ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಗಳಿಂದ ಹೆಚ್ಚು ವಾಯುಮಾಲಿನ್ಯ: ಉದ್ಯಾನನಗರಿ ಬೆಂಗಳೂರಿಗೆ 3ನೇ ಸ್ಥಾನ

Last Updated 24 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ:ದೈನಂದಿನ ಓಡಾಟಕ್ಕೆ ಹೆಚ್ಚು ಇಂಧನ ಬಳಸುವ ಮತ್ತು ವಾಹನಗಳಿಂದ ಹೆಚ್ಚು ವಾಯುಮಾಲಿನ್ಯಕ್ಕೆ ತುತ್ತಾಗುತ್ತಿರುವ ದೇಶದ 14 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೆಹಲಿ, ಚೆನ್ನೈ ಕ್ರಮವಾಗಿ ಮೊದಲನೇ ಮತ್ತು ಎರಡನೇ ಸ್ಥಾನದಲ್ಲಿವೆ.

ಸಾರ್ವಜನಿಕ ಸಾರಿಗೆಗಿಂತಲೂ ಸ್ವಂತ ವಾಹನದ ಬಳಕೆಯ ಪ್ರಮಾಣ ಹೆಚ್ಚಿರುವುದರಿಂದಲೇ ಈ ನಗರಗಳಲ್ಲಿ ವಾಯುಮಾಲಿನ್ಯವು ವಿಪರೀತ ಮಟ್ಟದಲ್ಲಿರಲು ಕಾರಣ ಎಂದು ದೆಹಲಿಯ ‘ಸೆಂಟರ್‌ ಫಾರ್ ಸೈನ್ಸ್‌ ಅಂಡ್ ಎನ್ವಿರಾನ್ಮೆಂಟ್’ ಸಂಸ್ಥೆ ತಿಳಿಸಿದೆ.ಜನರು ಸಾರ್ವಜನಿಕ ಸಾರಿಗೆಯನ್ನೇ ದೈನಂದಿನ ಓಡಾಟಕ್ಕೆ ಹೆಚ್ಚು ಬಳಸುವ ಭೋಪಾಲ್‌ನಲ್ಲಿ ವಾಹನಗಳಿಂದಾಗುವ ವಾಯುಮಾಲಿನ್ಯದ ಪ್ರಮಾಣ ಕಡಿಮೆ ಇದೆ. ಈ ಪಟ್ಟಿಯಲ್ಲೇ ಹೆಚ್ಚು ಶುದ್ಧ ನಗರ ಎನಿಸಿದೆ

ದೆಹಲಿ ಹೆಚ್ಚು ಮಲಿನ, ಭೋಪಾಲ್ ಶುದ್ಧ

1. ದೆಹಲಿ

2. ಚೆನ್ನೈ

3. ಬೆಂಗಳೂರು

4. ಹೈದರಾಬಾದ್

5. ಮುಂಬೈ

6. ಪುಣೆ

7. ಅಹಮದಾಬಾದ್

8. ಕೋಲ್ಕತ್ತ

9. ಜೈಪುರ

10. ಕೊಚ್ಚಿ

11.ಲಖನೌ

12.ಚಂಡೀಗಡ

13.ವಿಜಯವಾಡ

14. ಭೋಪಾಲ್

1. ದೆಹಲಿಯ ವಿಸ್ತೀರ್ಣ ಹೆಚ್ಚಿರುವುದರಿಂದ ಈ ನಗರದಲ್ಲಿ ಜನರು ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ.ಇಲ್ಲಿನ ಬಸ್‌, ಟ್ಯಾಕ್ಸಿ, ಆಟೊ, ಸರಕು ಸಾಗಣೆ ವಾಹನಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಬಳಸಲಾಗುತ್ತದೆ. ಬೆಂಗಳೂರು ಮತ್ತು ಚೆನ್ನೈಗೆ ಹೋಲಿಸಿದರೆ ದೆಹಲಿಯ ಮಂದಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುತ್ತಾರೆ.ಜನರ ಸಂಖ್ಯೆ ಬೇರೆಲ್ಲಾ ನಗರಗಳಿಂಗಿಂತ ಹಲವು ಪಟ್ಟು ಹೆಚ್ಚು (2.6 ಕೋಟಿಗಿಂತಲೂ ಹೆಚ್ಚು). ಅಷ್ಟು ಜನರನ್ನು ಸಾಗಿಸುವ ಸಾಮರ್ಥ್ಯ ಇಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಿಲ್ಲ. ಹೀಗಾಗಿ ಇಲ್ಲಿ ಬಹಳ ಮಂದಿ ಓಡಾಟಕ್ಕೆ ಕಾರುಗಳನ್ನೇ ಬಳಸುತ್ತಾರೆ. ಹೀಗಾಗಿಯೇ ಬೇರೆಲ್ಲಾ ನಗರಗಳಿಗಿಂತ ಇಲ್ಲಿ ವಾಹನಗಳಿಂದಾಗುವ ವಾಯುಮಾಲಿನ್ಯ ವಿಪರೀತ ಹೆಚ್ಚು

2.ಚೆನ್ನೈ ಸಹ ವಿಸ್ತಾರವಾದ ನಗರವಾಗಿದ್ದು, ದೈನಂದಿನ ಕೆಲಸಗಳಿಗೆ ಜನರು ಬಹಳ ದೂರ ಕ್ರಮಿಸಬೇಕಾಗುತ್ತದೆ. ಅಗತ್ಯವಿರುವಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ವೈಯಕ್ತಿಕ ವಾಹನಗಳ ಬಳಕೆ ತೀರಾ ಹೆಚ್ಚು

3.ಬೆಂಗಳೂರಿನಲ್ಲಿ ಪ್ರತಿದಿನ ಓಡಾಡುವವರ ಸಂಖ್ಯೆಗೆ ಹೋಲಿಸಿದರೆ, ಸಾರ್ವಜನಿಕ ಸಾರಿಗೆಯನ್ನು ಬಳಸುವವರ ಪ್ರಮಾಣ ತೀರಾ ಕಡಿಮೆ. ಬೇರೆಲ್ಲಾ ಮಹಾನಗರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಸ್ವಂತ ವಾಹನಗಳನ್ನು ಬಳಸಲಾಗುತ್ತಿದೆ. ದೇಶದಲ್ಲೇ ಉತ್ತಮ ಮತ್ತು ಆಧುನಿಕ ಸೌಕರ್ಯಗಳುಳ್ಳ ಬಸ್‌ ವ್ಯವಸ್ಥೆಯನ್ನು ಬೆಂಗಳೂರು ಹೊಂದಿದೆ. ಜನಸಂಖ್ಯೆ ಹೆಚ್ಚು ಇರುವುದರಿಂದ ಮತ್ತು ನಗರವೂ ವಿಸ್ತಾರವಾಗಿರುವುದರಿಂದ ಸ್ವಂತ ವಾಹನ ಬಳಕೆ ಅನಿವಾರ್ಯವಾಗಿದೆ

ದೆಹಲಿ ಹೆಚ್ಚು ಮಲಿನ, ಭೋಪಾಲ್‌ ನಿರ್ಮಲ

ಈ ಪಟ್ಟಿಯಲ್ಲಿರುವ ಬೇರೆಲ್ಲಾ ನಗರಗಳ ಹೋಲಿಕೆಯಲ್ಲಿ ಭೋಪಾಲ್‌ನ ವಿಸ್ತೀರ್ಣ ತೀರಾ ಕಡಿಮೆ. ದೈನಂದಿನ ಕೆಲಸಗಳಿಗೆ ಇಲ್ಲಿನ ಮಂದಿ ಸಾರ್ವಜನಿಕ ಸಾರಿಗೆಯನ್ನೇ ಹೆಚ್ಚು ಬಳಸುತ್ತಾರೆ. ಸೈಕಲ್‌ ಬಳಕೆಗೆ ಇಲ್ಲಿನ ಸ್ಥಳೀಯಾಡಳಿತ ಉತ್ತೇಜನ ನೀಡುತ್ತಿದೆ. ಈ ನಗರದಲ್ಲಿ ಲಕ್ಷಾಂತರ ಮಂದಿ ತಮ್ಮ ಕಚೇರಿಗಳಿಗೆ ನಡೆದುಕೊಂಡೇ ಹೋಗುತ್ತಾರೆ. ಇಲ್ಲಿ ಸ್ವಂತ ವಾಹನಗಳ ಬಳಕೆಯ ಪ್ರಮಾಣ ಕಡಿಮೆ ಇದೆ. ಹೀಗಾಗಿ ಇಲ್ಲಿ ಇಂಧನದ ಬಳಕೆಯೂ ಕಡಿಮೆ, ವಾಹನಗಳಿಂದಾಗುವ ವಾಯುಮಾಲಿನ್ಯವೂ ಕಡಿಮೆ

ಮಾಡಬೇಕಿರುವುದೇನು...

* ಬೆಂಗಳೂರು ಮತ್ತು ಚೆನ್ನೈನಲ್ಲಿ ಈ ಸ್ವರೂಪದ ವಾಯುಮಾಲಿನ್ಯವನ್ನು ತಗ್ಗಿಸಲು ಇನ್ನೂ ಅವಕಾಶವಿದೆ

* ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು. ಸಾರ್ವಜನಿಕ ಬಸ್‌ಗಳನ್ನು ಬಳಕೆದಾರ ಸ್ನೇಹಿಯಾಗಿ ವಿನ್ಯಾಸಮಾಡಬೇಕು

* ಸೈಕಲ್‌ ಬಳಕಗೆ ಉತ್ತೇಜನ ನೀಡಬೇಕು. ಸೈಕಲ್‌ ಸವಾರಿಗೆ ಅನುಕೂಲವಾಗುವಂತೆ ರಸ್ತೆಗಳನ್ನು ನಿರ್ಮಿಸಬೇಕು, ಸೈಕಲ್‌ ಪಥಗಳನ್ನು ಪ್ರತ್ಯೇಕಿಸಬೇಕು

* ಈಗಲೇ ಕ್ರಮ ತೆಗೆದುಕೊಳ್ಳದಿದ್ದರೆ, ಈ ನಗರಗಳು ದೆಹಲಿಯನ್ನು ಶೀಘ್ರವೇ ಹಿಂದಿಕ್ಕಲಿವೆ

ಆಧಾರ:ಸೆಂಟರ್‌ ಫಾರ್ ಸೈನ್ಸ್‌ ಅಂಡ್ ಎನ್ವಿರಾನ್ಮೆಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT