ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕಾನ್‌ ಚಿತ್ರೋತ್ಸವದಲ್ಲಿ ಭಾರತೀಯರ ಮೆರುಗು

Published 26 ಮೇ 2024, 23:30 IST
Last Updated 26 ಮೇ 2024, 23:30 IST
ಅಕ್ಷರ ಗಾತ್ರ

ಜಗತ್ತಿನ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಕಾನ್‌ ಚಿತ್ರೋತ್ಸವವೂ ಒಂದು. ಫ್ರಾನ್ಸ್‌ನ ಕಡಲತೀರದ ಹಳ್ಳಿ ಕಾನ್‌ನಲ್ಲಿ ಈ ಚಿತ್ರೋತ್ಸವದ ಮೊದಲ ಆವೃತ್ತಿ 1946ರಲ್ಲಿ ನಡೆದಿತ್ತು. ಈಗ ಕಾನ್‌ ಒಂದು ಹಳ್ಳಿಯಾಗಿ ಉಳಿದಿಲ್ಲ, ಬದಲಿಗೆ ಜಗತ್ತಿನ ಅತ್ಯಂತ ಐಷಾರಾಮಿ ನಗರಗಳಲ್ಲಿ ಒಂದಾಗಿದೆ. ಚಿತ್ರೋತ್ಸವವೂ ವಿಶ್ವದ ಐದು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದೆನಿಸಿದೆ. ಮೊದಲ ಆವೃತ್ತಿಯಲ್ಲಿ ಅತ್ಯುತ್ತಮ ಚಿತ್ರ (ಗ್ರ್ಯಾಂಡ್‌ ಪ್ರಿಕ್ಸ್‌) ಪ್ರಶಸ್ತಿ ಪಡೆದುಕೊಂಡಿದ್ದು ಭಾರತೀಯ ಚಿತ್ರ. ಸುಮಾರು ಏಳು ದಶಕಗಳ ನಂತರ ಮತ್ತೊಂದು ಭಾರತೀಯ ಚಿತ್ರ ಇದೇ ಪ್ರಶಸ್ತಿಗೆ ಭಾಜನವಾಗಿದೆ. ಇನ್ನೂ ಎರಡು ವರ್ಗಗಳಲ್ಲಿ ಭಾರತೀಯ ಚಿತ್ರ, ನಟಿಗೆ ಪ್ರಶಸ್ತಿ ಸಂದಿವೆ.

ಪ್ರತಿ ವರ್ಷ ಕಾನ್‌ ಚಿತ್ರೋತ್ಸವ ನಡೆದಾಗ, ಅದರಲ್ಲಿ ಭಾರತೀಯ ನಟರು–ನಟಿಯರು ಭಾಗಿಯಾಗುವ ಚಿತ್ರಗಳೇ ಮಾಧ್ಯಮಗಳಲ್ಲಿ ತುಂಬಿರುತ್ತಿದ್ದವು. ಅಲ್ಲಿ ನಮ್ಮ ನಟರು–ನಟಿಯರು ತೊಟ್ಟ ಉಡುಗೆ, ಹಾವಭಾವಗಳ ಬಗ್ಗೆ ದಿನಗಟ್ಟಲೆ ಚರ್ಚೆಯಾಗುತ್ತಿತ್ತು. ಈ ಬಾರಿಯೂ ಚಿತ್ರೋತ್ಸವದ ಪ್ರಶಸ್ತಿ ಪಟ್ಟಿ ಬಹಿರಂಗವಾಗುವರೆಗೂ ಇದೇ ಸ್ಥಿತಿ ಇತ್ತು. ಹಲವು ವರ್ಗಗಳಲ್ಲಿ ಭಾರತೀಯ ಚಿತ್ರ, ಕಿರುಚಿತ್ರಗಳು ನಾಮನಿರ್ದೇಶನವಾಗಿದ್ದರೂ ಅವುಗಳ ಬಗ್ಗೆ ಹೆಚ್ಚು ಸುದ್ದಿಯಿರಲಿಲ್ಲ. ಆದರೆ ಜನಪ್ರಿಯರಲ್ಲದ, ತಾರಾ ಕುಟುಂಬದವರಲ್ಲದವರು ನಿರ್ದೇಶಿಸಿದ ಸಿನಿಮಾ ಕೃತಿಗಳು 77ನೇ ಕಾನ್‌ ಚಿತ್ರೋತ್ಸವದಲ್ಲಿ, ತಾವು ಸ್ಪರ್ಧಿಸಿದ್ದ ವರ್ಗಗಳಲ್ಲಿ ಪ್ರಶಸ್ತಿಗೆ ಪಾತ್ರವಾಗಿವೆ. ಪ್ರಶಸ್ತಿ ಗೆದ್ದ ಈ ಚಿತ್ರಗಳು, ಅವುಗಳ ನಿರ್ದೇಶಕರು ಮತ್ತು ನಟಿಯರು ಈಗ ಸುದ್ದಿಯಲ್ಲಿದ್ದಾರೆ.

ಮುಂಬೈನ ಪಾಯಲ್‌ ಕಪಾಡಿಯಾ ಅವರಿಗೆ ಕಾನ್‌ ಚಿತ್ರೋತ್ಸವ ಹೊಸದಲ್ಲ. ಅವರ ‘ನೈಟ್ ಆಫ್‌ ನೋಯಿಂಗ್ ನಥಿಂಗ್‌’ ಸಾಕ್ಷ್ಯಚಿತ್ರಕ್ಕೆ 2021ರ ಚಿತ್ರೋತ್ಸವದಲ್ಲಿ ‘ಗೋಲ್ಡನ್‌ ಐ’ ಪ್ರಶಸ್ತಿ ದೊರೆತಿತ್ತು. 2017ರ ಆವೃತ್ತಿಯಲ್ಲಿ ಪಾಯಲ್‌ ಅವರ ‘ಆಫ್ಟರ್‌ನೂನ್ ಕ್ಲೌಡ್ಸ್‌’ ಕಿರುಚಿತ್ರವು ‘ಲಾ ಸಿನೆಫ್‌’ ವರ್ಗದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿತ್ತು. ಈಗ 2024ನೇ ಸಾಲಿನ 77ನೇ ಆವೃತ್ತಿಯಲ್ಲಿ ಇವರ ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್‌ ಲೈಟ್‌’ (ಮಲಯಾಳ–ಹಿಂದಿ ಭಾಷೆ) ಚಿತ್ರವು ‘ಗ್ರ್ಯಾಂಡ್‌ ಪ್ರಿಕ್ಸ್‌’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದು ಕಾನ್‌ ಚಿತ್ರೋತ್ಸವದಲ್ಲಿನ ಮುಖ್ಯ ವರ್ಗದ ಒಂದು ಪ್ರಶಸ್ತಿ. ಈ ಪ್ರಶಸ್ತಿ ಗೆದ್ದುಕೊಂಡ ಎರಡನೇ ಭಾರತೀಯ ಚಿತ್ರವಿದು.

1946ರಲ್ಲಿ ಕಾನ್‌ ಚಿತ್ರೋತ್ಸವ ಆರಂಭವಾದಾಗ ಚೇತನ್‌ ಆನಂದ್ ನಿರ್ದೇಶನದ ‘ನೀಚಾ ನಗರ್’ ಈ ಪ್ರಶಸ್ತಿ ಗೆದ್ದುಕೊಂಡಿತ್ತು. ಆಗ ‘ಗ್ರ್ಯಾಂಡ್‌ ಪ್ರಿಕ್ಸ್‌’ ಎಂಬುದೇ ಅತ್ಯುನ್ನತ ಪ್ರಶಸ್ತಿಯಾಗಿತ್ತು. ಆದರೆ ನಂತರದ ದಿನಗಳಲ್ಲಿ ‘ಪಾಮ್‌ ಡಾವ್‌’ ಎಂಬ ಹೊಸ ಪ್ರಶಸ್ತಿಯನ್ನು ಸ್ಥಾಪಿಸಿ ಅದನ್ನೇ ಅತ್ಯುನ್ನತ ಪ್ರಶಸ್ತಿ ಎನ್ನಲಾಯಿತು. ಎರಡನೇ ಅತ್ಯುತ್ತಮ ಚಿತ್ರಕ್ಕೆ ‘ಗ್ಯಾಂಡ್‌ ಪ್ರಿಕ್ಸ್‌’ ನೀಡುವ ಪರಂಪರೆ ಆರಂಭಿಸಲಾಯಿತು. ಈಗ ಪಾಯಲ್ ಅವರ ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್‌ ಲೈಟ್‌’ ಚಿತ್ರಕ್ಕೆ ದೊರೆತಿರುವುದೂ ಕಾನ್‌ ಚಿತ್ರೋತ್ಸವದ ಅತ್ಯುನ್ನತ ಎರಡನೇ ಚಿತ್ರ ಎಂಬ ಪ್ರಶಸ್ತಿ.

ಈ ಪ್ರಶಸ್ತಿ ಭಾರತೀಯ ಚಿತ್ರರಂಗಕ್ಕೂ ಬಹಳ ಮುಖ್ಯವಾದುದು. ಗ್ರ್ಯಾಂಡ್‌ ಪ್ರಿಕ್ಸ್‌ ಗೆದ್ದುಕೊಂಡ ಚಿತ್ರ ಎಂದಷ್ಟೇ ಅಲ್ಲ, 30 ವರ್ಷಗಳಲ್ಲಿ ಈ ವರ್ಗದಲ್ಲಿ ಸ್ಪರ್ಧೆಗೆ ಭಾರತದ ಯಾವ ಚಿತ್ರಗಳೂ ಆಯ್ಕೆಯಾಗಿರಲಿಲ್ಲ. 1994ರಲ್ಲಿ ಶಾಜಿ ಎಸ್ ಕರುಣ್ ಅವರ ಮಲಯಾಳ ಚಿತ್ರ ‘ಸ್ವಾಹಂ’ ಕಾನ್‌ ಚಿತ್ರೋತ್ಸವದ ಮುಖ್ಯ ವರ್ಗದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿತ್ತು. ಈಗ ಸರಿಯಾಗಿ 30 ವರ್ಷಗಳ ನಂತರ ಅದೇ ವರ್ಗದಲ್ಲಿ ಭಾರತದ ಚಿತ್ರವೊಂದು ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ.

ಕಾನ್‌ ಚಿತ್ರೋತ್ಸವದ ತೀರ್ಪುಗಾರರ ಮಂಡಳಿಯು, ‘ಮಹಿಳೆಯರು ಹೆಚ್ಚು–ಹೆಚ್ಚು ಸಿನಿಮಾಗಳನ್ನು ಮಾಡುತ್ತಿರುವುದು ಮಹತ್ವದ ಸಂಗತಿ. ಭಾರತೀಯ ಸಿನಿಮಾ ಜಗತ್ತು ಹಂತಹಂತವಾಗಿ ಬದಲಾಗುತ್ತಿದೆ ಮತ್ತು ಎಲ್ಲವನ್ನೂ ಒಳಗೊಳ್ಳುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳನ್ನು ಮಾಡಲಾಗುತ್ತಿದೆ ಮತ್ತು ಅಲ್ಲಿನ ಪ್ರತಿ ರಾಜ್ಯದಲ್ಲೂ ಸಿನಿಮಾರಂಗ ಪ್ರಬಲವಾಗಿಯೇ ಇದೆ. ಆದರೂ ಮುಖ್ಯಭೂಮಿಕೆಯಲ್ಲಿ ಭಾರತೀಯ ಚಿತ್ರವೊಂದು ಮತ್ತೆ ಸ್ಪರ್ಧೆಗೆ ಆಯ್ಕೆಯಾಗಲು 30 ವರ್ಷಗಳು ಬೇಕಾದವು’ ಎಂದು ವಿಶ್ಲೇಷಿಸಿದೆ.

‘ಸೂರ್ಯಕಾಂತಿ ಹೂಗೆ...’

ಕನ್ನಡಿಗ ಚಿದಾನಂದ ಎಸ್‌. ನಾಯ್ಕ್‌ ಅವರ ನಿರ್ದೇಶನದ ಕಿರುಚಿತ್ರ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು...’ (SUNFLOWERS WERE THE FIRST ONES TO KNOW…) ಕಾನ್‌ ಚಿತ್ರೋತ್ಸವದ ‘ಲಾ ಸಿನೆಫ್‌’ ವರ್ಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಕನ್ನಡದ ಕಿರುಚಿತ್ರವೊಂದು ಈ ಪ್ರಶಸ್ತಿಗೆ ಪಾತ್ರವಾಗಿದ್ದು ಇದೇ ಮೊದಲು. 

‘ಲಾ ಸಿನೆಫ್‌’ ಕಿರುಚಿತ್ರಗಳಿಗೆಂದೇ ಇರುವ ಪ್ರತ್ಯೇಕ ವರ್ಗ. ವಿಶ್ವದ ಎಲ್ಲಾ ಸಿನಿಶಾಲೆಗಳ ವಿದ್ಯಾರ್ಥಿಗಳು ನಿರ್ಮಿಸಿದ/ನಿರ್ದೇಶಿಸಿದ ಕಿರುಚಿತ್ರಗಳು ಮಾತ್ರ ಇಲ್ಲಿ ಸ್ಪರ್ಧಿಸಬಹುದು. ಈ ಬಾರಿ ಲಾ ಸಿನೆಫ್‌ ವರ್ಗದಲ್ಲಿ ವಿಶ್ವದ 450 ಸಿನಿಶಾಲೆಗಳ 2,000ಕ್ಕೂ ಹೆಚ್ಚು ಕಿರುಚಿತ್ರಗಳು ಈ ಸ್ಪರ್ಧೆಗೆ ಬಂದಿದ್ದವು. ಸ್ಪರ್ಧೆಗೆ ಆಯ್ಕೆಯಾಗಿದ್ದ 18 ಚಿತ್ರಗಳನ್ನು ಹಿಂದಿಕ್ಕಿ, ಚಿದಾನಂದ್ ಅವರ ‘ಸೂರ್ಯಕಾಂತಿ ಹೂಗೆ...’ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ.

ಪುಣೆಯ ಎಫ್‌ಟಿಐಐನ ಹಳೆಯ ವಿದ್ಯಾರ್ಥಿ ಚಿದಾನಂದ ಅವರ ಈ ಕಿರುಚಿತ್ರವು 16 ನಿಮಿಷಗಳದ್ದಾಗಿದೆ. ಅಜ್ಜಿಯ ಹುಂಜ ಮತ್ತು ಸೂರ್ಯೋದಯ ಜನಪದ ಕತೆಯನ್ನು ಸಿನಿಮಾರೂಪಕ್ಕೆ ತಂದ ಬಗೆಯ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಮೈಸೂರಿನವರಾದ ಚಿದಾನಂದ ವೈದ್ಯಕೀಯ ಶಿಕ್ಷಣ ಪಡೆದು, ವೈದ್ಯರೂ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟರು. ಜನಪದ ಕತೆಗಳನ್ನು ಸಿನಿಮಾ ಮೂಲಕ ಹೇಳುವ ಹಾದಿಯಲ್ಲಿರುವ ಚಿದಾನಂದ, ಮತ್ತೆ ಮತ್ತೆ ಕಾನ್‌ ಚಿತ್ರೋತ್ಸವಕ್ಕೆ ಹೋಗುತ್ತೇವೆ ಎಂದಿದ್ದಾರೆ.

ಆಗ ಶಿಸ್ತುಕ್ರಮ, ಈಗ ಹೆಮ್ಮೆ

ಪಾಯಲ್ ಕಪಾಡಿಯಾ ಅವರು ಪುಣೆಯ ಎಫ್‌ಟಿಐಐನ ಹಳೆಯ ವಿದ್ಯಾರ್ಥಿ. ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವು 2015ರಲ್ಲಿ ಎಫ್‌ಟಿಐಐ ಮುಖ್ಯಸ್ಥರನ್ನಾಗಿ ಗಜೇಂದ್ರ ಚೌಹಾಣ್ ಅವರನ್ನು ನೇಮಕ ಮಾಡಿದಾಗ ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ರಾಜಕೀಯ ಸಿದ್ಧಾಂತ ಮತ್ತು ರಾಜಕೀಯ ಪಕ್ಷದ ಹಿನ್ನೆಲೆಯ ವ್ಯಕ್ತಿಯನ್ನು ಎಫ್‌ಟಿಐಐ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು ಸರಿಯಲ್ಲ ಎಂದು ವಿದ್ಯಾರ್ಥಿಗಳು ನಡೆಸಿದ 139 ದಿನಗಳ ಪ್ರತಿಭಟನೆಯ ಮುಂದಾಳುಗಳಲ್ಲಿ ಪಾಯಲ್ ಕೂಡ ಒಬ್ಬರು.

ಪ್ರತಿಭಟನೆ ನಡೆಸಿದ ಕಾರಣಕ್ಕೆ ಎಫ್‌ಟಿಐಐ, ಪಾಯಲ್ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿತ್ತು. ಅವರ ವಿದ್ಯಾರ್ಥಿ ವೇತನವನ್ನು ತಡೆಹಿಡಿದಿತ್ತು. ಅದೇ ಪಾಯಲ್ ಅವರು ಈಗ ಕಾನ್‌ ಚಿತ್ರೋತ್ಸವದಲ್ಲಿ ಭಾರತಕ್ಕೆ ತಮ್ಮ ಎರಡನೇ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ಪಾಯಲ್ ಕಪಾಡಿಯಾ ಅವರ ಐತಿಹಾಸಿಕ ಜಯದ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ. ಈ ಪ್ರತಿಷ್ಠಿತ ಪ್ರಶಸ್ತಿಯು ಪಾಯಲ್ ಅವರ ಕೌಶಲಕ್ಕೆ ದೊರೆತ ಗೌರವ ಮಾತ್ರವಲ್ಲ, ಹೊಸತಲೆಮಾರಿನ ಭಾರತೀಯ ಸಿನಿಮಾ ನಿರ್ದೇಶಕರಿಗೆ ಸ್ಫೂರ್ತಿಯಾಗಲಿದೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಪ್ರೀತಿಯ ಸೆಲೆ ಉಳಿಯಲು...

ಇಂಗ್ಲಿಷ್‌ ಸಾಹಿತ್ಯ ಓದಿದವರು. ಪತ್ರಕರ್ತೆಯಾಗಬೇಕೆಂದು ಹಂಬಲಿಸಿದ್ದರು. ಹಾಗಿದ್ದರೂ, ನಟನೆ ಅವರನ್ನು ಸೆಳೆಯಿತು. ಕೆಲವು ವರ್ಷ ರಂಗಭೂಮಿಯಲ್ಲೂ ಕೆಲಸ ಮಾಡಿದರು. ನಟನೆ ಬೇಡವೇ ಬೇಡ ಎಂದು ಪ್ರೊಡಕ್ಷನ್‌ ಡಿಸೈನರ್‌ ಆದರು. ಆದರೆ, ನಟನೆ ಅವರನ್ನು ಬಿಡಲಿಲ್ಲ. ಪ್ರತಿಷ್ಠಿತ ಕಾನ್‌ ಚಿತ್ರೋತ್ಸವದಲ್ಲಿ ಉತ್ತಮ ನಟನೆಗಾಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅವರೇ ಕೋಲ್ಕತ್ತದ ಅನಸೂಯಾ ಸೇನ್‌ಗುಪ್ತಾ.

ಲೈಂಗಿಕ ಕಾರ್ಯಕರ್ತೆಯರ ಬದುಕು, ಲೆಸ್ಬಿಯನ್‌ಗಳ ಬದುಕು–ಹೋರಾಟ–ಉಳಿವಿನ ಕಥಾಹಂದರ ಹೊಂದಿರುವ ಸಿನಿಮಾ ‘ದಿ ಶೇಮ್‌ಲೆಸ್‌’ಗಾಗಿ ಅನಸೂಯಾ ಅವರಿಗೆ ಪ್ರಶಸ್ತಿ ಬಂದಿದೆ. ಈ ಚಿತ್ರವನ್ನು ಬಲ್ಗೇರಿಯಾದ ನಿರ್ದೇಶಕ ಕೊನ್‌ಸ್ಟಾಂಟಿನ್‌ ಬೊಜನೊವ್‌ ಅವರು ನಿರ್ದೇಶಿಸಿದ್ದಾರೆ. ಕಾನ್‌ ಚಿತ್ರೋತ್ಸವದಲ್ಲಿ ಭಾರತೀಯರೊಬ್ಬರು ನಟನೆಗಾಗಿ ಪ್ರಶಸ್ತಿ ಪಡೆದುಕೊಂಡದ್ದು ಇದೇ ಮೊದಲು.

‘ಅನ್‌–ಸರ್ಟೇನ್‌ ರಿಗಾರ್ಡ್‌’ ವಿಭಾಗದಲ್ಲಿ ಅನಸೂಯಾ ಅವರಿಗೆ ಪ್ರಶಸ್ತಿ ಬಂದಿದೆ. ಅತ್ಯಂತ ವಿಶಿಷ್ಠ ಎನಿಸುವ ಕಥಾಹಂದರ ಮತ್ತು ಮೂಲ ಕಥೆಗಳಿಗಾಗಿಯೇ ‘ಅನ್‌–ಸರ್ಟೇನ್‌ ರಿಗಾರ್ಡ್‌’ ಎನ್ನುವ ವಿಭಾಗವನ್ನು ರೂಪಿಸಲಾಗಿದೆ. ಈ ವಿಭಾಗದಲ್ಲಿ ಚಿತ್ರ ನಿರ್ಮಾಣದ ಹಲವು ವಿಭಾಗಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.

ಪಶ್ಚಿಮ ಬಂಗಾಳದ ಕೋಲ್ಕತ್ತವು ಅನಸೂಯಾ ಅವರ ಹುಟ್ಟೂರು. ಜಾಧವ್‌ಪುರ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಬಿ.ಎ ಮುಗಿಸಿದರು. ಉತ್ಸಾಹಿ ಯುವಕರ ರಂಗಭೂಮಿ ಗುಂಪು ‘ಟಿನ್‌ ಕ್ಯಾನ್‌’ನಲ್ಲಿ ಅನಸೂಯಾ ತಮ್ಮನ್ನು ಕೆಲಕಾಲ ತೊಡಗಿಸಿಕೊಂಡಿದ್ದರು. ನಂತರ, 2009ರಲ್ಲಿ ಮೊದಲ ಬಾರಿಗೆ ಸಿನಿಮಾ ರಂಗ ಪ್ರವೇಶಿಸಿದರು. ಅಂಜನ್‌ ದತ್ತಾ ಅವರ ‘ಮ್ಯಾಡ್ಲಿ ಬಂಗಾಲಿ’, ಅನುಸೂಯ ಅವರ ಮೊದಲ ಚಿತ್ರ. ಅಲ್ಲಿಂದ 2013ರಲ್ಲಿ ಅವರು ಮುಂಬೈಗೆ ಬಂದಿಳಿದರು. ಆದರೆ, ಅನಸೂಯಾ ಅವರನ್ನು ಬಾಲಿವುಡ್‌ ಒಳಗೆ ಕರೆದುಕೊಳ್ಳಲಿಲ್ಲ. ಅದಕ್ಕಾಗಿ ಅವರು ಪ್ರೊಡಕ್ಷನ್‌ ಡಿಸೈನರ್‌ ಆಗಿ ಹಲವು ಕಾರ್ಯಕ್ರಮಗಳಲ್ಲಿ, ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನೆಟ್‌ಫ್ಲಿಕ್ಸ್‌ನ ‘ಮಸಬಾ ಮಸಬಾ’, ‘ರೇ’, ‘ನೋಬಲ್‌ಮ್ಯಾನ್’, ‘ಬ್ರಹಂ ನಮನ್‌’ ಸಿನಿಮಾಗಳಿಗೆ ಪ್ರೊಡಕ್ಷನ್ ಡಿಸೈನರ್‌ ಆಗಿ ಕೆಲಸ ಮಾಡಿದ್ದಾರೆ. ಮುಂಬೈನ ಏಕತಾನ ಹಾಗೂ ಏಕಾಂಗಿ ಬದುಕು ಸಾಕೆನಿಸಿ, ಅನಸೂಯಾ ಅವರು 2021ರಲ್ಲಿ ಗೋವಾಕ್ಕೆ ನೆಲೆ ಬದಲಿಸಿದರು. ಮದುವೆಯಾಗಿ ಈಗ ಅವರು ಗೋವಾದಲ್ಲಿಯೇ ನೆಲೆಯೂರಿದ್ದಾರೆ. 2020ರಲ್ಲಿ ‘ದಿ ಶೇಮ್‌ಲೆಸ್‌’ ಸಿನಿಮಾದಲ್ಲಿ ಅವಕಾಶ ದೊರೆಯುತ್ತದೆ. ನಿರ್ದೇಶಕ ಕೊನ್‌ಸ್ಟಾಂಟಿನ್‌ ಬೊಜನೊವ್‌ ಅವರು ಫೇಸ್‌ಬುಕ್‌ ಮೂಲಕವಾಗಿ ಇವರನ್ನು ಸಂಪರ್ಕಿಸುತ್ತಾರೆ. ನಂತರ, ಅನಸೂಯಾ ಅವರು ಆಡಿಷನ್‌ಗಾಗಿ ಆಡಿಯೊ ಕ್ಲಿಪ್‌ವೊಂದನ್ನು ಕಳುಹಿಸುತ್ತಾರೆ. ಮೊದಲ ಹಂತದಲ್ಲಿಯೇ ಅನಸೂಯಾ ಅವರು ಆಯ್ಕೆಯೂ ಆಗುತ್ತಾರೆ.

‘ತೀವ್ರ ದೌರ್ಜನ್ಯಕ್ಕೆ ಒಳಗಾದವರ ಎದೆಗೂಡಿನಲ್ಲೂ ಪ್ರೀತಿಯ ಸೆಲೆ ಇರುತ್ತದೆ. ಆ ಸೆಲೆಯು ಇನ್ನೊಬ್ಬರನ್ನು ಸಲಹುವಷ್ಟು ತೀವ್ರವಾಗಿರುತ್ತದೆ. ರೇಣುಕಾ (ಚಿತ್ರದಲ್ಲಿ ಅನಸೂಯಾ ಅವರ ನಿರ್ವಹಿಸಿದ ಪಾತ್ರದ ಹೆಸರು) ಹಾಗೂ ಅನಸೂಯಾ ಇಬ್ಬರೂ ಪ್ರೀತಿ ಮತ್ತು ನಂಬುಗೆಯನ್ನು ಜೀವಂತವಾಗಿ ಇರಿಸಿಕೊಳ್ಳುವುದಕ್ಕೆ ಹೋರಾಟ ನಡೆಸುತ್ತಾರೆ. ಇದೇ ನನ್ನನ್ನು ಮತ್ತು ನನ್ನ ಪಾತ್ರವನ್ನು ಒಟ್ಟಿಗೆ ಇರಿಸಿದೆ’ ಎನ್ನುತ್ತಾರೆ ಅನಸೂಯಾ.

ಆಧಾರ: ಕಾನ್ ಚಿತ್ರೋತ್ಸವ ಪ್ರಶಸ್ತಿಪಟ್ಟಿ, ಬಿಬಿಸಿ, ಪಿಟಿಐ, ‘ಮೈ ಕೋಲ್ಕತ್ತ’ ಪತ್ರಿಕೆಯ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT