ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19: ಸನಿಹದಲ್ಲಿದೆಯೇ ಮತ್ತೊಂದು ಅಲೆ?

Last Updated 2 ಆಗಸ್ಟ್ 2021, 20:30 IST
ಅಕ್ಷರ ಗಾತ್ರ

ದೇಶದಾದ್ಯಂತ ಪ್ರತಿದಿನ ಪತ್ತೆಯಾಗುತ್ತಿದ್ದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸತತ50 ದಿನ ಸ್ಥಿರತೆ ಕಂಡುಬಂದಿತ್ತು. ಆದರೆ ಜುಲೈ ಕೊನೆಯ ವಾರದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ತುಸು ಏರಿಕೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೋವಿಡ್‌ ದೃಢಪಡುವಿಕೆ ದರ (ಪಾಸಿಟಿವಿಟಿ) ಏರಿಕೆಯಾಗಿದೆ. ಇದು ಕೋವಿಡ್‌ 3ನೇ ಅಲೆಯ ಆರಂಭದ ಸೂಚನೆ ಎಂದು ವಿಶ್ಲೇಷಿಸಲಾಗುತ್ತದೆ. ಆದರೆ ಇದು ಕೋವಿಡ್‌ನ ಮೂರನೇ ಅಲೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿಲ್ಲ. ಬದಲಿಗೆ, ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಎರಡನೇ ಮತ್ತು ಮೂರನೇ ಅಲೆಯ ಸಾಮ್ಯ

ವಿಶ್ವದಲ್ಲಿ ಕೋವಿಡ್‌ನ ಎರಡನೇ ಅಲೆ ಆರಂಭವಾದ ನಂತರದ ಕೆಲವೇ ವಾರಗಳಲ್ಲಿ ಭಾರತದಲ್ಲೂ ಎರಡನೇ ಅಲೆ ಆರಂಭವಾಗಿತ್ತು. ವಿಶ್ವದಲ್ಲಿ ಎರಡನೇ ಅಲೆ ತೀವ್ರವಾಗಿದ್ದ ಅವಧಿಯಲ್ಲಿ ಅಮೆರಿಕ, ಬ್ರಿಟನ್, ಬ್ರೆಜಿಲ್ ಮತ್ತು ಯೂರೋಪ್‌ನ ಹಲವು ದೇಶಗಳಲ್ಲಿ ಅತಿಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈ ದೇಶಗಳಲ್ಲಿ ಎರಡನೇ ಅಲೆಯಲ್ಲಿ ಪ್ರತಿದಿನ ಪತ್ತೆಯಾಗುತ್ತಿದ್ದ ಪ್ರಕರಣಗಳ ಸಂಖ್ಯೆ ಗರಿಷ್ಠಮಟ್ಟ ಮುಟ್ಟಿದ ಮೇಲೆ ಭಾರತದಲ್ಲಿ ಕೋವಿಡ್‌ನ ಎರಡನೇ ಅಲೆ ತೀವ್ರತೆ ಪಡೆಯಲು ಆರಂಭವಾಗಿತ್ತು.

ಈ ದೇಶಗಳಲ್ಲಿ ಕೋವಿಡ್‌ನ ಎರಡನೇ ಅಲೆಯಲ್ಲಿ ಪ್ರತಿದಿನ ಪತ್ತೆಯಾಗುತ್ತಿದ್ದ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಲು ಆರಂಭವಾದ ನಂತರ ಭಾರತದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಈ ಎಲ್ಲಾ ದೇಶಗಳಲ್ಲಿ ಪ್ರತಿದಿನ ಪತ್ತೆಯಾಗುತ್ತಿದ್ದ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾದರೂ, ಭಾರತದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇತ್ತು.

ಕೋವಿಡ್‌ ಎರಡನೇ ಅಲೆಯಲ್ಲಿ ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ತಳಿಯು ಈಗ ವಿಶ್ವದ 88ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದೆ. ಈ ದೇಶಗಳಲ್ಲಿ ಕೋವಿಡ್‌ ಮೂರನೇ ಅಲೆ ತೀವ್ರವಾಗಲು ಡೆಲ್ಟಾ ತಳಿಯೇ ಪ್ರಧಾನ ಕಾರಣವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಜುಲೈ ಎರಡನೇ ವಾರದ ಆರಂಭದಲ್ಲಿ ಹೇಳಿತ್ತು.

ಅಮೆರಿಕದಲ್ಲಿ ಈಗ ಪ್ರತಿದಿನ 90,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಬ್ರೆಜಿಲ್‌ನಲ್ಲಿ ಪ್ರತಿದಿನ 40,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಬ್ರಿಟನ್‌ನಲ್ಲಿ ಪ್ರತಿದಿನ 35-40 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ರಷ್ಯಾ, ಆಸ್ಟ್ರೇಲಿಯಾ, ಚೀನಾ ಮತ್ತು ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ಕೋವಿಡ್‌ನ ಮೂರನೇ ಅಲೆ ತೀವ್ರತೆ ಪಡೆಯುತ್ತಿದೆ.

ಭಾರತದಲ್ಲಿ ಕೋವಿಡ್‌ನ ಮೂರನೇ ಅಲೆಯು ಈಗ ಆರಂಭಿಕ ಹಂತದಲ್ಲಿದೆ ಎಂದು ಗುರುತಿಸಲಾಗಿದೆ. ಮೇಲೆ ಹೇಳಲಾದ ದೇಶಗಳಲ್ಲಿ ಕೋವಿಡ್‌ನ ಮೂರನೇ ಅಲೆ ಗರಿಷ್ಠಮಟ್ಟ ಮುಟ್ಟುವ ವೇಳೆಗೆ ಭಾರತದಲ್ಲಿ ಮೂರನೇ ಅಲೆಯ ತೀವ್ರತೆ ಆರಂಭವಾಗಲಿದೆ ಎನ್ನಲಾಗಿದೆ.

* ವಿಶ್ವದ ಹಲವು ದೇಶಗಳಲ್ಲಿ 2020ರ ಡಿಸೆಂಬರ್-2021ರ ಜನವರಿ, ಫೆಬ್ರುವರಿಯಲ್ಲಿ ಕೋವಿಡ್‌ನ ಎರಡನೇಅಲೆ ಗರಿಷ್ಠಮಟ್ಟದಲ್ಲಿ ಇತ್ತು. ಆನಂತರದ ದಿನಗಳಲ್ಲಿ ಇಳಿಕೆಯತ್ತ ಸಾಗಿತ್ತು

* ಭಾರತದಲ್ಲಿ 2021ರ ಮಾರ್ಚ್ ನಂತರ ಕೋವಿಡ್‌ನ ಮೂರನೇ ಅಲೆ ಆರಂಭವಾಗಿತ್ತು. ಏಪ್ರಿಲ್‌ನಲ್ಲಿ ತೀವ್ರ ಸ್ವರೂಪ ಪಡೆದಿತ್ತು. ಜೂನ್ ಮೊದಲ ವಾರದ ನಂತರ ಇಳಿಕೆಯತ್ತ ಸಾಗಿತ್ತು

* ಜೂನ್ ಅಂತ್ಯ ಮತ್ತು ಜುಲೈ ಮೊದಲ ವಾರದಲ್ಲಿ ವಿಶ್ವದ ಹಲವೆಡೆ ಕೋವಿಡ್‌ ಮೂರನೇ ಅಲೆ ಕಾಣಿಸಿಕೊಂಡಿದೆ. ಆಗಸ್ಟ್‌ಮೂರನೇ ವಾರದ ವೇಳೆಗೆ ಇದು ತೀವ್ರ ಸ್ವರೂಪ ಪಡೆಯಲಿದೆ ಎಂದು ಅಂದಾಜಿಸಲಾಗಿದೆ

* ಭಾರತದಲ್ಲಿ ಆಗಸ್ಟ್‌ ಅಂತ್ಯ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಕೋವಿಡ್‌ನ ಮೂರನೇ ಅಲೆ ಏರಿಕೆಯಾಗಲಿದ್ದು, ಅಕ್ಟೋಬರ್‌ನಲ್ಲಿ ಗರಿಷ್ಠಮಟ್ಟ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ

ತೀವ್ರತೆ ಕಡಿಮೆ: ಅಕ್ಟೋಬರ್‌ನಲ್ಲಿ ಗರಿಷ್ಠ ಮಟ್ಟಕ್ಕೆ

'ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ತೀವ್ರತೆ ಕಡಿಮೆ ಇರಲಿದೆ. ತೀವ್ರತೆ ಗರಿಷ್ಠಮಟ್ಟ ತಲುಪಿದ ವೇಳೆಯಲ್ಲಿ ನಿಯಂತ್ರಣ ಕ್ರಮಗಳು ಪರಿಣಾಮಕಾರಿಯಾಗಿದ್ದರೆ ಪ್ರತಿದಿನ 1 ಲಕ್ಷಕ್ಕಿಂತಲೂ ಕಡಿಮೆ ಪ್ರಕರಣಗಳು ಪತ್ತೆಯಾಗಬಹುದು. ನಿಯಂತ್ರಣ ಕ್ರಮ ಪರಿಣಾಮಕಾರಿಯಾಗಿಲ್ಲದೇ ಇದ್ದರೆ, ಪ್ರತಿದಿನ ಗರಿಷ್ಠ 1.5 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಬಹುದು. ಗಣಿತೀಯ ಮಾದರಿ ಲೆಕ್ಕಾಚಾರಗಳ ಪ್ರಕಾರ ಮೂರನೇ ಅಲೆಯು ಅಕ್ಟೋಬರ್‌ನಲ್ಲಿ ಗರಿಷ್ಠಮಟ್ಟ ಮುಟ್ಟಬಹುದು' ಎಂದು ಹೈದರಾಬಾದ್ ಐಐಟಿಯ ಸಂಶೋಧಕ ಎಂ.ವಿದ್ಯಾಸಾಗರ್ ಮತ್ತು ಕಾನ್ಪುರ ಐಐಟಿ ಸಂಶೋಧಕ ಮಣೀಂದ್ರ ಅಗರ್‌ವಾಲ್ ಅವರು ಹೇಳಿದ್ದಾರೆ.

ಎರಡನೇ ಅಲೆಯು ತೀವ್ರವಾಗಿರಲಿದೆ ಎಂದು ಈ ಇಬ್ಬರೂ ಸಂಶೋಧಕರು ತಮ್ಮ ಗಣಿತೀಯ ಮಾದರಿ ಲೆಕ್ಕಾಚಾರಗಳ ಪ್ರಕಾರ ವರದಿ ನೀಡಿದ್ದರು. 'ಮೂರನೇ ಅಲೆಯ ಅವಧಿ ದೀರ್ಘವಾಗಿದ್ದರೂ, ತೀವ್ರತೆ ಕಡಿಮೆ ಇರಲಿದೆ' ಎಂದು ಅವರು ಹೇಳಿದ್ದಾರೆ.

ಎದುರಿಸಲು ಹಲವು ಕ್ರಮ

ದೇಶವು ಕೋವಿಡ್ ಮೂರನೇ ಅಲೆಯ ಹೊಡೆತ ಎದುರಿಸಲು ಸಿದ್ಧತೆ ನಡೆಸುತ್ತಿದೆ. ಜನದಟ್ಟಣೆ ನಿರ್ಬಂಧಿಸುವುದು ಒಂದು ಕ್ರಮವಾದರೆ, ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಿರುವ ಅಗತ್ಯ ವೈದ್ಯಕೀಯ ಮೂಲಸೌಕರ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿಡುವುದು ಮತ್ತೊಂದು ಕ್ರಮ. ಈ ಎರಡೂ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ. ಕೇಂದ್ರ ಸರ್ಕಾರವು ವೈದ್ಯಕೀಯ ಮೂಲಸೌಕರ್ಯ, ಔಷಧಿ ಪೂರೈಕೆಯತ್ತ ಗಮನ ಹರಿಸಿದ್ದರೆ, ರಾಜ್ಯಗಳು ಸ್ಥಳೀಯವಾಗಿ ನಿರ್ಬಂಧ ವಿಧಿಸುವ, ಆಸ್ಪತ್ರೆಗಳನ್ನು ಸಜ್ಜುಗೊಳಿಸುವ ಕೆಲಸ ಮಾಡುತ್ತಿವೆ.

ಕರ್ನಾಟಕ ಸೇರಿ 10 ರಾಜ್ಯಗಳ 52 ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಇದರ ಬೆನ್ನಲ್ಲೇ ಕರ್ನಾಟಕದ ಜಿಲ್ಲಾಡಳಿತಗಳು ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೆ ತಂದಿವೆ. ಸೋಂಕು ಅಧಿಕವಾಗಿರುವ ನೆರೆಯ ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಕೇರಳಕ್ಕೆ ಒಂದು ವಾರ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಮದುವೆ ಮೊದಲಾದ ಸಮಾರಂಭಗಳಿಗೆ 100ಕ್ಕಿಂತ ಹೆಚ್ಚು ಜನ, ಅಂತ್ಯಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚು ಜನ ಸೇರದಂತೆ ನಿರ್ಬಂಧಿಸಲಾಗಿದೆ. ಯಾವುದೇ ಧಾರ್ಮಿಕ, ರಾಜಕೀಯ
ಸಮ್ಮೇಳನಗಳನ್ನು ನಡೆಸುವಂತಿಲ್ಲ. ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಹೇರಿಕೆಯ ಚಿಂತನೆ ಇದೆ.

ಪಕ್ಕದ ತಮಿಳುನಾಡಿನಲ್ಲೂ ಪ್ರಕರಣಗಳು ಏರುತ್ತಿದ್ದು, ಸ್ಥಳೀಯವಾಗಿ ಕಂಟೇನ್ಮೆಂಟ್ ವಲಯ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಜನದಟ್ಟಣೆ ತಪ್ಪಿಸಲು ಪ್ರಸಿದ್ಧ ದೇವಸ್ಥಾನಗಳನ್ನು ಮುಚ್ಚುವಂತೆ ಆದೇಶಿಸಿದೆ. ಜನದಟ್ಟಣೆಯ ಮಾರುಕಟ್ಟೆಗಳನ್ನು ಆಗಸ್ಟ್ 9ರವರೆಗೆ ಮುಚ್ಚಲಾಗಿದೆ. ಇತರ ರಾಜ್ಯಗಳಲ್ಲೂ ಕಠಿಣ ನಿರ್ಬಂಧಗಳನ್ನು ಹಂತಹಂತವಾಗಿ ವಿಧಿಸಲಾಗುತ್ತಿದೆ.

ಕೋವಿಡ್ ಎರಡನೇ ಅಲೆಯಲ್ಲಿ ಬಹುವಾಗಿ ಕಾಡಿದ್ದು ವೈದ್ಯಕೀಯ ಆಮ್ಲಜನಕ ಕೊರತೆ. ಈ ಬಾರಿ ಕೊರತೆಯಾಗದಂತೆ ಸರ್ಕಾರ ಹೆಚ್ಚು ಒತ್ತು ನೀಡಿದೆ.ವೈದ್ಯಕೀಯ ಆಮ್ಲಜನಕ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ನಿತ್ಯ 5,700 ಟನ್ ಇದ್ದ ಉತ್ಪಾದನೆಯು 9,690 ಟನ್‌ಗೆ ಏರಿಕೆಯಾಗಿದೆ. ಆಸ್ಪತ್ರೆಗಳಲ್ಲೇ ಆಮ್ಲಜನಕ ಉತ್ಪಾದನೆ ಘಟಕಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ.

ಕೋವಿಡ್ ಚಿಕಿತ್ಸೆಗೆ ಬಳಸುವ ಔಷಧಿಗಳ ಸುಗಮ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಔಷಧ ಇಲಾಖೆಯಲ್ಲಿ ಕೋವಿಡ್ ಡ್ರಗ್ಸ್ ಮ್ಯಾನೇಜ್‌ಮೆಂಟ್ ಸೆಲ್ (ಸಿಡಿಎಂಸಿ) ಸ್ಥಾಪಿಸಲಾಗಿದೆ. ರೆಮ್‌ಡಿಸಿವಿರ್‌ ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 38 ಲಕ್ಷ ಬಾಟಲಿಗಳಿಂದ ತಿಂಗಳಿಗೆ 1.22 ಕೋಟಿಬಾಟಲಿಗಳಿಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT