ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಬಣ್ಣಕ್ಕೆ ತಿರುಗಿದ ಗಂಗಾವಳಿ ನೀರು: ನದಿಪಾತ್ರದ ಜನರಲ್ಲಿ ಆತಂಕ

Last Updated 13 ಮೇ 2021, 13:11 IST
ಅಕ್ಷರ ಗಾತ್ರ

ಕಾರವಾರ: ಯಲ್ಲಾಪುರ ಮತ್ತು ಅಂಕೋಲಾ ತಾಲ್ಲೂಕುಗಳಲ್ಲಿ ಹರಿಯುವ ಗಂಗಾವಳಿ (ಬೇಡ್ತಿ) ನದಿಯ ನೀರು ಒಂದು ವಾರದಿಂದ ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ನದಿಯ ಇಕ್ಕೆಲಗಳ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಹೆಗ್ಗಾರ, ಕಲ್ಲೇಶ್ವರ, ಶೇವ್ಕಾರ, ಗುಳ್ಳಾಪುರ, ಡೋಂಗ್ರಿ ಗ್ರಾಮಗಳ ಜನರು ಈ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಅಲ್ಲದೇ ಅಗಸೂರಿನಿಂದ ಕಾರವಾರಕ್ಕೆ ಕುಡಿಯುವ ನೀರನ್ನೂ ಪೂರೈಕೆ ಮಾಡಲಾಗುತ್ತಿದೆ. ಈಗ ನೀರು ಕಡು ಹಸಿರು ಬಣ್ಣಕ್ಕೆ ತಿರುಗಿದೆ. ನೀರಿನ‌ ಮೇಲ್ಭಾಗದಲ್ಲಿ ಹಸಿರು ಪಾಚಿಗಟ್ಟಿದಂಥ ರಚನೆ ಕಂಡುಬರುತ್ತಿದೆ. ಈ ನೀರಿನ ಸೇವನೆ ಜನ ಹಾಗೂ ಜಾನುವಾರಿಗೆ ಮಾರಕವೇ ಎಂದು ಜನರು ಗೊಂದಲದಲ್ಲಿದ್ದಾರೆ.

‘10 ವರ್ಷಗಳ ಹಿಂದೆ ಇದೇ ರೀತಿ ನೀರು ಹಸಿರುಗಟ್ಟಿತ್ತು. ಆಗ ಈ ಭಾಗದಲ್ಲಿ ಚಿಕುನ್ ಗುನ್ಯಾ ಹಾಗೂ ಡೆಂಗಿ ಜ್ವರದ ಹೆಚ್ಚಿನ ಪ್ರಕರಣಗಳು ಈ ಭಾಗದಲ್ಲಿ ದೃಢಪಟ್ಟಿದ್ದವು. ಸರ್ಕಾರದ ಕೆಲವು ಇಲಾಖೆಯವರು ಕಾಟಾಚಾರದ ವರದಿಯನ್ನು ನೀಡಿದ್ದರು. ಆದರೆ, ಈಗ ಪರಿಸ್ಥಿತಿ ಗಂಭೀರ ಆಗಿರುವ ಕಾರಣ ವೈಜ್ಞಾನಿಕವಾಗಿ ಪರಿಶೀಲಿಸಬೇಕು. ನದಿ ನೀರು ಹಸಿರಾಗಲು ಕಾರಣವನ್ನು ಪತ್ತೆ ಮಾಡಿ ಅದರ ನಿವಾರಣೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹೆಗ್ಗಾರದ ರಾಘವೇಂದ್ರ ಗಾಂವ್ಕರ ಒತ್ತಾಯಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿ ಡಾ.ವಿ.ಎನ್.ನಾಯ್ಕ, ‘ನದಿಯಲ್ಲಿ ಸಾವಯವ ಪದಾರ್ಥಗಳು ಹೆಚ್ಚು ಸಂಗ್ರಹವಾದಾಗ ನೀರಿನಲ್ಲಿ ಪಾಚಿ (ಆಲ್ಗೆ) ಬೆಳೆಯುವ ಪ್ರಮಾಣ ಏರಿಕೆಯಾಗುತ್ತದೆ. ಗಂಗಾವಳಿಯ ಮುಖ್ಯ ಉಪ ನದಿಯಾಗಿರುವ ಶಾಲ್ಮಲಾಕ್ಕೆ ಹುಬ್ಬಳ್ಳಿಯ ಚರಂಡಿ ತ್ಯಾಜ್ಯ ಸೇರುತ್ತದೆ. ಈಗ ಬೇಸಿಗೆಯ ದಿನಗಳಲ್ಲಿ ನೀರಿನ ಹರಿವು ಕಡಿಮೆಯಾಗಿರುವುದು ಮತ್ತು ಬಿಸಿಲು ಜಾಸ್ತಿಯಿರುವುದು ಪಾಚಿ ಸಮೃದ್ಧವಾಗಿ ಬೆಳೆಯುಲು ಅನುಕೂಲವಾಗಿರಬಹುದು. ನೀರನ್ನು ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಸಮಸ್ಯೆಯಾಗದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT