕೂ ಹೆಚ್ಚು ಗಿಡಗಳನ್ನು ಎರಡು ವರ್ಷಗಳ ಹಿಂದೆ ನಾಟಿ ಮಾಡಿದ್ದೆವು. 200ರಷ್ಟು ಗಿಡಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ. ಉಳಿದೆಲ್ಲವೂ ನೆಲದ ಸತ್ವ ಹೀರಿ ಸೊಂಪಾಗಿ ಬೆಳೆದಿವೆ. ಅರಣ್ಯ ಇಲಾಖೆ, ಸಮಾನ ಮನಸ್ಕರ ಸಹಕಾರದಿಂದ ಇವೆಲ್ಲ ಸಾಧ್ಯವಾಗಿದೆ’ ಎಂದು ಸ್ಮರಿಸುತ್ತಾರೆ ಅವರು.

ವೃಕ್ಷಗಳೆಂದರೆ ಮಾಧವರಿಗೆ ಅದಮ್ಯ ಪ್ರೀತಿ. ದಿನದ ಅರ್ಧ ಭಾಗವನ್ನು ಗಿಡಗಳಿಗೆ ಮೀಸಲಿಟ್ಟು, ಇನ್ನುಳಿದ ಅರ್ಧ ದಿನದಲ್ಲಿ ಜೀವನ ನಿರ್ವಹಣೆಗಾಗಿ ಪಿಗ್ಮಿ ಸಂಗ್ರಹಕ್ಕೆ ಹೋಗುತ್ತಾರೆ. ಈ ಕಿರು ಆದಾಯದ ಶೇ 1ರಷ್ಟು ಮೊತ್ತವನ್ನು ಗಿಡ ಬೆಳೆಸಲು ಮೀಸಲಿಡುತ್ತಾರೆ.

ದೇವಸ್ಥಾನ, ಶಾಲೆ, ಸ್ಮಶಾನಗಳಿಗೆ ಹಸಿರು ಚಪ್ಪರ ಕಟ್ಟಿರುವ ಇವರು, ಮೂರುವರೆ ದಶಕಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನಾಟಿ, ನವೆಂಬರ್‌ನಿಂದ ‘ಮನೆಗೊಂದು ಗಿಡ’ ಅಭಿಯಾನ ನಡೆಸುತ್ತಾರೆ. ಮನೆ–ಮನೆಗೆ ಹೋಗಿ ಹಿತ್ತಲಿನಲ್ಲಿ ಗುಂಡಿ ತೋಡಿ, ಇವರೇ ನೆಟ್ಟಿರುವ ಜಂಬುನೇರಳೆ ಗಿಡಗಳು ಈಗ ಫಲಕೊಡುತ್ತಿವೆ.

‘ತೊಕ್ಕೊಟ್ಟು, ಕುಂಪಲ, ಉಳ್ಳಾಲದ ಪರಿಸರದಲ್ಲಿ ಈಗ ಜಂಬುನೇರಳೆಯ ಘಮ. ಹಣ್ಣನ್ನು ಕೊಯ್ದು ತಿನ್ನುವಾಗ ಆ ಮನೆಯವರು ನನ್ನನ್ನು ನೆನಪಿಸಿಕೊಂಡು, ಕರೆ ಮಾಡುತ್ತಾರೆ. 2,500ಕ್ಕೂ ಹೆಚ್ಚು ಮನೆಗಳಲ್ಲಿ ಜಂಬುನೇರಳೆ ಮರ ಹಣ್ಣು ಕೊಡುತ್ತಿದೆ’ ಎನ್ನುವಾಗ ಅವರಿಗೆ ತೃಪ್ತ ಭಾವ.

‘ಮಾಧವ ಉಳ್ಳಾಲ್ ಅವರು ಗಿಡ ನೆಡುವುದಷ್ಟೇ ಅಲ್ಲ, ಅವುಗಳ ಪೋಷಣೆಯನ್ನು ಜತನದಿಂದ ಮಾಡುತ್ತಾರೆ. ಅರಣ್ಯ ಇಲಾಖೆಗೆ ಅವರ ಸಹಕಾರ ದೊಡ್ಡದು’ ಎಂದು ಡಿಸಿಎಫ್ ಡಾ. ದಿನೇಶ್‌ಕುಮಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT