ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಚಿನ್ನ ದುಬಾರಿ; ತಗ್ಗಿದ ಖರೀದಿ, ಹೂಡಿಕೆ
ಆಳ–ಅಗಲ: ಚಿನ್ನ ದುಬಾರಿ; ತಗ್ಗಿದ ಖರೀದಿ, ಹೂಡಿಕೆ
Published 13 ಆಗಸ್ಟ್ 2023, 23:31 IST
Last Updated 13 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಚಿನ್ನದ ಬಳಕೆಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತೀಯರಿಗೆ ಚಿನ್ನದ ವ್ಯಾಮೋಹ ತುಸು ಹೆಚ್ಚೇ... ಮದುವೆ ಸಮಾರಂಭ, ಅಕ್ಷಯ ತೃತೀಯ... ಹೀಗೆ ವಿಶೇಷ ಸಂದರ್ಭಗಳಿಗೆ ಮಾತ್ರವಲ್ಲದೆ ಕಷ್ಟಕಾಲದಲ್ಲಿ ಬೇಕಾಗುತ್ತದೆ ಎಂದು, ಹೂಡಿಕೆಯ ದೃಷ್ಟಿಯಿಂದಲೂ ಭಾರತದಲ್ಲಿ ಚಿನ್ನಕ್ಕೆ ಮಹತ್ವದ ಸ್ಥಾನ ಇದೆ. ಉಳಿತಾಯದ ದೃಷ್ಟಿಯಿಂದಲೂ ಚಿನ್ನ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. 

ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿ ಇದ್ದಾಗ ಹೂಡಿಕೆ, ಖರೀದಿ ಪ್ರಮಾಣ ಕಡಿಮೆ ಆಗುತ್ತದೆ. ದೇಶದಲ್ಲಿ ಸದ್ಯ ಚಿನ್ನದ ಬೆಲೆಯು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಬೇಡಿಕೆ ಇಳಿಮುಖವಾಗಿದೆ. ಚಿನ್ನಾಭರಣ ಖರೀದಿ, ಚಿನ್ನದ ಮೇಲೆ ಹೂಡಿಕೆ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಆಳ–ಅಗಲ: ಚಿನ್ನ ದುಬಾರಿ; ತಗ್ಗಿದ ಖರೀದಿ, ಹೂಡಿಕೆ

10 ಗ್ರಾಂ ಚಿನ್ನದ ದರ ಸದ್ಯ ₹60 ಸಾವಿರವನ್ನು ದಾಟಿ ವಹಿವಾಟು ನಡೆಸುತ್ತಿದೆ. ಈ ವರ್ಷದ ಆರಂಭದಿಂದಲೇ ಚಿನ್ನದ ದರ ಏರುಗತಿಯಲ್ಲಿ ಇದೆ. 10 ಗ್ರಾಂಗೆ ಫೆಬ್ರುವರಿಯಲ್ಲಿ ₹60 ಸಾವಿರದ ಗಡಿಯನ್ನು ದಾಟಿದ್ದ ಚಿನ್ನವು ಇನ್ನಷ್ಟು ಏರಿಕೆ ಕಾಣುವ ಸೂಚನೆ ನೀಡಿತ್ತಾದರೂ ಸದ್ಯ ₹60 ಸಾವಿರದ ಆಸುಪಾಸಿನಲ್ಲಿ ಇದೆ.

ಆಳ–ಅಗಲ: ಚಿನ್ನ ದುಬಾರಿ; ತಗ್ಗಿದ ಖರೀದಿ, ಹೂಡಿಕೆ

ಚಿನ್ನದ ದರ ಗರಿಷ್ಠ ಮಟ್ಟದಲ್ಲಿ ಇರುವುದರಿಂದಾಗಿ ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುತ್ತಿದೆ ಎಂದು ವಿಶ್ವ ಚಿನ್ನ ಸಮಿತಿಯ (ಡಬ್ಲ್ಯುಜಿಸಿ) ಈಚಿನ ವರದಿ ಹೇಳಿದೆ. ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ 158.1 ಟನ್‌ ಚಿನ್ನ ಆಮದಾಗಿದ್ದು, 2022ರ ಇದೇ ಅವಧಿಗೆ ಹೋಲಿಸಿದರೆ (170.7 ಟನ್‌) ಶೇ 7ರಷ್ಟು ಇಳಿಕೆ ಆಗಿದೆ ಎಂದು ವರದಿ ತಿಳಿಸಿದೆ. ಆದರೆ ಮೌಲ್ಯದ ಲೆಕ್ಕದಲ್ಲಿ ₹79,270 ಕೋಟಿಯಿಂದ ₹82,530 ಕೋಟಿಗೆ ಏರಿಕೆ ಕಂಡಿದೆ. ಚಿನ್ನಾಭರಣ ಬೇಡಿಕೆಯು ಸಹ ಶೇ 8ರಷ್ಟು ಇಳಿಕೆಯಾಗಿ 128.6 ಟನ್‌ಗೆ ತಲುಪಿದೆ. ಕಳೆದ ಬಾರಿ 140.3 ಟನ್‌ ಇತ್ತು. ಚಿನ್ನದ ಬಾರ್‌ ಮತ್ತು ನಾಣ್ಯಗಳ ಬೇಡಿಕೆಯೂ ಶೇ 3ರಷ್ಟು ಕಡಿಮೆ ಆಗಿದೆ.

ಹೆಚ್ಚಿದ ಮರುಬಳಕೆ: ಚಿನ್ನದ ಬೆಲೆ ಏರಿಕೆ ಕಂಡಾಗ ಖರೀದಿಯಿಂದ ಹಿಂದೆ ಸರಿಯುವ ಜನರು ಒಂದೆಡೆಯಾದರೆ, ತಮ್ಮ ಬಳಿ ಸಂಗ್ರಹಿಸಿ ಇಟ್ಟುಕೊಂಡಿರುವ ಚಿನ್ನವನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಮುಂದಾಗುವ ಜನರು ಇನ್ನೊಂದೆಡೆ. ಈ ವರ್ಷದ ಆರಂಭದಿಂದಲೂ ಚಿನ್ನದ ದರ ಗರಿಷ್ಠ ಮಟ್ಟದಲ್ಲಿಯೇ ಇರುವುದರಿಂದ ಜನರು ತಮ್ಮ ಬಳಿ ಇರುವ ಚಿನ್ನದಲ್ಲಿ ಒಂದಷ್ಟನ್ನು ಮಾರಾಟ ಮಾಡಿ ಲಾಭ ಮಾಡಿಕೊಂಡಿದ್ದಾರೆ. ಹೀಗಾಗಿ ಜೂನ್‌ ತ್ರೈಮಾಸಿಕದಲ್ಲಿ ‌ಚಿನ್ನದ ಮರುಬಳಕೆಯು ಶೇ 61ರಷ್ಟು ಹೆಚ್ಚಾಗಿ 37.6 ಟನ್‌ಗಳಿಗೆ ತಲುಪಿದೆ.

ಆಳ–ಅಗಲ: ಚಿನ್ನ ದುಬಾರಿ; ತಗ್ಗಿದ ಖರೀದಿ, ಹೂಡಿಕೆ
ಆಳ–ಅಗಲ: ಚಿನ್ನ ದುಬಾರಿ; ತಗ್ಗಿದ ಖರೀದಿ, ಹೂಡಿಕೆ

ಕೋವಿಡ್‌ ಅವಧಿಯಲ್ಲಿ ಹೆಚ್ಚಾದ ಹೂಡಿಕೆ

ಭಾರತದಲ್ಲಿ ಕೋವಿಡ್‌ ಸಾಂಕ್ರಾಮಿಕದ ಪ್ರಭಾವ ಹೆಚ್ಚು ತೀವ್ರವಾಗಿದ್ದ ಜಿಲ್ಲೆಗಳ ಜನರು ತಮ್ಮ ಉಳಿತಾಯದಲ್ಲಿ ಚಿನ್ನ ಖರೀದಿಗೆ ಹೆಚ್ಚು ಹಣ ತೊಡಗಿಸಿದ್ದಾರೆ ಎನ್ನುವ ಮಾಹಿತಿಯನ್ನು ಅಹಮದಾಬಾದ್‌ನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಎ) ವರದಿ ತಿಳಿಸಿದೆ. ಭಾರತದ ಪ್ರತಿ ಕುಟುಂಬವೂ ತನ್ನ ಒಟ್ಟು ಹೂಡಿಕೆಯಲ್ಲಿ ಸರಾಸರಿ ಶೇ 11ರಷ್ಟನ್ನು ಚಿನ್ನದ ಮೇಲೆ ತೊಡಗಿಸುತ್ತಿದೆ ಎಂದು ವರದಿಯು ಹೇಳಿದೆ.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ, ಕುಟುಂಬವೊಂದರ ಹೂಡಿಕೆಯಲ್ಲಿ ಚಿನ್ನದ ಪಾಲು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋವಿಡ್‌ ಸಾಂಕ್ರಾಮಿಕ ಹೆಚ್ಚು ವ್ಯಾಪಕವಾಗಿದ್ದ ಜಿಲ್ಲೆಗಳಲ್ಲಿ ಶೇ 6.9ರಷ್ಟು ಹೆಚ್ಚಿಗೆ ಇತ್ತು.

ಕೋವಿಡ್‌ನಿಂದಾಗಿ ಹೆಚ್ಚಿನ ಆರ್ಥಿಕ ನಷ್ಟ ಅನುಭವಿಸದೇ ಇದ್ದ ಜಿಲ್ಲೆಗಳಿಗೆ ಹೋಲಿಸಿದರೆ, ಹೆಚ್ಚು ಆರ್ಥಿಕ ನಷ್ಟಕ್ಕೆ ಗುರಿಯಾದ ಜಿಲ್ಲೆಗಳಲ್ಲಿ ಚಿನ್ನದ ಮೇಲಿನ ಹೂಡಿಕೆಯು ಶೇ 2.9ರಷ್ಟು ಹೆಚ್ಚಾಗಿದೆ.

ಬ್ಯಾಂಕಿಂಗ್‌ ಸೇವೆ ಸುಲಭವಾಗಿ ಲಭ್ಯ ಇರುವ ಮತ್ತು ಆರೋಗ್ಯ ಮೂಲಸೌಕರ್ಯಗಳು ಚೆನ್ನಾಗಿ ಇರುವ ಜಿಲ್ಲೆಗಳಲ್ಲಿ ಕುಟುಂಬಗಳು ಚಿನ್ನದ ಮೇಲೆ ಮಾಡುವ ಹೂಡಿಕೆಯಲ್ಲಿ ಅಲ್ಪ ಹೆಚ್ಚಳವಷ್ಟೇ ಆಗಿದೆ. ಅಂದರೆ, ಅಭಿವೃದ್ಧಿಗೂ ಚಿನ್ನದ ಖರೀದಿಗೂ ಸಂಬಂಧವೊಂದು ಇದೆ ಎಂಬುದನ್ನು ಈ ವರದಿಯು ಸೂಚ್ಯವಾಗಿ ಹೇಳುತ್ತಿದೆ.

‘ಭಾರತದಲ್ಲಿ ಚಿನ್ನದ ದರ ಸದ್ಯ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಜನ ವೆಚ್ಚ ಮಾಡುವುದು ಕಡಿಮೆ ಆಗಿರುವ ಕಾರಣಗಳಿಂದಾಗಿ ಈ ವರ್ಷದುದ್ದಕ್ಕೂ ಚಿನ್ನದ ಬೇಡಿಕೆಯ ಬಗ್ಗೆ ಎಚ್ಚರಿಕೆಯಿಂದ ಇದ್ದೇವೆ. ಆದರೆ, ಮುಂಗಾರು ಎಲ್ಲೆಡೆಯೂ ವಾಡಿಕೆಯಂತೆ ಆದಲ್ಲಿ ದಿಪಾವಳಿ ಸಂದರ್ಭದಲ್ಲಿ ಬೇಡಿಕೆ ಚೇತರಿಸಿಕೊಳ್ಳುವ ಸಾಧ್ಯತೆ ಇರಲಿದೆ. 2023ರಲ್ಲಿ ಚಿನ್ನದ ವಾರ್ಷಿಕ ಬೇಡಿಕೆಯು 650–750 ಟನ್‌ ಇರಬಹುದೆಂದು ಅಂದಾಜು ಮಾಡಲಾಗಿದೆ’ ಎಂದು ವಿಶ್ವ ಚಿನ್ನ ಸಮಿತಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಪಿ.ಆರ್. ಸೋಮಸುಂದರಂ ಹೇಳಿದ್ದಾರೆ.

ಸಿರಿವಂತರ ಹೂಡಿಕೆ ಶೇ 6ರಷ್ಟು

ದೇಶದ ಅತಿ ಸಿರಿವಂತರು ಕಳೆದ ವರ್ಷ ತಮ್ಮ ಒಟ್ಟು ಹೂಡಿಕೆಯಲ್ಲಿ ಶೇಕಡ 6ರಷ್ಟನ್ನು ಚಿನ್ನ ಖರೀದಿಗೆ ಬಳಸಿದ್ದಾರೆ. ಸಿರಿವಂತರು ಚಿನ್ನದ ಮೇಲೆ ಮಾಡುವ ಹೂಡಿಕೆಯಲ್ಲಿ ಭಾರತವು ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಇಂಡಿಯಾ ಹೇಳಿದೆ.

ಆಸ್ಟ್ರಿಯಾದ ಸಿರಿವಂತರು ಚಿನ್ನ ಖರೀದಿಯಲ್ಲಿ ಶೇ 8ರಷ್ಟು ಹಣವನ್ನು ತೊಡಗಿಸಿದ್ದಾರೆ. ಸಿರಿವಂತರು ಚಿನ್ನದ ಮೇಲೆ ಹೂಡಿಕೆ ಮಾಡುವ ಪಟ್ಟಿಯಲ್ಲಿ ಆಸ್ಟ್ರಿಯಾ ಮೊದಲ ಸ್ಥಾನದಲ್ಲಿದೆ. ಚೀನಾ ಸಹ ಭಾರತದೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ. 

ಭಾರತದ ಸಿರಿವಂತರು ಚಿನ್ನದ ಮೇಲೆ ಮಾಡುವ ಹೂಡಿಕೆಯು 2018ರಲ್ಲಿ ಶೇ 4ರಷ್ಟು ಇತ್ತು. ಅದು 2022ರ ವೇಳೆಗೆ ಶೇ 6ಕ್ಕೆ ಏರಿಕೆ ಆಗಿದೆ. ಚಿನ್ನದ ಗಳಿಕೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ. ಐದು ವರ್ಷಗಳಲ್ಲಿ ಚಿನ್ನದ ಮೇಲಿನ ಹೂಡಿಕೆಯು ಶೇ 69ರಷ್ಟು ಗಳಿಕೆ ತಂದುಕೊಟ್ಟಿದೆ ಎಂದು ನೈಟ್‌ ಫ್ರ್ಯಾಂಕ್‌ ಹೇಳಿದೆ.

ಚಿನ್ನದ ಬಾರ್‌ ಮತ್ತು ನಾಣ್ಯ

ಭಾರತದಲ್ಲಿ ಕುಟುಂಬದ ಉಳಿತಾಯದಲ್ಲಿ ಭೌತಿಕ ಸ್ವರೂಪದ ಸ್ವತ್ತು (ರಿಯಲ್‌ ಎಸ್ಟೇಟ್‌, ಚಿನ್ನ, ಬೆಳ್ಳಿ ಗಟ್ಟಿ, ನಾಣ್ಯ ಮತ್ತು ಚಿನ್ನಾಭರಣ) ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ. ಈ ಕಾರಣದಿಂದಾಗಿಯೇ ಚಿನ್ನದ ಬಾರ್‌ ಮತ್ತು ನಾಣ್ಯ ಮಾರುಕಟ್ಟೆಗಳ ಪೈಕಿ ಭಾರತವು ಜಗತ್ತಿನ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಕಳೆದೊಂದು ದಶಕದಿಂದ ವಾರ್ಷಿಕವಾಗಿ 187 ಟನ್‌ ಬಳಕೆ ಆಗುತ್ತಿದೆ. ವಾರ್ಷಿಕವಾಗಿ ಬಳಕೆ ಆಗುತ್ತಿರುವುದರಲ್ಲಿ ಶೇ 40–50ರಷ್ಟು ಆಭರಣಕ್ಕೆ ಪರಿವರ್ತನೆ ಮಾಡಲಾಗುತ್ತಿದೆ ಎಂದು ಮೆಟಲ್ಸ್‌ ಫೋಕಸ್‌ ಸಂಸ್ಥೆಯ ವರದಿ ತಿಳಿಸಿದೆ.

ಚಿನ್ನದ ಇಟಿಎಫ್‌ಗೂ ಪೆಟ್ಟು

ಆಳ–ಅಗಲ: ಚಿನ್ನ ದುಬಾರಿ; ತಗ್ಗಿದ ಖರೀದಿ, ಹೂಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT