ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಂಡ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ಮಸೂದೆ–2025ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಡುವೆ ವಾಗ್ವಾದ ನಡೆಯುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಮಸೂದೆ, ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ತರಲು ಸರ್ಕಾರ ಹೊರಟಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ರಾಜ್ಯಪಾಲರು ಸಹಿ ಹಾಕಬಾರದು ಎಂದೂ ಅದು ಒತ್ತಾಯಿಸಿದೆ. ದ್ವೇಷ ಭಾಷಣದ ಮೂಲಕ ಸಮಾಜದ ಸ್ವಾಸ್ಥ್ಯ, ಸಾಮರಸ್ಯ ಹಾಳುಗೆಡಹುವುದನ್ನು, ಜನ/ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕುವುದನ್ನು ತಡೆಯುವುದಕ್ಕೆ ಹೊಸ ಕಾನೂನು ಅಗತ್ಯ ಎಂದು ಸರ್ಕಾರ ಹೇಳಿದೆ. ರಾಜ್ಯಪಾಲರು ಇನ್ನಷ್ಟೇ ಮಸೂದೆಗೆ ಸಹಿ ಹಾಕಬೇಕಾಗಿದೆ. ಮಸೂದೆಯ ವಿವರ ಇಲ್ಲಿದೆ...

ನಿರ್ದಿಷ್ಟ ವ್ಯಕ್ತಿ, ಸಮೂಹ, ಸಮುದಾಯ, ಅಥವಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸಮಾಜದ ಸಾಮರಸ್ಯ ಕದಡುವ ರೀತಿಯಲ್ಲಿ ದ್ವೇಷ ಭಾಷಣ ಮಾಡುವುದು, ಅವುಗಳ ಪ್ರಕಟಣೆ, ಪ್ರಸರಣ, ಪ್ರಚೋದನೆ ತಡೆಯುವ ಉದ್ದೇಶದಿಂದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ಮಸೂದೆ-2025 ಅನ್ನು ಸಿದ್ಧಪಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ದ್ವೇಷ ಅಪರಾಧ ಎಸಗುವವರನ್ನು ದಂಡಿಸುವುದು ಮತ್ತು ಸಂತ್ರಸ್ತರಿಗೆ ತಕ್ಕ ಪರಿಹಾರ ನೀಡುವ ಉದ್ದೇಶವೂ ಈ ಮಸೂದೆಗೆ ಇದೆ.

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆಗಾಗಿ ಪ್ರತ್ಯೇಕವಾದ ಮಸೂದೆ ರೂಪಿಸಿದ ಮೊದಲ ರಾಜ್ಯ ಕರ್ನಾಟಕ.

ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್ಎಸ್) 196ನೇ ಸೆಕ್ಷನ್ ಕೂಡ ದ್ವೇಷ ಅಪರಾಧದ ಕುರಿತಾಗಿ ಇದೆ. ಇದಕ್ಕೆ ಹೆಚ್ಚುವರಿಯಾಗಿ ಈ ಮಸೂದೆ ರೂಪಿಸಲಾಗಿದೆ. ಇದರ ಪ್ರಕಾರ, ಸಮಾಜದಲ್ಲಿ ದ್ವೇಷ ಹರಡುವಂತೆ ಮಾಡುವ ಯಾವುದೇ ಕೃತ್ಯ ಶಿಕ್ಷಾರ್ಹ ಅಪರಾಧ. ಅಲ್ಲದೇ, ಇದರ ಅಡಿಯಲ್ಲಿ ದಾಖಲಾಗುವ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ.

ದ್ವೇಷ ಭಾಷಣ ಎಂದರೆ...

ಯಾವುದೇ ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲಿಂಗತ್ವ, ಲೈಂಗಿಕ ಮನೋಗುಣ, ಜನ್ಮ ಸ್ಥಳ, ವಾಸ ಸ್ಥಳ, ಭಾಷೆ, ನ್ಯೂನತೆ ಅಥವಾ ಪಂಗಡಗಳ ಆಧಾರದಲ್ಲಿ ಪೂರ್ವಗ್ರಹಪೀಡಿತವಾಗಿ ಯಾವುದೇ ಮೃತ/ಜೀವಂತ ವ್ಯಕ್ತಿ, ವ್ಯಕ್ತಿಗಳ ವರ್ಗ/ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಸಾಮರಸ್ಯ ಕದಡುವ ವೈರತ್ವದ ಅಥವಾ ದ್ವೇಷದ ಅಥವಾ ಕೆಡುಕಿನ ಭಾವನೆಗಳನ್ನು ಮೂಡಿಸುವ ಉದ್ದೇಶದಿಂದ ಸಾರ್ವಜನಿಕವಾಗಿ ಮೌಖಿಕ ಅಥವಾ ಲಿಖಿತ ರೂಪದಲ್ಲಿ ಅಥವಾ ಸಂಕೇತಗಳ ಮೂಲಕ ಅಥವಾ ದೃಶ್ಯ ರೂಪಕಗಳ ಮೂಲಕ ಅಥವಾ ಎಲೆಕ್ಟ್ರಾನಿಕ್ ಸಂವಹನಗಳ ಮೂಲಕ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮಾಡಲಾದ, ಪ್ರಕಟಿಸಲಾದ, ಪಸರಿಸಲಾದ ಅಭಿವ್ಯಕ್ತಿ

ದ್ವೇಷ ಅಪರಾಧ ಎಂದರೆ...

ಬದುಕಿರುವ ಅಥವಾ ಮೃತಪಟ್ಟಿರುವ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹ ಅಥವಾ ಸಂಸ್ಥೆಯ ವಿರುದ್ಧ ಸಾಮರಸ್ಯವನ್ನು ಹಾಳುಮಾಡುವ ಅಥವಾ ಹಗೆತನ ಅಥವಾ ದ್ವೇಷ ಅಥವಾ ಕೆಡುಕಿನ ಭಾವನೆಗಳನ್ನು ಮೂಡಿಸಲು ದ್ವೇಷ ಭಾಷಣವನ್ನು ಮಾಡುವುದು, ಪ್ರಕಟಿಸುವುದು ಅಥವಾ ಹರಡುವ ಮೂಲಕ ಅಂಥ ದ್ವೇಷ ಭಾಷಣವನ್ನು ಪ್ರಚಾರ ಮಾಡುವುದು, ವ್ಯಾಪಕಗೊಳಿಸುವುದು, ಪ್ರಚೋದಿಸುವುದು ಅಥವಾ ಅದಕ್ಕೆ ಪ್ರಯತ್ನಿಸುವುದು

ದಂಡನೆ ಏನೇನು?

ಮಸೂದೆಯ 3ನೇ ಸೆಕ್ಷನ್ ಅಪರಾಧಿಗೆ ನೀಡಲಾಗುವ ಶಿಕ್ಷೆಯ ಬಗ್ಗೆ ವಿವರಿಸುತ್ತದೆ.

* ಯಾವುದೇ ವ್ಯಕ್ತಿ ದ್ವೇಷ ಅಪರಾಧ ಎಸಗಿರುವುದು ಸಾಬೀತಾದರೆ ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ

* ವ್ಯಕ್ತಿಯೊಬ್ಬ ಎರಡನೇ ಬಾರಿಗೆ ಅಥವಾ ಪುನರಾರ್ತಿತವಾಗಿ ಅಪರಾಧ ಎಸಗಿದರೆ ಕನಿಷ್ಠ ಎರಡು ವರ್ಷಗಳಿಂದ ಗರಿಷ್ಠ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಮತ್ತು ₹1 ಲಕ್ಷ ದಂಡ

* ಈ ಅಪರಾಧಗಳು ಗಂಭೀರ ಸ್ವರೂಪದ್ದಾಗಿದ್ದು, ಜಾಮೀನುರಹಿತವಾಗಿರುತ್ತವೆ. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರಿಂದ ವಿಚಾರಣೆೆಗೆ ಒಳಪಡುತ್ತದೆ

* ಪರಿಹಾರ: ಅಪರಾಧದ ಪರಿಣಾಮದ ತೀವ್ರತೆಯ ಆಧಾರದ ಮೇಲೆ ನ್ಯಾಯಾಲಯವು ಸಂತ್ರಸ್ತರಿಗೆ ಆಗಿರುವ ಹಾನಿಯನ್ನು ಲೆಕ್ಕಹಾಕಿ ಅದಕ್ಕೆ ತಕ್ಕಷ್ಟು ಪರಿಹಾರವನ್ನು ನೀಡಬಹುದು

ಯಾವುದಕ್ಕೆ ವಿನಾಯಿತಿ?

ಎಲೆಕ್ಟ್ರಾನಿಕ್ ಅಥವಾ ಬೇರೆ ಯಾವುದೇ ರೂಪದಲ್ಲಿರುವ ಪುಸ್ತಕ, ಕರಪತ್ರ, ಕಾಗದ, ಬರಹ, ರೇಖಾಚಿತ್ರ, ವರ್ಣಚಿತ್ರ ರೂಪಕ ಅಥವಾ ಚಿತ್ರಗಳನ್ನು ವಿಜ್ಞಾನ, ಸಾಹಿತ್ಯ, ಕಲೆ ಅಥವಾ ಕಲಿಕೆ ಅಥವಾ ಸಾಮಾನ್ಯ ವಿಷಯಗಳಿಗೆ ಸಂಬಂಧಿಸಿದ ಉದ್ದೇಶದಿಂದ ಪ್ರಕಟಣೆ ಮಾಡಿದ್ದರೆ ಮತ್ತು ಅವುಗಳು ಜನಹಿತಕ್ಕಾಗಿ ಇರುವುದೆಂದು ಸಾಬೀತಾದರೆ ಅಥವಾ ಸದ್ಭಾವನಾಪೂರ್ವಕವಾಗಿ ಪರಂಪರೆ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಈ ಪ್ರಕಟಣೆಗಳನ್ನು ಇಟ್ಟುಕೊಂಡಿದ್ದರೆ ಅಥವಾ ಬಳಕೆಯಲ್ಲಿದ್ದರೆ ಈ ಮಸೂದೆಯಲ್ಲಿನ ನಿಯಮಗಳು ಅನ್ವಯವಾಗುವುದಿಲ್ಲ

ನೋಂದಣಿ ಮಾಡದ ಸಂಸ್ಥೆಗೂ ಅನ್ವಯ

ಪ್ರಸ್ತಾವಿತ ಕಾನೂನು ವ್ಯಕ್ತಿಗಳಿಗೆ ಮಾತ್ರವಲ್ಲ; ದ್ವೇಷ ಅಪರಾಧ ಎಸಗುವ ‘ಸಂಘ ಅಥವಾ ಸಂಸ್ಥೆ’ಗಳಿಗೂ ಅನ್ವಯವಾಗುತ್ತದೆ. ನೋಂದಣಿ ಆಗಿರುವ ಅಥವಾ ನೋಂದಣಿ ಆಗದಿರುವ ಸಂಘ/ಸಂಸ್ಥೆಗಳೂ ಇದರ ವ್ಯಾಪ್ತಿಗೆ ಬರುತ್ತವೆ.

ಅಪರಾಧ ಎಸಗಿದ ಸಮಯದಲ್ಲಿ ಸಂಘ ಅಥವಾ ಸಂಸ್ಥೆಯ ಕಾರ್ಯಾಚರಣೆಯ ಪ್ರಭಾರ ಮತ್ತು ಜವಾಬ್ದಾರಿ ಹೊತ್ತಿರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ಆ ಸಂಘ ಅಥವಾ ಸಂಸ್ಥೆಯೂ ತಪ್ಪಿತಸ್ಥರು ಎಂದು ಪರಿಗಣಿಸಲಾಗುತ್ತದೆ. ಪದಾಧಿಕಾರಿಗಳು ಹಾಗೂ ಸಂಸ್ಥೆಯು ಶಿಕ್ಷೆ ಮತ್ತು ದಂಡನೆಗೆ ಅರ್ಹವಾಗಿರುತ್ತಾರೆ.

ಒಂದು ವೇಳೆ ನಡೆದ ಅಪರಾಧವು ಜವಾಬ್ದಾರಿ ಹೊತ್ತಿದ್ದವರ ಅರಿವಿಗೆ ಬಾರದೇ ಇದ್ದರೆ ಅಥವಾ ಅಪರಾಧ ತಡೆಯಲು ಅವರು ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದನ್ನು ಸಾಬೀತು ಪಡಿಸಿದಲ್ಲಿ ಅವರು ದಂಡನೆಗೆ ಅರ್ಹರಾಗುವುದಿಲ್ಲ.

ಕಾನೂನು ಸುವ್ಯವಸ್ಥೆ: ಕ್ರಮ ಯಾವಾಗ?

ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ದ್ವೇಷ ಅಪರಾಧ ಎಸಗುವ ಸಾಧ್ಯತೆ ಇದೆ ಅಥವಾ ಅಪರಾಧ ಎಸಗುವ ಬೆದರಿಕೆ ಒಡ್ಡಿದರೆ ಮತ್ತು ಅದನ್ನು ತಡೆಯಲು ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂಬುದು ಮನವರಿಕೆಯಾದರೆ ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ದರ್ಜೆಯ ಅಧಿಕಾರಿಯು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು.

ವಿಷಯ ನಿರ್ಬಂಧಿಸುವ/ತೆಗೆದುಹಾಕುವ ಅಧಿಕಾರ

ದ್ವೇಷ ಭಾಷಣ ಅಥವಾ ಅದಕ್ಕೆ ಸಂಬಂಧಿಸಿದ ವಿಷಯ, ವಸ್ತುಗಳನ್ನು ಮೂಲದಿಂದಲೇ ತೆಗೆದುಹಾಕುವ ಅಥವಾ ನಿರ್ಬಂಧಿಸುವ ಅಧಿಕಾರ ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ನಿಯೋಜಿಸಿರುವ ಯಾವುದೇ ಅಧಿಕಾರಿಗೆ ಇರುತ್ತದೆ. ಈ ಅಧಿಕಾರಿಯು ಎಲೆಕ್ಟ್ರಾನಿಕ್ ಮಾಧ್ಯಮವೂ ಸೇರಿದಂತೆ ಯಾವುದೇ ಸೇವಾದಾತ ಸಂಸ್ಥೆ, ಮಧ್ಯವರ್ತಿ, ವ್ಯಕ್ತಿ ಅಥವಾ ಸಂಸ್ಥೆಗೆ ವಿಷಯ ವಸ್ತುಗಳನ್ನು ತಡೆ ಹಿಡಿಯುವಂತೆ ಅಥವಾ ಸಂಪೂರ್ಣವಾಗಿ ತೆಗೆದುಹಾಕುವಂತೆ ನಿರ್ದೇಶಿಸಬಹುದು.

ಭಾರತೀಯ ನ್ಯಾಯ ಸಂಹಿತೆಯಲ್ಲೇನಿದೆ?

ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಾಗಿ ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) 196ನೇ ಸೆಕ್ಷನ್ ದ್ವೇಷ ಅಪರಾಧದ ಕುರಿತು ವಿವರಿಸುತ್ತದೆ.

ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸ ಸ್ಥಳ, ಭಾಷೆ, ಜಾತಿ, ಸಮುದಾಯ... ಇನ್ನಿತರ ವಿಷಯಗಳ ಆಧಾರದಲ್ಲಿ ವಿವಿಧ ಗುಂಪುಗಳ (ಧಾರ್ಮಿಕ, ಸಮುದಾಯ, ಜಾತಿ ಇತ್ಯಾದಿ) ನಡುವೆ ವೈರತ್ವವನ್ನು ಉಂಟು ಮಾಡುವ ಮತ್ತು ಪೂರ್ವಗ್ರಹ ಪೀಡಿತರಾಗಿ ಸಮಾಜದ ಸಾಮರಸ್ಯ ಕದಡುವ ಕೃತ್ಯ ಎಸಗುವವರಿಗೆ, ಇಂತಹ ಕೃತ್ಯಗಳಿಗೆ ಪ್ರೋತ್ಸಾಹ, ಪ್ರಚಾರ ನೀಡುವವರಿಗೆ ಅಥವಾ ದ್ವೇಷ ಉಂಟು ಮಾಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿದವರಿಗೆ ಗರಿಷ್ಠ ಐದು ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸುವುದಕ್ಕೆ ಬಿಎನ್ಎಸ್ನಲ್ಲಿ ಅವಕಾಶ ಇದೆ.

2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ‘66ಎ’ಯು ಆನ್ಲೈನ್ನಲ್ಲಿ ಅವಮಾನಕರ ಭಾಷೆಗಳನ್ನು ಬಳಸುವ ಅಥವಾ ದುರ್ವತನೆಯ ಸಂದೇಶಗಳನ್ನು ಕಳುಹಿಸಿದವರನ್ನು ದಂಡಿಸುವುದಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಸುಪ್ರೀಂ ಕೋರ್ಟ್ 2015ರಲ್ಲಿ ಈ ಸೆಕ್ಷನ್ ಅನ್ನು ರದ್ದು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.