‘ಇವತ್ ನನ್ನ ಮಗ ಅವ್ವಾ ಮಸಾಲೆ ಅನ್ನ ಮಾಡಿಕೊಡು ಅಂತ ಕೇಳಿದ. ಮನ್ಯಾಗ ಅಕ್ಕಿ ಬಿಟ್ರ ಬ್ಯಾರೆ ಏನೂ ಇದ್ದಿಲ್ರಿ, ಅನ್ನ ಮಾಡಿ ಅದಕ್ಕ ಖಾರಪುಡಿ ಹಾಕಿ ಕಲಸಿ, ಇದೇ ಮಸಾಲೆ ಅನ್ನ ತಿನ್ನು ಮಗ ಅಂದೆ. ಏನ್ಮಾಡಲಿ ಅಕ್ಕೋರೆ ನನ್ನ ಕರಳು ಕಿತ್ತು ಬಂತ್ರಿ...’

– ಹೀಗೆ ನುಡಿಯುತ್ತಲೇ ಗಂಟಲ ಸೆರೆ ಉಬ್ಬಿ ಬಂದ ಆ ಲೈಂಗಿಕ ಕಾರ್ಯಕರ್ತೆ ಒಂದೆರಡು ಕ್ಷಣ ಮಾತು ನಿಲ್ಲಿಸಿ, ಒತ್ತರಿಸಿ ಬರುತ್ತಿದ್ದ ಅಳುವನ್ನು ತಡೆಹಿಡಿದರು.

‘ಎಷ್ಟು ದಿನ ಅಂತ ಮನೇಲಿ ಕೂಡಲಿ ಅಂತಾ... ಕಾಯೀಪಲ್ಲೆ (ತರಕಾರಿ) ತರೋಕೆ ಮನೆಯಿಂದ ಹೊರಗ ಕಾಲಿಟ್ಟೆ. ಅಷ್ಟರಲ್ಲಿ ಆ ಪೊಲೀಸಪ್ಪ, ‘ಬೇ.. ನಿಂದೆಲ್ಲಾ ಗೊತ್ತೈತಿ, ಸೀದಾ ಮನಿಗೇ ಹೋಗ್ಬೇಕು. ಇಲ್ಲಾಂದ್ರ ಓಣಿ ಬಿಟ್ಟು ಓಡಸ್ತೀನಿ’ ಅಂದ. ‘ಯಪ್ಪಾ ನಿನ್ನಲ್ಲಿರೋದು ರಕ್ತ, ನನ್ನಲ್ಲಿರೋದು ರಕ್ತ.. ಕಾಯೀಪಲ್ಲೆ ತಗೊಂಡು ಹೋಗ್ತೀನಿ ಬಿಡಪ್ಪಾ.. ಅಂದೆ ರೀ...’

–ಗದಗ ಜಿಲ್ಲೆಯ ಲೈಂಗಿಕ ಕಾರ್ಯಕರ್ತೆಯರೊಬ್ಬರು ಕೋವಿಡ್–19 ತಮ್ಮ ಅನ್ನವನ್ನು ಕಸಿದುಕೊಂಡ ಬಗೆಯನ್ನು ವಿವರಿಸಿದ್ದು ಹೀಗೆ.

ಮಾರ್ಚ್‌ನಲ್ಲಿ ಆರಂಭವಾದ ಲಾಕ್‌ಡೌನ್ ಬಿಸಿ ಲೈಂಗಿಕ ವೃತ್ತಿನಿರತರಿಗೂ ತಟ್ಟಿದೆ. ದೈಹಿಕ ಸಾಮೀಪ್ಯವೇ ಮುಖ್ಯವಾಗಿರುವ ಕಾರಣ ಈ ವೃತ್ತಿಯನ್ನು ನಿಲ್ಲಿಸಿಬಿಡುವುದು ಅನಿವಾರ್ಯವಾಗಿದೆ. ರಾಜ್ಯದಲ್ಲಿ ಅಂದಾಜು ಒಂದೂವರೆ ಲಕ್ಷದಷ್ಟು ಲೈಂಗಿಕ ಕಾರ್ಯಕರ್ತೆಯರು ಸಂಕಷ್ಟದಲ್ಲಿದ್ದಾರೆ.

ಮಿಲನಕ್ಕೆ ಅಂತರವೇ ಅಡ್ಡಿ

‘ಈ ವೃತ್ತಿಯಿಂದ ಗಳಿಸುವ ಆದಾಯವೇ ಕುಟುಂಬಕ್ಕೆ ಆಧಾರ. ಆದರೆ, ಕೊರೊನಾ ಬಂದಮೇಲೆ ನಮ್ಮ ಬದುಕು ದುಸ್ತರವಾಗಿದೆ. ಹಿಂದೆ ಎಚ್ಐವಿ ಇದ್ದರೂ ಕಾಂಡೋಮ್ ಬಳಸುತ್ತಿದ್ದ ಕಾರಣಕ್ಕೆ ಗ್ರಾಹಕರು ಬರುತ್ತಿದ್ದರು. ಆದರೆ, ಕೋವಿಡ್ ಭೀತಿಯಿಂದ ದೈಹಿಕ ಅಂತರ ಕಾಪಾಡಿಕೊಳ್ಳಬೇಕಾಗಿರುವ ಕಾರಣ ಗ್ರಾಹಕರು ಬರುತ್ತಿಲ್ಲ. ಎಚ್ಐವಿ ಬಂದ್ರೆ ಭಯವಿಲ್ಲ. ಕೊರೊನಾ ಬಂದು ಬದುಕೇ ಇಲ್ಲದಂತಾಗಿದೆ ನಮ್ಮ ಸ್ಥಿತಿ’ ಎನ್ನುತ್ತಾರೆ ಹಾಸನದ ಮತ್ತೊಬ್ಬ ಕಾರ್ಯಕರ್ತೆ.

‘ಕೋವಿಡ್‌ನಿಂದಾಗಿ ಈ ವೃತ್ತಿಯಲ್ಲಿರುವ ಬಹುತೇಕ ಹೆಣ್ಣುಮಕ್ಕಳು ಮನೆಯಿಂದ ಹೊರಗೇ ಕಾಲಿಟ್ಟಿಲ್ಲ. ಕೆಲವರು ತಾವು ಉಳಿಸಿದ್ದ ಹಣದಲ್ಲೇ ಜೀವನ ಮಾಡಿದರೆ, ಮತ್ತೆ ಕೆಲವರಿಗೆ ಗ್ರಾಹಕರು, ಎನ್‌ಜಿಒಗಳು ಸಹಾಯಹಸ್ತ ಚಾಚಿದ್ದಾರೆ. ಕೈಯಲಿದ್ದ ಹಣ ಖಾಲಿಯಾಗಿ, ಸಂಘ–ಸಂಸ್ಥೆಗಳ ಸಹಾಯವೂ ನಿಂತಿರುವುದರಿಂದ ಈ ಮಹಿಳೆಯರು ಕೋವಿಡ್ ಭೀತಿಯ ನಡುವೆಯೇ ವೃತ್ತಿಗಿಳಿಯಲು ಸಿದ್ಧರಾಗಿದ್ದಾರೆ. ಆದರೆ, ಹಿಂದಿನಂತೆ ಗ್ರಾಹಕರು ಬರುವುದು ಅನುಮಾನ’ ಎನ್ನುತ್ತಾರೆ ಸಿಂಧನೂರಿನ ಲೈಂಗಿಕ ಕಾರ್ಯಕರ್ತೆ.

ರಹಸ್ಯ ಬಯಲಾಗುವ ಭಯ

ಮನೆಗೆಲಸ, ಗಾರ್ಮೆಂಟ್ಸ್ ಕೆಲಸ ಮಾಡುತ್ತೇವೆ ಎಂದು ಕುಟುಂಬಕ್ಕೆ ಸುಳ್ಳು ಹೇಳಿ ಈ ವೃತ್ತಿಯಲ್ಲಿ ತೊಡಗಿದ್ದ ಲೈಂಗಿಕ ಕಾರ್ಯಕರ್ತೆಯರದ್ದು ಮತ್ತೊಂದು ಸಂಕಟ. ಗಂಡ, ಮಕ್ಕಳು ಈಗ ಮನೆಯಲ್ಲೇ ಇರುವ ಕಾರಣ ಎಲ್ಲಿ ತಮ್ಮ ವೃತ್ತಿ ರಹಸ್ಯ ತಿಳಿಯುವುದೋ ಎನ್ನುವ ಭಯ ಇವರದ್ದು. ಕೆಲವರು ಈ ವೃತ್ತಿಯನ್ನು ಪಾರ್ಟ್ ಟೈಮ್ ಮಾಡುತ್ತಿದ್ದರು. ಮನೆಯಲ್ಲಿ ವಯಸ್ಸಾದ ಅಪ್ಪ-ಅಮ್ಮ, ಮಕ್ಕಳ ಪಾಲನೆ, ಪೋಷಣೆಗೆ ಇವರ ನಿತ್ಯದ ಆದಾಯವೇ ಮೂಲವಾಗಿತ್ತು. ಈಗ ಆದಾಯವಿಲ್ಲದೇ ಆರ್ಥಿಕ ಸಂಕಷ್ಟ ಎದುರಾಗಿದೆ ಎನ್ನುತ್ತಾರೆ ಲೈಂಗಿಕ ಕಾರ್ಯಕರ್ತೆಯರು.

‘ಮನೆ, ಸ್ನೇಹಿತರ ಮನೆ, ಇಲ್ಲವೇ ಲಾಡ್ಜ್‌ಗಳಲ್ಲಿ ವೃತ್ತಿ ನಡೆಸುತ್ತಿದ್ದ ಮಹಿಳೆಯರು ಕೋವಿಡ್ ಕಾರಣಕ್ಕಾಗಿ ಮನೆಯಿಂದ ಹೊರಬರುತ್ತಿಲ್ಲ. ಕೆಲ ಗ್ರಾಹಕರು ಇವರ ಮೊಬೈಲ್‌ಗಳಿಗೆ ಪದೇಪದೇ ಫೋನ್ ಮಾಡುವುದೂ ಕುಟುಂಬದವರ ಅನುಮಾನಕ್ಕೆ ಕಾರಣವಾಗುತ್ತಿದೆ’ ಎನ್ನುತ್ತಾರೆ ರಾಯಚೂರಿನ ಲೈಂಗಿಕ ಕಾರ್ಯಕರ್ತೆ.

ಅಪೌಷ್ಟಿಕತೆಯಿಂದಲೇ ಸಾವು

‘ಎಚ್ಐವಿ ಪೀಡಿತ ಲೈಂಗಿಕ ಕಾರ್ಯಕರ್ತೆಯರ ಬದುಕಂತೂ ಇನ್ನಷ್ಟು ಹದಗೆಟ್ಟಿದೆ. ಎಚ್ಐವಿಗೆ ತೆಗೆದುಕೊಳ್ಳುವ ಔಷಧಿಯ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಅಗತ್ಯ. ಹಾಗಿದ್ದರೆ ಮಾತ್ರ ಔಷಧಿ ಪರಿಣಾಮಕಾರಿಯಾಗಬಲ್ಲದು. ಆದರೆ, ಕೋವಿಡ್ ಬಂದ ಮೇಲೆ ಇವರು ಪೌಷ್ಟಿಕ ಆಹಾರವಿಲ್ಲದೇ ನರಳುವಂತಾಗಿದೆ. ಗ್ರಾಹಕರೇ ಇವರಿಗೆ ಒಳ್ಳೆಯ ಊಟ ಕೊಡಿಸಿ, ದುಡ್ಡೂ ಕೊಡುತ್ತಿದ್ದರು. ಕೋವಿಡ್‌ನಿಂದಾಗಿ ಅದಕ್ಕೂ ಕಲ್ಲು ಬಿದ್ದಿದೆ. ರಾಯಚೂರು ಜಿಲ್ಲೆಯೊಂದಲ್ಲಿಯೇ 300 ಎಚ್‌ಐವಿ ಪೀಡಿತ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಒಬ್ಬೊಬ್ಬರ ಸ್ಥಿತಿಯೂ ಕರುಣಾಜನಕ. ಕೊರೊನಾ ಬಂದು ಸಾಯುವುದಕ್ಕಿಂತ ಅಪೌಷ್ಟಿಕತೆಯಿಂದಲೇ ಈ ಮಹಿಳೆಯರು ಸಾಯ ಬಹುದು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಉತ್ತರ ಕರ್ನಾಟಕ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಹುಲಿಗೆಮ್ಮ.

‘ಗ್ರಾಹಕ ಬಂದರೂ ಅವರೊಂದಿಗೆ ವ್ಯವಹರಿಸುವಾಗ ಕೋವಿಡ್ ಭೀತಿ ಕಾಡುತ್ತದೆ. ಒಂದು ವೇಳೆ ಸೋಂಕು ತಗುಲಿದರೆ ಆಕೆಯ ಇಡೀ ಕುಟುಂಬವೇ ನರಳಬೇಕಾಗುತ್ತದೆ ಎನ್ನುವ ಆತಂಕ ಈ ಮಹಿಳೆಯರದ್ದು’ ಎನ್ನುತ್ತಾರೆ ಗಮನ ಮಹಿಳಾ ಸಮೂಹದ ಮಮತಾ ಯಜಮಾನ್.

ಮನೆ ಬಾಡಿಗೆ ಕಟ್ಟಲೂ ಹಣವಿಲ್ಲ

‘ಆದಾಯವಿಲ್ಲದೇ ಹಲವರಿಗೆ ಮನೆ ಬಾಡಿಗೆ ಕಟ್ಟಲೂ ಹಣವಿಲ್ಲ. ಸರ್ಕಾರದ ಯೋಜನೆಗಳಡಿ ಹಲವರು ಸಾಲ ಪಡೆದಿದ್ದಾರೆ. ಈಗ ಸಾಲದ ಕಂತು ತೀರಿಸಲಾಗುತ್ತಿಲ್ಲ. ಸರ್ಕಾರ ಈ ಮಹಿಳೆಯರ ಸಾಲ ಮನ್ನಾ ಮಾಡಲಿ’ ಎನ್ನುತ್ತಾರೆ ಸಾಧನಾ ಮಹಿಳಾ ಸಂಘದ ಕಾರ್ಯದರ್ಶಿ ಗೀತಾ ಎಂ.

‘ಅನಿವಾರ್ಯ ಕಾರಣಗಳಿಂದ ಈ ವೃತ್ತಿಗೆ ಬಂದಿದ್ದೇವೆ. ಸರ್ಕಾರ ನಮ್ಮನ್ನು ಕಾರ್ಮಿಕರೆಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. 2009ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಲೈಂಗಿಕ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ನಡೆಸುವ ಅಧಿಕಾರ ಯಾರಿಗೂ ಇಲ್ಲ. ನಮಗೂ ಘನತೆಯಿಂದ ಬದುಕುವ ಹಕ್ಕಿದೆ’ ಎನ್ನುತ್ತಾರೆ ಮಂಗಳೂರಿನ ಲೈಂಗಿಕ ಕಾರ್ಯಕರ್ತೆ.

ಸಾಲಿಡಾರಿಟಿ ಫೌಂಡೇಷನ್ ಸಹಾಯವಾಣಿ: 90132 62626

ಮಕ್ಕಳ ಭವಿಷ್ಯದ ಚಿಂತೆ

ಲೈಂಗಿಕ ಕಾರ್ಯಕರ್ತೆಯರ ಆರ್ಥಿಕ ದುಸ್ಥಿತಿಯಿಂದಾಗಿ ಅವರ ಮಕ್ಕಳ ಶಿಕ್ಷಣದ ಮೇಲೂ ಕಾರ್ಮೋಡ ಕವಿದಿದೆ. ಹಲವು ಪೋಷಕರ ಬಳಿ ಸ್ಮಾರ್ಟ್‌ಫೋನ್‌ಗಳಿಲ್ಲ. ಇದ್ದರೂ ಕರೆನ್ಸಿಗೆ ದುಡ್ಡಿಲ್ಲ. ಹಾಗಾಗಿ, ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲೆ ಇಲ್ಲದ್ದರಿಂದ ಕೆಲ ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕಿಂತ ಮದುವೆ ಮಾಡಿಬಿಡುವುದೇ ಸೂಕ್ತ ಎನ್ನುವ ತೀರ್ಮಾನಕ್ಕೂ ಲೈಂಗಿಕ ಕಾರ್ಯಕರ್ತೆಯರು ಬಂದಿದ್ದಾರೆ. ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಮಾಡುವ ಆಲೋಚನೆಗಳೂ ಅವರ ತಲೆಯಲ್ಲಿ ಹರಿದಾಡುತ್ತಿವೆ.

ಸಂಗಮ ಮತ್ತು ಕರ್ನಾಟಕ ಸೆಕ್ಸ್ ವರ್ಕರ್ಸ್ ಯೂನಿಯನ್ ಈಗಾಗಲೇ 16 ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿವೆ. 100 ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಕೋರಿ ಮನವಿಗಳು ಬಂದಿವೆ. ಸಹಾಯ ಮಾಡಲು ಸಂಗಮ ಸಜ್ಜಾಗಿದೆ.

ಫಿನಾಯಿಲ್ ಮಾರುವ ಹಾಸನದ ಗಟ್ಟಿಗಿತ್ತಿಯರು

ಹಾಸನದ ಯಶಸ್ವಿನಿ ಶ್ರೇಯೋಭಿವೃದ್ಧಿ ಮಹಿಳಾ ಸಂಘ, ಮಹಿಳೆಯರಿಂದ ಫಿನಾಯಿಲ್, ಸೋಪ್ ತಯಾರಿಸುವ ಮೂಲಕ ಮಾದರಿಯಾಗಿದೆ.

ಹಾಸನದ 8 ತಾಲ್ಲೂಕುಗಳಲ್ಲಿ ಸಕ್ರಿಯವಾಗಿರುವ ಈ ಸಂಘ ಲಾಕ್‌ಡೌನ್ ಅವಧಿಯಲ್ಲಿ ಈ ಮಹಿಳೆಯರಿಗೆ ಉದ್ಯೋಗ ನೀಡಿ, ಬರುವ ಆದಾಯವನ್ನು ಹಂಚಿಕೊಳ್ಳುತ್ತಿದೆ. ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಮತ್ತು ಇತರರು ಸಂಘಕ್ಕೆ ನೆರವಾಗಿದ್ದಾರೆ.

8 ತಾಲ್ಲೂಕುಗಳ ಗ್ರಾಮ ಪಂಚಾಯ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸ್ಟೆಲ್‌ಗಳಲ್ಲಿ ಫಿನಾಯಿಲ್ ಮಾರಲು ಜಿಲ್ಲಾಧಿಕಾರಿ, ಡಿಎಚ್‌ಒ ಮತ್ತು ಸಿಒಇ ಅವರಿಂದ ಅನುಮತಿಯನ್ನೂ ಪಡೆದಿದೆ. ಈ ಸಂಘ ಇನ್ನೂ ಹೆಚ್ಚು ಮಹಿಳೆಯರನ್ನು ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳಲಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷೆ.

ಆನ್‌ಲೈನ್‌ನಲ್ಲೂ ದೋಖಾ!

ನಗರದ ಕೆಲ ಲೈಂಗಿಕ ಕಾರ್ಯಕರ್ತೆಯರುಆನ್‌ಲೈನ್ ಮೂಲಕ (ಮೊಬೈಲ್ ಫೋನ್) ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಅದರೆ ವಿಡಿಯೊ ಕಾಲ್, ಫೋಟೊಗಳನ್ನು ಸೇವ್ ಮಾಡಿಟ್ಟುಕೊಳ್ಳುವ ಗ್ರಾಹಕರು ಈ ಮಹಿಳೆಯರನ್ನು ಬೆದರಿಸುವ ಅಪಾಯವೂ ಇದೆ ಎಂಬುದು ಕೆಲವು ಮಹಿಳೆಯರು ಹೇಳಿದ್ದಾರೆ.

ರೆಕಾರ್ಡ್ ಮಾಡಿಕೊಂಡು ಆ ಮಹಿಳೆಯ ಪತಿ ಇಲ್ಲವೇ ಕುಟುಂಬಕ್ಕೆ ತಿಳಿಸುತ್ತೇನೆಂಬ ಬೆದರಿಕೆ ಒಡ್ಡಿ ಇವರನ್ನು ತಾವು ಇದ್ದಲ್ಲಿಗೇ ಕರೆಸಿಕೊಂಡು ಉಚಿತವಾಗಿ ಬಳಸಿಕೊಳ್ಳುವವರೂ ಇದ್ದಾರೆ.ಆನ್‌ಲೈನ್‌ನಲ್ಲೂ ಈ ಮಹಿಳೆಯರಿಗೆ ಹಣ ಕೊಡದಿರುವ ಗ್ರಾಹಕರಿದ್ದಾರೆ.

ಹೊಟ್ಟೆಗೆ ಹಿಟ್ಟಿಕ್ಕಿದ ರೇಷನ್ ಕಿಟ್

ಲಾಕ್‌ಡೌನ್‌ನ ಮೊದಲ ಮೂರು ತಿಂಗಳು ಸಂಗಮ, ಸಾಧನಾ, ಅಜೀಂ ಪ್ರೇಮ್‌ಜೀ ಫೌಂಡೇಷನ್, ಸಾಲಿಡಿಟರಿ ಫೌಂಡೇಷನ್, ಗಮನ ಮಹಿಳಾ ಸಮೂಹ ಸಂಸ್ಥೆಗಳು ಲೈಂಗಿಕ ಕಾರ್ಯಕರ್ತೆಯರಿಗೆ ರೇಷನ್ ಕಿಟ್ ವಿತರಿಸಿವೆ. ಆದರೆ, ಕೆಲವು ಎನ್‌ಜಿಒಗಳಿಗೂ ಈಗ ಆರ್ಥಿಕ ಸಂಕಷ್ಟ ಎದುರಾಗಿದೆ.

‘ಆರ್ಥಿಕ ಸಂಕಷ್ಟ, ಕೋವಿಡ್ ಭೀತಿ ಕಾರಣದಿಂದ ಅನೇಕ ಲೈಂಗಿಕ ಕಾರ್ಯಕರ್ತೆಯರು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಾರೆ. ಅನೇಕರಲ್ಲಿ ಆತ್ಮಹತ್ಯೆಯ ಆಲೋಚನೆಗಳೂ ಬಂದಿವೆ. ಅಂಥವರ ಕೌನ್ಸೆಲಿಂಗ್‌ಗಾಗಿ ನಾವು ಸಹಾಯವಾಣಿ ಆರಂಭಿಸಿದ್ದೇವೆ’ ಎನ್ನುತ್ತಾರೆ ಸಾಲಿಡಾರಿಟಿ ಫೌಂಡೇಷ್‌ನ ಸಂಸ್ಥಾಪಕಿ ಶುಭಾ ಚಾಕೊ.

‘ಇತರ ರಾಜ್ಯಗಳಂತೆ ಕರ್ನಾಟಕದಲ್ಲಿ ಬ್ರಾಥೆಲ್ ಸಿಸ್ಟಂ (ವೇಶ್ಯಾಗೃಹ) ಇಲ್ಲ. ರಾಜ್ಯದಲ್ಲಿ ಬೀದಿಬದಿಯ ಲೈಂಗಿಕ ಕಾರ್ಯಕರ್ತೆಯರೇ ಹೆಚ್ಚಿದ್ದಾರೆ. ಕೊರೊನಾದಿಂದಾಗಿ ಈ ವೃತ್ತಿಗೆ ಹೆಚ್ಚು ಹೊಡೆತ ಬಿದ್ದಿದೆ. 28 ಜಿಲ್ಲೆಗಳ 4 ಸಾವಿರ ಲೈಂಗಿಕ ಕಾರ್ಯಕರ್ತೆಯರಿಗೆ ಸರ್ಕಾರೇತರ ಸಂಸ್ಥೆ ‘ಸಂಗಮ’ದಿಂದ ಸಹಾಯ ಮಾಡಿದ್ದೇವೆ. ಸರ್ಕಾರವೂ ತುಸು ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಸಂಗಮ ಸಂಸ್ಥೆಯ ರಾಜೇಶ್.

ರಾಜ್ಯದಲ್ಲಿಲೈಂಗಿಕ ಕಾರ್ಯಕರ್ತೆಯರ ಅಂಕಿಅಂಶ

* ಒಟ್ಟು ಲೈಂಗಿಕ ಕಾರ್ಯಕರ್ತೆಯರು– 96,878
* ಬಾಲಕಿಯರು– 459
* 18-24ರ ವಯೋಮಾನದವರು– 12,185
* ಅಂಗವಿಕಲರು– 1,800
* ಎಚ್‍ಐವಿ ಸೋಂಕಿತ ಹೆಣ್ಣು ಮಕ್ಕಳು– 8,000

(ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ವರದಿ-2017–ರಾಜ್ಯ ಸರ್ಕಾರದ ಸಮೀಕ್ಷೆಯ ಅಂಕಿಅಂಶ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.