ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಪಂಚ ರಾಜ್ಯಗಳ ಚುನಾವಣೆ 2022; ಐದು ರಾಜ್ಯಗಳಲ್ಲಿ ಪಕ್ಷಗಳ ಬಲಾಬಲ

ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳುವ ತವಕ: ಕಾಂಗ್ರೆಸ್‌ಗೆ ಚುನಾವಣೆ ನಿರ್ಣಾಯಕ: ವ್ಯಾಪ್ತಿ ವಿಸ್ತರಿಸಲು ಟಿಎಂಸಿ, ಎಎಪಿ ಉತ್ಸುಕ
Last Updated 8 ಜನವರಿ 2022, 19:31 IST
ಅಕ್ಷರ ಗಾತ್ರ

ಐದು ರಾಜ್ಯಗಳ ವಿಧಾನಸಭೆಯ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗವು ಪ್ರಕಟಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ್ದಾದ ಉತ್ತರ ಪ್ರದೇಶದಲ್ಲಿಯೂ ಚುನಾವಣೆ ನಡೆಯಲಿದೆ. ಈ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಚುನಾವಣೆಯ ಹೊಸ್ತಿಲಲ್ಲಿ ಈ ರಾಜ್ಯಗಳಲ್ಲಿ ಪಕ್ಷಗಳ ಸ್ಥಿತಿಗತಿ ಹೇಗಿದೆ ಎಂಬ ಚಿತ್ರಣ ಇಲ್ಲಿದೆ.

ಉತ್ತರ ಪ್ರದೇಶ: ಸುಲಭವಿಲ್ಲ ಬಿಜೆಪಿ ಗೆಲುವು

ದೇಶದ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ಚುನಾವಣೆಯು ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಅತಿಮುಖ್ಯವಾದದ್ದು. ಹೀಗಾಗಿ ಉತ್ತರ ಪ್ರದೇಶ ಚುನಾವಣೆಯು ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆ. 2017ರ ಚುನಾವಣೆಯಲ್ಲಿ ಭಾರಿ ಜಯ ಗಳಿಸಿದ್ದ ಬಿಜೆಪಿಯು ಯೋಗಿ ಆದಿತ್ಯನಾಥ ಅವರನ್ನು ಮುಖ್ಯಮಂತ್ರಿಯನ್ನಾಗಿ ಹೆಸರಿಸಿತು. ‍ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವಳಿಯಿಂದ 20 ವರ್ಷಗಳ ಬಳಿಕ ಪಕ್ಷ ಅಧಿಕಾರ ಹಿಡಿಯಿತು. ಬಿಜೆಪಿಗೆ ಮುನ್ನ ಅಧಿಕಾರ ನಡೆಸಿದ್ದ ಮಾಯಾವತಿ ನೇತೃತ್ವದ ಬಿಎಸ್‌ಪಿ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತು. ಮುಲಾಯಂ–ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷದ ಸೈಕಲ್ ಸಹ ಓಡಲಿಲ್ಲ.

ಆದರೆ, ಈ ಬಾರಿ ಚಿತ್ರಣ ಬದಲಾಗಿದೆ ಎಂಬ ಭಾವನೆ ವಿಶ್ಲೇಷಕರಲ್ಲಿ ಇದೆ. ಗೆಲುವು ಬಿಜೆಪಿಗೆ ಸರಳವಾಗಿಲ್ಲ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ರೈತರ ಸುದೀರ್ಘ ಪ್ರತಿಭಟನೆ, ಲಖಿಂಪುರ–ಖೇರಿಯಲ್ಲಿ ರೈತರ ಮೇಲೆ ಎಸ್‌ಯುವಿ ಹರಿಸಿದ ಪ್ರಕರಣ ಪಕ್ಷದ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಸಮಾಜವಾದಿ ಪಕ್ಷವು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ್ದು, ಅದು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಒಂದು ವರ್ಷದಿಂದ ರಾಜ್ಯದಲ್ಲಿ ಬೀಡುಬಿಟ್ಟಿದ್ದು, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರನ್ನು ಸಂಘಟಿಸುತ್ತಿದ್ದಾರೆ. ಅಚ್ಚರಿಯೆಂದರೆ, ಚುನಾವಣೆ ಘೋಷಣೆಯಾದರೂ, ಮಾಯಾವತಿ ಅವರು ಇನ್ನೂ ಪ್ರಚಾರ ಕಣಕ್ಕೆ ಧುಮುಕಿಲ್ಲ. ಪಕ್ಷದ ಬಹುತೇಕ ನಾಯಕರು, ಶಾಸಕರು ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳಿಗೆ ವಲಸೆ ಹೋಗಿರುವುದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪಂಜಾಬ್‌ನಲ್ಲಿ ಚುಕ್ಕಾಣಿ ಹಿಡಿಯುತ್ತಾ ಎಎಪಿ?

2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಗಳಿಸಿತ್ತು. ಆದರೆ ಈಗ ಅಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನವಜೋತ್ ಸಿಂಗ್ ಸಿಧು ಅವರನ್ನು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ ಬಳಿಕ ಅಮರಿಂದರ್ ಸಿಂಗ್ ಅವರು ಪಕ್ಷ ತೊರೆದು ಹೊರನಡೆದಿದ್ದಾರೆ. ಅವರ ಹೊಸ ಪಕ್ಷವು ಬಿಜೆಪಿ ಜೊತೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದೆ. ಮುಖ್ಯಮಂತ್ರಿ
ಯಾಗಿ ಚರಣ್‌ಜಿತ್‌ ಸಿಂಗ್ ಚನ್ನಿ ಅವರನ್ನು ಆಯ್ಕೆ ಮಾಡಿದ್ದಕ್ಕೆ ಪಕ್ಷದಲ್ಲಿ ವಿರೋಧವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿ ವೇಳೆ ಉಂಟಾದ ಭದ್ರತಾಲೋಪದ ಕಾರಣ, ಸರ್ಕಾರವು ವ್ಯಾಪಕ ಟೀಕೆಗೆ ಗುರಿಯಾಗಿದೆ.

ದೆಹಲಿಯ ಆಚೆಗೆ ಅಧಿಕಾರ ಹಿಡಿಯುವ ಆಕಾಂಕ್ಷೆಯಲ್ಲಿದ್ದ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಕಳೆದ ಚುನಾವಣೆಯಲ್ಲಿ 20 ಸೀಟುಗಳು ಸಿಕ್ಕಿದ್ದವು. ಎಎಪಿಯು ಪಂಜಾಬ್‌ನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದುಈ ಬಾರಿಯ ಚುನಾವಣಾ ಪೂರ್ವ ಸಮೀಕ್ಷೆಗಳು ಅಂದಾಜಿಸಿವೆ. ಕಾಂಗ್ರೆಸ್‌ನಲ್ಲಾಗಿರುವ ಬೆಳವಣಿಗೆಗಳಿಂದ ಎಎಪಿಗೆ ಲಾಭವಾಗುವ ಸಾಧ್ಯತೆಯಿದೆ. ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಛಾಪು ಮೂಡಿಸಿದೆ. ಚಂಡೀಗಡ ಮಹಾನಗರ ಪಾಲಿಕೆಯಲ್ಲಿ ಸಿಕ್ಕ ಭಾರಿ ಗೆಲುವು, ವಿಧಾನಸಭಾ ಚುನಾವಣೆಗೆ ಪಕ್ಷದಲ್ಲಿ ಹುರುಪು ಹೆಚ್ಚಿಸಿದೆ.

ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಇರುವಷ್ಟು ಪ್ರಭಾವ ಪಂಜಾಬ್‌ನಲ್ಲಿ ಇಲ್ಲ. ಶಿರೋಮಣಿ ಅಕಾಲಿ ದಳವು (ಎಸ್‌ಎಡಿ) ಐದು ವರ್ಷಗಳ ಹಿಂದೆ ಹೀನಾಯ ಸೋಲುಂಡು ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟುಕೊಟ್ಟಿತ್ತು. ಈ ಎರಡೂ ಪಕ್ಷಗಳು ಈ ಬಾರಿ ಕಾಂಗ್ರೆಸ್‌ನಿಂದ ಮತ್ತೆ ಅಧಿಕಾರವನ್ನು ಕಸಿದುಕೊಳ್ಳಲು ಹವಣಿಸುತ್ತಿವೆ.

ಗೋವಾ: ಪಕ್ಷಾಂತರಕ್ಕೆ ಪಾಠ ಕಲಿಸುತ್ತಾನಾ ಮತದಾರ?

40 ಕ್ಷೇತ್ರಗಳನ್ನು ಹೊಂದಿರುವ ಗೋವಾ ವಿಧಾನಸಭೆಗೆ 2017ರಲ್ಲಿ ಚುನಾವಣೆ ನಡೆದಾಗ 17 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರ ರಚಿಸಲು ವಿಫಲವಾಗಿತ್ತು. 13 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯು ಪಕ್ಷೇತರರು ಹಾಗೂ ಗೋವಾ ಫಾರ್ವರ್ಡ್‌ ಪಕ್ಷದ (ಜಿಎಫ್‌ಪಿ) ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು 2019ರಲ್ಲಿ ನಿಧನರಾದ ಬಳಿಕ, ಜಿಎಫ್‌ಪಿ ಬೆಂಬಲ ವಾಪಸ್ ಪಡೆಯಿತು. ಆದರೆ ಕಾಂಗ್ರೆಸ್‌ ಶಾಸಕರನ್ನು ಸೆಳೆದುಕೊಂಡ ಬಿಜೆಪಿ, ಸರ್ಕಾರವನ್ನು ಭದ್ರಪಡಿಸಿಕೊಂಡಿತು.

2017ರಿಂದ ಇಲ್ಲಿಯವರೆಗೆ ಶೇ 50ಕ್ಕಿಂತ ಹೆಚ್ಚು ಶಾಸಕರು ರಾಜ್ಯದಲ್ಲಿ ಪಕ್ಷಾಂತರ ಮಾಡಿದ್ದಾರೆ. ಕಾಂಗ್ರೆಸ್ ಅತಿಹೆಚ್ಚು ಶಾಸಕರನ್ನು ಕಳೆದುಕೊಂಡಿದ್ದು, ಈಗ ಪಕ್ಷದ ಜೊತೆ ಕೇವಲ ಇಬ್ಬರು ಶಾಸಕರಿದ್ದಾರೆ. ಬಿಜೆಪಿಗೆ ಒಬ್ಬ ಪಕ್ಷೇತರ ಬೆಂಬಲ ನೀಡಿದ್ದರೆ, ಮತ್ತೊಬ್ಬರು ಯುಪಿಎ ಜೊತೆ ಗುರುತಿಸಿಕೊಂಡಿದ್ದಾರೆ. ಶಾಸಕರ ರಾಜೀನಾಮೆಯಿಂದ ಒಟ್ಟು 7 ಸ್ಥಾನಗಳು ಈಗ ಖಾಲಿಯಿವೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಬಿಜೆಪಿಯು ಈ ಬಾರಿ ಅಧಿಕಾರ ಉಳಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದೆ. ಈ ಹಿಂದೆ ಬಿಜೆಪಿಯನ್ನು ಬೆಂಬಲಿಸಿದ್ದ ಜಿಎಫ್‌ಪಿ, ಈ ಬಾರಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ತೃಣಮೂಲ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳೂ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದು, ಫಲಿತಾಂಶದ ಮೇಲೆ ಗಮನಾರ್ಹ ಪ್ರಭಾವ ಬೀರುವ ಸಾಧ್ಯತೆಯಿದೆ. ‌

ಉತ್ತರಾಖಂಡ: ಆಡಳಿತ ವಿರೋಧಿ ಅಲೆ ನಿರೀಕ್ಷೆಯಲ್ಲಿ ‘ಕೈ’

70 ಸದಸ್ಯಬಲದ ಉತ್ತರಾಖಂಡ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. 2001ರಲ್ಲಿ ರಾಜ್ಯ ಉದಯವಾದ ಬಳಿಕ ಪಕ್ಷವೊಂದು 57 ಸೀಟುಗಳನ್ನು ಗೆದ್ದಿದ್ದು ಇದೇ ಮೊದಲು. 11 ಸ್ಥಾನಗಳೊಂದಿಗೆ ಕಾಂಗ್ರೆಸ್ ಹಿನ್ನಡೆ ಕಂಡಿತ್ತು.ಆದರೆ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಿಸಿ ಅಚ್ಚರಿ ಮೂಡಿಸಿತು. ತ್ರಿವೇಂದ್ರ ರಾವತ್ ಅವರನ್ನು ಬದಲಿಸಿ ತೀರಥ್ ರಾವತ್ ಅವರನ್ನು ನೇಮಿಸಲಾಯಿತು. ಅವರು ನೀಡಿದ ವಿವಾದಾತ್ಮಕ ಹೇಳಿಕೆಯಿಂದ ನಾಲ್ಕೇ ತಿಂಗಳಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯಬೇಕಾಯಿತು. ಅವರ ಜಾಗಕ್ಕೆ ಈಗ ಪುಷ್ಕರ್ ಧಾಮಿ ಬಂದಿದ್ದಾರೆ.ಪದೇ ಪದೇ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದ ವಿದ್ಯಮಾನವು ಪಕ್ಷಕ್ಕೆ ಮುಳುವಾಗಲೂಬಹುದು ಎನ್ನುತ್ತಾರೆ ವಿಶ್ಲೇಷಕರು. ಈ ವಿಚಾರವನ್ನೇ ಇಟ್ಟುಕೊಂಡು ಕಾಂಗ್ರೆಸ್ ಮತ ಕೇಳುವ ಸಾಧ್ಯತೆಯಿದೆ.

ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಆಡಳಿತ ವಿರೋಧಿ ಅಲೆಯು ಪಕ್ಷಕ್ಕೆ ನೆರವಾಗಲಿದೆ ಎಂದು ಕಾಂಗ್ರೆಸ್ ನಿರೀಕ್ಷೆ ಇಟ್ಟುಕೊಂಡಿದೆ. ದಲಿತ ನಾಯಕ ಯಶ್‌ಪಾಲ್ ಆರ್ಯ ಅವರು ಮತ್ತೆ ಪಕ್ಷಕ್ಕೆ ಬಂದಿರುವುದು ಶಕ್ತಿ ವೃದ್ಧಿಸಿದೆ ಎನ್ನಲಾಗಿದೆ.ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಬಿಜೆಪಿ ಎಂಬ ಸೂತ್ರ ಪಾಲಿಸಿಕೊಂಡು ಬರುತ್ತಿದ್ದ ಉತ್ತರಾಖಂಡ ಚುನಾವಣೆಗೆ ಈ ಬಾರಿ ಆಮ್ ಆದ್ಮಿ ಪಕ್ಷದ ಪ್ರವೇಶವಾಗಿದ್ದು, ಲೆಕ್ಕಾಚಾರ ಬದಲಾದರೂ ಅಚ್ಚರಿಯಿಲ್ಲ ಎನ್ನುತ್ತಾರೆ ತಜ್ಞರು.

ಮಣಿಪುರದಲ್ಲಿ ಬಿಜೆಪಿಯ ಹಾದಿ ಸುಗಮವೇ?

60 ಸದಸ್ಯಬಲದ ಮಣಿಪುರ ವಿಧಾನಸಭೆಗೆಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿತ್ತು. ಆದರೆ 21 ಸ್ಥಾನ ಗೆದ್ದಿದ್ದ ಬಿಜೆಪಿಯು ನ್ಯಾಷನಲ್ ಪೀಪಲ್ಸ್ ಪಾರ್ಟಿ, ನಾಗಾ ಪೀಪಲ್ಸ್ ಫ್ರಂಟ್ ಮತ್ತು ಲೋಕಜನಶಕ್ತಿ ಪಕ್ಷದ ಶಾಸಕರ ಬೆಂಬಲದಿಂದ ಸರ್ಕಾರ ರಚಿಸಿತ್ತು. ಎನ್. ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದರು. 2020ರ ಜೂನ್‌ನಲ್ಲಿ 9 ಶಾಸಕರು ಬಂಡಾಯ ಎದ್ದಿದ್ದರಿಂದ ಸರ್ಕಾರವು ಪತನದ ಅಂಚಿಗೆ ಬಂದುಹೋಗಿತ್ತು.

ಎರಡನೇ ಬಾರಿ ಅಧಿಕಾರ ಹಿಡಿಯುವತ್ತ ಬಿಜೆಪಿ ದೃಷ್ಟಿ ನೆಟ್ಟಿದೆ. ಆದರೆ, ಈ ಬಾರಿ ನ್ಯಾಷನಲ್ ಪೀಪಲ್ಸ್ ಪಾರ್ಟಿಯು ಬಿಜೆಪಿಯೊಂದಿಗೆ ಮುನಿಸಿಕೊಂಡಿದೆ. ಸಂಖ್ಯಾಬಲದ ಸನಿಹವಿದ್ದರೂ ಅಧಿಕಾರ ಹಿಡಿಯುವ ದಾರಿಯಲ್ಲಿ ಎಡವಿದ್ದ ಕಾಂಗ್ರೆಸ್‌ಗೆ ಈ ಬಾರಿ ಪಕ್ಷಾಂತರದ ಬಿಸಿ ತಟ್ಟಿದೆ.

ಹಿರಿಯ ಕಾಂಗ್ರೆಸ್ಸಿಗ ಡಿ. ಕೊರುಂಗ್‌ತಾಂಗ್ ಅವರು ಕಳೆದ ನವೆಂಬರ್‌ನಲ್ಲಿ ಪಕ್ಷ ತೊರೆದಿದ್ದಾರೆ.ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸೇರಿದಂತೆ ಇಬ್ಬರು ಶಾಸಕರು ಬಿಜೆಪಿಗೆ ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿ ಐಬೊಬಿ ಸಿಂಗ್ ಅವರು ಅನಾರೋಗ್ಯದ ಕಾರಣ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಹೀಗಾಗಿ ಬಿಜೆಪಿ ಹಾದಿ ಕಷ್ಟವಾಗಲಾರದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT