ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಖುಲ್ಲಂ ಖುಲ್ಲಾ ಓಲೈಕೆ; ರಾಜಕೀಯಕ್ಕೆ ಹೊಸ ಆಯಾಮ

Last Updated 25 ನವೆಂಬರ್ 2020, 21:10 IST
ಅಕ್ಷರ ಗಾತ್ರ
ADVERTISEMENT
""

ತರಾತುರಿಯಲ್ಲಿ ನಾಲ್ಕು ಜಾತಿಗಳಿಗೆ ಪ್ರತ್ಯೇಕವಾಗಿ ಅಭಿವೃದ್ಧಿ ನಿಗಮಗಳನ್ನು ರಚಿಸಿದ ಕರ್ನಾಟಕ ಸರ್ಕಾರದ ನಿರ್ಣಯಗಳು ಅನೇಕ ಆಯಾಮಗಳನ್ನು ಹೊಂದಿ ತೀವ್ರ ಚರ್ಚಗೆ ಗ್ರಾಸವಾಗಿವೆ.

ವೈಶ್ಯ ಅಭಿವೃದ್ಧಿ ನಿಗಮದ ರಚನೆಯ ಬೇಡಿಕೆ ಎಲ್ಲಿಂದ, ಯಾವಾಗ ಬಂದಿತು ಎನ್ನುವುದೇ ತಿಳಿದಿಲ್ಲ. ಆದರೆ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿರುವ ವೈಶ್ಯರ ಗಣನೀಯ ಸಂಖ್ಯೆಯ ಮತಗಳ ಲೆಕ್ಕಾಚಾರದಿಂದ ಅದು ಆ ಕ್ಷೇತ್ರದ ಉಪಚುನಾವಣೆಯೊಂದಿಗೆ ತಳಕು ಹಾಕಿಕೊಂಡಿದೆ ಎಂಬುದು ಒಂದು ವಿಚಾರ. ಗೊಲ್ಲರು ಅತಿಹಿಂದುಳಿದ ಸಮುದಾಯವೆಂಬುದು ಸತ್ಯ. ಆದರೆ, ಆ ಜಾತಿಯ ಜನರು ಹೆಚ್ಚು ಸಂಖ್ಯೆಯಲ್ಲಿರುವ ಶಿರಾ ಕ್ಷೇತ್ರದ ಉಪಚುಣಾವಣೆಯ ಸಂದರ್ಭದಲ್ಲಿ ಗೊಲ್ಲರ ಅಭಿವೃದ್ಧಿ ನಿಗಮದ ರಚನೆ ಆದದ್ದು ಟೀಕೆಗೆ ಗುರಿಯಾಗಿದೆ. ಅದೇ ರೀತಿ, ಮರಾಠಾ ಅಭಿವೃದ್ಧಿ ನಿಗಮ ಮತ್ತು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ರಚನೆಯು ಬಸವ ಕಲ್ಯಾಣದ ಉಪಚುನಾವಣೆಯೊಂದಿಗೆ ಸಮೀಕರಣಗೊಂಡಿದೆ ಎಂಬುದನ್ನು ಅಲ್ಲಗಳೆಯಲಾಗದು. ಅವೆರಡೂ ಸಮುದಾಯಗಳು ಸೇರಿದರೆ ಸುಮಾರು ಒಂದು ಲಕ್ಷ ಮತಗಳು ಆ ಕ್ಷೇತ್ರದಲ್ಲಿವೆ. ಮರಾಠಾ ಅಭಿವೃದ್ಧಿ ನಿಗಮದ ರಚನೆಯು ಜಾತಿಯೊಂದಿಗೆ, ಭಾಷೆ ಮತ್ತು ಗಡಿ ಸಮಸ್ಯೆಗಳನ್ನೂ ಉಲ್ಭಣಗೊಳಿಸಬಹುದೆಂಬ ಅಂದಾಜು ಸರ್ಕಾರಕ್ಕೆ ಇರಲಿಲ್ಲ.

ಜಾತಿಗಳ ಓಲೈಕೆಯ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯುವ ತಂತ್ರ ಬಿ.ಎಸ್‌. ಯಡಿಯೂರಪ್ಪನವರಿಗಷ್ಟೇ ಸೀಮಿತವಾಗಿಲ್ಲ. ಆದರೆ, ಇಷ್ಟೊಂದು ಖುಲ್ಲಂ ಖುಲ್ಲಾ ಜಾತಿ ಓಲೈಕೆಯ ಕ್ರಮವನ್ನು ಅವರು ಅನುಸರಿಸುತ್ತಿರುವುದು ರಾಜಕೀಯಕ್ಕೆ ಮತ್ತೊಂದು ಹೊಸ ಆಯಾಮವನ್ನೇ ನೀಡಿದೆಯೆಂದರೆ ಅತಿಶಯವಲ್ಲ. ಯಾರಿಂದಲೂ ಏನೂ ಮಾಡಲಿಕ್ಕೆ ಸಾಧ್ಯವಿಲ್ಲ ಎನ್ನುವ ಭಂಡ ಧೈರ್ಯ ಅದರ ಹಿಂದಿದೆ ಎಂಬುದು ಸ್ಪಷ್ಟ. ಎಲ್ಲ ರಾಜಕಾರಣಿಗಳೂ ಇದೇ ರೀತಿಯ ಒಂದಿಲ್ಲೊಂದು ಮಾರ್ಗಗಳನ್ನು ಬಳಸಿದವರೇ ಆಗಿರುವುದರಿಂದ ಇಂತಹ ಕ್ರಮಗಳನ್ನು ಪ್ರಶ್ನಿಸುವ ನೈತಿಕ ಹಕ್ಕು ಅವರಿಗಿಲ್ಲ. ಇನ್ನು ನ್ಯಾಯಾಲಯಗಳ ಮೂಲಕ ಇಂತಹ ಅಕ್ರಮಗಳನ್ನು ನಿಲ್ಲಿಸಬಹುದು ಎಂದು ಇತ್ತೀಚಿನವರೆಗೆ ಇದ್ದ ನಂಬಿಕೆಯೂ ಈಗ ಹೊರಟು ಹೋಗಿದೆ. ಹಾಗಿದ್ದರೆ ಮುಂದೇನು? ಇದು ಪ್ರಜಾರಾಜ್ಯವನ್ನು ನಡೆಸುವ ರೀತಿಯೇ?

ಒಕ್ಕಲಿಗ ನಾಯಕರಾಗಿರುವ ಉಪಮುಖ್ಯಮಂತ್ರಿ ಶ್ರೀ ಅಶ್ವತ್ಥನಾರಾಯಣರವರು, ವೀರಶೈವ-ಲಿಂಗಾಯತ ನಿಗಮದ ರಚನೆಯಾಗುತ್ತಲೇ, ಒಕ್ಕಲಿಗರ ಅಭಿವೃದ್ಧಿ ನಿಗಮವನ್ನು ರಚಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಹಾಗೆಯೇ, ಕುರುಬರ ನಾಯಕರು ಸಭೆ ನಡೆಸಿ ತಮ್ಮ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಲು ನಿರ್ಣಯಿಸಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಪ್ರತಿಯೊಂದು ಜಾತಿಯ ಜನರು ತಮ್ಮ ತಮ್ಮ ಜಾತಿಗೆ ಪ್ರತ್ಯೇಕ ನಿಗಮಗಳನ್ನು ರಚಿಸಬೇಕೆಂದು ಕೇಳಲು ಪ್ರಾರಂಭಿಸುವುದು ಸಹಜ; ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಜಾತಿಗಳಿವೆ. 2002ನೇ ಇಸವಿಯಲ್ಲಿ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, 207 ಜಾತಿಗಳನ್ನು ‘ಹಿಂದುಳಿದ ಜಾತಿಗಳು’ ಎಂದು ಘೋಷಿಸಲಾಗಿದೆ. ಕರ್ನಾಟಕ ಸರ್ಕಾರವು ಜಾತಿಗೆ ಒಂದರಂತೆ 207 ಜಾತಿ ನಿಗಮಗಳನ್ನು ರಚಿಸಬಹುದೇ?

ಭಾರತವು ಜಾತ್ಯತೀತ ದೇಶವೆಂದು ನಮ್ಮ ಸಂವಿಧಾನ ಹೇಳುತ್ತಿದೆ. ಆದರೆ, ಆ ಪದವನ್ನು ಸಂವಿಧಾನವು ಎಲ್ಲಿಯೂ ವ್ಯಾಖ್ಯಾನಿಸಿಲ್ಲ. ಸಾಮಾನ್ಯವಾಗಿ, ಜಾತ್ಯತೀತತೆಯನ್ನು ಮೂರು ಬಗೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಧರ್ಮ ಮತ್ತು ಜಾತಿಗಳನ್ನು ನಾಶಮಾಡುವುದೇ ಜಾತ್ಯತೀತತೆ ಎನ್ನುವ ರಷ್ಯಾದ ವ್ಯಾಖ್ಯಾನವನ್ನು ನಮ್ಮ ಸಂವಿಧಾನ ಒಪ್ಪಿಲ್ಲ.

ಎರಡನೆಯದಾಗಿ, ರಾಜಕೀಯ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಧರ್ಮ ಮತ್ತು ಜಾತಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂಬರ್ಥದಲ್ಲಿ ಯುರೋಪಿಯನ್ನರು ಜಾತ್ಯತೀತ ಪದವನ್ನು ಬಳಸುತ್ತಾರೆ. ಅದು ಕೂಡ ನಮ್ಮಿಂದ ಸಾಧ್ಯವಿಲ್ಲ! ಆದರೆ, ಭಾರತದಲ್ಲಿ ಎಲ್ಲ ಧರ್ಮಗಳನ್ನು ಮತ್ತು ಜಾತಿಗಳನ್ನು ಸಮಾನವಾಗಿ ಕಾಣುವುದು ಮತ್ತು ಎಲ್ಲ ಧರ್ಮಗಳಿಂದ-ಜಾತಿಗಳಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವುದು ಎನ್ನುವುದು ಜಾತ್ಯತೀತತೆಯ ಅರ್ಥವಾಗಿದೆ. ಈ ಮೂರೂ ಅರ್ಥಗಳ ದೃಷ್ಟಿಯಿಂದ ಈಗ ಕರ್ನಾಟಕ ಸರ್ಕಾರವು ತೆಗೆದುಕೊಂಡ ಜಾತಿ ಆಧಾರಿತ ನಿರ್ಧಾರಗಳು ಭಾರತದ ಜಾತ್ಯತೀತ ತತ್ವಕ್ಕೆ ವಿರುದ್ಧವಾದವು ಎನ್ನುವುದು ಸ್ಪಷ್ಟ. ಹಾಗಿದ್ದರೆ, ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಕಾನೂನು ಇಲಾಖೆಯ ಅಭಿಪ್ರಾಯ ಪಡೆದಿರಲಿಲ್ಲವೇ?

‘ಈ ವಿಷಯಗಳು ವಿಧಾನಮಂಡಲದಲ್ಲಿ ಚರ್ಚೆ ಆಗಬೇಕು’ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೇಳಿರುವುದು ಸರಿಯಾಗಿಯೇ ಇದೆ. ಪ್ರಜಾಸತ್ತೆಯಲ್ಲಿ ಸಮಸ್ಯಾತ್ಮಕ ವಿಷಯಗಳು ವಿಧಾನಮಂಡಲದಲ್ಲಿ ಚರ್ಚೆಯಾಗಬೇಕಾದದ್ದು ಅಗತ್ಯ. ಆದರೆ ರಾಜಕೀಯ ಮುಂದಾಳುಗಳಲ್ಲಿ ಹೆಚ್ಚಿನವರು ಇಂತಹ ವಿಷಯಗಳ ಚರ್ಚೆಯಲ್ಲಿ ಭಾಗವಹಿಸುವುದು ಮತ್ತು ವಿರೋಧಿಸುವುದು ವಿರಳ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಭಯಮುಕ್ತವಾಗಿಲ್ಲ. ಏಕೆಂದರೆ, ತಾವು ವಿರೋಧಿಸಿದ ಜಾತಿ ಸಮುದಾಯಗಳ ಮತಗಳನ್ನುಮುಂದಿನ ಚುನಾವಣೆಯಲ್ಲಿ ಕಳೆದುಕೊಳ್ಳುವ ಭಯ ಅವರನ್ನು ಕಾಡುತ್ತದೆ. ಆದ್ದರಿಂದಲೇ ಇಂತಹ ವಿಷಯಗಳು ಚರ್ಚೆಯಿಲ್ಲದೆ ಒಪ್ಪಿಗೆಯಾದ ಅನೇಕ ಉದಾಹರಣೆಗಳಿವೆ. ಅದು ನಮ್ಮ ಪ್ರಜಾಸತ್ತೆಯ ವಿಶೇಷ ಲಕ್ಷಣವಾಗಿದೆ!

ಈ ನಿಗಮಗಳ ರಚನೆಗೆ ಸರ್ಕಾರವು ತತ್ಸಂಬಂಧಿತ ಸಮುದಾಯಗಳು ‘ಹಿಂದುಳಿದಿವೆ’ ಮತ್ತು ಅವುಗಳನ್ನು ‘ಅಭಿವೃದ್ಧಿಗೊಳಿಸುವ ಅಗತ್ಯ’ ಇದೆ ಎಂಬ ಸಬೂಬು ನೀಡಿದೆ. ಹಾಗಾದರೆ, 1ನೆಯ ಪ್ರವರ್ಗದಲ್ಲಿನ 95 ಜಾತಿಗಳು, ಉಳಿದೆಲ್ಲ ಜಾತಿಗಳಿಗಿಂತ ಅತ್ಯಂತ ಹಿಂದುಳಿದಿವೆ. ಅವರಿಗಾಗಿ ಮೊದಲು 95 ಅಭಿವೃದ್ಧಿ ನಿಗಮಗಳನ್ನು ಮಾಡುವುದು ನ್ಯಾಯಯುತವಲ್ಲವೆ? ಎರಡನೆಯ ಪ್ರವರ್ಗದಲ್ಲಿನ 102 ಜಾತಿಗಳು 3ನೆಯ ಪ್ರವರ್ಗದಲ್ಲಿನ ಜಾತಿಗಳಿಗಿಂತ ಹೆಚ್ಚು ಹಿಂದುಳಿದಿವೆ. ಆದ್ದರಿಂದ 102 ಜಾತಿಗಳಿಗೂ ಒಂದೊಂದು ಅಭಿವೃದ್ಧಿ ನಿಗಮ ಅಗತ್ಯವಲ್ಲವೆ? ಆದ್ದರಿಂದ ಹೆಚ್ಚು ಹಿಂದುಳಿದ197 ಜಾತಿಗಳಿಗೆ 197 ಅಭಿವೃದ್ಧಿ ನಿಗಮಗಳನ್ನು ಮಾಡದೆ ಇವುಗಳಿಗಿಂತ ಕಡಿಮೆ ಹಿಂದುಳಿದ ವೀರಶೈವ ಲಿಂಗಾಯತ ಹಾಗೂ ಮರಾಠಾ ಜಾತಿಗಳಿಗೆ ಮೊದಲು ನಿಗಮಗಳನ್ನು ಮಾಡಿದ್ದು ಎಷ್ಟು ಸರಿ?

ಡಾ. ಎಸ್.ಎಂ.ಜಾಮದಾರ

ಇಲ್ಲಿ ಅತಿಮುಖ್ಯ ಅಂಶವೆಂದರೆ ‘ಹಿಂದುಳಿದಿರುವಿಕೆ’ಯ ವ್ಯಾಖ್ಯಾನ. ನಮ್ಮ ಗೌರವಾನ್ವಿತ ಸುಪ್ರೀಂ ಕೋರ್ಟ್‌ ಮೂರು ನಾಲ್ಕು ಪ್ರಕರಣಗಳಲ್ಲಿ ನೀಡಿರುವ ತೀರ್ಪಿನಲ್ಲಿ ‘ಜಾತಿಯೊಂದೇ’ ಹಿಂದುಳಿದಿರುವಿಕೆಯನ್ನು ನಿರ್ಧರಿಸುವ ಮಾನದಂಡವಾಗಬಾರದು ಎಂದು ಸ್ಪಷ್ಟಪಡಿಸಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಮಾನದಂಡಗಳು ಮುಖ್ಯವಾಗಬೇಕೆಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಆದರೆ, ಈ ವರೆಗೆ ನೇಮಿಸಲ್ಪಟ್ಟ ಯಾವುದೇ ಆಯೋಗವು ಕರ್ನಾಟಕದಲ್ಲಿ ಐನೂರಕ್ಕೂ ಹೆಚ್ಚಿರುವ ಜಾತಿಗಳ ಪೈಕಿ ಪ್ರತಿ ಜಾತಿ ಮತ್ತು ಧರ್ಮದ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪರಸ್ಪರ ತುಲನೆ ಮಾಡಿ ವಸ್ತುನಿಷ್ಠವಾಗಿ ಅಧ್ಯಯನಮಾಡಿದೆ ಎಂದು ಹೇಳಲು ಸಾಧ್ಯವಿಲ್ಲ. ಹಿಂದುಳಿದಿರುವಿಕೆಯನ್ನು ಗುರುತಿಸಲು ಜಾತಿಯೇ ಅತಿ ಮುಖ್ಯ ಮಾನದಂಡವಾಗಿದೆ ಎಂಬುದು ಹಲವು ಆಯೋಗಗಳ ವರದಿಗಳಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ ರಾಜಕಾರಣಿಗಳು ಜಾತಿಗಳನ್ನು ತಮಗೆ ಬೇಕಾದಂತೆ ವಿಪರೀತ ರೀತಿಯಲ್ಲಿ ‘ಹಿಂದುಳಿದ’ ಎಂದು ಅರ್ಥೈಸಿ, ದುರುಪಯೋಗ ಮಾಡಿಕೊಳ್ಳಲು ಅವಕಾಶವಾಗಿದೆ. ಇದಕ್ಕೆ ಅಂತ್ಯವೇ ಇಲ್ಲವೆನ್ನುವಂತೆ ನಮ್ಮ ಇಂದಿನ ರಾಜಕೀಯ ಪರಿಸ್ಥಿತಿ ಇದೆ. ಜಾತಿಯೆಂಬುದು ಈ ದೇಶದ ರಾಜಕಾರಣಕ್ಕೆ ಅಂಟಿಕೊಂಡಿರುವ ಒಂದು ಮಹಾಮಾರಿ. ಅದು ಸಂಪೂರ್ಣ ಸಮಾಜವನ್ನು ಮತ್ತು ದೇಶವನ್ನು ವಿನಾಶದತ್ತ ತೆಗೆದುಕೊಂಡು ಹೋಗುತ್ತಿದೆ!

ಕೊನೆಯದಾಗಿ, ವೀರಶೈವ-ಲಿಂಗಾಯತ ಸಮುದಾಯದಲ್ಲಿ ಒಟ್ಟು 102 ವರ್ಗಗಳಿವೆ. ಆದರೆ, ಕೇವಲ ಹದಿಮೂರು ವರ್ಗಗಳನ್ನು ಮಾತ್ರ ಹಿಂದುಳಿದ ವರ್ಗಗಳೆಂದು ‘ಪ್ರವರ್ಗ ಮೂರು-ಬಿ (1ಬಿ)’ಯಲ್ಲಿ ಪರಿಗಣಿಸಲಾಗಿದೆ. ಆದ್ದರಿಂದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು ಈ ಹದಿಮೂರು ಪಂಗಡಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಲದೆ, ಪ್ರವರ್ಗ ‘ಮೂರು-ಬಿ 1(1ಅ)’ದಲ್ಲಿ ಹೆಸರಿಸಿದ ‘ವೀರಶೈವ-ಲಿಂಗಾಯತ’ ಎಂಬುದು ಜಾತಿ ಅಥವಾ ಧರ್ಮವೇ ಇಲ್ಲ. ಆ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಈಗಾಗಲೇ ಹತ್ತಾರು ರಿಟ್‌ ಅರ್ಜಿಗಳು ದಾಖಲಾಗಿವೆ ಎಂಬುದನ್ನು ಎಲ್ಲ ಲಿಂಗಾಯತರೂ ಅರ್ಥಮಾಡಿಕೊಳ್ಳಬೇಕು. ಅದೇ ರೀತಿ ಒಕ್ಕಲಿಗರಿಗೆ ಪ್ರತ್ಯೇಕ ನಿಗಮವನ್ನು ಮಾಡಿದರೆ ಅವರಲ್ಲಿರುವ ಸುಮಾರು 40ರಷ್ಟು ಪಂಗಡಗಳಲ್ಲಿ ಇಪ್ಪತ್ತು ಪಂಗಡಗಳು ಮಾತ್ರ ‘ಪ್ರವರ್ಗ ಮೂರು-ಎ’ಯಲ್ಲಿವೆ. ಅವರು ಮಾತ್ರ ಈ ನಿಗಮಗಳಿಂದ ಅಲ್ಪಸ್ವಲ್ಪ ಸಹಾಯ ಪಡೆಯಬಹುದು. ಈ ರೀತಿಯಲ್ಲಿ ಈಗಿನ ಸರ್ಕಾರವು ವಿವಿಧ ಸಮುದಾಯಗಳನ್ನು ಒಡೆಯುತ್ತಿದೆ ಮತ್ತು ಅಮಾಯಕ ಜನರಿಗೆ ‘ಆಭಿವೃದ್ಧಿ’ಯ ಕನಸು ತೋರಿಸಿ ಮೋಸಮಾಡುತ್ತಿದೆ ಎಂಬುದನ್ನು ಜನರು ಅರಿತುಕೊಳ್ಳಬೇಕು.

(ಲೇಖಕ ನಿವೃತ್ತ ಐಎಎಸ್‌ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT