ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಆಳ–ಅಗಲ | ಆಹಾರ ಸುರಕ್ಷತಾ ಸೂಚ್ಯಂಕ: ಕೇರಳ ನಂ.1, ಕರ್ನಾಟಕಕ್ಕೆ 17ನೇ ಸ್ಥಾನ

Published : 29 ಸೆಪ್ಟೆಂಬರ್ 2024, 23:30 IST
Last Updated : 29 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments
ಭಾರತದಲ್ಲಿ ಆಹಾರದ ಕಲಬೆರಕೆ ದೊಡ್ಡ ಸಮಸ್ಯೆ. ಆಹಾರದ ಗುಣಮಟ್ಟ ಪರೀಕ್ಷೆ ಸರಿಯಾಗಿ ನಡೆಯದೇ ಇರುವುದು ಕೂಡ ಇದಕ್ಕೆ ಒಂದು ಕಾರಣ. ಈ ದಿಸೆಯಲ್ಲಿ ರಾಜ್ಯಗಳನ್ನು ಪ್ರೋತ್ಸಾಹಿಸಲು ಎಫ್‌ಎಸ್‌ಎಸ್‌ಎಐ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ ಬಿಡುಗಡೆಯೂ ಒಂದಾಗಿದೆ. ಆಹಾರದ ಸುರಕ್ಷತೆಯ ಖಾತರಿ ವಿಚಾರದಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು ಎರಡನೇ ಸ್ಥಾನ ಪಡೆದಿದೆ; ಕರ್ನಾಟಕ 17ನೇ ಸ್ಥಾನದಲ್ಲಿದೆ
ಈಶಾನ್ಯದಲ್ಲಿ ನಾಗಾಲ್ಯಾಂಡ್‌ ಮುಂಚೂಣಿಯಲ್ಲಿ
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಈಶಾನ್ಯ ಭಾಗದಲ್ಲಿರುವ ಗುಡ್ಡಗಾಡು ರಾಜ್ಯಗಳು ಭೌಗೋಳಿಕವಾಗಿ, ಸಾಮಾಜಿಕ–ಆರ್ಥಿಕ ಮತ್ತು ಮೂಲಸೌಕರ್ಯಗಳ ಸವಾಲುಗಳನ್ನು ಹೊಂದಿವೆ. ಈ ಕಾರಣದಿಂದ ಮಾನವಶಕ್ತಿ, ಸಾಗಣೆ, ಸಂಪರ್ಕಕ್ಕೆ ಸಂಬಂಧಿಸಿದ ಕೊರತೆಗಳನ್ನು ಎದುರಿಸುತ್ತಿವೆ. ಈ ಅಂಶಗಳನ್ನು ಪರಿಗಣಿಸಿ, ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಆಹಾರ ಸುರಕ್ಷತೆ ಕಾಪಾಡುವ ದಿಸೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ರಾಜ್ಯವನ್ನು ಎಫ್‌ಎಸ್‌ಎಸ್‌ಎಐ ಗುರುತಿಸುತ್ತದೆ. ಈಶಾನ್ಯದ ಏಳು ರಾಜ್ಯಗಳ ಪೈಕಿ ಈ ವರ್ಷ ನಾಗಾಲ್ಯಾಂಡ್‌ ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿದೆ. 100ರಲ್ಲಿ 44.25 ಅಂಕಗಳನ್ನು ಗಳಿಸಿ ರಾಷ್ಟ್ರ ಮಟ್ಟದಲ್ಲಿ 13ನೇ ರ‍್ಯಾಂಕ್‌ ಗಳಿಸಿದೆ. ಮಾನವಶಕ್ತಿ, ಮಾದರಿಗಳ ಸಾಗಣೆ ವೆಚ್ಚ, ಪ್ರಯೋಗಾಲಯದ ಕೊರತೆಗಳಿದ್ದರೂ ಆಹಾರ ಪರೀಕ್ಷಾ ಮೂಲಸೌಕರ್ಯಗಳ ಸುಧಾರಣೆಯಲ್ಲಿ ನಾಗಾಲ್ಯಾಂಡ್‌ ಗಮನಾರ್ಹ ಪ್ರಗತಿ ಸಾಧಿಸಿದೆ. ಎನ್‌ಎಬಿಎಲ್‌ (ನ್ಯಾಷನಲ್ ಅಕ್ರೆಡಿಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆ್ಯಂಡ್ ಕ್ಯಾಲಿಬರೇಷನ್ ಲ್ಯಾಬೊರೇಟರೀಸ್) ಮಾನ್ಯತೆ, ರಾಜ್ಯ ಪ್ರಯೋಗಾಲದಲ್ಲಿ ಅತ್ಯಾಧುನಿಕ ಪರೀಕ್ಷಾ ಉಪಕರಣಗಳ ಲಭ್ಯತೆ, ಸಂಚಾರಿ ಆಹಾರ ಸುರಕ್ಷತೆ ಪ್ರಯೋಗಾಲಯಗಳನ್ನು ರಾಜ್ಯ ಪರಿಣಾಮಕಾರಿಯಾಗಿ ಬಳಸಿದೆ. 2023–24ನೇ ಸಾಲಿನಲ್ಲಿ ರಾಜ್ಯವು ಮಾದರಿಗಳ ಪರೀಕ್ಷಾ ಗುರಿ ಅನುಷ್ಠಾನ, ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣೀಕರಣ ತರಬೇತಿ, ‘ಸೂಕ್ತ ಆಹಾರ ಸೇವಿಸಿ’ ಅಭಿಯಾನ, ಸ್ವಚ್ಛತಾ ರೇಟಿಂಗ್‌, ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಹಿಂದಿನ ವರ್ಷಗಳಲ್ಲಿ ಮಂಜೂರಾದ ಅನುದಾನದ ಬಳಕೆ ಗಮನಾರ್ಹವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಆಹಾರ ಸುರಕ್ಷತೆಗೆ ಸಂಬಂಧಿಸಿದ ವ್ಯವಸ್ಥೆ ರಾಜ್ಯದಲ್ಲಿ ಸುಧಾರಣೆಯಾಗಿದೆ ಎಂದು ವರದಿ ಹೇಳಿದೆ.
ಜಮ್ಮು–ಕಾಶ್ಮೀರಕ್ಕೆ ಮನ್ನಣೆ
ಕೇಂದ್ರಾಡಳಿತ ಪ್ರದೇಶವಾದ ಜಮ್ಮು–ಕಾಶ್ಮೀರದಲ್ಲಿಯೂ ಆಹಾರದ ಸುರಕ್ಷತೆ ಕಾಪಾಡುವ ದಿಸೆಯಲ್ಲಿ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚು ಮಂದಿಗೆ ಆಹಾರ ಸುರಕ್ಷತಾ ಉಸ್ತುವಾರಿ ತರಬೇತಿ ನೀಡಿದ್ದು, ‘ಸೂಕ್ತ ಆಹಾರ ಸೇವಿಸಿ’ ಅಭಿಯಾನ ನಡೆಸಿದ್ದು, ಅಧಿಕಾರಿಗಳಿಗೆ ಅಗತ್ಯದ ಆಧಾರದ ಮೇಲೆ ತರಬೇತಿ ನೀಡಿದ್ದು ಉತ್ತಮ ಫಲಶ್ರುತಿಗೆ ಕಾರಣವಾಗಿವೆ. ಜತೆಗೆ ಸಂಚಾರಿ ವಾಹನಗಳ ಮೂಲಕ ಜಾಗೃತಿ ಕಾರ್ಯಕ್ರಮ, ಗುರಿ ಆಧಾರಿತ ಯೋಜನೆಗಳ ಮೂಲಕ ಜಮ್ಮು ಕಾಶ್ಮೀರವು ಆಹಾರ ಸುರಕ್ಷತೆಯಲ್ಲಿ ಎಫ್‌ಎಸ್‌ಎಸ್‌ಎಐನ ವಿಶೇಷ ಮನ್ನಣೆಗೆ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT