ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ‘ಇಂಡಿಯಾ, ಅಂದರೆ ಭಾರತ...’

Published 6 ಸೆಪ್ಟೆಂಬರ್ 2023, 19:30 IST
Last Updated 6 ಸೆಪ್ಟೆಂಬರ್ 2023, 19:30 IST
ಅಕ್ಷರ ಗಾತ್ರ

ಜಿ–20 ಶೃಂಗಸಭೆಯ ಪ್ರತಿನಿಧಿಗಳಿಗೆ ಆಯೋಜಿಸಿರುವ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿ ಅವರನ್ನು ‘ಪ್ರೆಸಿಡೆಂಟ್‌ ಆಫ್‌ ಭಾರತ್’ ಎಂದು ಸಂಬೋಧಿಸಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಕೇಂದ್ರ ಸರ್ಕಾರವು ‘ಇಂಡಿಯಾ’ ಎಂಬುದನ್ನು ತೆಗೆದುಹಾಕಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇದು ವದಂತಿಯಷ್ಟೇ ಎಂದು ಕೇಂದ್ರ ಸಚಿವ ಅನುರಾಗ್‌ ಸಿಂಗ್ ಠಾಕೂರ್‌ ಪ್ರತಿಕ್ರಿಯೆ ನೀಡಿದ್ದಾರೆ. ದೇಶದ ಸಂವಿಧಾನದಲ್ಲಿ ‘ಇಂಡಿಯಾ, ಅಂದರೆ ಭಾರತ’ ಎಂದು ಹೇಳಲಾಗಿದೆ. ಜನಸಾಮಾನ್ಯರಾದಿಯಾಗಿ ಎಲ್ಲರೂ ಇಂಡಿಯಾ ಅಥವಾ ಭಾರತ ಯಾವುದನ್ನಾದರೂ ಬಳಸಬಹುದು ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹಲವು ಬಾರಿ ಹೇಳಿದೆ. ಆದರೆ, ದೇಶದ ಕರಡು ಸಂವಿಧಾನದಲ್ಲಿ ‘ಭಾರತ’ ಎಂಬ ನಾಮಪದವೇ ಇರಲಿಲ್ಲ. ನಂತರ ನಡೆದ ಕರಡು ಸಂವಿಧಾನದ ಚರ್ಚೆಯ ಸಂದರ್ಭದಲ್ಲಿ ‘ಭಾರತ’ ಎಂಬ ನಾಮಪದವನ್ನು ಸೇರಿಸುವ ಸಂಬಂಧ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಯೇ ಸ್ವಾರಸ್ಯಕರವಾಗಿದೆ.

ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರಗೊಂಡ ಭಾರತಕ್ಕೆ ಹೊಸ ಸರ್ಕಾರ, ಸಂವಿಧಾನದ ಅವಶ್ಯಕತೆ ಇತ್ತು. ಬ್ರಿಟಿಷರ ವಿರುದ್ಧ ಶತಮಾನಕ್ಕೂ ಹೆಚ್ಚುಕಾಲ ಹೋರಾಡಿ ಸ್ವಾತಂತ್ರ್ಯ ಪಡೆದ ಭಾರತಕ್ಕೆ, ಸ್ವಾತಂತ್ರ್ಯ ಪಡೆದಾಗ ‘ಭಾರತ’ ಎಂಬ ಹೆಸರೇ ಇರಲಿಲ್ಲ ಎಂಬುದು ಅತ್ಯಂತ ಕುತೂಹಲಕಾರಿ ವಿಷಯ. ಇಲ್ಲಿ ವಸಾಹತು ಸ್ಥಾಪಿಸಿದ್ದ ಐರೋಪ್ಯ ದೇಶಗಳೆಲ್ಲವೂ, ಭಾರತವನ್ನು ‘ಇಂಡಿಯಾ’ ಎಂದೇ ಕರೆಯುತ್ತಿದ್ದವು. ಮೊದಲು ಈಸ್ಟ್‌ ಇಂಡಿಯಾ ಕಂಪನಿ ವಿರುದ್ಧ, ನಂತರ ಬ್ರಿಟನ್‌ ವಿರುದ್ಧ ಭಾರತೀಯರು ಹೋರಾಡಿ ಸ್ವಾತಂತ್ರ್ಯ ಪಡೆದುಕೊಂಡರು. ಅಂತೆಯೇ ಸಂವಿಧಾನವನ್ನು ರೂಪಿಸಿಕೊಳ್ಳುವ ಸಲುವಾಗಿ ಸಂವಿಧಾನ ಕರಡು ರಚನಾ ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಗೆ ಬಿ.ಆರ್.ಅಂಬೇಡ್ಕರ್ ನಾಯಕರಾಗಿದ್ದರು. ಆ ಸಮಿತಿಯು ಕರಡು ಸಂವಿಧಾನವನ್ನು ಸಂವಿಧಾನ ರಚನಾ ಸಭೆಯ ಮುಂದಿರಿಸಿತು. ಆ ಕರಡು ಸಂವಿಧಾನದಲ್ಲಿ ಭಾರತ ಎಂಬ ನಾಮಪದವೇ ಇರಲಿಲ್ಲ. ಅದರಲ್ಲಿ ದೇಶವನ್ನು ‘ಇಂಡಿಯಾ’ ಎಂದೇ ಉಲ್ಲೇಖಿಸಲಾಗಿತ್ತು. 1ನೇ ವಿಧಿಯನ್ನು ‘ಡಿಸ್‌ಕ್ರಿಪ್ಷನ್‌ ಆಫ್‌ ಇಂಡಿಯಾ’ ಎಂದು ಹೆಸರಿಸಲಾಗಿತ್ತು ಮತ್ತು ಈ ವಿಧಿಯ ಉದ್ದಕ್ಕೂ ‘ಇಂಡಿಯಾ’ ಎಂದಷ್ಟೇ ಉಲ್ಲೇಖಿಸಲಾಗಿತ್ತು. ಇಂಡಿಯಾ ಎಂಬುದರ ಜತೆಗೆ ಭಾರತ ಎಂಬ ನಾಮಪದವನ್ನೂ ಬಳಸಬಹುದು ಎಂಬುದನ್ನು ಮೊದಲು ಪ್ರಸ್ತಾಪಿಸಿದ್ದು ಅಂಬೇಡ್ಕರ್ ಅವರೇ.

1949ರ ಸೆಪ್ಟೆಂಬರ್ 17ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಅವರು ಒಂದು ತಿದ್ದುಪಡಿಯನ್ನು ಮಂಡಿಸಿದ್ದರು. ಆ ತಿದ್ದುಪಡಿಯ ಸಂಖ್ಯೆ 130. ಆ ತಿದ್ದುಪಡಿಯಲ್ಲಿ ಅವರು, 1ನೇ ವಿಧಿಗೆ ‘ಇಂಡಿಯಾ, ಅಂದರೆ ಭಾರತ. ಅದು ರಾಜ್ಯಗಳ ಒಕ್ಕೂಟವಾಗಬೇಕು’ ಎಂಬುದನ್ನು ಸೇರಿಸಬೇಕು ಎಂದು ಪ್ರತಿಪಾದಿಸಿದ್ದರು. ಆದರೆ ಅಂದೇ ಅದು ಚರ್ಚೆಗೆ ಬರಲಿಲ್ಲ. ತಿದ್ದುಪಡಿಯನ್ನು ಮಂಡಿಸಿದಾಗ ಅದಾಗಲೇ ಸಂಜೆಯಾಗಿದ್ದ ಕಾರಣ, ಚರ್ಚೆಯನ್ನು ಮರುದಿನಕ್ಕೆ ಮುಂದೂಡಲಾಗಿತ್ತು. ಮರುದಿನ, ಅಂದರೆ 1949ರ ಸೆಪ್ಟೆಂಬರ್ 18ರಂದು ಆ ತಿದ್ದುಪಡಿಯನ್ನು ಚರ್ಚೆಗೆ ಎತ್ತಿಕೊಳ್ಳಲಾಯಿತು. ಎಚ್‌.ವಿ.ಕಾಮತ್ ಅವರು ಅಂಬೇಡ್ಕರ್ ಅವರ ತಿದ್ದುಪಡಿಗೇ, ಒಂದು ತಿದ್ದುಪಡಿಯನ್ನು ಮಂಡಿಸಿದರು. ‘ಹಿಂದ್‌, ಅಂದರೆ ಇಂಗ್ಲಿಷ್‌ ಭಾಷೆಯಲ್ಲಿ ಇಂಡಿಯಾ, ಅದು ರಾಜ್ಯಗಳ ಒಕ್ಕೂಟವಾಗಿರಬೇಕು’ ಎಂಬುದು ಆ ತಿದ್ದುಪಡಿಯಾಗಿತ್ತು.

ಆದರೆ, ಅವರು ತಾವು ಪ್ರಸ್ತಾಪಿಸಿದ ತಿದ್ದುಪಡಿಯ ಮೇಲೆ ಮಾತನಾಡುತ್ತಾ, ‘ಒಂದು ಮಗು ಹುಟ್ಟಿದಾಗ, ಅದಕ್ಕೆ ಹೊಸ ಹೆಸರಿಡಲಾಗುತ್ತದೆ. ಅದುವೇ ನಾಮಕರಣ. ದೇಶವೂ ಈಗ ಬ್ರಿಟಿಷರಿಂದ ಸ್ವತಂತ್ರಗೊಂಡು ಹುಟ್ಟುಪಡೆದಿದೆ. ಅದಕ್ಕೆ ನಾಮಕರಣ ಮಾಡುವ ಅವಶ್ಯಕತೆ ಇದೆ. ಈ ನೆಲವನ್ನು ಪುರಾಣಗಳಲ್ಲಿ, ವಿದೇಶಿ ಪ್ರವಾಸಿಗರ ಬರಹಗಳಲ್ಲಿ ಹಿಂದ್‌, ಹಿಂದುಸ್ತಾನ್‌, ಭಾರತ, ಭರತವರ್ಷ, ಭರತಖಂಡ, ಭರತಭೂಮಿ ಎಂದೆಲ್ಲಾ ಕರೆಯಲಾಗಿದೆ. ಭಾರತ ಎಂಬುದು ಈ ನೆಲಕ್ಕೆ ನಾವು ನೀಡಬಹುದಾದ ಅತ್ಯಂತ ಪ್ರಾಚೀನವಾದ ಹೆಸರು ಮತ್ತು ಅದು ಸೂಕ್ತವೂ ಹೌದು’ ಎಂದು ಹೇಳಿದ್ದರು. ಅವರ ಮಾತನ್ನು ಅರ್ಧದಲ್ಲೇ ನಿಲ್ಲಿಸಿದ್ದ ಅಂಬೇಡ್ಕರ್ ಅವರು, ‘ಭಾರತ ಎಂಬುದನ್ನು ಒಪ್ಪಿಕೊಳ್ಳುವುದಾದರೆ, ಇನ್ನೊಂದು ಹೆಸರನ್ನು (ಹಿಂದ್‌) ಏಕೆ ಪ್ರಸ್ತಾಪಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕಾಮತ್ ಅವರು, ‘ಒಂದು ಹೆಸರನ್ನು ಒಪ್ಪಿಕೊಳ್ಳದಿದ್ದರೆ, ಅದಕ್ಕೆ ಪರ್ಯಾಯವಾಗಿ ಇನ್ನೊಂದು ಇರಲಿ ಎಂದಷ್ಟೆ. ನಾನು ಭಾರತ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ‘ಇಂಡಿಯಾ, ಎಂಬುದನ್ನು ಭಾರತ ಎನ್ನಬೇಕು’ ಎಂದು ತಿದ್ದುಪಡಿ ಮಾಡಬೇಕು’ ಎಂದು ಪ್ರತಿಪಾದಿಸಿದ್ದರು.

ಕರಡು ಸಂವಿಧಾನದ 1ನೇ ವಿಧಿಯಲ್ಲಿ ‘ಡಿಸ್‌ಕ್ರಿಪ್ಷನ್‌ ಆಫ್‌ ಇಂಡಿಯಾ’ ಎಂದೇ ಬರೆಯಲಾಗಿತ್ತು

ಕರಡು ಸಂವಿಧಾನದ 1ನೇ ವಿಧಿಯಲ್ಲಿ ‘ಡಿಸ್‌ಕ್ರಿಪ್ಷನ್‌ ಆಫ್‌ ಇಂಡಿಯಾ’ ಎಂದೇ ಬರೆಯಲಾಗಿತ್ತು

ಚರ್ಚೆಯ ನಂತರದ ಹಂತಗಳಲ್ಲಿ ಮಾತನಾಡಿದ್ದ ಸೇಠ್‌ ಗೋವಿಂದ್‌ ದಾಸ್‌, ಇಂಡಿಯಾ ಎಂಬುದನ್ನು ನಮ್ಮ ಯಾವ ಪುರಾಣಗಳಲ್ಲೂ ಉಲ್ಲೇಖಿಸಿಲ್ಲ. ಋಗ್ವೇದದಲ್ಲಿ ‘ಇದ್ಯಂ’ ಮತ್ತು ‘ಇದನ್ಯಃ’ ಎಂಬ ಪ್ರಯೋಗಗಳಿವೆ. ಆದರೆ ಅವು ಇಂಡಿಯಾ ಎಂಬುದಕ್ಕೆ ಸಂಬಂಧಿಸಿದ್ದಲ್ಲ. ಇಂಡಿಯಾ ಎಂಬುದು ನಮ್ಮ ಪ್ರಾಚೀನ ಕೃತಿಗಳಲ್ಲಿ ಎಲ್ಲಿಯೂ ಇಲ್ಲ. ಗ್ರೀಕರು ಇಲ್ಲಿಗೆ ಬಂದ ನಂತರವಷ್ಟೇ ಇಂಡಿಯಾ ಎಂಬುದು ಬಂದಿತು. ನಮ್ಮ ಸಿಂಧೂ ನದಿಯನ್ನು ಅವರು ಇಂಡಸ್‌ ಎಂದು ಕರೆದರು. ಇಂಡಿಯಾ ಎಂಬುದು ಇಂಡಸ್ ಎಂಬ ಪದದಿಂದ ಬಂದಿದೆ. ವಿಷ್ಣು ಪುರಾಣ, ಬ್ರಹ್ಮ ಪುರಾಣ, ವಾಯುಪುರಾಣಗಳಲ್ಲಿ ಭಾರತ, ಭಾರತಂ ಎಂದು ಕರೆಯಲಾಗಿದೆ. ಚೀನಾ ಪ್ರವಾಸಿ ಹ್ಯೂಯೆನ್‌–ತ್ಸಾಂಗ್‌ ಸಹ ಭಾರತ ಎಂದೇ ಕರೆದಿದ್ದಾನೆ. ಹೀಗಾಗಿ ಅಂಬೇಡ್ಕರ್ ಅವರು ಪ್ರಸ್ತಾಪಿಸಿರುವ ತಿದ್ದುಪಡಿಯನ್ನು ಬದಲಿಸಬೇಕು. ‘ಭಾರತ, ವಿದೇಶಗಳಲ್ಲಿ ಇಂಡಿಯಾ ಎಂದೂ ಹೆಸರಾಗಿರುವ’ ಎಂಬುದು ಆ ತಿದ್ದುಪಡಿಯಾಗಿರಬೇಕು ಎಂದು ಅವರು ಪ್ರತಿಪಾದಿಸಿದ್ದರು.

ಕಮಲಪತಿ ತ್ರಿಪಾಠಿ ಅವರು, ‘ಇಂಡಿಯಾ ಎಂಬುದು ಮೊದಲು ಬರುವುದರ ಬದಲಿಗೆ, ಭಾರತ ಎಂಬುದು ಮೊದಲು ಬರಬೇಕು. ಇದಕ್ಕಾಗಿ ತಿದ್ದುಪಡಿಯನ್ನು ‘ಭಾರತ, ಇಂಗ್ಲಿಷ್‌ ಭಾಷೆಯಲ್ಲಿ ಇಂಡಿಯಾ ಎನ್ನಲಾಗುವ’ ಎಂದು ಬದಲಿಸಬೇಕು’ ಎಂದು ತಿದ್ದುಪಡಿಯನ್ನು ಸೂಚಿಸಿದರು. ಅಂದಿನ ಸಭೆಯಲ್ಲೇ ಸೇಠ್‌ ಗೋವಿಂದ್‌ ದಾಸ್‌, ಕಮಲಪತಿ ತ್ರಿಪಾಠಿ, ಎಚ್‌.ವಿ.ಕಾಮತ್ ಅವರ ನಿರ್ಣಯಗಳನ್ನು ಮತಕ್ಕೆ ಹಾಕಲಾಯಿತು. ಆ ಎಲ್ಲಾ ನಿರ್ಣಯಗಳು ಅಗತ್ಯ ಮತಗಳನ್ನು ಪಡೆಯಲು ವಿಫಲವಾದವು. ಕೊನೆಗೆ ಅಂಬೇಡ್ಕರ್ ಅವರು ಸೂಚಿಸಿದ್ದ 130ನೇ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.

ಆ ಪ್ರಕಾರ ಸಂವಿಧಾನದ 1ನೇ ವಿಧಿಗೆ 1ನೇ ಉಪವಿಧಿಯನ್ನು ಸೇರಿಸಲಾಯಿತು. ಅದು ‘ಇಂಡಿಯಾ, ಅಂದರೆ ಭಾರತ. ಅದು ರಾಜ್ಯಗಳ ಒಕ್ಕೂಟವಾಗಬೇಕು’ ಎಂದಾಯಿತು.

‘ಹೆಸರು ಬದಲಾಯಿಸಬೇಕಾಗಿಲ್ಲ’ ಎಂದು 2015ರಲ್ಲಿ ಕೇಂದ್ರವೇ ಹೇಳಿತ್ತು

ಈ ದೇಶವನ್ನು ‘ಇಂಡಿಯಾ’ ಅಥವಾ ‘ಭಾರತ’ ಎಂಬ ಹೆಸರುಗಳಲ್ಲಿ ಯಾವುದನ್ನು ಬೇಕಾದರೂ ಕರೆಯಬಹುದು ಎಂದು ಸಂವಿಧಾನದಲ್ಲಿಯೇ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ ಎಂದು ರಾಷ್ಟ್ರಪತಿ ಅವರನ್ನು ಸಂಬೋಧಿಸಿರುವುದು ಸಂವಿಧಾನ ವಿರೋಧ ನಡೆ ಅಲ್ಲ. ಆದರೆ, ಹೀಗೆ ರಾಷ್ಟ್ರಪತಿ ಅವರನ್ನು ಸಂಬೋಧಿಸಿರುವುದು ದೇಶದ ಹೆಸರನ್ನು ಬದಲು ಮಾಡುವ ಸೂಚನೆಯೇ ಎಂಬುದಷ್ಟೇ ಚರ್ಚೆ ಆಗುತ್ತಿರುವ ವಿಷಯ. ಇದರೊಂದಿಗೆ ಸೋಜುಗದ ವಿಷಯವೊಂದಿದೆ. ‘ದೇಶದ ಹೆಸರನ್ನು ಬದಲಾಯಿಸಬೇಕಾಗಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2015ರಲ್ಲಿ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಈಗ ಮೋದಿ ಸರ್ಕಾರದ ಸಚಿವರು ಅದೇ ಮಾತನ್ನು ಮತ್ತೆ ಹೇಳಿದ್ದಾರೆ. ಆದ್ದರಿಂದ ಈಗ ನಡೆಯುತ್ತಿರುವ ಇಡೀ ಚರ್ಚೆಯು ಚರ್ಚೆಯಷ್ಟೇ ಆಗಿದೆ.

ಈ ದೇಶವನ್ನು ‘ಭಾರತ’ ಎಂದೇ ಕರೆಯಬೇಕು ಎಂಬ ಚರ್ಚೆ ಆರಂಭವಾಗಿದ್ದು 2010ರ ಹೊತ್ತಿಗೆ. ಇಲ್ಲಿಂದ ಆರಂಭವಾದ ಚರ್ಚೆ 2023ರ ತನಕ ಬಂದು ನಿಂತಿದೆ. ಈ ಚರ್ಚೆಗಳು ನಿಯಮಬದ್ಧವಾಗಿಯೇ ಇದ್ದವು. ನಂತರ 2014 ಹಾಗೂ 2020ರಲ್ಲಿ ಕೆಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲನ್ನೂ ಏರಿದರು. 2010, 2012 ಮತ್ತು 2014ರಲ್ಲಿ ನಡೆದ ಸಂಸತ್ತಿನ ಅಧಿವೇಶನಗಳಲ್ಲಿ ಮೂರು ಖಾಸಗಿ ಮಸೂದೆಗಳನ್ನು ಮಂಡಿಸಲಾಯಿತು. 2010 ಮತ್ತು 2012ರಲ್ಲಿ ಮಂಡಿಸಲಾದ ಮಸೂದೆಗಳಲ್ಲಿ ದೇಶವನ್ನು ‘ಭಾರತ’ ಎನ್ನಬೇಕು ಎಂದು ಹೇಳಲಾದರೆ, 2014ರ ಮಸೂದೆಯಲ್ಲಿ ದೇಶವನ್ನು ‘ಹಿಂದೂಸ್ಥಾನ’ ಎಂದು ಕರೆಯಬೇಕು ಎಂದು ಹೇಳಲಾಗಿತ್ತು. ಈ ಮಸೂದೆಯನ್ನು ಉತ್ತರ ಪ್ರದೇಶದ ಅಂದಿನ ಸಂಸದ (ಈಗ ಮುಖ್ಯಮಂತ್ರಿ) ಯೋಗಿ ಆದಿತ್ಯನಾಥ ಅವರು ಮಂಡಿಸಿದ್ದರು. 2010 ಮತ್ತು 2014ರಲ್ಲಿ ಕಾಂಗ್ರೆಸ್‌ ಸಂಸದ ಶಾಂತಾರಾಮ್‌ ನಾಯಕ್‌ ಅವರು ಮಸೂದೆಯನ್ನು ಮಂಡಿಸಿದ್ದರು.

2014ರಲ್ಲಿ ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ನಿರಂಜನ್ ಭಟ್ವಾಲ್‌ ಅವರು ದೇಶವನ್ನು ‘ಭಾರತ’ ಎಂದು ಕರೆಯಬೇಕು ಎಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅಂದಿನ ಸಿಜೆಐ ಎಚ್.ಎಲ್‌. ದತ್ತು ಅವರು ಈ ಅರ್ಜಿಯನ್ನು ತಿರಸ್ಕರಿಸಿದ್ದರು. ಈ ಬಗ್ಗೆ ಸರ್ಕಾರದ ಬಳಿ ಹೋಗಿ ಎಂದೂ ಹೇಳಿದ್ದರು. ಸರ್ಕಾರದ ನಿರುತ್ತರದಿಂದ ಬೇಸತ್ತ ನಿರಂಜನ್‌ 2015ರಲ್ಲಿ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ ಮೊರೆ ಹೋದರು. ಅಂದಿನ ಸಿಜೆಐ ಟಿ.ಎಸ್‌. ಠಾಕೂರ್‌ ಅವರು ಈ ಅರ್ಜಿಯ ಬಗ್ಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದ್ದರು.

‘ದೇಶವನ್ನು ‘ಭಾರತ’ ಎಂದು ಮರುನಾಕರಣ ಮಾಡುವ ಅಗತ್ಯ ಇಲ್ಲ. ಸಂವಿಧಾನ ರಚನೆಯ ವೇಳೆಯಲ್ಲಿ ‘ಭಾರತ’ ಎಂದು ಉಲ್ಲೇಖವೇ ಇರಲಿಲ್ಲ. ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಮಾತ್ರವೇ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಆದ್ದರಿಂದ ದೇಶದ ಹೆಸರು ಬದಲಾಯಿಸುವ ಅಗತ್ಯ ಇಲ್ಲ’ ಎಂದು ಕೇಂದ್ರ ಗೃಹ ಸಚಿವಾಲಯ ನ್ಯಾಯಾಲಯಕ್ಕೆ ಹೇಳಿತ್ತು. ‘ಭಾರತ ಎಂದು ಕರೆಯಬೇಕು ಅನ್ನಿಸಿದರೆ, ಹಾಗೇ ಕರೆಯಿರಿ. ಇಂಡಿಯಾ ಎನ್ನಬೇಕು ಅನ್ನಿಸಿದರೆ, ಹಾಗೇ ಕರೆಯಿರಿ. ಸಂವಿಧಾನದಲ್ಲಿ ಎರಡೂ ಪ್ರಯೋಗಗಳಿವೆ. ಪಿಐಎಲ್‌ ಅನ್ನು ಬಡಜನರ ಪರವಾಗಿ ಬಳಸಿಕೊಳ್ಳಿ. ನ್ಯಾಯಾಲಯದ ಸಮಯ ಹಾಳು ಮಾಡಬೇಡಿ’ ಎಂದು ಟಿ.ಎಸ್‌. ಠಾಕೂರ್‌ ಅವರಿದ್ದ ಪೀಠ ಅರ್ಜಿಯನ್ನು ತಿರಸ್ಕರಿಸಿತ್ತು. 2020ರಲ್ಲಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಮತ್ತೊಮ್ಮೆ ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದಾಗಲೂ ನ್ಯಾಯಾಲಯ ಒಂದು ಹಂತದಲ್ಲಿ ಇದೇ ರೀತಿಯ ಪ್ರತಿಕ್ರಿಯೆ ನೀಡಿತ್ತು. ‘ಇಂಡಿಯಾವನ್ನು ಭಾರತ ಎಂದೇ ಸಂವಿಧಾನವೂ ಕರೆದಿದೆ. ಈ ಮನವಿಯನ್ನು ಸರ್ಕಾರ ಬಳಿ ಮಾಡಿ’ ಎಂದು ಅಂದಿನ ಸಿಜೆಐ ಎಸ್‌.ಎ. ಬೊಬಡೆ ಅರ್ಜಿಯನ್ನು ವಜಾ ಮಾಡಿದ್ದರು.

ಆಧಾರ: ಸಂವಿಧಾನ ರಚನಾ ಸಭೆಯ ಚರ್ಚೆಗಳು, ಭಾರತ ಸಂವಿಧಾನ, ಪಿಟಿಐ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ‘ಇಂಡಿಯಾ ದಟ್‌ ಈಸ್‌ ಭಾರತ್‌: ದಿ ಪೊಲಿಟಿಕ್ಸ್‌ ಆಫ್‌ ಎ ನ್ಯಾಷನಲ್‌ ನೇಮ್‌’ 2020ರ ಸಂಶೋಧನಾ ಲೇಖನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT