ಸೋಮವಾರ, ಮಾರ್ಚ್ 8, 2021
20 °C

ಡಾರ್ಜಿಲಿಂಗ್: ಪ್ರವಾಸಿಗರ ಡಾರ್ಲಿಂಗ್

ಎಚ್.ಎಸ್.ನವೀನಕುಮಾರ್ Updated:

ಅಕ್ಷರ ಗಾತ್ರ : | |

Prajavani

ಈಶಾನ್ಯ ಭಾರತದ ಪ್ರವಾಸವೇ ಒಂದು ವಿಶಿಷ್ಟಾನುಭವ. ಅಲ್ಲಿನ ಜನಜೀವನ, ಹಿಮಚ್ಛಾದಿತ ಗಿರಿಶೃಂಗಗಳು, ಭವ್ಯ ಬೌದ್ಧಾಲಯಗಳು ಭಾರತದ ವೈವಿಧ್ಯಕ್ಕೆ ಕನ್ನಡಿ ಹಿಡಿಯುತ್ತವೆ. ಇಲ್ಲಿನ ಸುಪ್ರಸಿದ್ಧ ಪ್ರವಾಸಿ ತಾಣಗಳಾದ ಡಾರ್ಜಿಲಿಂಗ್, ಗ್ಯಾಂಗ್‍ಟಾಕ್ ಸುತ್ತಾಡಿ ಬಂದರೆ ಒಂದು ಅವಿಸ್ಮರಣೀಯ ಪ್ರವಾಸಾನುಭವ ಖಂಡಿತ.

ಡಾರ್ಜಿಲಿಂಗ್ ಪಶ್ಚಿಮಬಂಗಾಳ ರಾಜ್ಯದ ಸುಪ್ರಸಿದ್ಧ ಗಿರಿಧಾಮ. ಗ್ಯಾಂಗ್‍ಟಾಕ್ ಹಿಮಾಲಯದ ಮಡಿಲಿನ ಪುಟ್ಟ ಸುಂದರ ರಾಜ್ಯ, ಸಿಕ್ಕಿಂನ ರಾಜಧಾನಿ. ಡಾರ್ಜಿಲಿಂಗ್ ವಿಶ್ವವಿಖ್ಯಾತವಾಗಿರುವುದು ಮುಖ್ಯವಾಗಿ ಮೂರು ಪ್ರವಾಸಿ ಆಕರ್ಷಣೆಗಳಿಗಾಗಿ. ಮೊದಲನೆಯದು ಇಲ್ಲಿನ ಟೈಗರ್‍ ಹಿಲ್ಸ್‌ನಿಂದ ಕಾಣುವ ಕಾಂಚನಗಂಗ ಪರ್ವತದಲ್ಲಾಗುವ ಅಭೂತಪೂರ್ವ ಸೂರ್ಯೋದಯಕ್ಕೆ. ಎರಡನೆಯದು ಯುನೆಸ್ಕೊ ವಿಶ್ವಪ್ರವಾಸಿ ತಾಣ ಡಾರ್ಜಲಿಂಗ್‌ನ ಟಾಯ್‍ಟ್ರೈನಿಗೆ. ಮೂರನೆಯದಾಗಿ ಇಲ್ಲಿನ ವಿಶಿಷ್ಟ ಚಹಾಕ್ಕೆ. 

ಡಾರ್ಜಿಲಿಂಗ್‍ನಿಂದ 11 ಕಿ.ಮೀ ದೂರದಲ್ಲಿದೆ ಟೈಗರ್‌ ಹಿಲ್ಸ್‌. ಇಲ್ಲಿ ನಿಂತರೆ ಹಿಮಾಲಯ ಶ್ರೇಣಿಯ ಮೇರು ಶಿಖರಗಳಾದ ಮೌಂಟ್ ಎವರೆಸ್ಟ್ ಹಾಗೂ ಕಾಂಚನಗಂಗಾ ಪರ್ವತಗಳ ವಿಹಂಗಮ ನೋಟ ಕಣ್ಣಿಗೆ ಹಬ್ಬ. ಈ ಶಿಖರದ ಮೇಲೆ ಬೀಳುವ ಸೂರ್ಯೋದಯದ ಮೊದಲ ಕಿರಣಗಳು ರಜತ ಪರ್ವತಕ್ಕೆ ಚಿನ್ನದ ಹೊದಿಕೆ ತೊಡಿಸಿದಂತೆ ಕಾಣುತ್ತದೆ.

ಡಾರ್ಜಿಲಿಂಗ್‍ಗೆ ಯುನೆಸ್ಕೊದಿಂದ ವಿಶ್ವ ಪ್ರವಾಸಿ ತಾಣದ ಮಾನ್ಯತೆ ಸಿಕ್ಕಿರುವುದು ಇಲ್ಲಿನ ಟಾಯ್ ಟ್ರೈನ್‍ನಿಂದ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇಸ್ ನಿರ್ವಹಣೆಯ ಈ ರೈಲು ಡಾರ್ಜಿಲಿಂಗ್-ಜಲಪಾಯ್‍ಗುರಿ ನಡುವೆ ಓಡಾಡುತ್ತದೆ. 1879ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಈ ರೈಲು ಮಾರ್ಗ, ಡಾರ್ಜಿಲಿಂಗ್ ಪ್ರವಾಸಿಗರ ಅತೀ ಮುಖ್ಯ ಆಕರ್ಷಣೆ. ಪರ್ವತ ಪಟ್ಟಣದ ನಡುವೆ ಹಾಯ್ದು ಹೋಗುವ ಈ ಪುಟಾಣಿ ಚುಕುಬುಕು ರೈಲಲ್ಲಿ ಕುಳಿತು ಸುಂದರ ಹಸಿರನ್ನು, ಈ ಭಾಗದ ಜನಜೀವನವನ್ನು ಕಣ್ತುಂಬಿಸಿಕೊಳ್ಳಬಹುದು.

ಡಾರ್ಜಿಲಿಂಗ್‌ನಲ್ಲಿ ಚಹಾ ಬಹಳ ಪ್ರಸಿದ್ಧಿ. 1841ರಲ್ಲಿ ಬ್ರಿಟಿಷರಿಂದ ಡಾರ್ಜಿಲಿಂಗ್‍ಗೆ ಕಾಲಿಟ್ಟ ಟೀ ಇಂದು ವಿಶ್ವವಿಖ್ಯಾತ. ಇಲ್ಲಿನ ಸುತ್ತಮುತ್ತ 70ಕ್ಕೂ ಹೆಚ್ಚು ಟೀ ಎಸ್ಟೇಟ್‍ಗಳನ್ನು ‘ಟೀ ಗಾರ್ಡನ್‍’ಗಳೆಂದೇ ಕರೆಯುತ್ತಾರೆ. ಇವುಗಳಲ್ಲಿ ಸುತ್ತಾಡಿ, ವಿಶಿಷ್ಟ ಪರಿಮಳದ ಚಹಾ ಹೀರಿ ಆನಂದಿಸುವುದು ಇಲ್ಲಿಗೆ ಬರುವ ಪ್ರವಾಸಿಗರ ನೆಚ್ಚಿನ ಕಾಯಕ.

ಹಲವು ಸಂಸ್ಕೃತಿಗಳ ಸಮ್ಮಿಲನದಂತಿರುವ ಈ ಪ್ರದೇಶದಲ್ಲಿ ಬೌದ್ಧಾಲಯ ಹಾಗೂ ಸ್ತೂಪಗಳು ಸಾಕಷ್ಟಿವೆ. ಅದರಲ್ಲಿ ಪ್ರಖ್ಯಾತವಾದುದು ಇಲ್ಲಿನ ಘೂಮ್ ಎಂಬಲ್ಲಿರುವ ಬೌದ್ಧ ದೇಗುಲ. ಇಲ್ಲಿ 15 ಅಡಿ ಎತ್ತರದ ಧ್ಯಾನಭಂಗಿಯ ‘ಮೈತ್ರೇಯ ಬುದ್ಧ’ನ ವಿಗ್ರಹ ಚಿತ್ತಾಕರ್ಷಕ. ಇಲ್ಲಿಗೆ ಸಮೀಪದಲ್ಲಿರುವ ಬಟಾಸಿಯಾ ವಾರ್ ಮೆಮೋರಿಯಲ್‍ನಲ್ಲಿ ಸುಂದರ ಪಾರ್ಕ್ ಹಾಗೂ 1995ರಲ್ಲಿ ನಿರ್ಮಿಸಲಾಗಿರುವ ಗೋರ್ಖಾ ಸೈನಿಕರ ಯುದ್ಧ ಸ್ಮಾರಕವಿದೆ. ಅಲ್ಲದೇ ಇಲ್ಲಿ ‘ಬಟಾಸಿಯಾ ಲೂಪ್’ ಎಂದೇ ಪ್ರಖ್ಯಾತವಾಗಿರುವ ಟಾಯ್ ಟ್ರೈನ್‍ನ ತಿರುವೂ ಇದೆ. ಇಲ್ಲಿಂದ ಕಾಂಚನಗಂಗಾ ಕಾಣುತ್ತದೆ. ನೀವಿಲ್ಲಿ ಬಾಡಿಗೆಗೆ ಸಿಗುವ ನೇಪಾಳಿ ದಿರಿಸು ಧರಿಸಿ ಪ್ರವಾಸದ ನೆನಪಿಗಾಗಿ ಫೋಟೊ ಕ್ಲಿಕ್ಕಿಸಿಕೊಳ್ಳಬಹುದು.

ಜೂವಾಲಜಿಕಲ್ ಪಾರ್ಕ್‌
ಪದ್ಮಜಾ ನಾಯ್ಡು ಹಿಮಾಲಯನ್ ಜುವಾಲಾಜಿಕಲ್ ಪಾರ್ಕ್ ಹಾಗೂ ಹಿಮಾಲಯನ್ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್–ಇವು ಭಾರತದ ಅತೀ ಎತ್ತರದ ಪ್ರದೇಶದಲ್ಲಿರುವ ಮೃಗಾಲಯಗಳು. ಸಮುದ್ರಮಟ್ಟದಿಂದ 7000 ಅಡಿಗಳಷ್ಟು ಎತ್ತರದಲ್ಲಿರುವ ಈ ಮೃಗಾಲಯದಲ್ಲಿ ವಿಶಿಷ್ಟ ರೀತಿಯ ಪ್ರಾಣಿ ಪಕ್ಷಿಗಳು ನೋಡಲು ಲಭ್ಯ. ಸೈಬೀರಿಯನ್ ಹುಲಿ, ಹಿಮ ಚಿರತೆ, ಹಿಮಾಲಯದ ತೋಳ, ಕೆಂಪು ಪಾಂಡಾ ಮುಂತಾದ ಪ್ರಾಣಿಗಳನ್ನು ಮಾತ್ರ ಇಲ್ಲಿ ನೋಡಬಹುದು. ಇದಕ್ಕೆ ಸಮೀಪದಲ್ಲೇ ಇರುವ ‘ಹಿಮಾಲಯನ್ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್‘ ನಲ್ಲಿ ಮೌಂಟ್ ಎವರೆಸ್ಟ್‍ ಅನ್ನು ಏರಿದ ಮೊದಲಿಗ ತೇನ್‍ಸಿಂಗ್ ಬಳಸಿದ ಪರ್ವತಾರೋಹಣದ ಸಾಮಗ್ರಿಗಳನ್ನು ಸಂಗ್ರಹಿಸಿ ಇಡಲಾಗಿದೆ.

ಪರ್ವತ ಪಟ್ಟಣ – ಗ್ಯಾಂಗ್‍ಟಾಕ್
ಸ್ಥಳೀಯ ಭೂತಿಯಾ ಭಾಷೆಯಲ್ಲಿ ಟಾಕ್ ಎಂದರೆ ಬೆಟ್ಟ ಎಂದರ್ಥ. ಗ್ಯಾಂಗ್‍ಟಾಕ್ ಎಂದರೆ ಪರ್ವತ ಪಟ್ಟಣ. ಇಲ್ಲಿನ ಗಾಂಧಿ ಮಾರ್ಗ ಶಾಪಿಂಗ್ ಪ್ರಿಯರ ಸ್ವರ್ಗ. ರಾತ್ರಿಯಲ್ಲಿ ವಿಶೇಷ ದೀಪಗಳಿಂದ ವರ್ಣಮಯವಾಗಿ ಹೊಳೆವ ಈ ರಸ್ತೆಯ ಮಗ್ಗುಲಲ್ಲೇ ಇರುವ ಲಾಲ್ ಮಾರ್ಕೆಟ್‍ನಲ್ಲಿ ಕಡಿಮೆದರದ ಗುಣಮಟ್ಟದ ಚಾದರ ಮತ್ತು ಬೆಚ್ಚನೆಯ ಉಡುಪುಗಳು ಲಭ್ಯ. ಗ್ಯಾಂಗ್‍ಟಾಕ್‍ನ ಪ್ರಮುಖ ಆಕರ್ಷಣೆ ಎಂದರೆ, ನಗರವನ್ನು ಆಗಸದಿಂದ ವೀಕ್ಷಿಸಬಹುದಾದ ರೋಪ್‍ವೇ. ಹಾಗೆಯೇ ಗ್ಯಾಂಗ್‍ಟಾಕ್ ನಗರದ ಫ್ಲವರ್‌ ಶೋ ಕಾಂಪ್ಲೆಕ್ಸ್ ಹಾಗೂ ರಿಡ್ಜ್ ಪಾರ್ಕ್‍ಗಳಲ್ಲಿ ಬಣ್ಣ ಬಣ್ಣದ ಹೂವುಗಳನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು.

ಶಾಂಗೂ ಸರೋವರ
ಶಾಂಗೂ ಅಥವಾ ಸೋಮ್‍ಗೋ ಸರೋವರ ವೀಕ್ಷಿಸದೇ ಗ್ಯಾಂಗ್‌ಟಾಕ್‌ ಪ್ರವಾಸ ಪೂರ್ಣಗೊಳ್ಳದು. ಗ್ಯಾಂಗ್‍ಟಾಕ್‍ನಿಂದ 35 ಕಿ.ಮೀ ದೂರದಲ್ಲಿರುವ ಈ ಸರೋವರ ತಲುಪಲು ಬಹಳ ಕಡಿದಾದ ಹಾದಿಯಲ್ಲಿ ಪಯಣಿಸಬೇಕು.

ಚೀನಾ ಗಡಿಯ ಸಮೀಪದ ಈ ಜಾಗದಲ್ಲಿ ಭೂ ಕುಸಿತಗಳಾಗಿ, ರಸ್ತೆ ತಡೆ ಸಾಮಾನ್ಯ. ಇದು ದೇಶದ ರಕ್ಷಣಾ ವ್ಯವಸ್ಥೆಯ ಆಯಕಟ್ಟಿನ ಜಾಗ. ಹೀಗಾಗಿ ಹಲವು ಸೇನಾ ತುಕಡಿಗಳು ಕಾವಲಿರುತ್ತದೆ. ಇಲ್ಲಿ ಸರೋವರದ ಸುತ್ತ-ಮುತ್ತ ಓಡಾಡಲು ಚಮರೀಮೃಗಗಳನ್ನೇರಬೇಕು.

ಹೋಗುವುದು ಹೇಗೆ?
ವಿಮಾನ ಯಾನದ ಮೂಲಕ ಡಾರ್ಜಿಲಿಂಗ್ – ಗ್ಯಾಂಗ್‍ಟಾಕ್‍ ತಲುಪಬೇಕೆಂದರೆ, ಬಾಗ್‌ಡೋಗ್ರ ವಿಮಾನ ನಿಲ್ದಾಣದಲ್ಲಿಳಿದು ಅಲ್ಲಿಂದ ರಸ್ತೆ ಮಾರ್ಗವನ್ನು ಹಿಡಿಯಬೇಕು. ದೇಶದ ಎಲ್ಲೆಡೆಯಿಂದ ಇಲ್ಲಿಗೆ ರೈಲು ಸಂಪರ್ಕವಿದೆ. ರೈಲಿನಲ್ಲಿ ಹೋಗುವವರು ಜಲ್‍ಪಾಯ್‍ಗುರಿಯಲ್ಲಿ ಇಳಿಯಬೇಕು. ಅಲ್ಲಿಂದ ಬಸ್ಸು ಅಥವಾ ಟ್ಯಾಕ್ಸಿ ಹಿಡಿದು ಗ್ಯಾಂಗ್‌ಟಾಕ್‌ ತಲುಪಬಹುದು.
ಇನ್ನೇನು ನೋಡಬಹುದು

ಗ್ಯಾಂಗ್‍ಟಾಕ್‍ನಿಂದ 24 ಕಿ.ಮೀ. ದೂರದಲ್ಲಿರುವ ರೂಮ್‍ಟೆಕ್ ಬೌದ್ಧಾಲಯ, ಟಿಬೇಟಿಯನ್ ಬೌದ್ಧರ ಧರ್ಮಗುರುಗಳಾದ ಕರ್ಮಪಾಗಳ ತಪೋಭೂಮಿ. ಹಾಗೆಂದ ಮಾತ್ರಕ್ಕೆ ಇದು ಕೇವಲ ಬೌದ್ಧಾಲಯಗಳ ಬೀಡಲ್ಲ. ಇಲ್ಲಿನ ಹನುಮಾನ್ ಟಾಕ್‍ನಲ್ಲಿ ರಾಮ, ಸೀತೆ, ಹನುಮಾನರ ಸುಂದರ ದೇವಾಲಯಗಳಿವೆ. ಹಾಗೆಯೇ ಗಣೇಶ್ ಟಾಕ್ ಎಂಬಲ್ಲಿ ಗಣಪತಿಯ ಗುಡಿಯೂ ಇದೆ. ಇಲ್ಲಿಂದ 15 ಕಿ.ಮೀ ಕ್ರಮಿಸಿದರೆ ಐತಿಹಾಸಿಕ ಟಿಬೇಟಿಯನ್ ರಾಜಮಾರ್ಗ ’ನಾಥು ಲಾ ಪಾಸ್’ ಸಿಗುತ್ತದೆ. 14,000 ಅಡಿ ಎತ್ತರದಲ್ಲಿರುವ ಈ ಚೀನಾ ಗಡಿಗೆ ಭೇಟಿ ನೀಡಲು ವಿಶೇಷ ಅನುಮತಿ ಅವಶ್ಯಕ. ಹೀಗಾಗಿ ಈ ಭಾಗಕ್ಕೆ ಭೇಟಿ ನೀಡುವಾಗ ನಿಮ್ಮ ಗುರುತಿನಚೀಟಿ ಒಯ್ಯುವುದು ಕಡ್ಡಾಯ.

ಚಿತ್ರಗಳು: ಲೇಖಕರವು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು