ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜಲ ದಿನ: ಮಿತವಿರಲಿ ನೀರಿನ ಬಳಕೆಯಲಿ

ವಿಶ್ವ ಜಲ ದಿನ: ಮಾರ್ಚ್‌ 22
Last Updated 18 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ನೂರಾರು ಕಿಲೋಮೀಟರ್ ದೂರದಿಂದಲೋ, ನೂರಾರು ಅಡಿ ಆಳದಲ್ಲಿರುವ ಜಲಮೂಲಗಳಿಂದಲೋ ಮನೆ ಮನೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇಷ್ಟೆಲ್ಲ ಪರಿಶ್ರಮದೊಂದಿಗೆ ಲಭ್ಯವಾಗುವ ಜೀವ ಜಲವನ್ನು ‘ಬಡವರ ತುಪ್ಪದಂತೆ’ ಮಿತವಾಗಿ ಬಳಸುವುದು ಎಲ್ಲರ ಜವಾಬ್ದಾರಿ ಹಾಗೂ ಈ ಹೊತ್ತಿನ ತುರ್ತು. ‘ಮನೆಯಿಂದಲೇ ನೀರಿನ ಮಿತ ಬಳಕೆ ಆರಂಭವಾಗಲಿ’ ಎಂಬುದು ಜಲಸಂರಕ್ಷಣೆಯ ಸಾರ್ವತ್ರಿಕ ಘೋಷವಾಕ್ಯ. ಮನೆ ಮನೆಯಲ್ಲಿ ನೀರಿನ ಪೋಲು ಇನ್ನೂ ತಪ್ಪಿಲ್ಲ ಎನ್ನುವ ಕಳವಳವನ್ನೂ ಈ ಮಾತು ಧ್ವನಿಸುತ್ತದೆ. ಆದರೆ, ನಾಡಿನ ಅನೇಕ ‌ಗೃಹಿಣಿಯರು ನೀರಿನ ಮಿತ ಬಳಕೆಯನ್ನು ಸದ್ದಿಲ್ಲದೆ ಸಾಧಿಸುತ್ತಾ ಬಂದಿದ್ದಾರೆ. ‘ವಿಶ್ವ ಜಲ ದಿನ’ ದ ನೆಪದಲ್ಲಿ ಅಂತಹ ಕೆಲ ಗೃಹಿಣಿಯರು ಅನುಸರಿಸುತ್ತಿರುವ ವಿಧಾನಗಳನ್ನು ಅವರ ನುಡಿಗಳಲ್ಲೇ ಇಲ್ಲಿ ಕೊಡಲಾಗಿದೆ.

ನೀರಿನ ಮಿತ ಬಳಕೆಯ ಧ್ಯಾನ

ಧಾರವಾಡದ ಹೊಯ್ಸಳನಗರದಲ್ಲಿದೆ ನಮ್ಮನೆ ‘ಬಯಲು’.ಈ ಮನೆಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿದ್ದೇವೆ. ಮನೆಯ ಕಾಂಪೌಂಡ್‌ನಿಂದ ಹನಿ ಮಳೆ ನೀರು ಹೊರಗೆ ಹರಿಯದಂತೆ ಎರಡು ಇಂಗುಗುಂಡಿಗಳಲ್ಲಿ ಇಂಗಿಸುತ್ತೇವೆ.ಈ ಮೂಲಕ ಬಳಸುವಷ್ಟು ನೀರನ್ನು ಮತ್ತೆ ಭೂಮಿಗೆ ಸೇರಿಸುತ್ತೇವೆ.

ಮಳೆ ನೀರು ಹಿಡಿಯುವಾಗ ತೋರುವಷ್ಟೇ ಕಾಳಜಿಯನ್ನು ನೀರನ್ನು ಮಿತವಾಗಿ ಬಳಸುವಲ್ಲೂ ತೋರುತ್ತೇವೆ. ಅದರ ಮೊದಲ ಹೆಜ್ಜೆ ತ್ಯಾಜ್ಯ ನೀರು ಮರುಬಳಕೆ. ಹೇಗೆಂದರೆ, ನಮ್ಮ ಮನೆಯ ಸಿಂಕ್‌ ಹಾಗೂ ವಾಶ್‌ ಬೇಸಿನ್‌ ಗಳಲ್ಲಿ ಬೀಳುವ ನೀರು, ತೆಂಗು ಹಾಗೂ ಬಾಳೆಯ ಗಿಡಗಳಿಗೆ ಹೋಗುವ ವ್ಯವಸ್ಥೆ ಮಾಡಿದ್ದೇವೆ. ಹಾಗಾಗಿ, ನೀರು ವ್ಯರ್ಥವಾಗಿ ಹೊರಗೆ ಹರಿದು ಹೋಗುವುದಿಲ್ಲ.

ನಮ್ಮ ಮನೆಯಲ್ಲಿ ಕಮೋಡ್‌ ಶೈಲಿ ಹಾಗೂ ಭಾರತೀಯ ಶೈಲಿಯ ಶೌಚಾಲಯಗಳಿವೆ. ಆದರೂ ನಾವು ಬಳಸುವುದು ಇಂಡಿಯನ್ ಶೈಲಿಯದ್ದು . ಅನಿವಾರ್ಯ, ಅಪರೂಪಕ್ಕೊಮ್ಮೆ ಕಮೋಡ್ ಬಳಸುತ್ತೇವೆ. ಇಲ್ಲೇ ಅರ್ಧದಷ್ಟು ನೀರು ಉಳಿತಾಯ.

ಸ್ನಾನಕ್ಕೆ ಶವರ್‌ ಬಳಕೆ ಇಲ್ಲ. ಬಕೆಟ್‌ನಲ್ಲಿ ನೀರು ಹಿಡಿದಿಟ್ಟುಕೊಂಡೇ ಸ್ನಾನ ಮಾಡುವುದು. ಒಬ್ಬರು ಒಂದು ಬಕೆಟ್‌ಗಿಂತ ಹೆಚ್ಚು ಬಳಸದಂತೆ ನಾವೇ ನಿಬಂಧನೆ ಹಾಕಿಕೊಂಡಿದ್ದೇವೆ.

ಬಟ್ಟೆ ತೊಳೆದ ನೀರು ಆದಷ್ಟು ನಮ್ಮ ಮನೆಯ ಅಂಗಳದ ಗಿಡಗಳಿಗೆ ಹೋಗುತ್ತದೆ. ಹೆಚ್ಚಾದರೆ ಮಾತ್ರ ಹೊರಗೆ ಹರಿಯುವಂತೆ ವ್ಯವಸ್ಥೆ ಮಾಡಿದ್ದೇವೆ.

ಅನಿವಾರ್ಯ (ಹೊದಿಕೆ, ಚಾದರ ಕಂಬಳಿಗಳನ್ನು ಒಗೆಯುವ ವೇಳೆ) ಸಂದರ್ಭಗಳಲ್ಲಿ ಮಾತ್ರ ವಾಷಿಂಗ್ ಮಷಿನ್ ಬಳಸುತ್ತೇವೆ. ಉಳಿದಂತೆ ಕೈಯಿಂದಲೇ ಬಟ್ಟೆ ಒಗೆಯುತ್ತೇನೆ. ಮಷಿನ್ ಬಳಸದಿದ್ದರೆ, ಸಾಕಷ್ಟು ನೀರು ಉಳಿಯುತ್ತದೆ.

ಅಡುಗೆ ಮನೆಗೆ ಹೊಂದಿಕೊಂಡಂತೆ, ಮನೆಯೊಳಗೆ ಒಂದು ಕೈತೋಟ ಮಾಡಿಕೊಂಡಿದ್ದೇವೆ. ಅಡುಗೆ ಮನೆಯ ತ್ಯಾಜ್ಯ ನೀರು, ಅಡುಗೆಯ ನಂತರ ಪಾತ್ರೆಯಲ್ಲಿ ಉಳಿಯುವ ನೀರು, ಅಕ್ಕಿ ತೊಳೆದ ನೀರು ಇದೆಲ್ಲ ಮನೆಯೊಳಗಿನ ಕೈತೋಟದ ಗಿಡಗಳಿಗೆ ಹಾಕುತ್ತೇವೆ. ಕುಡಿಯುವ ನೀರಿಗೆ‘ಆರ್‌ಒ ಫಿಲ್ಟರ್‌’ ಬಳಸುವುದಿಲ್ಲ. ಇದರಲ್ಲಿ ಹೆಚ್ಚು ನೀರು ವ್ಯರ್ಥವಾಗುತ್ತದೆ. ಹಳೆಯ ಕ್ಯಾಂಡಲ್ ಫಿಲ್ಟರ್‌ ಬಳಕೆ ಮಾಡುತ್ತೇವೆ. ಲೋಟದ ತುಂಬಾ ನೀರು ತುಂಬಿಸಿ, ನೀರು ಕುಡಿಯುವುದಿಲ್ಲ. ಅಗತ್ಯವಿದ್ದಷ್ಟು ಮಾತ್ರ ನೀರು ತುಂಬಿಸಿಕೊಂಡು ಕುಡಿಯುತ್ತೇವೆ.

ಈ ಎಲ್ಲ ಕಾರಣಗಳಿಂದ, ನಮಗೆ ನಿತ್ಯದ ನೀರಿನ ಬೇಡಿಕೆ ಪ್ರಮಾಣ ತೀರಾ ಕಡಿಮೆ.

–ಸುನಂದಾ ಪ್ರಕಾಶ, ಧಾರವಾಡ

‘ಪರಿಸ್ಥಿತಿ’ ಕಲಿಸಿದ ನೀರಿನ ಪಾಠ

ನಮ್ಮದು ಮಲೆನಾಡು. ಮನೆಯವರು ಬ್ಯಾಂಕ್ ಉದ್ಯೋಗಿಯಾದ ಕಾರಣ ಊರಿಂದ ಊರಿಗೆ ವರ್ಗಾವಣೆ ಸಾಮಾನ್ಯ. ಹೀಗಾಗಿ ಉತ್ತರ ಕರ್ನಾಟಕದ ಕೆಲವು ಊರುಗಳಲ್ಲಿ ನೆಲೆಸುವ ಅವಕಾಶ.ಬೇಸಿಗೆ ಕಾಲದಲ್ಲಿ ಇಲ್ಲಿನ ಊರುಗಳಲ್ಲಿ ನೀರಿನ ಸಮಸ್ಯೆ ಹೆಚ್ಚು. ವಾರಕ್ಕೆ, 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಮನೆಗಳಿಗೆ ನೀರು ಬಂದ ಉದಾಹರಣೆಗಳಿವೆ‌. ಮಲೆನಾಡಿನವಳಾದ ನನಗೆ ಇದೆಲ್ಲ ಹೊಸದು. ಆದರೂ, ವಾರಕ್ಕೆ ಒಮ್ಮೆ ಬರುವ ನೀರನ್ನು ಹಿಡಿದಿಟ್ಟು, ವಾರವಿಡೀ ಮಿತವಾಗಿ ಬಳಸುವುದನ್ನು ಈ ಊರುಗಳು ಕಲಿಸಿದವು. ಅದನ್ನೇ ನಾನು ರೂಢಿಸಿಕೊಂಡಿದ್ದೇನೆ.

ಮನೆಯಲ್ಲಿ ನಿತ್ಯ ಎಲ್ಲರಿಗೂ ನೀರು ಕುಡಿಯಲು ಪ್ರತ್ಯೇಕ ಲೋಟ ಇಡುತ್ತೇನೆ. ಇಡೀ ದಿನ ಅದೇ ಲೋಟ ಬಳಸುತ್ತಾರೆ. ಅತಿಥಿಗಳಿಗೆ ಸಣ್ಣ ಲೋಟದಲ್ಲಿ ನೀರು ಕೊಡುತ್ತೇನೆ. ದೊಡ್ಡ ಲೋಟವಾದರೆ, ಅರ್ಧ ಕೊಡುತ್ತೇನೆ. ದೊಡ್ಡ ಗ್ಲಾಸಿನ ತುಂಬಾ ನೀರು ಕೊಟ್ಟರೆ, ಒಮ್ಮೊಮ್ಮೆ ಅರ್ಧ ಕುಡಿದು, ಇನ್ನರ್ಧ ಉಳಿಸಿ, ವ್ಯರ್ಥವಾಗಬಹುದಲ್ಲವಾ. ಎಷ್ಟು ಸಾರಿ ನೀರು ಕೇಳಿದರೂ ಕೊಡಬಹುದು. ಅದರೆ, ನೀರು ವ್ಯರ್ಥವಾಗಬಾರದು.

ಅಕ್ಕಿ ತೊಳೆದ ನೀರಿನಲ್ಲಿ, ಚಹಾ, ಹಾಲು ಕಾಯಿಸಿದ ಪಾತ್ರೆಗಳನ್ನು ಸ್ವಚ್ಚಮಾಡುತ್ತೇನೆ. ಈ ಪಾತ್ರೆಗಳನ್ನು ತೊಳೆದ ನೀರನ್ನೂ ಸೊಪ್ಪು, ತರಕಾರಿ ಗಿಡಗಳಿಗೆ ಹಾಕುತ್ತೇನೆ.

ಪಲ್ಯ, ಸಾಂಬಾರುಗಳಿಗೆ ಕತ್ತರಿಸಿದ ತರಕಾರಿಗಳನ್ನು ಬೇಯಿಸುವ ಪಾತ್ರೆಯಲ್ಲೇ ಇರಿಸುವುದರಿಂದ, ಬೇರೆ ಪಾತ್ರೆಗಳ ಬಳಕೆ ಕಡಿಮೆಯಾಗುತ್ತದೆ. ತೊಳೆಯುವ ಪಾತ್ರೆಗಳೂ ಕಡಿಮೆಯಾಗುತ್ತವೆ.

ಮನೆ ಸಹಾಯಕರು ಪಾತ್ರೆ ತೊಳೆಯುವ ಮುನ್ನ, ಆ ಪಾತ್ರೆಗಳಿಗೆ ಸ್ವಲ್ಪ ನೀರು ಬಳಸಿ ಮುಸುರೆ ಹೋಗುವಂತೆ ಕೈಯ್ಯಾಡಿ ಇಡುತ್ತೇನೆ. ಹೀಗೆ ಮಾಡಿದರೆ, ಅವರು ಪಾತ್ರೆ ತೊಳೆವಾಗ ಹೆಚ್ಚು ನೀರು ಬೇಕಾಗುವುದಿಲ್ಲ.

ಅಡುಗೆ ಮನೆಯ ವಾಷ್‌ ಬೇಸಿನ್ ಪಕ್ಕದಲ್ಲೇ ಒಂದು ಚಿಕ್ಕ ಬಕೆಟ್‌ನಲ್ಲಿ ನೀರು ತುಂಬಿಸಿಟ್ಟಿರುತ್ತೇನೆ. ಅದನ್ನು ಆಗಾಗ ಕೈ ತೊಳೆಯಲು ಬಳಸುತ್ತೇನೆ. ಇದರಿಂದ ನೀರಿನ ಉಳಿತಾಯವೂ ಆಗುತ್ತದೆ.

ಬೇಸಿಗೆ ಅಥವಾ ನೀರಿನ ಕೊರತೆಯಿದ್ಧಾಗ ಅಟ್ಯಾಚ್ಡ್ ಬಾತ್ ರೂಂ ಬಳಸುವುದಿಲ್ಲ. ಎಲ್ಲರೂ ಒಂದೇ ಸ್ನಾನದ ಕೋಣೆ ಬಳಸುತ್ತೇವೆ. ಇದರಿಂದ ಎಲ್ಲಾ ಸ್ನಾನದ ಕೋಣೆಗಳನ್ನು ಸ್ವಚ್ಚ ಗೊಳಿಸುವುದೂ ತಪ್ಪುತ್ತದೆ. ನೀರು ಉಳಿತಾಯವಾಗುತ್ತದೆ.

ಸ್ನಾನಕ್ಕೆ ಶವರ್ ಬಳಸುವುದಿಲ್ಲ. ಇದನ್ನು ಬಳಸಿದರೆ, ನೀರಿನ ಬಳಕೆ ಮಿತಿ ತಿಳಿಯುವುದಿಲ್ಲ. ಹಾಗಾಗಿ ನಾವು ಬಕೆಟ್‌ ನೀರು ಇಟ್ಟುಕೊಂಡೇ ಸ್ನಾನ ಮಾಡುತ್ತೇವೆ.

ಪ್ರತಿ ದಿನ ವಾಷಿಂಗ್‌ ಮಷಿನ್‌ ಬಳಸುವುದಿಲ್ಲ. ಬದಲಿಗೆ ಮೂರು ದಿನ ಅಥವಾ ವಾರಕ್ಕೆ ಎರಡು ಬಾರಿ ಬಳಸುತ್ತೇನೆ. ಇದರಿಂದ ಹೆಚ್ಚು ನೀರು ಉಳಿಯುತ್ತದೆ.

ಕಾಲು ಒರೆಸುವ ಮ್ಯಾಟ್, ನೆಲ ಒರೆಸುವ ಬಟ್ಟೆ ಇವುಗಳನ್ನು ಈ ಮೊದಲೇ ಬಟ್ಟೆ–ಪಾತ್ರೆಗಳನ್ನು ಜಾಲಿಸಿದ ನೀರಿನಲ್ಲಿ ನೆನೆಸುತ್ತೇನೆ. ನಂತರ ಒಳ್ಳೆ ನೀರು ಬಳಸಿ ತೊಳೆಯುವುದರಿಂದ, ಇದಕ್ಕೆ ಸ್ವಲ್ಪ ನೀರು ಸಾಕಾಗುತ್ತದೆ.

ಬಕೆಟ್ ನೀರಿನಲ್ಲಿ ಬಟ್ಟೆ ನೆನೆಸಿ ವಾಹನಗಳನ್ನು ಸ್ವಚ್ಛ ಮಾಡುತ್ತೇನೆ. ಪೈಪ್‌ ಬಳಸುವುದಿಲ್ಲ.

ಬೇಸಿಗೆಯಲ್ಲಿ ಅಥವಾ ನೀರಿನ ಕೊರತೆಯಿದ್ದಾಗ ಮಾತ್ರವಲ್ಲ, ಯಾವಾಗಲೂ ಈ ಎಲ್ಲ ವಿಧಾನಗಳನ್ನು ಅನುಸರಿಸುತ್ತಾ ನೀರನ್ನು ಮಿತವಾಗಿ ಬಳಸುತ್ತೇನೆ.

–ಜಾನಕಿ ಎಸ್‌., ನವನಗರ, ಬಾಗಲಕೋಟೆ

ಚಿತ್ರ: ಮಂಜುನಾಥ ಗೊಡೆಪ್ಪನವರ್‌

ನೀರಿದ್ದರಲ್ಲವೇ ಬದುಕು..

ನಾನು ಹುಟ್ಟಿ ಬೆಳೆದಿದ್ದು ಪಟ್ಟಣವೇ ಆದರೂ ಬೇರು ಮಾತ್ರ ಹಳ್ಳಿಯದು. ನಾನು ಹೈಸ್ಕೂಲ್‌ನಲ್ಲಿದ್ದಾಗ ಅಪ್ಪನ ಊರಿನಲ್ಲಿ ತೆರೆದ ಬಾವಿಯಿಂದ ನೀರು ಸೇದಿಕೊಂಡು, ಸೊಂಟದಲ್ಲೊಂದು, ತಲೆಯ ಮೇಲೊಂದು ಬಿಂದಿಗೆ ಇಟ್ಟುಕೊಂಡು ನೀರು ತರುವ ಸಾಹಸ ಮಾಡಿದ್ದೆ. ಆಗ, ಪಟ್ಟಣದಲ್ಲಿ ನಲ್ಲಿ ತಿರುಗಿಸಿದರೆ ಬರುವ ನೀರಿಗೆ ಹಳ್ಳಿಯಲ್ಲಿ ಎಷ್ಟೊಂದು ಕಷ್ಟಪಡಬೇಕಲ್ಲ ಎನಿಸುತ್ತಿತ್ತು. ಇನ್ನು ಮದುವೆಯಾಗಿ ಹಳ್ಳಿ ವಾಸಕ್ಕೆ ಕಾಯಂ ಆಗಿ ಬಂದಾಗ ಗಂಡನ ಮನೆಯಲ್ಲಿ ನೀರಿನ ಮಿತವ್ಯಯದ ಪಾಠ ರೂಢಿಸಿಕೊಳ್ಳಲಾರಂಭಿಸಿದೆ.

ಮಳೆ ನೀರು ಸಂಗ್ರಹ ನಮ್ಮ ಕನಸು. ಹಾಗಾಗಿ ನೆಲತೊಟ್ಟಿ ಸ್ವಲ್ಪ ದೊಡ್ಡದು ಮಾಡಿಕೊಂಡೆವು. ಫಿಲ್ಟರ್ ನಿಂದ ಶೋಧಿಸಿ ತೊಟ್ಟಿಗೆ ಬಿಡುತ್ತೇವೆ. ಕಾಟನ್ ಬಟ್ಟೆಯಲ್ಲಿ ಸೋಸಿ ಮಿತವಾಗಿ ಕೇವಲ ಅಡುಗೆ ಹಾಗೂ ಕುಡಿಯಲಷ್ಟೆ ಬಳಕೆ. ಇತರೆ ಅಗತ್ಯಕ್ಕೆ ಕೊಳವೆಬಾವಿ ನೀರು.

ಸೊಪ್ಪು-ತರಕಾರಿ ತೊಳೆದ ನೀರೆಲ್ಲವೂ ನೆಲ ಒರೆಸಲು ಮತ್ತು ಗಿಡಗಳಿಗೆ.

ಅಕ್ಕಿ ತೊಳೆದ ನೀರನ್ನು ಗಿಡಗಳಿಗೆ ಹಾಕುತ್ತೇನೆ. ಈ ನೀರು ಗಿಡಗಳ ಬೆಳವಣಿಗೆಗೆ ಅಗತ್ಯವಾದ ಪೂರಕ ಪೋಷಕಾಂಶ ನೀಡುತ್ತದೆ.

ಮನೆಯಿಂದ ಹೊರಗೆ ನೀರು ಬಿಟ್ಟುಕೊಳ್ಳಲು ದಪ್ಪ ಪೈಪ್ ಬದಲಿಗೆ ಡ್ರಿಪ್ ಪೈಪ್ ಬಳಕೆ.

ಬಟ್ಟೆ ಒಗೆಯುವಾಗ ಒಮ್ಮೆಗೆ ಒಗೆದು ಒಮ್ಮೆಗೆ ಜಾಲಾಡುವುದಿಲ್ಲ. ಬದಲಿಗೆ ಒಂದು ಟಬ್ ನೀರು ಖಾಲಿಯಾಗುವವರೆಗೆ ಒಗೆದು, ನಂತರ ಬಿಟ್ಟುಕೊಳ್ಳುವ ಹೊಸ ನೀರಿನಲ್ಲಿ ಒಗೆದದ್ದನ್ನು ಜಾಲಿಸುವೆ. ಜಾಲಿಸಿದ ನೀರು ಇತರೆ ಬಟ್ಟೆ ಒಗೆಯಲು ಬಳಸುವೆ. ಹೀಗಾದಾಗ ಜಾಲಿಸಲು ಸುಮ್ಮನೆ ಎರಡು-ಮೂರು ಬಾರಿ ನೀರು ಚೆಲ್ಲುವುದು ಉಳಿಯುತ್ತದೆ.

ಅಗತ್ಯಬಿದ್ದಾಗ ಅಷ್ಟೇ ವಾಹನಗಳಿಗೆ ಸ್ನಾನ.

ಎಲ್ಲ ಪಾತ್ರೆಗಳನ್ನು ಒಮ್ಮೆಗೆ ಉಜ್ಜಿಟ್ಟು(ಬೆಳಗಿ), ನೀರಿನಲ್ಲಿ ತೊಳೆಯಲು ಹೋದರೆ ಮೊದಲು ಬೆಳಗಿಟ್ಟ ಪಾತ್ರೆಗಳು ಒಣಗುತ್ತವೆ. ಆಗ ಅದನ್ನು ತೊಳೆಯಲು ಹೆಚ್ಚು ನೀರು ಬೇಕಾಗುತ್ತದೆ. ಬದಲಿಗೆ ಸ್ವಲ್ಪ ಸ್ವಲ್ಪ ಪಾತ್ರೆಯನ್ನು ಬೆಳಗುತ್ತ, ತೊಳೆದರೆ ಪಾತ್ರೆಗಳು ಬೂದುಗಾಗುವುದನ್ನು ತಪ್ಪಿಸಬಹುದು.

ಅತಿಥಿಗಳಿಗೆ ಕುಡಿಯಲು ಸಣ್ಣ ಲೋಟದಲ್ಲಿ ನೀರು ಕೊಡುತ್ತೇವೆ. ಬೇಕಿದ್ದರೆ ಮತ್ತೆ ಕೇಳಿದರಾಯಿತು. ಹೀಗಾದಾಗ ಹೆಚ್ಚು ನೀಡಿ ಮಿಕ್ಕಿದ್ದು ಚೆಲ್ಲುವ ಸಾಧ್ಯತೆ ಇರುವುದಿಲ್ಲ.

ಓವರ್ ಹೆಡ್‌ ಟ್ಯಾಂಕ್ ತುಂಬಿ ಮೋಟಾರ್ ಆಫ್ ಮಾಡಿದಾಗಲೂ ಸ್ವಲ್ಪ ನೀರು ಹೊರ ಹೋಗುತ್ತಿರುತ್ತದೆ. ಆಗ ತಕ್ಷಣ ಬಕೆಟ್‌ಗೆ ಒಂದಿಷ್ಟು ನೀರು ಬಿಟ್ಟು ವ್ಯರ್ಥವಾಗುವ ನೀರನ್ನು ಸಂಗ್ರಹಿಸುವೆ ಅಥವಾ ವ್ಯರ್ಥವಾಗಿ ಹರಿಯುವ ನೀರನ್ನಾದರೂಸಂಗ್ರಹಿಸಿ ಬೇರೆಯದಕ್ಕೆ ಉಪಯೋಗಿಸುವೆ.

ಎಷ್ಟೇ ನೀರಿರಲಿ, ಬಳಕೆ ಮಿತವಾಗಿರಲಿ. ನೀರಿದ್ದರಲ್ಲವೇ ಬದುಕು..!

–ನಯನಾ ಆನಂದ್, ಮತ್ತಿಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT