ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ರಾಜ್ಯ: ಸಚಿವರ ಕ್ಷೇತ್ರಗಳಲ್ಲಿ ಹಿನ್ನಡೆಯೇ ಅಧಿಕ
ಆಳ–ಅಗಲ | ರಾಜ್ಯ: ಸಚಿವರ ಕ್ಷೇತ್ರಗಳಲ್ಲಿ ಹಿನ್ನಡೆಯೇ ಅಧಿಕ
ಪತ್ನಿ, ಮಗ, ಮಗಳು, ಸಹೋದರಿಗೂ ಮುನ್ನಡೆ ತಂದುಕೊಡುವಲ್ಲಿ ಸಚಿವರು ವಿಫಲ
Published 8 ಜೂನ್ 2024, 0:06 IST
Last Updated 8 ಜೂನ್ 2024, 0:06 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮನೆಯ ಸದಸ್ಯರೇ ಅಭ್ಯರ್ಥಿಗಳಾಗಿದ್ದರೂ ಸಚಿವರು ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ತಂದುಕೊಡುವಲ್ಲಿ ವಿಫಲರಾಗಿದ್ದಾರೆ. ಪತ್ನಿ, ಮಗ, ಮಗಳು, ಸಹೋದರಿ ಕಣದಲ್ಲಿದ್ದರೂ ಎದುರಾಳಿಗಳಿಗೆ ಅಧಿಕ ಮತಗಳು ಬಿದ್ದಿವೆ. 

ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪ್ರಭಾ ಗೆದ್ದಿದ್ದಾರಾದರೂ ಮಲ್ಲಿಕಾರ್ಜುನ ಅವರು ಪ್ರತಿನಿಧಿಸುವ ದಾವಣಗೆರೆ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 25 ಸಾವಿರ ಮತಗಳ ಹಿನ್ನಡೆ ಅನುಭವಿಸಿದ್ದರು. ಸಚಿವರ ತಂದೆ ಶಾಮನೂರು ಶಿವಶಂಕರಪ್ಪ ಅವರು ಪ್ರತಿನಿಧಿಸುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 21 ಸಾವಿರಕ್ಕೂ ಅಧಿಕ ಮುನ್ನಡೆ ಸಿಕ್ಕಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಗ ಮೃಣಾಲ್‌ ಹೆಬ್ಬಾಳಕರರನ್ನೇ ಕಣಕ್ಕೆ ಇಳಿಸಿದ್ದರು. ಆದರೆ ಲಕ್ಷ್ಮೀ ಹೆಬ್ಬಾಳಕರ ಪ್ರತಿನಿಧಿಸುವ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿಯೇ ಬಿಜೆಪಿಯ ಜಗದೀಶ ಶೆಟ್ಟರ್‌ ಅವರಿಗೆ 50 ಸಾವಿರಕ್ಕೂ ಅಧಿಕ ಮುನ್ನಡೆ ಸಿಕ್ಕಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅವರಿಗೆ ರಾಮಲಿಂಗಾರೆಡ್ಡಿ ಅವರು ಪ್ರತಿನಿಧಿಸುವ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಮುನ್ನಡೆ ಕೊಡಿಸುವಲ್ಲಿ ಸಚಿವರು ವಿಫಲರಾಗಿದ್ದಾರೆ. ಬಿಜೆಪಿಯ ತೇಜಸ್ವಿ ಸೂರ್ಯ ಅವರಿಗೆ ಇಲ್ಲಿ 9 ಸಾವಿರಕ್ಕೂ ಅಧಿಕ ಮುನ್ನಡೆ ಲಭಿಸಿತ್ತು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜಕುಮಾರ್ ಅವರು ಶಿವಮೊಗ್ಗದಲ್ಲಿ ಸ್ಪರ್ಧಿಸಿದ್ದರು. ಸಚಿವರು ಪ್ರತಿನಿಧಿಸುವ ಸೊರಬ ವಿಧಾನಸಭಾ ಕ್ಷೇತ್ರದಲ್ಲಿಯೇ ಬಿಜೆಪಿಯ ಬಿ.ವೈ. ರಾಘವೇಂದ್ರ ಅವರು 17 ಸಾವಿರಕ್ಕೂ ಅಧಿಕ ಮುನ್ನಡೆ ಪಡೆದಿದ್ದರು.

ಚಲುವರಾಯಸ್ವಾಮಿ, ಕೆ.ಎನ್. ರಾಜಣ್ಣ, ಜಿ. ಪರಮೇಶ್ವರ, ಡಿ. ಸುಧಾಕರ್‌, ಆರ್‌.ಬಿ. ತಿಮ್ಮಾಪುರ, ಎಚ್‌.ಕೆ. ಪಾಟೀಲ, ಸಂತೋಷ್‌ ಲಾಡ್‌, ಮಂಕಾಳ ವೈದ್ಯ, ಎಂ.ಬಿ. ಪಾಟೀಲ, ಕೆ.ಎಚ್‌. ಮುನಿಯಪ್ಪ, ಎಂ.ಸಿ. ಸುಧಾಕರ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಶಿವಾನಂದ ಪಾಟೀಲ ತಮ್ಮ ತಮ್ಮ ಕ್ಷೇತ್ರದಲ್ಲಿ ಮತಗಳ ಮುನ್ನಡೆ ತಂದು ಕೊಡುವಲ್ಲಿ ವಿಫಲರಾದ ಸಚಿವರು.

ಡಾ.ಎಚ್‌.ಸಿ. ಮಹದೇವಪ್ಪ ಪ್ರತಿನಿಧಿಸುವ ಕ್ಷೇತ್ರದಲ್ಲಿ ಅವರ ಮಗ ಸುನೀಸ್‌ ಬೋಸ್‌ಗೆ ಕೇವಲ 2 ಸಾವಿರ ಮುನ್ನಡೆ ಸಿಕ್ಕಿದೆ. ಸತೀಶ್ ಜಾರಕಿಹೊಳಿ ಅವರು ಚಿಕ್ಕೋಡಿಯಲ್ಲಿ ಸ್ಪರ್ಧಿಸಿರುವ ತನ್ನ ಮಗಳು ಪ್ರಿಯಾಂಕಾ ಜಾರಕಿಹೊಳಿಗೆ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ 23 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ತಂದು ಕೊಟ್ಟಿದ್ದಾರೆ. ಈಶ್ವರ ಖಂಡ್ರೆ ಅವರು ಮಗ ಸಾಗರ್‌ ಖಂಡ್ರೆಗೆ ಹಾಗೂ ಪ್ರಿಯಾಂಕ್ ಖರ್ಗೆ ತನ್ನ ಸಂಬಂಧಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ತಮ್ಮ ಕ್ಷೇತ್ರಗಳಲ್ಲಿ 16 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆಯನ್ನು ತಂದುಕೊಡುವಲ್ಲಿ ಸಫಲರಾಗಿದ್ದಾರೆ.

ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ತಂದುಕೊಟ್ಟವರು
ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣ ವಿಧಾನಸಭಾ ಕ್ಷೇತ್ರದಲ್ಲಿ (33,352 ಮತ), ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ (25,677 ಮತ), ಸಚಿವರಾದ ಬೈರತಿ ಸುರೇಶ್‌ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ (2,921 ಮತ), ಕೆ.ಜೆ. ಜಾರ್ಜ್‌ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ (74,244 ಮತ), ಜಮೀರ್‌ ಅಹಮದ್‌ ಖಾನ್‌ ಅವರು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ (42,953), ಡಾ.ಶರಣಪ್ರಕಾಶ ಪಾಟೀಲ ಅವರು ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ (9,207 ಮತ), ಶಿವರಾಜ ತಂಗಡಗಿ ಅವರು ಕನಕನಗರಿ ವಿಧಾನಸಭಾ ಕ್ಷೇತ್ರದಲ್ಲಿ (4,438), ಶರಣಬಸಪ್ಪ ದರ್ಶನಾಪುರ ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ (9,585), ಬಿ.ನಾಗೇಂದ್ರ ಅವರು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ (25,875 ಮತ), ಕೆ.ವೆಂಕಟೇಶ್ ಅವರು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ (11,744 ಮತ), ರಹೀಂ ಖಾನ್ ಅವರು ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ (32,477 ಮತ) ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮುನ್ನಡೆ ತಂದುಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT