ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟ್ಟೆಗೆ ಆರೋಗ್ಯ ಬಡಿಸುವ ತಾರಸಿಯ ತಾಜಾ ತರಕಾರಿ

Last Updated 11 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಮನೆಗೊಂದು ತಾರಸಿ ಕೈತೋಟ ಇದ್ದರೆ ತಟ್ಟೆಗೆ ತಾಜಾ ತರಕಾರಿ ಬಂದ ಹಾಗೆಯೇ. ಆರೋಗ್ಯ ಕಾಪಾಡಿಕೊಳ್ಳಲು ನೆತ್ತಿ ಮೇಲೊಂದು ಸುಲಭದ ವ್ಯವಸ್ಥೆ. ಹಸಿರು ಎಲೆ, ಗಿಡ–ಬಳ್ಳಿ ತುಂಬ ತೂಗಾಡುವ ಹೂವು, ಕಾಯಿ–ಹಣ್ಣುಗಳ ಗೊಂಚಲು ಕಂಡಾಗೆಲ್ಲ ಮನದ‌ ಕ್ಲೇಷಗಳೆಲ್ಲ ಮಾಯ.

ತಾರಸಿ ತೋಟವೂ ಬೇಡ; ನೀರು, ಗೊಬ್ಬರ ಹಾಕಿ ತರಕಾರಿ ಬೆಳೆಯುವ ಉಸಾಬರಿ ಯಾರಿಗೆ ಬೇಕು ಎಂದು ಉದಾಸೀನ ಮಾಡಿದರೆ ಆರೋಗ್ಯ ತಂತಾನೇ ಬರುವುದಿಲ್ಲ. ಹಾಗಂತ ಬೇರೆಲ್ಲೂ ತಾಜಾ ತರಕಾರಿ ಸಿಗಲ್ಲ ಅಂತೇನೂ ಇಲ್ಲ. ನಾವೇ ಬೆಳೆಯುವುದರಲ್ಲಿ ಅವರ್ಣನೀಯ, ಕಲ್ಪನಾತೀತವಾದ ಸಾರ್ಥಕ ಭಾವವಿರುತ್ತದೆ. ನಗರದಲ್ಲಿ ಇಂಚಿಂಚು ಭೂಮಿಗೂ ಬಂಗಾರದ ಬೆಲೆ. ಗಾಡಿ ನಿಲ್ಲಿಸಲೂ ಜಾಗವಿಲ್ಲ. ಹಿತ್ತಿಲು ಮಾಡಿ ಕುಂಡದಲ್ಲಿ ಹೂವು ಬೆಳೆಸುವುದಕ್ಕೂ ನೂರು ಸಲ ಯೋಚಿಸಬೇಕು. ಇನ್ನು ಉಳಿದಿದ್ದು ತಾರಸಿ ಮಾತ್ರವಲ್ಲವೇ?

ಸಮಯದ ಅಭಾವ, ಗಡಿಬಿಡಿಯ ಬದುಕಿನಲ್ಲಿ ಇಂಥ ಸಣ್ಣ ಪುಟ್ಟ ಖುಷಿಯ ಕ್ಷಣಗಳನ್ನು ಅನುಭವಿಸಲಾಗದಲ್ಲ ಎನ್ನುವ ತಾಕಲಾಟವೇನು? ಬಿಟ್ಹಾಕಿ. ನಿಮ್ಮ ಈ ತಾಕಲಾಟಕ್ಕೆ ಒಂದು ಪುಟ್ಟ ನೆರವಿನ ಹಸ್ತ ನೀಡುವುದಕ್ಕೆ ‘ಹ್ಯಾಪಿ ಗಾರ್ಡನರ್ಸ್’ ಅಂತ ಒಂದು ಸಂಸ್ಥೆಯಿದೆ. ತಾರಸಿ ಹಾಗೂ ಮನೆ ಅಂಗಳದಲ್ಲಿ ಬೇಕಾದ ತರಕಾರಿ ಬೆಳೆದು ಕೊಡುವ ಸಂಸ್ಥೆ ಇದು. ಒಂದು ತರಹದ ಸಾಮುದಾಯಿಕ ಪರಿಸರ ಪ್ರಜ್ಞೆಯಲ್ಲಿ ಯೋಚಿಸುವುದು ಇದರ ವಿಶೇಷವೆನಿಸುತ್ತದೆ. ಎಲ್ಲೆಡೆ ಮರ – ಗಿಡಗಳು ಬೆಳೆದು ಕಾಂಕ್ರೀಟ್‌ ಕಾಡಿನಲ್ಲಿ ಕಾಜಾಣಗಳು ಹಾಡಲಿ ಎನ್ನುವ ‍ಕಾಳಜಿ ಈ ಸಂಸ್ಥೆಯದ್ದು.

ಇದರ ಪರಿಕಲ್ಪನೆಯೇ ತುಂಬ ಸರಳ ಮತ್ತು ವಿಶೇಷವಾಗಿದೆ.

ನೀರಷ್ಟೇ ಉಣಿಸಿ: ತಾರಸಿ ತೋಟಕ್ಕೆ ಬೇಕಾದ ಬಂಡವಾಳವನ್ನು ಸಂಸ್ಥೆಯೇ ಹೂಡುತ್ತದೆ. ಬೀಜ, ಸಾವಯವ ಗೊಬ್ಬರವನ್ನೂ ನೀಡುತ್ತದೆ. ಕೆಲಸಕ್ಕೆ ಒಬ್ಬರನ್ನು ನಿಯೋಜಿಸಿ ಕೈತೋಟದ ಉಸ್ತುವಾರಿ ನೋಡಿಕೊಳ್ಳುತ್ತದೆ. ಮರದ ಟ್ರೇ ಮತ್ತು ಕುಂಡಗಳಲ್ಲಿ ಮನೆ ಮಂದಿಗೆಲ್ಲ ಇಷ್ಟದ ತರಕಾರಿ, ಸೊಪ್ಪು ಬೆಳೆದು ಕೊಡುತ್ತದೆ. ಸಂಸ್ಥೆಯಿಂದ ನಿಯೋಜಿತ ಕೆಲಸಗಾರ ವಾರದಲ್ಲಿ ಒಂದು ದಿನ ಭೇಟಿ ನೀಡಿ ತರಕಾರಿ ಗಿಡ–ಬಳ್ಳಿಗಳಿಗೆ ಗೊಬ್ಬರ, ಕೀಟನಾಶಕ ಸಿಂಪಡಿಸಿ ಆರೈಕೆ ನಡೆಸುತ್ತಾರೆ. ಈ ಕೆಲಸಕ್ಕೆ ಇಂತಿಷ್ಟು ಹಣ ಪಾವತಿಸಬೇಕಷ್ಟೆ. ದಿನಾಲೂ ನೀರು ಉಣಿಸಿ, ಫಸಲು ಸವಿಯಿರಿ. ಸಿಂಪಲ್‌!

‘ಮಕ್ಕಳು ಜಂಕ್‌ಫುಡ್‌ ದಾಸರಾಗಿದ್ದರು. ಆದರೆ, ಈಗ ಯಥೇಚ್ಚ ತರಕಾರಿ ಸವಿಯುತ್ತಿದ್ದಾರೆ. ತಾರಸಿ ತೋಟದ ತಾಜಾ ತರಕಾರಿ ಮನೆ ಮಂದಿಗೂ ಇಷ್ಟವಾಗುತ್ತಿದೆ. ಸಣ್ಣ ಜಾಗ ಹೊಂದಿರುವ ಪ್ರತಿ ಮನೆಗಳಿಗೂ ಇಂತಹ ಪರಿವರ್ತನೆ ಬರುವಂತಾಲಿ’ ಎನ್ನುವ ಆಶಯ ಎಚ್‌ಎಸ್‌ಆರ್‌ ಲೇಔಟ್‌ನ ನಿರ್ಮಲಾ ಅವರದ್ದು.

ಅಂಗಡಿಯಿಂದ ತರುವ ತರಕಾರಿಯದ್ದು ವಾರಗಟ್ಟಲೇ ಪ್ರಿಜ್‌ನಲ್ಲಿ ಬಾಡುವ ಬಾಳು. ಬಣ್ಣ, ರುಚಿ, ವಾಸನೆ ಕಳೆದುಕೊಂಡ ತರಕಾರಿ ಸೇವನೆ ಆರೋಗ್ಯಕ್ಕೆ ಬೇಕಾದ ತಾಜಾತನ ತಂದೀತೆ? ಮನೆ ತಾರಸಿಯಲ್ಲೇ ತರಕಾರಿ ಬೆಳೆದರೆ ಪ್ರಿಜ್‌ನಲ್ಲಿಡುವ ಅಗತ್ಯವೇ ಇರುವುದಿಲ್ಲ. ಇದರಿಂದ ವಿದ್ಯುತ್ ಉಳಿತಾಯವಾಗುತ್ತದೆ. ಮಾಲಿನ್ಯವೂ ತಪ್ಪುತ್ತದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವೂ ಬೀರುವುದಿಲ್ಲ. ಪ್ರತಿಯೊಂದಕ್ಕೂ ಅಂತಃಸಂಬಂಧವಿದೆ. ತಾರಸಿ ತೋಟ ಅದ್ಭುತ ಪರಿಹಾರದಂತೆ ಎನ್ನುವ ಅನುಭವ ಅವರದ್ದು.

ಮಣ್ಣಿನೊಂದಿಗೆ ಸಂಬಂಧ: ಬಹುತೇಕರಿಗೆ ವ್ಯಾಯಾಮ ಇತ್ಯಾದಿ ದೈಹಿಕ ಚಟುವಟಿಕೆ ಕಡಿಮೆ. ಮಕ್ಕಳಿಗಂತೂ ಬದನೆಕಾಯಿ ಹೇಗೆ ಬೆಳೆಯಲಾಗುತ್ತದೆ ಎಂಬುದರ ಅರಿವಿಲ್ಲ. ಟಿವಿ, ಮೊಬೈಲ್‌ನಲ್ಲೇ ಜೀವನ ವ್ಯರ್ಥವಾಗುತ್ತಿದೆ. ಮನುಷ್ಯನಿಗೆ ಮಣ್ಣಿನೊಂದಿಗೆ ಬಿಡದ ನಂಟಿದೆ. ಮತ್ತೆ ಆ ಭಾವಕ್ಕೇ ಮರಳಬೇಕಿದೆ. ಮಣ್ಣಿನೊಂದಿಗೆ ಮತ್ತೆ ಮನುಷ್ಯ ಸಂಬಂಧ ಬೆಸೆಯುವ ಉದ್ದೇಶದಿಂದ ಪ್ರತಿ ಮನೆ ಅಂಗಳ, ತಾರಸಿಯಲ್ಲಿ ಕೈತೋಟ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ‌‘ಹ್ಯಾಪಿ ಗಾರ್ಡನರ್ಸ್’ ಸಂಸ್ಥೆ ಸಿಇಒ ಸಂತೋಷ್‌ ಹೇಳುತ್ತಾರೆ.

ಅದೆಷ್ಟೇ ದೊಡ್ಡ ಶ್ರೀಮಂತನಿರಲಿ ಕೈತೋಟದಲ್ಲಿ ಗಿಡಗಳಿಗೆ ನೀರು ಉಣಿಸುವಾಗ, ಕಳೆ ಕೀಳುವಾಗ ಸಿಗುವ ಆನಂದವನ್ನು ತನ್ನ ಸಂಪತ್ತು ತಂದುಕೊಡಲಾಗದು ಎಂಬ ಅನುಭವವಾಗುತ್ತದೆ. ಇಂಥದೊಂದು ಮನೋಧರ್ಮ ಅಳವಡಿಸಿಕೊಂಡರೆ ತಾಳ್ಮೆ ಮತ್ತು ಸಂಯಮಕ್ಕೆ ತಾನಾಗಿಯೇ ತಾವು ಸಿಗುತ್ತದೆ. ಕಲಿಯುವುದಕ್ಕೆ ಅವಕಾಶ ಸಿಗುತ್ತದೆ. ಕೇವಲ ದುಡ್ಡಿಗಾಗಿ ಈ ಸಂಸ್ಥೆಯನ್ನು ನಡೆಸುತ್ತಿಲ್ಲ. ನಮಗೊಂದು ಸಾಮಾಜಿಕ ಜವಾಬ್ದಾರಿಯೂ ಇದೆ ಎನ್ನುತ್ತದೆ ಸಂಸ್ಥೆ.

ಮಾರತ್‌ಹಳ್ಳಿ, ವೈಟ್‌ಫೀಲ್ಡ್‌, ಯಮಲೂರು, ಎಚ್ಎಸ್‌ಆರ್ ಲೇಔಟ್‌, ಅಕ್ಷಯ್‌ ನಗರ, ಬಿಟಿಎಂ ಲೇಔಟ್‌, ಜಯನಗರ, ಬನಶಂಕರಿ, ಶ್ರೀನಿವಾಸನಗರ, ಬಸವೇಶ್ವರನಗರ, ರಾಜಾಜಿನಗರ, ಜ್ಞಾನಭಾರತಿ ಕ್ಯಾಂಪಸ್‌ ಸೇರಿದಂತೆ ನಗರದ ಶೇ75ರಷ್ಟು ಭಾಗದಲ್ಲಿ ಈ ವಿನೂತನ ಪ್ರಯೋಗದ ತಾರಸಿ ಕೈತೋಟಗಳ ಮೂಲಕ ಸಂಸ್ಥೆ ತನ್ನದೇ ಛಾಪು ಮೂಡಿಸಿದೆ. ಸಂಪರ್ಕ: 9845859654.

**

ಮಕ್ಕಳು ಜಂಕ್‌ಫುಡ್‌ ದಾಸರಾಗಿದ್ದರು. ಆದರೆ, ಈಗ ಯಥೇಚ್ಚ ತರಕಾರಿ ಸವಿಯುತ್ತಿದ್ದಾರೆ. ತಾರಸಿ ತೋಟದ ತಾಜಾ ತರಕಾರಿ ಮನೆ ಮಂದಿಗೂ ಇಷ್ಟವಾಗುತ್ತಿದೆ. ಸಣ್ಣ ಜಾಗ ಹೊಂದಿರುವ ಪ್ರತಿ ಮನೆಗಳಿಗೂ ಇಂತಹ ಪರಿವರ್ತನೆ ಬರುವಂತಾಗಲಿ
– ನಿರ್ಮಲಾ, ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿ

**

ಮನುಷ್ಯನಿಗೆ ಮಣ್ಣಿನೊಂದಿಗೆ ಬಿಡದ ನಂಟಿದೆ. ಮತ್ತೆ ಆ ಭಾವಕ್ಕೇ ಮರಳಬೇಕಿದೆ. ಮಣ್ಣಿನೊಂದಿಗೆ ಮತ್ತೆ ಮನುಷ್ಯ ಸಂಬಂಧ ಬೆಸೆಯುವ ಉದ್ದೇಶದಿಂದ ಪ್ರತಿ ಮನೆ ಅಂಗಳ, ತಾರಸಿಯಲ್ಲಿ ಕೈತೋಟ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ.
–‌ ಸಂತೋಷ್‌ ‘ಹ್ಯಾಪಿ ಗಾರ್ಡನರ್ಸ್’ ಸಂಸ್ಥೆ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT