ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯ; ವಿಳಂಬಕ್ಕೆ ಹತ್ತಾರು ಕಾರಣ

Published 16 ಜನವರಿ 2024, 22:00 IST
Last Updated 16 ಜನವರಿ 2024, 22:00 IST
ಅಕ್ಷರ ಗಾತ್ರ

,

ಉತ್ತರ ಭಾರತದಲ್ಲಿ ದಟ್ಟಮಂಜಿನ ಕಾರಣದಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿರುವುದು ಬಾರಿ ಕೋಲಾಹಲವನ್ನು ಉಂಟು ಮಾಡಿದೆ. 15–20 ಗಂಟೆ ವಿಮಾನದಲ್ಲೇ, ಟರ್ಮಿನಲ್‌ಗಳಲ್ಲೇ, ಟರ್ಮಿನಲ್‌ ಕೋಚ್‌ಗಳಲ್ಲಿ ಪ್ರಯಾಣಿಕರು ಕಳೆಯಬೇಕಾದ, ಪೈಲಟ್‌ ಮೇಲೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿದ, ವಿಮಾನ ನಿಲ್ದಾಣದ ಟ್ಯಾಕ್ಸಿವೇನಲ್ಲೇ ಪ್ರಯಾಣಿಕರು ಕುಳಿತು ಊಟ ಮಾಡಿದಂತಹ ಘಟನೆಗಳಿಗೆ ದೇಶವು ಒಂದೆರಡು ದಿನಗಳಲ್ಲಿ ಸಾಕ್ಷಿಯಾಗಿದೆ. ಇದನ್ನು ಭಾರತದ ವಿಮಾನಯಾನ ಕ್ಷೇತ್ರದಲ್ಲೇ ಅತ್ಯಂತ ಇರಿಸುಮುರಿಸಿನ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಮಾನಯಾನ ಸಚಿವಾಲಯವು ಈ ಎಲ್ಲದಕ್ಕೂ ದಟ್ಟಮಂಜೇ ಕಾರಣ ಎಂದು ಹೇಳುತ್ತಿದೆ. ಆದರೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಮಾಸಿಕ ಬುಲೆಟಿನ್‌ಗಳು, ಮೂಲಸೌಕರ್ಯದ ಕೊರತೆಯೇ ಇದಕ್ಕೆ ಕಾರಣ ಎಂದು ಬೊಟ್ಟು ಮಾಡುತ್ತವೆ.

2023ರ ಡಿಸೆಂಬರ್‌ನಲ್ಲಿ ದೇಶದಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ವಿಳಂಬ ಹಾರಾಟಗಳಿಗೆ ಸಂಬಂಧಿಸಿದ ವರದಿಯನ್ನು ಗಮನಿಸಿದರೆ, ಮೂಲಸೌಕರ್ಯಗಳ ಕೊರತೆಯೇ ಇದಕ್ಕೆ ಕಾರಣ ಎಂಬುದು ಗೊತ್ತಾಗುತ್ತದೆ. ಆ ತಿಂಗಳಲ್ಲಿ ವಿಮಾನಗಳು ವಿಳಂಬವಾದ ಎಲ್ಲಾ ಪ್ರಕರಣಗಳಲ್ಲಿ ದಟ್ಟಮಂಜು, ಬಿರುಗಾಳಿ ಮತ್ತು ಮಳೆಯಂತಹ ಪ್ರಾಕೃತಿಕ ಅಂಶಗಳು ಕಾರಣವಾಗಿದ್ದು ಶೇ 4ರಷ್ಟು ಪ್ರಕರಣಗಳಲ್ಲಿ ಮಾತ್ರ. ಆದರೆ ವಿಮಾನಯಾನ ಕಂಪನಿಗಳ ಕಾರ್ಯಾಚರಣೆಯಲ್ಲಿನ ವ್ಯತ್ಯಯದ ಕಾರಣದಿಂದ ವಿಮಾನಗಳು ವಿಳಂಬವಾದ ಪ್ರಕರಣಗಳ ಪ್ರಮಾಣವೇ ಹೆಚ್ಚು (ಶೇ 66). ನಿಲ್ದಾಣದಲ್ಲಿ ಜಾಗ ಇಲ್ಲದೇ ಇರುವುದು, ಟೇಕಾಫ್‌ ಮತ್ತು ಲ್ಯಾಂಡಿಂಗ್‌ಗೆ ರನ್‌ವೇ ಲಭ್ಯವಿಲ್ಲದೇ ಇರುವಂತಹ ಕಾರಣದಿಂದ ವಿಮಾನಗಳು ವಿಳಂಬವಾದ ಪ್ರಕರಣಗಳ ಪ್ರಮಾಣ ಶೇ 13.

ಈಗಿನ ಪರದಾಟಕ್ಕೆ ಕಾರಣವಾಗಿರುವುದು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ದಟ್ಟಮಂಜು ಮತ್ತು ಶೂನ್ಯ ಗೋಚರತೆಯ ಕಾರಣಕ್ಕೆ ವಿಮಾನಗಳನ್ನು ಇಲ್ಲಿ ಇಳಿಸಲೂ ಆಗುತ್ತಿಲ್ಲ, ಇಲ್ಲಿಂದ ಹಾರಿಸಲೂ ಆಗುತ್ತಿಲ್ಲ. ಆದರೆ ಶೂನ್ಯ ಗೋಚರತೆ ಸಂದರ್ಭದಲ್ಲೂ ವಿಮಾನಗಳ ಕಾರ್ಯಾಚರಣೆ ಸಾಧ್ಯವಾಗಿಸುವ ವ್ಯವಸ್ಥೆ ಇಲ್ಲದೇ ಇರುವುದೇ ಈ ಪರದಾಟಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ದಟ್ಟಮಂಜಿನಂತಹ ಪ್ರತಿಕೂಲ ಹವಾಮಾನದ ಸಂದರ್ಭದಲ್ಲೂ ಸುರಕ್ಷಿತವಾಗಿ ಲ್ಯಾಂಡ್‌ ಮಾಡುವ ವ್ಯವಸ್ಥೆಯನ್ನು ‘ಇನ್‌ಸ್ಟ್ರುಮೆಂಟ್‌ ಲ್ಯಾಂಡಿಂಗ್‌ ಸಿಸ್ಟಂ’ ಎಂದು ಕರೆಯಲಾಗುತ್ತದೆ. ದಿಕ್ಸೂಚಿ, ಎತ್ತರಮಾಪಕ, ಅಕ್ಷಾಂಶ–ರೇಖಾಂಶ ಮಾಪಕ, ವೇಗಮಾಪಕದಂತಹ ಹಲವು ಉಪಕರಣಗಳನ್ನು ಬಳಸಿಕೊಂಡು ಶೂನ್ಯ ಗೋಚರತೆ ಸಂದರ್ಭದಲ್ಲೂ ವಿಮಾನವನ್ನು ಲ್ಯಾಂಡ್ ಮಾಡುವ ವ್ಯವಸ್ಥೆಯಿದು. ಇಂತಹ ವ್ಯವಸ್ಥೆ ಇರುವ ರನ್‌ವೇಗಳನ್ನು ‘ಸಿಎಟಿ–III’ ರನ್‌ವೇ ಎಂದು ಕರೆಯಲಾಗುತ್ತದೆ. ಇದರಲ್ಲೂ ಮೂರು ಭಿನ್ನ ವರ್ಗೀಕರಣವಿದೆ. ಸಿಎಟಿ–IIIಎ, ಸಿಎಟಿ–IIIಬಿ ಮತ್ತು ಸಿಎಟಿ–IIIಸಿ.

ದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದ ಎರಡು ಸಿಎಟಿ–IIIಬಿ ರನ್‌ವೇಗಳು ಬೇರೆ–ಬೇರೆ ಕಾರಣಗಳಿಂದ ಕಾರ್ಯಾಚರಣೆಯಲ್ಲಿ ಇರಲಿಲ್ಲ. ದುರಸ್ತಿ, ನಿರ್ವಹಣೆ ಕಾರಣದಿಂದ ಅವುಗಳನ್ನು ಹಲವು ತಿಂಗಳಿಂದ ಸ್ಥಗಿತಗೊಳಿಸಲಾಗಿತ್ತು. 2023ರ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಜಿ–20 ಶೃಂಗಸಭೆಯ ಸಂದರ್ಭದಲ್ಲಿ ದೂಳು ಏಳಬಾರದು ಎಂದು ಸಿಎಟಿ–IIIಬಿ ರನ್‌ವೇಗಳ ದುರಸ್ತಿ ಕಾರ್ಯವನ್ನೂ ಸ್ಥಗಿತಗೊಳಿಸಲಾಗಿತ್ತು. ಇಲ್ಲದಿದ್ದಲ್ಲಿ ಈವೇಳೆಗೆ ಎರಡೂ ರನ್‌ವೇಗಳು ಕಾರ್ಯಾಚರಣೆಯಲ್ಲಿ ಇರುತ್ತಿದ್ದವು. ಆದರೆ ಈಗ ತುರ್ತು ಸಂದರ್ಭಕ್ಕೆ ಎಂದು ಅಂತಹ ಒಂದು ರನ್‌ವೇಯಲ್ಲಿ ವಿಮಾನಯಾನ ಸಚಿವಾಲಯದ ಆದೇಶದ ಮೇರೆಗೆ ಮಂಗಳವಾರ ರಾತ್ರಿಯಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಉತ್ತರ ಭಾರತದ ಹಲವು ವಿಮಾನ ನಿಲ್ದಾಣಗಳಲ್ಲಿ ಇಂತಹ ವ್ಯವಸ್ಥೆಯೂ ಇಲ್ಲ. ಇಂತಹ ಅತ್ಯಗತ್ಯವಾದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಅವುಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವುದೇ ಇಂದಿನ ಪರದಾಟಕ್ಕೆ ಕಾರಣವಾಗಿದೆ. ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ‍ಪಿಟಿಐಗೆ ನೀಡಿರುವ ಮಾಹಿತಿಗಳೂ ಇದನ್ನೇ ಪುಷ್ಟೀಕರಿಸುತ್ತವೆ.

ಆಧಾರ: ನಾಗರಿಕ ವಿಮಾನಯಾನ ಸಚಿವಾಲಯ, ಡಿಜಿಸಿಎ ಮಾಸಿಕ ಬುಲೆಟಿನ್‌ಗಳು, ಸಂಸತ್ತಿಗೆ ವಿಮಾನಯನ ಸಚಿವಾಲಯ ನೀಡಿದ ಉತ್ತರ, ಪಿಟಿಐ

ಪ್ರಜಾವಾಣಿ ಗ್ರಾಫಿಕ್ಸ್

ಪ್ರಜಾವಾಣಿ ಗ್ರಾಫಿಕ್ಸ್

ಶಶಿಕಿರಣ್ ದೇಸಾಯಿ ಬಿ.

ವಿಪರೀತ ಆಕ್ರೋಶ

‘ಅದೊಂದು ದುಃಸ್ವಪ್ನ. ಭಾನುವಾರ ಸಂಜೆ 4 ಗಂಟೆಯಿಂದ ನಾವು ವಿಮಾನ ನಿಲ್ದಾಣದಲ್ಲಿ ಇದ್ದೇವೆ. ಮೊದಲಿಗೆ ರಾತ್ರಿ 9.55ಕ್ಕೆ ವಿಮಾನ ಟೇಕ್‌ಆಫ್‌ ಆಗುವುದಾಗಿ ಹೇಳಲಾಯಿತು. ನಂತರ, 10–10.30ರ ಹೊತ್ತಿಗೆ ಹೊರಡುವುದಾಗಿ ಹೇಳಿದರು. ಎಷ್ಟು ಹೊತ್ತಿಗೆ ವಿಮಾನ ಟೇಕ್‌ಆಫ್‌ ಆಗಲಿದೆ ಎಂದು ವಿಮಾನ ಸಿಬ್ಬಂದಿಯನ್ನು ಪದೇ ಪದೇ ಕೇಳಿದಾಗ, ನಾಳೆ ಬೆಳಿಗ್ಗೆ 7.35ಕ್ಕೆ ವಿಮಾನ ಹೊರಡುತ್ತದೆ ಎಂದರು. ಹೀಗೆ ಹೇಳುತ್ತಲೆ ವಿಮಾನ ನಿಲ್ದಾಣದಿಂದ ಹೊರನಡೆಯಿರಿ ಎಂದರು. ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಸಹ ಅವರು ಮಾಡಲಿಲ್ಲ. ಕಾಡಿಬೇಡಿ ಎಲ್ಲಿಯೋ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡೆವು’

ಅನ್ಷಿಕಾ ವರ್ಮಾ ಅವರ ಈ ಮಾತುಗಳು, ದೇಶದ ವಿಮಾನಯಾನದ ಅವ್ಯವಸ್ಥೆಯನ್ನು ತೆರೆದಿಡುತ್ತವೆ. ಇವರು ಕೋಯಿಕ್ಕೋಡಿನಿಂದ ಮುಂಬೈಗೆ ಹೊರಟಿದ್ದರು. ಅವರ ವಿಮಾನವು ಸಂಜೆ 6:50ಕ್ಕೆ ಟೇಕಾಫ್‌ ಆಗಬೇಕಿತ್ತು.

ಕೆಲವೊಮ್ಮೆ 10–13 ತಾಸುಗಳಷ್ಟು ತಡವಾಗಿ ವಿಮಾನಗಳು ಟೇಕ್‌ಆಫ್‌ ಆಗುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಪ್ರಯಾಣಿಕರ ಪಾಡು ಹೇಳತೀರದಂತಾಗಿದೆ. ತಮ್ಮ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಗಳು ತೀರಾ ಕೀಳಾಗಿ ನೋಡಿಕೊಳ್ಳುತ್ತಿರುವುದು ಕೆಲವು ದಿನಗಳ ಬೆಳವಣಿಗೆಗಳಿಂದ ತಿಳಿದುಬರುತ್ತಿದೆ. ‘ಎಕ್ಸ್‌’ ವೇದಿಕೆಯ ತುಂಬೆಲ್ಲಾ ವಿಮಾನಯಾನ ಸಂಸ್ಥೆಗಳ ದುರ್ವರ್ತನೆಗಳ ಬಗ್ಗೆ ದೂರುಗಳದ್ದೇ ಪೋಸ್ಟ್‌ಗಳು ಕಾಣುತ್ತಿವೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಖಾತೆಯನ್ನು ಟ್ಯಾಗ್‌ ಮಾಡಿ, ಪ್ರಯಾಣಿಕರು ದೂರುಗಳನ್ನು ಮುಂದಿಡುತ್ತಿದ್ದಾರೆ.

ಪ್ರಯಾಣಿಕರ ಹಕ್ಕುಗಳು

ಒಂದುವೇಳೆ ವಿಮಾನ ಹಾರಾಟ ರದ್ದಾದರೆ, ವಿಳಂಬವಾದರೆ ಪ್ರಯಾಣಿಕರನ್ನು ಯಾವ ರೀತಿಯಲ್ಲಿ ನೋಡಿಕೊಳ್ಳಬೇಕು ಎನ್ನುವ ಬಗ್ಗೆ ನಿಯಮಗಳು ಇವೆ. ಆದರೆ, ವಿಮಾನಯಾನ ಸಂಸ್ಥೆಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದನ್ನು ಇತ್ತೀಚಿನ ಘಟನೆಗಳೇ ಹೇಳುತ್ತಿವೆ. ಇದೇ ಕಾರಣದಿಂದಾಗಿ ಡಿಜಿಸಿಎ ಸೋಮವಾರ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ತಕ್ಷಣದಲ್ಲಿಯೇ ಪಾಲನೆ ಮಾಡುವಂತೆ ಹೊಸದಾದ ಎಸ್‌ಒಪಿಯನ್ನು ಬಿಡುಗಡೆ ಮಾಡಿದೆ.

‘ಒಂದು ವೇಳೆ ವಿಮಾನ ಹಾರಾಟವು ಮೂರು ತಾಸುಗಳಿಗೂ ಹೆಚ್ಚು ವಿಳಂಬವಾಗುವ ಸಂಭವವಿದ್ದರೆ, ಅಂಥ ವಿಮಾನವನ್ನು ರದ್ದು ಮಾಡಬೇಕು’ ಎಂದು ಅದು ಹೇಳಿದೆ. ಜೊತೆಗೆ, ‘ವಿಮಾನವು ಎಷ್ಟು ಗಂಟೆಗಳವರೆಗೆ ವಿಳಂಬವಾಗಲಿದೆ. ಎಷ್ಟು ಹೊತ್ತಿಗೆ ವಿಮಾನ ಹೊರಡಲಿದೆ, ಎಷ್ಟು ಹೊತ್ತಿಗೆ ನಿಗದಿತ ನಗರ ತಲುಪಲಿದೆ ಎಂಬೆಲ್ಲಾ ನಿಖರ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡಬೇಕು. ವಿಮಾನ ವಿಳಂಬವಾಗುವ ಸಂದರ್ಭಗಳಲ್ಲಿ ಪ್ರಯಾಣಿಕರ ರಕ್ಷಣೆಗೆ ಸಂಸ್ಥೆಗಳು ಮುಂದಾಗಬೇಕು’ ಎಂದೂ ಹೇಳಿದೆ.

1. ವಿಮಾನ ಹಾರಾಟದ ಸಮಯವು (ಬ್ಲಾಕ್‌ ಟೈಮ್‌) ಎರಡೂವರೆ ತಾಸುಗಳಷ್ಟಿದ್ದರೆ, ವಿಮಾನದ ಟೇಕಾಫ್‌ ಎರಡು ಅಥವಾ ಅದಕ್ಕೂ ಹೆಚ್ಚಿನ ಸಮಯದಷ್ಟು ವಿಳಂಬವಾದರೆ,

2. ವಿಮಾನ ಹಾರಾಟವು ಎರಡೂವರೆ ತಾಸುಗಳಿಗೂ ಹೆಚ್ಚಿನ ಸಮಯದ್ದಾಗಿದ್ದರೆ, ವಿಮಾನದ ಟೇಕಾಫ್‌ ಮೂರು ಅಥವಾ ಅದಕ್ಕೂ ಹೆಚ್ಚಿನ ಸಮಯದಷ್ಟು ವಿಳಂಬವಾದರೆ,

3. ಮೇಲಿನ ಎರಡೂ ಸನ್ನಿವೇಶದಲ್ಲಿ, ವಿಮಾನದ ಟೇಕಾಫ್‌ ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚಿನ ಸಮಯದಷ್ಟು ವಿಳಂಬವಾದರೆ, ಕಾಯುವಿಕೆಯ ವೇಳೆಯಲ್ಲಿ ಪ್ರಯಾಣಿಕರಿಗೆ ಉಚಿತ ಊಟ, ಉಪಹಾರ ನೀಡಬೇಕು

* ಒಂದು ವೇಳೆ ದೇಶೀಯ ವಿಮಾನದ ಟೇಕಾಫ್‌ ಆರು ಗಂಟೆಗಳಿಗೂ ಹೆಚ್ಚು ಸಮಯದಷ್ಟು ವಿಳಂಬಗೊಂಡರೆ, ವಿಮಾನ ಟೇಕ್‌ಆಫ್‌ ಆಗುವ ಸಮಯಕ್ಕೂ 24 ಗಂಟೆಗಳ ಮೊದಲೇ ವಿಳಂಬದ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಬೇಕು. ಜೊತೆಗೆ, ಒಂದೋ ಬೇರೆ ವಿಮಾನದ ವ್ಯವಸ್ಥೆ ಮಾಡಿಕೊಡಬೇಕು ಅಥವಾ ಟಿಕೆಟ್‌ ಮೊತ್ತವನ್ನು ಮರುಪಾವತಿ ಮಾಡಬೇಕು

* ಒಂದು ವೇಳೆ ವಿಮಾನ ಹಾರಾಟವು ಮರುದಿನಕ್ಕೆ ನಿಗದಿಯಾದರೆ, ಪ್ರಯಾಣಿಕರು ರಾತ್ರಿ ಇಡೀ ಕಾಯಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ, ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ಉಚಿತವಾಗಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಲೇಬೇಕು

* ವಿಮಾನ ಹಾರಾಟವು ವಿಳಂ‌ಬವಾಗಲಿ ಅಥವಾ ರದ್ದಾಗಲಿ, ಎಲ್ಲ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್‌ ಮಾಡಬೇಕು. ಜೊತೆಗೆ, ತನ್ನ ನೀತಿಗಳು, ಮರುಪಾವತಿಯ ಕುರಿತ ನಿಯಮಗಳು, ಟೇಕಾಫ್‌ ವಿಳಂಬವಾದರೆ ಅಥವಾ ರದ್ದಾದರೆ, ವಿಮಾನಯಾನ ಸಂಸ್ಥೆಯು ತನ್ನ ಪ್ರಯಾಣಿಕರಿಗೆ ಒದಗಿಸುವ ವ್ಯವಸ್ಥೆಯ ಕುರಿತೂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ವಿಮಾದ ಟಿಕೆಟ್‌ನಲ್ಲಿಯೂ ಈ ಎಲ್ಲಾ ಮಾಹಿತಿಗಳನ್ನು ನಮೂದಿಸಬೇಕು.

‘ಸಿಬ್ಬಂದಿಯ ಆಕ್ಷೇಪಾರ್ಹ ವರ್ತನೆ’

ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನದ ಟೇಕಾಫ್‌ 13 ತಾಸು ವಿಳಂಬಗೊಂಡಿದೆ. ಈ ವೇಳೆಯಲ್ಲಿ ಇಂಡಿಗೊ ವಿಮಾನದ ಸಹ ಪೈಲಟ್‌ಯೊಬ್ಬರ ಮೇಲೆ ಸಾಹಿಲ್‌ ಕಟಾರಿಯಾ ಎನ್ನುವ ಪ್ರಯಾಣಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಇದೇ ವಿಮಾನದಲ್ಲಿ ರಷ್ಯಾದ ರೂಪದರ್ಶಿ ಇವೆಗ್ನಿಯಾ ಬೆಲೆಸ್ಕಾಯ, ತಮ್ಮ ತಂಡದೊಂದಿಗೆ ಪ್ರಯಾಣಿಸುತ್ತಿದ್ದರು. ಪ್ರಯಾಣಿಕ ಸಾಹಿಲ್‌ ಪೈಲಟ್‌ ಮೇಲೆ ಹಲ್ಲೆ ಮಾಡಿದ ವಿಡಿಯೊವನ್ನು ಸೆರೆ ಹಿಡಿದವರು ಇವರೇ. ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಘಟನೆಯ ವಿವರಗಳನ್ನು ಅವರು ಹಂಚಿಕೊಂಡಿದ್ದಾರೆ. ‘ಕುಡಿಯುವ ನೀರು, ತಿನ್ನಲು ಆಹಾರ ಕೂಡ ಕೊಟ್ಟಿಲ್ಲ’ ಎಂದು ದೂರಿದ್ದಾರೆ.

‘ದೆಹಲಿಯಿಂದ ಗೋವಾಕ್ಕೆ ಹೊರಟಿದ್ದೆವು. ವಿಮಾನವು ಬೆಳಿಗ್ಗೆ 7.40ಕ್ಕೆ ನಿಗದಿಯಾಗಿತ್ತು. ಆದರೆ, ಹೊರಡಲಿಲ್ಲ. ಒಂದು ತಾಸು ತಡವಾಗಿ ಹೊರಡುವುದಾಗಿ ಹೇಳಿದರು. 10 ತಾಸು ಕಾಯುವಿಕೆಯ ಬಳಿಕ ವಿಮಾನ ಹೊರಡುವುದಾಗಿ ಹೇಳಿದರು. ನಾವು ವಿಮಾನ ಏರಿದೆವು. ಈ ಬಳಿಕ ವಿಮಾನವು ಮತ್ತೆ ಎರಡು ತಾಸು ತಡವಾಗಿ ಹೊರಡುವುದಾಗಿ ಸಿಬ್ಬಂದಿ ತಿಳಿಸಿದರು. ಎಲ್ಲ ಪ್ರಯಾಣಿಕರು ಸಿಬ್ಬಂದಿಯನ್ನು ಪ್ರಶ್ನೆ ಮಾಡತೊಡಗಿದರು. ಕೆಲಹೊತ್ತಿನ ನಂತರ ಪ್ರಯಾಣಿಕರ ಸಿಟ್ಟು ಹೆಚ್ಚಾಯಿತು. ಇನ್ನಷ್ಟು ಪ್ರಶ್ನೆ ಕೇಳಲು ಆರಂಭಿಸಿದರು. ಹೀಗಾಗುತ್ತಿದ್ದಂತೆಯೇ, ‘ನೀವು ಅತಿಯಾಗಿ ಪ್ರಶ್ನಿಸುತ್ತಿದ್ದೀರಿ. ಅದಕ್ಕಾಗಿ ವಿಮಾನವು ತಡವಾಗಿ ಹೊರಡುವಂತಾಗುತ್ತಿದೆ’ ಎಂದು ಸಹ ಪೈಲಟ್‌ ಕೇಳಿದರು. ಆಗ ಆ ವ್ಯಕ್ತಿಯು ಸಿಟ್ಟಿಗೆದ್ದು ಸಹ ಪೈಲಟ್‌ ಮೇಲೆ ಕೈಮಾಡಿದರು. ಸಿಬ್ಬಂದಿ ಸ್ವಲ್ಪವೂ ಪ್ರಯಾಣಿಕ ಸ್ನೇಹಿಯಾಗಿ ವರ್ತಿಸಲಿಲ್ಲ. ಆದರೆ, ಏನೇ ಇದ್ದರೂ ಪೈಲಟ್‌ ಮೇಲೆ ಕೈಮಾಡಬಾರದಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಘಟನೆಯ ಕಾರಣದಿಂದಲೇ ಡಿಜಿಸಿಎ ತನ್ನ ಹೊಸ ಎಸ್‌ಒಪಿಯಲ್ಲಿ, ‘ವಿಮಾನಯಾನ ವಿಳಂಬದಂಥ ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಪ್ರಯಾಣಿಕರೊಂದಿಗೆ ಉತ್ತಮವಾಗಿ ವರ್ತಿಸಬೇಕು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT