ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕೇಂದ್ರದ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪದ ಸುತ್ತ...

Published 24 ಮಾರ್ಚ್ 2024, 20:59 IST
Last Updated 24 ಮಾರ್ಚ್ 2024, 20:59 IST
ಅಕ್ಷರ ಗಾತ್ರ

ಕೇಂದ್ರದ ಬಿಜೆಪಿ ಸರ್ಕಾರವು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳಂಥ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪವಿದೆ. ಅದನ್ನು ಪುಷ್ಟೀಕರಿಸುವಂತೆ ಈ ಸಂಸ್ಥೆಗಳು ಬಿಜೆಪಿ ಅಧಿಕಾರದ ಅವಧಿಯಲ್ಲಿ ಹೆಚ್ಚು ಕ್ರಮ ತೆಗೆದುಕೊಂಡಿದ್ದು ವಿರೋಧ ಪಕ್ಷಗಳ ನಾಯಕರ ವಿರುದ್ಧವೇ. ಬಿಜೆಪಿಯನ್ನು ಚುನಾವಣೆಯಲ್ಲಿ ಎದುರಿಸಲು ವಿರೋಧ ಪಕ್ಷಗಳು ‘ಇಂಡಿಯಾ’ ಒಕ್ಕೂಟ ರಚಿಸಿಕೊಳ್ಳಲು ಇದೂ ಒಂದು ಕಾರಣ.

‘ವಿರೋಧ ಪಕ್ಷಗಳ ನಾಯಕರ ಮೇಲೆ ಕಿರುಕುಳ ಎಸಗಲು ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐ ಅನ್ನು ಕೇಂದ್ರ ಸರ್ಕಾರವು ಬಳಸಿಕೊಳ್ಳುತ್ತಿದೆ’– ಕೇಂದ್ರದಲ್ಲಿ ಬಿಜೆಪಿ ನೇತೃತ್ವದ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಸರ್ಕಾರವು 2014ರಲ್ಲಿ ರಚನೆಗೊಂಡ ಬಳಿಕ ಪದೇ ಪದೇ ಕೇಳಿಬರುತ್ತಿರುವ ಆರೋಪವಿದು. ವಿರೋಧ ಪಕ್ಷಗಳ ನಾಯಕರು, ಹೋರಾಟಗಾರರು ಹೀಗೆ ಎಲ್ಲರೂ ಇದೇ ವಾದವನ್ನು ಕಳೆದ ಸುಮಾರು 10 ವರ್ಷಗಳಿಂದ ಮಂಡಿಸುತ್ತಲೇ ಬಂದಿದ್ದಾರೆ. ಇದೇ ವಿಚಾರವಾಗಿ 14 ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲನ್ನೂ ಏರಿವೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಹಾಗೂ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಮುಖ್ಯವಾಗಿ ಕಾರ್ಯ ನಿರ್ವಹಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಎನ್‌ಜಿಒಗಳ ಮೇಲೆ, ಸಂಘ–ಸಂಸ್ಥೆಗಳ ಮೇಲೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಇ.ಡಿ. ಅಧಿಕಾರಿಗಳು ಪ್ರಕರಣ ದಾಖಲಿಸುತ್ತಾರೆ. ರಾಜಕೀಯ ನಾಯಕರ ಮೇಲೆ ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ‌

‘ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧವೇ ಹೆಚ್ಚಿನ ಅಂದರೆ, ಶೇ 95ರಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು 14 ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ 2023ರಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಹೇಳಿವೆ. ವಿವಿಧ ಮಾಧ್ಯಮ ಸಂಸ್ಥೆಗಳು ಕೂಡ ಇದೇ ಅಂಕಿ ಅಂಶವನ್ನೇ ವರದಿ ಮಾಡಿವೆ. ‘2014ರಿಂದ ಇಲ್ಲಿಯವರೆಗೆ ಇ.ಡಿ. ಅಧಿಕಾರಿಗಳು ವಿರೋಧ ಪಕ್ಷಗಳ 150 ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ’ ಎಂದು ರಾಯಿಟರ್ಸ್‌ ವರದಿ ಮಾಡಿದೆ.

14 ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹಲವು ವಿಚಾರಗಳನ್ನು ಅಂಕಿ–ಅಂಶದ ಮೂಲಕ ಪ್ರಸ್ತಾಪಿಸಿವೆ. 2014ಕ್ಕೂ ಮೊದಲು ಶೇ 93ರಷ್ಟು ದಾಳಿಗಳು ವ್ಯಕ್ತಿಗಳು ನೀಡಿದ ದೂರಿನ ಅನ್ವಯ ನಡೆಯುತ್ತಿದ್ದವು. ಈಗ ಈ ಪ್ರಮಾಣ ಶೇ 29ಕ್ಕೆ ಕುಸಿದಿದೆ. ಹಾಗಿದ್ದರೆ, ಅಧಿಕಾರಿಗಳು ಈಗ ಯಾವ ಆಧಾರದಲ್ಲಿ ದಾಳಿ ನಡೆಸುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡದೇ ಇರದು. 2004ರಿಂದ 2014ರವರೆಗೆ 72 ರಾಜಕೀಯ ನಾಯಕರ ಮೇಲೆ ಸಿಬಿಐ ತನಿಖೆ ನಡೆಸಿದೆ. ಈ ಸಂಖ್ಯೆಯಲ್ಲಿ ವಿರೋಧ ಪಕ್ಷಗಳ ನಾಯಕರ ಸಂಖ್ಯೆ 43, ಅಂದರೆ ಶೇ 60ರಷ್ಟು. ಆದರೆ, ಈಗ ಈ ಪ್ರಮಾಣ ಶೇ 95ಕ್ಕೆ ಏರಿಕೆಯಾಗಿದೆ’ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

ದಾಳಿಗೂ ಉಂಟು ‘ಸೂಕ್ತ’ ಸಮಯ: ಜಾರಿ ನಿರ್ದೇಶನಾಲಯ ಅಧಿಕಾರಿಗಳು ‘ಸೂಕ್ತ ಸಮಯ’ದಲ್ಲಿ ದಾಳಿ ನಡೆಸುತ್ತಾರೆ ಎಂದು ವಿರೋಧ ಪಕ್ಷಗಳು ದೂರುತ್ತವೆ. ವಿಧಾನಸಭೆ ಚುನಾವಣೆ ಅಥವಾ ಲೋಕಸಭೆ ಚುನಾವಣೆ ನಡೆಯುವ ಹಿಂದೆ–ಮುಂದೆ ಇಂಥ ದಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತವೆ. ಇದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನವೇ ಪುರಾವೆ ಎಂದೂ ಹೇಳುತ್ತವೆ ಪಕ್ಷಗಳು. 

ಈಗ ಜಾರಿ ನಿರ್ದೇಶನಾಲಯದ ಮೇಲೆ ಇನ್ನೊಂದು ಗಂಭೀರ ಆರೋಪ ಕೇಳಿಬರುತ್ತಿವೆ. ಕೇಂದ್ರ ಸರ್ಕಾರವು ಈ ವಿಭಾಗವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ನಾಯಕರ ಆರೋಪಕ್ಕೆ ಸಾಕ್ಷ್ಯ ಒದಗಿಸುವಂತೆ ಚುನಾವಣಾ ಬಾಂಡ್‌ನ ವಿವರಗಳು ಬಹಿರಂಗಗೊಂಡಿವೆ. ‘ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ ಬಳಿಕ, ಹಲವು ಕಂಪನಿಗಳು ದೊಡ್ಡ ದೊಡ್ಡ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, ಬಿಜೆಪಿಗೆ ನೀಡಿವೆ’ ಎಂದು ಇತ್ತೀಚೆಗೆ ವಕೀಲ ಪ್ರಶಾಂತ್ ಭೂಷಣ್‌ ಅವರು ಆರೋಪಿಸಿದ್ದರು.

ಪ್ರಕರಣಗಳ ಸಂಖ್ಯೆ ಏರಿಕೆ: ಶಿಕ್ಷೆ ಪ್ರಮಾಣ ಬೆರಳೆಣಿಕೆ

ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಜಾರಿ ನಿರ್ದೇಶನಾಲಯಕ್ಕೆ ಹೆಚ್ಚು ‘ಶಕ್ತಿ’ ತುಂಬಲಾಯಿತು. 2014ರ ಬಳಿಕ ಇ.ಡಿ ಅಧಿಕಾರಿಗಳು ದಾಖಲಿಸುತ್ತಿದ್ದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಸಂಸತ್ತಿಗೆ ನೀಡಿದ ಮಾಹಿತಿ ಪ್ರಕಾರ, ಹಣ ಅಕ್ರಮ ವರ್ಗಾವಣೆ ಕಾಯ್ದೆ ಜಾರಿಯಾದ ಬಳಿಕ, ಅಂದರೆ, 2005ರಿಂದ 2023ರವರೆಗೆ 6,349 ಪ್ರಕರಣಗಳು ದಾಖಲಾಗಿವೆ. ಈ 18 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 10 ವರ್ಷಗಳ ಅವಧಿಯಲ್ಲಿಯೇ 4,504 ಪ್ರಕರಣಗಳು ದಾಖಲಾಗಿವೆ. 2005ರಿಂದ 2014ಕ್ಕೂ ಮೊದಲು, ಅಂದರೆ, ಕಾಯ್ದೆ ಜಾರಿಯಾದ 8 ವರ್ಷಗಳಲ್ಲಿ ದಾಖಲಾದ ಪ್ರಕರಣ ಸಂಖ್ಯೆ 1,845 ಮಾತ್ರ. ಅಂದರೆ, ಕಳೆದ 10 ವರ್ಷಗಳಲ್ಲಿ ಇ.ಡಿ. ದಾಖಲಿಸುತ್ತಿರುವ ಪ್ರಕರಣಗಳ ಸಂಖ್ಯೆ ಸುಮಾರು ಶೇ 144ರಷ್ಟು ಏರಿಕೆಯಾಗಿದೆ.

ಆದರೆ, ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕಳೆದ ಐದು ವರ್ಷಗಳಲ್ಲಿ (2018–19ರಿಂದ 2022–23) ಕೇವಲ 32 ಮಂದಿ ಶಿಕ್ಷೆಗೆ ಒಳಗಾಗಿದ್ದಾರೆ. ಇದೇ ಅವಧಿಯಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ 354. ಆದರೆ, ಈ ಅವಧಿಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ ಮಾತ್ರ 3,867.

‘ಸಿಬಿಐ ಈಗಲೂ ಪಂಜರದ ಗಿಳಿ’

ಸಿಬಿಐ ‘ಪಂಜರದ ಗಿಳಿ’ ಮತ್ತು ‘ತನ್ನ ಯಜಮಾನನ ದನಿಯಲ್ಲೇ ಮಾತನಾಡುವ ಸಂಸ್ಥೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರು 2013ರಲ್ಲಿ ಹೇಳಿದ್ದರು. ಕಲ್ಲಿದ್ದಲು ಹಗರಣದಲ್ಲಿ ತನಿಖಾ ವರದಿಯನ್ನು ಬದಲಿಸಿದ್ದರ ಬಗ್ಗೆ ಸುಪ್ರೀಂ ಕೋರ್ಟ್‌ ಮಾಡಿದ್ದ ಕಟುಟೀಕೆ ಇದಾಗಿತ್ತು. ಸೆಂಟ್ರಲ್‌ ಬ್ಯೂರೊ ಆಫ್ ಇನ್ವೆಸ್ಟಿಗೇಷನ್‌ ಎಂಬುದನ್ನು ಕಾಂಗ್ರೆಸ್‌ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್‌ ಎಂದೂ ಲೇವಡಿ ಮಾಡುವ ಕಾಲವೊಂದಿತ್ತು. ಈಗ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸಹ ತನ್ನ ವಿರೋಧಿಗಳನ್ನು ಹತ್ತಿಕ್ಕಲು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳಿವೆ.

2014ರ ನಂತರ ಸಿಬಿಐ ವಿರೋಧಿ ಪಾಳಯದ ನಾಯಕರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲ್ಲು ಹಗರಣ, ಶಾಲಾ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣಗಳನ್ನು ಸಿಬಿಐ ದಾಖಲಿಸಿಕೊಂಡಿದೆ. ಯುಪಿಎ ಅವಧಿಯ 2ಜಿ ಹಗರಣದಲ್ಲಿ ಖುಲಾಸೆಯಾಗಿದ್ದ ಡಿಎಂಕೆ ನಾಯಕರ ವಿರುದ್ಧ ಮತ್ತೆ ತನಿಖೆಗೆ ಅನುಮತಿ ಕೋರಿದೆ. ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳದ ಹಲವು ನಾಯಕರ ವಿರುದ್ಧ, ಅದು ಎನ್‌ಡಿಎ ಮೈತ್ರಿಕೂಟ ತೊರೆದ ನಂತರ ಸಿಬಿಐ ಪ್ರಕರಣಗಳನ್ನು ದಾಖಲಿಸಿದೆ. ಕರ್ನಾಟಕ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ವಿರುದ್ಧವೂ ಸಿಬಿಐನಲ್ಲಿ ಪ್ರಕರಣವಿದೆ. ಆದರೆ ಈ ಅವಧಿಯಲ್ಲಿ ಸಿಬಿಐ ತನಿಖೆಗೆ ಒಳಪಟ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಬಿಜೆಪಿಯ ಒಬ್ಬರೂ ಸಿಗುವುದಿಲ್ಲ. ಬಿಜೆಪಿ ನಾಯಕರ ವಿರುದ್ಧ 2014ಕ್ಕೂ ಮುನ್ನ ದಾಖಲಾಗಿದ್ದ ಪ್ರಕರಣಗಳಲ್ಲಿ ತನಿಖೆ ಸ್ಥಗಿತವಾಗಿದೆ ಅಥವಾ ತನಿಖೆಯಲ್ಲಿ ಯಾವುದೇ ಪ್ರಗತಿ ಇಲ್ಲ. ಇದನ್ನೇ ವಿರೋಧ ಪಕ್ಷಗಳು ಬಿಜೆಪಿಯತ್ತ ಬೊಟ್ಟುಮಾಡಿ ತೋರಿಸುತ್ತಿವೆ.

ಸಿಬಿಐ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಜಟಾಪಟಿಗೂ ಕಾರಣವಾಗಿದೆ. ಸಿಬಿಐನ ವ್ಯಾಪ್ತಿ ದೆಹಲಿಗೆ ಮಾತ್ರ ಸೀಮಿತವಾಗಿರುವ ಕಾರಣ, ಹೊರ ರಾಜ್ಯಗಳಲ್ಲಿ ತನಿಖೆ ನಡೆಸಲು ಮತ್ತು ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳ ಅನುಮತಿ ಪಡೆದುಕೊಳ್ಳಬೇಕು. ಕೇಂದ್ರ ಸರ್ಕಾರವು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳ ರಾಜ್ಯ ಸರ್ಕಾರಗಳು ಅಂತಹ ಅನುಮತಿಯನ್ನು ವಾಪಸ್‌ ಪಡೆದುಕೊಂಡಿವೆ.

ಆದಾಯ ತೆರಿಗೆ ಇಲಾಖೆಗೂ ಮಸಿ

ಕೇಂದ್ರ ಸರ್ಕಾರವು ಆದಾಯ ತೆರಿಗೆ ಇಲಾಖೆಯನ್ನೂ ದುರ್ಬಳಕೆ ಮಾಡಿಕೊಂಡು, ವಿರೋಧ ಪಕ್ಷಗಳ ನಾಯಕರನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂಬ ಆರೋಪವೂ ಇದೆ. ಈ ಆರೋಪಕ್ಕೆ ಪೂರಕ ಎಂಬಂತೆಯೇ ಮಹಾಲೇಖಪಾಲರು
(ಸಿಎಜಿ) ವರದಿ ನೀಡಿದ್ದರು.

‘ತನಗೆ ಬಂದ ದೂರನ್ನು ಪರಿಶೀಲಿಸುವ ಗೋಜಿಗೆ ಹೋಗದೆಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಮತ್ತು ಶೋಧ ಕಾರ್ಯ ನಡೆಸಿದ್ದಾರೆ. ಶೋಧ ಕಾರ್ಯ ನಡೆಸಿದಾಗ ಪತ್ತೆಯಾದ ಹಣ/ಸಂಪತ್ತನ್ನು ತೆರಿಗೆ ವ್ಯಾಪ್ತಿಗೆ ತಂದರೆ, ಬರಬಹುದಾದ ತೆರಿಗೆಯನ್ನು ಅಂದಾಜಿಸಲಾಗುತ್ತದೆ. 2014-15ರಿಂದ 2017-18ರ ಅವಧಿಯಲ್ಲಿ ದೇಶದಲ್ಲಿ ಹೀಗೆ ಶೋಧ ಕಾರ್ಯ ನಡೆಸಿ, ಅಂದಾಜಿಸಲಾದ ತೆರಿಗೆ ಹಣದಲ್ಲಿ ಶೇ 75ಕ್ಕೂ ಹೆಚ್ಚು ಮೊತ್ತವು ತೆರಿಗೆ ವ್ಯಾಪ್ತಿಗೆ ಬರುವುದೇ ಇಲ್ಲ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶೋಧಕಾರ್ಯದ ನಂತರ ತೆರಿಗೆ ಅಂದಾಜಿಸುವಲ್ಲಿ ಆದಾಯ ತೆರಿಗೆ ಇಲಾಖೆ ಎಡವಿದೆ’ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿತ್ತು. ‘2014-15ರಿಂದ 2017-18ರ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳ ವಿವಿಧ ತಂಡಗಳು ನಡೆಸಿರುವ ಶೋಧಕಾರ್ಯ ಮತ್ತು ಹೆಚ್ಚುವರಿ ತೆರಿಗೆ ಅಂದಾಜು ಪ್ರಕರಣಗಳಲ್ಲಿ, ನ್ಯಾಯಾಲಯಕ್ಕೆ ಬಂದ ಪ್ರಕರಣಗಳನ್ನು ಲೆಕ್ಕಪರಿಶೋಧನೆಗೆ ತೆಗೆದುಕೊಳ್ಳಲಾಗಿತ್ತು. ಈ ಪ್ರಕರಣಗಳಲ್ಲಿ ₹24,965 ಕೋಟಿ ಹೆಚ್ಚುವರಿ ತೆರಿಗೆಯನ್ನು ಅಂದಾಜು ಮಾಡಲಾಗಿತ್ತು. ಆದರೆ ನ್ಯಾಯಾಲಯದ ವಿಚಾರಣೆ ಮತ್ತು ತೀರ್ಪಿನ ನಂತರ ₹5,857 ಕೋಟಿ ಹೆಚ್ಚುವರಿ ಅಂದಾಜು ತೆರಿಗೆಯಷ್ಟೇ ಆದಾಯ ತೆರಿಗೆ ಇಲಾಖೆಗೆ ಬಂತು. ₹19,108 ಕೋಟಿಯಷ್ಟು ಹೆಚ್ಚುವರಿ ಅಂದಾಜು ತೆರಿಗೆಯು ಅಸೆಸ್ ಅಧಿಕಾರಿಗಳ ಕಲ್ಪನೆಯ ಪ್ರತಿಫಲ’ ಎಂದೇ ಸಿಎಜಿ ಹೇಳಿತ್ತು.ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದನ್ನೇ ಇವೆಲ್ಲವೂ ಸೂಚಿಸುತ್ತವೆ.

ನಿರ್ದೇಶಕರೇ ಇಲ್ಲದ ಇ.ಡಿ

ಸಂಜಯ್ ಕೆ.ಮಿಶ್ರಾ ಅವರು ಇ.ಡಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಅವರ ಅಧಿಕಾರದ ಅವಧಿಯನ್ನು ಮೋದಿ ಅವರ ಸರ್ಕಾರವು ಪದೇ ಪದೇ ವಿಸ್ತರಿಸಿತ್ತು. ಅದರ ವಿರುದ್ಧ ಸುಪ್ರೀಂ ಕೋರ್ಟ್‌ ಆದೇಶ ನೀಡಿದಾಗ, ಅಧಿಕಾರದ ಅವಧಿಯನ್ನು ಎರಡು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಿ ಸುಗ್ರೀವಾಜ್ಞೆ ಹೊರಡಿಸಿತು. ಹೀಗೆ ವಿಸ್ತರಿಸಲಾದ ಅವಧಿ ಮುಗಿಯುವ ಮುನ್ನವೇ ಸಂಜಯ್ ಮಿಶ್ರಾ ಅವರನ್ನು ಅಧಿಕಾರದಿಂದ ಸುಪ್ರೀಂ ಕೋರ್ಟ್‌ 2023ರ ಸೆಪ್ಲೆಂಬರ್ 15ರಂದು ಕೆಳಗಿಳಿಸಿತು. ಆದರೆ ಅಲ್ಲಿಂದ ಈವರೆಗೂ ನೂತನ ನಿರ್ದೇಶಕರನ್ನು ಕೇಂದ್ರ ಸರ್ಕಾರ ನೇಮಕ ಮಾಡಿಲ್ಲ. ಪೂರ್ಣ ಪ್ರಮಾಣದ ನಿರ್ದೇಶಕರು ಇಲ್ಲದೆಯೇ ಇ.ಡಿ ಕೆಲಸ ಮಾಡುತ್ತಿದೆ.

ಆಧಾರ: ಪಿಟಿಐ, ಕೇಂದ್ರ ಹಣಕಾಸು ಸಚಿವಾಲಯವು ಲೋಕಸಭೆ ಮತ್ತು ರಾಜ್ಯಸಭೆಗೆ ನೀಡಿದ ಮಾಹಿತಿಗಳು, ರಾಯಿಟರ್ಸ್‌, ಸಿಎಜಿ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT