ಸಾಮಾನ್ಯವಾಗಿ ಯುದ್ದ ಸನ್ನದ್ದತೆಯ ಭಾಗವಾಗಿ ನಾಗರಿಕ ಸ್ವರಕ್ಷಣೆ ತಾಲೀಮು ನಡೆಸಲಾಗುತ್ತದೆ. ದಾಳಿ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎದುರಿಸಲು ದೇಶದ ಜನರನ್ನು ಸಜ್ಜುಗೊಳಿಸುವ ಉದ್ದೇಶ ಇದರದ್ದು. ಪ್ರತಿಬಾರಿಯೂ ಯುದ್ಧಕ್ಕೆ ಮೊದಲು ಇಂತಹ ತಾಲೀಮು ನಡೆದಿತ್ತು. ಐದೂವರೆ ದಶಕಗಳ ನಂತರ ಈಗ ನಾಗರಿಕ ಸ್ವರಕ್ಷಣೆ ತಾಲೀಮು ನಡೆಸಲು ಕೇಂದ್ರ ಹೇಳಿರುವುದರಿಂದ ಪಾಕಿಸ್ತಾನದ ವಿರುದ್ಧ ಮತ್ತೊಂದು ಯುದ್ಧಕ್ಕೆ ಭಾರತ ಸನ್ನದ್ಧವಾಗಿದೆಯೇ ಎಂಬ ಚರ್ಚೆ ಆರಂಭಗೊಂಡಿದೆ.

ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ತೀವ್ರಗೊಂಡಿದ್ದು, ಎರಡೂ ರಾಷ್ಟ್ರಗಳು ಹಲವು ರೀತಿಯ ಪ್ರತೀಕಾರದ ಕ್ರಮಗಳಲ್ಲಿ ತೊಡಗಿವೆ. ದಾಳಿ ನಡೆಸಿದ ಭಯೋತ್ಪಾದಕರಿಗಾಗಿ ಭಾರತ ತೀವ್ರವಾಗಿ ಹುಡುಕಾಟ ನಡೆಸುತ್ತಿದೆ. ಜತೆಗೆ, ಘಟನೆ ನಡೆದ ದಿನದಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆಗಳನ್ನು ನಡೆಸುತ್ತಿದ್ದಾರೆ. ವಿಶೇಷವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಾಯುಸೇನೆ, ಭೂಸೇನೆ ಮತ್ತು ನೌಕಾಸೇನೆಯ ಮುಖ್ಯಸ್ಥರು ಹಾಗೂ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಅವರೊಂದಿಗೂ ಚರ್ಚೆ ನಡೆಸಿದ್ದಾರೆ. ಉಗ್ರರ ದಾಳಿಗೆ ಪ್ರತೀಕಾರವಾಗಿ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಇದಲ್ಲದೇ ಭಾರತವು ಪಾಕಿಸ್ತಾನ ವಿರುದ್ಧ ಆರ್ಥಿಕವಾಗಿ, ರಾಜತಾಂತ್ರಿಕವಾಗಿ ಮತ್ತು ರಾಜಕೀಯವಾಗಿಯೂ ಹಲವು ರೀತಿಯ ಕ್ರಮಗಳನ್ನು ಜರುಗಿಸುತ್ತಿದೆ.

ಅತ್ತ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯಲ್ಲಿ ಕದನವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಭಾರತ ದಾಳಿ ಮಾಡಿದರೆ ಅದನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದು ಪದೇ ಪದೇ ಹೇಳುತ್ತಿದೆ. ಯುದ್ಧವೇನಾದರೂ ನಡೆದರೆ, ಅಣ್ವಸ್ತ್ರ ದಾಳಿ ನಡೆಸಲೂ ಹಿಂಜರಿಯುವುದಿಲ್ಲ ಎಂದು ಹೇಳಿದೆ. ಗಡಿ ಪ್ರದೇಶದಲ್ಲಿ ಹೆಚ್ಚಿನ ಸೇನೆಯನ್ನು ಜಮಾವಣೆ ಮಾಡಿದೆ. ಜತೆಗೆ, ಗುರಿ ನಿರ್ದೇಶಿತ ಕ್ಷಿಪಣಿಗಳ ಪರೀಕ್ಷೆಯನ್ನೂ ನಡೆಸುತ್ತಿದೆ. 120 ಕಿ.ಮೀ. ದೂರ ಸಾಗಬಲ್ಲ ‘ಫತಾಹ್’ ಸರಣಿ ಕ್ಷಿಪಣಿ ಮತ್ತು 450 ಕಿ.ಮೀ. ದೂರ ಸಾಗಬಲ್ಲ ‘ಅಬ್ದಲೀ’ ಗುರಿ ನಿರ್ದೇಶಿತ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಪಾಕಿಸ್ತಾನವು ಯಶಸ್ವಿಯಾಗಿ ನಡೆಸಿದೆ. ಯುದ್ಧಸನ್ನದ್ಧವಾಗಿ ಇರುವಂತೆ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಸೇನೆಗೆ ಸೂಚಿಸಿರುವುದಾಗಿ ವರದಿಯಾಗಿದೆ.

ಸ್ವರಕ್ಷಣೆ ತಾಲೀಮು: 1971ರ ಯುದ್ಧದ ನೆನಪು

ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ನಾಗರಿಕ ರಕ್ಷಣೆಗೆ ಸಂಬಂಧಿಸಿದಂತೆ ಸ್ವರಕ್ಷಣೆ ತಾಲೀಮುಗಳನ್ನು ಬುಧವಾರ (ಮೇ 7) ನಡೆಸುವಂತೆ ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳಿಗೆ ಸೂಚಿಸಿದೆ. 1968ರ ನಾಗರಿಕ ರಕ್ಷಣೆ ಕಾಯ್ದೆಯ ನಿಯಮದ ಅಡಿಯಲ್ಲಿ ಈ ತಾಲೀಮು ನಡೆಸಲಾಗುತ್ತಿದೆ. ದೇಶದ 244 ‘ನಾಗರಿಕ ರಕ್ಷಣಾ ಜಿಲ್ಲೆ’ಗಳಲ್ಲಿ ಸ್ವರಕ್ಷಣೆ ತಾಲೀಮು ನಡೆಯಲಿದೆ. 1962ರಲ್ಲಿ ಚೀನಾ ವಿರುದ್ಧದ ಯುದ್ದ ಮತ್ತು 1965 ಹಾಗೂ 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದಿದ್ದ ಯುದ್ಧಗಳಿಗೆ ಪೂರ್ವಭಾವಿಯಾಗಿ ಸ್ವರಕ್ಷಣೆ ತಾಲೀಮುಗಳನ್ನು ನಡೆಸಲಾಗಿತ್ತು. 1971ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ಪಾಕ್ ವಿರುದ್ಧ ನಡೆದಿದ್ದ ಯುದ್ಧದಲ್ಲಿ ಭಾರತವು ಪಾಕಿಸ್ತಾನವನ್ನು ಮಣಿಸಿತ್ತು. ಅದೇ ಕೊನೆ; ನಂತರ ಇದೀಗ ಸ್ವರಕ್ಷಣೆ ತಾಲೀಮು ನಡೆಯುತ್ತಿದೆ. ಆಗ ಈ ತಾಲೀಮಿಗೆ ಸಾಕ್ಷಿಯಾಗಿದ್ದ ಅನೇಕರು ಈಗ ಅದನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಯುದ್ದ ಸನ್ನದ್ದತೆಯ ಭಾಗವಾಗಿ ಈ ತಾಲೀಮು ನಡೆಸಲಾಗುತ್ತದೆ. ದಾಳಿ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎದುರಿಸಲು ದೇಶದ ಜನರನ್ನು ಸಜ್ಜುಗೊಳಿಸುವ ಉದ್ದೇಶ ಇದರದ್ದು. ಪ್ರತಿಬಾರಿಯೂ ಯುದ್ಧಕ್ಕೆ ಮೊದಲು ಇಂತಹ ತಾಲೀಮು ನಡೆದಿತ್ತು. ಐದೂವರೆ ದಶಕಗಳ ನಂತರ ಈಗ ನಾಗರಿಕ ಸ್ವರಕ್ಷಣೆ ತಾಲೀಮು ನಡೆಸಲು ಕೇಂದ್ರ ಹೇಳಿರುವುದರಿಂದ ಪಾಕಿಸ್ತಾನದ ವಿರುದ್ಧ ಮತ್ತೊಂದು ಯುದ್ಧಕ್ಕೆ ಭಾರತ ಸನ್ನದ್ಧವಾಗಿದೆಯೇ ಎಂಬ ಚರ್ಚೆ ಆರಂಭಗೊಂಡಿದೆ.

ತಾಲೀಮಿನ ಮುಖ್ಯ ಉದ್ದೇಶಗಳು

* ವಾಯುದಾಳಿಯ ಎಚ್ಚರಿಕೆ ನೀಡುವ ಸೈರನ್ಗಳು ಎಷ್ಟು ಪರಿಣಾಮಕಾರಿ ಎನ್ನುವುದನ್ನು ವಿಶ್ಲೇಷಿಸುವುದು

* ಭಾರತೀಯ ವಾಯುಸೇನೆಯೊಂದಿಗೆ ಹಾಟ್ಲೈನ್/ರೇಡಿಯೊ ಸಂವಹನದ ಸಂಪರ್ಕ ವ್ಯವಸ್ಥೆಯ ಪರೀಕ್ಷೆ

* ನಿಯಂತ್ರಣಾ ಕೊಠಡಿ ಮತ್ತು ಭೂಗತ ನಿಯಂತ್ರಣಾ ಕೊಠಡಿಗಳ ಕಾರ್ಯನಿರ್ವಹಣೆಯ ಪರಿಶೀಲನೆ

* ಶತ್ರುದಾಳಿಯ ಸಂದರ್ಭದಲ್ಲಿ ಸ್ವಯಂರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ನಾಗರಿಕರಿಗೆ ತಿಳಿವಳಿಕೆ ನೀಡುವುದು

* ಬ್ಲಾಕ್ಔಟ್ ಕ್ರಮಗಳು (ರಾತ್ರಿಯ ಹೊತ್ತು ಎಲ್ಲ ದೀಪಗಳನ್ನು ಆರಿಸಿ, ಶತ್ರುವಿನ ಯುದ್ಧ ವಿಮಾನಗಳಿಗೆ ಊರುಗಳು ಕಾಣದಂತೆ ಮಾಡುವುದು)

* ಪ್ರಮುಖ ನೆಲೆ/ಸ್ಥಾವರಗಳನ್ನು ಮರೆಮಾಚುವುದು

* ನಾಗರಿಕ ರಕ್ಷಣಾ ಸೇವೆಗಳಾದ ರಕ್ಷಣಾ ಕಾರ್ಯಾಚರಣೆ, ಬೆಂಕಿ ನಂದಿಸುವುದು ಮತ್ತು ಘಟಕ ನಿರ್ವಹಣೆಯ ಸನ್ನದ್ಧತೆಯನ್ನು ಪರೀಕ್ಷಿಸುವುದು

* ರಕ್ಷಣಾ/ಪರಿಹಾರ ಕಾರ್ಯಾಚರಣೆ, ಸುರಕ್ಷಿತ ಜಾಗಕ್ಕೆ ಜನರ ಸ್ಥಳಾಂತರ ಮತ್ತು ಅದಕ್ಕೆ ಸಂಬಂಧಿಸಿದ ಸಿದ್ಧತೆಗಳ ಮೌಲ್ಯಮಾಪನ ಮಾಡುವುದು

ಜನರ ರಕ್ಷಣೆಗೆ ಕಾಯ್ದೆ

1962, 1965ರ ಯುದ್ಧಗಳ ನಂತರ ನಾಗರಿಕ ರಕ್ಷಣಾ ಕಾಯ್ದೆ–1968 ರೂಪಿಸುವ ಮೂಲಕ ನಾಗರಿಕ ರಕ್ಷಣೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿತ್ತು. ಶತ್ರುದಾಳಿಯ ಸಂದರ್ಭದಲ್ಲಿ ದೇಶದ ಜನತೆ, ಆಸ್ತಿಪಾಸ್ತಿ ಮತ್ತು ಪ್ರದೇಶಗಳನ್ನು ರಕ್ಷಿಸುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು, ತುರ್ತು ಸಂದರ್ಭಗಳನ್ನು ನಿಭಾಯಿಸಲು ಅಗತ್ಯವಾದ ಮಾರ್ಗಸೂಚಿಯನ್ನು ಕಾಯ್ದೆ ಒಳಗೊಂಡಿತ್ತು. 2009ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು, ವಿಪತ್ತು ನಿರ್ವಹಣೆಯನ್ನೂ ಅದರಡಿ ಸೇರಿಸಲಾಯಿತು. ಯುದ್ಧ ಮತ್ತಿತರ ತುರ್ತು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ದೇಶದ ಜನರನ್ನು ಸ್ವಯಂಸೇವಕರನ್ನಾಗಿ ನೇಮಿಸಿಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿದೆ.

ನಾಗರಿಕ ರಕ್ಷಣಾ ಜಿಲ್ಲೆ ಎಂದರೆ...?

ಕರ್ನಾಟಕದ ಮೂರು ಜಿಲ್ಲೆಗಳು ಸೇರಿದಂತೆ ದೇಶದಾದ್ಯಂತ 244 ‘ನಾಗರಿಕ ರಕ್ಷಣಾ ಜಿಲ್ಲೆ’ಗಳಲ್ಲಿ ಬುಧವಾರ ನಾಗರಿಕರ ಸ್ವರಕ್ಷಣೆ ತಾಲೀಮು ನಡೆಯಲಿದೆ. ನಾಗರಿಕ ರಕ್ಷಣಾ ಜಿಲ್ಲೆಗಳು (ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್) ಎಂದರೆ, ಸಾಮಾನ್ಯ ಜಿಲ್ಲೆಗಳಿಗಿಂತ ಭಿನ್ನ. ಸರ್ಕಾರ ನಾಗರಿಕ ರಕ್ಷಣೆಗೆ ಸಂಬಂಧಿಸಿದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ಅಥವಾ ತರಬೇತಿಗಳನ್ನು ಹಮ್ಮಿಕೊಳ್ಳುವಾಗ ಈ ಜಿಲ್ಲೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತದೆ.

ಈ ಜಿಲ್ಲೆಗಳ ವರ್ಗೀಕರಣ ಹೇಗೆ?

ಕಾರ್ಯತಂತ್ರದ ದೃಷ್ಟಿಯಿಂದ ಹೆಚ್ಚು ಮಹತ್ವವಿರುವ ಮತ್ತು ಶತ್ರುಗಳ ದಾಳಿಗೆ ಒಳಗಾಗುವ ಸಾಧ್ಯತೆಯ ಆಧಾರದಲ್ಲಿ ಈ ಜಿಲ್ಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಕೆಲವು ಮಾನದಂಡಗಳೂ ಇವೆ.

* ಅಂತರರಾಷ್ಟ್ರೀಯ ಗಡಿಗೆ ಹತ್ತಿರ ಇರುವ ಜಿಲ್ಲೆಗಳು (ಉದಾ: ಪಾಕಿಸ್ತಾನದೊಂದಿಗೆ ಗಡಿ ಹೊಂದಿರುವ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ ಹೆಚ್ಚು ಜಿಲ್ಲೆಗಳು ನಾಗರಿಕ ರಕ್ಷಣಾ ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ)

* ಅತ್ಯಂತ ಮಹತ್ವದ ಮೂಲಸೌಕರ್ಯಗಳನ್ನು ಹೊಂದಿರುವ ಜಿಲ್ಲೆಗಳು. ಅಂದರೆ, ರಕ್ಷಣಾ ಘಟಕಗಳು, ಪರಮಾಣು ಸ್ಥಾವರಗಳು, ವಿದ್ಯುತ್ ಉತ್ಪಾದನಾ ಘಟಕಗಳು, ಬಂದರುಗಳು, ತೈಲಾಗಾರಗಳು, ಸಂವಹನ ಜಾಲ ಇರುವ ಜಿಲ್ಲೆಗಳು

* ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳು. ಬಹುತೇಕ ಸಂದರ್ಭಗಳಲ್ಲಿ ಇವು ಮಹಾನಗರಗಳನ್ನು ಹೊಂದಿರುವ ಜಿಲ್ಲೆಗಳಾಗಿರುತ್ತವೆ. ಶತ್ರುಗಳು ದೊಡ್ಡ ನಗರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ

* ಕರಾವಳಿ ಪ್ರದೇಶದ ಜಿಲ್ಲೆಗಳು. ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಕರಾವಳಿ ಪ್ರದೇಶಗಳನ್ನು ಶತ್ರುಗಳು ಗುರಿಯಾಗಿಸುವ ಅಪಾಯ ಇರುತ್ತದೆ

ಬ್ಲಾಕ್ ಔಟ್ ಎಂದರೇನು?

ಬುಧವಾರ ನಡೆಯಲಿರುವ ನಾಗರಿಕ ರಕ್ಷಣೆ ತಾಲೀಮಿನ ಪ್ರಮುಖ ಭಾಗ ಬ್ಲಾಕ್ಔಟ್ ಕ್ರಮಗಳು. ಬ್ಲಾಕ್ ಔಟ್ ಎಂದರೆ ಊರು/ಪಟ್ಟಣ/ನಗರಗಳಲ್ಲಿ ರಾತ್ರಿ ವೇಳೆ ಜನಜೀವನವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸುವುದು. ಅದರ ಭಾಗವಾಗಿ ಊರು/ಪಟ್ಟಣ/ನಗರಕ್ಕೆ ವಿದ್ಯುತ್ ಪೂರೈಕೆಯನ್ನು ದೀರ್ಘ ಅವಧಿಗೆ ನಿಲ್ಲಿಸಲಾಗುತ್ತದೆ. ಮನೆಗಳಲ್ಲಿ ಜನರು ಜನರೇಟರ್, ಇನ್ವರ್ಟರ್ಗಳನ್ನೂ ಬಳಸುವ ಹಾಗಿಲ್ಲ. ಬೀದಿ ದೀಪಗಳು ಉರಿಯುವುದಿಲ್ಲ. ಅಷ್ಟೇ ಏಕೆ, ಸಂಜೆಯ ಬಳಿಕ ಜನರು ವಾಹನಗಳ ಮೂಲಕ ಓಡಾಡಬಾರದು/ಅವುಗಳ ದೀಪಗಳನ್ನು ಬೆಳಗಿಸಬಾರದು. ದೂರವಾಣಿ, ಇಂಟರ್ನೆಟ್ನಂತಹ ಸಂವಹನ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗುತ್ತದೆ.

ಸಾಮಾನ್ಯವಾಗಿ, ಅಂತರರಾಷ್ಟ್ರೀಯ ಗಡಿಗೆ ಹತ್ತಿರವಿರುವ ಪ್ರದೇಶಗಳಲ್ಲಿ, ವಿದ್ಯುತ್ ಸ್ಥಾವರಗಳು, ಅಣೆಕಟ್ಟೆಗಳು, ರಕ್ಷಣಾ ಇಲಾಖೆಗೆ ಸೇರಿದ ಕಟ್ಟಡಗಳು ಇರುವ ಜಾಗಗಳಲ್ಲಿ ಯುದ್ಧದ ಸಂದರ್ಭದಲ್ಲಿ ಬ್ಲಾಕ್ಔಟ್ ಮಾಡಲಾಗುತ್ತದೆ. ಆ ಪ್ರದೇಶದಲ್ಲಿರುವ ಕಟ್ಟಡಗಳು, ಪ್ರಮುಖ ಸ್ಥಳಗಳನ್ನು ಶತ್ರುಗಳ ವೈಮಾನಿಕ ದಾಳಿಯಿಂದ ರಕ್ಷಿಸುವ ಉದ್ದೇಶ ಇದರ ಹಿಂದಿದೆ. ಯುದ್ಧದ ಸಮಯದಲ್ಲಿ ಈ ಬ್ಲಾಕ್ಔಟ್ ಕ್ರಮ ಹಲವು ದಿನಗಳವರೆಗೆ ಇರಬಹುದು. ಇದು ದೀರ್ಘಾವಧಿಗೆ ಜಾರಿಯಲ್ಲಿದ್ದರೆ ನಾಗರಿಕರು ಹಲವು ತೊಂದರೆಗಳನ್ನೂ ಅನುಭವಿಸಬೇಕಾಗುತ್ತದೆ.

1965 ಮತ್ತು 1971ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ನಡೆದಾಗ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದ ಕೆಲವೆಡೆ ಹಲವು ದಿನ ಬ್ಲಾಕ್ಔಟ್ ಮಾಡಲಾಗಿತ್ತು. ರಾಜಧಾನಿ ದೆಹಲಿಯೂ ರಾತ್ರಿಹೊತ್ತು ಕತ್ತಲಲ್ಲಿ ಮುಳುಗಿತ್ತು. 1971ರ ಯುದ್ಧದ ವೇಳೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲೂ ಈ ಕ್ರಮ ಕೈಗೊಳ್ಳಲಾಗಿತ್ತು. ಕಾರ್ಗಿಲ್ ಯುದ್ಧ ನಡೆಯುತ್ತಿದ್ದ ಪ್ರದೇಶದಲ್ಲಿ ಜನವಸತಿ ಇಲ್ಲದೇ ಇದ್ದುದರಿಂದ ಆ ಸಂದರ್ಭದಲ್ಲಿ ಬ್ಲಾಕ್ ಔಟ್ ಮಾಡಲಾಗಿರಲಿಲ್ಲ.

ಅಮೆರಿಕದ ‘ರಹಸ್ಯ’ ವರದಿಯಲ್ಲೇನಿದೆ?

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲೇ ಅಮೆರಿಕದ ಗುಪ್ತಚರ ಸಂಸ್ಥೆಯ (ಸಿಐಎ) ರಾಷ್ಟ್ರೀಯ ಗುಪ್ತಚರ ಅಂದಾಜು (ಎನ್ಐಇ) ಚರ್ಚೆಗೆ ಗ್ರಾಸವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ 1990ರ ದಶಕದಲ್ಲಿ ಯುದ್ಧದ ಸಂಭಾವ್ಯತೆಯನ್ನು ಅರಿಯಲು ಸಿಐಎ 1993ರಲ್ಲಿ ಎನ್ಐಇ ಅನ್ನು ಸಿದ್ಧಪಡಿಸಿತ್ತು. ರಹಸ್ಯ ದಾಖಲೆಯಾಗಿ ಉಳಿದಿದ್ದ ಅದನ್ನು ಇದೇ ಫೆಬ್ರುವರಿಯಲ್ಲಿ ಅಮೆರಿಕ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿತ್ತು. ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆ ಐದನೇ ಒಂದರಷ್ಟು ಎಂದು ಎನ್ಐಇ 90ರ ದಶಕದ ಆರಂಭದಲ್ಲಿ ವಿಶ್ಲೇಷಿಸಿತ್ತು. ‘ಎರಡೂ ರಾಷ್ಟ್ರಗಳ ನಡುವೆ ಪೂರ್ಣ ಪ್ರಮಾಣದಲ್ಲಿ ಯುದ್ಧ ನಡೆಯುವ ಸಾಧ್ಯತೆ ತೀರಾ ಕಡಿಮೆ. ಆದರೆ, ಹಲವು ಕಾರಣಗಳಿಂದ ಯುದ್ಧ ಸಂಭವಿಸಿದರೂ ಸಂಭವಿಸಬಹುದು. ಒಂದು ದೇಶದ ಮೇಲೆ ಉಗ್ರರ ದೊಡ್ಡ ದಾಳಿ ನಡೆದು, ಅದಕ್ಕೆ ಇನ್ನೊಂದು ದೇಶದ ಪ್ರಚೋದನೆಯೇ ಕಾರಣ ಎಂದು ಆ ದೇಶ ಭಾವಿಸಿದರೆ ಯುದ್ಧ ಆರಂಭವಾಗಬಹುದು’ ಎಂದು ಹೇಳಿತ್ತು. ಎನ್ಐಇಯಲ್ಲಿ ಚರ್ಚಿಸಿರುವ ಬಹುತೇಕ ಅಂಶಗಳು ಮೂರು ದಶಕಗಳ ನಂತರವೂ ಪ್ರಸ್ತುತವಾಗಿವೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿವೆ.

ಆಧಾರ: ಪಿಟಿಐ, ಕೇಂದ್ರ ಗೃಹ ಸಚಿವಾಲಯದ ಪತ್ರ, ಅಮೆರಿಕದ ನ್ಯಾಷನಲ್ ಸೆಕ್ಯೂರಿಟಿ ಆರ್ಕೈವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.