ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ ನಡೆಯುತ್ತಲೇ ಇರುವ ಹೆಣ್ಣುಮಕ್ಕಳ ಹತ್ಯೆಗಳು ನಮ್ಮ ಸಾಮಾಜಿಕ ಹಾಗೂ ಕಾನೂನು ವ್ಯವಸ್ಥೆಯ ಲೋಪಗಳಿಗೆ ಕನ್ನಡಿ ಹಿಡಿಯುತ್ತಿವೆ. ಮನುಷ್ಯರನ್ನು ಮನುಷ್ಯರಂತೆ ಕಾಣದಿರುವುದು, ಗಂಡು ಹೆಣ್ಣಿನ ಪ್ರೇಮ ಮತ್ತು ವಿವಾಹವನ್ನು ಸಹಜ ಎಂದು ಒಪ್ಪದಿರುವುದು, ಸಮಾಜವು ರೋಗಗ್ರಸ್ತವಾಗಿರುವುದರ ಲಕ್ಷಣಗಳಾಗಿವೆ. ಈ ಪರಿಸ್ಥಿತಿ ಬದಲಾಗಬೇಕು, ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ಮದುವೆಯಾದವರ ಹಕ್ಕುಗಳು–ಪ್ರಾಣ ರಕ್ಷಣೆಯಾಗಬೇಕು. ಈ ದಿಸೆಯಲ್ಲಿ ಜನರ ಚಿಂತನೆ, ಭಾವನೆ, ವರ್ತನೆಗಳಲ್ಲಿ ಆಗಬೇಕಿರುವ ಪರಿವರ್ತನೆ ಏನು ಎನ್ನುವುದರ ಬಗ್ಗೆ ಬರಹ ಇಲ್ಲಿದೆ

ಮಾತು ಸೋಲುವ, ಪ್ರಜ್ಞೆ ದಿಕ್ಕೆಡುವ ಘಟನೆ ಇನಾಂ ವೀರಾಪುರದಲ್ಲಿ ನಡೆದಿದೆ. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಅಪರಾಧಕ್ಕಾಗಿ ಮಾನ್ಯಾ ಎಂಬ ಯುವತಿಯನ್ನು ತಂದೆಯೇ ಕೊಚ್ಚಿ ಹಾಕಿದ್ದಾನೆ; ಮಗಳು ಗರ್ಭಿಣಿ ಎಂಬ ಕನಿಷ್ಠ ಮಮತೆಯೂ ಇಲ್ಲದೆ. ಇದೊಂದು ವಿರಳ ಘಟನೆಯಲ್ಲ. ದಶಕದ ಹಿಂದೆ ಬೆಳಗಾವಿಯಲ್ಲಿ ಪ್ರೇಮವಿವಾಹ ಮಾಡಿಕೊಂಡು ಬದುಕು ನಡೆಸುತ್ತಿದ್ದ ಎಳೆಯರನ್ನು ಹುಡುಗಿಯ ತಂದೆ ಮತ್ತು ಸಂಬಂಧಿಗಳು ಮನೆಗೆ ನುಗ್ಗಿ ಕೊಚ್ಚಿಹಾಕಿದ್ದರು. ತೊಟ್ಟಿಲಲ್ಲಿ ಮಲಗಿದ್ದ ಎಳೆಯ ಕೂಸು ‘ವಿನಂತಿ’ ಅನಾಥವಾದಳು. ಅದು ಆಗಸ್ಟ್ 14ರ ರಾತ್ರಿ. ಇಬ್ಬರೂ ಶ್ರಮಮೂಲದ ಬಡ ಜಾತಿಗಳಿಗೆ ಸಂಬಂಧಪಟ್ಟವರಾಗಿದ್ದರು. ಬಹುಶಃ ಇದು ನಮ್ಮ ರಾಜ್ಯದ ಮೊದಲ ಮರ್ಯಾದೆಗೇಡು ಹತ್ಯೆಯಾಗಿತ್ತು. ಈ ಕ್ರೌರ್ಯ ಕರ್ನಾಟಕಕ್ಕೂ ಕಾಲಿರಿಸಿತೇ ಎಂದು ದಿಗಿಲಾದ ದಿನಗಳವು. ತೀರ ಇತ್ತೀಚೆಗೆ ಗದಗಿನ ಸಮೀಪ ಅಂತರ್ಧರ್ಮೀಯ ಮದುವೆಯಾಗಿ, ದಶಕದ ನಂತರ ಮಕ್ಕಳೊಂದಿಗರಾಗಿ ಊರಿಗೆ ಬಂದವರನ್ನು ಹುಡುಗಿಯ ಸಹೋದರ ಕೊಚ್ಚಿಹಾಕಿದ್ದ. ಪ್ರೀತಿಸುವ ಅಧಿಕಾರವನ್ನು ಆಯ್ಕೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತ, ಸಿನಿಮಾಗಳ ಎಳಸು ಪ್ರೀತಿಯ ಪ್ರದರ್ಶನಕ್ಕೆ ಶಿಳ್ಳೆಹಾಕುವ ಮನೋಭ್ರಾಂತಿಗೆ ಸಮಾಜ ಈಗಾಗಲೇ ತಲುಪಿದೆ. ಪ್ರೀತಿಸುವುದು ಅಕ್ರಮ ಎಂದು ಬಿಂಬಿತವಾಗುತ್ತಿದೆ. 2018ರ ಶಕ್ತಿವಾಹಿನಿ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಸಂವಿಧಾನದ ವಿಧಿ 21, 19(1) (ಎ)ಗಳನ್ನು ಉಲ್ಲೇಖಿಸಿ ಪ್ರತಿಯೊಬ್ಬರಿಗೂ ಸಂಗಾತಿಯ ಆಯ್ಕೆಯ ಹಕ್ಕಿದೆ ಎಂದು ಹೇಳಿದೆ. ಆದರೆ, ಇಂದಿಗೂ ಪ್ರೀತಿಸುವುದನ್ನು ಹೆತ್ತವರಿಗೆ, ಸಮಾಜಕ್ಕೆ ಬಗೆವ ದ್ರೋಹ ಎನ್ನಲಾಗುತ್ತಿದೆ.

2025ರಲ್ಲಿ ಕರ್ನಾಟಕದಲ್ಲಿ ವರದಿಯಾದ ನಾಲ್ಕು ಪ್ರಕರಣಗಳು, ಮೇಲ್ನೋಟಕ್ಕೆ ಸ್ಥಳೀಯ ಕಾರಣಗಳನ್ನು ಮುಂದಿಡುತ್ತವಾದರೂ, ಆಳದಲ್ಲಿವು ಜಾತಿ-ಧರ್ಮಗಳ ಪ್ರತಿಷ್ಠೆಗಾಗಿ ಹೆಣ್ಣನ್ನು ಬಲಿಯಾಗಿಸುತ್ತ ಬಂದ ಹಿಂಸೆಯ ಕೊಂಡಿಗಳಾಗಿವೆ. ಹಿರೇಕ್ಯಾತನಳ್ಳಿಯಲ್ಲಿ ಸೋದರಿಯನ್ನು ಕೆರೆಗೆ ದೂಡಿ ಕೊಲೆ ಮಾಡಿದ ಕಾರಣ, ಅವಳು ಬೇರೆ ಧರ್ಮದ ಯುವಕನನ್ನು ಪ್ರೀತಿಸುತ್ತಿದ್ದಾಳೆನ್ನುವುದು. ಹಾರೋಹಳ್ಳಿಯಲ್ಲಿ ಮಗಳು ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿದಳೆಂದು ಬಿಂಬಿಸಲು ಪ್ರಯತ್ನಿಸಿದ ತಂದೆಯ ಆಕ್ಷೇಪವಿರುವುದು ಮತ್ತು ಕಲಬುರ್ಗಿಯ ಮೇಳಕುಂದಾದಲ್ಲಿ ಮಗಳ ಕತ್ತುಹಿಸುಕಿ ಕೊಲೆ ಮಾಡಿದ್ದು ಅವಳು ಬೇರೆ ಜಾತಿ ಹುಡುಗನನ್ನು ಪ್ರೀತಿಸುತ್ತಾಳೆನ್ನುವುದೇ. ಸಿಂದಗಿನ ಬೆನಕೊಟಗಿಯಲ್ಲಿ ಮದುವೆಯಾದ ಎರಡು ವರ್ಷಗಳ ನಂತರ, ಮಗುವಿನೊಂದಿಗೆ ಗಂಡನ ಮನೆಯವರಿಂದ ಹತ್ಯೆಗೊಳಗಾದ ಕಾರಣ ಅವಳು ದಲಿತಳು, ಅವರು ಪಂಚಮಸಾಲಿಗಳೂ ಆಗಿರುವುದು. ಈಗ ಇನಾಂ ವೀರಾಪುರದಲ್ಲಿಯೂ ಅದೇ. ಈ ಎಲ್ಲವೂ ಹೆಣ್ಣಿನ ನಿರ್ಣಯಾಧಿಕಾರವನ್ನು ಮೊಟಕುಗೊಳಿಸುವ, ಭೀತಗೊಳಿಸುವ ಸಾಮಾಜಿಕ ಒಪ್ಪಿತವನ್ನು ಹರಡುವ ಹುನ್ನಾರಗಳು. ಸಾಮಾನ್ಯವಾಗಿ ಮರ್ಯಾದೆಗೇಡು ಹತ್ಯೆಗಳು ವರದಿಯಾಗುವುದೇ ಅಪರೂಪ. ಇಂದಿಗೂ ಆಸ್ಪತ್ರೆಯ ಕಡತಗಳಲ್ಲಿ ಅನಾರೋಗ್ಯದಿಂದಲೋ ಆಕಸ್ಮಿಕವಾಗಿಯೋ ಸತ್ತು ಹೋದ, ಆತ್ಮಹತ್ಯೆ ಮಾಡಿಕೊಂಡ ಯುವತಿಯರಿದ್ದಾರೆ. ಕೊಲೆಗಾರರ ಕೈಗೆ ರಕ್ತ ಅಂಟದ ಕೊಲೆಗಳು ಅನೂಚಾನವಾಗಿ ನಡೆದೇ ಇದೆ. ಕೊಲೆಗಾರರು ಕಣ್ಣೊರೆಸಿಕೊಂಡು ನಿರಪರಾಧಿಗಳಾಗುತ್ತಾರೆ. ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡುತ್ತಾರೆ.

ಈ ದೌರ್ಜನ್ಯದ ಮೂಲಗಳು ಸ್ಥಳಪುರಾಣಗಳ ಕಥನಗಳಿಗೆ ತಂದು ನಿಲ್ಲಿಸುತ್ತವೆ. ಗ್ರಾಮದೇವತೆಗಳ ಜಾತ್ರೆಗಳ ಸಾಂಪ್ರದಾಯಿಕತೆ ಮತ್ತು ಕಥೆಗಳನ್ನು ಗಮನಿಸಿದರೆ, ಅದು ಆದಿಮ ವಿಲೋಮ ವಿವಾಹ ಮತ್ತು ಅದರಿಂದ ಹೊರಬಂದ/ಹೊರತಂದ ಹೆಣ್ಣುಗಳ ಅನುಕ್ತ ದಾಖಲೆಯಂತಿದೆ. ಹೆಣ್ಣಿನ ಸ್ವಾತಂತ್ರ್ಯವನ್ನು ನಿರ್ಬಂಧಿಸುವುದು ರೂಢಿ ಅಷ್ಟೇ ಅಲ್ಲ, ಧರ್ಮಸಮ್ಮತ. ಪಿತೃವಾಕ್ಯ ಪರಿಪಾಲನೆಗಾಗಿ ತಾಯಿಯ ತಲೆ ಕತ್ತರಿಸಿದ ಪರಶುರಾಮನ ವ್ಯಕ್ತಿತ್ವ ಆಕ್ಷೇಪಾರ್ಹವಲ್ಲ. ಈ ಇಕ್ಕಟ್ಟಿನಿಂದ ಬಿಡುಗಡೆಯ ಎಳೆಯೊಂದು ದಕ್ಕಿದ್ದು 12ನೇ ಶತಮಾನದ ಬಸವಾದಿ ಪ್ರಮಥರ ಸಮಸಮಾಜದ ಕನಸಿನಲ್ಲಿ. ಅದೊಂದು ಪ್ರಾಯೋಗಿಕ ಭೂಮಿಕೆಯೂ ಆಗಿತ್ತು. ಹಾಗಾಗಿಯೇ ಕನ್ನಡದ ಚರಿತ್ರೆಯಲ್ಲದು ಹೆಣ್ಣಿನ ಆತ್ಮಗೌರವದ ಅಧ್ಯಾಯ. ‘ಹಂದೆಯಲ್ಲ ನಾನು, ಹರುಷದ ಗರ್ವವುಳ್ಳ ಹೆಣ್ಣು’ ಎಂದು ಹೇಳಿಕೊಳ್ಳಲು ನೀಲಮ್ಮನಿಗೆ ಸಾಧ್ಯವಾಗುತ್ತದೆ. ಮೋಹಿಸುವ ಅಧಿಕಾರವೇ ಇಲ್ಲದ ಹೆಣ್ಣಿನ ಸ್ಥಿತಿ ಮತ್ತು ಮೋಹದ ವಸ್ತುವಾಗಿ ಗಂಡಾಳಿಕೆಯಲ್ಲಿ ನಲುಗುವ ಅವಳ ಪಡಿಪಾಟಲನ್ನು ಒಟ್ಟಿಗೆ ಕಾಣುವುದು ಗೊಗ್ಗವ್ವೆಗೆ ಸಾಧ್ಯವಾಗುತ್ತದೆ. ಆದರೆ, ಆ ಪ್ರಶ್ನೆಗಳು ಇಂದಿಗೂ ನಿರುತ್ತರವಾಗೇ ಇವೆ. ಅಂದು ಶರಣ ಚಳವಳಿಯನ್ನು ಧ್ವಂಸಗೊಳಿಸಲು ಕಾರಣವಾದ ಚಿಂತನೆಗಳೇ ಇಂದಿಗೂ ವಿಜೃಂಭಿಸುತ್ತಿವೆ. ಸಮಗಾರ ಹರಳಯ್ಯನ ಮಗ, ಬ್ರಾಹ್ಮಣ ಮದುವರಸನ ಮಗಳು ವಿವಾಹವಾಗುವುದು ಯಾಕೆ ತಪ್ಪು? ಅವರು ಲಿಂಗಾಯತರು ಎಂಬ ಸತ್ಯವನ್ನು ಸಾಯಿಸಲಾಯಿತು. ಹರಳಯ್ಯ-ಮದುವರಸರನ್ನು ಎಳೆಹೂಟೆ ಕಟ್ಟಿ ಎಳೆದ ನೆತ್ತರ ನೋವಿನ ಗುರುತುಗೆರೆಗಳು ಇಂದಿಗೂ ನಮ್ಮ ದಾರಿಗಳಲ್ಲಿವೆ.

ಬಂಡವಾಳವಾದ ಮತ್ತು ಕೋಮುವಾದಗಳು ಸಾಂವಿಧಾನಿಕ ತತ್ವಗಳನ್ನು ಹಲ್ಲೆಗೊಳಿಸುತ್ತಿರುವ ಕಾಲವಿದು. ಸಂಕೀರ್ಣ ಜಾತಿ ಸಮಾಜವಾಗಿರುವ ಭಾರತದಲ್ಲಿ ಅದನ್ನು ಅನುಷ್ಠಾನಗೊಳಿಸುವ ಸಲಕರಣೆಯಾಗಿ ಹೆಣ್ಣನ್ನು ಬಳಸಲಾಗುತ್ತಿದೆ. ಜಾತಿ ಧರ್ಮಗಳು ಕೇಂದ್ರೀಕೃತಗೊಳ್ಳುತ್ತಿದ್ದಂತೆಯೇ ಅವು ಹೆಣ್ಣನ್ನು ಅಧೀನಗೊಳಿಸಿಕೊಳ್ಳಲು ಸಕ್ರಿಯವಾಗುತ್ತವೆ. ಅವಳ ಸ್ವಾಯತ್ತೆಯನ್ನು ಅಪರಾಧವೆನ್ನುತ್ತವೆ. ನಮ್ಮ ಸಂವಿಧಾನದ 25ನೇ ವಿಧಿಯು ಜಾತಿ-ಮತಗಳನ್ನು ವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ನೋಡಬೇಕು ಎಂದಿದೆ. ಜಾತಿ-ಮತಗಳ ಸಾಂಗತ್ಯಗಳ ಆಯ್ಕೆಯ ಹಕ್ಕನ್ನು ಅಪರಾಧವೆಂದು ಪರಿಗಣಿಸುವ ಆಯುಧಗಳು ಹೆಣ್ಣನ್ನು ಸುಲಭ ಗುರಿಗಳನ್ನಾಗಿಸಿಕೊಳ್ಳುತ್ತಿವೆ. ಹಾಗಾಗಿ, ಮರ್ಯಾದೆಗೇಡು ಹತ್ಯೆಯ ಪ್ರಕರಣಗಳು, ಜಾತ್ಯಂಧತೆಯ ಮತಾಂಧತೆಯ ಪ್ರಕರಣಗಳೂ ಆಗಿವೆ. ಸುಶಿಕ್ಷಿತ ಸಮುದಾಯಗಳೂ ಜಾತಿ ಮತಗಳ ಕೀಳುನಿಷ್ಠೆಗೆ ಒಳಗಾಗುತ್ತಿರುವ ಸಂಕೇತಗಳಾಗಿವೆ.

1987ರ ಆಗಸ್ಟ್ನಲ್ಲಿ ಬೆಳಗಾವಿಯ ಬೆಂಡಿಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಿದ ಭೀಕರ ಘಟನೆ ರಾಜ್ಯದಾದ್ಯಂತ ದಲಿತ ಚಳವಳಿ ಜಾಗೃತಗೊಳ್ಳಲು ಕಾರಣವಾಯಿತು. ದಲಿತರ ಆತ್ಮಗೌರವದ ಜೀವ-ಸಾವಿನ ಪ್ರಶ್ನೆಯಾಗಿ ಬೆಳೆಯಿತು. ‘ನಾವಿನ್ನು ನೆಲಗುಡಿಸುವ ಬದಲು ಮೇಲ್ಜಾತಿಯವರ ಕೊಳಕಿನ ಮನಸ್ಸು ಗುಡಿಸಬೇಕಿದೆ’ ಎಂದಿದ್ದರಂತೆ ದೇವನೂರ ಮಹಾದೇವ. ‘ಇಂತಹ ಹೇಯ ಕೃತ್ಯ ಮಾಡಿದವರಿಗೆ ಬಸವಣ್ಣನ ಹೆಸರೆತ್ತುವ ಹಕ್ಕೂ ಇಲ್ಲ’ ಎಂದಿದ್ದರಂತೆ ಚಿದಾನಂದಮೂರ್ತಿಯವರು. ಈಗಲೂ, ನಾಲ್ಕು ದಶಕಗಳ ನಂತರವೂ ಸ್ಥಿತಿ ಹಾಗೇ ಇದೆ. ದಲಿತ ಮಗು ದೇವಾಲಯ ಪ್ರವೇಶಿಸಿದರೆ, ಬಾಯಾರಿದ ಹೆಂಗಸು ಸಾರ್ವಜನಿಕ ನಳ ಮುಟ್ಟಿದರೆ ಮೈಲಿಗೆಯಾಯಿತೆನ್ನುವವರಿಗೂ ಸಮಾನತೆಯ ಹರಿಕಾರ ಬಸವಣ್ಣನಿಗೂ ಏನು ಸಂಬಂಧ? ಅಡುಗೆಯವಳು ದಲಿತಳೆಂದು ಉಣ್ಣದೆ ಹೊರನಿಲ್ಲುವ ಅಂಗನವಾಡಿ ಮಕ್ಕಳ ಚಿತ್ರ ಕಣ್ಣಗಾಯದಂತೆ ಉಳಿದಿದೆ. ಅಂಬೇಡ್ಕರ್, ‘ಜಾತಿಯ ಏಕೈಕ ಲಕ್ಷಣ ವಿವಾಹ ವಿಧಿ. ಅಂತರ್ಜಾತಿ ಸಹಭೋಜನದಿಂದ ಜಾತಿ ನಾಶವಾಗುವುದಿಲ್ಲ. ಅಂತರ್ಜಾತಿ ವಿವಾಹಗಳು ಸಹಜವಾಗಿ ನಡೆಯುವ ಸಮಾಜ ಮಾತ್ರ ಜಾತಿಪ್ರಜ್ಞೆಯಿಂದ ಕಳಚಿಕೊಳ್ಳುತ್ತಿದೆ. ಆದರೆ ಶ್ರೇಷ್ಠತೆಯ ವ್ಯಸನಕ್ಕೊಳಗಾಗಿರುವ ಮೇಲ್ಜಾತಿಗಳು, ಅನುಕರಣೆಯ ಅಂಟುಜಾಡ್ಯಕ್ಕೊಳಗಾಗುತ್ತಿರುವ ನಂತರದ
ಜಾತಿಗಳು ಈ ಮನೋವೃತ್ತಿಯ ಭ್ರಮೆಯಿಂದ ಕಳಚಿಕೊಳ್ಳಬೇಕೆಂದರೆ, ಜಾತಿಯ ಕುರಿತು ಇರುವ ಪಾವಿತ್ರ್ಯದ ಭಾವನೆಯನ್ನು ಭಂಗಗೊಳಿಸಬೇಕು’ ಎಂದಿದ್ದರು. ಈ ಪ್ರಕ್ರಿಯೆ ಇನ್ನಾದರೂ ನಡೆಯಬೇಕಿದೆ.

ಸಂವೇದನಾಶೀಲ ಕಾನೂನಿನಷ್ಟೇ ಜರೂರಿರುವುದು, ಜನಸಮುದಾಯವನ್ನು ಸಂವೇದನಾಶೀಲಗೊಳಿಸುವ ಕಾರ್ಯವಿಧಾನಗಳನ್ನು ರೂಪಿಸುವುದರಲ್ಲಿ. ಪ್ರತಿಯೊಂದು ಮತಧರ್ಮದ ಹುಟ್ಟು, ಬೆಳವಣಿಗೆ, ಕಾರಣ, ತಾತ್ವಿಕತೆಗಳು ಪ್ರಾಮಾಣಿಕವಾಗಿ ವೈಭವೀಕರಣವಿಲ್ಲದೆ ಪಠ್ಯಗಳಲ್ಲಿರಬೇಕು. ಶ್ರೇಷ್ಠತೆಯ ವ್ಯಸನ ಕಳೆಯಲು, ಸಾಂವಿಧಾನಿಕ ಮೌಲ್ಯಗಳನ್ನು ಅನುಷ್ಠಾನಗೊಳಿಸುವ ಕಾರ್ಯಯೋಜನೆಗಳು ರೂಪುಗೊಳ್ಳಬೇಕು. ಶಾಲೆ, ಕಾಲೇಜು, ಕಚೇರಿ, ಸಂಘ-ಸಂಸ್ಥೆ, ಕಂಪನಿಗಳು ಸಾಂವಿಧಾನಿಕತೆಯನ್ನು ದಿನಚರಿಯಾಗಿಸಿಕೊಳ್ಳಬೇಕು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿದು ನಡೆಯಬೇಕು. ಸರ್ಕಾರ, ಅಂತರ್ಜಾತಿ ಮದುವೆಗಳಿಗೆ ಪ್ರೋತ್ಸಾಹಧನ ಕೊಡುತ್ತಿದೆ. ಜೊತೆಗೆ ಅಂತರ್ಜಾತಿ ವಿವಾಹಿತರಿಗೆ ಕಾನೂನಿನ ರಕ್ಷಣೆ, ನೈತಿಕ ಬೆಂಬಲವನ್ನು ಒದಗಿಸಬೇಕು. ‘ಮನುಷ್ಯರನ್ನು ಕೊಂದು ಉಳಿಸಿಕೊಳ್ಳಬೇಕಾದ ಜಾತಿ-ಧರ್ಮಗಳಿವೆಯೇ’ ಎಂಬ ಪ್ರಶ್ನೆಯನ್ನು ಪ್ರತಿ ಮಗುವಿಗೂ ಮನನಗೊಳಿಸಬೇಕು. ಹೆಣ್ಣು ಬಾಳಿಗೆ ಸಂಬಂಧಿಸಿದ ದೌರ್ಜನ್ಯಗಳು ಜಾತಿ-ಧರ್ಮ-ವರ್ಗ ಪ್ರಜ್ಞೆಗಳೊಂದಿಗೆ ಕೂಡಿ ಬೆಳೆದ ರೋಗಾಣುಗಳು-ಎನ್ನುವುದನ್ನು ಮರೆಯದಿರೋಣ.

ಲೇಖಕಿ: ಕನ್ನಡ ಪ್ರಾಧ್ಯಾಪಕಿ

ಬಚಾವಾಗುವ ಕೊಲೆಗಾರರು...

2025ರಲ್ಲಿ ಕರ್ನಾಟಕದಲ್ಲಿ ವರದಿಯಾದ ನಾಲ್ಕು ಪ್ರಕರಣಗಳು ಮೇಲ್ನೋಟಕ್ಕೆ ಸ್ಥಳೀಯ ಕಾರಣಗಳನ್ನು ಮುಂದಿಡುತ್ತವಾದರೂ ಆಳದಲ್ಲಿವು ಜಾತಿ-ಧರ್ಮಗಳ ಪ್ರತಿಷ್ಠೆಗಾಗಿ ಹೆಣ್ಣನ್ನು ಬಲಿಯಾಗಿಸುತ್ತ ಬಂದ ಹಿಂಸೆಯ ಕೊಂಡಿಗಳಾಗಿವೆ. ಹಿರೇಕ್ಯಾತನಳ್ಳಿಯಲ್ಲಿ ಸೋದರಿಯನ್ನು ಕೆರೆಗೆ ದೂಡಿ ಕೊಲೆ ಮಾಡಿದ ಕಾರಣ ಅವಳು ಬೇರೆ ಧರ್ಮದ ಯುವಕನನ್ನು ಪ್ರೀತಿಸುತ್ತಿದ್ದಾಳೆನ್ನುವುದು. ಹಾರೋಹಳ್ಳಿಯಲ್ಲಿ ಮಗಳು ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿದಳೆಂದು ಬಿಂಬಿಸಲು ಪ್ರಯತ್ನಿಸಿದ ತಂದೆಯ ಆಕ್ಷೇಪವಿರುವುದು ಮತ್ತು ಕಲಬುರ್ಗಿಯ ಮೇಳಕುಂದಾದಲ್ಲಿ ಮಗಳ ಕತ್ತುಹಿಸುಕಿ ಕೊಲೆ ಮಾಡಿದ್ದು ಅವಳು ಬೇರೆ ಜಾತಿ ಹುಡುಗನನ್ನು ಪ್ರೀತಿಸುತ್ತಾಳೆನ್ನುವುದೇ. ಸಿಂದಗಿನ ಬೆನಕೊಟಗಿಯಲ್ಲಿ ಮದುವೆಯಾದ ಎರಡು ವರ್ಷಗಳ ನಂತರ ಮಗುವಿನೊಂದಿಗೆ ಗಂಡನ ಮನೆಯವರಿಂದ ಹತ್ಯೆಗೊಳಗಾದ ಕಾರಣ ಅವಳು ದಲಿತಳು ಅವರು ಪಂಚಮಸಾಲಿಗಳೂ ಆಗಿರುವುದು.

ಈಗ ಇನಾಂ ವೀರಾಪುರದಲ್ಲಿಯೂ ಅದೇ. ಈ ಎಲ್ಲವೂ ಹೆಣ್ಣಿನ ನಿರ್ಣಯಾಧಿಕಾರವನ್ನು ಮೊಟಕುಗೊಳಿಸುವ ಭೀತಗೊಳಿಸುವ ಸಾಮಾಜಿಕ ಒಪ್ಪಿತವನ್ನು ಹರಡುವ ಹುನ್ನಾರಗಳು. ಸಾಮಾನ್ಯವಾಗಿ ಮರ್ಯಾದೆಗೇಡು ಹತ್ಯೆಗಳು ವರದಿಯಾಗುವುದೇ ಅಪರೂಪ. ಇಂದಿಗೂ ಆಸ್ಪತ್ರೆಯ ಕಡತಗಳಲ್ಲಿ ಅನಾರೋಗ್ಯದಿಂದಲೋ ಆಕಸ್ಮಿಕವಾಗಿಯೋ ಸತ್ತು ಹೋದ ಆತ್ಮಹತ್ಯೆ ಮಾಡಿಕೊಂಡ ಯುವತಿಯರಿದ್ದಾರೆ. ಕೊಲೆಗಾರರ ಕೈಗೆ ರಕ್ತ ಅಂಟದ ಕೊಲೆಗಳು ಅನೂಚಾನವಾಗಿ ನಡೆದೇ ಇದೆ. ಕೊಲೆಗಾರರು ಕಣ್ಣೊರೆಸಿಕೊಂಡು ನಿರಪರಾಧಿಗಳಾಗುತ್ತಾರೆ. ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡುತ್ತಾರೆ.

ಪ್ರಮುಖ ಪ್ರಕರಣಗಳು...

l ಕಲಬುರಗಿ ತಾಲ್ಲೂಕಿನ ಮೇಳಕುಂದಾ(ಬಿ) ಗ್ರಾಮದಲ್ಲಿ 2025ರ ಆ. 27ರ ತಡರಾತ್ರಿ ಶಂಕರ ಕೊಳ್ಳುರ (18) ಎನ್ನುವ ಯುವತಿಯ ಮರ್ಯಾದೆಗೇಡು ಹತ್ಯೆ ನಡೆದಿತ್ತು

l ಪ್ರಬಲ ಜಾತಿಯ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಘಟನೆ 2025ರ ಜನವರಿ 7ರಂದು ಕಲಬುರಗಿ ಜಿಲ್ಲೆಯ ಕಮಲನಗರ ತಾಲ್ಲೂಕಿನ ಠಾಣಾಕುಶನೂರ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು

l ಮಾದಿಗ ಯುವಕನನ್ನು ಪ್ರೀತಿಸಿದ ಬಾಲಕಿ ಮನೆಯಲ್ಲಿ ಮದುವೆ ವಿಷಯ ಪ್ರಸ್ತಾಪಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಂದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವಡಗಾಂವ್ ಸಮೀಪದ ಬರಗೇನ್ ತಾಂಡಾದಲ್ಲಿ 2025ರ ಫೆ. 7ರಂದು ನಡೆದಿತ್ತು

ಮರ್ಯಾದೆಗಾಗಿ ಜೋಡಿ ಕೊಲೆ

ಪ್ರೇಮವಿವಾಹದಿಂದ ಮನೆತನದ ಮರ್ಯಾದೆ ಹಾಳಾಯಿತು ಎಂದು ಭಾವಿಸಿ ಆ ಮದುವೆಗೆ ಸಂಬಂಧವೇ ಇಲ್ಲದ ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಡಿ.12ರಂದು ನಡೆದಿತ್ತು. ಜೈಭೀಮ್ ನಗರದ ಪ್ರೇಮಿಗಳಾಗಿದ್ದ ನಂದೀಶ್ ಹಾಗೂ ಸ್ಫೂರ್ತಿ ಡಿ.9ರಂದು ಮನೆಬಿಟ್ಟು ಹೋಗಿ ಮದುವೆಯಾಗಿದ್ದರು.ಸ್ಫೂರ್ತಿ ಮನೆಬಿಟ್ಟು ಹೋಗಲು ನಂದೀಶನ ಸ್ನೇಹಿತ ಕಿರಣ್ ಸಹಾಯ ಮಾಡಿದ್ದಾನೆ ಎಂದು ಭಾವಿಸಿದ ಸ್ಫೂರ್ತಿಯ ಅಣ್ಣ ಭರತ್ ಕಿರಣ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಜಗಳ ಬಿಡಿಸಲು ಹೋದ ಮಂಜುನಾಥ್ ಮೇಲೂ ಭರತ್ ಹಲ್ಲೆ ಮಾಡಿದ್ದ. ವೃದ್ಧ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು. ಮನೆಬಿಟ್ಟು ಹೋಗಿದ್ದ ನಂದೀಶ್ ಹಾಗೂ ಸ್ಫೂರ್ತಿ ಇಬ್ಬರೂ ಪರಿಶಿಷ್ಟ ಸಮುದಾಯದವರೇ ಆಗಿದ್ದು ಕುಟುಂಬಗಳ ನಡುವಿನ ವೈಮನಸ್ಯದ ಕಾರಣಕ್ಕೆ ಮನೆತನದ ಮರ್ಯಾದೆ ಹಾಳಾಯಿತು ಎಂದು ಭಾವಿಸಿದ್ದ ಭರತ್ ಮದುವೆಗೆ ವಿರೋಧಿಸಿದ್ದ ಎಂಬುದು ತನಿಖೆಯ ವೇಳೆ ಬಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.