ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಟಲಿಯಲ್ಲಿ ಜೀವಮೊಳಕೆ

Last Updated 24 ಜೂನ್ 2019, 19:30 IST
ಅಕ್ಷರ ಗಾತ್ರ

‘ಇಸ್ರೇಲ್ ಮಾದರಿ ಕೃಷಿ’ಯನ್ನು ಕೃಷಿ ಜಮೀನಿನಲ್ಲಷ್ಟೇ ಅಲ್ಲ, ಮನೆಯ ಅಂಗಳಕ್ಕೂ ವಿಸ್ತರಿಸಬಹುದು ಎನ್ನುವುದನ್ನು ಶಿರಸಿಯ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ.

ಕಸದ ತೊಟ್ಟಿಗಳಲ್ಲಿ ಬಿದ್ದು ಉರುಳಾಡುತ್ತಿದ್ದ ವೇಸ್ಟ್ ಬಾಟಲಿಗಳಿಗೀಗ ಬಸಿರು ಹೊರುವ ಸಂಭ್ರಮ. ಸಿಪ್ಪೆ ಬಿರಿದು ಮೊಳಕೆಯೊಡೆದ ಎಳೆ ಚಿಗುರನ್ನು ನೋಡುವ ಪುಳಕ.

ಶಿರಸಿಯ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ ಮಾಡುತ್ತಿದ್ದಾರೆ. ಒಂದು ತಿಂಗಳು ಗಲ್ಲಿ ಗಲ್ಲಿ ಸುತ್ತಿ, ಹೋಟೆಲ್‌ಗಳು, ಅಂಗಡಿಗಳಿಂದ ಸಂಗ್ರಹಿಸಿರುವ ನೀರು, ತಂಪು ಪಾನೀಯ ಕುಡಿದು ಎಸೆದ ಬಾಟಲಿಗಳಲ್ಲಿ ಜೀವಕಳೆ ತುಂಬಿದ್ದಾರೆ. ಪರಿಸರ ಮಾಲಿನ್ಯ ತಡೆಗಟ್ಟಲು ಈ ವಿದ್ಯಾರ್ಥಿಗಳ ಪುಟ್ಟ ಪ್ರಯತ್ನವಿದು.

ಕಾಲೇಜಿನ ಎದುರು ನಾಲ್ಕು ಕಂಬಗಳ ನಡುವೆ ವರ್ಟಿಕಲ್‌ ಗಾರ್ಡನ್ ನಿರ್ಮಿಸಿದ್ದಾರೆ. ಇಲ್ಲಿ ಜೋತಾಡುವ ದಾರಗಳ ನಡುವೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸೊಂಪಾಗಿ ಬೆಳೆದಿರುವ ಸೊಪ್ಪು ಕಾಲೇಜಿಗೆ ಭೇಟಿ ನೀಡುವವರ ಗಮನ ಸೆಳೆಯುತ್ತಿದೆ. ಅರ್ಧ ಕಟ್ ಮಾಡಿರುವ ಬಾಟಲಿಗಳಲ್ಲಿ ಮೆಂತೆ, ಹರಿವೆ, ಪಾಲಕ್, ಸಬ್ಬಸಿಗೆ, ಈರುಳ್ಳಿ, ಕೊತ್ತಂಬರಿ ಬೀಜ ಬಿತ್ತಿ, ಸೊಪ್ಪು ಬೆಳೆಸಿದ್ದಾರೆ.

‘ಇದಕ್ಕೇನು ಹೆಚ್ಚು ಶ್ರಮವಿಲ್ಲ. ಪೇಟೆಯಿಂದ ಸಂಗ್ರಹಿಸಿ ತಂದಿದ್ದ ಪ್ಲಾಸ್ಟಿಕ್ ಬಾಟಲಿಗಳ ಹೊಟ್ಟೆ ಸಿಗಿದು, ಅದರಲ್ಲಿ ತೆಂಗಿನ ನಾರಿನ ಪುಡಿ ತುಂಬಿ, ಬೀಜ ಬಿತ್ತನೆ ಮಾಡಿದ್ದೇವೆ. ನಾರಿನ ಪುಡಿಗೆ ತೇವಾಂಶ ಹಿಡಿದಿಟ್ಟುಕೊಳ್ಳುವ ಗುಣವಿದೆ. ಹೀಗಾಗಿ, ಎರಡು ದಿನಕ್ಕೊಮ್ಮೆ ನೀರು ಕೊಟ್ಟರೂ ಸಾಕು. ಬೀಜ ಹಾಕಿ, 8–10 ದಿನಗಳಲ್ಲಿ ಸಸಿಗಳು ಮೇಲೇಳುತ್ತವೆ. ಎನ್‌ಪಿಕೆ ಗೊಬ್ಬರವನ್ನು (19:19:19) ಸಿಂಪರಣೆ ಮಾಡಿದರೆ, ಸಸಿಗಳು ದಷ್ಟಪುಷ್ಟವಾಗಿ ಬೆಳೆಯುತ್ತವೆ. ಇದು ಸುಲಭವಾಗಿ ನೀರಿನಲ್ಲಿ ಕರಗುತ್ತದೆ. ಹಾಗಾಗಿ ಸಿಂಪರಣೆಯೂ ಸುಲಭ’ ಎನ್ನುತ್ತ ವಿದ್ಯಾರ್ಥಿ ಬಸವರಾಜ ಬಾಟಲಿಯಲ್ಲಿ ಬೆಳೆದಿದ್ದ ಮೆಂತೆ ಸೊಪ್ಪನ್ನು ತೋರಿಸಿದರು.

ಬಾಟಲಿಯ ಪುನರ್ ಬಳಕೆಯ ವಿಚಾರ ಬಂದಿದ್ದು ಹೇಗೆ ಎಂಬ ಪ್ರಶ್ನೆಯನ್ನು ಮುಂದಿಟ್ಟೆ. ‘ನಮ್ಮ ತರಕಾರಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಾನಂದ ಹೊಂಗಲ್ ಅವರು ಇಸ್ರೇಲ್‌ಗೆ ಹೋದಾಗ, ಅಲ್ಲಿ ಕಂಡಿದ್ದ ಬಾಟಲಿಯ ಮರು ಬಳಕೆಯ ಪ್ರಯೋಗವನ್ನು ಕಾಲೇಜಿನಲ್ಲಿ ಮಾಡೋಣವೆಂದು ನಮ್ಮನ್ನು ಹುರಿದುಂಬಿಸಿದರು. ವಿದ್ಯಾರ್ಥಿಗಳು ಬಿಡಿ ಬಿಡಿಯಾಗಿ ತಂಡ ಕಟ್ಟಿಕೊಂಡು ಬಾಟಲಿಗಳ ರಾಶಿ ತಂದು ಸುರಿದರು. ಈಗ ನೋಡಿ, ಅವೆಲ್ಲ ಶೋ ಪೀಸ್‌ಗಳಂತೆ ಕಾಣುತ್ತಿವೆ’ ಎಂದು ಅವರು ಕಾಲೇಜಿನ ಕಾರಿಡಾರ್‌ ಕಟ್ಟೆಯಂಚನ್ನು ಆವರಿಸಿಕೊಂಡಿದ್ದ ಬಾಟಲಿ ಪಾಟ್‌ನೆಡೆಗೆ ಕೈತೋರಿದರು.

ಅಂಗಳದಲ್ಲಿದ್ದ ಗಾರ್ಡನ್‌ ಈಗ ಮಹಡಿಯನ್ನೇರಿದೆ. ಕಾರಿಡಾರಿನ ಸುತ್ತ, ಟೆರೇಸ್‌ ಮೇಲಿನ ನೆರಳಿನ ಜಾಗದಲ್ಲೆಲ್ಲ ಜಲಪಾತದಂತೆ ಇಳಿಬಿದ್ದಿರುವ ಬಾಟಲಿಗಳು ಕಾಣುತ್ತವೆ.

ಮಳೆಗಾಲದಲ್ಲಿ ತೆರೆದ ಬಯಲಿನಲ್ಲಿ ತರಕಾರಿ, ಸೊಪ್ಪು ಬೆಳೆಸಿದರೆ, ಮಲೆನಾಡಿನ ಮಳೆಗೆ ಕೊಳೆಯುವ ಸಾಧ್ಯತೆ ಹೆಚ್ಚು. ಹಾಗೆಂದು, ಚಾವಣಿ ಕೆಳಗೆ ಸುಲಭದಲ್ಲಿ ಬೆಳೆಬಹುದು. ಬಾಟಲಿ ಗಟ್ಟಿಯಿದ್ದರೆ 2–3 ಬೆಳೆಯನ್ನು ಆರಾಮವಾಗಿ ತೆಗೆಯಬಹುದು. ಇನ್ನೂ ಒಂದಡಿ ಮುಂದಿಟ್ಟ ವಿದ್ಯಾರ್ಥಿಗಳು, ತೆಂಗಿನ ಚಿಪ್ಪಿನಲ್ಲೂ ಸಸಿ ಬೆಳೆಸಲು ತಯಾರಿ ನಡೆಸಿದ್ದಾರೆ. ತೆಂಗಿನ ಚಿಪ್ಪು ನೋಟದಲ್ಲೂ ಕಲಾತ್ಮಕ ಎಂದರು, ಅಲ್ಲಿಯೇ ಇದ್ದ ಚೇತನಾ.

ಪೇಟೆಯಲ್ಲಿ ರಾಸಾಯನಿಕರಹಿತ ತರಕಾರಿ ಹುಡುಕುವುದೇ ಕಷ್ಟ. ರಾಸಾಯನಿಕ ಸಿಂಪಡಿಸಿದ ತರಕಾರಿ ಸೇವನೆ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗೆ ಕಾರಣವಾಗಬಹುದು. ಸಾಧ್ಯವಾದಷ್ಟು ಮನೆಯಲ್ಲೇ ಬೆಳೆಸಿಕೊಂಡರೆ, ಸಾವಯವ ತರಕಾರಿ ತಿಂದ ಸಮಾಧಾನವೂ ಸಿಕ್ಕೀತು. ನಗರದಲ್ಲಿ ತರಕಾರಿ ಬೆಳೆಸಲು ಜಾಗ ಇಲ್ಲದಿದ್ದರೆ, ಪ್ಲಾಸ್ಟಿಕ್ ಬಾಟಲಿಯಲ್ಲಿ ಆಳ ಬೇರು ಬಿಡದಂತಹ ಸೊಪ್ಪು ಬೆಳೆಯಬಹುದು. ಎಣ್ಣೆ ಕ್ಯಾನ್, ಒಡೆದ ಬಕೆಟ್, ಪೇಂಟ್ ಡಬ್ಬ, ಸಿಮೆಂಟ್ ಚೀಲ ಹೀಗೆ ಎಸೆಯುವ ಪ್ಲಾಸ್ಟಿಕ್‌ ಅನ್ನು ಟೆರೇಸ್‌ ಮೇಲಿಟ್ಟು ತರಕಾರಿ ಗಿಡಗಳ ಬೆಳೆಸಬಹುದು ಎಂಬುದು ಶಿವಾನಂದ ಹೊಂಗಲ್ ನೀಡುವ ಸಲಹೆ.

ಹೀಗೆ ಬೆಳೆಯುವಾಗ ಮಣ್ಣನ್ನು ಉಪಯೋಗಿಸದಿರುವುದು ಲೇಸು. ತೆಂಗಿನ ನಾರಿನ ಪುಡಿ ಹಗುರ. ಇದು ಬಾಟಲಿಗೂ ಭಾರವಲ್ಲ, ಟೆರೇಸ್‌ ಮೇಲಿಟ್ಟರೂ ವಜ್ಜೆಯಾಗುವುದಿಲ್ಲ ಜೊತೆಗೆ ಕಿಸೆಗೂ ಕಷ್ಟವಿಲ್ಲ. ಮಾರ್ಕೆಟ್‌ನಲ್ಲಿ ಸುಲಭವಾಗಿ ಸಿಗುವ ನಾರಿನ ಪುಡಿ ಕೆ.ಜಿ.ಯೊಂದಕ್ಕೆ 10 ರೂಪಾಯಿಯಷ್ಟೇ, ಎಂದು ಹೇಳುವುದನ್ನು ಮರೆಯಲಿಲ್ಲ ಅವರು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT