ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಲುರು ನಿಸರ್ಗದ ಓಕುಳಿಯಾಟ

Last Updated 1 ಜೂನ್ 2019, 19:30 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾಕ್ಕೆ ಬ್ರಿಟಿಷರು ತಲುಪುವ 30 ಸಾವಿರ ವರ್ಷಗಳ ಮೊದಲು ಆಫ್ರಿಕಾದಿಂದ ಬುಡಕಟ್ಟು ಗುಂಪುಗಳು ಈ ಖಂಡಕ್ಕೆ ಬಂದಿವೆ ಎಂಬುದು ಮಾನವ ಶಾಸ್ತ್ರಜ್ಞರ ಹೇಳಿಕೆ. ಆದರೆ, ಮೂಲನಿವಾಸಿಗಳ ಪ್ರಕಾರ ಅವರು ಎಲ್ಲಿಂದಲೋ ಬಂದವರಲ್ಲ. ಅದು ಅವರ ಹಿರಿಯರ ನೆಲ. ಉಲುರು ಮತ್ತು ಕಾಟಾ ಜೂಟಾದ ಶಿಲಾ ಕ್ಷೇತ್ರಗಳಲ್ಲಿ ಅವರ ಹಿರಿಯರ‘ ಸ್ಪಿರಿಟ್’ ಇದೆ.

ಆಸ್ಟ್ರೇಲಿಯಾ ಖಂಡವನ್ನು ಬಿಳಿಯರು ತಮ್ಮ ಅನ್ವೇಷಣೆ ಎಂದು ಕರೆದರು. ಆಗ ಅವರನ್ನು ಗೆರಿಲ್ಲಾ ರೀತಿಯಲ್ಲಿ ಮೂಲನಿವಾಸಿಗಳು ಎದುರಿಸಿದರು. ಮೂಲನಿವಾಸಿಗಳನ್ನು ಬ್ರಿಟಿಷರು ‘ಅಬ್‍ಒರಿಜಿನಲ್ಸ್’ ಎಂದು ಕರೆದರು. ಅವರನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಹತ್ಯೆ ಮಾಡಿದರು. ನಾನು ನೂಸಾದಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆಬದಿ ಫಲಕವೊಂದನ್ನು ಕಂಡೆ. ‘ಬ್ರಿಟಿಷರು 200 ಮೂಲನಿವಾಸಿಗಳನ್ನು ಗುಂಡಿಕ್ಕಿ ಕೊಂದ ಸ್ಥಳ’ ಎಂದಿತ್ತು. ‘ಇದು ಕೊನೆಯ ಹತ್ಯೆ’ ಎಂದು ಬರೆಯಲಾಗಿತ್ತು.

ಸಾಮಾನ್ಯವಾಗಿ ಒಂಟಿ ಪುರುಷರೇ ಐರೋಪ್ಯ ದೇಶದಿಂದ ಬಂದವರು. ಈ ಘರ್ಷಣೆಯ ಕಾಲದಲ್ಲಿ ಮೂಲನಿವಾಸಿ ಮಹಿಳೆಯರ ಮೇಲೆ ಅತ್ಯಾಚಾರಗಳಾದವು. ಗಂಡಂದಿರಿಂದ ಅವರನ್ನು ಕಸಿದುಕೊಂಡರು. ಮಕ್ಕಳನ್ನು ಹೆತ್ತವರಿಂದ ಕಸಿದರು. ಬ್ರಿಟಿಷ್ ಪುರುಷನಿಗೆ ಮೂಲನಿವಾಸಿ ಹೆಣ್ಣಿನಿಂದ ಜನಿಸಿದ ಮಕ್ಕಳನ್ನೂ ಗಾಡಿಯಲ್ಲಿ ತುಂಬಿಸಿ ಕ್ಯಾಂಪ್‍ಗೆ ಕಳುಹಿಸಲಾಯಿತು. ಇದಕ್ಕಿಂತ ಭಯಾನಕವೆಂದರೆ ಅವರ ಲೈಂಗಿಕ ಭಾಗಗಳನ್ನು ಪರೀಕ್ಷಿಸುವುದು. ಮೂಲನಿವಾಸಿಗಳನ್ನು ಬೇರುಸಹಿತ ಕಿತ್ತೊಗೆಯಬೇಕು ಎಂಬ ಹಟ. ಈ ಖಂಡ ತಮ್ಮದೇ ಅನ್ವೇಷಣೆ. ಬ್ರಿಟನ್ ರಾಣಿಗೆ ಸೇರಿದ್ದು ಎಂದು ಘೋಷಿಸುತ್ತಾರೆ ಬಿಳಿಯರು.

ಆದರೆ, ಆಸ್ಟ್ರೇಲಿಯಾದ ಮೂಲನಿವಾಸಿಗಳ ಪ್ರಕಾರ ಈ ಭೂಮಿ ಎಲ್ಲರ ಸ್ವತ್ತು. ಹಾರುವ ಹಕ್ಕಿ, ಈಜುವ ಮೀನು, ಪ್ರಾಣಿ, ಕ್ರಿಮಿಕೀಟ, ಹಸಿರು ಸಿರಿ ಎಲ್ಲವೂ ಭೂಮಿಯಲ್ಲಿ ಹಕ್ಕನ್ನು ಪಡೆದಿವೆ. ಇಲ್ಲಿಯ ಕೆಂಪು ಮರಳು ಭೂಮಿಯಲ್ಲಿ ಶಿಲಾ ಪರ್ವತಗಳಿವೆ. ವಿಶ್ವದ ವಿಸ್ಮಯದಂತೆ ಬೃಹತ್ತಾದ ಶಿಲಾ ಪರ್ವತಗಳು ಅಲ್ಲಲ್ಲಿ ಬಣ್ಣಗಳೊಂದಿಗೆ ಮೇಲೆದ್ದು ಬಂದಿವೆ. ಅವು ಸೂರ್ಯ ಕಿರಣಗಳನ್ನು ಸೆಳೆದು ಹಲವು ಬಣ್ಣಗಳನ್ನು ಪ್ರತಿಫಲಿಸುತ್ತವೆ.

ಆಸ್ಟ್ರೇಲಿಯಾ ಖಂಡದ ಉತ್ತರ ಮಧ್ಯ ಭಾಗದಲ್ಲಿ ನಾನು ನೋಡಿದ ಎರಡು ಪಾಕೃತಿಕ ಅಚ್ಚರಿಗಳನ್ನು ‘ಉಲುರು ಮತ್ತು ಕಾಟಾ ಜೂಟಾ’ ಎಂದು ಮೂಲನಿವಾಸಿಗಳ ಭಾಷೆಯಲ್ಲಿ ಕರೆಯುತ್ತಾರೆ. ಉಲುರು ಮತ್ತು ಕಾಟಾ ಜೂಟಾ ಎನ್ನುವ ಎರಡು ಬುಡಕಟ್ಟುಗಳ ಪವಿತ್ರ ಕ್ಷೇತ್ರ. ಈ ಎರಡು ಪಂಗಡಗಳನ್ನು ಒಟ್ಟಾಗಿ ‘ಅನಂಗು’ ಎಂದು ಕರೆಯುತ್ತಾರೆ. ಅವರ ಪಾಲಿಗೆ ಇವು ಬರೇ ಶಿಲಾ ಶಿಖರಗಳಲ್ಲ. ಅದಕ್ಕಿಂತ ಹೆಚ್ಚಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ದಂತಕಥೆಗಳ ಕ್ಷೇತ್ರ. ಈ ಶಿಖರಗಳ ಗುಹೆಗಳಲ್ಲಿ ಸಾವಿರಾರು ವರ್ಷ ಬದುಕು ಕಟ್ಟಿಕೊಂಡಿದ್ದರು. ಅವರ ಪೈಂಟಿಂಗ್‍ಗಳನ್ನು ಈ ಗುಹೆಗಳಲ್ಲಿ ಈಗಲೂ ಕಾಣಬಹುದು. ಈ ಗುಹೆಗಳ ಒಳಗೆ ಕುಳಿತು ಅವರು ತಮ್ಮ ಜನಾಂಗಕ್ಕೆ ಹಾಡಿನ ಮೂಲಕ ಪರಂಪರೆಯ ಕಥೆ ಹೇಳುತ್ತಿದ್ದರು. ಆಚರಣೆಗಳೂ ಇಲ್ಲಿಯೇ ನಡೆಯುತ್ತಿದ್ದವು. ಬೆತ್ತಲೆ ದೇಹಕ್ಕೂ ಪೈಂಟ್ ಬಳಿದು ಡಾನ್ಸ್ ಮಾಡುವುದು ಈಗಲೂ ಇದೆ.

ಪ್ರಾಣಿಗಳಿಗೂ ಈ ಗುಹೆಗಳೇ ವಾಸಸ್ಥಾನ. ಅವರ ಸಂಸ್ಕೃತಿ ವಾಹಕಗಳಾಗಿ ಪಕ್ಷಿಗಳೂ ಇದ್ದವು. ಹಲವಾರು ವರ್ಷಗಳ ಕಾಲ ಆಸ್ಟ್ರೇಲಿಯಾ ಸರ್ಕಾರ ಉಲುರುವನ್ನುAyers Rock ಎಂದೂ,KataTjuta ವನ್ನು ಓಲ್ಗಾಸ್ ಎಂದು ಕರೆಯುತ್ತಿತ್ತು. ಮೂಲನಿವಾಸಿಗಳ ಹೋರಾಟದ ಫಲವಾಗಿ 1993ರಲ್ಲಿ ಅನಂಗು ನಿವಾಸಿಗಳ ಭಾಷೆಯಲ್ಲಿ ಉಲುರು ಮತ್ತು ಕಾಟಾ ಜೂಟಾ ಎಂದು ಮರುನಾಮಕರಣ ಮಾಡಲಾಯಿತು.

ನೈಸರ್ಗಿಕ ಅಚ್ಚರಿ

340 ಮೀಟರ್ ಎತ್ತರದ ಉಲುರು ಬುಡದ ಸುತ್ತಳತೆ 9.4 ಕಿಲೋಮೀಟರ್. ಆದರೆ, ಪ್ರವಾಸಿಗರ ನಡಿಗೆಯ ದಾರಿ
10. 5 ಕಿಲೋಮೀಟರ್ ಇದೆ. ಈ ಡೂಮ್‍ಗಳ ಸುತ್ತ ಎರಡು ನಡಿಗೆಯ ದಾರಿ ಇದೆ. ಒಂದು ವಿಂಡ್ಸ್ ವಾಕ್ ಮತ್ತೊಂದು Walpa Gorgewalk. ಅವರ ಪವಿತ್ರ ಕ್ಷೇತ್ರ ಎಂದು ಗುರುತಿಸಿರುವ ಸ್ಥಳಗಳ ಬಳಿ ನಡಿಗೆ ಇಲ್ಲ.

ಕಾಟಾ ಜೂಟಾಕ್ಕೆ ಒಂದು ಪ್ರದಕ್ಷಿಣೆ (ಸುತ್ತು) 8 ಕಿಲೋಮೀಟರ್ ಇದೆ. ಸುಮಾರು 3 ಗಂಟೆಯ ನಡಿಗೆ ಇದು. ಈ ಸುತ್ತು ನಡಿಗೆಯಲ್ಲಿ ಕಾಟಾ ಜೂಟಾದಲ್ಲಿ ಎರಡು ಕಡೆ ವೀಕ್ಷಣಾ ಕೇಂದ್ರ ಇದೆ (ನೆಲದ ಮೇಲೆ). ಉಳಿದೆಡೆ ನಿಲ್ಲಲು ಅವಕಾಶ ಇಲ್ಲ. ಇವು ಪಂಚಶಿಲಾ ಶಿಖರಗಳಂತೆ ನೋಡುವ ಕಣ್ಣುಗಳನ್ನು ಚಕಿತಗೊಳಿಸುತ್ತವೆ. ಇದರ ಎಡದಿಂದ ಎರಡನೆಯ ಶಿಖರ ಮೌಂಟ್ ಓಲ್ಗಾ 546 ಮೀಟರ್ ಎತ್ತರ ಇದೆ. ಇವು ಕೆಂಪುಬಣ್ಣವನ್ನು ಅಧಿಕವಾಗಿ ಪ್ರತಿಫಲಿಸುತ್ತದೆ. ಕಾಟಾ ಜೂಟಾವು 36 ಶಿಲಾಡೂಮ್‍ಗಳನ್ನು ಹೊಂದಿದೆ. ಇದು 35 ಚದರ ಕಿಲೋಮೀಟರ್ ಪ್ರದೇಶದಷ್ಟು ವಿಸ್ತಾರವಾಗಿದೆ.

ಉಲುರು ಮತ್ತು ಕಾಟಾ ಜೂಟಾ ಎರಡೂ ಒಂದೇ ಶಿಲಾಮೂಲದ ತಳಹದಿ ಹೊಂದಿರುವ ಶಿಲಾ ಶಿಖರಗಳಾಗಿವೆ. ಇವು ಎರಡು ಹಂತಗಳಲ್ಲಿ ಪ್ರಾಕೃತಿಕ ವಿಶ್ವ ಪರಂಪರೆಯ ಸ್ಥಾನದಲ್ಲಿ ಗುರುತಿಸಿಕೊಂಡಿವೆ. 1987ರಲ್ಲಿ ಉಲುರು ಮತ್ತು ಕಾಟಾ ಜೂಟಾವು 2ನೆಯ ಮತ್ತು 3ನೆಯ ಮಾನದಂಡಗಳಿಂದ ಪ್ರಾಕೃತಿಕ ವಿಶ್ವ ಪರಂಪರೆಗೆ ಸೇರಿತು. 1994ರಲ್ಲಿ 5ನೆಯ ಮತ್ತು 6ನೆಯ ಮಾನದಂಡಗಳಿಂದ ಸಾಂಸ್ಕೃತಿಕ ಕ್ಷೇತ್ರ ಎಂದು ವಿಶ್ವ ಪರಂಪರೆಗೆ ಸೇರಿತು.

ಕಲ್ಚರಲ್ ಹೆರಿಟೇಜ್ ಮಾನವರಿಂದ ನಿರ್ಮಿತವಾದವು. ಶಿಲ್ಪಗಳು, ಗುಹೆಗಳಲ್ಲಿ ಈಗಲೂ ಪೈಂಟಿಂಗ್ಸ್ ಬರಹಗಳು, ಕಟ್ಟಡಗಳು, ಮಣ್ಣಿನ ಕೆಲಸಗಳು, ಪ್ರಾಕೃತಿಕ ಹೆರಿಟೇಜ್‌, ಪ್ರಕೃತಿದತ್ತ ವಿವರಗಳಿವೆ. ಜಿಯೊಲಾಜಿಕಲ್ ಬದಲಾವಣೆ, ಮರಗಿಡಗಳು, ಪ್ರಾಣಿಗಳು ಹಾಗೂ ಅಲ್ಲಿಯ ಕಮ್ಯುನಿಟಿ ಮತ್ತು ಫಾಸಿಲ್ಸ್ ಮುಂತಾದ ಪ್ರಾಕೃತಿಕ ಅಚ್ಚರಿಗಳ ಕ್ಷೇತ್ರ ಇದು. ಇದನ್ನು ಮಿಕ್ಸಡ್ ಸೈಟ್ ಎನ್ನುತ್ತಾರೆ. 2001ರಲ್ಲಿ ವಿಶ್ವದಲ್ಲಿ ಬರೇ 23 ಮಿಕ್ಸಡ್ ಸೈಟ್‌ಗಳು ಉಳಿದಿವೆಯಂತೆ.

ಶಿಲಾ ಶಿಖರಗಳ ಹಿಂದಿನ ರಹಸ್ಯ

ಲಕ್ಷಾಂತರ ವರ್ಷಗಳ ಹಿಂದೆ ನದಿ ಮತ್ತು ಒಳಭಾಗದ ಸಮುದ್ರದಿಂದ ಹೊರಬಿದ್ದ ಕೆಸರುಮಿಶ್ರಿತ ಮರಳು ಮಣ್ಣಿನಿಂದ ಉಲುರು, ಕಾಟಾ ಜೂಟಾ ಮತ್ತು ಮೌಂಟ್ ಕನ್ನಾರ್ ಸೃಷ್ಟಿಯಾಗಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಕೆಸರು ಮಿಶ್ರಿತ ಮರಳು ಪದರ ಪದರಗಳಾಗಿ ಒಂದರ ಮೇಲೆ ಒಂದು ಕಲೆತು ಸ್ಯಾಂಡ್‌ಸ್ಟೋನ್ ಆಗಿ ಬೆಳೆಯಿತು. ಹೀಗೆ ಒಂದೆಡೆ ಕಲೆತ ಕೆಸರು ಮಿಶ್ರಿತ ಮರಳು ಶಿಲಾ ರೂಪದಲ್ಲಿ ತೀವ್ರ ವೇಗವಾಗಿ ಬೆಳೆದು ನಿಂತಿದೆ. ಈ ಸ್ಯಾಂಡ್‌ಸ್ಟೋನನ್ನು ಅರ್ಕೋಸ್ ಎಂದು ಕರೆಯುತ್ತಾರೆ. ಈ ಸ್ಯಾಂಡ್‌ಸ್ಟೋನ್ ಶಿಲೆಯ ಸಣ್ಣ ಕಣಗಳನ್ನು ಬರಿಗಣ್ಣಿನಿಂದಲೂ ನೋಡಬಹುದು. ಆದರೆ, ಎಲ್ಲಾ ಕಣಗಳು ಸಣ್ಣ ಕಣಗಳಾಗಿಲ್ಲ.

ಮರಳುಗಾಡಿನ ರಭಸವಾಗಿ ಬೀಸುವ ಗಾಳಿಯಲ್ಲಿ ಕೆಸರುಮಿಶ್ರಿತ ಕೆಂಪು ಮರಳು ಮಣ್ಣು ಅಲೆಯಾಗಿ, ಪದರ ಪದರವಾಗಿ ಶೇಖರವಾಗಿ ಸುಂದರ ದೃಶ್ಯಶಿಲ್ಪದಂತೆ ಉಲುರು ಮತ್ತು ಕಾಟಾ ಜೂಟಾ ಶಿಖರ ಸಮೂಹ ಎತ್ತರೆತ್ತರ ಬೆಳೆಯಿತು. ದೂರದಿಂದ ಇದು ನೀಲ ಶಿಲಾ ಶಿಖರಗಳಂತೆ ಕಣ್ಣಿಗೆ ಕಂಡರೂ ಅದರ ವಾಸ್ತವ ಬಣ್ಣ ಭೂಮಿಯ ಕೆಂಪು ಬಣ್ಣ.

ಉಲುರು ಮತ್ತು ಕಾಟಾ ಜೂಟಾದ ಈ ಶಿಲಾ ಶಿಖರಗಳ ಮೇಲೆ ಇರುವ ಪ್ರತಿ ಒಂದು ನೈಸರ್ಗಿಕ ಬದಲಾವಣೆಗಳ ಹಿಂದೆ ಮೂಲನಿವಾಸಿಗಳ ಮೌಖಿಕ ಪರಂಪರೆಯ ಕಥೆ ಇದೆ. ಅದನ್ನು ಹಾಡುಗಳ ಮೂಲಕ ಉಳಿಸಿಕೊಂಡು ಬರಲಾಗಿದೆ. ಅವರ ಹಿರಿಯರ ಸ್ಪಿರಿಟ್ ಇಲ್ಲಿಯೇ ಇದೆ ಎಂದು ಅವರು ನಂಬುತ್ತಾರೆ. ಅವರ ಬದುಕು ಮತ್ತು ನಂಬಿಕೆಯನ್ನು ಗಟ್ಟಿಗೊಳಿಸಲು ಹಾಗೂ ಆ ಪರಂಪರೆ ತಲೆಮಾರಿನಿಂದ ತಲೆಮಾರಿಗೆ ಹರಿಯಲು ಈ ಶಿಲಾ ವೈಚಿತ್ರ್ಯದ ಅದ್ಭುತಗಳನ್ನು ಸಾಕ್ಷೀಕರಿಸುತ್ತಾರೆ. ಇದನ್ನು ಹಾಡಿನ ಕಥೆಗಳ ಮೂಲಕ ಮುಂದಿನ ತಲೆಮಾರಿಗೆ ದಾಟಿಸುತ್ತಾರೆ.

ಮೂಲನಿವಾಸಿಗಳ ಭಾವನೆಗಳನ್ನು, ನಂಬಿಕೆಗಳನ್ನು ಕೊನೆಗೂ ಗೌರವಿಸಿದ ಬಿಳಿಯರ ಸರ್ಕಾರ 1,326 ಚದರ ಕಿಲೋಮೀಟರ್ ವ್ಯಾಪ್ತಿಯ ನ್ಯಾಷನಲ್ ಪಾರ್ಕನ್ನು ನಿರ್ಮಾಣ ಮಾಡಿತು. ಈ ರಾಷ್ಟ್ರೀಯ ಉದ್ಯಾನವು ವಿಶ್ವಪರಂಪರೆಯ ತಾಣದಲ್ಲಿ ಸೇರಲು ಉಲುರು- ಕಾಟಾ ಜೂಟಾ ಕಾರಣವಾಗಿದೆ. ಈ ಉದ್ಯಾನದ ನಿರ್ವಹಣೆಯ ಹೊಣೆಯನ್ನು ಮೂಲನಿವಾಸಿಗಳಿಗೆ ವಹಿಸಲಾಗಿದೆ. ಇವರು ಪ್ರವಾಸಿಗರಿಗೆ ಕಲೆಯ ಬಗ್ಗೆ ಪರಿಚಯ ಮಾಡುತ್ತಾ ಕಲಾಕೃತಿಗಳನ್ನು ಮಾರುತ್ತಾರೆ. ಮೂಲನಿವಾಸಿಗಳಲ್ಲದೆ ಇತರರು ಈ ಬಿಸಿಲು ಮರುಭೂಮಿಯಲ್ಲಿ ಬದುಕಲು ಸಾಧ್ಯವಿಲ್ಲ. ಅವರಿಗೆ ಆಹಾರ ನೀರು ಬಿಡಿ, ಬೆಂಕಿಯೂ ಸಿಗಲು ಸಾಧ್ಯವಿಲ್ಲ ಎನ್ನುತ್ತಾರೆ ಈ ಬಗ್ಗೆ ಅಧ್ಯಯನ ಮಾಡಿದವರು.

ಇಲ್ಲಿ ಹಲ್ಲಿಯ ಅನೇಕ ಪ್ರಭೇದಗಳಿವೆ. ಇಲ್ಲಿ ಬದುಕಿರುವ ಎಲ್ಲಾ ಪ್ರಾಣಿಗಳು ಇವರ ಆಹಾರದ ಮೂಲ. ಬೇಟೆಯಾಡಿ ಕಟ್ಟಿಗೆಗಳಿಂದ ಸುಟ್ಟು ತಿನ್ನುತ್ತಾರೆ. ಇಲ್ಲಿಯ ನಾಯಿ ಡೆಂಗೂವನ್ನೂ ತಿನ್ನುತ್ತಿದ್ದರು. ಈಗ ಅದು ರಕ್ಷಿತ ಪ್ರಾಣಿ.

ಮೂಲನಿವಾಸಿಗಳ ನಂಬಿಕೆ

* ಕೆಲವು ಪ್ರಾಣಿಗಳು ಉಲುರು ಶಿಲಾ ಪರ್ವತದ ನೈಸರ್ಗಿಕ ಗುಹೆಯಲ್ಲಿ ಇರುತ್ತವೆ. ಆದರೆ, ಎಲ್ಲಾ ಗುಹೆಗಳಿಗೆ ಮಾನವ ಹೋಗಲಾಗದು. ಒಂದು ಗುಹೆಯಲ್ಲಿ ಸಾವಿರಾರು ವರ್ಷಗಳ ಹಿಂದಿನ ಪ್ರಾಣಿಗಳ ಅಸ್ಥಿಪಂಜರ ಇವೆ ಎನ್ನುತ್ತಾರೆ. ಆ ಪ್ರಾಣಿಗಳು ಈಗ ಆಸ್ಟ್ರೇಲಿಯಾದಲ್ಲಿ ಇಲ್ಲ. ಅವು ನಶಿಸಿ ಹೋಗಿವೆ ಎನ್ನುವುದು ವಿಜ್ಞಾನಿಗಳ ಹೇಳಿಕೆ

* ಅನಂಗು ಜನಾಂಗದ ನಂಬಿಕೆಯಲ್ಲಿ ಖುನಿಯ (ಹೆಬ್ಬಾವು) ಕಥೆ ಇದೆ. ಅದನ್ನು ಚಿತ್ರದ ಮೂಲಕ ಉಲುರು ಬಳಿ ಹಾಕಲಾಗಿದೆ. ಅವು ಉಲುರು ಕ್ಯಾಂಪ್‍ನಲ್ಲಿ ಇರುವಾಗ ‘ಲಿರು’ ಎಂಬ ವಿಷಪೂರಿತ ಯೋಧ ಹಾವುಗಳು ಖುನಿಯ ಮೇಲೆ ದಾಳಿ ಮಾಡುತ್ತವೆ. ಹೀಗೆ ಈ ಹೋರಾಟದಲ್ಲಿ ಅವರ ದೇಹದ ಭಾಗಗಳು ಉಲುರು ಶಿಲಾ ಪರ್ವದ ವಿವಿಧೆಡೆಯಲ್ಲಿ ಕಾಣಬಹುದು ಎನ್ನುವುದು ಇಲ್ಲಿನ ಅನಂಗು ಮೂಲನಿವಾಸಿಗಳ ನಂಬಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT