ಬುಧವಾರ, ಜೂನ್ 29, 2022
27 °C

ಸಚಿನ್ ವಾಜೆ ಬಂಧನ ಆಗಿದ್ದೇಕೆ! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ (49) ಅವರನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಶನಿವಾರ ಮಧ್ಯರಾತ್ರಿ ಬಂಧಿಸಿದ್ದಾರೆ. ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿರುವ ಅವರನ್ನು ಮುಂಬೈನ ಪೆಡ್ಡಾರ್‌ ರಸ್ತೆಯಲ್ಲಿರುವ ಎನ್‌ಐಎ ಕಚೇರಿಯಲ್ಲಿ ಸತತ 13 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. 

ಭಾರತದ ಶ್ರೀಮಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಅಂಬಾನಿಯವರ ನಿವಾಸದೆದುರು ಫೆಬ್ರುವರಿ 25ರಂದು ನಿಂತಿದ್ದ ಮಹೀಂದ್ರಾ ಸ್ಕಾರ್ಪಿಯೊ ಎಸ್‌ಯುವಿಯಲ್ಲಿ ಸ್ಫೋಟಕ ಮತ್ತು ಬೆದರಿಕೆ ಪತ್ರಗಳಿರುವುದು ಪತ್ತೆಯಾಗಿತ್ತು. ಇದು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ದೊಡ್ಡ ಮುಜುಗರವನ್ನುಂಟು ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಜೆ ಅವರನ್ನು ಬಂಧಿಸಲಾಗಿದ್ದು, ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಭಾನುವಾರ ಕಡ್ಡಾಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅವರ ಬಂಧನಕ್ಕೆ ಒತ್ತಾಯಿಸಿದ್ದ ಬಿಜೆಪಿಯು, ರಾಜ್ಯ ಬಜೆಟ್‌ ಅಧಿವೇಶನದ ವೇಳೆಯೂ ಈ ವಿಚಾರ ಪ್ರಸ್ತಾಪಿಸಿತ್ತು.

ಇದನ್ನೂ ಓದಿ: ಅಂಬಾನಿ ನಿವಾಸದ ಸಮೀಪ ಸ್ಫೋಟಕ ಪತ್ತೆ ಪ್ರಕರಣ; ಪೊಲೀಸ್ ಅಧಿಕಾರಿಯ ಬಂಧನ

ನಿಗೂಢವಾಗಿ ಮೃತಪಟ್ಟ ಸ್ಕಾರ್ಪಿಯೊ ಮಾಲೀಕ
ಅಂಬಾನಿ ಅವರ ಮನೆಯ ಬಳಿ ಪತ್ತೆಯಾಗಿದ್ದ ಸ್ಕಾರ್ಪಿಯೊ ವಾಹನ ತಮ್ಮದು ಎಂದು ಆಟೊಮೊಬೈಲ್ ಪರಿಕರಗಳ ವ್ಯಾಪಾರಿ ಮನ್‌ಸುಖ್‌ ಹಿರೆನ್‌ (45) ಹೇಳಿಕೊಂಡಿದ್ದರು. ಆದರೆ, ಅದಾದ ಕೆಲವು ದಿನಗಳ ಬಳಿಕ ಅವರು ಶಂಕಾಸ್ಪದವಾಗಿ ಮೃತಪಟ್ಟಿದ್ದರು. ಹಿರೆನ್‌‌ ಅವರ ಮೃತದೇಹವನ್ನು ಮಾರ್ಚ್‌ 5 ರಂದು ಮುಂಬ್ರಾ-ಕಾಲ್ವಾದ ರೇತಿ ಬಂಡೆರ್‌ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿತ್ತು.

ತಮ್ಮ ವಾಹನ ಫೆ.18ರಂದು ಐರೋಲಿ–ಮುಲುಂದ್‌ ಸೇತುವೆ ಬಳಿಯಿಂದ ಕಳುವಾಗಿದೆ ಎಂದು ಹಿರೆನ್‌ ಪೊಲೀಸರಿಗೆ ದೂರು ನೀಡಿದ್ದರು. ಹಿರೆನ್‌ ಸಾವಿನ ಬಳಿಕ ಅವರ ಪತ್ನಿ ವಿಮಲಾ ಅವರು, ತಮ್ಮ ಪತಿಯ ಸಾವಿನ ಹಿಂದೆ ವಾಜೆ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್ ಆಯುಕ್ತ ನಿತಿನ್ ಅಲಕ್ನೂರ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಪ್ರವೀಣ್‌ ದಾರೇಕರ್‌, ʼಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು (ಸಚಿನ್‌) ಬಂಧಿಸುವುದು ಅನಿವಾರ್ಯ. ಇದು ಬಿಜೆಪಿಯ ಬೇಡಿಕೆಯಾಗಿದೆʼ ಎಂದು ಸ್ಪಷ್ಟಪಡಿಸಿದ್ದರು.

ಈ ಪ್ರಕರಣವನ್ನು ಬೇಧಿಸಲು ರಾಜ್ಯ ಸರ್ಕಾರವು ಎಟಿಎಸ್‌ ಅನ್ನು ನಿಯೋಜಿಸಿದೆ. ಹಿರೆನ್‌ ಪತ್ನಿ ವಿಮಲಾ ಅವರ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಾಗಿದ್ದು, ಎಟಿಎಸ್‌ ಅಧಿಕಾರಿಗಳು ವಾಜೆ ಅವರನ್ನು ಗುರುವಾರ ವಿಚಾರಣೆಗೊಳಪಡಿಸಿದ್ದರು.

ಸ್ಕಾರ್ಪಿಯೋ ಪ್ರಕರಣವನ್ನು ಗಾಮ್ದೇವಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ವಿದೇಶಾಂಗ ಸಚಿವಾಲಯದ ಆದೇಶದಂತೆ ಎನ್ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.

ಇದನ್ನೂ ಓದಿ: ಅಂಬಾನಿ ಮನೆ ಬಳಿ ಪತ್ತೆಯಾದ ಕಾರು, ಜಿಲೆಟಿನ್‌ ಕಡ್ಡಿ ವಿಧಿವಿಜ್ಞಾನ ಪರೀಕ್ಷೆಗೆ

ಜಾಮೀನು ನಿರಾಕರಣೆ
ಹಿರೆನ್‌ ನಿಗೂಢ ಸಾವಿನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಾಜೆ, ಮಧ್ಯಂತರ ಜಾಮೀನು ನೀಡುವಂತೆ ಮತ್ತು ಮಾರ್ಚ್‌ 19 ರಂದು ನಡೆಯಲಿರುವ ಮುಂದಿನ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿ ಠಾಣಾ ಜಿಲ್ಲಾ ಸೆಷೆನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ವಾಜೆ ಮನವಿಯನ್ನು ತಿರಸ್ಕರಿಸಿದೆ.

‘ಪ್ರಕರಣದಲ್ಲಿ ಅರ್ಜಿದಾರರಾದ ಸಚಿನ್ ವಾಜೆ ಅವರ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳು ಮತ್ತು ಪುರಾವೆಗಳಿವೆ. ಈ ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ನೀಡುವುದಿಲ್ಲ. ಈ ಪ್ರಕರಣದಲ್ಲಿ ಸಚಿನ್ ಅವರನ್ನು ವಿಚಾರಗೊಳಪಡಿಸುವ ಅಗತ್ಯವಿದೆ. ವಾಜೆ ಅವರ ವಿರುದ್ಧದ ಆರೋಪಗಳಲ್ಲಿ ಸೆಕ್ಷನ್ 302 (ಕೊಲೆ), ಸೆಕ್ಷನ್ 201 (ಸಾಕ್ಷ್ಯಗಳ ನಾಶ) ಮತ್ತು ಐಪಿಸಿಯ 120 (ಬಿ) (ಕ್ರಿಮಿನಲ್ ಪಿತೂರಿ) ಸೇರಿವೆ. ಇವು ಗಂಭೀರ ಅಪರಾಧಗಳಾಗಿವೆ. ಅಷ್ಟೇ ಅಲ್ಲ, ಆರೋಪಿ ಸಚಿನ್, ಫೆ. 27, 28ರಂದು ಮನ್‌ಸುಖ್ ಹಿರೆನ್ ಅವರೊಂದಿಗೆ ಮುಂಬೈನಲ್ಲಿದ್ದರು ಎನ್ನುವುದು ತಿಳಿದುಬಂದಿದೆ. ದೂರಿನಲ್ಲಿ ಹಿರೆನ್ ಅವರ ಪತ್ನಿ ಕೂಡಾ ನಿರ್ದಿಷ್ಟವಾಗಿ ಸಚಿನ್ ವಾಜೆ ಅವರ ಹೆಸರನ್ನು ಹೇಳಿದ್ದಾರೆ’ ಎಂದು ನ್ಯಾಯಾಲಯ ತಿಳಿಸಿದೆ.

‘ಎಫ್‌ಐಆರ್‌ನಲ್ಲಿ ಹಿರೆನ್ ಅವರ ಪತ್ನಿ ನೇರವಾಗಿ ವಾಜೆ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಹಾಗಾಗಿ, ಈ ಪ್ರಕರಣವು ತನಿಖೆಯ ಆರಂಭಿಕ ಹಂತದಲ್ಲಿದೆ ಎನ್ನುವ ತೀರ್ಮಾನಕ್ಕೆ ಬರಲಾಗಿದೆ’ ಎಂದೂ ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ: ಮನ್‌ಸುಖ್ ಹಿರೆನ್ ನಿಗೂಢ ಸಾವು ಪ್ರಕರಣ: ವಾಜೆಗೆ ಮಧ್ಯಂತರ ಜಾಮೀನು ನಿರಾಕರಣೆ

ವಾಟ್ಸ್‌ಆ್ಯಪ್‌ ಸ್ಟೇಟಸ್ ಮತ್ತು 17 ವರ್ಷಗಳ ನಂಟು
ಸದ್ಯ ಬಂಧನಕ್ಕೊಳಗಾಗಿರುವ ವಾಜೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳುತ್ತಿದ್ದಂತೆ ತಮ್ಮ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ʼಈ ಜಗತ್ತಿಗೆ ವಿದಾಯ ಹೇಳುವ ಸಮಯ ಸಮೀಪಿಸುತ್ತಿದೆʼ ಎಂದು ಬರೆದುಕೊಂಡು ಆತಂಕ ಸೃಷ್ಟಿಸಿದ್ದರು.

ʼ2004ರ ಮಾರ್ಚ್‌ 3 ರಂದು ಸಿಐಡಿಯಲ್ಲಿರುವ ನನ್ನ ಸಹೋದ್ಯೋಗಿ ಅಧಿಕಾರಿಗಳು ಸುಳ್ಳು ಆರೋಪದ ಮೇಲೆ ನನ್ನನ್ನು ಬಂಧಿಸಿದ್ದರು. ಆ ಬಂಧನವು ಇಲ್ಲಿಯವರೆಗೆ ಅನಿಶ್ಚಿತವಾಗಿದೆ. ಅದೇರೀತಿಯ ಪ್ರಕರಣ ಮತ್ತೊಮ್ಮೆ ಪುನರಾವರ್ತನೆಯಾಗಿದೆ. ಸಹೋದ್ಯೋಗಿಗಳು ನನ್ನನ್ನು ತಪ್ಪಾಗಿ ಬಲೆಗೆ ಬೀಳಿಸಿದ್ದಾರೆ. ಈ ಪ್ರಕರಣಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಬಹುಶಃ ನನ್ನಲ್ಲಿ ಈ ಹಿಂದೆ 17 ವರ್ಷಗಳ ಭರವಸೆ, ತಾಳ್ಮೆ, ಜೀವನ ಮತ್ತು ಸೇವೆಯೂ ಇತ್ತು. ಈಗ ನನಗೆ 17 ವರ್ಷಗಳ ಮುಂದಿನ ಜೀವನ ಅಥವಾ ಸೇವೆ ಅಥವಾ ಬದುಕುವ ತಾಳ್ಮೆ ಉಳಿದಿಲ್ಲ. ಈ ಜಗತ್ತಿಗೆ ವಿದಾಯ ಹೇಳುವ ಸಮಯ ಸಮೀಪಿಸುತ್ತಿದೆ ಎಂದು ನಾನು ಭಾವಿಸಿದ್ದೇನೆʼ ಎಂದು ಬರೆದುಕೊಂಡಿದ್ದರು.

2002ರ ಘಾಟ್ಕೋಪರ್ ಸ್ಫೋಟದ ಆರೋಪಿ ಖ್ವಾಜಾ ಯೂನಸ್ 2003ರಲ್ಲಿ ಜೈಲಿನಲ್ಲಿದ್ದಾಗಲೇ ಮೃತಪಟ್ಟಿದ್ದ. ಈ (ಲಾಕಪ್‌ ಡೆತ್)‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಜೆ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ, ಬಂಧಿಸಲಾಗಿತ್ತು. ಬಳಿಕ ಅವರು ರಾಜೀನಾಮೆ ನೀಡಿದ್ದರು. ಆದರೆ, ನಂತರದ ದಿನಗಳಲ್ಲಿ ಕರ್ತವ್ಯಕ್ಕೆ ಮರಳಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಕೋವಿಡ್‌-19 ಸಾಂಕ್ರಾಮಿಕ ಮತ್ತು ಪರಿಶೀಲನಾ ಸಮಿತಿಯ ತೀರ್ಪಿನ ಬಳಿಕ ಅವರನ್ನು ಕರ್ತವ್ಯಕ್ಕೆ ಮತ್ತೆ ನೇಮಿಸಿಕೊಳ್ಳಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು