ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಇಂಟರ್‌ಪೋಲ್‌ ನೋಟಿಸ್‌: ಏನು, ಎತ್ತ

Published 8 ಮೇ 2024, 0:30 IST
Last Updated 8 ಮೇ 2024, 0:30 IST
ಅಕ್ಷರ ಗಾತ್ರ

ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ‘ಬ್ಲೂ ಕಾರ್ನರ್ ನೋಟಿಸ್‌’ ಹೊರಡಿಸಲಾಗಿದೆ. ಈ ನೋಟಿಸ್‌ನಡಿ ಇಂಟರ್‌ಪೋಲ್‌, ಪ್ರಜ್ವಲ್‌ ರೇವಣ್ಣಗೆ ಸಂಬಂಧಿಸಿದ ಮಾಹಿತಿಗಳನ್ನು ರಾಜ್ಯದ ವಿಶೇಷ ತನಿಖಾ ತಂಡದೊಂದಿಗೆ ಹಂಚಿಕೊಳ್ಳಲಿದೆ. ಜಾಗತಿಕ ಮಟ್ಟದ ಪೊಲೀಸ್‌ ಸಂಘಟನೆಯಾದ ಇಂಟರ್‌ಪೋಲ್‌, ಅಪರಾಧಗಳ ತಡೆ ಮತ್ತು ಅಪರಾಧಿಗಳ ಬಂಧನಕ್ಕೆ ಕೈಗೊಳ್ಳುವ ಹಾಗೂ ಅದು ಹೊರಡಿಸುವ ನೋಟಿಸ್‌ಗಳ ವಿವರ ಇಲ್ಲಿದೆ...

ಇಂಟರ್‌‍ಪೋಲ್‌ ಎಂಬುದು ‘ಇಂಟರ್‌ನ್ಯಾಷನಲ್‌ ಪೊಲೀಸ್ ಆರ್ಗನೈಸೇಷನ್‌’ ಎಂಬುದರ ಸಂಕ್ಷಿಪ್ತ ರೂಪ. ಹೆಸರೇ ಹೇಳುವಂತೆ ಇದು ಅಂತರರಾಷ್ಟ್ರೀಯ ಪೊಲೀಸ್ ಸಂಘಟನೆ. ವಿಶ್ವದ 196 ದೇಶಗಳ ಸದಸ್ಯತ್ವ ಹೊಂದಿರುವ ಈ ಸಂಘಟನೆಯು ಅಪರಾಧಿಗಳ ಬಂಧನಕ್ಕೆ ಜಾಗತಿಕ ಮಟ್ಟದಲ್ಲಿ ದೇಶ–ದೇಶಗಳ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ಒಂದು ಸಂಸ್ಥೆಯಾಗಿದೆ. ಭಾರತವೂ ಇಂಟರ್‌ಪೋಲ್‌ನ ಸದಸ್ಯ.

ಪ್ರತಿ ಪೊಲೀಸ್‌ ಪಡೆ, ಭದ್ರತಾ ಪಡೆಗೂ ಕಾರ್ಯವ್ಯಾಪ್ತಿ ಮತ್ತು ಭೌಗೋಳಿಕ ಕಾರ್ಯವ್ಯಾಪ್ತಿ ಇರುತ್ತದೆ. ಭಾರತವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಕರ್ನಾಟಕದ ಪೊಲೀಸರ ಕಾರ್ಯವ್ಯಾಪ್ತಿ ರಾಜ್ಯದ ಭೌಗೋಳಿಕ ಗಡಿಗಷ್ಟೇ ಸೀಮಿತ. ಬೇರೆ ರಾಜ್ಯದಲ್ಲಿ ಕರ್ನಾಟಕದ ಪೊಲೀಸರು ಕಾರ್ಯಾಚರಣೆ ನಡೆಸಬೇಕಾದರೆ ಸ್ಥಳೀಯ ಪೊಲೀಸರ ಸುಪರ್ದಿಯಲ್ಲೇ ನಡೆಸಬೇಕು. ಅದೇ ರೀತಿ ಒಂದು ದೇಶದ ತನಿಖಾ ಸಂಸ್ಥೆ ಅಥವಾ ಪೊಲೀಸರು ಬೇರೊಂದು ದೇಶದೊಳಗೆ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ದೇಶವೊಂದರಲ್ಲಿ ಅಪರಾಧ ಕೃತ್ಯ ಎಸಗಿದ ವ್ಯಕ್ತಿಯು ಬೇರೆ ದೇಶದಲ್ಲಿ ತಲೆಮರೆಸಿಕೊಂಡಿದ್ದರೆ ನೇರವಾಗಿ ಆತನನ್ನು ಬಂಧಿಸಲು ಸಾಧ್ಯವಿಲ್ಲ. ಹಾಗೆ ಮಾಡುವುದು ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಇಂತಹ ಅನಗತ್ಯ ಸಂಘರ್ಷವನ್ನು ತಪ್ಪಿಸುವ ಉದ್ದೇಶದಿಂದಲೇ ಇಂಟರ್‌ಪೋಲ್‌ ಅಸ್ತಿತ್ವಕ್ಕೆ ಬಂದಿದ್ದು. ಅಪರಾಧಿ–ಆರೋಪಿಗಳಿಗೆ ಸಂಬಂಧಿಸಿದಂತೆ ಎರಡು ಅಥವಾ ಹಲವು ದೇಶಗಳ ನಡುವೆ ಮಧ್ಯಸ್ಥ ಸಂಸ್ಥೆಯಾಗಿ ಇಂಟರ್‌ಪೋಲ್‌ ಕಾರ್ಯನಿರ್ವಹಿಸುತ್ತದೆ. 

ಉದಾಹರಣೆಗೆ, ಕರ್ನಾಟಕಕ್ಕೆ ಅಗತ್ಯವಿರುವ ಅಪರಾಧಿ ಅಥವಾ ಆರೋಪಿ ಬೇರೊಂದು ದೇಶದಲ್ಲಿ ತಲೆಮರೆಸಿಕೊಂಡಿದ್ದರೆ ಆತನನ್ನು ರಾಜ್ಯದ ಪೊಲೀಸರು ನೇರವಾಗಿ ಬಂಧಿಸಲು ಸಾಧ್ಯವಿಲ್ಲ. ಅದಕ್ಕಾಗಿ ಇಂಟರ್‌ಪೋಲ್‌ನ ನೆರವು ಬೇಕಾಗುತ್ತದೆ. ಹಾಗೆಂದು ರಾಜ್ಯದ ಪೊಲೀಸರು ನೇರವಾಗಿ ಇಂಟರ್‌ಪೋಲ್‌ ಅನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಇಂಟರ್‌ಪೋಲ್‌ ಪ್ರತಿ ದೇಶದಲ್ಲೂ ಅಲ್ಲಿನ ಪ್ರಧಾನ ತನಿಖಾ ಸಂಸ್ಥೆಯನ್ನು ಗುರುತಿಸುತ್ತದೆ. ಆ ಸಂಸ್ಥೆಯ ಮೂಲಕವೇ ಇಂತಹ ವ್ಯವಹಾರಗಳು ನಡೆಯಬೇಕು. ಹೀಗೆ ಭಾರತದ ಸಿಬಿಐ ಅನ್ನು ಇಂಟರ್‌ಪೋಲ್‌ ಗುರುತಿಸಿದೆ. 

ತಮಗೆ ಯಾವುದೇ ಅಪರಾಧಿ ಅಥವಾ ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಇಂಟರ್‌ಪೋಲ್‌ನ ಅಗತ್ಯವಿದ್ದರೆ, ಕರ್ನಾಟಕದ ಪೊಲೀಸರು ಆ ಬಗ್ಗೆ ಸಿಬಿಐಗೆ ಮನವಿ ಮಾಡಿಕೊಳ್ಳಬೇಕು. ಸಿಬಿಐ ಅಂತಹ ಮನವಿಯನ್ನು ಇಂಟರ್‌ಪೋಲ್‌ಗೆ ಸಲ್ಲಿಸುತ್ತದೆ. ಆ ಮನವಿಯನ್ನು ಇಂಟರ್‌ಪೋಲ್‌ ಪರಿಶೀಲಿಸಿ ನೋಟಿಸ್‌ ಹೊರಡಿಸುತ್ತದೆ. ಆನಂತರವಷ್ಟೇ ಕರ್ನಾಟಕದ ಪೊಲೀಸರಿಗೆ ತಲೆಮರೆಸಿಕೊಂಡಿರುವ ಅಪರಾಧಿ ಅಥವಾ ಆರೋಪಿಯ ಬಗ್ಗೆ ಸಂಬಂಧಿತ ದೇಶವು ಮಾಹಿತಿ ಹಂಚಿಕೊಳ್ಳುತ್ತದೆ, ಮತ್ತು ಬಂಧನಕ್ಕೆ ನೆರವು ನೀಡುತ್ತದೆ.

ರೆಡ್‌ ಕಾರ್ನರ್ ನೋಟಿಸ್‌

ಅಪರಾಧ ಕೃತ್ಯಗಳಲ್ಲಿ ಬೇಕಾಗಿರುವ ಮತ್ತು ಗಡಿಪಾರಿನ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯ ಪತ್ತೆ ಮತ್ತು ಬಂಧನಕ್ಕೆ ಸಹಕಾರ ಕೋರಿ ಹೊರಡಿಸಲಾಗುವ ನೋಟಿಸ್‌. ಇಂಟರ್‌ಪೋಲ್‌ನ ಸದಸ್ಯ ರಾಷ್ಟ್ರವು ಇಂತಹ ನೋಟಿಸ್‌ ಹೊರಡಿಸಲು ಮನವಿ ಮಾಡಿಕೊಳ್ಳಬಹುದು. ಇದು ಇಂಟರ್‌ಪೋಲ್‌ ಹೊರಡಿಸುವ ನೋಟಿಸ್‌ಗಳಲ್ಲೇ ಅತ್ಯಂತ ಪ್ರಬಲ ನೋಟಿಸ್‌.

ಇದು ಬಂಧನ ವಾರಂಟ್‌ ಅಲ್ಲದಿದ್ದರೂ, ನೋಟಿಸ್‌ನಲ್ಲಿ ಸೂಚಿಸಲಾದ ವ್ಯಕ್ತಿಯು ಪತ್ತೆಯಾದ ಕೂಡಲೇ ಆತನ ಬಂಧನ ಪ್ರಕ್ರಿಯೆ ನಡೆಯುತ್ತದೆ. ಬಂಧನ ಪ್ರಕ್ರಿಯೆಯನ್ನು ಆಯಾ ದೇಶಗಳೇ ನಡೆಸುತ್ತವೆಯಾದರೂ, ಬೇಕಾಗಿರುವ ವ್ಯಕ್ತಿಯು ಭಾರಿ ಪ್ರಭಾವಿ ಮತ್ತು ಅಪಾಯಕಾರಿಯಾಗಿದ್ದರೆ ಇಂಟರ್‌ಪೋಲ್‌ ವಿಶೇಷ ತಂಡವೂ ಕಾರ್ಯಾಚರಣೆಯಲ್ಲಿ ಭಾಗಿಯಾಗು ತ್ತದೆ. ಆನಂತರ ಆತನನ್ನು ಸಂಬಂಧಿತ ದೇಶಕ್ಕೆ ಹಸ್ತಾಂತರ ಅಥವಾ ಗಡಿಪಾರು ಮಾಡಲಾಗುತ್ತದೆ. ಸಾಮಾನ್ಯವಾಗಿ ಭಯೋತ್ಪಾದಕರು, ಕಳ್ಳಸಾಗಣೆದಾರರು, ಆರ್ಥಿಕ ಅಪರಾಧಿಗಳು ಮತ್ತು ಗಂಭೀರ ಸ್ವರೂಪದ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಮತ್ತು ಅಂತಹ ಆರೋಪ ಎದುರಿಸುತ್ತಿರು ವವರ ವಿರುದ್ಧ ಈ ನೋಟಿಸ್‌ ಹೊರಡಿಸಲಾಗುತ್ತದೆ.

ಉದಾಹರಣೆ: 1993 ಮುಂಬೈ ಸರಣಿ ಸ್ಫೋಟದಲ್ಲಿ ಬೇಕಾಗಿರುವ ದಾವೂದ್‌ ಇಬ್ರಾಹಿಂ, ವಿರುದ್ದ ರೆಡ್‌ ಕಾರ್ನರ್ ನೋಟಿಸ್‌ ಜಾರಿಯಲ್ಲಿದೆ

ಯೆಲ್ಲೋ ಕಾರ್ನರ್ ನೋಟಿಸ್

ನಾಪತ್ತೆ ಅಥವಾ ಕಾಣೆಯಾಗಿ ರುವ ವ್ಯಕ್ತಿಗಳ ಪತ್ತೆಗೆ ಸಹಕರಿಸುವಂತೆ ಇಂಟರ್‌ಪೋಲ್‌ ಸದಸ್ಯ ರಾಷ್ಟ್ರಗಳನ್ನು ಕೋರಲು ಹೊರಡಿಸಲಾಗುವ ನೋಟಿಸ್‌ ಇದು. ಸದಸ್ಯ ರಾಷ್ಟ್ರವೊಂದು ತಮ್ಮಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯನ್ನು ಪತ್ತೆ ಮಾಡಲು ಕೋರಿ ಇಂಟರ್‌ಪೋಲ್‌ಗೆ ಮನವಿ ಮಾಡಿಕೊಳ್ಳುತ್ತದೆ. ಅದರ ಆಧಾರದಲ್ಲಿ ಇಂತಹ ನೋಟಿಸ್‌ ಹೊರಡಿಸಲಾಗುತ್ತದೆ.

ಸಾಮಾನ್ಯವಾಗಿ ಮಾನವ ಕಳ್ಳಸಾಗಣೆಗೆ ಗುರಿಯಾಗಿರುವ ಸಂತ್ರಸ್ತರು, ಅಪರಹರಣಕ್ಕೆ ಒಳಗಾದವರ ಪತ್ತೆಗೆ ಈ ನೋಟಿಸ್‌ ಹೊರಡಿಸಲಾಗುತ್ತದೆ. ಜತೆಗೆ ತಮ್ಮ ಗುರುತನ್ನು ಹೇಳಿಕೊಳ್ಳಲು ಸಾಧ್ಯವಿಲ್ಲದೇ ಇರುವ ವ್ಯಕ್ತಿಗಳ (ಉದಾಹರಣೆಗೆ ಮಕ್ಕಳು, ವೃದ್ಧರು, ನಿಧಾನ ಗ್ರಹಿಕೆಯ ವ್ಯಕ್ತಿಗಳು, ಮರೆವಿನ ಕಾಯಿಲೆ ಇರುವವರು) ಪತ್ತೆಗೂ ಈ ನೋಟಿಸ್‌ ಹೊರಡಿಸಲಾಗುತ್ತದೆ.

ಈ ನೋಟಿಸ್‌ ಅಡಿ ಸೂಚಿಸಲಾದ ವ್ಯಕ್ತಿಗಳು ದೊರೆತ ನಂತರ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ತಾತ್ಕಾಲಿಕ ಪುನರ್ವಸತಿ ಒದಗಿಸಲಾಗುತ್ತದೆ.

ನಂತರ ಅವರನ್ನು ಸಂಬಂಧಿತ ದೇಶಕ್ಕೆ ಹಸ್ತಾಂತರಿಸಲಾಗುತ್ತದೆ. ಈ ವೇಳೆ ಅಂತಹ ವ್ಯಕ್ತಿಗಳ ಮಾನವ ಹಕ್ಕುಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುತ್ತದೆ.

ಬ್ಲೂ ಕಾರ್ನರ್ ನೋಟಿಸ್‌

ಅಪರಾಧ ಕೃತ್ಯವೊಂದರ ಅಥವಾ ಹಲವು ಅಪರಾಧ ಕೃತ್ಯಗಳ ತನಿಖೆಗೆ ಸಂಬಂಧಿಸಿದಂತೆ ಈ ನೋಟಿಸ್‌ ಹೊರಡಿಸಲಾಗು ತ್ತದೆ. ತನಿಖೆಗೆ ಅಗತ್ಯವಿರುವ ವ್ಯಕ್ತಿಯು ತನ್ನ ದೇಶದಿಂದ ಹೊರಗೆ ಇದ್ದರೆ, ಆತನ ಇರುವಿಕೆ ಬಗ್ಗೆ ಮಾಹಿತಿ ಕೋರಿ ಹೊರಡಿಸಲಾಗುವ ನೋಟಿಸ್‌ ಇದು. ಅಂತಹ ವ್ಯಕ್ತಿ ಎಲ್ಲಿದ್ದಾನೆ, ನೋಟಿಸ್‌ನಲ್ಲಿ ಇರುವ ವ್ಯಕ್ತಿ ಆತನೇ ಹೌದು ಎಂಬುದನ್ನು ದೃಢಪಡಿಸಿಕೊಳ್ಳಲು ಇರುವ ಗುರುತುಗಳು, ಆತನ ಚಲನವಲನಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ನೋಟಿಸ್‌ ಅಡಿ ಕೋರಲಾಗುತ್ತದೆ.

ಈ ನೋಟಿಸ್‌ ಅಡಿ ಸೂಚಿಸಲಾದ ವ್ಯಕ್ತಿಯ ಅಪರಾಧದ ಹಿನ್ನೆಲೆಯ ಮಾಹಿತಿಯನ್ನೂ ಹಂಚಿಕೊಳ್ಳ ಲಾಗುತ್ತದೆ. ಹೆಚ್ಚುವರಿ ಮಾಹಿತಿಗಳು ಇದ್ದರೆ, ಅವನ್ನೂ ಹಂಚಿಕೊಳ್ಳಲು ಕೋರಲಾಗುತ್ತದೆ. ಈ ಬ್ಲೂ ಕಾರ್ನರ್ ನೋಟಿಸ್‌ ಅನ್ನು ‘ವಿಚಾರಣಾ ನೋಟಿಸ್‌’ ಎಂದೂ ಕರೆಯಲಾಗುತ್ತದೆ.

ಈ ನೋಟಿಸ್‌ ಅಡಿ ಕೋರಲಾದ ಮಾಹಿತಿ ದೊರೆತ ನಂತರ ಅದನ್ನು ಸಂಬಂಧಿತ ದೇಶದೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅಲ್ಲಿಂದ ಆ ವ್ಯಕ್ತಿಯ ಚಲನವಲನದ ಮೇಲೆ ನಿಗಾ ಇರಿಸಲಾಗುತ್ತದೆ. ಲಭ್ಯವಿರುವ ಮಾಹಿತಿಗಳ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿಶೇಷ ಪ್ರಕರಣಗಳಲ್ಲಿ ಅಂತಹ ವ್ಯಕ್ತಿಯ ಬಂಧನ ಅಥವಾ ಗಡಿಪಾರನ್ನು ಕೋರಿ ಮತ್ತೆ ನೋಟಿಸ್‌ ಹೊರಡಿಸಲಾಗುತ್ತದೆ.

ಉದಾಹರಣೆ: ಈಗ ಪ್ರಜ್ವಲ್‌ ರೇವಣ್ಣ ವಿರುದ್ಧ ಇಂತಹ ನೋಟಿಸ್‌ ಹೊರಡಿಸಲಾಗಿದೆ

ಬ್ಲ್ಯಾಕ್‌ ನೋಟಿಸ್‌

ಇಂಟರ್‌ಪೋಲ್‌ ಸದಸ್ಯ ರಾಷ್ಟ್ರವೊಂದು ತನ್ನ ನೆಲದಲ್ಲಿ ಮೃತಪಟ್ಟಿರುವ ವಿದೇಶಿ ವ್ಯಕ್ತಿಯ ಗುರುತು ಪತ್ತೆ ಮಾಡಲು ಸಹಕಾರ ನೀಡುವಂತೆ ಕೋರಿ ಹೊರಡಿಸಲಾಗುವ ನೋಟಿಸ್‌ ಇದು. ವಿದೇಶಿ ವ್ಯಕ್ತಿಯು ಸುಳ್ಳು ಗುರುತಿನೊಂದಿಗೆ ನೆಲೆಸಿದ್ದಾಗ ಮತ್ತು ಆತನ ನಿಜವಾದ ಗುರುತು ಲಭ್ಯವಿಲ್ಲದೇ ಇದ್ದಾಗ ಇಂತಹ ನೋಟಿಸ್‌ ಹೊರಡಿಸಲಾಗುತ್ತದೆ.

ಈ ನೋಟಿಸ್‌ನಲ್ಲಿ ಸೂಚಿಸಲಾದ ಮೃತದೇಹದ ಗುರುತು ಪತ್ತೆಯಾದ ನಂತರ ಸಂಬಂಧಿತ ದೇಶಕ್ಕೆ ಅದರ ಹಸ್ತಾಂತರ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಮೃತವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸುವ ಉದ್ದೇಶದಿಂದ ಈ ನೋಟಿಸ್‌ ಹೊರಡಿಸ ಲಾಗುತ್ತದೆ. ಗುರುತು ಪತ್ತೆಯಾಗದೇ ಇದ್ದರೆ ಸದಸ್ಯ ರಾಷ್ಟ್ರವು ತನ್ನಲ್ಲಿನ ಕಾನೂನಿನ ಅನ್ವಯ ಕೆಲಕಾಲ ಆ ಮೃತದೇಹವನ್ನು ಸಂರಕ್ಷಿಸಿ ಇಡುತ್ತದೆ. ಆ ಅವಧಿ ಮುಗಿದ ನಂತರ ಮೃತದೇಹದ ವಿಲೇವಾರಿಗೆ ಕ್ರಮ ತೆಗೆದುಕೊಳ್ಳುತ್ತದೆ.

ಇಂಟರ್‌ಪೋಲ್‌ ಪ್ರತಿ ವರ್ಷ ಇಂತಹ ಸರಾಸರಿ 200–250 ನೋಟಿಸ್ ಹೊರಡಿಸುತ್ತದೆ. ಆದರೆ ಇವುಗಳಲ್ಲಿ ಎಷ್ಟು ಮೃತದೇಹಗಳ ಗುರುತು ಪತ್ತೆಯಾಗುತ್ತದೆ ಎಂಬುದರ ಮಾಹಿತಿ ಲಭ್ಯವಿಲ್ಲ. 2023ರಲ್ಲಿ ಇಂಟರ್‌ಪೋಲ್‌ ಇಂತಹ 282 ನೋಟಿಸ್‌ ಹೊರಡಿಸಿತ್ತು. ಕೋವಿಡ್‌ ತೀವ್ರವಾಗಿದ್ದ 2020ರಲ್ಲಿ ಇಂತಹ 391 ನೋಟಿಸ್‌ ಹೊರಡಿಸಲಾಗಿತ್ತು. ಈಚಿನ ದಶಕದಲ್ಲಿ ಅದೇ ಬ್ಲ್ಯಾಕ್‌ ನೋಟಿಸ್‌ನ ಗರಿಷ್ಠ ಸಂಖ್ಯೆ.

ಗ್ರೀನ್‌ ಕಾರ್ನರ್ ನೋಟಿಸ್‌

ಅಪರಾಧ ಹಿನ್ನೆಲೆಯ ವ್ಯಕ್ತಿಯೊಬ್ಬನ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ನೋಟಿಸ್‌ ಇದು. ವ್ಯಕ್ತಿಯೊಬ್ಬನಿಂದ ಸಾರ್ವಜನಿಕರಿಗೆ, ಸಾರ್ವಜನಿಕ ಆಸ್ತಿಗೆ ಅಪಾಯವಿದೆ ಎಂದಾದಾಗ ಸಂಬಂಧಿತ ದೇಶವು ಇಂತಹ ನೋಟಿಸ್‌ ಹೊರಡಿಸುತ್ತದೆ. ಅದನ್ನು ಇಂಟರ್‌ಪೋಲ್‌ ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಸೂಚಿತ ವ್ಯಕ್ತಿಯಿಂದ ಒದಗಬಹುದಾದ ಅಪಾಯದ ಸ್ವರೂಪ ಮತ್ತು ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಭಯೋತ್ಪಾದನಾ ಕೃತ್ಯಗಳಿಗೆ ಸಂಚು ರೂಪಿಸಿರುವವರು, ಮಾನವ ಕಳ್ಳಸಾಗಣೆಗೆ ಯತ್ನಿಸುತ್ತಿರುವವರು, ಸರಣಿ ಕೊಲೆಗಡುಕರ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಇದನ್ನು ಬಳಸಿಕೊಳ್ಳಲಾಗುತ್ತದೆ.

ಆರೆಂಜ್‌ ನೋಟಿಸ್‌

ಸಾರ್ವಜನಿಕರಿಗೆ ಅಪಾಯ ಮತ್ತು ಅಪಾರ ಹಾನಿ ತಂದೊಡ್ಡಲಿರುವ ವ್ಯಕ್ತಿಗಳು/ವಿದ್ಯಮಾನ/ಘಟನೆಯ ಬಗ್ಗೆ ಎಚ್ಚರಿಕೆ ನೀಡಲು ಈ ನೋಟಿಸ್‌ ನೀಡಲಾಗುತ್ತದೆ. ಇಂತಹ ಅಪಾಯಗಳ ಬಗ್ಗೆ ಇಂಟರ್‌ಪೋಲ್‌ ಸದಸ್ಯ ರಾಷ್ಟ್ರಗಳು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಈ ನೋಟಿಸ್‌ ಅನ್ನು ಬಳಸಿಕೊಳ್ಳಲಾಗುತ್ತದೆ. ಗ್ರೀನ್‌ ಮತ್ತು ಆರೆಂಜ್‌ ನೋಟಿಸ್‌ಗಳ ಅಡಿಯಲ್ಲಿ ತೆಗೆದುಕೊಳ್ಳುವ ಕ್ರಮಗಳು ಒಂದೇ ರೀತಿಯಲ್ಲಿ ಇರುತ್ತವೆ. ಒಬ್ಬನೇ ವ್ಯಕ್ತಿಯ ಬಗ್ಗೆ ಹೊರಡಿಸಲಾಗುವ ನೋಟಿಸ್‌ ಗ್ರೀನ್‌ ಆಗಿದ್ದರೆ, ಹಲವು ವ್ಯಕ್ತಿಗಳ ಅಥವಾ ಒಂದು ವಿದ್ಯಮಾನ ಅಥವಾ ಘಟನೆಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಬೇಕಿದ್ದರೆ ಆರೆಂಜ್‌ ನೋಟಿಸ್‌ ಹೊರಡಿಸಲಾಗುತ್ತದೆ.

ಪರ್ಪಲ್‌ ನೋಟಿಸ್‌

ಅಪರಾಧಿಗಳ ಅಪರಾಧ ಕೃತ್ಯಗಳ ಸ್ವರೂಪ, ಅವರು ಅನುಸರಿಸುವ ವಿಧಾನ, ಬಳಸುವ ಆಯುಧಗಳು ಅಥವಾ ಸಾಧನಗಳು, ವಾಹನಗಳು, ಸಂಪರ್ಕ ಸಲಕರಣೆಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಸದಸ್ಯ ರಾಷ್ಟ್ರವೊಂದು ಹೊರಡಿಸುವ ನೋಟಿಸ್‌ ಇದು. ಇದನ್ನು ಇಂಟರ್‌ಪೋಲ್‌ನ ಎಲ್ಲಾ ಸದಸ್ಯ ರಾಷ್ಟ್ರಗಳ ಜತೆಗೆ ಹಂಚಿಕೊಳ್ಳಲಾಗುತ್ತದೆ. ಇಂತಹ ನೋಟಿಸ್‌ನಲ್ಲಿ ಅಪರಾಧಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಇರುತ್ತವೆ. ಆ ವಿವರಗಳಿಗೆ ಹೋಲಿಕೆಯಾಗುವ, ಅದನ್ನು ದೃಢಪಡಿಸುವ ವಿವರಗಳನ್ನು ಈ ನೋಟಿಸ್‌ನಲ್ಲಿ ಕೋರಲಾಗುತ್ತದೆ. ಸಾಮಾನ್ಯವಾಗಿ ಮಾದಕ ವಸ್ತುಗಳ ಕಳ್ಳಸಾಗಣೆದಾರರು/ಗುಂಪುಗಳು, ಶಸ್ತ್ರಾಸ್ತ್ರ ಅಕ್ರಮ ಸಾಗಣೆದಾರರು, ಮಾನವ ಕಳ್ಳಸಾಗಣೆದಾರರ ಗುಂಪುಗಳ ಬಗ್ಗೆ ಮಾಹಿತಿ ಕೋರಿ ಇಂತಹ ನೋಟಿಸ್‌ ಹೊರಡಿಸಲಾಗುತ್ತದೆ.

ವಿಶೇಷ ನೋಟಿಸ್‌ಗಳು

ಮೇಲೆ ವಿವರಿಸಲಾದ ಏಳು ಸ್ವರೂಪದ ನೋಟಿಸ್‌ಗಳು ಮಾತ್ರವಲ್ಲದೆ, ಇಂಟರ್‌ಪೋಲ್ ಇನ್ನೂ ಹಲವು ವಿಶೇಷ ನೋಟಿಸ್‌ಗಳನ್ನು ಹೊರಡಿಸುತ್ತದೆ. ಅವುಗಳಲ್ಲಿ ಪ್ರಮುಖವಾದುದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಹೊರಡಿಸುವ ನೋಟಿಸ್‌ಗಳು.

ಸಾಮಾನ್ಯವಾಗಿ ಬೇರೆಲ್ಲಾ ನೋಟಿಸ್‌ಗಳ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗದಂತೆ ಗೌಪ್ಯವಾಗಿ ಇಡಲಾಗತ್ತದೆ. ನೋಟಿಸ್‌ ಹೊರಡಿಸಲು ಮನವಿ ಮಾಡುವ ರಾಷ್ಟ್ರದ ಕೋರಿಕೆ ಇದ್ದರಷ್ಟೇ ಸಾರ್ವಜನಿಕರಿಗೂ ಆ ನೋಟಿಸ್‌ ಗೋಚರವಾಗುವಂತೆ ಮಾಡಲಾಗುತ್ತದೆ. ಆದರೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲಾ ವಿಶೇಷ ನೋಟಿಸ್‌ಗಳನ್ನು ಇಂಟರ್‌ಪೋಲ್‌ ಸಾರ್ವಜನಿಕವಾಗಿ ಪ್ರದರ್ಶಿಸುತ್ತದೆ. ಕಳ್ಳಸಾಗಣೆದಾರರು, ಭದ್ರತಾ ಮಂಡಳಿಯಿಂದ ಆರ್ಥಿಕ ನಿರ್ಬಂಧಕ್ಕೆ ಗುರಿಯಾದ ದೇಶಗಳು, ಭಯೋತ್ಪಾದಕರು, ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಇಂತಹ ನೋಟಿಸ್‌ ಹೊರಡಿಸಲಾಗುತ್ತದೆ.

ವಾಂಟೆಡ್‌ ನೋಟಿಸ್‌

ಇದನ್ನು ಸ್ವತಃ ಇಂಟರ್‌ಪೋಲ್‌ ಹೊರಡಿಸುತ್ತದೆ. ಪರಿಸರ ಮತ್ತು ಸಂರಕ್ಷಿತ ವನ್ಯಜೀವಿಗಳಿಗೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಇಂತಹ ನೋಟಿಸ್‌ ಹೊರಡಿಸಲಾಗುತ್ತದೆ. ಘೋಷಿತ ಅಪರಾಧಿಗಳು, ಹಲವು ದೇಶಗಳಿಗೆ ಬೇಕಾಗಿರುವ ಅಪರಾಧಿಗಳಿಗೆ ಸಂಬಂಧಿಸಿದಂತೆ ಇಂತಹ ನೋಟಿಸ್‌ ಹೊರಡಿಸಲಾಗುತ್ತದೆ.

ಆಧಾರ: ಇಂಟರ್‌ಪೋಲ್‌, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT