ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕೋವಿಡ್‌ ಪಿಡುಗಿನ ವಿರುದ್ಧ ಲಸಿಕೆಯ ರಕ್ಷಣೆ

Last Updated 15 ಜನವರಿ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ ಎಂಬ ಪಿಡುಗು ಜಗತ್ತನ್ನು ಕಂಗೆಡಿಸಿ ವರ್ಷದ ಬಳಿಕ ಅದರ ವಿರುದ್ಧ ಲಸಿಕೆ ಲಭ್ಯವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ಅಭಿಯಾನವನ್ನು ಭಾರತವು ಇಂದಿನಿಂದ ನಡೆಸಲಿದೆ. ಲಸಿಕೆಗಳು ಸುರಕ್ಷಿತವೇ, ಅಡ್ಡಪರಿಣಾಮಗಳು ಇಲ್ಲವೇ, ಮನುಷ್ಯನ ಮೇಲಿನ ಪ್ರಯೋಗಗಳ ಫಲಿತಾಂಶ ಏನು ಹೇಳಿದೆ ಎಂಬ ಪ್ರಶ್ನೆಗಳ ನಡುವೆಯೇ ಲಸಿಕೆ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ದೇಶದಲ್ಲಿಯೇ ತಯಾರಾದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಭ್ಯವಾಗಲಿದೆ.

ವಿವಾದ

ಇನ್ನೂ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ ಅನ್ನು ಪೂರ್ಣಗೊಳಿಸದ ಭಾರತ್ ಬಯೊಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ 55 ಲಕ್ಷ ಡೋಸ್‌ಗಳನ್ನು ಕೇಂದ್ರ ಸರ್ಕಾರವು ಖರೀದಿಸಿದೆ. ಈಗಾಗಲೇ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿರುವ (ಬ್ರಿಟನ್‌ ಮತ್ತು ಬ್ರೆಜಿಲ್‌ನಲ್ಲಿ) ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಕೋವಿಶೀಲ್ಡ್‌ ಲಸಿಕೆಗೆ ನೀಡಿರುವ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಕೋವ್ಯಾಕ್ಸಿನ್ ಅನ್ನು ಖರೀದಿಸಲಾಗಿದೆ. ಇದು ವಿವಾದ ಸೃಷ್ಟಿಸಿದೆ. ಕ್ಲಿನಿಕಲ್ ಟ್ರಯಲ್‌ ಅನ್ನು ಪೂರ್ಣಗೊಳಿಸದ ಲಸಿಕೆಯನ್ನು ಖರೀದಿಸಿರುವುದಕ್ಕೆ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಕೋವ್ಯಾಕ್ಸಿನ್‌ಗೆ ಅನುಮೋದನೆ ಕೊಟ್ಟ ಕ್ರಮವನ್ನು ಸರ್ಕಾರ ಸಮರ್ಥಿಸಿಕೊಂಡಿದೆ.

ಕೋವ್ಯಾಕ್ಸಿನ್ ಡೋಸ್‌ಗಳನ್ನು ತಕ್ಷಣವೇ ಬಳಸುವುದಿಲ್ಲ. ಇವನ್ನು ಬ್ಯಾಕ್‌ಅಪ್‌ ಲಸಿಕೆಗಳಾಗಿ ಮಾತ್ರ ಬಳಕೆ ಮಾಡಲಾಗುತ್ತದೆ. ಈಗ ಕೋವಿಶೀಲ್ಡ್ ಲಸಿಕೆಗಳನ್ನು ಮಾತ್ರ ಬಳಸುತ್ತೇವೆ. ದೇಶದಲ್ಲಿ ಕೋವಿಡ್‌ನ 2ನೇ ಅಲೆ ಕಾಣಿಸಿಕೊಳ್ಳದಿದ್ದರೆ ಕೋವಿಶೀಲ್ಡ್‌ ಲಸಿಕೆಗಳೇ ಸಾಕಾಗುತ್ತವೆ. ಆಗ ಆರು ತಿಂಗಳವರೆಗೆ ಕೋವ್ಯಾಕ್ಸಿನ್‌ನ ಡೋಸ್‌ಗಳನ್ನು ಬಳಸುವುದಿಲ್ಲ. ಅಷ್ಟರಲ್ಲಿ ಕೋವ್ಯಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್‌ನ ಪೂರ್ಣ ವರದಿ ಲಭ್ಯವಾಗಿರುತ್ತದೆ. ಆನಂತರವಷ್ಟೇ ಅವನ್ನು ಬಳಸಲಾಗುತ್ತದೆ. ಒಂದೊಮ್ಮೆ ದೇಶದಲ್ಲಿ ಕೋವಿಡ್‌ನ ಎರಡನೇ ಅಲೆ ಕಾಣಿಸಿಕೊಂಡರೆ, ಕೋವ್ಯಾಕ್ಸಿನ್‌ ಅನ್ನು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ವಿವರಿಸಿದೆ.

ಕೇಂದ್ರ-ರಾಜ್ಯ ಸರ್ಕಾರಗಳ ಸಂಘರ್ಷ: ಕೋವ್ಯಾಕ್ಸಿನ್‌ ಬಳಕೆ ಸಂಬಂಧ ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳ ಮಧ್ಯೆ ಸಂಘರ್ಷ ನಡೆದಿದೆ. ಕೋವ್ಯಾಕ್ಸಿನ್‌ ಬಳಕೆಗೆ ಹಲವು ರಾಜ್ಯ ಸರ್ಕಾರಗಳು ಆಕ್ಷೇಪ ವ್ಯಕ್ತಪಡಿಸಿವೆ. ಸರ್ಕಾರವು ಕೋವಿಶೀಲ್ಡ್‌ನ 1.1 ಕೋಟಿ ಮತ್ತು ಕೋವ್ಯಾಕ್ಸಿನ್‌ನ 55 ಲಕ್ಷ ಡೋಸ್‌ಗಳನ್ನು ಈಗಾಗಲೇ ಖರೀದಿಸಿದೆ.

ಯಾವ ರಾಜ್ಯಗಳಿಗೆ ಯಾವ ಲಸಿಕೆಯನ್ನು ವಿತರಿಸಲಾಗುತ್ತದೆ ಎಂಬುದನ್ನು ಕೇಂದ್ರ ಆರೋಗ್ಯ ಸಚಿವಾಲಯವು ಇನ್ನೂ ಬಹಿರಂಗಪಡಿಸಿಲ್ಲ. ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ವಿತರಣೆಯ ಅನುಪಾತ ಎಷ್ಟಿರಲಿದೆ ಎಂಬುದನ್ನೂ ಸರ್ಕಾರ ತಿಳಿಸಿಲ್ಲ. ಇದು ರಾಜ್ಯ ಸರ್ಕಾರಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಆಡಳಿತವಿರುವ ಛತ್ತೀಸಗಡ ಸರ್ಕಾರವು, ‘ಕೋವ್ಯಾಕ್ಸಿನ್‌ನ ಕ್ಲಿನಿಕಲ್‌ ಟ್ರಯಲ್‌ನ ಪೂರ್ಣ ವರದಿ ಬರುವವರೆಗೂ ಆ ಲಸಿಕೆಯನ್ನು ನಾವು ಬಳಸುವುದಿಲ್ಲ’ ಎಂದು ಬಹಿರಂಗವಾಗಿ ಘೋಷಿಸಿದೆ.

ಲಸಿಕೆಯ ಬೆಲೆ

ಸೆರಂ ಇನ್‌ಸ್ಟಿಟ್ಯೂಟ್ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಪ್ರತಿ ಡೋಸ್‌ಗೆ ₹ 200ರಂತೆ ಸರ್ಕಾರ ಖರೀದಿಸಿದೆ. ಸಾರ್ವಜನಿಕ ಮಾರುಕಟ್ಟೆಯಲ್ಲಿ ಈ ಲಸಿಕೆಯ ದರ ₹ 1,000 ಇರಲಿದೆ ಎಂದು ಸೆರಂ ಇನ್‌ಸ್ಟಿಟ್ಯೂಟ್ ಹೇಳಿದೆ. ಆದರೆ ಸೆರಂ ಇನ್‌ಸ್ಟಿಟ್ಯೂಟ್‌ ತಯಾರಿಸಲಿರುವ ಈ ಲಸಿಕೆಯನ್ನು ಬ್ರಿಟನ್‌ನಲ್ಲಿ ₹ 200ಕ್ಕಿಂತಲೂ ಕಡಿಮೆ ಬೆಲೆಗೆ ಅಲ್ಲಿನ ಸರ್ಕಾರ ಖರೀದಿಸಿದೆ. ಇದಕ್ಕೂ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೋವಿಶೀಲ್ಡ್‌ನ ಪ್ರತಿ ಲಸಿಕೆಯ ಪ್ರತಿ ಡೋಸ್‌ಗೆ ಸರ್ಕಾರವು ₹ 200 ಪಾವತಿಸಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ನ ಪ್ರತಿ ಡೋಸ್‌ಗೆ ಸರ್ಕಾರವು ₹ 295 ಪಾವತಿಸಿದೆ. 55 ಲಕ್ಷ ಡೋಸ್‌ಗಳಲ್ಲಿ 38.5 ಲಕ್ಷ ಡೋಸ್‌ಗಳನ್ನು ಮಾತ್ರ ಸರ್ಕಾರ ಖರೀದಿಸಿದೆ. ಉಳಿದ 16.5 ಲಕ್ಷ ಡೋಸ್‌ಗಳನ್ನು ಭಾರತ್ ಬಯೋಟೆಕ್ ಉಚಿತವಾಗಿ ನೀಡಿದೆ. ಕೋವ್ಯಾಕ್ಸಿನ್‌ನ ಪ್ರತಿ ಡೋಸ್‌ಗೆ ಮಾರುಕಟ್ಟೆಯ ಬೆಲೆ ಎಷ್ಟು ಇರಲಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಅಡ್ಡಪರಿಣಾಮಗಳು

ಕೋವಿಶೀಲ್ಡ್: ಕೋವಿಶೀಲ್ಡ್‌ನಿಂದ ಅತ್ಯಂತ ಗಂಭೀರ ಅಡ್ಡಪರಿಣಾಮಗಳೇನೂ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಕೆಲವು ಸಣ್ಣ ಪ್ರಮಾಣದ ಅಡ್ಡಪರಿಣಾಮಗಳು ಆಗುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದೆ.

ಲಸಿಕೆ ನೀಡಿದ ಜಾಗದಲ್ಲಿ ಸ್ವಲ್ಪ ಮರಗಟ್ಟುವಿಕೆ, ನೋವು, ತಲೆನೋವು, ತೂಕಡಿಕೆ, ಮಾಂಸಖಂಡದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ದೇಹದ ಉಷ್ಣಾಂಶದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಚಳಿ ಮತ್ತು ಕೀಲುನೋವೂ ಕಾಣಿಸಿಕೊಳ್ಳಬಹುದು. ಆದರೆ ಪ್ಯಾರಾಸಿತಮೋಲ್ ಮಾತ್ರೆ ಸೇವಿಸುವುದರಿಂದ ಈ ಅಡ್ಡಪರಿಣಾಮಗಳನ್ನು ನಿವಾರಿಸಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ನರಮಂಡಳದ ಹೊರಕವಚಕ್ಕೆ ಸ್ವಲ್ಪ ಹಾನಿಮಾಡಬಹುದು. ಆದರೆ ಇದು ಅತ್ಯಂತ ಅಪರೂಪದ

ಕೋವ್ಯಾಕ್ಸಿನ್‌: ಕೋವ್ಯಾಕ್ಸಿನ್‌ನಿಂದಲೂ ಅತ್ಯಂತ ಗಂಭೀರ ಅಡ್ಡಪರಿಣಾಮಗಳೇನೂ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಕೆಲವು ಸಣ್ಣ ಪ್ರಮಾಣದ ಅಡ್ಡಪರಿಣಾಮಗಳು ಆಗುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದೆ.

ಲಸಿಕೆ ನೀಡಿದ ಜಾಗದಲ್ಲಿ ಮರಗಟ್ಟುವಿಕೆ, ಊತ, ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ತಲೆನೋವು, ಹೊಟ್ಟೆಯ ಭಾಗದಲ್ಲಿ ಮಾಂಸಖಂಡಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೊಟ್ಟೆ ತೊಳಸುವಿಕೆ ಮತ್ತು ವಾಂತಿಯಾಗಲಿದೆ. ಶೀತ, ಕೆಮ್ಮು, ತಲೆಸುತ್ತು ಮತ್ತು ಜ್ವರ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವಾಲಯವು ಹೇಳಿದೆ.

ಯಾರಿಗೆ ಆದ್ಯತೆ?

* ವೈದ್ಯಕೀಯ ಸಿಬ್ಬಂದಿ

* 50 ವರ್ಷಕ್ಕಿಂತ ಹಿರಿಯರು

* ಇತರೆ ಕಾಯಿಲೆ ಇರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ

ಲಸಿಕೆ ನೀಡಿಕೆಯ ಆಗು-ಹೋಗು

* ಕೋವಿಡ್‌ ಲಸಿಕೆ ಕಡ್ಡಾಯವಲ್ಲ. ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳಲು ನೋಂದಾಯಿಸಿಕೊಳ್ಳಬೇಕಷ್ಟೆ

* ಕೋವಿಡ್‌ ಮತ್ತು ಕೋವಿಡ್‌ ಲಕ್ಷಣಗಳು ಇರುವ ವ್ಯಕ್ತಿಗಳಿಗೆ ಲಸಿಕೆ ನೀಡುವುದಿಲ್ಲ. ಲಸಿಕಾ ಕೇಂದ್ರದಲ್ಲಿ ಬೇರೆಯವರಿಗೆ ಸೋಂಕು ಹರಡಬಹುದು ಎಂಬ ಒಂದು ಕಾರಣದಿಂದ ಮಾತ್ರ ಲಸಿಕೆ ನೀಡುವುದಿಲ್ಲ. ಕೋವಿಡ್‌ ನಿವಾರಣೆಯಾದ 14 ದಿನಗಳ ನಂತರ ಅವರಿಗೆ ಲಸಿಕೆ ನೀಡಲಾಗುತ್ತದೆ

* ಕೋವಿಡ್‌ ನಿವಾರಣೆಯಾದವರೂ ಲಸಿಕೆ ಪಡೆದುಕೊಳ್ಳುವುದು ಸೂಕ್ತ, ಆದರೆ ಕಡ್ಡಾಯವಲ್ಲ

* ಈಗ ಎರಡು ಕಂಪನಿಯ ಲಸಿಕೆಗಳನ್ನು ಸರ್ಕಾರವು ಖರೀದಿಸಿದೆ. ಆದರೆ ಒಬ್ಬ ವ್ಯಕ್ತಿಗೆ ಒಂದೇ ಕಂಪನಿಯ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗುತ್ತದೆ. ಲಸಿಕೆಗಳನ್ನು ಬದಲಿಸುವಂತಿಲ್ಲ

* ಈ ಲಸಿಕೆಗಳನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ದೇಶದ ಇತರ ಲಸಿಕೆ ಕಾರ್ಯಕ್ರಮಗಳ ಮೂಲಸೌಕರ್ಯಗಳನ್ನು ಕೋವಿಡ್‌ ಲಸಿಕೆ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತದೆ

* ಲಸಿಕೆ ಪಡೆದುಕೊಳ್ಳಲು ನೋಂದಣಿ ಮಾಡಿಕೊಳ್ಳುವವರಿಗೆ ಮಾತ್ರವೇ ಲಸಿಕೆ ನೀಡಲಾಗುತ್ತದೆ

* ಲಸಿಕೆ ಪಡೆದುಕೊಂಡ ನಂತರವೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮತ್ತು ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು

ಕೋ–ವಿನ್‌ ಆ್ಯಪ್‌

ಲಸಿಕೆ ಅಭಿಯಾನ ಮತ್ತು ಲಸಿಕೆ ನೀಡಿಕೆಗೆ ಗುರುತಿಸಲಾದ ಫಲಾನುಭವಿಗಳ ಮೇಲೆ ನಿರಂತರವಾದ ನಿಗಾ ಇರಿಸುವುದಕ್ಕಾಗಿ ಸರ್ಕಾರವು ಕೋವಿಡ್‌ ವ್ಯಾಕ್ಸಿನ್‌ ಇಂಟೆಲಿಜೆನ್ಸ್‌ ನೆಟ್‌ವರ್ಕ್‌ ಅಥವಾ ಕೋ–ವಿನ್‌ ಎಂಬ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಕೋವಿಡ್‌ ಲಸಿಕೆ ಅಭಿಯಾನದ ಯೋಜನೆ, ಅನುಷ್ಠಾನ, ಮೇಲ್ವಿಚಾರಣೆ, ಮೌಲ್ಯಮಾಪನ ಎಲ್ಲವೂ ಕೋ–ವಿನ್‌ ಮೂಲಕವೇ ನಡೆಯಲಿದೆ.

ಲಸಿಕೆಗಳ ದಾಸ್ತಾನು ಎಷ್ಟಿದೆ, ಲಸಿಕೆ ನೀಡುವಾಗ ಲಸಿಕೆಗಳು ಯಾವ ತಾಪಮಾನದಲ್ಲಿ ಇದ್ದವು ಮುಂತಾದ ಮಾಹಿತಿ ಕೂಡ ಈ ಆ್ಯಪ್‌ನಲ್ಲಿ ಲಭ್ಯ ಇರುತ್ತದೆ.

ಆ್ಯಪ್‌ನಲ್ಲಿ ಐದು ವಿಭಾಗಗಳಿವೆ. ಅವೆಂದರೆ, ಆಡಳಿತ ವಿಭಾಗ, ನೋಂದಣಿ ವಿಭಾಗ, ಲಸಿಕೆ ವಿಭಾಗ, ಫಲಾನುಭವಿ ಒಪ್ಪಿಗೆ ವಿಭಾಗ ಮತ್ತು ವರದಿ ವಿಭಾಗ.

ಲಸಿಕೆ ಪಡೆಯುವುದಕ್ಕಾಗಿ ಜನರು ಈ‍ಆ್ಯಪ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ, ಸದ್ಯಕ್ಕೆ ಈ ಆ್ಯಪ್‌ ಗೂಗಲ್‌ ಪ್ಲೇಸ್ಟೋರ್‌ ಅಥವಾ ಆ್ಯಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ಲಭ್ಯ ಇಲ್ಲ. ಈಗ ಇದನ್ನು ಬ್ಯಾಕ್‌ ಎಂಡ್‌ ಸಾಫ್ಟ್‌ವೇರ್‌ ರೀತಿಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ಕೋ–ವಿನ್‌ ಹೆಸರಿನ ಅಥವಾ ಇದೇ ಹೆಸರನ್ನು ಹೋಲುವ ಹಲವು ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು ಇವೆ. ಇವು ಯಾವುವೂ ಕೋವಿಡ್‌ ಲಸಿಕೆ ಅಭಿಯಾನದ ಅಧಿಕೃತ ಆ್ಯಪ್‌ಗಳು ಅಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಜನರಿಗೆ ಎಚ್ಚರಿಕೆ ನೀಡಿದೆ. ಸ್ವ–ನೋಂದಣಿಯ ಆ್ಯಪ್‌ ಅನ್ನು ಸರ್ಕಾರವು ಬಿಡುಗಡೆ ಮಾಡಲಿದೆ. ಅದರ ಬಗ್ಗೆ ಜನರಿಗೆ ಸಕಾಲದಲ್ಲಿ ಮಾಹಿತಿಯನ್ನೂ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಲಸಿಕೆ ಅಭಿಯಾನ ಆರಂಭವಾಗಿ ಒಂದು ತಿಂಗಳ ಬಳಿಕ ಸಾಮಾನ್ಯ ಜನರಿಗೆ ಈ ಆ್ಯಪ್‌ ಲಭ್ಯ ಆಗಬಹುದು. ಸದ್ಯಕ್ಕೆ ಇದು ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಭ್ಯ ಇದೆ. ಮೊದಲ ಹಂತದಲ್ಲಿ ಲಸಿಕೆ ಪಡೆಯಲಿರುವ ಒಂದು ಕೋಟಿ ಆರೋಗ್ಯ ಕಾರ್ಯಕರ್ತರ ಹೆಸರು ಮತ್ತು ವಿವರಗಳನ್ನು ಕೋ–ವಿನ್‌ಗೆ ಸೇರಿಸಲಾಗಿದೆ. ಈ ಪಟ್ಟಿಯು ಸರ್ಕಾರಕ್ಕೆ ಲಭ್ಯವಿರುವ ಕಾರಣ ಇವರು ನೋಂದಣಿ ಮಾಡಿಕೊಳ್ಳುವ ಅಗತ್ಯವೂ ಇಲ್ಲ ಎಂದು ಹೇಳಲಾಗಿದೆ.

ಆ್ಯಪ್‌ ಬಿಡುಗಡೆ ಆದ ಬಳಿಕ ಜನರು ಹೀಗೆ ನೋಂದಣಿ ಮಾಡಿಕೊಳ್ಳಬಹುದು

1. ಕೋ–ವಿನ್‌ ಆ್ಯಪ್‌ನಲ್ಲಿ ಸ್ವ ನೋಂದಣಿ

2. ಸರ್ಕಾರವು ನೀಡಿರುವ ಭಾವ ಚಿತ್ರ ಇರುವ ಗುರುತುಪತ್ರ ಅಪ್‌ಲೋಡ್‌ ಮಾಡಬೇಕು ಅಥವಾ ಬಯೊಮೆಟ್ರಿಕ್‌ ಇಲ್ಲವೇ ಒಟಿಪಿ ಮೂಲಕ ಆಧಾರ್‌ ದೃಢೀಕರಣ

3. ಲಸಿಕೆ ಪಡೆದುಕೊಳ್ಳಬೇಕಾದ ದಿನಾಂಕ ಮತ್ತು ಸಮಯವನ್ನು ಫಲಾನುಭವಿಗಳಿಗೆ ತಿಳಿಸಲಾಗುತ್ತದೆ

4. ನೋಂದಣಿ ಮಾಡಿಕೊಂಡ ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ

ವರದಿ –ಹಮೀದ್ ಕೆ./ಜಯಸಿಂಹ ಆರ್.

(ಆಧಾರ: ಕೇಂದ್ರ ಆರೋಗ್ಯ ಸಚಿವಾಲಯ, ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT