ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಹೊಸ ಎತ್ತರದತ್ತ ಅಮೆಜಾನ್; 11 ಬೋಯಿಂಗ್ ವಿಮಾನಗಳ ಖರೀದಿ

Last Updated 11 ಜನವರಿ 2021, 14:56 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ ಸೋಂಕು ಜಾಗತಿಕವಾಗಿ ಆರ್ಥಿಕತೆಗೆ ಪೆಟ್ಟು ಕೊಟ್ಟಿದ್ದರೂ ಇ–ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ಕಡೆಗೆ ಗ್ರಾಹಕರ ಒಲವು ಹೆಚ್ಚಿದೆ. ಕೊಡುಗೆಗಳು ಹಾಗೂ ರಿಯಾಯಿತಿ ಮಾರಾಟದಿಂದ ಜನರ ಗಮನ ಸೆಳೆದಿರುವ 'ಅಮೆಜಾನ್‌' ಇತ್ತೀಚೆಗಷ್ಟೇ 11 ಬೋಯಿಂಗ್‌ ವಿಮಾನಗಳನ್ನು ಖರೀದಿಸಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವ ಸವಾಲು ಸ್ವೀಕರಿಸಿರುವ ಸಂಸ್ಥೆ, ತನ್ನದೇ ಸರಕು ಸಾಗಣೆ (ಕಾರ್ಗೊ) ವಿಮಾನಗಳ ಸಂಪರ್ಕ ಜಾಲ ವಿಸ್ತರಿಸಿಕೊಳ್ಳಲು ಮುಂದಾಗಿದೆ. ವಿಮಾನ ಸಂಚಾರ ಸೇವೆ ನೀಡುವ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದರೆ, ಅಮೆಜಾನ್‌ ಲಾಭ ಹೆಚ್ಚಿಸಿಕೊಳ್ಳಲು ವಿಮಾನಗಳ ಖರೀದಿಯಲ್ಲಿ ತೊಡಗಿದೆ!

ವಿಮಾನಗಳನ್ನು ಗುತ್ತಿಗೆ ಪಡೆದು ಅಮೆಜಾನ್‌ 'ಪ್ರೈಮ್‌ ಏರ್‌' ಹೆಸರಿನಲ್ಲಿ (ಈಗ 'ಅಮೆಜಾನ್‌ ಏರ್‌') ಕಾರ್ಗೊ ಸೇವೆ ಪಡೆದುಕೊಳ್ಳುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಸ್ವತಃ ವಿಮಾನ ಖರೀದಿಸುವ ಮೂಲಕ ದಿಟ್ಟ ಹೆಜ್ಜೆಯೊಂದನ್ನು ಮುಂದಿರಿಸಿದೆ. ಅಮೆರಿಕ ಮೂಲದ 'ಡೆಲ್ಟಾ ಏರ್‌ಲೈನ್ಸ್‌' ಸಂಸ್ಥೆಯಿಂದ ಏಳು ವಿಮಾನಗಳು ಹಾಗೂ ಕೆನಡಾ ಮೂಲದ 'ವೆಸ್ಟ್‌ಜೆಟ್‌' ಏರ್‌ಲೈನ್ಸ್‌ ಲಿಮಿಟೆಡ್‌ನಿಂದ ನಾಲ್ಕು ಬೋಯಿಂಗ್‌ 767–300 ಜೆಟ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಖರೀದಿಸಿದೆ. ಈ ಎಲ್ಲ ವಿಮಾನಗಳು ನಾಗರಿಕ ಸಂಚಾರ ವಿಮಾನಗಳಾಗಿ ಬಳಕೆಯಲ್ಲಿದ್ದವು. ಕೋವಿಡ್‌–19ನಿಂದ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳಿಗೆ ನಿರ್ಬಂಧ ಎದುರಾಗಿ ಹಲವು ವಿಮಾನಯಾನ ಸಂಸ್ಥೆಗಳು ನಷ್ಟಕ್ಕೆ ಒಳಗಾಗಿದ್ದು, ವಿಮಾನಗಳ ಮಾರಾಟ ಸಹ ನಡೆಸಿವೆ.

ಕನ್ನಡಿಗ ಕ್ಯಾಪ್ಟನ್‌ ಜಿ.ಆರ್‌.ಗೋಪಿನಾಥ್‌ ಅವರ ಯಶೋಗಾಥೆ ಕುರಿತ 'ಸೂರರೈ ಪೊಟ್ರು' ಸಿನಿಮಾದಲ್ಲಿ ತೋರಿಸಿರುವಂತೆ– ವಿಮಾನಯಾನ ಸಂಸ್ಥೆ ಕಟ್ಟುವ ಆರಂಭಿಕ ಹಂತದಲ್ಲಿ ಕಾರ್ಗೊ ವಿಮಾನಗಳನ್ನು ಗುತ್ತಿಗೆ ಪಡೆದು ನಾಗರಿಕ ಸಂಚಾರ ವಿಮಾನಗಳಾಗಿ ಮಾರ್ಪಡಿಸಿ ಹಾರಾಟ ನಡೆಸುವ ಪ್ರಯತ್ನವನ್ನು ನಾಯಕ ಮಾಡುತ್ತಾನೆ. ಬಂಡವಾಳ ಕಡಿಮೆ ಮಾಡಿಕೊಳ್ಳುವ ಹಾಗೂ ಇಂಧನದ ಖರ್ಚು ಉಳಿಸುವ ನಿಟ್ಟಿನಲ್ಲಿ ನಾಯಕ ಕೈಗೊಳ್ಳುವ ಮಹತ್ವದ ನಿರ್ಧಾರ ಅದಾಗಿರುತ್ತದೆ. ಈಗ ಅಮೆಜಾನ್‌, ಕೆಲವು ತಿಂಗಳಿನಿಂದ ಹಾರಾಟ ಕಾಣದೆ ನಿಂತಿದ್ದ ನಾಗರಿಕ ವಿಮಾನಗಳನ್ನು ಕಾರ್ಗೊ ವಿಮಾನಗಳಾಗಿ ಬಳಸಿಕೊಳ್ಳುತ್ತಿದೆ.

2016ರಲ್ಲೇ ಪ್ರೈಮ್‌ ಏರ್‌ ಮೂಲಕ ಕಾರ್ಗೊ ಸೇವೆ ಆರಂಭಿಸಿದ ಸಂಸ್ಥೆಯು ಇತ್ತೀಚಿನ ವರೆಗೂ ಎಲ್ಲ ವಿಮಾನಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಕಾರ್ಯಾಚರಿಸುತ್ತಿತ್ತು. 'ಅಟ್ಲಾಸ್‌ ಏರ್‌' ಮತ್ತು 'ಎಟಿಎಸ್‌ಜಿ' ಸಂಸ್ಥೆಗಳು ಅಮೆಜಾನ್‌ಗಾಗಿ ವಿಮಾನಗಳು, ಸಿಬ್ಬಂದಿ ಹಾಗೂ ವಿಮೆ ಪೂರೈಸುವ ಜೊತೆಗೆ ನಿರ್ವಹಣೆಯನ್ನೂ ಮಾಡುತ್ತಿವೆ. ಪ್ರಸ್ತುತ ವೆಸ್ಟ್‌ಜೆಟ್‌ನ ನಾಗರಿಕ ವಿಮಾನಗಳನ್ನು ಕಾರ್ಗೊ ಸೇವೆಗಳ ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡಲಾಗಿದ್ದು, ಇದೇ ವರ್ಷ ಅಮೆಜಾನ್‌ ಸರಕು ಸಾಗಣೆಗೆ ಆ ವಿಮಾನಗಳನ್ನು ಬಳಸಿಕೊಳ್ಳಲಿದೆ. ಇನ್ನೂ ಡೆಲ್ಟಾದಿಂದ ಖರೀದಿಸಲಾಗಿರುವ ವಿಮಾನಗಳು 2022ಕ್ಕೆ ಸಂಚಾರ ನಡೆಸಲಿವೆ. 'ಮುಂದಿನ ವರ್ಷ ಅಂತ್ಯದೊಳಗೆ 85ಕ್ಕೂ ಹೆಚ್ಚು ವಿಮಾನಗಳ ಸೇವೆ ಪಡೆಯುವ ವಿಶ್ವಾಸವನ್ನು ಅಮೆಜಾನ್‌ ವ್ಯಕ್ತಪಡಿಸಿದೆ' ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ವಿಮಾನ ಕಾರ್ಯಾಚರಣೆಗೆ ಇಲ್ಲ ಪರವಾನಗಿ

ಅಮೆಜಾನ್‌ ಮಾರುಕಟ್ಟೆ ಮೌಲ್ಯ 1 ಟ್ರಿಲಿಯನ್‌ ಡಾಲರ್‌ಗೂ (ಅಂದಾಜು ₹73.41 ಲಕ್ಷ ಕೋಟಿ) ಅಧಿಕ. ಪ್ರೈಮ್‌ ಏರ್‌ ಮೂಲಕ ಕಾರ್ಗೊ ವೆಚ್ಚ ಕಡಿಮೆ ಮಾಡಿಕೊಳ್ಳುವ ಯೋಜನೆಯಲ್ಲಿರುವ ಅಮೆಜಾನ್‌, ನೇರವಾಗಿ ವಿಮಾನಗಳ ಕಾರ್ಯಾಚರಣೆ ನಡೆಸಲು ಪರವಾನಗಿ ಹೊಂದಿಲ್ಲ. ಸದ್ಯಕ್ಕೆ ಅಟ್ಲಾಸ್‌, ಎಟಿಎಸ್‌ಜಿ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ.

ಈಗಾಗಲೇ ಸರಕು ಸಾಗಣೆಗೆ ಸ್ವಂತ ವ್ಯಾನ್‌ಗಳನ್ನು ಬಳಸುತ್ತಿರುವ ಅಮೆಜಾನ್‌, ಅಮೆರಿಕ ಸೇರಿದಂತೆ ಜಾಗತಿಕವಾಗಿ ಕೆಲವೇ ವರ್ಷಗಳಲ್ಲಿ ಫೆಡ್‌ಎಕ್ಸ್‌ ಅಥವಾ ಯುಪಿಎಸ್‌ (ಯುನೈಟೆಡ್‌ ಪಾಸರ್ಲ್‌ ಸರ್ವೀಸ್‌) ಸಂಪರ್ಕ ಜಾಲಗಳನ್ನು ಮೀರಿಸಿ ಸ್ವತಂತ್ರ ಕಾರ್ಗೊ ಸಂಸ್ಥೆಯಾಗಿ ಬೆಳೆಯುವ ಸಾಧ್ಯತೆ ಇರುವುದಾಗಿ ವಿಶ್ಲೇಷಿಸಲಾಗಿದೆ. 2028ರ ವೇಳೆಗೆ ಅಮೆಜಾನ್‌ ಒಟ್ಟು 200 ವಿಮಾನಗಳ ಮೂಲಕ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇರುವುದಾಗಿ ಚಿಕಾಗೊದ ಡಿಪಾಲ್‌ ಯೂನಿವರ್ಸಿ ಕಳೆದ ವರ್ಷ ವರದಿ ಪ್ರಕಟಿಸಿತ್ತು.

2019ರಲ್ಲಿ ಅಮೆಜಾನ್‌ ಉತ್ತರ ಅಮೆರಿಕದಲ್ಲಿ ಅಂದಾಜು 230 ಕೋಟಿ ಪ್ಯಾಕೇಜ್‌ಗಳನ್ನು ತಲುಪಿಸುವ ಕಾರ್ಯಚಾರಣೆ ನಡೆಸಿದ್ದರೆ, ಫೆಡ್‌ಎಕ್ಸ್‌ 310 ಕೋಟಿ ಹಾಗೂ ಯುಪಿಎಸ್‌ 470 ಕೋಟಿ ಪ್ಯಾಕೇಜ್‌ಗಳ ಡೆಲಿವರಿ ನಡೆಸಿವೆ. ಆದರೆ, ಅಮೆಜಾನ್‌ ಈವರೆಗೂ ತನ್ನ ಇ–ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಬುಕ್‌ ಮಾಡಲಾದ ವಸ್ತುಗಳನ್ನು ಮಾತ್ರವೇ ತಲುಪಿಸುವ ಕಾರ್ಯಾಚರಣೆ ನಡೆಸುತ್ತಿದೆ.
ಪ್ರಮುಖ ಕಾರ್ಗೊ ಸಂಸ್ಥೆಗಳು ಜೆಫ್‌ ಬೆಜೋಸ್ ನೇತೃತ್ವದ ಅಮೆಜಾನ್‌ನಿಂದ ಪೈಪೋಟಿ ಎದುರಿಸಬಹುದಾದ ಆತಂಕ ವ್ಯಕ್ತಪಡಿಸಿವೆ. ಅಮೆರಿಕದಲ್ಲಿ ವಿಮಾನದ ಮೂಲಕ ಅಮೆಜಾನ್‌ ಪ್ಯಾಕೇಜ್‌ಗಳನ್ನು ಸಾಗಿಸುವ ಒಪ್ಪಂದವನ್ನು ಫೆಡ್‌ಎಕ್ಸ್‌ ಮುಂದುವರಿಸದಿರಲು 2019ರಲ್ಲೇ ಘೋಷಿಸಿದೆ.

'ಗುತ್ತಿಗೆ ಪಡೆದಿರುವ ಹಾಗೂ ಖರೀದಿಸಲಾಗಿರುವ ಎಲ್ಲ ವಿಮಾನಗಳ ಕಾರ್ಯಾಚರಣೆಯಿಂದಾಗಿ ಗ್ರಾಹಕರಿಗೆ ಭರವಸೆ ನೀಡಿದ ದಿನದಂದೇ ವಸ್ತುಗಳನ್ನು ತಲುಪಿಸುವುದು ಸಾಧ್ಯವಾಗಲಿದೆ. ಕಾರ್ಯಾಚರಣೆಗಳ ನಿರ್ವಹಣೆ ಮತ್ತಷ್ಟು ಉತ್ತಮಗೊಳ್ಳಲಿದೆ' ಎಂದು ಅಮೆಜಾನ್‌ ಗ್ಲೋಬಲ್‌ ಏರ್‌ನ ಉಪಾಧ್ಯಕ್ಷೆ ಸಾರಾ ರೋಡ್ಸ್‌ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT