ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜಲ ದಿನ ವಿಶೇಷ: ಸ್ಫೂರ್ತಿಯ ಮಾತುಗಳಿಗೆ ಚಿಮ್ಮಿದ ಜೀವಜಲ

ಕೇಂದ್ರ ತಂಡ ಗಮನ ಸೆಳೆದ ನರೇಗಲ್‌ ಹಿರೇಕೆರೆ ಯಶೋಗಾಥೆ
Last Updated 22 ಮಾರ್ಚ್ 2021, 0:30 IST
ಅಕ್ಷರ ಗಾತ್ರ

ಅಂದು ಗ್ರಾಮದೇವತೆ ಜಾತ್ರೆಯಲ್ಲಿ ಸ್ವಾಮೀಜಿಯವರು ಹೇಳಿದ ಒಂದು ಸ್ಫೂರ್ತಿಯ ಮಾತು, ಗ್ರಾಮಸ್ಥರಲ್ಲಿ ಕೆರೆ ಪುನಶ್ಚೇತನದ ಸಂಕಲ್ಪಕ್ಕೆ ಪ್ರೇರಣೆ ನೀಡಿತು. ತಜ್ಞರು, ಸ್ವಾಮೀಜಿ, ಹಿರಿಯರ ಮಾರ್ಗದರ್ಶನ, ಊರಿನವರ ಸಹಕಾರದಿಂದಾಗಿ ಒಂದು ವರ್ಷದೊಳಗೆ ಕೆರೆ ಪುನಶ್ಚೇತನಗೊಂಡಿತು. ಅದೃಷ್ಟವಶಾತ್ ಆ ವರ್ಷ ಉತ್ತಮ ಮಳೆಯಾಯಿತು. ಪುನಶ್ಚೇತನಗೊಂಡಿದ್ದ ಕೆರೆ ಭಾಗಶಃ ತುಂಬಿತು. ಬೇಸಿಗೆಯಲ್ಲಿ ತಲೆದೋರುತ್ತಿದ್ದ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರವೂ ದೊರೆಯಿತು.

– ಇದು ಗದಗ ಜಿಲ್ಲೆ ನರೇಗಲ್ ಗ್ರಾಮದಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಕೆರೆ ಪುನಶ್ಚೇತನಗೊಳಿಸಿದ ಯಶೋಗಾಥೆ.

ನರೇಗಲ್‌ನಲ್ಲಿ ಗ್ರಾಮದೇವತೆ ಜಾತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಲಕಾರ್ಯಕರ್ತ ಶಿವಾನಂದ ಕಳವೆ, ಹಾಲಕೆರೆ ಮಠದ ಅನ್ನದಾನ ಸ್ವಾಮೀಜಿ, ‘ಈಗ ಮಳೆ ನೀರನ್ನು ಹಿಡಿಯದಿದ್ದರೆ, ಭವಿಷ್ಯದಲ್ಲಿ ಕಠಿಣ ಜಲಕ್ಷಾಮ ಎದುರಿಸ ಬೇಕಾಗುತ್ತದೆ’ ಎಂದು ಎಚ್ಚರಿಸಿದರು. ‘ನಮ್ಮೂರ ಮೇಲೆ ಸುರಿದು, ವ್ಯರ್ಥವಾಗಿ ಹರಿಯುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಈಗ ಈ ಪ್ರಯತ್ನ ಮಾಡಿದರೆ, ಭವಿಷ್ಯದಲ್ಲಿ ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ’ ಎಂಬ ಸಲಹೆ ನೀಡಿದರು.

ತಕ್ಷಣವೇ ಸಮಾನ ಮನಸ್ಕರೆಲ್ಲರೂ ಸೇರಿ ನೆಲ–ಜಲ ಸಂರಕ್ಷಣಾ ಸಮಿತಿ ರಚಿಸಿ, ಹಿರೇಕೆರೆಯ ಪುನಶ್ಚೇತನ ಕಾರ್ಯಕ್ಕೆ ಟೊಂಕ ಕಟ್ಟಿ ನಿಂತರು. ‌ನಂತರ ಸಮುದಾಯದ ಸಹಭಾಗಿತ್ವದಲ್ಲಿ ಜಲ ಸಂರಕ್ಷಣೆ ಕುರಿತು ಊರಿನಲ್ಲಿ ಸಭೆ ನಡೆಯಿತು. ಆ ಸಭೆಯಲ್ಲಿ ‘ಕೆರೆ ಪುನಶ್ಚೇತನ’ದ ನೀಲ ನಕ್ಷೆ ಸಿದ್ಧವಾಯಿತು.

ಕೆರೆ ಹೂಳೆತ್ತಲು ಮಾನವ ಶ್ರಮವೊಂದೇ ಸಾಲದು, ಯಂತ್ರಗಳೂ ಬೇಕು. ಅದಕ್ಕಾಗಿ ಆ ಸಭೆಗೆ, ಜೆಸಿಬಿ ಮಾಲೀಕರನ್ನೂ ಆಹ್ವಾನಿಸಿ, ಗ್ರಾಮದ ಜಲಸಂರಕ್ಷಣೆ ಕೆಲಸಕ್ಕೆ ಕೈಜೋಡಿಸುವಂತೆ ಸಮಿತಿಯವರು ಮನವಿ ಮಾಡಿದರು. ಕಡಿಮೆ ವೆಚ್ಚದಲ್ಲಿ ಅಂದರೆ, ಒಂದು ಲೋಡ್‌ ಹೂಳು ಸಾಗಿಸಲು ರೈತರಿಂದ ₹ 70 ಬಾಡಿಗೆ ಪಡೆಯುವಂತೆ ಜೆಸಿಬಿ ಮಾಲೀಕರ ಮನವೊಲಿಸಲಾಯಿತು.

‘ಕೆರೆ ಅಭಿವೃದ್ಧಿಗೆ ಬೇಕಾದ ಹಣಕ್ಕಾಗಿ ಊರಿನವರೇ ಸಂಗ್ರಹಕ್ಕೆ ನಿಂತರು. ಸಮಿತಿ ಸದಸ್ಯರು ತಲಾ ₹5 ಸಾವಿರ ದೇಣಿಗೆ ನೀಡಿದರು. ಹಾಲಕೆರೆ ಮಠದ ಅನ್ನದಾನ ಸ್ವಾಮೀಜಿ ₹1 ಲಕ್ಷ ಹಣ ನೀಡಿದರು. ಸಂಘ ಸಂಸ್ಥೆಗಳೂ ಸಹಾಯ ಮಾಡಿದವು’ ಎಂದು ನೆನಪಿಸಿಕೊಂಡರು ಸಮಿತಿ ಅಧ್ಯಕ್ಷ ಗುರುರಾಜ ಕುಲಕರ್ಣಿ.

‘ಸಮುದಾಯದ ನಿರಂತರ ಶ್ರಮದಿಂದ 31 ಎಕರೆಯ ವಿಸ್ತಾರವಾದ ಕೆರೆಯಲ್ಲಿ ನಾಲ್ಕು ಸಣ್ಣ ಕೆರೆಗಳನ್ನು ಮಾಡಿ, ಅದರಲ್ಲಿ ಎರಡನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಯಿತು’ ಎಂದರು ನೆಲ–ಜಲ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಬಸವರಾಜ ವಂಕಲಕುಂಟಿ.

ದಶಕಗಳ ನಂತರ ತುಂಬಿತು

ಕೆರೆ ಕಾಮಗಾರಿ ಪೂರ್ಣಗೊಂಡಿತು. ಆ ವರ್ಷದಲ್ಲೇ ಉತ್ತಮ ಮಳೆಯೂ ಸುರಿಯತು. ಕೆರೆಯಲ್ಲಿ ಹೂಳು ತೆಗೆದಿದ್ದರಿಂದ ಹನಿ ಹನಿ ಮಳೆ ನೀರೂ ಕೆರೆಯಲ್ಲಿ ಸಂಗ್ರಹವಾಯಿತು. ‘ನಮ್ಮೂರ ಕೆರೆ ತುಂಬಿ ನಾಲ್ಕೈದು ದಶಕಗಳಾಗಿತ್ತು. ಇದೇ ಮೊದಲ ಬಾರಿಗೆ ಮಳೆಗಾಲದಲ್ಲಿ ಹಿರೇಕೆರೆಗೆ ನೀರು ಹರಿದು ಬಂದಿದೆ’ ಎಂದು ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದರು.ಮಳೆಗಾಲದಲ್ಲಿ ಕೆರೆಗೆ ಹರಿದು ಬಂದ ನೀರು ಈಗ ಬೇಸಿಗೆಯಲ್ಲೂ ಉಳಿದಿದೆ.

ಸರ್ಕಾರಿ ವೆಚ್ಚಕ್ಕಿಂತ ಕಡಿಮೆ..

‘ಸರ್ಕಾರದ ಲೆಕ್ಕದಲ್ಲಿ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದ್ದ ಕೆರೆ ಪುನಶ್ಚೇತನದ ಕೆಲಸ, ಸಮುದಾಯದ ಸಹಕಾರದಿಂದ ಬಹಳ ಕಡಿಮೆ ವೆಚ್ಚದಲ್ಲಿ ಮಾಡಿಸಿದ್ದೇವೆ’ ಎನ್ನುತ್ತಾರೆ ಬಸವರಾಜ ವಂಕಲಕುಂಟಿ.

‘ಕೆರೆ ಪಕ್ಕದಲ್ಲಿ ಮಠಕ್ಕೆ ಸೇರಿದ ಒಂದು ಎಕರೆಯಷ್ಟು ಜಮೀನಿದೆ. ಅದನ್ನು ಕೆರೆ ವಿಸ್ತರಣೆಗೆ ಬಳಸಿಕೊಳ್ಳುವಂತೆ ಅನ್ನದಾನ ಸ್ವಾಮೀಜಿ ಹೇಳಿದ್ದಾರೆ’ ಎಂದು ಅಧ್ಯಕ್ಷ ಗುರುರಾಜ ಕುಲಕರ್ಣಿ ತಿಳಿಸಿದ್ದಾರೆ.

ಪಾಳುಬಿದ್ದ ಕೆರೆಗೆ ಕಾಯಕಲ್ಪ

ಊರಿನ ಜನರು ‘ನೆಲ ಜಲ ಸಂರಕ್ಷಣಾ ಸಮಿತಿ’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡಿದ್ದು, ಪರಿಸರ ಮತ್ತು ನೀರಿನ ಬಗ್ಗೆ ತುಂಬ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಇದು ದೊಡ್ಡ ಬೆಳವಣಿಗೆಯಾಗಿದ್ದು, ಇಡೀ ರಾಜ್ಯ ಗಮನಿಸಬೇಕು’ ಎಂದು ಜಲ ಕಾರ್ಯಕರ್ತ ಶಿವಾನಂದ ಕಳವೆ ಹೇಳಿದ್ದಾರೆ.

‘ನರೇಗಲ್‌ ಹಿರೇಕೆರೆಯ ಯಶೋಗಾಥೆ ನೋಡಲು ಕೇಂದ್ರ ತಂಡ ಕೂಡ ಬಂದು ಹೋಗಿದೆ. ಒಳ್ಳೆ ಕೆಲಸಕ್ಕೆ ಸಮುದಾಯವೊಂದು ಟೊಂಕ ಕಟ್ಟಿ ನಿಂತರೆ ಎಂತಹ ಬದಲಾವಣೆ ಆಗುತ್ತದೆ ಎಂಬುದಕ್ಕೆ ಕ್ರಿಕೆಟ್‌ ಪಿಚ್‌ ರೀತಿ ಇದ್ದ ನರೇಗಲ್‌ ಹೀರೆಕೆರೆ ಒಳ್ಳೆಯ ಉದಾಹರಣೆ. ಮಳೆ ಬಂತು ಕೆರೆ ತುಂಬಿತು. ಬೇಸಿಗೆ ಬಂತು ನೀರು ಇಂಗಿತು ಎಂಬುದು ಸಹಜ ಪ್ರಕ್ರಿಯೆ. ಹೊಸ ಕೆರೆ ಆಗಿರುವುದರಿಂದ ಆ ರೀತಿಯ ಏರಿಳಿತ ಸಹಜ. ಆದರೆ, ಊರಿನ ಜನರ ಬದ್ಧತೆ, ಸಂಕಲ್ಪ ಮೆಚ್ಚಬೇಕು. ಅವರು ಇಂದಿಗೂ ಕೆರೆ ಅಭಿವೃದ್ಧಿಯ ವಿಚಾರವಾಗಿ ನಿರಂತರ ಪ್ರಯತ್ನ ನಡೆಸಿದ್ದಾರೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT