ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುವ ಊರು | ಜೋಶಿಮಠದಲ್ಲಿ ಒಂದು ದಿನ...

Last Updated 14 ಜನವರಿ 2023, 19:30 IST
ಅಕ್ಷರ ಗಾತ್ರ

ಹಿಮಾಲಯದ ಪರ್ವತಾಗ್ರದಲ್ಲಿ ನೆಲೆಸಿರುವ ಜೋಶಿಮಠ ಎಂಬ ಪಟ್ಟಣದಿಂದ ದುರಂತದ ಸುದ್ದಿಗಳು ಬರುತ್ತಿವೆ. ಊರ ಕೆಳಗಿನ ನೆಲ ಕುಸಿಯುತ್ತಿದೆ. ಮನೆಗಳು ಸೀಳೊಡೆಯುತ್ತಿವೆ. ಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ದೊಡ್ಡ ಹೋಟೆಲುಗಳನ್ನು ಕೆಡವಲಾಗುತ್ತಿದೆ. ಈ ಹೊತ್ತಲ್ಲಿ ಜೋಶಿಮಠದಲ್ಲಿದ್ದಾಗ ಕಂಡ ಕಲಾತ್ಮಕ ಮನೆಗಳು ನೆನಪಾದವು. ಆಪ್ತವಾಗಿ ಮಾತಾಡುವ ಮಂದಿ ಮುಂದೆ ಸುಳಿದರು.

ಜೋಶಿಮಠವು 10 ಸಾವಿರ ಅಡಿಗಿಂತಲೂ ಮೇಲಿರುವ ಬದರಿನಾಥ, ಭಾರತದ ಕೊನೇಹಳ್ಳಿ ಮಾನಾ, ಹೂವಿನಕಣಿವೆ, ಗುರುದ್ವಾರ ಹೇಮಕುಂಡಸಾಹೇಬ್ ಮೊದಲಾದ ಪ್ರಸಿದ್ಧ ತಾಣಗಳಿಗೆ ಹೋಗುವ ಎಡೆಯಲ್ಲಿ ಕೈಕಂಬದಂತೆ ಸಿಗುವ ಊರು. ಕೆಳಹಿಮಾಲಯದ ಬಯಲು ಪ್ರದೇಶಗಳಿಂದ ಘಾಟಿ ಹತ್ತಿಕೊಂಡು ಏದುಸಿರು ಬಿಡುತ್ತ ಬರುವ ವಾಹನಗಳು ಇಲ್ಲಿ ದಣಿವಾರಿಸಿಕೊಳ್ಳುತ್ತವೆ. ಪ್ರವಾಸಿಗಳಿಗೂ ಯಾತ್ರಾರ್ಥಿಗಳಿಗೂ ಚಾರಣ ಮಾಡುವವರಿಗೂ ಪಾದಯಾತ್ರೆಯಲ್ಲಿ ಬರುವ ಸಾಧುಗಳಿಗೂ ಇದೊಂದು ಬಿಡಾರದ ಜಾಗ.

ಬದರಿಯತ್ತ ಹೊರಟ ಸಾಧು
ಬದರಿಯತ್ತ ಹೊರಟ ಸಾಧು

ಜೋಶಿಮಠವು ಮತ್ತೊಂದು ಕಾರಣಕ್ಕೆ ಮುಖ್ಯ. ಉಪರಿ ಹಿಮಾಲಯದಲ್ಲಿರುವ ಬದರಿ, ಮಾನಾ ಮುಂತಾದ ಊರಿನವರು ಚಳಿಗಾಲದಲ್ಲಿ ಕೆಳಗೆ ಬಂದು ನೆಲೆಸುವ ಸ್ಥಳ ಕೂಡ. ಬದರಿನಾಥನನ್ನೂ ಕೆಳಗೆ ತಂದು ಪೂಜಿಸುವರು. ಸ್ಥಳಾಂತರ ಜೋಶಿಮಠಕ್ಕೆ ಹೊಸತಲ್ಲ. ಆದರೆ ಈಗಿನ ಸ್ಥಳಾಂತರ ಬೇರೆಯೇ ಬಗೆಯದು. ದಿಕ್ಕೆಟ್ಟಿದ್ದು.

ನಮ್ಮ ತಂಡ ಹೂವಿನಕಣಿವೆ ಮತ್ತು ಹೇಮಕುಂಡಸಾಹೇಬ್‍ಗೆ ಚಾರಣಕ್ಕೆಂದು ಹೋದಾಗ ಜೋಶಿಮಠದಲ್ಲಿ ಇಳಿಕೆ ಮಾಡಿತ್ತು. ಹಿಮಾಲಯದ ತಪೋಭಂಗಕ್ಕೆ ಕಾರಣವಾದ ಸಾವಿರಾರು ಕಾಮಗಾರಿಗಳನ್ನು ರಸ್ತೆಯುದ್ದಕ್ಕೂ ನೋಡಿಕೊಂಡು ಜೋಶಿಮಠ ಮುಟ್ಟುವಾಗ ರಾತ್ರಿಯಾಗಿತ್ತು. ನಮ್ಮ ಬಿಡಾರ ಪರ್ವತದ ಕೋಡಿನ ಅಂಚಿನಲ್ಲಿದ್ದು, ಎಲ್ಲೊ ಆಗಸದಲ್ಲಿದ್ದೇವೆಂಬ ಭಾವನೆ ಬರುತ್ತಿತ್ತು.

ಬೆಳಿಗ್ಗೆ ಎದ್ದು ನೋಡಿದರೆ ಇಡೀ ಕಣಿವೆಯಲ್ಲಿ ಬೆಣ್ಣೆಯಂತೆ ತುಂಬಿದ ಮಂಜು. ಅದನ್ನೇ ನಿಟ್ಟಿಸುತ್ತ ಕೂತಿರುವಾಗ ಸೂರ್ಯ ಸೆಣಸಾಟ ಮಾಡಿ ತುಸುವೇ ಹೊರಬಂದ. ಮಂಜು ಸರಿಯುತ್ತ ಮೆಲ್ಲಮೆಲ್ಲನೆ ಪರ್ವತಗಳು ಆಗಸಕ್ಕೇರಿದ ಕೋಡುಗಳನ್ನೂ ಬೃಹದಾಕಾರದ ಮೈಯನ್ನೂ ಕಾಣಿಸಿದವು. ಅಲ್ಲಿದ್ದವರಿಗೆ ಪರ್ವತಗಳ ಹೆಸರು ಕೇಳಿದೆ. ಒಂದರ ಹೆಸರು ಹಾತಿಪಹಾಡ್. ಆನೆಯೊಂದರ ತಲೆಯ ಭಾಗ, ಕಣ್ಣು, ಕಿವಿ ಎಲ್ಲವೂ ಕಾಣುತ್ತದೆ ನೋಡಿ ಎಂದು ವಿವರಿಸಿದರು. ಆನೆನಾಡಿನಿಂದ ಹೋದ ನನಗದು ಆನೆಯಂತೆ ತೋರಲಿಲ್ಲ.

ಜೋಶಿಮಠ ಚೂಪಾಗಿ ಮೇಲೇರಿರುವ ಬೃಹದಾಕಾರದ ಪರ್ವತವೊಂದರ ಇಳಿಜಾರು ಬೆನ್ನಿನ ಮೇಲೆ ಕೂಸುಮರಿಯಂತೆ ನೆಲೆಸಿದೆ. ಪರ್ವತದ ಹೊಟ್ಟೆಗೆ ಹಗ್ಗಸುತ್ತಿದಂತೆ ರಸ್ತೆಗಳು. ಎದುರಿನ ವಾಹನ ಬಂದರೆ ಹಿಂಜರಿದೊ ಮುಂಜರಿದೊ ಜಾಗ ಕೊಡಬೇಕಾದ ಇಕ್ಕಟ್ಟು. ಎದುರಾ ಎದುರು ಮತ್ತೂ ನೀಳವಾದ ಚೂಪಾದ ಪರ್ವತಗಳು. ಇವೆರಡರ ನಡುವೆ ಆಳದಲ್ಲಿ ಬದರಿಯಿಂದ ಬಂದ ಅಲಕನಂದಾ ಹರಿಯುತ್ತದೆ.

ಊರೊಳಗೆ ಅಡ್ಡಾಡಲು ಹೋದೆವು. ರಸ್ತೆಬದಿ ಕಳೆಯೋಪಾದಿಯಲ್ಲಿ ಯಥೇಚ್ಛ ಬೆಳೆದ ಭಂಗಿಗಿಡ. ಭೂಚೆಂಡನ್ನು ಅಂಗೈಯಲ್ಲಿ ಹಿಡಿದು ರಕ್ಷಿಸುವ ಚಿಹ್ನೆಯುಳ್ಳ ನಿರಂಕಾರಿ ಅಖಾಡದ ಬೋರ್ಡು. ಅದರ ಮೇಲೆ ‘ಧರಮ್ ತೋಡತಾ ನಹಿ ಜೋಡತಾ ಹೈ, ಖೂನ್ ನಾಡಿಯೋಂ ಬಹೆ, ನಾಲಿಯೋಮೆ ನಹಿ’ (ಧರ್ಮ ವಿಭಜಿಸುವುದಿಲ್ಲ, ಜೋಡಿಸುತ್ತದೆ. ನೆತ್ತರು ನಾಡಿಗಳಲ್ಲಿ ಹರಿಯಲಿ, ನಾಲೆಗಳಲ್ಲಿ ಅಲ್ಲ) ಎಂದು ಬರೆದಿತ್ತು. ಜನ ರಸ್ತೆಬದಿ ಹಿತ್ತಲಿಂದ ಕಿತ್ತುತಂದ ತಾಜಾ ಸೇಬು, ಹಸಿಬದಾಮಿ, ಸೊಪ್ಪು, ತರಕಾರಿಯನ್ನು ಬಿಕರಿಗೆ ಇರಿಸಿದ್ದರು. ಕೆಲವರು ಹುಲ್ಲುಹೊರೆ ತರುತ್ತಿದ್ದರು. ಆತಂಕ ಹುಟ್ಟಿಸುವಂತೆ ಕಪ್ಪುಗೂಳಿಯೊಂದು ರಸ್ತೆಗೆ ಅಡ್ಡನಿಂತಿತ್ತು.

ಹಲಗೆ ಗೋಡೆಯ ಹಗೂರ ಮನೆ (ಮೇಲಿನ ಚಿತ್ರ) ಕಲಾತ್ಮಕ ಕೆತ್ತನೆಯ ಕಿಟಕಿಗಳ ಸಾಲು (ಕೆಳಗಿನ ಚಿತ್ರ)
ಹಲಗೆ ಗೋಡೆಯ ಹಗೂರ ಮನೆ (ಮೇಲಿನ ಚಿತ್ರ) ಕಲಾತ್ಮಕ ಕೆತ್ತನೆಯ ಕಿಟಕಿಗಳ ಸಾಲು (ಕೆಳಗಿನ ಚಿತ್ರ)

ಒಂದು ಮನೆಯ ತಾರಸಿಗೆ ಮತ್ತೊಂದು ಮನೆಯ ಬಾಗಿಲು ಇರುವಂತೆ ಏಣೀಕರಣದ ಬೀದಿಗಳು. ರಸ್ತೆಯ ಸಮಕ್ಕಿರುವ ಚಾವಣಿ ಮೇಲೆ ನಿಂತು ಬಿಸಿಲು ಕಾಸುತ್ತಿದ್ದ ಒಬ್ಬಳು ‘ಕಹಾಂಕೆ ಹೋ?’ ಎಂದಳು. ‘ಕರ್ನಾಟಕ್’ ಎಂದೆ. ‘ಯಹ್ಞಾಂಕ ಪಾನಿ, ಹವಾ, ಸಬ್ಜಿ, ಫಲ್, ಫೂಲ್ ಸಬ್ ಶುಧ್ ಹೈ’ ಎಂದು ಹೆಮ್ಮೆಯಿಂದ ನಕ್ಕಳು. ಪರ್ವತ ಪ್ರದೇಶದ ಜನ ಬಯಲುನಾಡಿನ ಪ್ರವಾಸಿಗಳ ಮುಂದೆ ಈ ಹೇಳಿಕೆಯನ್ನು ಜಂಬದಿಂದ ಮಾಡುವುದು ಸಾಮಾನ್ಯ. ಕೊಂಚ ಆಪ್ತರಾಗಿ ಹತ್ತಿರ ಸರಿದರೆ ನಿಧಾನಕ್ಕೆ ಹಿಮಪಾತ, ಥಂಡಿ, ಭೂಕಂಪ, ಮಳೆ, ಅನಾರೋಗ್ಯದ ಸಂಚಿ ಬಿಚ್ಚುವರು. ಚಿಕ್ಕವಯಸ್ಸಿಗೆ ಆಕೆಯ ಹಲ್ಲು ಕಪ್ಪಾಗಿದ್ದವು. ಕೆಲವು ಬಿದ್ದುಹೋಗಿದ್ದವು. ವಿನೋದದಿಂದ ಹೇಳಿದೆ: ‘ನಮ್ಮಲ್ಲಿ ಗಾಳಿ, ನೀರು ಇಲ್ಲಿನಷ್ಟು ತಾಜಾ ಇಲ್ಲ ನಿಜ. ಆದರೆ ನಿಮ್ಮಲ್ಲಿರುವಂತೆ ಭೂಕಂಪ ಮತ್ತು ಹಲ್ಲುಗಳ ಸಮಸ್ಯೆ ಕಡಿಮೆ’ ಎಂದೆ. ಆಕೆ ನಗಲಿಲ್ಲ.

ನಮ್ಮ ಸಹಚಾರಣಿಗ ವೈದ್ಯಮಿತ್ರರು ಹಿಮಾಲಯದ ಜನರಿಗೆ ದಂತ ಮತ್ತು ಕೀಲುಗಳ ಸಮಸ್ಯೆಗೆ ಕಾರಣವನ್ನು ವಿವರಿಸಿದರು. ಹಿಮಾಲಯದ ಚಾರಣದಲ್ಲಿ ಹಳ್ಳಿಯ ಜನ ‘ಔಷಧಿಯಿದ್ದರೆ ಕೊಟ್ಟುಹೋಗಿ’ ಎಂದು ಕೇಳುತ್ತಿದ್ದುದು ನೆನಪಾಯಿತು. ನಗರೀಕರಣದ ಕಾಯಿಲೆಗಳಿಂದ ಚೇತರಿಸಿಕೊಳ್ಳಲು ಹಿಮಾಲಯಕ್ಕೆ ಹೋಗುವ ನಾವು; ನಮ್ಮಿಂದ ತಮ್ಮ ಬೇನೆಗೆ ಮದ್ದುಬೇಡುವ ಪರ್ವತವಾಸಿಗಳು. ವೈರುಧ್ಯ.

ಮರದ ದಿಮ್ಮಿಗಳ ಗೋಡೆ
ಮರದ ದಿಮ್ಮಿಗಳ ಗೋಡೆ

ಜೋಶಿಮಠದ ನರಸಿಂಗ ಗುಡಿಯ ಆಸುಪಾಸು ಹಳಗಾಲದ ಕಲಾತ್ಮಕ ಮನೆಗಳು ಕಂಡವು. ದೇವದಾರು ಚೇಗಿನ ತೊಲೆ ಮತ್ತು ಕಲ್ಲುಗಳನ್ನು ಅಳವಡಿಸಿ ಮಣ್ಣುಮೆತ್ತಿದ ಗೋಡೆಗಳು; ಕಲ್ಲುಚಪ್ಪಡಿಯ ಚಾವಣಿ. ಚಳಿಗೆ ಬಾಗಿಲು ತೆಗೆಯದೆ ವ್ಯವಹರಿಸುವುದಕ್ಕೊ ಅಥವಾ ಉಸಿರಾಟಕ್ಕೆ ಬೇಕಾದ ಗಾಳಿಯಾಟಕ್ಕೊ ಗೋಡೆಗಳಲ್ಲಿ ಅವಳವಡಿಸಿರುವ ಕಿರುಗಿಂಡಿಗಳು. ಕಬ್ಬಿಣ-ಸಿಮೆಂಟಿಲ್ಲದೆ ಸ್ಥಳೀಯ ಕಲ್ಲು-ಮಣ್ಣು-ಕಟ್ಟಿಗೆಗಳಿಂದ ಮನೆಕಟ್ಟುವ ವಾಸ್ತುಶಿಲ್ಪದ ಅಪೂರ್ವ ಈ ಪಳೆಯುಳಿಕೆಗಳು, ಬೆಚಿರಾಗ್ ಹಳ್ಳಿಯನ್ನು ನೆನಪಿಸಿದವು. ಜನವಾಸವಿರುವ ಕೆಲವು ಮನೆಗಳ ಗೋಡೆಗಳಲ್ಲೂ ಸೀಳು ಕಂಡಿತು. ಆದರೆ ಕಲ್ಲಿನಲ್ಲಿ ಗೇದಿರುವ ಪ್ರಾಚೀನ ಗುಡಿಯ ಗೋಪುರ ಅಲುಗಿರಲಿಲ್ಲ. ಶಿಥಿಲವಾಗಿರುವ ಈ ಕಲಾತ್ಮಕ ಮನೆಗಳನ್ನು ಪಾಳುಬಿಟ್ಟು, ಜನ ಪಕ್ಕದಲ್ಲೇ ಭದ್ರವಾದ ಕಾಂಕ್ರೀಟ್ ಮನೆಗಳನ್ನು ಕಟ್ಟಿಕೊಂಡಿದ್ದರು.

ಜೋಶಿಮಠ ಭೂಕಂಪನದ ಪ್ರದೇಶ. ಒಳಗೆ ಟೊಳ್ಳಾಗಿರುವ ಹಿಮಾಲಯದ ರಚನೆಯೊಳಗೇ ಸಡಿಲತನವಿದೆ. ಅದರ ಮೇಲೆ ಕಟ್ಟಿಗೆಗೋಡೆ ಮಾಡಿನ ಹಗುರ ಮನೆಗಳನ್ನು ಬಿಟ್ಟುಕೊಟ್ಟು, ಸೌಂದರ್ಯವಿಲ್ಲದ ಕಾಂಕ್ರೀಟ್ ಕಟ್ಟಡಗಳ ಒಜ್ಜೆಯನ್ನು ಹೇರಲಾಗಿದೆ. ಮನೆಗೆ, ರಸ್ತೆಗೆ ಮಾಡುವ ಅಗೆತ ಬಗೆತಗಳಿಂದಾದ ಬಿರುಕುಗಳಿಂದ ಹೊಟ್ಟೆಯೊಳಗೆ ಸೇರಿದ ನೀರು, ಊರಿನ ಸಮೇತ ಪರ್ವತವನ್ನೇ ಕುಸಿತಕ್ಕೆ ಈಡುಮಾಡಿದೆ. ಮಡಿಕೇರಿಯ ಭೂಕುಸಿತಕ್ಕೂ ಇಂಥಹುದೇ ಕಾರಣ ಕೊಡಲಾಗಿತ್ತು. ಪರ್ವತಗಳಿಗೆ ಚಲಿಸಲಾರದ್ದು, ದೃಢವಾದುದು ಎಂಬರ್ಥದಲ್ಲಿ ‘ಅಚಲ’ ಎನ್ನಲಾಗುತ್ತದೆ. ಈಗ ಈ ಅಚಲಗಳೂ ಚಲಿಸುವ ಅಚಲ ನಿರ್ಧಾರ ಮಾಡಿದಂತಿವೆ.

ನರಸಿಂಹ ಗುಡಿಯ ಹಿನ್ನೆಲೆಯಲ್ಲಿ ಜೋಶಿಮಠ
ನರಸಿಂಹ ಗುಡಿಯ ಹಿನ್ನೆಲೆಯಲ್ಲಿ ಜೋಶಿಮಠ

ತಪೋವನದ ವಿದ್ಯುದಾಗಾರಕ್ಕಾಗಿ ಕೊರೆದ ಸುರಂಗವೇ ಇದಕ್ಕೆಲ್ಲ ಕಾರಣ ಎನ್ನುತ್ತಿದ್ದಾರೆ ಸ್ಥಳೀಯರು. ನಿಸರ್ಗದ ಸಹಜ ಲಯವನ್ನು ಅರಿತು, ಅದನ್ನು ಹೆಚ್ಚು ಭಂಗಗೊಳಿಸದೆ ಬಾಳುವ ಕಲೆಯನ್ನು ಕಳೆದುಕೊಂಡ ‘ಅಭಿವೃದ್ಧಿ’ ಕಾಮಗಾರಿಯ ಫಲವನ್ನು ಎಲ್ಲರೂ ಅನುಭವಿಸಬೇಕಾಗಿದೆ. ಹಿಮಪಾತಕ್ಕೆ ಹೆದರಿ ಸುರಕ್ಷಿತ ತಾಣವೆಂದು ಮೇಲ್ ಹಿಮಾಲಯದ ಜನರಿಗೆ ಆಶ್ರಯಕೊಟ್ಟಿದ್ದ ಊರೀಗ, ತಾನೇ ನಿರಾಶ್ರಿತವಾಗಿದೆ. ನಾವು ನೋಡಿದ ಪ್ರಾಚೀನ ಮನೆಗಳು ಈಗ ಉಳಿದಿದ್ದಾವೋ ಇಲ್ಲವೋ?

ದನಗಳಿಗೆ ದೂರದಿಂದ ಹುಲ್ಲು ಹೊತ್ತು ತರುವುದೇ ದೊಡ್ಡ ಕಾಯಕ...
ದನಗಳಿಗೆ ದೂರದಿಂದ ಹುಲ್ಲು ಹೊತ್ತು ತರುವುದೇ ದೊಡ್ಡ ಕಾಯಕ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT