ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ರಾಷ್ಟ್ರ ರಾಜಧಾನಿ ಮಾಲಿನ್ಯದ ಕೂಪ

Last Updated 15 ನವೆಂಬರ್ 2021, 21:15 IST
ಅಕ್ಷರ ಗಾತ್ರ

ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದ (ಎನ್‌ಸಿಆರ್‌) ವ್ಯಾಪ್ತಿಯಲ್ಲಿ ಬರುವ ನಗರಗಳಲ್ಲಿ ಸತತ ಎರಡನೇ ದಿನವೂ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯುಐ) ‘ಅತ್ಯಂತ ಕಳಪೆ’ ಮಟ್ಟದಲ್ಲಿದೆ. ಪ್ರತೀ ವರ್ಷ ಚಳಿಗಾಲದಲ್ಲಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದ ವಾಯು ಗುಣಮಟ್ಟ ಹದಗೆಡುತ್ತದೆ. ಹಲವು ಬಾರಿ ಇದು ಅಪಾಯಕಾರಿ ಮಟ್ಟಕ್ಕೂ ಕುಸಿದಿತ್ತು. ಪ್ರತಿ ವರ್ಷ ಚಳಿಗಾಲ ಆರಂಭವಾಗಿ ಕೆಲವು ವಾರಗಳ ನಂತರ ಈ ಪರಿಸ್ಥಿತಿ ಎದುರಾಗುತ್ತಿತ್ತು. ಆದರೆ ಈ ಬಾರಿ ಚಳಿಗಾಲದ ಆರಂಭದಲ್ಲಿಯೇ ಗಾಳಿಯ ಗುಣಮಟ್ಟ ಕುಸಿಯಲು ಆರಂಭಿಸಿದೆ.

ದೆಹಲಿ ಮತ್ತು ದೆಹಲಿ ಸುತ್ತಲಿನ ಗಾಜಿಯಾಬಾದ್, ಗ್ರೇಟರ್ ನೋಯ್ಡಾ, ನೋಯ್ಡಾ ಮತ್ತು ಗುರುಗ್ರಾಮದಲ್ಲಿ ಈಗ ಗಾಳಿ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಸೋಮವಾರ ಬೆಳಿಗ್ಗೆ 9.05ರ ವೇಳೆಯಲ್ಲಿ, ಈ ಎಲ್ಲಾ ನಗರಗಳಲ್ಲಿ 2.5 ಮೈಕ್ರಾನ್‌ನ ಮಾಲಿನ್ಯಕಾರಕ ಕಣಗಳ ಸಂಖ್ಯೆ (ಪಿಎಂ 2.5) 300–400ರಷ್ಟು ದಾಖಲಾಗಿದೆ. ಪ್ರತಿ ಘನ ಮೀಟರ್‌ ಗಾಳಿಯಲ್ಲಿ ಪಿಎಂ 2.5 ಕಣಗಳ ಸಂಖ್ಯೆ 50ಕ್ಕಿಂತ ಕಡಿಮೆ ಇದ್ದರಷ್ಟೇ ಅದು ಉಸಿರಾಡಲು ಯೋಗ್ಯ. ಈ ಸಂಖ್ಯೆ ಹೆಚ್ಚಾದಷ್ಟೂ ಗಾಳಿಯ ಗುಣಮಟ್ಟ ಕುಸಿಯುತ್ತದೆ.

ಪಿಎಂ 2.5 ಕಣಗಳು ಅತ್ಯಂತ ಸೂಕ್ಷ್ಮವಾಗಿರುವ ಕಾರಣ ಅವು ಗಾಳಿಯಲ್ಲೇ ತೇಲುತ್ತಿರುತ್ತವೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಅವು ನೆಲಮಟ್ಟದಿಂದ ಹೆಚ್ಚು ಮೇಲಕ್ಕೆ ಹೋಗಿರುತ್ತವೆ. ಮಳೆಗಾಲದಲ್ಲಿ, ಮಳೆಹನಿಗಳ ಜತೆಗೆ ನೆಲ ಸೇರುತ್ತವೆ. ಆದರೆ ಚಳಿಗಾಲದಲ್ಲಿ ನೆಲದಿಂದ 5–100 ಅಡಿ ಎತ್ತರದಲ್ಲಿಯೇ ಉಳಿಯುತ್ತವೆ. ಚಳಿಗಾಲದ ಆರಂಭದಲ್ಲಿ ಈ ಪ್ರದೇಶದ ಉಷ್ಣಾಂಶವು 10 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗುತ್ತದೆ. ಉಷ್ಣಾಂಶ ಕಡಿಮೆಯಾಗುವ ಕಾರಣ, ಈ ಪ್ರದೇಶಗಳಲ್ಲಿ ಮಂಜಿನ ವಾತಾವರಣ ಉಂಟಾಗುತ್ತದೆ. ಮಂಜಿನ ಕಣಗಳ ಜತೆಗೆ ಪಿಎಂ 2.5 ಕಣಗಳು ಸೇರಿಕೊಂಡು, ಅವು ನೆಲದಿಂದ ಕೆಲವೇ ಅಡಿ ಎತ್ತರದಲ್ಲಿ ಉಳಿಯುತ್ತದೆ. ಇದರಿಂದ ಹೊಂಜು (ಸ್ಮಾಗ್) ಉಂಟಾಗುತ್ತದೆ.

ಇವು ಅತ್ಯಂತ ಸೂಕ್ಷ್ಮ ಕಣಗಳಾಗಿರುವ ಕಾರಣ ಉಸಿರಾಟದ ವೇಳೆ ಸುಲಭವಾಗಿ ಮನುಷ್ಯನ ಶ್ವಾಸಕೋಶವನ್ನು ಸೇರುತ್ತವೆ. ಆ ಮೂಲಕ ಉಸಿರಾಟದ ಗಂಭೀರ ಸಮಸ್ಯೆಯನ್ನು ಉಂಟು ಮಾಡುತ್ತವೆ. ಹೀಗಾಗಿಯೇ ಈ ಪರಿಸ್ಥಿತಿಯನ್ನು ಅತ್ಯಂತ ಕಳಪೆ ಗುಣಮಟ್ಟದ ಗಾಳಿ ಎಂದು ವರ್ಗೀಕರಿಸಲಾಗಿದೆ. ‘ಪ್ರತಿ ಘನಮೀಟರ್‌ ಗಾಳಿಯಲ್ಲಿ ಪಿಎಂ 2.5 ಕಣಗಳ ಸಂಖ್ಯೆ 300–400ರಷ್ಟು ಇದ್ದರೆ, ಒಬ್ಬ ಮನುಷ್ಯ ಒಂದು ದಿನದಲ್ಲಿ 20 ಸಿಗರೇಟುಗಳನ್ನು ಸೇದಿದಾಗ ಸೇವಿಸುವಷ್ಟೇ ವಿಷಗಾಳಿ ಆತನ ಶ್ವಾಸಕೋಶ ಸೇರುತ್ತದೆ’ ಎಂದು ದೆಹಲಿ ಸರ್ಕಾರ, ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡಿತ್ತು.

‘ಕೃಷಿ ತ್ಯಾಜ್ಯ ದಹನವೇ ಕಾರಣವಲ್ಲ’

ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಕೃಷಿತ್ಯಾಜ್ಯವನ್ನು ಸುಡುವುದರಿಂದಲೇ ದೆಹಲಿಯಲ್ಲಿ ಪ್ರತೀ ಚಳಿಗಾಲದಲ್ಲೂ ಗಾಳಿಯ ಗುಣಮಟ್ಟ ಕುಸಿಯುತ್ತದೆ ಎಂದು ಎಎಪಿ ಸರ್ಕಾರವು ಹಲವು ವರ್ಷಗಳಿಂದ ಆರೋಪಿಸುತ್ತಲೇ ಇದೆ. ‌

ಆದರೆ ಈಗ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿಯಲು ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವುದು ಪ್ರಮುಖ ಕಾರಣವೇ ಅಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರವು ಪ್ರಮಾಣಪತ್ರ ಸಲ್ಲಿಸಿದೆ. ‘ದೆಹಲಿಯಲ್ಲಿನ ವಾಯುಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವುದರಿಂದ ಆಗುವ ಹೊಗೆಯ ಕೊಡುಗೆ ಶೇ 4ರಷ್ಟು ಮಾತ್ರ’ ಎಂದು ಕೇಂದ್ರ ಸರ್ಕಾರವು ಹೇಳಿದೆ.

ನಿಯಂತ್ರಣ ಕ್ರಮಗಳು

* ದೆಹಲಿಯಲ್ಲಿ ಭೌತಿಕ ಸ್ವರೂಪದ ಶಾಲಾ ತರಗತಿಗಳನ್ನು ಸ್ಥಗಿತಗೊಳಿಸಿದ ಸರ್ಕಾರ. ಈ ಅವಧಿಯಲ್ಲಿ ಆನ್‌ಲೈನ್ ತರಗತಿ ನಡೆಸಲು ಸೂಚನೆ

* ನವೆಂಬರ್ 14ರಿಂದ 17ರವರೆಗೆ ದೆಹಲಿಯಲ್ಲಿ ಎಲ್ಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ನಿಷೇಧ

* ದೆಹಲಿಯ ಎಲ್ಲ ಸರ್ಕಾರಿ ಕಚೇರಿಗಳನ್ನು ವಾರದ ಮಟ್ಟಿಗೆ ಬಂದ್ ಮಾಡಲಾಗಿದೆ. ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸರ್ಕಾರ ಸೂಚಿಸಿದೆ. ಇದನ್ನೇ ಅನುಸರಿಸುವಂತೆ ಖಾಸಗಿ ಕಚೇರಿಗಳಿಗೂ ಸೂಚನೆ ನೀಡಲಾಗಿದೆ

* ಜನರು ಹೊರಗಡೆ ಸುತ್ತಾಡುವುದನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದೆ

*ವಾಹನಗಳ ಬಳಕೆಯನ್ನು ಶೇ 30ರಷ್ಟು ಕಡಿತಗೊಳಿಸುವಂತೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ‌ಸೂಚನೆ

* ವಾಹನ ಸವಾರರು ‘ಮಾಲಿನ್ಯ ಪ್ರಮಾಣ ನಿಯಂತ್ರಣದಲ್ಲಿದೆ’ ಎಂಬುದನ್ನು ದೃಢೀಕರಿಸುವ ಪ್ರಮಾಣಪತ್ರಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಲುದೆಹಲಿಯ 170 ಸ್ಥಳಗಳಲ್ಲಿ ಸಂಚಾರ ಪೊಲೀಸರ ತಂಡಗಳನ್ನು ನಿಯೋಜಿಸಲಾಗಿದೆ

* ದೂಳು ಏಳದಂತೆ ನಿಯಂತ್ರಿಸಲು ರಸ್ತೆಯ ಮೇಲೆ ನೀರು ಚುಮುಕಿಸಲು 114 ವಾಹನಗಳನ್ನು ದೆಹಲಿ ಸರ್ಕಾರ ನಿಯೋಜಿಸಿದೆ

* ಅಗತ್ಯಬಿದ್ದರೆ, ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿಗೊಳಿಸಲು ಸಿದ್ಧ ಎಂದು ದೆಹಲಿ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ

*ದೆಹಲಿ ಸರ್ಕಾರದ ಕ್ರಮಗಳನ್ನೇ ಹರಿಯಾಣ, ಪಂಜಾಬ್ ಸರ್ಕಾರಗಳು ತೆಗೆದುಕೊಂಡಿವೆ

ವಿವಿಧ ನಗರಗಳಲ್ಲಿ ವಿನೂತನ ಕ್ರಮಗಳು

ಗಾಳಿಯ ಗುಣಮಟ್ಟ ಕುಸಿಯುವುದು ಜಗತ್ತಿನ ಎಲ್ಲ ನಗರಗಳ ಸಮಸ್ಯೆಯೂ ಹೌದು. ಹಲವು ಪ್ರಮುಖ ನಗರಗಳು ವಿನೂತನ ಕ್ರಮಗಳ ಮೂಲಕ ವಾಯುಮಾಲಿನ್ಯವನ್ನು ನಿಯಂತ್ರಣದಲ್ಲಿ ಇರಿಸಲು ಯತ್ನಿಸಿವೆ.

ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ ನಗರದೊಳಗೆಹೆಚ್ಚು ಮಾಲಿನ್ಯಕ್ಕೆ ಕಾರಣವಾಗುವಂಥ ವಾಹನಗಳು ಪ್ರವೇಶಿಸಲು ಅವಕಾಶ ಇಲ್ಲ. ಸಿನ್‌ ನದಿಯ ತೀರದ ಮಾರ್ಗದಲ್ಲಿ ಕಾರುಗಳ ಓಡಾಟ ನಿಷೇಧಿಸಲಾಗಿದೆ. ರಸ್ತೆ ಬದಿಯಲ್ಲಿ ಮರಗಳನ್ನು ಬೆಳೆಸಲಾಗಿದೆ ಮತ್ತು ಪಾದಚಾರಿಗಳಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ. ನಗರದಲ್ಲಿ ಸೈಕಲ್ ಮಾರ್ಗಗಳ ಜಾಲವನ್ನು ವಿಸ್ತರಿಸಲು ಒತ್ತು ನೀಡಲಾಗಿದೆ. ‌ಇಡೀ ಪ್ಯಾರಿಸ್‌ ನಗರವನ್ನು ಪಾದಚಾರಿ ಸ್ನೇಹಿ ನಗರವಾಗಿ ರೂಪಿಸುವ ಗುರಿಯನ್ನು ಇಲ್ಲಿಯ ಮೇಯರ್‌ ಹೊಂದಿದ್ದಾರೆ.

ದಕ್ಷಿಣ ಕೊರಿಯಾದ ಸೋಲ್‌ ನಗರದ ಕೈಗಾರಿಕೆಗಳ ಆವರಣಗಳಲ್ಲಿ ವಾಯು ಗುಣಮಟ್ಟ ಪರೀಕ್ಷಿಸಲು ರೊಬೋಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜನರಿಗೆ ಪ್ರತಿ ಕ್ಷಣದ ವಾಯು ಗುಣಮಟ್ಟದ ಮಾಹಿತಿ ನೀಡಲು ಉಪಗ್ರಹ ಆಧಾರಿತ ವ್ಯವಸ್ಥೆಯನ್ನೂ ರೂಪಿಸಲಾಗಿದೆ.

ನ್ಯೂಯಾರ್ಕ್‌ ನಗರದ ಮ್ಯಾನ್‌ಹಟನ್‌ ಪ್ರದೇಶದಲ್ಲಿ ಚಾಲಕರಿಗೆ ವಾಹನ ದಟ್ಟಣೆ ಶುಲ್ಕ ವಿಧಿಸಲಾಗುತ್ತಿದೆ. ಕಾರುಗಳ ಬಳಕೆ ಕಡಿಮೆ ಮಾಡುವ ಸಲುವಾಗಿ ನಗರದ ಮಧ್ಯಭಾಗದ ಚೆಕ್‌ಪಾಯಿಂಟ್‌ಗಳನ್ನು ಪ್ರವೇಶಿಸುವ ಕಾರುಗಳಿಗೆ 10ರಿಂದ 15 ಡಾಲರ್‌ ಶುಲ್ಕ ವಿಧಿಸಲಾಗುತ್ತದೆ. ನವೀಕರಿಸಬಹುದಾದ ಮೂಲಗಳಿಂದ ಇಂಧನ ಉತ್ಪಾದನೆಗೆ ₹10,420 ಕೋಟಿಯನ್ನು ನ್ಯೂಯಾರ್ಕ್‌ ಗವರ್ನರ್‌ ಮಂಜೂರು ಮಾಡಿದ್ದಾರೆ. 2022ರ ವೇಳೆಗೆ ಈ ಎಲ್ಲಾ ಯೋಜನೆಗಳು ಜಾರಿಗೆ ಬರಲಿವೆ. ಇದರಿಂದ 16 ಲಕ್ಷ ಮೆಟ್ರಿಕ್‌ ಟನ್‌ ಇಂಗಾಲ ಹೊರಸೂಸುವಿಕೆ ತಗ್ಗುತ್ತದೆ ಎಂದು ಅಂದಾಜಿಸಲಾಗಿದೆ.

ಕೊಲಂಬಿಯಾದ ಬೊಗೊಟ ನಗರ ತನ್ನ 80 ಲಕ್ಷ ನಾಗರಿಕರಿಗಾಗಿ ವಿದ್ಯುತ್‌ ಚಾಲಿತ ಮೆಟ್ರೊ ರೈಲು ಸಂಪರ್ಕ ಒದಗಿಸಲಿದೆ. 550 ಕಿ.ಮೀ. ಸೈಕಲ್ ಮಾರ್ಗಕ್ಕೆ ಇನ್ನೂ 60 ಕಿ.ಮೀ. ಸೈಕಲ್‌ ಮಾರ್ಗ ಜೋಡಿಸುವ ಯೋಜನೆ ಹಾಕಿಕೊಂಡಿದೆ.

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT