ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಕೋವಿನ್‌ ಮಾಹಿತಿ ಸೋರಿಕೆ: ಏನು, ಎತ್ತ...
ಆಳ–ಅಗಲ: ಕೋವಿನ್‌ ಮಾಹಿತಿ ಸೋರಿಕೆ: ಏನು, ಎತ್ತ...
Published 13 ಜೂನ್ 2023, 18:52 IST
Last Updated 13 ಜೂನ್ 2023, 18:52 IST
ಅಕ್ಷರ ಗಾತ್ರ

ಸರ್ಕಾರದ ವಿವಿಧ ಇಲಾಖೆಗಳು ಮತ್ತು ಪೋರ್ಟಲ್‌ಗಳಲ್ಲಿ ಸಂಗ್ರಹಿಸಲಾಗಿರುವ ಸಾರ್ವಜನಿಕರ ದತ್ತಾಂಶಗಳು ಭದ್ರತೆಯ ಅಪಾಯವನ್ನು ಎದುರಿಸುತ್ತಲೇ ಇವೆ. ಸರ್ಕಾರದ ಬಳಿ ಇರುವ ಇಂತಹ ದತ್ತಾಂಶಗಳಿಗೆ ಹಲವು ಬಾರಿ ಕನ್ನ ಹಾಕಲಾಗಿದೆ. ಈಗ ಕೋವಿಡ್‌ ಪೋರ್ಟ್‌ಲ್‌ನ ಸರದಿ. ಸಾರ್ವಜನಿಕರ ದತ್ತಾಂಶ ಕಳ್ಳತನವಾಗುವುದು ಅಥವಾ ಸೋರಿಕೆಯಾಗವುದು ಅವರ ಖಾಸಗಿತನದ ಉಲ್ಲಂಘನೆಯೇ ಸರಿ. ಮೊಬೈಲ್‌ ನಂಬರ್‌, ಆಧಾರ್‌ ಸಂಖ್ಯೆ, ಪ್ಯಾನ್‌ ಸಂಖ್ಯೆ ಸೋರಿಕೆಯಾದರೆ ಎನಾಗುತ್ತದೆ ಎಂಬ ಪ್ರಶ್ನೆಯೂ ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ, ಸಾರ್ವಜನಿಕರ ದತ್ತಾಂಶಗಳು ಆರ್ಥಿಕ ಅಪರಾಧಗಳು, ಸಾರ್ವಜನಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರಲು, ದೇಶದ ವಿರುದ್ಧ ಸಂಚು ರೂಪಿಸಲು ಬಳಕೆಯಾಗಬಹುದು. ದತ್ತಾಂಶ ಸೋರಿಕೆಯಾದವರು, ತಾವು ಮಾಡದೇ ಇರುವ ಸಾಲವನ್ನು ತೀರಿಸಬೇಕಾಗಬಹುದು ಅಥವಾ ತಾವು ಮಾಡದೇ ಇರುವ ಕೃತ್ಯಕ್ಕೆ ಶಿಕ್ಷೆ ಎದುರಿಸುವ ಸ್ಥಿತಿಯೂ ಬರಬಹುದು

ಕೋವಿಡ್‌ ಲಸಿಕೆ ನೀಡಲು ಕೇಂದ್ರ ಸರ್ಕಾರವು ರೂಪಿಸಿದ್ದ ಕೋವಿನ್‌ ಪೋರ್ಟಲ್‌ನಲ್ಲಿ ಇರುವ ಕೋಟ್ಯಂತರ ಭಾರತೀಯರ ಖಾಸಗಿ ಮಾಹಿತಿಗಳು ಸೋರಿಕೆಯಾಗಿವೆ. ಕೋವಿಡ್‌ ಲಸಿಕೆ ಪಡೆದ ಬಳಿಕ ಸರ್ಕಾರ ನೀಡುವ ಪ್ರಮಾಣಪತ್ರಗಳು ಸೇರಿದಂತೆ ಕೋವಿಡ್‌ ಲಸಿಕೆಗೆ ಸಂಬಂಧಿಸಿದ ಹಲವು ಮಾಹಿತಿಗಳು ಈ ಪೋರ್ಟಲ್‌ನಲ್ಲಿ ಲಭ್ಯವಿವೆ.

ಲಸಿಕೆಗಾಗಿ ನೋಂದಾಯಿಸಿಕೊಳ್ಳುವಾಗಿ ನಾಗರಿಕರು ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ಸಂಖ್ಯೆ/ಪ್ಯಾನ್‌ ಕಾರ್ಡ್‌ ಸಂಖ್ಯೆ/ಪಾಸ್‌ಪೋರ್ಟ್‌ ಸಂಖ್ಯೆ, ಹುಟ್ಟಿದ ದಿನಾಂಕ, ವಿಳಾಸ, ಮೊಬೈಲ್‌ ಸಂಖ್ಯೆ ಹೀಗೆ ಎಲ್ಲದರ ಮಾಹಿತಿಯನ್ನೂ ಸರ್ಕಾರ ಪಡೆದುಕೊಂಡಿದೆ. ಈ ಕೆಲವು ವಿವರಗಳು ಲಸಿಕೆ ಪಡೆದುಕೊಂಡವರ ಪ್ರಮಾಣಪತ್ರದಲ್ಲೂ ನಮೂದಾಗಿವೆ. ಹೀಗೆ ನಾಗರಿಕರೇ ಸರ್ಕಾರಕ್ಕೆ ನೀಡಿದ ಮಾಹಿತಿಗಳು ಈಗ ಸೋರಿಕೆಯಾಗಿವೆ.

ಐಟಿ ಕಂಪನಿ ಉದ್ಯೋಗಿ ರಾಕೇಶ್‌ ಕೃಷ್ಣನ್‌ ಎಂಬವರು  ಜೂನ್‌ 5ರಂದು ಮೊದಲು ಈ ರೀತಿಯ ಸೋರಿಕೆ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡರು. ನಂತರ ಜೂನ್‌ 12ರಂದು ಮಲಯಾಳದ ಸುದ್ದಿ ಸಂಸ್ಥೆಯೊಂದು ಈ ಕುರಿತು ವರದಿ ಮಾಡಿತು. ನಂತರ ರಾಷ್ಟ್ರಮಟ್ಟದ ಹಲವು ಸುದ್ದಿವಾಹಿನಿಗಳು ಈ ಕುರಿತು ವರದಿ ಮಾಡಿದವು.

ಸೋರಿಕೆಯಾದದ್ದು ಹೇಗೆ?:

ಟೆಲಿಗ್ರಾಂನ ಬಾಟ್‌ನಿಂದ (ಒಂದು ಸ್ವರೂಪದ ಕೃತಕ ಬುದ್ಧಿಮತ್ತೆ) ನಾಗರಿಕರ ಖಾಸಗಿ ಮಾಹಿತಿಗಳು ಸೋರಿಕೆಯಾಗಿವೆ. ಈ ಬಾಟ್‌ನ ಗ್ರೂಪ್‌ಗೆ ಮೊದಲಿಗೆ ಸೇರಬೇಕಿತ್ತು. ಈ ಗ್ರೂಪ್‌ಗೆ ಸೇರ್ಪಡೆಗೊಂಡ ಬಳಿಕ ಬಾಟ್‌ನೊಂದಿಗೆ ಚಾಟ್‌ ಮಾಡಿ, ನಮಗೆ ಬೇಕಿರುವ ಮಾಹಿತಿಯನ್ನು ಪಡೆದುಕೊಳ್ಳಬಹುದಿದೆ. ಈ ಸಂದರ್ಭದಲ್ಲಿ ನಾಗರಿಕರ ಮೊಬೈಲ್‌ ಸಂಖ್ಯೆ ಅಥವಾ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಈ ಚಾಟ್‌ನಲ್ಲಿ ನೀಡಬೇಕಿತ್ತು.// ನಂತರ, ಈ ಸಂಖ್ಯೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಬಾಟ್‌ ನೀಡುತ್ತಿತ್ತು. ಕೋವಿನ್ ದತ್ತಾಂಶ ಸೋರಿಕೆಯಾದ ಸುದ್ದಿ ಜೋರಾದ ನಂತರ ಈಗ ಆ ಗ್ರೂಪ್‌ ಮತ್ತು ಬಾಟ್‌ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.

ತೆಲಂಗಾಣದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್‌, ಡಿಎಂಕೆ ಸಂಸದೆ ಕನಿಮೊಳಿ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ, ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ, ಬಿಜೆಪಿ ನಾಯಕ, ಕೇಂದ್ರದ ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್‌ ಅವರ ಮಾಹಿತಿಗಳು ಸೇರಿ ಹಲವು ನಾಯಕ ಮಾಹಿತಿಗಳನ್ನು ಈ ಬಾಟ್‌ ಮೂಲಕ ಪಡೆದುಕೊಳ್ಳಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌ ಅವರ ಮಾಹಿತಿಯೂ ದೊರೆತಿದೆ.

ಒಂದೇ ಮೊಬೈಲ್‌ ಸಂಖ್ಯೆಯಲ್ಲಿ ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದ ಹಲವರ ಮಾಹಿತಿಗಳೂ ಈ ಬಾಟ್‌ನಲ್ಲಿ ಲಭ್ಯವಿತ್ತು. ಕನಿಮೊಳಿ ಅವರ ಮಾಹಿತಿಯ ಜೊತಗೆ ಅವರ ಮಗನ ಪಾಸ್‌ಪೋರ್ಟ್‌ ಸಂಖ್ಯೆಯೂ ಈ ಬಾಟ್‌ ಮೂಲಕ ದೊರೆತಿದೆ.

ಕ್ರಮ ಕೈಗೊಳ್ಳದ ಸರ್ಕಾರ 

ಕೋವಿನ್‌ ಪೋರ್ಟಲ್‌ನಲ್ಲಿ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಮೊದಲು ಬಹಿರಂಗ ಪಡಿಸಿದ ರಾಕೇಶ್‌ ಕೃಷ್ಣನ್‌ ಅವರು ಈ ಪೋರ್ಟಲ್‌ನ ದತ್ತಾಂಶಗಳನ್ನು ಮಾರಾಟಕ್ಕೆ ಇಟ್ಟ ಹ್ಯಾಕರ್‌ನೊಂದಿಗೆ ಮಾತನಾಡಿದ್ದಾರೆ. ‘ನನಗೆ ಕಳೆದ ವರ್ಷವೇ ಈ ಮಾಹಿತಿಗಳು ದೊರೆತಿವೆ. ಈ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಿದ್ದೆ. ಆದರೆ, ಸರ್ಕಾರವು ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಈಗ ನಾನು ಈ ಮಾಹಿತಿಯನ್ನು ಮತ್ತೊಮ್ಮೆ ಮಾರಾಟಕ್ಕೆ ಇಟ್ಟಿದ್ದೇನೆ. ಕ್ರಿಪ್ಟೊಕರೆನ್ಸಿ ಮೂಲಕವೇ ನಾನು ಹಣ ಪಡೆಯುತ್ತೇನೆ’ ಎಂದು ಹ್ಯಾಕರ್‌ ಹೇಳಿರುವುದಾಗಿ ರಾಕೇಶ್‌ ಹೇಳಿದ್ದಾರೆ. ಈ ಬಗ್ಗೆ ಫೋಬ್ಸ್‌ ನಿಯತಕಾಲಿಕ ವರದಿ ಮಾಡಿದೆ.

ಅಪರಾಧ ಕೃತ್ಯಗಳಿಗೆ ಬಳಕೆ

ಆಧಾರ್, ಮತದಾರರ ಗುರುತಿನ ಚೀಟಿ, ವಾಹನಗಳ ನೋಂದಣಿ ಸಂಖ್ಯೆ ಮೊದಲಾದ ವಿವರಗಳನ್ನು ವಂಚಕರು ಅಪರಾಧ ಕೃತ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು. ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಬಳಸಿಕೊಂಡು ಬ್ಯಾಂಕ್‌ ಖಾತೆ ತೆರೆಯಲು ಮತ್ತು ಅದನ್ನು ಹಣ ಅಕ್ರಮ ವರ್ಗಾವಣೆಗೆ ಬಳಸಿಕೊಳ್ಳುವ ಅಪಾಯಗಳು ಇವೆ. ಅಂಥದ್ದೇ ಖಾತೆಗಳ ಮೂಲಕ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಸಂಗ್ರಹ, ಬಳಕೆ ಮಾಡುವ ಅಪಾಯವಿದೆ. ಆಧಾರ್‌ ಬಳಸಿಕೊಂಡು ಸಿಮ್‌ ಖರೀದಿಸಿ, ಅದನ್ನು ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುವ ಅಪಾಯವಿದೆ. ಯಾವುದೇ ವ್ಯಕ್ತಿಗೆ ಸೇರಿದ ವಾಹನದ ನೋಂದಣಿ ವಿವರಗಳನ್ನು, ಬೇರೊಂದು ವಾಹನದಲ್ಲಿ ಬಳಸಬಹುದಾಗಿದೆ. ಆ ಮೂಲಕ ಅದನ್ನು ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. ಹೀಗೆ ಅಪರಾಧ ಕೃತ್ಯಗಳು ನಡೆದಾಗ ಆಧಾರ್, ಮತದಾರರ ಗುರುತಿನ ಚೀಟಿಯಲ್ಲಿರುವ ಮತ್ತು ವಾಹನದ ನಿಜವಾದ ಮಾಲೀಕ ಕಾನೂನು ಕ್ರಮವನ್ನು ಎದುರಿಸಬೇಕಾದ ಅಪಾಯ ಉಂಟಾಗುತ್ತದೆ.

ಖಾಸಗಿತನಕ್ಕೆ ಧಕ್ಕೆ

ಯಾವುದೇ ವ್ಯಕ್ತಿಯ ವೈಯಕ್ತಿಕ ವಿವರಗಳು, ಸಂಪರ್ಕ ಮಾಹಿತಿ, ಆಸಕ್ತಿಗಳು, ಹಣಕಾಸು ಸ್ಥಿತಿಗತಿಗೆ ಸಂಬಂಧಿಸಿದ ವಿವರಗಳನ್ನು ಆತನ ಒಪ್ಪಿಗೆ ಇಲ್ಲದೇ ಬಳಸುವಂತಿಲ್ಲ. ಯಾವುದೇ ಸಂಸ್ಥೆ ಅಥವಾ ಸರ್ಕಾರದ ಇಲಾಖೆಗೆ ಇಂತಹ ವಿವರಗಳನ್ನು ಆ ವ್ಯಕ್ತಿ ಸಲ್ಲಿಸಿದ್ದರೆ, ಅದರ ಗೌಪ್ಯತೆಯನ್ನು ಕಾಪಾಡುವ ಹೊಣೆ ಆ ಸಂಸ್ಥೆಯದ್ದಾಗಿರುತ್ತದೆ. ಅಲ್ಲಿಂದ ಮಾಹಿತಿ ಮೂರನೇ ಸಂಸ್ಥೆಗೆ ಅಥವಾ ವ್ಯಕ್ತಿಗೆ ಲಭ್ಯವಾದರೆ ಅದು ದತ್ತಾಂಶ ಸೋರಿಕೆಯಾಗುತ್ತದೆ. ಇದು ಆ ವ್ಯಕ್ತಿಯ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಪ್ರಕಾರ ಈ ರೀತಿಯ ದತ್ತಾಂಶಗಳನ್ನು ಭದ್ರವಾಗಿ ಇಡುವುದು, ಅದನ್ನು ಸಂಗ್ರಹಿಸಿರುವ ಸಂಸ್ಥೆಯ ಹೊಣೆಯೇ ಆಗಿದೆ. ಅದನ್ನು ಉಲ್ಲಂಘಿಸಿದರೆ, ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಇನ್ನು ದೇಶದಲ್ಲಿ ದತ್ತಾಂಶ ರಕ್ಷಣಾ ಕಾನೂನುಗಳನ್ನು ಕಠಿಣಗೊಳಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಈಗಾಗಲೇ ಮಸೂದೆ ಸಿದ್ಧವಾಗಿದೆಯಾದರೂ, ಅದಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ.

ಕೋವಿನ್‌ನಿಂದ ನೇರವಾಗಿ ಸೋರಿಕೆಯಾಗಿಲ್ಲ: ಕೇಂದ್ರ ಸಮರ್ಥನೆ

ಈಗ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿರುವ ಮಾಹಿತಿಯು, ಕೋವಿನ್‌ ಪೋರ್ಟಲ್‌ನಿಂದ ನೇರವಾಗಿ ಸೋರಿಕೆಯಾಗಿಲ್ಲ. ಕೋವಿನ್‌ ದತ್ತಾಂಶ ಸುರಕ್ಷತಾ ವ್ಯವಸ್ಥೆ ಚೆನ್ನಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಕೋವಿನ್‌ ಪೋರ್ಟಲ್‌ನಿಂದ ನೇರವಾಗಿ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಸರ್ಕಾರ ಹೇಳಿದ್ದರೂ, ಆ ಬಗ್ಗೆ ತನಿಖೆ ನಡೆಸಲು ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ಗೆ (ಸಿಇಆರ್‌ಟಿ) ಸೂಚಿಸಿದೆ. ಸರ್ಕಾರದ ಈ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ.

‘ಟೆಲಿಗ್ರಾಂನ ಬಾಟ್‌ನಲ್ಲಿ ದೊರೆತಿರುವ ಮಾಹಿತಿಯು ಕೋವಿನ್‌ ಪೋರ್ಟಲ್‌ನಿಂದ ಕದ್ದ ಮಾಹಿತಿಯಲ್ಲ. ಈ ಹಿಂದೆಯೇ ಕದ್ದಿದ್ದ ಮಾಹಿತಿಯನ್ನು ಈಗ ನೀಡಲಾಗುತ್ತಿದೆ. ಆದ್ದರಿಂದ ಈಗ ಬಹಿರಂಗವಾಗಿರುವ ಮಾಹಿತಿಯು ಕೋವಿನ್‌ ಪೋರ್ಟಲ್‌ನಿಂದ ನೇರವಾಗಿ ಕದ್ದದ್ದಲ್ಲ’ ಎಂದು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ. ಆದರೆ, ಟೆಲಿಗ್ರಾಂನ ಒಂದು ಗ್ರೂಪ್‌ಗೆ ಈ ಮಾಹಿತಿಗಳು ಲಭ್ಯವಾಗಿದ್ದು ಹೇಗೆ ಎಂಬುದನ್ನು ಸರ್ಕಾರ ವಿವರಿಸಿಲ್ಲ.

ನಾಗರಿಕರ ಖಾಸಗಿ ಮಾಹಿತಿಗಳು ಸೋರಿಕೆಯಾಗಿವೆ ಎನ್ನುವುದು ಸಂಪೂರ್ಣವಾಗಿ ಆಧಾರರಹಿತ ಸುದ್ದಿ ಎಂದಿರುವ ಕೇಂದ್ರ ಸರ್ಕಾರ, ಈ ಎಲ್ಲಾ ವರದಿಗಳನ್ನು ನಿರಾಕರಿಸಿದೆ. ಕೋವಿನ್‌ ಪೋರ್ಟಲ್‌ನಲ್ಲಿ ಇರುವ ನಾಗರಿಕರ ಎಲ್ಲ ಮಾಹಿತಿಗಳು ಸಂಪೂರ್ಣ ಸುರಕ್ಷಿತ ಎಂದೂ ಸರ್ಕಾರ ಹೇಳಿದೆ.

ಯಾರದೇ ಮಾಹಿತಿಯನ್ನು ಕೋವಿನ್‌ ಪೋರ್ಟಲ್‌ ಮೂಲಕ ಪಡೆಯಬೇಕು ಎಂದಾದರೆ ಒಟಿಪಿ ಅಗತ್ಯ ಇರುತ್ತದೆ. ನಮೂದಿತ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ. ಒಟಿಪಿ ನೀಡಿದರೆ ಮಾತ್ರವೇ ಮಾಹಿತಿಗಳು ಸಿಗುತ್ತದೆ. ಆದ್ದರಿಂದ ಪೋರ್ಟಲ್‌ನಲ್ಲಿ ಇರುವ ಎಲ್ಲಾ ಮಾಹಿತಿಗಳು ಸುರಕ್ಷಿತ ಎಂದಿದೆ ಸರ್ಕಾರ.

ಒಟಿಪಿ ಇಲ್ಲದೆ ಯಾವ ಮಾಹಿತಿಯನ್ನು ಪಡೆದುಕೊಳ್ಳಲು ಬರುವುದಿಲ್ಲ ಎಂದು ಕೋವಿನ್‌ ಪೋರ್ಟಲ್‌ ಅನ್ನು ಅಭಿವೃದ್ಧಿಪಡಿಸಿರುವ ತಂಡವು ಸ್ಪಷ್ಟಪಡಿಸಿದೆ ಎಂದು ಕೇಂದ್ರ ಹೇಳಿದೆ. ಜೊತೆಗೆ, ಪೋರ್ಟಲ್‌ನಲ್ಲಿರುವ ಮಾಹಿತಿಗಳನ್ನು ಹಂಚಿಕೊಳ್ಳಲು ಕೆಲವು ಎಪಿಐಗಳನ್ನು (ಅಪ್ಲಿಕೇಷನ್‌ ಪ್ರೋಗ್ರಾಮಿಂಗ್‌ ಇಂಟರ್‌ಫೇಸ್‌) ಐಸಿಎಂಆರ್‌ಗೆ ನೀಡಲಾಗಿದೆ. ಅಂಥ ಎಪಿಐಗಳಲ್ಲಿ ಒಂದರಲ್ಲಿ, ಮೊಬೈಲ್‌ ಸಂಖ್ಯೆ ಅಥವಾ ಆಧಾರ್‌ ಸಂಖ್ಯೆಯನ್ನಷ್ಟೇ ನೀಡಿ ಮಾಹಿತಿ ಪಡೆದುಕೊಳ್ಳುವ ಅವಕಾಶವಿದೆ ಎಂಬುದು ಗೊತ್ತಾಗಿದೆ ಎಂದೂ ಕೇಂದ್ರ ಹೇಳಿದೆ.

‘ಸರ್ಕಾರದ 50 ಜಾಲತಾಣಗಳು ಹ್ಯಾಕ್‌’

ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಸೇರಿದ 50 ಜಾಲತಾಣಗಳನ್ನು 2022ರಲ್ಲಿ ಹ್ಯಾಕ್‌ ಮಾಡಲಾಗಿತ್ತು. ಜತೆಗೆ ಸರ್ಕಾರದ ದತ್ತಾಂಶಗಳನ್ನು ಕದ್ದ ಎಂಟು ಪ್ರಕರಣಗಳು ವರದಿಯಾಗಿದ್ದವು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ಮಾಹಿತಿ ನೀಡಿದ್ದರು.

ಸರ್ಕಾರದ ಸರ್ವರ್‌ಗಳಿಂದಾಗಲೀ ಅಥವಾ ಖಾಸಗಿ ಕಂಪನಿಗಳ ಸರ್ವರ್‌ಗಳಿಂದಾಗಲೀ ಅಥವಾ ಬಳಕೆದಾರರ ಮೊಬೈಲ್‌/ಲ್ಯಾಪ್‌ಟಾಪ್‌/ಕಂಪ್ಯೂಟರ್‌ಗಳಿಂದಾಗಲೀ ಕದಿಯಲಾದ ದತ್ತಾಂಶಗಳನ್ನು ಹಲವು ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳಬಹುದು. ಸೋರಿಕೆಯಾದ ಅಥವಾ ಕದಿಯಲಾದ ದತ್ತಾಂಶಗಳನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ

ದುರ್ಬಳಕೆಗೆ ನಾನಾ ರೂಪಗಳು...

ಹಣಕ್ಕಾಗಿ ದತ್ತಾಂಶ ಒತ್ತೆ

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ಸರ್ವರ್‌ ಅನ್ನು ಹ್ಯಾಕರ್‌ಗಳು 2022ರಲ್ಲಿ ಹ್ಯಾಕ್‌ ಮಾಡಿದ್ದರು. ಇಡೀ ಸರ್ವರ್‌ನಲ್ಲಿದ್ದ ದತ್ತಾಂಶಗಳನ್ನು ಏಮ್ಸ್‌ನ ಯಾವ ಬಳಕೆದಾರರಿಗೂ ಸಿಗದಂತೆ ಅಳಿಸಿ ಹಾಕಿದ್ದರು. ಈ ದತ್ತಾಂಶಗಳನ್ನು ವಾಪಸ್‌ ನೀಡಬೇಕೆಂದರೆ, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. 15 ದಿನಗಳವರೆಗೆ ಈ ಸಮಸ್ಯೆ ಮುಂದುವರಿದಿತ್ತು.

ಏಮ್ಸ್‌ ಸರ್ವರ್‌ನಲ್ಲಿ ಲಕ್ಷಾಂತರ ರೋಗಿಗಳ ವೈಯಕ್ತಿಕ ಮಾಹಿತಿ, ಆರೋಗ್ಯಕ್ಕೆ ಸಂಬಂಧಿಸಿದ ರಹಸ್ಯ ಮಾಹಿತಿ, ವಿಮಾ ವಿವರಗಳು, ಆರ್ಥಿಕ ವಿವರಗಳು, ಸಂಪರ್ಕ ವಿವರಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ರೋಗಿಗಳ ಆರೋಗ್ಯ ಸ್ಥಿತಿಗತಿಯ ವರದಿಗಳೂ ಈ ಸರ್ವರ್‌ನಲ್ಲಿ ಇದ್ದವು. ಒಟ್ಟಾರೆ ಈ ಎಲ್ಲಾ ದತ್ತಾಂಶಗಳು ಲಭ್ಯವಿಲ್ಲದಿದ್ದ ಸಮಯದಲ್ಲಿ ಚಿಕಿತ್ಸೆ ಮುಂದುವರಿಸುವುದು ಕಷ್ಟವಾಗಿತ್ತು. ರೋಗಿಗಳ ಬಳಿಯಲ್ಲಿದ್ದ ಭೌತಿಕ ಪ್ರತಿಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಈ 15 ದಿನಗಳ ಅವಧಿಯಲ್ಲಿ ಅಳಿಸಿಹಾಕಲಾಗಿದ್ದ ಎಲ್ಲಾ ದತ್ತಾಂಶಗಳನ್ನು ಮರಳಿ ಸ್ಥಾಪಿಸುವಲ್ಲಿ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ (ಸಿಇಆರ್‌ಟಿ) ಯಶಸ್ವಿಯಾಗಿತ್ತು. ಒಂದೊಮ್ಮೆ ಈ ದತ್ತಾಂಶಗಳು ಸಿಗದೇ ಇದ್ದಿದ್ದರೆ, ಏಮ್ಸ್‌ನ ಈವರೆಗಿನ ಎಲ್ಲಾ ದಾಖಲೆಗಳು, ಸಂಶೋಧನಾ ವರದಿಗಳು, ರೋಗಿಗಳ ನೋಂದಣಿ ಮತ್ತು ಚಿಕಿತ್ಸಾ ವಿವರಗಳು ಶಾಶ್ವತವಾಗಿ ಅಳಿಸಿಹೋಗುತ್ತಿದ್ದವು. ಏಮ್ಸ್‌ ಕಾರ್ಯನಿರ್ವಹಣೆಯೇ ಕಷ್ಟಸಾಧ್ಯವಾಗುತ್ತಿತ್ತು.


ದತ್ತಾಂಶ ಮಾರಾಟ

ವಿವಿಧ ಇಲಾಖೆಗಳು ಮತ್ತು ಖಾಸಗಿ ಕಂಪನಿಗಳಿಂದ ಕದಿಯಲಾದ ದತ್ತಾಂಶಗಳನ್ನು ಮಾರಾಟ ಮಾಡಲಾಗುತ್ತದೆ. ಡಾರ್ಕ್‌ ವೆಬ್‌ಗಳಲ್ಲಿ ಇಂತಹ ದತ್ತಾಂಶ ಮಾರಾಟವಾಗುತ್ತದೆ. 2022ರಲ್ಲಿ ದೇಶದಲ್ಲಿನ ಡಾಮಿನೋಸ್‌ ಗ್ರಾಹಕರ ದತ್ತಾಂಶವನ್ನು ಡಾರ್ಕ್‌ ವೆಬ್‌ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. 18 ಕೋಟಿಗೂ ಹೆಚ್ಚು ಗ್ರಾಹಕರ ಹೆಸರು, ವಿಳಾಸ, ಸಂಪರ್ಕ ವಿವರ, ಅವರ ಮೆಚ್ಚಿನ ಪಿಜ್ಜಾ  ವಿವರಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಜತೆಗೆ 10 ಲಕ್ಷಕ್ಕೂ ಹೆಚ್ಚು ಕ್ರೆಡಿಟ್‌ ಕಾರ್ಡ್‌ ವಿವರಗಳನ್ನೂ ಮಾರಾಟಕ್ಕೆ ಇಡಲಾಗಿತ್ತು. ಹಲವು ದಿನಗಳವರೆಗೆ ಈ ದತ್ತಾಂಶ ಮಾರಾಟಕ್ಕೆ ಲಭ್ಯವಿತ್ತು. ಸುಮಾರು 13 ಟೆರಾಬೈಟ್‌ನಷ್ಟಿದ್ದ ಈ ಮಾಹಿತಿಗಳನ್ನು ₹4 ಕೋಟಿಗೆ ನೀಡುತ್ತೇನೆ ಎಂದು ಮಾರಾಟಗಾರ ಘೋಷಿಸಿಕೊಂಡಿದ್ದ. ತಮ್ಮ ಕಂಪನಿಯ ಗ್ರಾಹಕರ ದತ್ತಾಂಶ ಭದ್ರತೆಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ ಎಂಬುದನ್ನು ಕಂಪನಿ ಹೇಳಿಕೊಂಡಿತ್ತು.

ಹೀಗೆ ಮಾರಾಟವಾದ ದತ್ತಾಂಶಗಳನ್ನು ಯಾವುದೋ ಒಂದು ಕಂಪನಿ ತನ್ನ ಉತ್ಪನ್ನ ಅಥವಾ ಸೇವೆಯ ಬಗ್ಗೆ ಗ್ರಾಹಕರ ಮೊಬೈಲ್‌ಗೆ ನೇರವಾಗಿ ಜಾಹೀರಾತು ನೀಡಲು ಅಥವಾ ಪ್ರಚಾರ ನಡೆಸಲು ಬಳಸಿಕೊಳ್ಳಬಹುದು. ಗ್ರಾಹಕರ ಖರ್ಚಿನ ಸಾಮರ್ಥ್ಯ ಮತ್ತು ಅವರ ಆಸಕ್ತಿಗಳನ್ನು ಆಧರಿಸಿ ಅಂಥದ್ದೇ ಸೇವೆ ಅಥವಾ ಸರಕನ್ನು ಕೊಳ್ಳುವಂತೆ ಪ್ರಚೋದಿಸಲು ಈ ದತ್ತಾಂಶಗಳನ್ನು ಬಳಸಿಕೊಳ್ಳಬಹುದು. ಇದರಿಂದ ಗ್ರಾಹಕರು ಇನ್ನಷ್ಟು ಸರಕು ಅಥವಾ ಸೇವೆಯನ್ನು ಖರೀದಿಸಬಹುದು, ಅದರಿಂದ ಅವರ ವೆಚ್ಚದ ಪ್ರಮಾಣ ಹೆಚ್ಚಾಗಬಹುದು.

ಅಭಿಪ್ರಾಯ ರೂಪಿಸುವಿಕೆ

ಹೀಗೆ ದತ್ತಾಂಶಗಳನ್ನು ಕದ್ದವರು, ರಾಜಕೀಯ ಪಕ್ಷಗಳಿಗೆ ಅಥವಾ ರಾಜಕೀಯ ನಾಯಕರಿಗೆ ಅವನ್ನು ಮಾರಾಟ ಮಾಡಬಹುದು. ಹೀಗೆ ಬಿಕರಿಯಾದ ದತ್ತಾಂಶವನ್ನು ಬಳಸಿಕೊಂಡು ರಾಜಕೀಯ ಅಭಿಪ್ರಾಯ ಸೃಷ್ಟಿಸಲು ಅವಕಾಶವಿದೆ. 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇದಕ್ಕೆ ಉತ್ತಮ ನಿದರ್ಶನ.

ಈ ಚುನಾವಣೆಗೂ ಮುನ್ನ ಅಮೆರಿಕದ 5 ಕೋಟಿಗೂ ಹೆಚ್ಚು ಮತದಾರರ ಸಾಮಾಜಿಕ ಜಾಲತಾಣ ಖಾತೆಗಳ ವಿವರವನ್ನು ಕದಿಯಲಾಗಿತ್ತು. ಆ ವಿವರಗಳನ್ನು ಬಳಸಿಕೊಂಡು, ಆ ಬಳಕೆದಾರರ ರಾಜಕೀಯ ನಿಲುವು ಏನು ಎಂಬುದನ್ನು ಅಧ್ಯಯನ ಮಾಡಲಾಗಿತ್ತು. ಅಧ್ಯಯನದ ವಿವರಗಳನ್ನು ಬಳಸಿಕೊಂಡೇ ಡೊನಾಲ್ಡ್‌ ಟ್ರಂಪ್‌ ಅವರ ಚುನಾವಣಾ ಪ್ರಚಾರ, ಪ್ರಚಾರದ ಸರಕುಗಳು, ಭಾಷಣಗಳು, ಘೋಷಣೆಗಳನ್ನು ರೂಪಿಸಲಾಗಿತ್ತು. ಈ ಮೂಲಕ ಟ್ರಂಪ್‌ ಅವರು ಒಂದು ರಾಜಕೀಯ ಅಭಿಪ್ರಾಯವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಅದು ಚುನಾವಣೆಯಲ್ಲೂ ಅವರ ಅನುಕೂಲಕ್ಕೆ ಬಳಕೆಯಾಯಿತು ಎಂಬುದು ಆರೋಪ. ಫೇಸ್‌ಬುಕ್‌ನ ಮಾಜಿ ನೌಕರರೊಬ್ಬರು ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಭಾರತದಲ್ಲೂ ಸಾರ್ವಜನಿಕರ ಮೊಬೈಲ್‌ ವಿವರ ಮತ್ತು ಸಾಮಾಜಿಕ ಜಾಲತಾಣ ಖಾತೆಗಳನ್ನು ಕೆಲವು ರಾಜಕೀಯ ಪಕ್ಷಗಳು ಇದೇ ರೀತಿ ಬಳಸಿಕೊಳ್ಳುತ್ತಿವೆ ಎಂಬ ಆರೋಪವಿದೆ.

ಆರ್ಥಿಕ ಅಪರಾಧಗಳು

ಸಾರ್ವಜನಿಕರ ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರ, ಕ್ರೆಡಿಟ್‌ ಕಾರ್ಡ್‌ ವಿವರ, ಪ್ಯಾನ್‌ ಮತ್ತು ಆಧಾರ್ ವಿವರಗಳನ್ನು ಬಳಸಿಕೊಂಡು ಆರ್ಥಿಕ ಅಪರಾಧಗಳನ್ನು ಎಸಗಲು ಅವಕಾಶವಿದೆ. ಈ ವಿವರಗಳನ್ನು ಕದ್ದವರು, ಅವನ್ನು ಬಳಸಿಕೊಂಡು ಬ್ಯಾಂಕ್‌ ಖಾತೆಯಿಂದ ಹಣ ರವಾನಿಸಿಕೊಳ್ಳಬಹುದು. ಕ್ರೆಡಿಟ್‌ ಕಾರ್ಡ್‌ನ ಬ್ಯಾಲೆನ್ಸ್‌ ಅನ್ನು ವೆಚ್ಚ ಮಾಡಬಹುದು. ಸಾಲವನ್ನೂ ಪಡೆದುಕೊಳ್ಳಬಹುದು. ಸಾಲ ಮಾಡದೇ ಇದ್ದರೂ, ಸಾಲ ತೀರಿಸಬೇಕಾದ ಅಥವಾ ಅದಕ್ಕಾಗಿ ಕಾನೂನು ಹೋರಾಟ ನಡೆಸಬೇಕಾದ ಸ್ಥಿತಿ ಎದುರಾಗಬಹುದು. ಖಾತೆಯಲ್ಲಿರುವ ನಮ್ಮ ಹಣವನ್ನೂ ಕಳೆದುಕೊಳ್ಳಬಹುದು. ಆರೋಗ್ಯ ವಿಮೆಯನ್ನೂ ಕ್ಲೇಮು ಮಾಡಿಕೊಳ್ಳಬಹುದು.

ಹೀಗೆ ಆರ್ಥಿಕ ಅಪರಾಧ ಎಸಗುವವರಿಗೆ ಜನರ ಆರ್ಥಿಕ ವಿವರಗಳು ಹೇಗೆ ಲಭ್ಯವಾಗುತ್ತವೆ ಎಂಬ ಪ್ರಶ್ನೆಯೂ ಇದೆ. ಸರ್ಕಾರಿ ಇಲಾಖೆಗಳ ಸರ್ವರ್‌ಗಳಲ್ಲಿ, ಬ್ಯಾಂಕ್‌ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗಿರುವ ಇಂತಹ ಮಾಹಿತಿಗಳು ಸೋರಿಕೆಯಾದರೆ ಮಾತ್ರ, ಅವು ಇಂತಹ ವಂಚಕರಿಗೆ ಲಭ್ಯವಾಗುತ್ತವೆ.

ಆಧಾರ: ಪಿಟಿಐ, ಕೋವಿನ್‌ ಪೋರ್ಟಲ್‌, ಪಿಐಬಿ ಪತ್ರಿಕಾ ಪ್ರಕಟಣೆ, ಐಬಿಎಂ/ಮೈಕ್ರೊಟ್ರೆಂಡ್‌ ದತ್ತಾಂಶ ಸುರಕ್ಷಾ ಪ್ರಶ್ನೋತ್ತರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT