ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ‘ಚಿಗುರು’- ಇದು ಪರಿಸರ ಸ್ನೇಹಿ ಮನೆ

Last Updated 9 ಜುಲೈ 2019, 4:57 IST
ಅಕ್ಷರ ಗಾತ್ರ

ಪ್ರಕೃತಿಯ ಮಡಿಲಲ್ಲಿ ಸ್ವಾಭಾವಿಕವಾಗಿ ಬದುಕುವ ಕನಸಿನೊಂದಿಗೆ ಈ ದಂಪತಿ, ತೋಟವೊಂದರಲ್ಲಿ ಕಟ್ಟಿರುವ ಈ ಪರಿಸರ ಸ್ನೇಹಿ ಮನೆಯಲ್ಲಿ, ಆಧುನಿಕ ಜೀವನಕ್ಕೆ ಬೇಕಾದ ಸಕಲ ಸೌಲಭ್ಯಗಳಿವೆ. ಇದು ಒಂದರ್ಥದಲ್ಲಿ ಪಾರಂಪರಿಕ ಮತ್ತು ಆಧುನಿಕತೆಯ ಸಂಗಮದ ನೆಲೆ. ಇಂಚಿಂಚೂ ಜಾಗಕ್ಕೆ ಲೆಕ್ಕಾಚಾರ ಹಾಕಿ ಮನೆ ಕಟ್ಟುವ ಈ ಕಾಲದಲ್ಲಿ ಇಷ್ಟು ವಿಶಾಲ ಜಾಗದಲ್ಲಿ ಕಟ್ಟಿರುವ ಪರಿಸರ ಸ್ನೇಹಿ ಮನೆ ವಿಶಿಷ್ಟ ಎನ್ನಿಸುತ್ತದೆ.

ರಿಮೋಟ್‌ ಒತ್ತಿದ ಕೂಡಲೇ ಆಳೆತ್ತರದ ಗೇಟ್‌ ತೆರೆದುಕೊಂಡಿತು. ಗೇಟ್‌ ದಾಟಿ ಮನೆಯೊಳಗೆ ಕಾಲಿಟ್ಟರೆ, ಒಂದರ ಪಕ್ಕ ಒಂದರಂತೆ ಒಂದೇ ರೀತಿಯ ನಾಲ್ಕು ಮನೆಗಳು ಕಂಡವು. ಎಲ್ಲವೂ ಬಣ್ಣರಹಿತ ಮನೆಗಳು. ಆದರೆ, ಹೊರ ಗೋಡೆಗಳಿಗೆ ಹಸಿರು ಬಳ್ಳಿ ಹಬ್ಬಿಸಿದ್ದಾರೆ. ಒಳಗೆ ವಿಶಾಲ ಕಿಟಕಿಗಳು, ನೆಲಮಹಡಿಯಲ್ಲಿ ಹತ್ತಾರು ವಾಹನ ನಿಲ್ಲಿಸಬಹುದಾದಷ್ಟು ಪಾರ್ಕಿಂಗ್‌ ಜಾಗ. ಮನೆಯ ಒಳಗೆ ಕಾಲಿಟ್ಟರೆವಿಶಾಲ ಕಿಟಿಕಿಗಳಿಂದ ತೂರಿ ಬರುವ ತಂಗಾಳಿ. ಹಿತ್ತಲ ಬಾಗಿಲು ತೆರೆದು ಹತ್ತು ಹೆಜ್ಜೆ ಹಾಕಿದರೆ ಪುಟ್ಟ ಕಾಡು. ಕಾಡಿಗೆ ಹೊಂದಿಕೊಂಡು ಕಲ್ಲಿನ ಬೆಟ್ಟ.

‘ಇದು ನಮ್ಮ ಕನಸಿನ ಮನೆ. ನಗರದ ಜೀವನದಿಂದ ಬೇಸತ್ತು, ನಿಸರ್ಗದೊಂದಿಗೆ ಬದುಕುವುದಕ್ಕಾಗಿ ಇಲ್ಲಿಗೆ ಬಂದು ಮನೆ ಕಟ್ಟಿದ್ದೇವೆ. ಇದು ಅಪ್ಪಟ ಪರಿಸರ ಸ್ನೇಹಿ ಮನೆ’ ಎಂದು ವಿವರಿಸಿದರು ಮನೆಯೊಡತಿ ಮಂಜುಳಾ.

ಇದು ಬೆಂಗಳೂರು ಏರ್‌ಪೋರ್ಟ್‌ ರಸ್ತೆಯ ಚಿಕ್ಕಜಾಲ ಗ್ರಾಮದಲ್ಲಿರುವ ಸೋಮಶೇಖರ್ – ಮಂಜುಳಾ ದಂಪತಿಯ ಮನೆ. ಎರಡು ಎಕರೆಯಲ್ಲಿ ಒಂದೇ ತರಹದ ನಾಲ್ಕು ಮನೆಗಳಿವೆ. ಅಡುಗೆ ಮನೆಗಳಿಂದಲೇ ಎಲ್ಲ ಮನೆಗಳಿಗೆ ಒಳದಾರಿಗಳಿವೆ. ಈ ಮನೆಗಳಲ್ಲಿ 13 ಸದಸ್ಯರ ಕೂಡು ಕುಟುಂಬ ವಾಸಿಸುತ್ತದೆ. ‘ಅವಿಭಕ್ತ ಕುಟುಂಬಗಳು ನಶಿಸಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಕೂಡು ಕುಟುಂಬದ ಜೀವನದ ಆನಂದ ಅನುಭವಿಸುವ ಉದ್ದೇಶದಿಂದ ಸಾಲು ಮನೆಗಳ ಪರಿಕಲ್ಪನೆ (Row House Concept) ಮೇಲೆ ಈ ಮನೆಗಳನ್ನು ನಿರ್ಮಿಸಿದೆ’ ಎನ್ನುತ್ತಾರೆ ಮಂಜುಳಾ.

ಪರಿಸರ ಸ್ನೇಹಿ ಮನೆ

ಮಂಜುಳಾ ಆರ್ಕಿಟೆಕ್ಟ್‌ ಎಂಜಿನಿಯರ್‌. ಸೋಮಶೇಖರ್ ಏರ್‌ ಇಂಡಿಯಾ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್‌. ಮಂಜುಳಾ ಅವರು ತಮ್ಮ ಪ್ರಗತಿ ಎಂಬ ಕಟ್ಟಡ ವಿನ್ಯಾಸ ಸಂಸ್ಥೆ ಮೂಲಕ ಅನೇಕ ಪರಿಸರಸ್ನೇಹಿ ಮನೆಗಳನ್ನು ಕಟ್ಟಿದ್ದಾರೆ. ನಾನೂ ಇಂಥದ್ದೊಂದು ಚಂದದ ಮನೆ ಕಟ್ಟಬೇಕೆಂಬ ಕನಸು ಕಂಡರು. ಅದನ್ನು ನನಸಾಗಿಸಲು ಪತಿ ಸೋಮಶೇಖರ್, ಚಿಕ್ಕಜಾಲದಲ್ಲಿರುವ ತಮ್ಮ ಎರಡು ಎಕರೆ ತೋಟವನ್ನು ಆಯ್ಕೆ ಮಾಡಿಕೊಂಡರು.

ಮೊದಲು ಪಾಯ ತೆಗೆಸಿ, ಅದರಿಂದ ಬಂದ ಮಣ್ಣನ್ನೇ ಸಂಸ್ಕರಿಸಿ ಇಟ್ಟಿಗೆ ಮಾಡಿ, ಅದರಲ್ಲೇ ಮನೆ ಕಟ್ಟಿಸಿದ್ದಾರೆ. ಮಣ್ಣಿನ ಇಟ್ಟಿಗೆಯನ್ನು ಬೆಂಕಿಯಲ್ಲಿ ಸುಡುವ ಬದಲಿಗೆ ಬಿಸಿಲಲ್ಲಿ ಒಣಗಿಸಿದರು. ಅಗತ್ಯ ಬಿದ್ದಲ್ಲಿ ಮಾತ್ರ ಗಾರೆ ಬಳಸಿದ್ದಾರೆ. ಮನೆಯ ಸೂರಿಗೆ ಕಾಂಕ್ರಿಟ್‌ ಬದಲು ಇಟ್ಟಿಗೆ ಹಾಕಿದ್ದಾರೆ. ಯಾವ ಗೋಡೆಗೂ ಗಾರೆ ಇಲ್ಲ. ಬದಲಾಗಿ ನೈಸರ್ಗಿಕ ಬಣ್ಣ ಬಳಿಯಲಾಗಿದೆ. ‘ಮನೆ ಎಂದರೆ ನಾಲ್ಕು ಗೋಡೆ ಕಟ್ಟಿ, ತಾರಸಿ ಹಾಕುವುದಲ್ಲ. ನಾವು ಕಂಡ ಕನಸನ್ನು ಸಾಕಾರಗೊಳಿಸುವಂತೆ ಇರಬೇಕು. ಪ್ರಕೃತಿದತ್ತ ಗಾಳಿ, ಬೆಳಕು ಯಥೇಚ್ಛವಾಗಿ ಇರಬೇಕು’ ಎಂಬ ಆಶಯದೊಂದಿಗೆ ಈ ಮನೆ ನಿರ್ಮಾಣ ಮಾಡಿದ್ದಾರೆ.

ಒಂದು ಮನೆಯಲ್ಲಿ ನಾಲ್ಕು ಬೆಡ್‌ ರೂಂ ಮತ್ತು ಮಕ್ಕಳಿಗೆ ಪ್ರತ್ಯೇಕ ರೀಡಿಂಗ್‌ ರೂಂಗಳಿವೆ. ರೀಡಿಂಗ್‌ ರೂಂ ತಾರಸಿಗೆ ದಪ್ಪನೆ ಗಾಜು ಹಾಕಿದ್ದಾರೆ. ಗಾಜಿನಿಂದ ಬೆಳಕು ಮನೆಯೊಳಗೆ ಬೀಳುತ್ತದೆ. ಬೆಳಗಿನ ವೇಳೆ ದೀಪದ ಅಗತ್ಯವೇ ಇಲ್ಲ. ಇಂಚಿಂಚೂ ಜಾಗವನ್ನೂ ಜಾಣ್ಮೆಯಿಂದ ಬಳಕೆ ಮಾಡಿಕೊಂಡಿದ್ದಾರೆ. ಎಲ್ಲಿಯೂ ಜಾಗ ಪೋಲಾಗಿಲ್ಲ.

ಹೊರಾಂಗಣವೂ ಸುಂದರ

ಮನೆಯ ಒಳಗಿನ ವಾತಾವರಣದಷ್ಟೇ, ಸುತ್ತಲಿನ ವಾತಾವರಣವೂ ಸುಂದರವಾಗಿದೆ. ಸುಂದರ ಉದ್ಯಾನ,ದಣಿವಾದರೆ ವಿರಮಿಸಿಕೊಳ್ಳಲು ಗೋಪುರ ಮನೆ (ಗಜಿಬೊ). ಫುಟ್‌ಬಾಲ್‌, ಟೆನ್ನಿಸ್‌, ಬ್ಯಾಸ್ಕೆಟ್‌ಬಾಲ್‌ ಮೈದಾನ. ಮೂರು ಮನೆಗಳ ನೆಲ ಮಹಡಿಯಲ್ಲಿ ಐಷಾರಾಮಿ ಹೋಂ ಥಿಯೇಟರ್‌ ಇದೆ. ಎಲ್ಲ ಕಂಡಾಗ, ‘ನಗರದಲ್ಲಿರುವ ಐಷಾರಾಮಿ ಮನೆ ಗಳಿಗೆ ಬೇಕಾದ ಎಲ್ಲ ಆಧುನಿಕ ಸೌಲಭ್ಯ ಇಲ್ಲೇ ಇವೆಯಲ್ಲಾ’ ಎನ್ನಿಸಿತು.

ನಾಲ್ಕು ಮನೆಗಳನ್ನು ಸೇರಿಸಿ ಮಳೆ ನೀರು ಸಂಗ್ರಹ ಅಳವಡಿಸಿದ್ದಾರೆ. ಒಮ್ಮೆ ಮಳೆಗಾಲದಲ್ಲಿ ಮನೆ ಮೇಲೆ ಸುರಿವ ಮಳೆ ನೀರು ಸಂಪ್‌ನಲ್ಲಿ ಸಂಗ್ರಹವಾದರೆ ಮುಕ್ಕಾಲು ವರ್ಷ ಬಳಸಬಹುದು. ಸದ್ಯಕ್ಕೆ ನಾಲ್ಕೂ ಮನೆಯಲ್ಲೂ ಮಳೆ ನೀರನ್ನೇ ಬಳಸುತ್ತಿದ್ದಾರೆ. ಮನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಮನೆಯ ಉದ್ಯಾನಗಳಿಗೆ ಬಳಸುತ್ತಾರೆ. ತರಕಾರಿ ತೋಟಕ್ಕೆ ಉಪಯೋಗಿಸುತ್ತಿದ್ದಾರೆ.

ಮನೆಗಳ ಚಾವಣಿಗೆ ಸೌರ ಫಲಕಗಳನ್ನು ಅಳವಡಿಸಿದ್ದಾರೆ. ಇದರಿಂದ 5 ಕೆ.ವಿ ವಿದ್ಯುತ್ ಉತ್ಪಾದನೆಯಾಗುತ್ತದೆ. ‘ಈ ವಿದ್ಯುತ್‌ ಅನ್ನೇ ಮನೆಗೆ ಬಳಸುತ್ತಿದ್ದೇವೆ. ಆರು ತಿಂಗಳಿನಿಂದ ವಿದ್ಯುತ್‌ ಬಿಲ್‌ ಕಟ್ಟಿಲ್ಲ’ ಎನ್ನುತ್ತಾರೆ ಮನೆಯೊಡತಿ ಮಂಜುಳಾ. ಅಂದ ಹಾಗೆ, ಇವರ ಮನೆಯಲ್ಲಿ ಜಾನುವಾರುಗಳಿವೆ. ಅವುಗಳ ಸಗಣಿಯನ್ನು ಗೋಬರ್‌ ಗ್ಯಾಸ್‌ಗೆ ಬಳಸುತ್ತಾರೆ. ಅಡುಗೆ ಮನೆಗೆ ಗೋಬರ್‌ ಗ್ಯಾಸ್ ಬಳಸುತ್ತಾರೆ. ನೀರು ಬಿಸಿ ಮಾಡಲು ಮತ್ತು ಸಂಪ್‌ನಿಂದ ನೀರೆತ್ತಲು ಸೋಲಾರ್‌ ಹೀಟ್‌ ಪಂಪ್‌ ಟೆಕ್ನಾಲಜಿ ಅಳವಡಿಸಿದ್ದಾರೆ. ಮೋಡ ಕವಿದ ವಾತಾವರಣದಲ್ಲೂ ಬಿಸಿ ನೀರು ಸಿಗುತ್ತದೆ. ಇಂಥ ಪರಿಸರ ಸ್ನೇಹಿ ವಿಧಾನಗಳಿಂದಾಗಿ ಈ ಮನೆಯಿಂದ ಕಾರ್ಬನ್‌ ಹೊರಸೂಸುವಿಕೆ ಪ್ರಮಾಣ ಶೂನ್ಯ ಎನ್ನುವುದು ಅವರ ಅಭಿಪ್ರಾಯ.

ಪುರಾತನ ತಂತ್ರಜ್ಞಾನಕ್ಕೆ ಆಧುನಿಕತೆಯ ಬಣ್ಣ ಬಳಿದಂತಿರುವ ಈ ಮನೆಗಳ ವಿಶೇಷತೆ ಇರುವುದು ಐಷಾರಾಮಿ ಸೌಲಭ್ಯಗಳಿಂದ ಅಲ್ಲ. ಅದರಲ್ಲಿರುವ ಪರಿಸರ ಸ್ನೇಹಿ ಸೌಲಭ್ಯಗಳಿಂದ. ಹಾಗಂತ ಇವು ಕಡಿಮೆ ವೆಚ್ಚದ ಮನೆಗಳಲ್ಲ. ದುಬಾರಿ ವೆಚ್ಚದ ಸಿಮೆಂಟ್‌, ಮರಳಿನ ಕಾಂಕ್ರೀಟ್‌ ಗೂಡುಗಳೂ ಅಲ್ಲ. ಸೋಮಶೇಖರ್ ಅವರ ಸಂಪರ್ಕಕ್ಕೆ: 9980165868

ಕನಸಿನ ಮನೆಯ ಪರಿಶ್ರಮ

ಸೋಮಶೇಖರ್–ಮಂಜುಳಾ ದಂಪತಿಗೆ ತಮ್ಮ ಕನಸಿನ ಮನೆ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಇತ್ತು. ಅದಕ್ಕಾಗಿ ಅಗತ್ಯ ಪರಿಕರ ಸಂಗ್ರಹದಲ್ಲಿಯೇ ಒಂದು ವರ್ಷ ಕಳೆದರು. ಮನೆ ಕಟ್ಟಿ ಮುಗಿಸಲು ಮೂರು ವರ್ಷ ಶ್ರಮ ಹಾಕಿದ್ದಾರೆ. ಮನೆಯಲ್ಲಿರುವ ಪ್ರತಿ ವಸ್ತುವೂ ದಂಪತಿಯ ಅಭಿರುಚಿ ಸಂಕೇತಿಸುತ್ತವೆ. ಮನೆಯ ಹೆಸರು ‘ಚಿಗುರು’. ಅದು ಕೂಡ ನಿಸರ್ಗದ ಜತೆ ಥಳಕು ಹಾಕಿಕೊಂಡಿದೆ.

ತಮಿಳುನಾಡಿನ ಚೆಟ್ಟಿನಾಡಿನ 150 ವರ್ಷ ಹಿಂದಿನ ಅರಮನೆಯ ತೇಗಿನ ಕಿಟಕಿ, ಬಾಗಿಲು ಚೌಕಟ್ಟು ಖರೀದಿಸಿ ತಂದಿದ್ದಾರೆ. ವಿನ್ಯಾಸಕ್ಕೆ ತಕ್ಕಂತೆ ಬಾಗಿಲು, ಚೌಕಟ್ಟು, ಕಿಟಕಿ, ಪೀಠೋಪಕರಣಗಳನ್ನು ಖುದ್ದು ಡಿಸೈನ್‌ ಮಾಡಿದ್ದಾರೆ.

ನೆಲಕ್ಕೆ ಮಾರ್ಬಲ್‌ಗಳಿಲ್ಲ. ರಾಜಸ್ಥಾನದ ಜೈಸಲ್ಮೇರ್‌ನ ಹಳದಿ ಕಲ್ಲು ಹೊದಿಸಲಾಗಿದೆ. ಅಲ್ಲಲ್ಲಿ ತಮಿಳುನಾಡಿನ ಅತ್ತನಗುಡಿ, ಕಾರೈಕುಡಿಯ ಹ್ಯಾಂಡ್‌ಮೇಡ್‌ ಟೈಲ್ಸ್‌ ಹಾಕಲಾಗಿದೆ. ಬಚ್ಚಲು ಮನೆ, ಶೌಚಾಲಯ, ರೀಡಿಂಗ್‌ ರೂಂಗಳಿಗೆ ಅಗ್ಗದ ತಾಂಡೂರ ಪರ್ಸಿ ಹಾಕಲಾಗಿದೆ.ಮನೆಬೇಸಿಗೆಯಲ್ಲಿ ತಂಪಾಗಿ, ಚಳಿಗಾಲದಲ್ಲಿ ಬೆಚ್ಚಗೆ ಇರುತ್ತದೆ. ಕಿಟಕಿ, ಬಾಗಿಲುಗಳನ್ನು ಸೆಣಬು, ಬಾಳೆದಿಂಡಿನಿಂದ ತಯಾರಿಸಲಾದ ನೈಸರ್ಗಿಕ ನೂಲಿನ ಕರ್ಟನ್‌ ಅಲಂಕರಿಸಿವೆ.

ಚಿತ್ರ ಮತ್ತು ವಿಡಿಯೊ: ಕೃಷ್ಣಕುಮಾರ್‌ ಪಿ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT