ಮಂಗಳವಾರ, ಜನವರಿ 18, 2022
15 °C

ಒಳನೋಟ| ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಿಂದ ಜಾರಿಕೊಳ್ಳುವ ಏಜೆನ್ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ/ಮೈಸೂರು: ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ (ಆರ್‌ಒ) ಘಟಕಗಳನ್ನು ಸ್ಥಾಪಿಸುವ ಖಾಸಗಿ ಏಜೆನ್ಸಿಗಳು ನಿರ್ವಹಣೆಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಘಟಕವಿದ್ದರೂ ಶುದ್ಧ ಕುಡಿಯುವ ನೀರಿಗೆ ಜನರು ಪರದಾಡುವ ಪರಿಸ್ಥಿತಿ ಜೀವಂತವಾಗಿದೆ.

ಘಟಕ ಸ್ಥಾಪಿಸುವ ಖಾಸಗಿ ಏಜೆನ್ಸಿಗಳು ಐದು ವರ್ಷ ನಿರ್ವಹಣೆ ಮಾಡಬೇಕು ಎಂಬುದು ನಿಯಮ. ಅವಧಿ ಪೂರ್ಣಗೊಂಡ ಬಳಿಕ ಮರು ಟೆಂಡರ್‌ ಕರೆದು ನಿರ್ವಹಣೆಯ ಹೊಣೆಯನ್ನು ಹೊಸದಾಗಿ ನೀಡಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಖಾಸಗಿ ಏಜೆನ್ಸಿಗಳು ಘಟಕಗಳತ್ತ ತಿರುಗಿ ನೋಡುತ್ತಿಲ್ಲ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್), ಸಂಸದರು, ಶಾಸಕರ ಅನುದಾನ ಹಾಗೂ ಸಹಕಾರ ಸಂಘಗಳ ನೆರವಿನಿಂದ ಘಟಕಗಳನ್ನು ಸ್ಥಾಪಿಸಲಾಗಿದೆ. ಘಟಕಗಳ ಮೇಲೆ ನಿಗಾ ಇಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸರ್ಕಾರ ಹೊಣೆಗಾರಿಕೆ ನಿಗದಿ ಮಾಡಿದೆ. ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ ‘ಸ್ಮಾರ್ಟ್‌ ಅಕ್ವಾ ಏಜೆನ್ಸಿ’ಯನ್ನು ಚಿತ್ರದುರ್ಗದಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ.

₹ 1, ₹ 2, ₹ 5 ನಾಣ್ಯ ಬಳಸಿ 20 ಲೀಟರ್‌ ನೀರು ಪಡೆಯುವ ವ್ಯವಸ್ಥೆ ಘಟಕಗಳಲ್ಲಿದೆ. ಇಲ್ಲಿ ಸಂಗ್ರಹವಾಗುವ ಹಣದಲ್ಲಿ ಘಟಕ ನಿರ್ವಹಿಸಬೇಕು. ಒಮ್ಮೆ ಮಾತ್ರ ಸರ್ಕಾರ ನಿರ್ವಹಣೆಯ ವೆಚ್ಚವನ್ನು ಭರಿಸಲಿದೆ. ನಾಣ್ಯದ ಬದಲು ‘ಸ್ಮಾರ್ಟ್‌ ಕಾರ್ಡ್‌’ ವ್ಯವಸ್ಥೆಯನ್ನು ಕೆಲ ಏಜೆನ್ಸಿಗಳು ಅನುಷ್ಠಾನಕ್ಕೆ ತಂದಿವೆ. ಇದಕ್ಕೆ ಗ್ರಾಮೀಣ ಪ್ರದೇಶದ ಜನರಿಂದ ವಿರೋಧ ವ್ಯಕ್ತವಾಗಿದೆ.

ಘಟಕಗಳ ಸ್ಥಿತಿ ಅರಿಯಲು ಕರ್ನಾಟಕ ರಾಜ್ಯ ರಿಮೋಟ್‌ ಸೆನ್ಸಿಂಗ್‌ ಬೋರ್ಡ್‌ ‘ಆ್ಯಪ್‌’ ಅಭಿವೃದ್ಧಿಪಡಿಸಿದೆ. ಚಿತ್ರದುರ್ಗ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಘಟಕಗಳ ‘ಭೌಗೋಳಿಕ ಸೂಚಿಕೆ’ (ಜಿಯಾಗ್ರಾಫಿಕಲ್‌ ಇಂಡಿಕೇಷನ್‌) ಆಧಾರದ ಮೇರೆಗೆ ಇದರ ನಿರ್ವಹಣೆಯ ಮೇಲೆ ನಿತ್ಯ ನಿಗಾ ಇಡಲಾಗುತ್ತದೆ. ಇಷ್ಟೆಲ್ಲಾ ಆದರೂ ಘಟಕಗಳು ಜನರಿಗೆ ಸಮರ್ಪಕವಾಗಿ ನೀರು ಒದಗಿಸುತ್ತಿಲ್ಲ.

ಮೈಸೂರು ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಕಿಡಿಗೇಡಿಗಳು ಹಾನಿ ಮಾಡುವುದು, ಮೋಟಾರ್ ಮತ್ತಿತ್ತರ ಪರಿಕರಗಳನ್ನು ನಾಶಪಡಿಸುವುದು ಮಾಮೂಲಿಯಾಗಿದೆ. ಇದರಿಂದ ನಿರ್ವಹಣೆ ಪಡೆದ ಗುತ್ತಿಗೆದಾರರು ಹೈರಾಣಾಗಿದ್ದಾರೆ.

ಇವುಗಳನ್ನೂ ಓದಿ

 

ಒಳನೋಟ| ಹೊನ್ನಕಿರಣಗಿಯಲ್ಲಿ ಫ್ಲೋರೈಡ್‌ ನೀರು: ಮಕ್ಕಳಲ್ಲಿ ಅಂಗ ಊನ, ಅಕಾಲ ಮುಪ್ಪು

ಒಳನೋಟ| ಮಳೆಯಿಂದ ಹೆಚ್ಚಳವಾದ ಅಂತರ್ಜಲ

ಒಳನೋಟ| ಕ್ಯಾನ್ ಮಾಫಿಯಾ ಮನೆ ಮನೆಗೆ ವಿಷಯುಕ್ತ ನೀರು

ಒಳನೋಟ| ಅತಿವೃಷ್ಟಿಯಾದರೂ ಬಾಗಲಕೋಟೆಯಲ್ಲಿ ಕುಸಿದ ಅಂತರ್ಜಲ ಮಟ್ಟ!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು