ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day| ‘ಹಸಿರು’ ಹೊದ್ದ ಮೂಗ‌ನೂರ ಸರ್ಕಾರಿ ಶಾಲೆ

Last Updated 5 ಜೂನ್ 2022, 5:12 IST
ಅಕ್ಷರ ಗಾತ್ರ

ಹನುಮಸಾಗರ: ಒಣ ಪರಿಸರದ ಮಧ್ಯೆ ಕಣ್ಣಿಗೆ ಮುದ ನೀಡುವ ಹಾಗೆ ಇಡೀ ಅಂಗಳಕ್ಕೆ ಹಸಿರು ಚಪ್ಪರ ಹಾಕಿದಂತಿರುವ ಹೂಬಳ್ಳಿಗಳಿಂದ ಕೂಡಿದ ಗಿಡಮರಗಳು, ಹಕ್ಕಿಗಳ ಇಂಚರ ಧ್ವನಿ, ಜುಳು ಜುಳು ಹರಿಯುತ್ತಿರುವ ನೀರು, ಹಸಿರು ಬಳ್ಳಿಗಳನ್ನೇ ಮರೆಯಾಗಿಸಿಕೊಂಡು ಕಣ್ಣಮುಚ್ಚಾಲೆ ಆಡುತ್ತಿರುವ ಪುಟ್ಟ ಮಕ್ಕಳು, ದುಂಬಿಗಳ ಝೇಂಕಾರ..

ಕುಷ್ಟಗಿ ತಾಲ್ಲೂಕಿನ ಮೂಗನೂರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಕಂಡು ಬರುವ ದೃಶ್ಯಗಳಿವು.

ಅರಳಿ ನಿಂತ ತರಾವರಿ ಪುಷ್ಪಗಳು, ಕಾಲಿಟ್ಟರೆ ಸ್ಪಂಜಿನ ಮೇಲಿಟ್ಟಂತೆ ಅನುಭವ ನೀಡುವ ನೆಲಕ್ಕೆ ಹಾಸಿದ ಹುಲ್ಲು, ಕೊಠಡಿ ಬಾಗಿಲು ತೆರೆದರೆ ಬೆಳಗಿನ ಶುಭಾಷಯ ಹೇಳುವ ಔಷಧಿ ಬಳ್ಳಿಗಳು, ಕೊಂಚ ಗಾಳಿ ಬೀಸಿದರೆ ಸಾಕು ಮೈ-ಮನಕ್ಕೆ ಹಿತ ನೀಡುವ ತಂಗಾಳಿ, ಅಳಿಲು, ದುಂಬಿಗಳ ನಲಿವು, ಭಿನ್ನ-ವಿಭಿನ್ನ ಪಕ್ಷಿಗಳ ಉಲಿವು, ಆ ಶಾಂತ ಪರಿಸರದಲ್ಲಿ ವಿದ್ಯಾರ್ಥಿಗಳ ಹುಲ್ಲು ಹಾಸಿನ ಮೇಲೆ ಕುಳಿತೋ... ಮಲಗಿಯೋ... ಮಾಡುವ ನಿತ್ಯದ ಶಾಲಾ ಅಭ್ಯಾಸಗಳು, ಮಕರಂದ ಹೀರಲು ಬಂದ ಬಣ್ಣದ ಚಿಟ್ಟೆಗಳ ಹಿಂದೆ ಬೆನ್ನು ಹತ್ತಿರುವ ನಾಲ್ಕಾರು ಎಳೆಯರ ಮೋಜಿನಾಟ ಕಾಣುತ್ತದೆ.

ಈ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಪದೋನ್ನತಿ ಹೊಂದಿ ಸದ್ಯ ಸೇಬಿನಕಟ್ಟಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದರುವ ಕೆ.ಎಸ್.ಅಥಣಿ ಸೇರಿದಂತೆ ಎಲ್ಲ ಶಿಕ್ಷಕರೂ ಹಸಿರಿನ ಮೇಲೆ ಆಸಕ್ತಿ ತುಂಬಿಕೊಂಡಿದ್ದಾರೆ. ಈ ಕಾರಣವಾಗಿಯೇ ಎಲ್ಲ ಶಿಕ್ಷಕರು ಎಂಬಲ್ಲಿ ಯಾವ ಯಾವ ಹೂ ಬಳ್ಳಿ ನಡೆಸಬೇಕು, ಯಾವ ಮರ ಹಾಕಬೇಕು ಎಂದು ನೀಲ ನಕ್ಷೆ ತಯಾರಿಸಿದ್ದರು.

ಹಗಲು ರಾತ್ರಿ ಎನ್ನದೇ ಸ್ವತಃ ಶಾಲಾ ಸಿಬ್ಬಂದಿ ಸೇರಿ ಕೈ ಕೆಸರು ಮಾಡಿಕೊಂಡರು. ಹತ್ತಾರು ಕಡೆ ಹೋಗಿ ತಮಗೆ ಇಷ್ಟವಾದ ಸಸಿಗಳನ್ನು ತಂದರು, ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳು ಹೊರಗಿನಿಂದ ಮಣ್ಣು ತಂದು ಕುಂಡಲಗಳನ್ನು ತುಂಬಿಸಿ, ಪ್ರೀತಿಯಿಂದ ಸಸಿಗಳನ್ನು ಬೆಳೆಸಿದರು. ಗ್ರಾಮದ ಹುಚ್ಚೀರಪ್ಪ ಕಮತರ ಎಂಬ ಅಂಗವಿಕಲ ಯುವಕನೊಬ್ಬ ಯಾವುದೇ ಫಲಾಪೇಕ್ಷೆ ಇಲ್ಲದೆ ಶಿಕ್ಷಕರಿಗಿಂತ ಹೆಚ್ಚು ಶ್ರಮವಹಿಸಿ ಗಿಡಮರಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದಾರೆ.

ಕಟ್ಟಡದ ಒಳಭಾಗದಲ್ಲಿ ಅರಣ್ಯ: ಶಾಲೆಯ ಹೊರ ಭಾಗವೆಲ್ಲ ಬಳ್ಳಿಗಳಿಂದ ಕಂಗೊಳಿಸುತ್ತಿದ್ದಂತೆ ಕಾರಿಡಾರ್ ಜಾಗೆಯಲ್ಲಿ ಕುಂಡಲಗಳನ್ನಿಟ್ಟು ಅದರಲ್ಲಿ ಹಸಿರು ಬಳ್ಳಿಗಳನ್ನು ಬೆಳೆಸಲಾಗಿದೆ. ವಿವಿಧ ಷೋ ಪ್ಲಾಂಟ್‌ಗಳನ್ನು ಆವರಣದ ಒಳ ಭಾಗದಲ್ಲಿ ಹಸಿರಿನ ಹಂದರ ಹೆಣೆದಿವೆ.

ಇದೆಲ್ಲದರ ಜೊತೆಗೆ ಕೊಠಡಿ ಮುಂಭಾಗದಲ್ಲಿರುವ ಸಾಲು-ಸಾಲು ಕುಂಡಲಗಳಲ್ಲಿರುವ ಬಳ್ಳಿಗಳು ಶಾಲೆಗೆ ಮತ್ತಷ್ಟು ಹಸಿರಿನ ಮೆರಗು ತಂದಿವೆ. ಪ್ರತಿಯೊಂದು ಕೊಠಡಿಯ ಬಾಗಿಲು ಮುಂದೆ ಇರುವ ಔಷಧಿ ಸಸ್ಯಗಳು ವಿದ್ಯಾರ್ಥಿಗಳಿಗೆ ಪರಿಸರ ಪಾಠ ಹೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT