ಮಂಗಳವಾರ, ಮಾರ್ಚ್ 28, 2023
33 °C

ಆಳ–ಅಗಲ| ಮುಖ್ಯಮಂತ್ರಿ ತಲೆದಂಡ: ಬಿಜೆಪಿಯ ಹೊಸ ಕಾರ್ಯತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಜರಾತ್‌ ಪಟೇಲರ ಓಲೈಕೆಯ ಗುರಿ

ಅಮಿತ್‌ ಶಾ ಅವರ ಆಪ್ತ ವಿಜಯ ರೂಪಾಣಿ ಅವರನ್ನು ಗುಜರಾತ್‌ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿ ಭೂಪೇಂದ್ರ ಪಟೇಲ್‌ ಅವರಿಗೆ ಆ ಸ್ಥಾನ ನೀಡಿದ್ದರ ಹಿಂದೆ ಜಾತಿ ಸಮೀಕರಣವನ್ನು ಬಿಜೆಪಿಗೆ ಅನುಕೂಲಕರವಾಗಿಸುವ ಗುರಿಯೇ ಮುಖ್ಯವಾಗಿದೆ. 

ವಿಜಯ ರೂಪಾಣಿ ಅವರು ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದವರು. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು ಕಷ್ಟ ಎಂಬುದೇ ನಾಯಕತ್ವ ಬದಲಾವಣೆಯ ಪ್ರಮುಖ ಕಾರಣ ಎಂದು ವಿಶ್ಲೇಷಕರು ಹೇಳುತ್ತಾರೆ. ರಾಜ್ಯದಲ್ಲಿ ನಡೆದ ಬೆಳವಣಿಗೆಗಳು ಕೂಡ ಈ ವಿಶ್ಲೇಷಣೆಗೆ ಪೂರಕವಾಗಿಯೇ ಇವೆ. 

ರಾಮನ ವಂಶಜರು ಎಂದು ಹೇಳಿಕೊಳ್ಳುವ ಪಟೇಲ್‌ ಅಥವಾ ಪಾಟೀದಾರ್‌ ಸಮುದಾಯವು ಗುಜರಾತ್‌ನಲ್ಲಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯವಾಗಿದೆ. ರಾಜ್ಯದ ಒಟ್ಟು 6 ಕೋಟಿ ಜನಸಂಖ್ಯೆಯಲ್ಲಿ ಪಟೇಲ್‌ ಸಮುದಾಯದ ಜನಸಂಖ್ಯೆ 1.5 ಕೋಟಿಯಷ್ಟು ಎಂದು ಅಂದಾಜಿಸಲಾಗಿದೆ. ರಾಜ್ಯದ 182 ವಿಧಾನಸಭಾ ಕ್ಷೇತ್ರಗಳ ಪೈಕಿ 80ರಲ್ಲಿ ಪಟೇಲ್‌ ಸಮುದಾಯವು ನಿರ್ಣಾಯಕವಾಗಿದೆ.

1980ರ ದಶಕದವರೆಗೆ ಕಾಂಗ್ರೆಸ್‌ ಪಕ್ಷದ ಜತೆಗೆ ಈ ಸಮುದಾಯ ಇತ್ತು. ಆದರೆ, ಕಾಂಗ್ರೆಸ್‌ ಪಕ್ಷವು ಕ್ಷತ್ರಿಯ, ಪರಿಶಿಷ್ಟ ಜಾತಿ, ಬುಡಕಟ್ಟು ಸಮುದಾಯ, ಮುಸ್ಲಿಂ ಜಾತಿಗಳ ಹೊಸ ಸಮೀಕರಣಕ್ಕೆ ಮುಂದಾದ ಬಳಿಕ ಪಟೇಲರು ಬಿಜೆಪಿಯತ್ತ ವಾಲಿದರು. ಪಟೇಲ್‌ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳಡಿ ಮೀಸಲಾತಿ ನೀಡಬೇಕು ಎಂಬ ಚಳವಳಿ 2015ರಲ್ಲಿ ಆರಂಭವಾಗುವುದರೊಂದಿಗೆ ಸಮುದಾಯದ ಬಿಜೆಪಿ ನಿಷ್ಠೆಯ ತಳಪಾಯವು ಅಲುಗಾಡಿತು. ಚಳವಳಿಯ ನಾಯಕ ಹಾರ್ದಿಕ್‌ ಪಟೇಲ್‌ ಅವರು ಕಾಂಗ್ರೆಸ್‌ ಸೇರಿದ್ದು ಕೂಡ ಇದಕ್ಕೆ ಒಂದು ಕಾರಣ. 

ನರೇಂದ್ರ ಮೋದಿ ಅವರ ಬಳಿಕ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್‌ ಪಟೇಲ್‌ ಅವರ ಉತ್ತರಾಧಿಕಾರಿಯಾಗಿ ವಿಜಯ ರೂಪಾಣಿ ಅವರ ನೇಮಕವು ಪಟೇಲ್‌ ಸಮುದಾಯದ ಅತೃಪ್ತಿಗೆ ಕಾರಣವಾಗಿತ್ತು. ನಿತಿನ್‌ ಪಟೇಲ್‌ ಅವರು ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ ಆಗಿದ್ದರು. ಹಾಗಿದ್ದರೂ, ಪಟೇಲ್‌ ಸಮುದಾಯದವರಲ್ಲಿ ಇದ್ದ ಸ್ಥಾನವನ್ನು ಬೇರೆಯವರಿಗೆ ಕೊಡಲಾಯಿತು. 

ಗುಜರಾತ್‌ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿಯೂ ಸಮುದಾಯದ ಅತೃಪ್ತಿ ಪ್ರತಿಫಲನಗೊಂಡಿದೆ. ಆ ಚುನಾವಣೆಯಲ್ಲಿ ಬಿಜೆಪಿಗೆ 99 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲವುದು ಸಾಧ್ಯವಾಯಿತು. 78 ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್‌, ಬಿಜೆಪಿಗೆ ನಡುಕ ಹುಟ್ಟಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಶೇ 60ರಷ್ಟಿದ್ದ ಬಿಜೆಪಿಯ ಮತ ಪ್ರಮಾಣವು ಶೇ 49ಕ್ಕೆ ಕುಸಿದಿತ್ತು. 

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ ಜೋಡಿಯು ವ್ಯಾಪಕ ಪ್ರಚಾರ ನಡೆಸಿತ್ತು. ಹಾಗಿದ್ದರೂ ರೂಪಾಣಿ ಅವರು ಮುಖ್ಯಮಂತ್ರಿಯಾಗಿದ್ದುದೇ ಪಕ್ಷದ ಹಿನ್ನಡೆಗೆ ಕಾರಣ ಎಂದು ಹೇಳಲಾಗುತ್ತಿದೆ. ರೂಪಾಣಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಿದರೆ ಗೆಲುವು ಕಷ್ಟ ಎಂಬುದು ಬಿಜೆಪಿ ಆಂತರಿಕವಾಗಿ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ. 

ಹಾಗಾಗಿ, ಗುಜರಾತ್‌ನಲ್ಲಿ ಜಾತಿ ಸಮೀಕರಣವನ್ನು ಗೆಲುವಿಗೆ ಪೂರಕವಾಗಿ ಇರಿಸಿಕೊಳ್ಳುವುದಕ್ಕಾಗಿಯೇ ಭೂಪೇಂದ್ರ ಅವರಿಗೆ ಮಣೆ ಹಾಕಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉತ್ತರಾಖಂಡ ವರ್ಷದಲ್ಲಿ ಮೂವರು ಮುಖ್ಯಮಂತ್ರಿ

ಬಿಜೆಪಿಯು 2021ರಲ್ಲಿ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಯನ್ನು ಎರಡು ಬಾರಿ ಬದಲಿಸಿದೆ, ಅದೂ ನಾಲ್ಕು ತಿಂಗಳ ಅಂತರದಲ್ಲಿ. ರಾಜ್ಯದ ವಿಧಾನಸಭಾ ಚುನಾವಣೆಗೆ ವರ್ಷಕ್ಕಿಂತಲೂ ಕಡಿಮೆ ಅವಧಿ ಇದ್ದ ಸಂದರ್ಭದಲ್ಲಿ ಬಿಜೆಪಿ ಇಂತಹ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಚುನಾವಣೆ ಕಾರಣದಿಂದಲೇ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ ಎಂದು ಪಕ್ಷದ ಹಲವು ನಾಯಕರೂ ಹೇಳಿದ್ದಾರೆ.

2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ತ್ರಿವೇಂದ್ರ ಸಿಂಗ್ ರಾವತ್ ಅವರು ನಾಲ್ಕು ವರ್ಷ ಆಳ್ವಿಕೆ ನಡೆಸಿದ್ದರು. ಪಕ್ಷದೊಳಗೆ ವಿರೋಧಿಗಳ ಸಂಖ್ಯೆ ಹೆಚ್ಚಾಗಿದ್ದು ಮತ್ತು ಜನಪ್ರಿಯತೆ ಕುಸಿದಿದ್ದು ಅವರ ರಾಜೀನಾಮೆಗೆ ಕಾರಣ ಎಂದು ವಿವರಿಸಲಾಗಿತ್ತು.

ತ್ರಿವೇಂದ್ರ ಸಿಂಗ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಆರ್‌ಎಸ್‌ಎಸ್‌, ಬಿಜೆಪಿಯ ಕೇಂದ್ರ ನಾಯಕರು ಮತ್ತು ರಾಜ್ಯ ನಾಯಕರನ್ನು ಕಡೆಗಣಿಸಿದ್ದರು ಎಂಬ ಆರೋಪ ಬಹಳ ಜೋರಾಗಿತ್ತು. ಕೇಂದ್ರದ ನಾಯಕರಿಂದ, ಆರ್‌ಎಸ್‌ಎಸ್‌ ನಾಯಕರಿಂದ ಬಂದ ಸೂಚನೆಗಳನ್ನು ಪಾಲಿಸುತ್ತಿರಲಿಲ್ಲ ಮತ್ತು ಅದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದರು ಎಂದು ರಾಜ್ಯ ಬಿಜೆಪಿ ಘಟಕದ ಹಲವು ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಯಾವುದೇ ನೀತಿ ರೂಪಿಸುವಲ್ಲಿ ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ಅವರು ಅಧಿಕಾರಿ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಇದರಿಂದ ಪಕ್ಷದ ಶಾಸಕರ ವಿಶ್ವಾಸವನ್ನು ಕಳೆದುಕೊಳ್ಳಬೇಕಾಯಿತು ಎಂದು ಅವರ ರಾಜೀನಾಮೆಯ ಹಿಂದಿನ ಕಾರಣವನ್ನು ಹಲವರು ಬಹಿರಂಗಪಡಿಸಿದ್ದರು.

ಇದಕ್ಕಿಂತಲೂ ಮುಖ್ಯ ಕಾರಣ ಎಂದರೆ ಚಾರ್‌ಧಾಮ್‌ ಮಂದಿರ ನಿರ್ವಹಣಾ ಮಂಡಳಿ ರಚನೆಗೆ ಕಾನೂನು ರಚಿಸಿ, ಅದರ ಅಡಿ 76 ದೇವಾಲಯಗಳ ಟ್ರಸ್ಟ್‌ಗಳನ್ನು ವಿಲೀನ ಮಾಡುವ ಮಹತ್ವದ ನಿರ್ಧಾರವನ್ನು ತ್ರಿವೇಂದ್ರ ಸಿಂಗ್ ಕೈಗೊಂಡಿದ್ದು. ದೇವಾಲಯಗಳ ಟ್ರಸ್ಟ್‌ಗಳ ಅಧಿಕಾರ ಕಸಿದುಕೊಳ್ಳುವ ಈ ನಿರ್ಧಾರದ ವಿರುದ್ಧ, ಟ್ರಸ್ಟ್‌ಗಳು ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದವು. ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳದಿದ್ದರೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ಈ ಟ್ರಸ್ಟ್‌ಗಳು ಬೆದರಿಕೆ ಹಾಕಿದ್ದವು. 

ತ್ರಿವೇಂದ್ರ ಸಿಂಗ್ ವಿರುದ್ಧ ಈ ಎಲ್ಲಾ ಅಂಶಗಳು ಒಟ್ಟಾದ ಸಂದರ್ಭದಲ್ಲೇ, ಬಿಜೆಪಿ ಕೇಂದ್ರ ನಾಯಕರು ಅವರ ರಾಜೀನಾಮೆಯನ್ನು ಕೇಳಿದರು. ರಾಜ್ಯದ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಬಾಕಿ ಇದೆ. ಪಕ್ಷದ ಕುಸಿದಿರುವ ಜನಪ್ರಿಯತೆಯನ್ನು ಅಷ್ಟರಲ್ಲಿ ಮರುಸ್ಥಾಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ವರಿಷ್ಠರು ಹೇಳಿದ್ದರು. 2021ರ ಮಾರ್ಚ್‌ ಎರಡನೇ ವಾರದಲ್ಲಿ ತ್ರಿವೇಂದ್ರ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂಸದ ತೀರಥ್ ಸಿಂಗ್ ರಾವತ್ ಅವರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತು.

ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ಚಾರ್‌ಧಾಮ್ ಮಂದಿರ ನಿರ್ವಹಣಾ ಮಂಡಳಿಯನ್ನು ರದ್ದುಮಾಡುವುದಾಗಿ ತೀರಥ್ ಸಿಂಗ್ ಘೋಷಿಸಿದ್ದರು. ಆದರೆ ಕೇಂದ್ರದ ನಾಯಕರ ಬೆಂಬಲ ಇಲ್ಲದ ಕಾರಣ ಆ ಘೋಷಣೆಯನ್ನು ಜಾರಿಗೆ ತರಲು ತೀರಥ್ ಅವರಿಗೆ ಸಾಧ್ಯವಾಗಲಿಲ್ಲ. ಅದು ಅವರ ವಿರುದ್ಧ ದೇವಾಲಯಗಳ ಟ್ರಸ್ಟ್‌ಗಳ ಅಸಮಾಧಾನವನ್ನು ಹೆಚ್ಚಿಸಿತು. ಅಲ್ಲದೆ, ಕೋವಿಡ್‌ ಎರಡನೇ ಅಲೆಯ ಮಧ್ಯೆಯೇ ಕುಂಭಮೇಳ ನಡೆಯಲು ಅವರು ಅವಕಾಶ ನೀಡಿದ್ದರು. ಕೋವಿಡ್‌ ನಿಯಂತ್ರಣ ಕುರಿತು ಅವರು ನೀಡಿದ ಹೇಳಿಕೆಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದವು. ಜೀನ್ಸ್ ಧರಿಸುವ ಹೆಣ್ಣುಮಕ್ಕಳ ಬಗ್ಗೆ ಅವರ ಹೇಳಿಕೆಗೆ ರಾಷ್ಟ್ರವ್ಯಾಪಿ ಆಕ್ಷೇಪ ವ್ಯಕ್ತವಾಗಿತ್ತು. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಮಾತು ನಿಲ್ಲಿಸಿ ಕೆಲಸ ಮಾಡಿ ಎಂದು ತೀರಥ್ ಸಿಂಗ್ ಅವರಿಗೆ ಎಚ್ಚರಿಕೆ ನೀಡಿದ್ದರು. ಕೇಂದ್ರ ನಾಯಕರ ಸೂಚನೆಗಳಿಗೆ ವ್ಯತಿರಿಕ್ತವಾಗಿಯೇ ತೀರಥ್ ಸಿಂಗ್ ನಡೆದುಕೊಂಡರು. ಕೊನೆಗೆ ಜುಲೈನಲ್ಲಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲಾಯಿತು.

ಕೋವಿಡ್‌ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಕಾರಣ ನೀಡಿ ಅವರ ರಾಜೀನಾಮೆ ಪಡೆಯಲಾಯಿತು. ಆದರೆ, ಪಕ್ಷದ ವರಿಷ್ಠರ ಸೂಚನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದಲೇ ಅವರ ರಾಜೀನಾಮೆ ಪಡೆಯಲಾಯಿತು ಎಂದು ಪಕ್ಷದ ಹಲವು ನಾಯಕರು ಹೇಳಿದ್ದಾರೆ. ಚುನಾವಣೆ ಎದುರಿಸಬೇಕಿರುವ ದಿನಗಳಲ್ಲಿ ಪಕ್ಷದ
ವರಿಷ್ಠರ ಸೂಚನೆಯನ್ನು ಪಾಲಿಸುವ ಮತ್ತು ವಿವಾದ ಸೃಷ್ಟಿಸದ ನಾಯಕನನ್ನು ಮುಖ್ಯಮಂತ್ರಿ ಮಾಡಲಾಯಿತು ಎಂದು ವಿಶ್ಲೇಷಿಸಲಾಗಿದೆ.

ಪರ್ಯಾಯ ಲಿಂಗಾಯತ ನಾಯಕ

ಕರ್ನಾಟಕ ವಿಧಾನಸಭೆಗೆ ಚುನಾವಣೆ ಹತ್ತಿರವಾಗಿರುವ ಹೊತ್ತಿನಲ್ಲಿಯೇ ನಾಯಕತ್ವ ಬದಲಾವಣೆ ಮಾಡಲಾಗಿದೆ. ಲಿಂಗಾಯತ ಸಮುದಾಯದ ‘ಪ್ರಶ್ನಾತೀತ ನಾಯಕ’ ಎನಿಸಿಕೊಂಡಿರುವ ಬಿ.ಎಸ್‌. ಯಡಿಯೂರಪ್ಪ ಅವರ ಸ್ಥಾನಕ್ಕೆ ಅದೇ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ತರಲಾಗಿದೆ.

2024ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದ ನರೇಂದ್ರ ಮೋದಿ–ಅಮಿತ್‌ ಶಾ ಜೋಡಿಗೆ ‘ದಕ್ಷಿಣದ ಹೆಬ್ಬಾಗಿಲು’ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇರಬೇಕು ಎಂಬ ಆಕಾಂಕ್ಷೆ ಇದ್ದದ್ದು ಸಹಜ. ಹಾಗಾಗಿಯೇ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡಹುವ ‘ಆಪರೇಷನ್ ಕಮಲ’ಕ್ಕೆ ಅವರು ಬೆಂಬಲ ಕೊಟ್ಟರು. ಆದರೆ, ಯಡಿಯೂರಪ್ಪನವರೇ ಮೇಲೆ ಬಿದ್ದು ಸರ್ಕಾರ ಕೆಡವಿದರೂ ಸರ್ಕಾರದ ಚುಕ್ಕಾಣಿಯನ್ನು ಅವರ ಕೈಗಿಡಲು ವರಿಷ್ಠರಿಗೆ ಸಮ್ಮತಿ ಇರಲಿಲ್ಲ. ಹಾಗಾಗಿಯೇ, ಮುಖ್ಯಮಂತ್ರಿ ಪದಗ್ರಹಣಕ್ಕೆ ಸುಲಭದಲ್ಲಿ ಒಪ್ಪಿಕೊಳ್ಳಲಿಲ್ಲ. ಸಂಪುಟ ವಿಸ್ತರಣೆಗೆ ಒಂದು ತಿಂಗಳು ಸತಾಯಿಸಿದರು. 

ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿ ಕೊಟ್ಟ ಅಧಿಕಾರವನ್ನು ಅನಾಯಾಸವಾಗಿ ಕಿತ್ತುಕೊಂಡಿದ್ದು ಈಗ ಇತಿಹಾಸ. ಯಡಿಯೂರಪ್ಪ ಅವರು ಅಧಿಕಾರಕ್ಕೇರಿ ಒಂದೇ ವರ್ಷದೊಳಗೆ ನಾಯಕತ್ವ ಬದಲಾಯಿಸಬೇಕು ಎಂಬ ಇರಾದೆ ಬಿಜೆಪಿ ವರಿಷ್ಠರಿಗೆ ಇತ್ತು. ಆದರೆ, ಕೊರೊನಾ ಬಂದಿದ್ದರಿಂದ ಯಡಿಯೂರಪ್ಪ ಮತ್ತೊಂದು ವರ್ಷ ಅಧಿಕಾರ ಅನುಭವಿಸಿದರು. 

ಯಡಿಯೂರಪ್ಪ ಅವರ ವಯಸ್ಸು ಮತ್ತು ಅವರ ಮಗ ಬಿ.ವೈ. ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ‍ಪದಚ್ಯುತಿಗೆ ಮುಖ್ಯ ಕಾರಣಗಳಾಗಿದ್ದವು. ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಚುನಾವಣೆ ಗೆಲ್ಲುವುದು  ಸಾಧ್ಯವೇ ಎಂಬ ಅನುಮಾನವೂ ಬಿಜೆಪಿ ವರಿಷ್ಠರಿಗೆ ಇತ್ತು ಎನ್ನಲಾಗಿದೆ.

ಯಡಿಯೂರಪ್ಪನವರನ್ನು ಇಳಿಸಿ, ಆ ಸ್ಥಾನಕ್ಕೆ ಬೇರೆ ಸಮುದಾಯದವರನ್ನು ತಂದು ಕೂರಿಸಿದರೆ, ಲಿಂಗಾಯತರ ವಿರೋಧವನ್ನು ಕಟ್ಟಿಕೊಂಡು ಮುಂದಿನ ಚುನಾವಣೆಯಲ್ಲಿ ಮಕಾಡೆ ಮಲಗಬೇಕಾಗುತ್ತದೆ ಎಂಬ ಭಯದ ಕಾರಣಕ್ಕೆ ಲಿಂಗಾಯತರನ್ನೇ ಆ ಸ್ಥಾನಕ್ಕೆ ಕೂರಿಸುವ ತಂತ್ರ ಹೆಣೆಯಲಾಯಿತು. ಹೀಗಾಗಿಯೇ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿಯಿತು.  ಯಡಿಯೂರಪ್ಪ ಅವರಿಗೂ ಬೊಮ್ಮಾಯಿ ಆಪ್ತರಾಗಿದ್ದರು. ಬೊಮ್ಮಾಯಿ ಮುಖ್ಯಮಂತ್ರಿಯಾದರೆ ಯಡಿಯೂರಪ್ಪ ಅವರು ತಕ್ಷಣವೇ ಯಾವುದೇ ತಕರಾರು ತೆಗೆಯುವುದಿಲ್ಲ ಎಂಬ ಲೆಕ್ಕಾಚಾರವೂ ಅವರ ಆಯ್ಕೆಯ ಹಿಂದೆ ಇತ್ತು.  

ಸಿದ್ದರಾಮಯ್ಯ ಅವರಂತಹ ಪ್ರಖರ ನಾಯಕರ ಪ್ರಭಾವಳಿಯನ್ನು ಹಿಮ್ಮೆಟ್ಟಿಸಿ, ಬಿಜೆಪಿಗೆ ಮತ್ತೊಂದಿಷ್ಟು ಕಾಲ ನೆಲೆ ಒದಗಿಸಲು ಉಗ್ರ ಹಿಂದುತ್ವಕ್ಕಿಂತ ಮೃದು ಹಿಂದುತ್ವ ಅಥವಾ ಉದಾರವಾದಿ ನಿಲುವೇ ಉತ್ತಮ. ಅಂತಹ ನಿಲುವಿನ ಮುಖ್ಯಮಂತ್ರಿಯನ್ನು ಕರ್ನಾಟಕ ಒಪ್ಪಿಕೊಂಡು ಬೆಂಬಲಿಸೀತು ಎಂಬ ಬಿಜೆಪಿ ವರಿಷ್ಠರ ಲೆಕ್ಕಾಚಾರವೂ ಈ ಬದಲಾವಣೆಯ ಹಿಂದೆ ಢಾಳಾಗಿ ಕಾಣಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು