ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ರಾಮಮಂದಿರ ನಿರ್ಮಾಣ ಪ್ರಗತಿ ಏನು, ಎತ್ತ...

Published 1 ಜನವರಿ 2024, 23:40 IST
Last Updated 1 ಜನವರಿ 2024, 23:40 IST
ಅಕ್ಷರ ಗಾತ್ರ

ಅಯೋಧ್ಯೆಯ ರಾಮಮಂದಿರ ಈ ಹೊತ್ತಿನಲ್ಲಿ ಪ್ರಚಲಿತದಲ್ಲಿರುವ ಮಹತ್ವದ ವಿಚಾರಗಳಲ್ಲಿ ಒಂದು. ದಶಕಗಳ ಕಾನೂನು ಹೋರಾಟದ ಮೂಲಕ ಬಂದ 71 ಎಕರೆಯಷ್ಟು ವಿಸ್ತೀರ್ಣದ ನಿವೇಶನದಲ್ಲಿ ರಾಮಮಂದಿರ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ರಾಮಮಂದಿರ ಸಂಕೀರ್ಣದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು 2025ರ ಡಿಸೆಂಬರ್‌ ಅಂತ್ಯದವರೆಗೆ ಕಾಲಮಿತಿಯನ್ನು ಹಾಕಿಕೊಳ್ಳಲಾಗಿದೆ. ಈಗ ಮೊದಲ ಹಂತದ ಕಾಮಗಾರಿಯಷ್ಟೇ ಪೂರ್ಣಗೊಳ್ಳಬೇಕಿದೆ. ಮೊದಲ ಹಂತದಲ್ಲಿ ನೆಲಮಹಡಿಯ ದೇವಾಲಯ, ಗರ್ಭಗುಡಿ ಎಲ್ಲವೂ ಸಿದ್ಧವಾಗಲಿದೆ. ಇದೇ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಮಗಾರಿ ಪೂರ್ಣಗೊಂಡಿರುವಷ್ಟು ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ರಾಮನ ಮೂರ್ತಿಯ ಪ್ರಾಣಪ್ರತಿಷ್ಠೆಯೂ ನಡೆಯಲಿದೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಾಮಮಂದಿರ ಸಂಕೀರ್ಣ ನಿರ್ಮಾಣದ ಹೊಣೆ ಹೊತ್ತಿದೆ. ಟ್ರಸ್ಟ್‌ನ ಪದಾಧಿಕಾರಿಗಳು ವಿವಿಧ ಸುದ್ದಿಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ ರಾಮಮಂದಿರದ ನಿರ್ಮಾಣವೊಂದಕ್ಕೇ ಅಂದಾಜು ₹1,500 ಕೋಟಿ ವೆಚ್ಚವಾಗಲಿದೆ. ದೇವಾಲಯ ಸಂಕೀರ್ಣ, ಸಂಕೀರ್ಣದಲ್ಲಿ ಇರಲಿರುವ ಬೇರೆ ಬೇರೆ ದೇವಾಲಯಗಳು, ವಸ್ತು ಸಂಗ್ರಹಾಲಯಗಳು, ಭಕ್ತಾದಿಗಳ ವಸತಿಗೃಹ, ಶೌಚಾಲಯ, ವಾಹನ ನಿಲುಗಡೆ ಪ್ರದೇಶ ನಿರ್ಮಾಣ ಮತ್ತು ಅಭಿವೃದ್ಧಿಗೆ ಎಷ್ಟು ವೆಚ್ಚವಾಗಲಿದೆ ಎಂಬುದರ ಮಾಹಿತಿ ಇಲ್ಲ. ಆದರೆ, ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವಷ್ಟು ದೇಣಿಗೆ ಸಂಗ್ರಹವಾಗಲಿದೆ ಎಂದು ಟ್ರಸ್ಟ್‌ ಹೇಳಿದೆ. ದೇಣಿಗೆ ನೀಡಬಹುದಾದ ಪೋರ್ಟ್‌ಲ್‌ನ ಲಿಂಕ್‌ ಟ್ರಸ್ಟ್‌ನ ಅಧಿಕೃತ ಜಾಲತಾಣದಲ್ಲಿ ಈಗಲೂ ಚಾಲ್ತಿಯಲ್ಲಿದೆ.

ಜನವರಿ 22ರಂದು ನಡೆಯಲಿರುವ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮವು ಹಲವು ಕಾರಣಗಳಿಂದಾಗಿ ರಾಜಕೀಯ ತಿರುವು ಪಡೆದುಕೊಂಡಿದೆ. ಕೆಲವೇ ತಿಂಗಳಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆಗೆ ರಾಮಮಂದಿರವು ಚುನಾವಣಾ ವಿಷಯವಾಗಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಈ ವಿಶ್ಲೇಷಣೆಗೆ ಪೂರಕವೆಂಬಂತೆ ಈಗಾಗಲೇ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಕಾಮಗಾರಿ ಪೂರ್ಣಗೊಳ್ಳದೇ ಇದ್ದರೂ, ಲೋಕಸಭಾ ಚುನಾವಣೆಯ ಕಾರಣಕ್ಕೆ ಅಪೂರ್ಣ ದೇವಾಲಯವನ್ನು ಉದ್ಘಾಟಿಸಲಾಗುತ್ತಿದೆ ಎಂದು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಆರೋಪಿಸಿವೆ. ಅಲ್ಲದೇ, ಬಿಜೆಪಿ ಇದನ್ನು ತನ್ನದೇ ಕಾರ್ಯಕ್ರಮ ಎಂಬಂತೆ ನಿರ್ವಹಿಸುತ್ತಿದೆ ಎಂದೂ ವಿರೋಧ ಪಕ್ಷಗಳು ಆರೋಪಿಸಿವೆ.

ಟ್ರಸ್ಟ್ ಸಹ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಆಹ್ವಾನಿಸಿಲ್ಲ. ಕೆಲವು ಪಕ್ಷಗಳಿಗೆ ಆಹ್ವಾನ ನೀಡಿಲ್ಲ. ಇದು ಸಹ ಆರೋಪ–ಪ್ರತ್ಯಾರೋಪಕ್ಕೆ ಕಾರಣವಾಗಿದೆ. ‘ರಾಮನನ್ನು ನಂಬುವವರಿಗೆ ಮಾತ್ರವೇ ಆಹ್ವಾನ ನೀಡಲಾಗಿದೆ’ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ಶಿವಸೇನಾಗೆ (ಉದ್ಧವ್‌ ಬಣ) ತಿರುಗೇಟು ನೀಡಿದ್ದಾರೆ.

ರಾಮಮಂದಿರ ಸಂಕೀರ್ಣ ಅಭಿವೃದ್ಧಿಯ ನೆಪದಲ್ಲಿ ಅಯೋಧ್ಯೆಯಲ್ಲೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ದೊರೆತಿದೆ. ರೈಲು ನಿಲ್ದಾಣ ಅಭಿವೃದ್ಧಿ, ನೂತನ ವಿಮಾನ ನಿಲ್ದಾಣ ಕಾರ್ಯಾರಂಭ, ಹೆದ್ದಾರಿ ಅಭಿವೃದ್ಧಿ ಮತ್ತು ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ರಾಮಮಂದಿರಕ್ಕೆ ಬರುವ ಭಕ್ತಾದಿಗಳಿಗೆ ಊಟ–ವಸತಿಯಂತಹ ಮೂಲಸೌಕರ್ಯ ಒದಗಿಸಲು ಸ್ಥಳೀಯ ಸಂಸ್ಥೆಗಳೂ ಕಾಮಗಾರಿ ನಡೆಸುತ್ತಿವೆ, ಖಾಸಗಿಯರೂ ಹೋಟಲ್‌–ಲಾಡ್ಜಿಂಗ್‌ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುತ್ತಿದ್ದಾರೆ. ಒಟ್ಟಾರೆ ಅಯೋಧ್ಯೆಗೆ ಹೊಸ ಮೆರುಗು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT