ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ಕಾರ್ಮಿಕರನ್ನು ಬಾಧಿಸುತ್ತಿದೆ ಹವಾಮಾನ ವೈಪರೀತ್ಯ
ಆಳ–ಅಗಲ | ಕಾರ್ಮಿಕರನ್ನು ಬಾಧಿಸುತ್ತಿದೆ ಹವಾಮಾನ ವೈಪರೀತ್ಯ
Published 22 ಏಪ್ರಿಲ್ 2024, 19:58 IST
Last Updated 22 ಏಪ್ರಿಲ್ 2024, 19:58 IST
ಅಕ್ಷರ ಗಾತ್ರ

ಹವಾಮಾನ ವೈಪರೀತ್ಯ ಅಥವಾ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಗೆ ನೇರವಾಗಿ ಗುರಿಯಾಗುವವರು ಕಾರ್ಮಿಕರು. ವಿಶ್ವದಾದ್ಯಂತ 340 ಕೋಟಿಗೂ ಹೆಚ್ಚು ಕಾರ್ಮಿಕರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇವರಲ್ಲಿ 240 ಕೋಟಿಗೂ ಹೆಚ್ಚು ಕಾರ್ಮಿಕರನ್ನು ಅತಿಯಾದ ಉಷ್ಣಾಂಶ, ವಾಯುಮಾಲಿನ್ಯ, ಅತಿನೇರಳ ಕಿರಣಗಳು ಬಾಧಿಸುತ್ತಿವೆ. ಇವುಗಳನ್ನು ನಿಭಾಯಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ವಾರ್ಷಿಕ 30 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಅಕಾಲಿಕವಾಗಿ ಸಾಯುತ್ತಿದ್ದಾರೆ. ಇನ್ನು 70–90 ಕೋಟಿಯಷ್ಟು ಕಾರ್ಮಿಕರು ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳ ನಿರ್ವಹಣೆಯತ್ತ ಎಲ್ಲಾ ದೇಶಗಳೂ ಗಮನ ಹರಿಸಬೇಕಾದ ಅನಿವಾರ್ಯ ಇದೆ ಎನ್ನುತ್ತದೆ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ವರದಿ.

ಅತಿನೇರಳೆ ಕಿರಣಗಳು

ಇದು ಸಹ ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಬಾಧಿಸುವ ಪ್ರಮುಖ ಪ್ರಾಕೃತಿಕ ವಿದ್ಯಮಾನ. ಹವಾಮಾನ ವೈಪರೀತ್ಯದ ಪರಿಣಾಮವಾಗಿ ವಾತಾವರಣದಲ್ಲಿನ ಉಷ್ಣಾಂಶ ಏರಿಕೆಯಾಗುತ್ತಿರುವುದು ಒಂದೆಡೆಯಾದರೆ, ಅದರ ಜತೆಯಲ್ಲಿಯೇ ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳ ತೀವ್ರತೆ ಹೆಚ್ಚಾಗುತ್ತಿದೆ

ಯಾರ ಮೇಲೆ ಪರಿಣಾಮ

ಬಿಸಿಲಿನಲ್ಲೇ ಕೆಲಸ ಮಾಡುವ ಕಟ್ಟಡ ನಿರ್ಮಾಣ ಕಾರ್ಮಿಕರು, ರಸ್ತೆ–ಹೆದ್ದಾರಿ ನಿರ್ಮಾಣ ಕಾರ್ಮಿಕರು, ಬಂದರು ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು

160 ಕೋಟಿ: ವಿಶ್ವದಾದ್ಯಂತ ಅತಿನೇರಳೆ ಕಿರಣಗಳಿಗೆ ಮೈಯೊಡ್ಡಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಖ್ಯೆ

18,960: 2023ರಲ್ಲಿ ವಿಶ್ವದಾದ್ಯಂತ ಅತಿನೇರಳ ಕಿರಣಗಳ ನೇರ ದುಷ್ಪರಿಣಾಮಕ್ಕೆ ಬಲಿಯಾದ ಕಾರ್ಮಿಕರ ಸಂಖ್ಯೆ

ಪರಿಣಾಮಗಳು

* ಚರ್ಮ ಕಪ್ಪುಗಟ್ಟುವುದು

* ಕಣ್ಣಿಗೆ ಹಾನಿ ಮತ್ತು ದೃಷ್ಟಿದೋಷ

* ದೇಹದ ರೋಗನಿರೋಧಕ ಶಕ್ತಿ ಕ್ಷೀಣಿಸುವುದು

* ಚರ್ಮದ ಕ್ಯಾನ್ಸರ್‌

ವಸ್ತುಸ್ಥಿತಿ ಮತ್ತು ಆಗಬೇಕಾದದ್ದು...

* ವಿಶ್ವದ ಬಹುತೇಕ ದೇಶಗಳಲ್ಲಿ ಅತಿನೇರಳ ಕಿರಣಗಳ ಪರಿಣಾಮಗಳಿಗೆ ಕಾರ್ಮಿಕರು ಗುರಿಯಾಗುವುದನ್ನು ತಡೆಯುವ ಕಾನೂನು ಅಥವಾ ನೀತಿಗಳಿಲ್ಲ. ಭಾರತದಲ್ಲೂ ಇಂತಹ ಪ್ರತ್ಯೇಕ ನೀತಿ ಇಲ್ಲ

* ಅತಿನೇರಳೆ ಕಿರಣಗಳಿಂದ ಕಾರ್ಮಿಕರು ಪಾರಾಗಲು ಕೆಲಸದ ಅವಧಿಯಲ್ಲಿ ಮಾರ್ಪಾಡು ಮಾಡುವುದು ಮತ್ತು ಸಾಮಾನ್ಯ ಪಿಪಿಇ ವಸ್ತ್ರಗಳನ್ನು ಧರಿಸಿದರೆ ಸಾಕಾಗುತ್ತದೆ. ಇಂತಹ ಕೆಲಸವನ್ನು ಉದ್ಯಮ ಸಂಸ್ಥೆಗಳು ಮಾಡುವಂತೆ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು

* ಅತಿನೇರಳ ಕಿರಣಗಳಿಂದ ಸಂಭವಿಸುವ ಆರೋಗ್ಯದ ಸಮಸ್ಯೆಗಳನ್ನು ವಿಮಾ ಯೋಜನೆಗಳು ಒಳಗೊಳ್ಳಬೇಕು. ಸರ್ಕಾರಗಳೇ ಚಿಕಿತ್ಸೆಯನ್ನು ಒದಗಿಸುವಂತಹ ಕೆಲಸವಾಗಬೇಕು

ಅತಿಯಾದ ಉಷ್ಣಾಂಶ

ಹವಾಮಾನ ಬದಲಾವಣೆಯ ನೇರ ಪರಿಣಾಮವಿದು. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿಯೇ ವಿಶ್ವದ ಬಹುತೇಕ ಕಡೆ ದಿನದ ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿದೆ. ಹೊರಾಂಗಣದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರು ಇದರ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಒಳಾಂಗಣದಲ್ಲಿ ದುಡಿಯುವ ಕಾರ್ಮಿಕರೂ ಇವುಗಳ ಪರಿಣಾಮವನ್ನು ಎದುರಿಸಬೇಕಾಗಿದೆ. ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಯೇ ಅಧಿಕ ಇರುವ ಕಾರಣ, ಇದರ ದುಷ್ಪರಿಣಾಮಗಳೂ ಹೆಚ್ಚೇ ಇವೆ

ಯಾರ ಮೇಲೆ ಪರಿಣಾಮ

ಕೃಷಿ ಕಾರ್ಮಿಕರು, ನಿರ್ಮಾಣ ಕ್ಷೇತ್ರದ ಕಾರ್ಮಿಕರು, ದುರಸ್ತಿ ಮತ್ತಿತರ ಸೇವೆ ಒದಗಿಸುವವರು, ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ದುಡಿಯುವವರು, ಪೌರ ಕಾರ್ಮಿಕರು

240 ಕೋಟಿ: ಕಾರ್ಮಿಕರು ತೀವ್ರ ಬಿಸಿಲಿಗೆ ಒಡ್ಡಿಕೊಂಡಿದ್ದಾರೆ

2.28 ಕೋಟಿ: ಕಾರ್ಮಿಕರು ತೀವ್ರ ಬಿಸಿಲಿನ ಕಾರಣಕ್ಕೆ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ

18,970: ಹಿಂದಿನ ಒಂದು ವರ್ಷದಲ್ಲಿ ತೀವ್ರ ಬಿಸಿಲಿನ ಕಾರಣದಿಂದ ಮೃತಪಟ್ಟ ಕಾರ್ಮಿಕರ ಸಂಖ್ಯೆ

ಪರಿಣಾಮಗಳು

* ಸೂರ್ಯಾಘಾತ, ಸೂರ್ಯಾಘಾತದಿಂದ ಸಾವು

* ನಿರ್ಜಲೀಕರಣ ಮತ್ತು ಅದರಿಂದ ಸಂಭವಿಸುವ ಸಾವು

* ಅತಿಯಾದ ನಿರ್ಜಲೀಕರಣದಿಂದ ಮೂತ್ರಪಿಂಡಕ್ಕೆ ಹಾನಿ

* ಹೃದಯ ಸಂಬಂಧಿ ಸಮಸ್ಯೆಗಳು

ವಸ್ತುಸ್ಥಿತಿ ಮತ್ತು ಆಗಬೇಕಾದದ್ದು...

* ಕೆಲವು ದೇಶಗಳು ತೀವ್ರ ಬಿಸಿಲನ್ನು ಪ್ರಕೃತಿ ವಿಕೋಪ ಎಂದು ಪರಿಗಣಿಸಿವೆ ಮತ್ತು ತೀವ್ರ ಬಿಸಿಲಿನ ಸಂದರ್ಭದಲ್ಲಿ ಕೆಲಸದ ಅವಧಿಯಲ್ಲಿ ಮಾರ್ಪಾಡು ಮಾಡುತ್ತವೆ

*  ಆದರೆ ಭಾರತವೂ ಸೇರಿ ವಿಶ್ವದ ಹಲವು ದೇಶಗಳು ತೀವ್ರ ಬಿಸಿಲಿನ್ನು ಪ್ರಕೃತಿ ವಿಕೋಪ ಎಂದು ವರ್ಗೀಕರಣ ಮಾಡಿಲ್ಲ. ಹೀಗಾಗಿ ತೀವ್ರ ಬಿಸಿಲಿನ ಸಂದರ್ಭವನ್ನು ನಿರ್ವಹಿಸುವ ಒಂದು ಸಮಗ್ರ ಕಾರ್ಯಯೋಜನೆಯನ್ನು ಹೊಂದಿಲ್ಲ

*  ಭಾರತದಲ್ಲಿ ತೀವ್ರ ಬಿಸಿಲನ್ನು ಪ್ರಕೃತಿ ವಿಕೋಪ ಎಂದು ಪರಿಗಣಿಸುವ ಬಗ್ಗೆ ಚರ್ಚೆ ಈಚೆಗಷ್ಟೇ ಆರಂಭವಾಗಿದೆ

ರಾಸಾಯನಿಕ ಅವಘಡಗಳು

ಕೈಗಾರಿಕೆಗಳಲ್ಲಿ ಬಳಕೆಯಾಗುವ ರಾಸಾಯನಿಕ ವಸ್ತುಗಳು ಅತಿಯಾದ ಉಷ್ಣಾಂಶದಂತಹ ಹವಾಮಾನ ವೈಪರೀತ್ಯಕ್ಕೆ ತೀವ್ರವಾಗಿ ಸ್ಪಂದಿಸುತ್ತವೆ. ಅಂದರೆ ಉಷ್ಣತೆಯ ವಾತಾವರಣದಲ್ಲಿ ರಾಸಾಯನಿಕ ವಸ್ತುಗಳ ರಾಸಾಯನಿಕ ಚಟುವಟಿಕೆಗಳು ತೀವ್ರವಾಗುತ್ತವೆ. ಪರಿಣಾಮವಾಗಿ ಕಾರ್ಖಾನೆಯ ಒಳಾಂಗಣದ ಉಷ್ಣಾಂಶ ಏರುಪೇರಾಗುವುದು, ವಿಷಗಾಳಿ ಹೊರಹೊಮ್ಮುವಂತಹ ಅಪಾಯದ ಸ್ಥಿತಿ ನಿರ್ಮಾಣವಾಗುತ್ತದೆ. ಅವುಗಳ ಪರಿಣಾಮವನ್ನು ಕಾರ್ಮಿಕರೇ ಎದುರಿಸಬೇಕಾಗುತ್ತದೆ. ಕೃಷಿಯಲ್ಲಿ ಬಳಸುವ ಕ್ರಿಮಿನಾಶಕಗಳೂ ಅತಿಯಾದ ಮಳೆ ಮತ್ತು ಅತಿಯಾದ ಬಿಸಿಯ ಸಂದರ್ಭದಲ್ಲಿ ದುಷ್ಪರಿಣಾಮಗಳನ್ನೇ ಉಂಟು ಮಾಡುತ್ತವೆ 

ಯಾರ ಮೇಲೆ ಪರಿಣಾಮ

ಉಷ್ಣ ವಿದ್ಯುತ್ ಸ್ಥಾವರಗಳ ಕಾರ್ಮಿಕರು, ಕಲ್ಲಿದ್ದಲು ಗಣಿ ಕಾರ್ಮಿಕರು, ಉಕ್ಕಿನ ಕಾರ್ಖಾನೆಗಳ ಕಾರ್ಮಿಕರು, ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ಬಳಸುವ ಕೈಗಾರಿಕೆಗಳ ಕಾರ್ಮಿಕರು, ಕೃಷಿ ಕಾರ್ಮಿಕರು

3ಲಕ್ಷ: ಈ ಸ್ವರೂಪದ ಅವಘಡಗಳಿಗೆ ಪ್ರತಿ ವರ್ಷ ಬಲಿಯಾಗುತ್ತಿರುವ ಕಾರ್ಮಿಕರ ಅಂದಾಜು ಸಂಖ್ಯೆ

ಪರಿಣಾಮಗಳು

* ವಿಷಗಾಳಿ ಸೇವನೆಯಿಂದ ಸಾವು

* ಕ್ರಿಮಿನಾಶಕಗಳ ಸಂಪರ್ಕಕ್ಕೆ ಬರುವುದರಿಂದ ಉಸಿರಾಟದ ಸಮಸ್ಯೆ, ಸಾವು

* ನರಮಂಡಲದ ಸಮಸ್ಯೆ

* ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಚರ್ಮದ ಕ್ಯಾನ್ಸರ್‌

* ತೀವ್ರ ಉಸಿರಾಟದ ಸಮಸ್ಯೆ

* ಹೃದಯ ಸಂಬಂಧಿ ಕಾಯಿಲೆಗಳು

ವಸ್ತುಸ್ಥಿತಿ ಮತ್ತು ಆಗಬೇಕಾದದ್ದು...

* ಇಂತಹ ಅವಘಡಗಳನ್ನು ತಡೆಗಟ್ಟುವ ಮತ್ತು ಅವು ಸಂಭವಿಸಿದಾಗ ಅವುಗಳನ್ನು ನಿರ್ವಹಿಸಬೇಕಾದ ಕ್ರಮಗಳ ಬಗ್ಗೆ ಬಹುತೇಕ ದೇಶಗಳು ಕಟ್ಟುನಿಟ್ಟಿನ ಕಾನೂನು ಹೊಂದಿವೆ

* ಹವಾಮಾನ ವೈಪರೀತ್ಯದ ಪರಿಣಾಮಗಳು ತೀವ್ರವಾಗುವುದನ್ನು ತಡೆಯಬೇಕಾದ ಅಗತ್ಯವಿದೆ. ಆ ಮೂಲಕ ಇಂತಹ ಅವಘಡಗಳು ಸಂಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡಬೇಕಿದೆ

ವಾಯು ಮಾಲಿನ್ಯ

ಕೈಗಾರಿಕೆಗಳು, ವಾಹನಗಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಉಂಟಾಗುತ್ತದೆ ಎಂಬುದು ನಿಜವಾದರೂ, ಹವಾಮಾನ ವೈಪರೀತ್ಯದ ರೂಪವಾದ ಅತಿಉಷ್ಣತೆಯು ವಾಯುಮಾಲಿನ್ಯದ ತೀವ್ರತೆಯನ್ನು ಹೆಚ್ಚಿಸುತ್ತದೆ. ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರೇ ವಾಯುಮಾಲಿನ್ಯಕ್ಕೆ ಹೆಚ್ಚು ಗುರಿಯಾಗುತ್ತಾರೆ

ಯಾರ ಮೇಲೆ ಪರಿಣಾಮ

ಟ್ರಕ್‌–ಬಸ್‌ ಚಾಲಕ ಮತ್ತು ಕ್ಲೀನರ್‌, ಲೋಡಿಂಗ್‌–ಅನ್‌ಲೋಡಿಂಗ್‌ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ತ್ಯಾಜ್ಯ ನಿರ್ವಹಣೆ ಘಟಕಗಳ ಕಾರ್ಮಿಕರು, ಸಂಚಾರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ

160 ಕೋಟಿಯಷ್ಟು ಕಾರ್ಮಿಕರು ವಾಯುಮಾಲಿನ್ಯ ತೀವ್ರವಾಗಿರುವ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ

8.6 ಲಕ್ಷ: 2022ರಲ್ಲಿ ವಾಯುಮಾಲಿನ್ಯ ಸಂಬಂಧಿ ಆರೋಗ್ಯದ ಸಮಸ್ಯೆಗಳಿಂದ ಅಕಾಲಿಕವಾಗಿ ಮೃತಪಟ್ಟ ಕಾರ್ಮಿಕರ ಸಂಖ್ಯೆ

ಪರಿಣಾಮಗಳು

* ಶ್ವಾಸಕೋಶದ ಕ್ಯಾನ್ಸರ್‌

* ಉಸಿರಾಟ ಸಂಬಂಧಿ ಕಾಯಿಲೆಗಳು

* ಹೃದಯ ಸಂಬಂಧಿ ಕಾಯಿಲೆಗಳು

ವಸ್ತುಸ್ಥಿತಿ ಮತ್ತು ಆಗಬೇಕಾದದ್ದು...

* ಬಹುತೇಕ ದೇಶಗಳು ಇದನ್ನೊಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಿವೆ ಮತ್ತು ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿವೆ. ಆದರೆ ಅವು ಪೂರ್ಣ ಪ್ರಮಾಣದ ಕ್ರಮಗಳಾಗಿರದೆ, ಸಮಸ್ಯೆ ತೀವ್ರವಾದಾಗ ಜಾರಿಗೆ ಬರುವಂತಹ ಕ್ರಮಗಳಷ್ಟೇ ಆಗಿವೆ

* ದೆಹಲಿಯಂತಹ ನಗರಗಳಲ್ಲಿ ವಾಯುಮಾಲಿನ್ಯದ ಮಟ್ಟ ತೀವ್ರವಾದಾಗ ಮಾತ್ರ ನಿರ್ಮಾಣ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತದೆ, ಪಟಾಕಿ ಸಿಡಿಸುವುದರ ಮೇಲೆ ನಿರ್ಬಂಧ ಹೇರಲಾಗುತ್ತದೆ. ಆದರೆ ವರ್ಷದ ಬೇರೆ ಅವಧಿಯಲ್ಲಿ ಪಟಾಕಿಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ. ಇಂತಹ ಕ್ರಮಗಳ ಬದಲಿಗೆ ಒಂದು ಸಮಗ್ರ ನೀತಿಯ ಅವಶ್ಯಕತೆ ಇದೆ

ಇತರ ಪ್ರಾಕೃತಿಕ ವಿಕೋಪಗಳು

ಚಂಡಮಾರುತ, ಪ್ರವಾಹ, ಭೂಕುಸಿತಗಳಂತಹ ಪ್ರಾಕೃತಿಕ ವಿಕೋಪಗಳು ಕಾರ್ಮಿಕರನ್ನು ಮಾತ್ರವಲ್ಲ, ಎಲ್ಲರನ್ನೂ ಬಾಧಿಸುತ್ತವೆ. ಆದರೆ ಇಂತಹ ವಿಕೋಪಗಳು ಸಂಭವಿಸಿದಾಗ ಅವುಗಳಿಗೆ ಹೆಚ್ಚು ಬಲಿಯಾಗುವುದು ಕಾರ್ಮಿಕರೇ ಆಗಿದ್ದಾರೆ. ಇಂತಹ ವಿಕೋಪಗಳು ಎಲ್ಲಾ ಸಮಯದಲ್ಲೂ ಸಂಭವಿಸುತ್ತವೆ. ಆದರೆ ಹವಾಮಾನ ವೈಪರೀತ್ಯವು ಇಂತಹ ವಿಕೋಪಗಳನ್ನು ಹೆಚ್ಚಿಸುತ್ತದೆ.

ಹವಾಮಾನ ವೈಪರೀತ್ಯದ ಪರಿಣಾಮವಾಗಿ ದಿಢೀರ್ ಪ್ರವಾಹ, ಮೇಘಸ್ಫೋಟ, ಅತಿಯಾದ ಮಳೆಯಿಂದ ಭೂಕುಸಿತದಂತಹ ವಿಕೋಪಗಳು ಸಂಭವಿಸುತ್ತವೆ. ಅತಿಯಾದ ಉಷ್ಣಾಂಶದಿಂದ ಕಾಳ್ಗಿಚ್ಚು ಸಂಭವಿಸುತ್ತದೆ. ಅಂತಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗುವ ಕಾರ್ಮಿಕರು ಮೃತಪಡುತ್ತಿದ್ದಾರೆ ಮತ್ತು ಆರೋಗ್ಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇವುಗಳನ್ನು ತಡೆಯಲು ಸಾಧ್ಯವಿಲ್ಲವಾದರೂ, ಕಾರ್ಮಿಕರು ಬಲಿಯಾಗುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ

ಯಾರ ಮೇಲೆ ಪರಿಣಾಮ: ಮೀನುಗಾರರು, ಗುಡ್ಡಗಾಡು ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರು, ರಕ್ಷಣಾ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ

20.6 ಲಕ್ಷ: 2019–2021ರ ಅವಧಿಯಲ್ಲಿ ವಿಶ್ವದಾದ್ಯಂತ ರಕ್ಷಣಾ ಕಾರ್ಯಾಚರಣೆ ಮತ್ತು ಮೀನುಗಾರಿಕೆ ವೇಳೆ ಪ್ರಾಕೃತಿಕ ವಿಕೋಪಗಳಿಗೆ ಬಲಿಯಾದ ಕಾರ್ಮಿಕರು

ಆಧಾರ: ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT