ಶನಿವಾರ, ಮಾರ್ಚ್ 6, 2021
32 °C

ಪ್ರೋತ್ಸಾಹದ ನಿರೀಕ್ಷೆಯಲ್ಲಿ ‘ಪರಿಸರ ಸ್ನೇಹಿ ಗಣಪ’

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Deccan Herald

ಶ್ರಾವಣ ಮುಗಿದಿದೆ. ಭಾದ್ರಪದ ಹೊಸ್ತಿಲಲ್ಲಿದೆ. ಗಣೇಶ ಚತುರ್ಥಿಗೆ ನಾಲ್ಕು ದಿನವಷ್ಟೇ ಬಾಕಿಯಿದೆ. ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಗಣಪನ ಖರೀದಿ ಬಿರುಸುಗೊಂಡಿದೆ.

ಪಿಒಪಿ ಗಣೇಶ ಮೂರ್ತಿಗಳು ನಿಷೇಧದ ನಡುವೆಯೂ ಜಿಲ್ಲೆಯ ಎಲ್ಲೆಡೆ ರಾರಾಜಿಸುತ್ತಿವೆ. ಕೆಲವೆಡೆ ಮಣ್ಣಿನ ಗಣಪನ ನಡುವೆಯೂ ನುಸುಳಿವೆ. ಜನಸ್ತೋಮ ಮುಗಿಬಿದ್ದು ಖರೀದಿಸುವ ದೃಶ್ಯಾವಳಿ ಜಿಲ್ಲೆಯ ಎಲ್ಲೆಡೆ ಗೋಚರಿಸುತ್ತಿದೆ.

ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇಂದಿಗೂ ಶಾಸ್ತ್ರೋಕ್ತವಾಗಿ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರಿಸುವ ಕೆಲ ಕುಟುಂಬಗಳಿವೆ. ಈ ಕುಟುಂಬಗಳು ತಮ್ಮ ಪೂರ್ವಿಕರ ಕಾಲದಿಂದಲೂ ಗಣಪನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷ. ತಮ್ಮದೇ ನಿಯಮಿತ ಗ್ರಾಹಕರನ್ನು ಈ ಕುಟುಂಬಗಳು ಹೊಂದಿವೆ.

ವಿಜಯಪುರ ನಗರದ ಆಶ್ರಮ ರಸ್ತೆ ಬದಿ ಕಾಳಪ್ಪ ಪತ್ತಾರ ಎಂಬ ಗಣಪ ಮೂರ್ತಿ ತಯಾರಕರು, ಬಾಡಿಗೆ ಮನೆ ಪಡೆದು ಮಣ್ಣಿನ ಮೂರ್ತಿಗಳನ್ನು ಮಾರಾಟಕ್ಕಿಟ್ಟಿದ್ದಾರೆ. ವಿವಿಧೆಡೆಯಿಂದ ಮಣ್ಣಿನ ಮೂರ್ತಿ ಅರಸಿ ಇಲ್ಲಿಗೆ ಬರುವವರು ಇದ್ದಾರೆ.

‘ನಮ್ಮದು ಪತ್ತಾರ ಕುಟುಂಬ. ನಾಲತವಾಡ ಮೂಲ ನೆಲೆ. ನಮ್ಮ ಮುತ್ತಾತನ ಕಾಲದಿಂದಲೂ ಗಣಪತಿ ತಯಾರಿಕೆ ಕಲೆ ನಮಗೆ ಸಿದ್ಧಿಸಿದೆ. ದಶಕಗಳ ಹಿಂದೆಯೇ ನಮ್ಮ ತಂದೆ ವಿಜಯಪುರಕ್ಕೆ ವಲಸೆ ಬಂದು ನೆಲೆ ನಿಂತಿದ್ದಾರೆ. ಈ ಮೊದಲು ಐತಿಹಾಸಿಕ ಉಪ್ಪಲಿ ಬುರುಜ್‌ ಬಳಿ ಗಣಪನ ಮಾರಾಟ ಮಾಡುತ್ತಿದ್ದೆವು. ಈ ಬಾರಿ ಆಶ್ರಮ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ’ ಎಂದು ಗಣಪನ ತಯಾರಕ ವರವೇಂದ್ರ ಪತ್ತಾರ ತಿಳಿಸಿದರು.

ಆರು ತಿಂಗಳು ಮೊದಲೇ ತಯಾರಿ

‘ಗಣೇಶ ಚತುರ್ಥಿಗೂ ಆರು ತಿಂಗಳು ಮೊದಲೇ ತಯಾರಿ ಆರಂಭವಾಗುತ್ತದೆ. ನಮ್ಮ ತಂದೆ ಕಾಳಪ್ಪ ಪತ್ತಾರ ಸೇರಿದಂತೆ ತಾಯಿ, ನಾನು, ಇಬ್ಬರು ತಮ್ಮಂದಿರು ಇದರಲ್ಲಿ ತೊಡಗಿಸಿಕೊಳ್ಳುತ್ತೇವೆ. ಕೈಯಿಂದ ನೂರು ಗಣಪ ಮೂರ್ತಿ ಮಾಡಿದರೆ, ಅಚ್ಚು ಬಳಸಿ 200 ಗಣಪ ತಯಾರಿಸುತ್ತೇವೆ. ನಂತರ ಸೊಂಡಿಲು, ಕೈ–ಕಾಲು ತಿದ್ದಿಕೊಳ್ಳುತ್ತೇವೆ.

ನಮಗೆ 150 ಕಾಯಂ ಗಿರಾಕಿಗಳಿದ್ದಾರೆ. ಹಬ್ಬದ ದಿನ ಮನೆಗೆ ಬಂದು ಶಾಸ್ತ್ರೋಕ್ತವಾಗಿ ಗಣಪನನ್ನು ಒಯ್ಯುವ ಪದ್ಧತಿ ಇಂದಿಗೂ ಜೀವಂತವಿದೆ. ಉಳಿದ 150 ಗಣಪ ಮೂರ್ತಿಗಳನ್ನು ಮಾರಾಟಕ್ಕಿಡುತ್ತೇವೆ. 6 ಇಂಚಿನಿಂದ ಒಂದೂವರೆ ಅಡಿ ಎತ್ತರದವರೆಗೆ ಗಣಪನ ಮೂರ್ತಿಗಳನ್ನು ನಿರ್ಮಿಸುತ್ತೇವೆ. 6 ಇಂಚಿನ ಮೂರ್ತಿಯ ಬೆಲೆ ₹ 250 ಇದ್ದರೆ, ಒಂದೂವರೆ ಅಡಿ ಗಣಪನ ಬೆಲೆ ₹ 600 ಇದೆ. ಚೌಕಾಶಿ ವ್ಯಾಪಾರವೇ ಹೆಚ್ಚು.

ಅಪ್ಪ ಇದರ ಜತೆಯೇ ಪತ್ತಾರ ಕೆಲಸ ಮಾಡಿದರೆ, ನಾನು ಬಿಎಲ್‌ಡಿಇ ಸಂಸ್ಥೆಯ ಭದ್ರತಾ ಸಿಬ್ಬಂದಿಯಿದ್ದೇನೆ. ತಮ್ಮಂದಿರು ಓದುತ್ತಿದ್ದಾರೆ. ಐವರು ಆರು ತಿಂಗಳಲ್ಲಿ 300 ಗಣಪನ ಮೂರ್ತಿ ತಯಾರಿಸುತ್ತೇವೆ. ಮಣ್ಣಿನ ಮೂರ್ತಿ ತಯಾರಿಕೆಗೆ ಅಗತ್ಯವಿರುವ ಮಣ್ಣು ವಿಜಯಪುರ ಜಿಲ್ಲೆಯಲ್ಲೇ ಸಿಗಲ್ಲ’ ಎಂದು ವರವೇಂದ್ರ ತಿಳಿಸಿದರು.

‘ಬೆಳಗಾವಿ ಜಿಲ್ಲೆಯ ಹೊಲವೊಂದರಿಂದ ಕೆಂಪು ಮಣ್ಣನ್ನು ಗಣಪ ಮೂರ್ತಿ ತಯಾರಿಕೆಗಾಗಿ ತರಿಸಿಕೊಳ್ಳುತ್ತೇವೆ. ಕನಿಷ್ಠ ₹ 30000 ವೆಚ್ಚ ತಗುಲಲಿದೆ. ಆರಂಭದಲ್ಲಿ ಮಣ್ಣನ್ನು ಕುಟ್ಟಿ ಪುಡಿ ಪುಡಿ ಮಾಡಿಕೊಳ್ಳಲಾಗುವುದು. ನಂತರ ಸೋಸುತ್ತೇವೆ. ಕಲ್ಲು–ಕಸ ಬೇರ್ಪಡಿಸಿ, ನೀರಿನಲ್ಲಿ ನೆನೆ ಹಾಕುತ್ತೇವೆ.

ಈ ಮಣ್ಣನ್ನು ಒಣಗಿಸಿಕೊಳ್ಳುತ್ತೇವೆ. ಮತ್ತೆ ಕುಟ್ಟಿ ಪುಡಿ ಪುಡಿ ಮಾಡಿ, ಇದರ ಜತೆ ಹತ್ತಿಯನ್ನು ಬೆರೆಸಿ, ಕುಟ್ಟುತ್ತೇವೆ. ಈ ಹಂತಕ್ಕೆ ಬರಲು ತಿಂಗಳುಗಳು ಗತಿಸಲಿವೆ. ಮಣ್ಣು ನುಣುಪಾದ ಬಳಿಕ ಶಾಸ್ತ್ರೋಕ್ತವಾಗಿ ಗಣಪ ಮೂರ್ತಿ ತಯಾರಿಸಲು ಆರಂಭಿಸುತ್ತೇವೆ. ಒಂದೂವರೆ ಅಡಿ ಎತ್ತರದ ಗಣಪ ಮೂರ್ತಿ ತಯಾರಿಕೆಗೆ ಕನಿಷ್ಠ 15 ದಿನ ಬೇಕು. ನಂತರ ಒಣಗಲು ಬಿಡುತ್ತೇವೆ. ಬಿರುಕನ್ನು ಸರಿಪಡಿಸಿ, ವಾಟರ್‌ ಪೇಯಿಂಟ್‌ ಬಳಿಯುತ್ತೇವೆ’ ಎಂದು ವಿ.ಕೆ.ಪತ್ತಾರ ಮಾಹಿತಿ ನೀಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು