ಶುಕ್ರವಾರ, ಮೇ 29, 2020
27 °C

Explainer | ತಬ್ಲೀಗಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಯಾರು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದರೂ ತಬ್ಲೀಗ್‌ ಜಮಾತ್ ಸಂಘಟನೆ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಧಾರ್ಮಿಕ ಸಭೆ ನಡೆಸಿತ್ತು. ಇದರಿಂದಾಗಿ ಸುಮಾರು 150ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದ್ದು, 11 ಜನರು ಮೃತಪಟ್ಟಿದ್ದಾರೆ. ಇದು ದೇಶದಾದ್ಯಂತ ಭೀತಿ ಉಂಟುಮಾಡಿದೆ.

ತಬ್ಲೀಗ್‌ ಜಮಾತ್ ಕಾರ್ಯಕ್ರಮವನ್ನು ಖಂಡಿಸಿರುವ ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಇದು ‘ಉಗ್ರ ಕೃತ್ಯ’ ಎಂದು ಟೀಕಿಸಿದ್ದಾರೆ. 

ಲಾಕ್‌ಡೌನ್‌ ಆದೇಶ ಉಲ್ಲಂಘಿಸಿದ್ದಕ್ಕಾಗಿ ಮತ್ತು ಧಾರ್ಮಿಕ ಸಭೆ ನಡೆಸಿದ್ದಕ್ಕಾಗಿ ಸಂಘಟನೆಯ ಮುಖ್ಯಸ್ಥ ಮೌಲಾನಾ ಸಾದ್ ಕಂಧಾಲ್ವಿ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೌಲಾನಾ ಸಾದ್‌ ಯಾರು?
ಇಸ್ಲಾಂ ಮಿಷನರಿಯಾಗಿರುವ ತಬ್ಲೀಗ್‌ ಜಮಾತ್, ಪ್ರವಾದಿ ಮಹಮದ್‌ರ ಕಾಲದಲ್ಲಿ ಆಚರಣೆಯಲ್ಲಿದ್ದ ಧರ್ಮಾಚರಣೆಯನ್ನು ಮುಸ್ಲಿಮರಿಗೆ ಬೋಧಿಸುತ್ತದೆ. ಇದರ ಸಂಸ್ಥಾಪಕ ಮೌಲಾನಾ ಮೊಹಮ್ಮದ್‌ ಇಲ್ಯಾಸ್‌ ಅವರ ಮೊಮ್ಮಗನೇ ಈ ಸಾದ್‌.

1965ರ ಮೇ 10 ರಂದು ಜನಿಸಿದ ಇವರು 2015ರ ನವೆಂಬರ್‌ನಲ್ಲಿ ಸಂಘಟನೆಯ ಮುಖ್ಯಸ್ಥನಾದ. ಮರ್ಕಜ್‌ನಲ್ಲಿರುವ ಕಾಶಿಫ್‌–ಉಲ್‌–ಉಲೂಮ್‌ ಮದರಸಾದಲ್ಲಿ ಮೌಲ್ವಿಯಾತ್‌ ಅಧ್ಯಯನ ಮಾಡಿರುವ ಈತ ಅದಕ್ಕೂ ಮೊದಲು ಇಪ್ಪತ್ತು ವರ್ಷಗಳ ಕಾಲ (1995–2015) ಸಂಘಟನೆಯ ‘ಶುರಾ’ (ಕೇಂದ್ರ ಸಲಹಾ ಮಂಡಳಿ) ಸದಸ್ಯನಾಗಿದ್ದ.

ಈ ಸಂಘಟನೆಗೆ ಪ್ರಪಂಚದಾದ್ಯಂತ ಸುಮಾರು 214 ದೇಶಗಳಲ್ಲಿ ಹಿಂಬಾಲಕರಿದ್ದಾರೆ.

ಇದನ್ನೂಓದಿ: ಕೋವಿಡ್–19 | ಏನಿದು ತಬ್ಲಿಗಿ ಜಮಾತ್?

ಸಂಘಟನೆಯ ಮುಖ್ಯಸ್ಥ ಅಥವಾ ಅಮೀರನನ್ನು ಶುರಾದ ಹಿರಿಯ ಸದಸ್ಯರು ಆಯ್ಕೆ ಮಾಡುತ್ತಾರೆ. ಆದರೆ, ಸಾದ್‌ ವಿಚಾರದಲ್ಲಿ ಹಾಗಾಗಲಿಲ್ಲ. 2015ರ ನವೆಂಬರ್‌ 16ರಂದು ಮೊಹಮ್ಮದ್‌ ಅಬ್ದುಲ್‌ ವಹಾಬ್‌ ನೇತೃತ್ವದಲ್ಲಿ ರಚನೆಯಾದ 13 ಸದಸ್ಯರು ಸಲಹಾ ಮಂಡಳಿಯು ಸಾದ್‌ ಅವರನ್ನು ಮುಖ್ಯಸ್ಥರನ್ನಾಗಿಸಲು ಒಪ್ಪಿರಲಿಲ್ಲ. ಹಾಗಾಗಿ ಆತ ತನಗೆತಾನೇ ಮುಖ್ಯಸ್ಥ ಎಂದು ಘೋಷಿಸಿಕೊಂಡ.

ಉತ್ತರ ಪ್ರದೇಶದ ಕಾಂಧ್ಲಾ ಹಾಗೂ ದೆಹಲಿಯ ಜಕೀರ್‌ ನಗರಗಳಲ್ಲಿ ಮನೆ ಹೊಂದಿರುವ ಸಾದ್‌, ರಾಷ್ಟ್ರ ರಾಜಧಾನಿಯ ಹಜ್ರತ್‌ ನಿಜಾಮುದ್ದೀನ್‌ ಬಸ್ತಿಯಲ್ಲಿ ವಾಸವಾಗಿದ್ದಾನೆ.

ದಕ್ಷಿಣ ಏಷ್ಯಾದಲ್ಲಿ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ತಬ್ಲೀಗ್‌ ಜಮಾತ್, ವಿಶ್ವದ ಅತಿದೊಡ್ಡ ಮುಸ್ಲಿಂ ಸಂಘಟನೆ ಎನಿಸಿಕೊಂಡಿದೆ. ಇದರ ಸದಸ್ಯತ್ವಕ್ಕಾಗಿ ಯಾವುದೇ ಔಪಚಾರಿಕ ಪ್ರಕ್ರಿಯೆಗಳಿಲ್ಲ. ಭಾರತದ ದಿವಂಗತ ಮಾಜಿ ರಾಷ್ಟ್ರಪತಿ ಜಾಕೀರ್‌ ಹುಸೇನ್‌ ಕೂಡ ಸಂಪರ್ಕ ಹೊಂದಿದ್ದರು. ಅನೇಕ ಪ್ರಸಿದ್ಧ ವ್ಯಕ್ತಿಗಳು ಇದರೊಂದಿಗೆ ಸಂಬಂಧ ಹೊಂದಿದ್ದಾರೆ.

ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಸಂಘಟನೆಯ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸುತ್ತಿರುವ ಮೌಲಾನಾ ತಾರಿಕ್‌ ಜಮೀಲ್‌ ಎಂಬಾತ ಆ ದೇಶದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಎನ್ನಲಾಗಿದೆ.

ಸಾದ್ ವಿರುದ್ಧ ಪ್ರಕರಣ
ಧಾರ್ಮಿಕ ಸಭೆ ಆಯೋಜಿಸಿದ್ದ ಸಂಬಂಧ ಸಾದ್‌ ಹಾಗೂ ಇತರ ಆರು ಜನರ ವಿರುದ್ಧ ದೆಹಲಿ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಮೌಲಾನ ಸಾದ್‌, ಮತ್ತು ಡಾ. ಜೀಷನ್‌,  ಮುಫ್ತಿ ಶೆಹ್ಜಾದ್‌, ಎಂ. ಸೈಫಿ, ಯೂನಸ್‌, ಮೊಹದ್‌ ಸಲ್ಮಾನ್‌ ಮತ್ತು ಮೊಹ್ದ್‌ ಅಶ್ರಫ್‌ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಮಾರ್ಚ್‌ 28ರ ಬಳಿಕ ತಲೆ ಮರೆಸಿಕೊಂಡಿರುವ ಸಾದ್‌ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು