ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ –ಅಗಲ: ಡಾಲರ್ ಪಾರಮ್ಯ ಕಡಿವಾಣಕ್ಕೆ ಯತ್ನ
ಆಳ –ಅಗಲ: ಡಾಲರ್ ಪಾರಮ್ಯ ಕಡಿವಾಣಕ್ಕೆ ಯತ್ನ
Published 10 ಮೇ 2023, 19:35 IST
Last Updated 10 ಮೇ 2023, 19:35 IST
ಅಕ್ಷರ ಗಾತ್ರ

ಈಗ ಜಾಗತಿಕ ವಾಣಿಜ್ಯ ವಹಿವಾಟು ಬಹುತೇಕ ನಡೆಯುವುದು ಡಾಲರ್ ಆಧಾರದಲ್ಲಿ. ಎರಡು ದೇಶಗಳು ತಮ್ಮದೇ ಆದ ಕರೆನ್ಸಿಯನ್ನು ಹೊಂದಿದ್ದರೂ ಅವು ಅಮೆರಿಕದ ಡಾಲರ್ ಅನ್ನು ವಿನಿಮಯದ ಹಣವಾಗಿ ಬಳಸಿಕೊಳ್ಳುತ್ತವೆ. ಯಾವುದೇ ಸರಕು ಮತ್ತು ಸೇವೆಯನ್ನು ಡಾಲರ್‌ನ ಮೌಲ್ಯದ ಲೆಕ್ಕಾಚಾರದಲ್ಲಿ ಮಾರಾಟ ಮಾಡುತ್ತವೆ ಮತ್ತು ಖರೀದಿಸುತ್ತವೆ. ಹೀಗೆ ಜಾಗತಿಕ ವ್ಯಾಪಾರ ವಹಿವಾಟಿನ ಮೇಲೆ ಡಾಲರ್ ಸಾಧಿಸಿರುವ ಪಾರಮ್ಯವನ್ನು ಮುರಿಯಬೇಕು ಎಂದು ಕೆಲವು ದೇಶಗಳು ಹೊರಟಿವೆ. ತಮ್ಮದೇ ಕರೆನ್ಸಿಗಳ ಮೂಲಕ ವಹಿವಾಟು ನಡೆಸುತ್ತಿವೆ. ಈ ಬೆಳವಣಿಗೆ ಡಾಲರ್‌ನ ಪಾರಮ್ಯವನ್ನು ಮುರಿಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಡಾಲರ್ ಬದಲಿಗೆ ಬೇರೆ ಯಾವ ಕರೆನ್ಸಿಯನ್ನು ವ್ಯಾಪಾರ–ವಹಿವಾಟಿನ ಮಾಧ್ಯಮವನ್ನಾಗಿ ಬಳಸಬೇಕು ಎಂಬ ದೊಡ್ಡ ಪ್ರಶ್ನೆಯೂ ಎದುರಾಗಿದೆ

ಉಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧ ಆರಂಭವಾದ ಬಳಿಕ, ಅಮೆರಿಕ ಮತ್ತು ನ್ಯಾಟೊ ದೇಶಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿದವು. ಯಾವ ದೇಶವೂ ರಷ್ಯಾ ಜತೆಗೆ ವ್ಯಾಪಾರ ವಹಿವಾಟು ನಡೆಸಬಾರದು ಎಂದು ತಾಕೀತು ಮಾಡಿದವು. ಅಮೆರಿಕವು ಡಾಲರ್ ರೂಪದಲ್ಲಿದ್ದ ರಷ್ಯಾದ ಮೀಸಲು ಹಣವನ್ನು ಜಪ್ತಿ ಮಾಡಿತು. ಅಮೆರಿಕದಲ್ಲಿದ್ದ ರಷ್ಯಾದ ಬ್ಯಾಂಕ್‌ಗಳನ್ನು ದೇಶದಿಂದ ಹೊರಗಟ್ಟಿತು. ರಷ್ಯಾವು ಜಾಗತಿಕ ಮಟ್ಟದಲ್ಲಿ ವ್ಯಾಪಾರ ನಡೆಸಲು ಸಾಧ್ಯವಾಗದೇ ಇರುವ ಸ್ಥಿತಿ ನಿರ್ಮಿಸಿ, ಅದನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶ ಈ ಕ್ರಮದ ಹಿಂದೆ ಇತ್ತು. ಆದರೆ, ರಷ್ಯಾ ಆ ನಿರ್ಬಂಧವನ್ನೂ ಮೀರಿ ಜಾಗತಿಕ ಮಟ್ಟದಲ್ಲಿ ವ್ಯಾಪಾರ ನಡೆಸಿತು. ತನ್ನ ಕರೆನ್ಸಿಯಾದ ರೂಬಲ್‌ ಮೂಲಕ ಖರೀದಿಸುವುದಾದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗಿಂತ ಕಡಿಮೆ ಬೆಲೆಗೆ ಕಚ್ಚಾತೈಲ ಪೂರೈಸುವುದಾಗಿ ಘೋಷಿಸಿತು. ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಖರೀದಿಸಿದ ದೇಶಗಳಲ್ಲಿ ಭಾರತವೂ ಒಂದು. ಭಾರತದ ರೂಪಾಯಿ ಮತ್ತು ರಷ್ಯಾದ ರೂಬಲ್‌ನಲ್ಲಿಯೇ ಈ ವಹಿವಾಟು ನಡೆಯುತ್ತಿದೆ. ಅಮೆರಿಕದ ಡಾಲರ್‌ ಅನ್ನು ಬದಿಗಿಟ್ಟು ತಮ್ಮದೇ ಕರೆನ್ಸಿ ಮೂಲಕ ವಹಿವಾಟು ನಡೆಸಬೇಕು ಎಂಬ ದೊಡ್ಡಮಟ್ಟದ ಕೂಗು ಕೇಳಿಬಂದಿದ್ದು ಆಗಲೇ.

ಜಾಗತಿಕ ವ್ಯಾಪಾರ–ವಹಿವಾಟಿನಿಂದ ಡಾಲರ್‌ ಅನ್ನು ಹೊರಗಿಡುವ ಮತ್ತು ತಮ್ಮದೇ ಕರೆನ್ಸಿ ಮೂಲಕ ವಹಿವಾಟು ನಡೆಸುವ ಯತ್ನ ಇದೇ ಮೊದಲಲ್ಲ. ಎರಡನೇ ವಿಶ್ವಯುದ್ಧದ ನಂತರ ಇಂತಹ ಹಲವು ಯತ್ನಗಳು ನಡೆದಿವೆ. ಐರೋಪ್ಯ ಒಕ್ಕೂಟದ ಕರೆನ್ಸಿ–ಯೂರೊ ಸೃಷ್ಟಿಸುವಲ್ಲಿ, ಡಾಲರ್ ಪಾರಮ್ಯವನ್ನು ಮುರಿಯಬೇಕು ಎಂಬ ಉದ್ದೇಶವೂ ಪ್ರಮುಖವಾಗಿತ್ತು. 1999ರಲ್ಲಿ ಯೂರೊವನ್ನು ಚಲಾವಣೆಗೆ ತಂದಾಗ, ಅದು ಡಾಲರ್‌ ಅನ್ನು ಹಿಂದಿಕ್ಕುತ್ತದೆ ಅಥವಾ ಡಾಲರ್ ಅನ್ನು ಸರಿಗಟ್ಟುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಎರಡೂ ಗುರಿಗಳನ್ನು ತಲುಪಲು ಯೂರೊ ಯಶಸ್ವಿಯಾಗಲಿಲ್ಲ. 2010ರ ದಶಕದಲ್ಲಿ ಚೀನಾ ಸಹ ತನ್ನ ಯುವಾನ್‌ ಕರೆನ್ಸಿಯನ್ನು ಡಾಲರ್‌ಗೆ ಪರ್ಯಾಯವಾಗಿ ಬಳಸುವ ಪ್ರಸ್ತಾವವನ್ನು ತನ್ನ ಮಿತ್ರ ರಾಷ್ಟ್ರಗಳ ಎದುರು ಇಟ್ಟಿತ್ತು. ಆದರೆ, ಅದು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ, ಈಗ ಡಾಲರ್‌ನ ಪಾರಮ್ಯವನ್ನು ಮುರಿಯಬೇಕು ಮತ್ತು ತಮ್ಮದೇ ಕರೆನ್ಸಿಗಳಲ್ಲಿ ವಹಿವಾಟು ನಡೆಸಬೇಕು ಎಂಬ ಯೋಚನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿಗೆ ತರಲು ಹಲವು ದೇಶಗಳು ಮುಂದಾಗಿವೆ. ಜತೆಗೆ, ಡಾಲರ್‌ಗೆ ಪರ್ಯಾಯವಾದ ಮತ್ತೊಂದು ಕರೆನ್ಸಿಯನ್ನೂ ಚಲಾವಣೆಗೆ ತರಬೇಕು ಎಂಬ ಮತ್ತೊಂದು ಪ್ರಸ್ತಾವವೂ ಇದೆ.

ಭಾರತ ಮತ್ತು ರಷ್ಯಾ ಮಧ್ಯೆ ನಡೆಯುತ್ತಿರುವ ಕಚ್ಚಾತೈಲದ ವ್ಯಾಪಾರವು ರೂಪಾಯಿ–ರೂಬಲ್‌ನಲ್ಲಿಯೇ ನಡೆಯುತ್ತಿದೆ. ಭಾರತವು ಕಚ್ಚಾತೈಲ ಖರೀದಿಗೆ ರೂಪಾಯಿಯಲ್ಲೇ ಪಾವತಿ ಮಾಡುತ್ತಿದೆ. ಈ ಸ್ವರೂಪದ ವಹಿವಾಟು ಆರಂಭವಾದಾಗ ಭಾರತಕ್ಕೆ ಕಚ್ಚಾತೈಲ ಪೂರೈಸುವ ದೇಶಗಳ ಸಾಲಿನಲ್ಲಿ ರಷ್ಯಾ ಐದನೇ ಸ್ಥಾನದಲ್ಲಿತ್ತು. ಈಗ ರಷ್ಯಾವು ಭಾರತಕ್ಕೆ ಅತಿಹೆಚ್ಚು ಕಚ್ಚಾತೈಲ ಪೂರೈಸುವ ದೇಶ ಎನಿಸಿದೆ. ಇದೇ ಮಾದರಿಯನ್ನು ಇರಿಸಿಕೊಂಡು ಬೇರೆ ದೇಶಗಳೂ ವ್ಯಾಪಾರ ನಡೆಸಬಹುದು ಎಂದು ಸಿದ್ಧತೆ ಮಾಡಿಕೊಂಡಿವೆ. ಕೆಲವು ದೇಶಗಳು ಜಾರಿಗೂ ತಂದಿವೆ. ಏಷ್ಯಾ, ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್‌ ಅಮೆರಿಕದ ಒಟ್ಟು 19 ದೇಶಗಳು ಈಗ ತಮ್ಮದೇ ಕರೆನ್ಸಿಯಲ್ಲಿ ಕೆಲವು ಜಾಗತಿಕ ವಹಿವಾಟುಗಳನ್ನು ನಡೆಸುತ್ತಿವೆ.

ಡಾಲರ್‌ ಅನ್ನು ಹೊರಗಿಟ್ಟು, ತಮ್ಮದೇ ಕರೆನ್ಸಿಯಲ್ಲಿ ವಹಿವಾಟು ನಡೆಸಬೇಕು ಎಂದು ಗಟ್ಟಿಯಾಗಿ ಹೇಳುತ್ತಿರುವ ದೇಶಗಳ ಹೆಚ್ಚಿನವು ಅಮೆರಿಕ ವಿರೋಧಿ ದೇಶಗಳೇ ಆಗಿವೆ. ಅಂತಹ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ರಷ್ಯಾ ಎರಡನೇ ಸ್ಥಾನದಲ್ಲಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಮಾತುಕತೆ ನಡೆಸಿದ್ದರು. ಮಾತುಕತೆಯ ನಂತರ ಪುಟಿನ್‌, ‘ಚೀನಾದ ಯುವಾನ್‌ ಕರೆನ್ಸಿಯ ಮೂಲಕ ವ್ಯಾಪಾರ ನಡೆಸಲು ರಷ್ಯಾ ಸಿದ್ಧವಿದೆ. ಏಷ್ಯಾ, ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳು ಯುವಾನ್‌ ಮೂಲಕವೇ ಜಾಗತಿಕ ವ್ಯಾಪಾರ ನಡೆಸಬಹುದು’ ಎಂದು ಘೋಷಿಸಿದ್ದರು. ಮಲೇಷ್ಯಾ ಸಹ ತಾನು ಅಮೆರಿಕದ ಡಾಲರ್‌ ಮೂಲಕ ಜಾಗತಿಕ ವ್ಯಾಪಾರ ನಡೆಸುವುದಿಲ್ಲ ಎಂದು ಘೋಷಿಸಿತ್ತು. ಏಷ್ಯಾಕ್ಕಾಗಿಯೇ ಪ್ರತ್ಯೇಕ ‘ಏಷ್ಯಾ ಹಣಕಾಸು ನಿಧಿ’ಯನ್ನು ಸ್ಥಾಪಿಸಬೇಕು ಮತ್ತು ಹೊಸ ಕರೆನ್ಸಿಯನ್ನು ಸೃಷ್ಟಿಸಬೇಕು ಎಂದು ಮಲೇಷ್ಯಾ ಹೇಳಿದೆ. ಬ್ರಿಕ್ಸ್‌ ದೇಶಗಳ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಮುಂದಿನ ಶೃಂಗಸಭೆ ಆಗಸ್ಟ್‌ನಲ್ಲಿ ನಡೆಯಲಿದೆ. ಬ್ರಿಕ್ಸ್‌ ದೇಶಗಳ ನಡುವಣ ವ್ಯಾಪಾರ ವಹಿವಾಟಿಗೆ ಪ್ರತ್ಯೇಕ ಕರೆನ್ಸಿಯನ್ನು ಸ್ಥಾಪಿಸಬೇಕು ಎಂಬುದರ ಮೇಲೆ ಚರ್ಚೆ ನಡೆಸುವುದು ಆ ಶೃಂಗಸಭೆಯ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದು.

ಚೀನಾ ಪಾರಮ್ಯಕ್ಕೆ ಅವಕಾಶ

ಡಾಲರ್ ಅನ್ನು ಜಾಗತಿಕ ವ್ಯಾಪಾರ–ವಹಿವಾಟಿನಿಂದ ಹೊರಗಿಡುವುದು ಚೀನಾದ ಕರೆನ್ಸಿ ಯುವಾನ್‌ನ ಪಾರಮ್ಯಕ್ಕೆ ಕಾರಣವಾಗಬಹುದು. ಆ ಮೂಲಕ ಚೀನಾದ ಪಾರಮ್ಯಕ್ಕೂ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ತನ್ನ ಯುವಾನ್‌ ಮೂಲಕ ವ್ಯಾಪಾರ ನಡೆಸಬೇಕು ಎಂಬುದನ್ನು ಚೀನಾ ಅತ್ಯಂತ ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರುತ್ತಿದೆ. ಚೀನಾವು ರಷ್ಯಾ ಮತ್ತು ಮಲೇಷ್ಯಾ ಜತೆಗೆ ಈಗಾಗಲೇ ಈ ಸಂಬಂಧ ಒಮ್ಮತಕ್ಕೆ ಬಂದಿದೆ. 10ಕ್ಕೂ ಹೆಚ್ಚು ದೇಶಗಳ ಜತೆಗೆ ಯುವಾನ್‌ ಮೂಲಕ ವ್ಯಾಪಾರ ನಡೆಸುತ್ತಿದೆ. ಸೌದಿ ಅರೇಬಿಯಾವನ್ನೂ ಶಾಂಘೈ ಸಹಕಾರ ಒಕ್ಕೂಟಕ್ಕೆ ಸೇರಿಸಿಕೊಂಡಿದೆ. ಜತೆಗೆ ಯುವಾನ್‌ ಮೌಲ್ಯದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ಯುವಾನ್‌ ಮೀಸಲು ಭದ್ರತೆಯನ್ನು ಹೆಚ್ಚಿಸಲು ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿದೆ. ತನ್ನ ಪಾರಮ್ಯವನ್ನು ಸಾಧಿಸಲು ಈ ಅವಕಾಶವನ್ನು ಚೀನಾ ಬಳಸಿಕೊಳ್ಳುತ್ತಿರುವುದರ ಸೂಚನೆ ಇದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಡಾಲರ್‌ನ ಬದಲಿಗೆ ಯುವಾನ್‌ ಮೂಲಕ ವ್ಯಾಪಾರ ನಡೆಸುವ ಚೀನಾದ ಪ್ರಸ್ತಾವಕ್ಕೆ ರಷ್ಯಾ ಬೆಂಬಲ ಸೂಚಿಸಿದೆ. ಯುವಾನ್‌ ಮೂಲಕ ವಹಿವಾಟು ನಡೆಸಬೇಕು ಎಂದು ರಷ್ಯಾ ತನ್ನ ಮಿತ್ರ ರಾಷ್ಟ್ರಗಳಿಗೆ ಹೇಳಿದೆ. ಭಾರತದೊಂದಿಗೆ ರೂಪಾಯಿ–ರೂಬಲ್‌ ಮೂಲಕ ವಹಿವಾಟು ನಡೆಸುತ್ತಿದ್ದರೂ ಯುವಾನ್‌ ಮೂಲಕ ವಹಿವಾಟು ನಡೆಸೋಣ ಎಂದು ರಷ್ಯಾ ಈಚೆಗೆ ಭಾರತಕ್ಕೆ ಹೇಳಿದೆ. ಡಾಲರ್‌ಗೆ ಪರ್ಯಾಯ ಕರೆನ್ಸಿಯನ್ನು ಭಾರತವು ಬೆಂಬಲಿಸಿದರೆ, ಅದು ಚೀನಾದ ಈ ಯತ್ನಕ್ಕೆ ನೆರವಾಗಲಿದೆ. ಇದು ಭಾರತಕ್ಕೆ ಹಿನ್ನಡೆಯಾಗಬಹುದು ಎಂಬ ಆತಂಕವೂ ಇದೆ. ಹೀಗಾಗಿ ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾರತವು ಯಾವ ನಿಲುವನ್ನು ತೆಗೆದುಕೊಳ್ಳಲಿದೆ ಎಂಬುದು ಮಹತ್ವ ಪಡೆದಿದೆ.

ಪರಿಣಾಮಗಳೇನು...

* ಡಾಲರ್‌ ಅನ್ನು ಹೊರಗಿಟ್ಟು ತಮ್ಮದೇ ಕರೆನ್ಸಿ ಮೂಲಕ ವ್ಯಾಪಾರ ನಡೆಸುವುದರಿಂದ ಸರಕು ಮತ್ತು ಸೇವೆಗಳು ಕಡಿಮೆ ಬೆಲೆಗೆ ಲಭ್ಯವಾಗುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಮತ್ತು ಚಿನ್ನದ ಬೆಲೆಯನ್ನು ಡಾಲರ್‌ನಲ್ಲಿ ನಿಗದಿ ಮಾಡಲಾಗುತ್ತದೆ. ಡಾಲರ್‌ ಅನ್ನು ಹೊರಗಿಟ್ಟರೆ, ಈ ಸರಕುಗಳನ್ನು ಪೂರೈಸುವ ದೇಶಗಳು ತಮ್ಮದೇ ಕರೆನ್ಸಿಯಲ್ಲಿ ಬೆಲೆ ನಿಗದಿ ಮಾಡಬಹುದು. ಅಂತಹ ಸರಕುಗಳ ಬೆಲೆ ಕಡಿಮೆಯಾಗಬಹುದು. ಉದಾಹರಣೆಗೆ ರಷ್ಯಾವು ಕಚ್ಚಾತೈಲವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಗೆ ಪೂರೈಕೆ ಮಾಡುತ್ತಿದೆ

* ಡಾಲರ್‌ಗೆ ಬೇಡಿಕೆ ಕುಸಿಯುವುದರಿಂದ, ಅದರ ಮೌಲ್ಯವೂ ಕಡಿಮೆಯಾಗುತ್ತದೆ. ಆಗ ಡಾಲರ್ ಮೂಲಕ ಖರೀದಿಸಲಾಗುವ ಸರಕು ಮತ್ತು ಸೇವೆಗಳ ಬೆಲೆ ಕಡಿಮೆಯಾಗಲಿದೆ. ಇದರಿಂದ ಆ ದೇಶಗಳಲ್ಲಿ ಹಣದುಬ್ಬರ ಸ್ಥಿತಿ ನಿಯಂತ್ರಣಕ್ಕೆ ಬರಬಹುದು. ದೇಶಗಳು ಡಾಲರ್ ಮೂಲಕ ಪಡೆದಿರುವ ಸಾಲದ ಮರುಪಾವತಿಯ ಮೊತ್ತ ಕಡಿಮೆಯಾಗಲಿದೆ. ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ

* ಡಾಲರ್ ಪಾರಮ್ಯವು, ಜಾಗತಿಕ ಮಟ್ಟದಲ್ಲಿ ಅಮೆರಿಕದ ಪಾರಮ್ಯಕ್ಕೂ ಕಾರಣವಾಗಿದೆ. ಡಾಲರ್‌ನ ಪಾರಮ್ಯವನ್ನು ಸರಿಗಟ್ಟುವ ಮೂಲಕ, ಅಮೆರಿಕದ ಪಾರಮ್ಯವನ್ನೂ ಕಡಿಮೆ ಮಾಡಬಹುದು. ಇದು ಜಾಗತಿಕ ಶಕ್ತಿ ರಾಜಕಾರಣದ ಚಿತ್ರಣವನ್ನು ಬದಲಿಸಲಿದೆ. ಅಮೆರಿಕ ಮಾತ್ರವಲ್ಲದೆ, ಬೇರೆ ದೇಶಗಳೂ ನಿರ್ಣಾಯಕ ಸ್ಥಾನ ಪಡೆಯುವ ಅವಕಾಶವಿರುತ್ತದೆ

ಸವಾಲುಗಳು...

ಜಾಗತಿಕ ವ್ಯಾಪಾರ–ವಹಿವಾಟಿನಿಂದ ಅಮೆರಿಕದ ಡಾಲರ್ ಅನ್ನು ಹೊರಗಿಡುವುದರಲ್ಲಿ ಎಷ್ಟು ಅನುಕೂಲಗಳಿವೆಯೋ, ಅಷ್ಟೇ ಸವಾಲುಗಳೂ ಇವೆ. ಹೀಗಾಗಿಯೇ ಡಾಲರ್ ಅನ್ನು ಸರಿಗಟ್ಟುವ ಈ ಹಿಂದಿನ ಯತ್ನಗಳೆಲ್ಲವೂ ನಿರೀಕ್ಷಿತ ಪರಿಣಾಮಗಳನ್ನು ಬೀರಿಲ್ಲ ಅಥವಾ ಅಂತಹ ಯತ್ನಗಳೆಲ್ಲವೂ ವಿಫಲವಾಗಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

  • ಜಾಗತಿಕ ವ್ಯಾಪಾರ–ವಹಿವಾಟಿನಲ್ಲಿ ವಿನಿಮಯದ ಮೂಲವಾಗಿ ಅಮೆರಿಕದ ಡಾಲರ್ ಅನ್ನು ಹೆಚ್ಚು ಬಳಸಲಾಗುತ್ತಿದೆ. ಡಾಲರ್ ಈ ವಿಚಾರದಲ್ಲಿ ಹೆಚ್ಚು ವಿಶ್ವಾಸಾರ್ಹ ಮತ್ತು ಹೆಚ್ಚು ಸ್ಥಿರವಾದ ಕರೆನ್ಸಿಯಾಗಿದೆ. ಡಾಲರ್ ಗಳಿಸಿರುವ ಈ ವಿಶ್ವಾಸಾರ್ಹತೆ ಇರುವವರೆಗೂ ಅದರ ಸ್ಥಾನ ಭದ್ರವಾಗಿಯೇ ಇರಲಿದೆ. ಜಾಗತಿಕ ಮಟ್ಟದಲ್ಲಿ ಬೇರೆ ಕರೆನ್ಸಿಗಳಲ್ಲಿ ವಹಿವಾಟು ನಡೆಯುತ್ತಿದ್ದರೂ ಅವು ಡಾಲರ್‌ನ ಸ್ಥಾನಕ್ಕೆ ಏರಿಕೆಯಾಗಿಲ್ಲ. ಈಗ ವಿಶ್ವದ ಎಲ್ಲಾ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳಲ್ಲಿ ಇರುವ ಮೀಸಲು ಮೊತ್ತದಲ್ಲಿ ಡಾಲರ್ ಪ್ರಮಾಣ ಶೇ 59ರಷ್ಟು ಇದೆ. ಯೂರೊ ಪ್ರಮಾಣ ಶೇ 18ರಷ್ಟು ಇದ್ದರೆ, ಚೀನಾದ ಯುವಾನ್‌ ಮೀಸಲು ಪ್ರಮಾಣ ಶೇ 3ರಷ್ಟು ಮಾತ್ರ

  •  ಡಾಲರ್‌ ಹೊರಗಿಟ್ಟು ವ್ಯಾಪಾರ ವಹಿವಾಟು ನಡೆಸುವ ದೇಶಗಳು ಅಮೆರಿಕದ ನಿಷ್ಠುರಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಅಂತಹ ದೇಶಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಬಹುದು. ಆರ್ಥಿಕ ನೆರವು, ಸೇನಾ ನೆರವನ್ನು ಸ್ಥಗಿತಗೊಳಿಸಬಹುದು. ಅಂತಹ ಸ್ಥಿತಿಯನ್ನು ಸರಿಯಾಗಿ ಎದುರಿಸುವ ಸಮರ್ಥ ವ್ಯವಸ್ಥೆಯನ್ನು ಆಯಾ ದೇಶಗಳು ರೂಪಿಸಿಕೊಳ್ಳಬೇಕಾಗುತ್ತದೆ

  •  ಡಾಲರ್ ಅನ್ನು ಹೊರಗಿಟ್ಟರೆ ಬೇರೆ ಯಾವ ಕರೆನ್ಸಿಯಲ್ಲಿ ವಹಿವಾಟು ನಡೆಸಬೇಕು ಎಂಬ ಸವಾಲು ಎದುರಾಗುತ್ತದೆ. ಎರಡು ದೇಶಗಳು ತಮ್ಮ ಕರೆನ್ಸಿಗಳ ಮೌಲ್ಯವನ್ನು ಹೇಗೆ ನಿರ್ಧರಿಸಬೇಕು ಎಂಬುದಕ್ಕೆ ಒಂದು ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಒಂದು ದೇಶವು ತಾನು ವ್ಯಾಪಾರ ಸಂಬಂಧ ಇರಿಸಿಕೊಳ್ಳುವ ಎಲ್ಲಾ ದೇಶಗಳಿಗೂ ಇಂಥದ್ದೇ ಪ್ರತ್ಯೇಕ ಲೆಕ್ಕಾಚಾರ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ

  •  ತಮ್ಮ ಕರೆನ್ಸಿಯಲ್ಲಿ ವ್ಯಾಪಾರ ನಡೆಸದೇ ಇದ್ದರೆ, ಡಾಲರ್‌ನಂತೆ ಮತ್ತೊಂದು ಕರೆನ್ಸಿಯನ್ನು ಹೊಸದಾಗಿ ಚಲಾವಣೆಗೆ ತರಬೇಕಾಗುತ್ತದೆ ಅಥವಾ ಬೇರೆ ಯಾವುದೋ ಒಂದು ದೇಶದ ಕರೆನ್ಸಿಯನ್ನು ವಿನಿಮಯದ ಮೂಲವಾಗಿ ಬಳಸಬೇಕಾಗುತ್ತದೆ. ಅಮೆರಿಕವು ಡಾಲರ್‌ಗೆ ಸರಿಸಮನಾದ ಚಿನ್ನದ ಮೀಸಲು ಮತ್ತು ಡಾಲರ್ ಬಾಂಡ್‌ಗಳನ್ನು ಹೊಂದಿದೆ. ಹೀಗಾಗಿ ಡಾಲರ್‌ ಮೀಸಲಿನ ಬದಲಿಗೆ ಚಿನ್ನವನ್ನು ಅಥವಾ ಇತರೆ ಸ್ವತ್ತನ್ನು ಒದಗಿಸಲು ಶಕ್ತವಾಗಿದೆ. ಬೇರೊಂದು ದೇಶದ ಕರೆನ್ಸಿಯನ್ನು ಡಾಲರ್‌ನಂತೆ ವಿನಿಮಯದ ಮೂಲವಾಗಿ ಬಳಸುವುದಾದರೆ, ಆ ಕರೆನ್ಸಿಯ ಮೌಲ್ಯಕ್ಕೆ ಸಮನಾದ ಚಿನ್ನ ಅಥವಾ ಇತರೆ ಸ್ವತ್ತನ್ನು ಮೀಸಲಾಗಿ ಇಡಬೇಕಾಗುತ್ತದೆ. ಡಾಲರ್ ಹೊಂದಿರುವಷ್ಟು ಚಿನ್ನದ ಮೀಸಲು ಭದ್ರತೆಯನ್ನು ವಿಶ್ವದ ಬೇರೆ ಯಾವುದೇ ದೇಶದ ಕರೆನ್ಸಿಯೂ ಹೊಂದಿಲ್ಲ.

ಆಧಾರ: ರಾಯಿಟರ್ಸ್‌, ಎಎಫ್‌ಪಿ ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT