ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ‘ಭಾರತ ಉಪಖಂಡದಲ್ಲಿತ್ತು ವಿಶ್ವದ ಈವರೆಗಿನ ದೈತ್ಯ ಹಾವು’

Published 21 ಏಪ್ರಿಲ್ 2024, 19:27 IST
Last Updated 21 ಏಪ್ರಿಲ್ 2024, 19:27 IST
ಅಕ್ಷರ ಗಾತ್ರ

ಗುಜರಾತ್‌ನ ಕಛ್‌ ಪ್ರದೇಶದ ಪನಾನ್‌ಂದ್ರೋ ಎಂಬಲ್ಲಿ ಸುಣ್ಣಕಲ್ಲು ಗಣಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. 2005ರ ಒಂದು ದಿನ ಗಣಿಯಲ್ಲಿ ಮಣ್ಣು ಅಗೆಯುವಾಗ ಕಾರ್ಮಿಕರಿಗೆ ಯಾವುದೋ ಪ್ರಾಣಿಯ ಮೂಳೆಯಂತಹ ಹಲವು ವಸ್ತುಗಳು ದೊರೆತಿದ್ದವು. ತೀರಾ ವಿಚಿತ್ರವಾಗಿ ಇದ್ದುದ್ದರಿಂದ ಆ ಬಗ್ಗೆ ಪರಿಶೀಲನೆ ನಡೆಸಲು ವಿಜ್ಞಾನಿಗಳನ್ನು ಕರೆಸಲಾಗಿತ್ತು. ಐಐಟಿ–ರೂರ್ಕಿಯ ವಿಜ್ಞಾನಿ ಸುನೀಲ್ ವಾಜಪೇಯಿ ಸ್ಥಳಕ್ಕೆ ಭೇಟಿ ನೀಡಿ, ಉತ್ಖನನ ನಡೆಸಿದ್ದರು. ಅಲ್ಲಿ ದೊರೆತ ಪಳೆಯುಳಿಕೆಗಳು ಯಾವುದೋ ದೊಡ್ಡ ಸರೀಸೃಪವೊಂದರ ಬೆನ್ನುಮೂಳೆಗಳಂತಹ ರಚನೆಗಳಾಗಿದ್ದವು. ಅಂತಹ ಒಟ್ಟು 27 ಪಳೆಯುಳಿಕೆಗಳು ಅವರಿಗೆ ದೊರೆತಿದ್ದವು. ಅದೇ ಸ್ಥಳದಲ್ಲಿ ಮೊಸಳೆಗಳ ಹಲ್ಲುಗಳನ್ನು ಹೋಲುವ ಮತ್ತು ದೊಡ್ಡ ಮೀನುಗಳ ಹಲ್ಲುಗಳನ್ನು ಹೋಲುವ ಹಲವು ಪಳೆಯುಳಿಕೆಗಳೂ ಪತ್ತೆಯಾಗಿದ್ದವು. ಇದು ಯಾವುದೋ ಒಂದು ದೊಡ್ಡ ಮೊಸಳೆಯ ಬೆನ್ನುಮೂಳೆ ಎಂದು ನಿರ್ಧರಿಸಿ, ತಮ್ಮ ಸಂಶೋಧನಾಲಯದಲ್ಲಿ ಸಂರಕ್ಷಿಸಿ ಇಟ್ಟರು.

2005ರಲ್ಲಿ ಹೀಗೆ ತೆಗೆದಿರಿಸಲಾಗಿದ್ದ ಪಳೆಯುಳಿಕೆಗಳ ಮೇಲೆ 2022ರವರೆಗೂ ಯಾವುದೇ ಸಂಶೋಧನೆ ಅಥವಾ ಅಧ್ಯಯನ ನಡೆಯಲಿಲ್ಲ. ಆದರೆ 2022ರ ಮೇ ವೇಳೆಗೆ ವಾಡಿಯಾ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳ ತಂಡವು ಒಂದು ಅಧ್ಯಯನ ವರದಿ ಪ್ರಕಟಿಸಿತ್ತು. ಲಡಾಖ್‌ನ ಹಿಮಗಾಡಿನಲ್ಲಿ ಆ ವಿಜ್ಞಾನಿಗಳ ತಂಡ ದೈತ್ಯ ಹಾವೊಂದರ ಪಳೆಯುಳಿಕೆಯನ್ನು ಪತ್ತೆ ಮಾಡಿತ್ತು. ದೀರ್ಘ ಅಧ್ಯಯನದ ನಂತರ ಅದು ಸುಮಾರು 3.8 ಕೋಟಿ ವರ್ಷಗಳ ಹಿಂದೆ ಇದ್ದ ಮ್ಯಾಡ್ಸೊಐಡ್‌ ಪ್ರಭೇದದ ಉಪಪ್ರಭೇದಕ್ಕೆ ಸೇರಿದ ಹಾವಿನದ್ದು ಎಂದು ಪತ್ತೆಯಾಗಿತ್ತು. ಆ ಹಾವಿನಬೆನ್ನು ಮೂಳೆಗಳ ಚಿತ್ರವನ್ನೂ ಅಧ್ಯಯನ ವರದಿಯಲ್ಲಿ ಪ್ರಕಟಿಸಲಾಗಿತ್ತು. ಅದೇ ಸಮಯದಲ್ಲಿ ಐಐಟಿ–ರೂರ್ಕಿಯ ವಿಜ್ಞಾನಿ ಸುನೀಲ್‌ ವಾಜಪೇಯಿ ಅವರ ತಂಡಕ್ಕೆ, ದೇವಜಿತ್ ದತ್ತಾ ಎಂಬ ಮತ್ತೊಬ್ಬ ವಿಜ್ಞಾನಿ ಸೇರಿಕೊಂಡರು.

ಸುನೀಲ್‌ ಅವರ ಪ್ರಯೋಗಾಲಯದಲ್ಲಿ ಇದ್ದ ಈ ಪಳೆಯುಳಿಕೆಗಳ ಮೇಲೆ ತುಸು ಅಧ್ಯಯನ ನಡೆಸಿದರು. ಆಗಲೇ ಅವರಿಗೆ ಅದು ಮೊಸಳೆಯದ್ದಲ್ಲ ಎಂಬ ಅನುಮಾನ ಹುಟ್ಟಿದ್ದು. ಏಕೆಂದರೆ ಬೆನ್ನುಮೂಳೆಗಳು ಹರಡಿಕೊಂಡಿರುವ ರೀತಿ ಮತ್ತು ಅವು ಪರಸ್ಪರ ಜೋಡಣೆಯಾಗಿದ್ದ ರೀತಿ ಮೊಸಳೆಗಿಂತ ತುಸು ಭಿನ್ನವಾಗಿದ್ದವು. ಈ ಬಗ್ಗೆ ಪರಸ್ಪರ ಚರ್ಚಿಸಿದ ಸುನೀಲ್‌ ಮತ್ತು ದೇವಜಿತ್ ಅವರು ಆ ಪಳೆಯುಳಿಕೆಯ ಮೇಲೆ ಹೆಚ್ಚಿನ ಅಧ್ಯಯನ ನಡೆಸಲು ನಿರ್ಧರಿಸಿದರು. ಹಲವು ತಿಂಗಳ ಅಧ್ಯಯನದ ನಂತರ ಅದೊ ಗೊಂಡ್ವಾನಾ (ಆಸ್ಟ್ರೇಲಿಯಾ, ಭಾರತ ಉಪಖಂಡ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡಗಳನ್ನು ಒಳಗೊಂಡಿದ್ದ ಬೃಹತ್ ಖಂಡ) ಖಂಡದಲ್ಲಿ ಇದ್ದ ಮ್ಯಾಡ್ಸೊಐಡ್‌ ಹಾವಿನ ಜಾತಿಗೆ ಸೇರಿದ, ಉಪಪ್ರಭೇದವೊಂದರ ಪಳೆಯುಳಿಕೆಯಾಗಿತ್ತು. ಈ ಹಾವು ಸುಮಾರು 4.7 ಕೋಟಿ ವರ್ಷಗಳ ಹಿಂದೆ ಬದುಕಿತ್ತು ಎಂಬುದನ್ನು ಸಂಶೋಧನೆ ಬಹಿರಂಗಪಡಿಸಿತು.

ಮ್ಯಾಡ್ಸೊಐಡ್‌ ಈವರೆಗಿನ ಅತ್ಯಂತ ದೈತ್ಯ ಹಾವುಗಳ ಪ್ರಭೇದವಾಗಿದೆ. ಹೀಗಾಗಿ ಈ ಇಬ್ಬರೂ ವಿಜ್ಞಾನಿಗಳು ತಮ್ಮಲ್ಲಿದ್ದ ಬೆನ್ನುಮೂಳೆಗಳ ಪಳೆಯುಳಿಕೆಗಳನ್ನು ಬಳಸಿಕೊಂಡು, ಆ ಹಾವಿನ ಉದ್ದವನ್ನು ಅಂದಾಜು ಮಾಡಿದರು. ಅದಾಗಲೇ ಪ್ರಚಲಿತದಲ್ಲಿದ್ದ ಎರಡು ಸೂತ್ರಗಳನ್ನು ಬಳಸಿಕೊಂಡು ಹಾವಿನ ಉದ್ದವನ್ನು ಅಂದಾಜು ಮಾಡಿದರು. ಒಂದು ಅಂದಾಜಿನ ಪ್ರಕಾರ ಆ ಹಾವಿನ ಉದ್ದ 11 ಮೀಟರ್‌ (36.3 ಅಡಿ). ಇನ್ನೊಂದು ಅಂದಾಜಿನ ಪ್ರಕಾರ ಆ ಹಾವಿನ ಉದ್ದ 15.5 ಮೀಟರ್‌ (51.3 ಅಡಿ). ಆ ಹಾವಿನ ಅಂದಾಜು ಉದ್ದ 51 ಅಡಿಯನ್ನು ಮೀರಿಸಿತ್ತು. ಅದು ನಿಜವೇ ಆಗಿದ್ದರೆ, ಈವರೆಗೆ ವಿಜ್ಞಾನಿಗಳಿಗೆ ದೊರೆತಿರುವ ಪಳೆಯುಳಿಕೆಗಳಲ್ಲೇ ಅತ್ಯಂತ ದೊಡ್ಡ ಹಾವಿನ ಪಳೆಯುಳಿಕೆ ಇದಾಗಿತ್ತು. ವಿಜ್ಞಾನಿಗಳು ಅದನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡರು. ಹೌದು, ಅದು ಆವರೆಗಿನ ಅತ್ಯಂತ ದೊಡ್ಡ ಪಳೆಯುಳಿಕೆಯಾಗಿದ್ದ ಟೈಟನಾಬೊವಾದ್ದಕ್ಕಿಂತಲೂ (ಸುಮಾರು 42 ಅಡಿ) ದೊಡ್ಡ ಹಾವಿನದ್ದಾಗಿತ್ತು. ಟೈಟನಾಬೊವಾ 5.8 ಕೋಟಿ ವರ್ಷಗಳಿಂದ 6.6 ಕೋಟಿ ವರ್ಷಗಳ ಹಿಂದೆ ಬದುಕಿದ್ದ ದೈತ್ಯ ಹಾವಾಗಿತ್ತು. ಆ ಹಾವಿನ ಉದ್ದ ಅಗಲದ ದಾಖಲೆಗಳನ್ನೂ ಈ ಪಳೆಯುಳಿಕೆಯು ಮೀರಿಸುತ್ತಿತ್ತು.

ಮ್ಯಾಡ್ಸೊಐಡ್‌ ಕುಟುಂಬಕ್ಕೆ ಸೇರಿದ್ದರೂ ತನ್ನದೇ ವಿಶೇಷ ರಚನೆಗಳನ್ನು ಹೊಂದಿದ್ದ ಈ ಹಾವನ್ನು ವಿಜ್ಞಾನಿಗಳು ‘ವಾಸುಕಿ ಇಂಡಿಕಸ್‌’ ಎಂದು ಕರೆದರು. ವಾಸುಕಿ ಇಂಡಿಕಸ್‌ನ ಅತ್ಯಂತ ದೊಡ್ಡ ಬೆನ್ನುಮೂಳೆಯ ಅಗಲ 11 ಸೆಂ.ಮೀಟರ್‌. ಆ ಪ್ರಕಾರ ಆ ಹಾವಿನ ದೇಹದ ಅಗಲ 44 ಸೆಂ.ಮೀ. ಎಂದು ಅಂದಾಜಿಸಲಾಗಿತ್ತು. ಉದ್ದ ಮತ್ತು ಅಗಲದ ಆಧಾರದಲ್ಲಿ ಆ ಹಾವಿನ ತೂಕವನ್ನೂ ಅಂದಾಜು ಮಾಡಲಾಯಿತು. ‘ವಾಸುಕಿ ಇಂಡಿಕಸ್‌’ ಸುಮಾರು ಒಂದು ಟನ್‌ ತೂಗುತ್ತಿತ್ತು ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದರು. ಹೀಗೆ ‘ವಾಸುಕಿ ಇಂಡಿಕಸ್‌’ನ ಈ ಪಳೆಯುಳಿಕೆಗಳು ಈವರೆಗೆ ದೊರೆತ ಅತ್ಯಂತ ದೊಡ್ಡ ಹಾವಿನ ಪಳೆಯುಳಿಕೆ ಎಂದಾಗಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ. 

‘ವಾಸುಕಿ ಇಂಡಿಕಸ್’ನ ಬೆನ್ನುಮೂಳೆಗಳ ಪಳೆಯುಳಿಕೆಗಳು

‘ವಾಸುಕಿ ಇಂಡಿಕಸ್’ನ ಬೆನ್ನುಮೂಳೆಗಳ ಪಳೆಯುಳಿಕೆಗಳು

ಮೊಸಳೆ, ಮೀನೇ ಆಹಾರ

ಬೆನ್ನುಮೂಳೆಯ ಪಳೆಯುಳಿಕೆಗಳು ಹಾವಿನದ್ದು ಎಂದು ಗೊತ್ತಾದ ನಂತರ, ಅವುಗಳ ಜತೆಯಲ್ಲೇ ದೊರೆತಿದ್ದ ಹಲ್ಲಿನ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಮತ್ತೆ ಪರಿಶೀಲಿಸಿದರು. ‘ವಾಸುಕಿ ಇಂಡಿಕಸ್‌’ ಬದುಕಿದ್ದ ಕಾಲದಲ್ಲೇ ಇದ್ದ ದೈತ್ಯ ಮೊಸಳೆಗಳು ಮತ್ತು ಮೀನುಗಳ ಹಲ್ಲುಗಳ ಪಳೆಯುಳಿಕೆಗಳು ಅದಾಗಿದ್ದವು. 

ಆ ಕಾಲದ ಮೊಸಳೆ ಮತ್ತು ಮೀನುಗಳು ‘ವಾಸುಕಿ ಇಂಡಿಕಸ್‌’ನ ಪ್ರಧಾನ ಆಹಾರ ಎಂಬ ನಿರ್ಧಾರಕ್ಕೆ ಬಂದರು. ಇದಲ್ಲದೇ ಇನ್ನಷ್ಟು ದೈತ್ಯ ಜಲಚರಗಳನ್ನೂ ‘ವಾಸುಕಿ’ ಆಹಾರವಾಗಿ ಸೇವಿಸುತ್ತಿತ್ತು. ದೈತ್ಯ ದೇಹದ ಕಾರಣ ಈ ಹಾವು ಅತ್ಯಂತ ನಿಧಾನವಾಗಿ ಚಲಿಸುತ್ತಿತ್ತು. ಅರೆಜೌಗು ಪ್ರದೇಶವು ವಾಸುಕಿ ಇಂಡಿಕಸ್‌ನ ಆವಾಸಸ್ಥಾನವಾಗಿತ್ತು. ಇದು ಹೊಂಚುಹಾಕಿ ಕುಳಿತು ಬೇಟೆಯಾಡುತ್ತಿತ್ತು. ಬಲಿಪ್ರಾಣಿಯನ್ನು ನುಂಗಿದ ನಂತರ ಈಗಿನ ಹೆಬ್ಬಾವುಗಳಂತೆಯೇ ವಿಶ್ರಮಿಸುತ್ತಿತ್ತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ವಾಸುಕಿ ಇಂಡಿಕಸ್‌ ಬದುಕಿದ್ದ ಕಾಲದಲ್ಲಿ ಈಗಿನ ಗುಜರಾತ್‌ನ ಕಛ್‌ ಅರೆಜೌಗು ಪ್ರದೇಶದಂತೆಯೇ ಇತ್ತು. ವರ್ಷದ ಕೆಲವು ತಿಂಗಳುಗಳಲ್ಲಿ ಸಮುದ್ರದ ನೀರು ಇಲ್ಲಿ ತುಂಬಿಕೊಳ್ಳುತ್ತಿತ್ತು ಮತ್ತು ನಂತರ ಸಮುದ್ರದ ನೀರು ಹಿಂದೆ ಸರಿಯುತ್ತಿತ್ತು. ಅಂತಹ ಅರೆಜೌಗು ಪ್ರದೇಶವು ವಾಸುಕಿ ಇಂಡಿಕಸ್‌ಗೆ ಅಗತ್ಯವಿದ್ದ ಮೊಸಳೆ ಮತ್ತು ಮೀನುಗಳನ್ನು ಒದಗಿಸಿಕೊಡುತ್ತಿತ್ತು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

‘ವಾಸುಕಿ ಇಂಡಿಕಸ್‌’

‘ಹಿಂದೂ ಪುರಾಣಗಳಲ್ಲಿ ಬರುವ ವಾಸುಕಿಯ ಹೆಸರನ್ನೇ ಈ ಹಾವಿಗೆ ಇಡಲಾಗಿದೆ’ ಎಂದು ಅಧ್ಯಯನ ವರದಿಯಲ್ಲಿ ವಿಜ್ಞಾನಿಗಳು ಹೇಳಿದ್ದಾರೆ. ಇದಷ್ಟೇ ಅಲ್ಲದೇ, ಭಾರತದ ನೆಲದಲ್ಲೇ ‘ವಾಸುಕಿ ಇಂಡಿಕಸ್‌’ ಉಪಪ್ರಬೇಧವು ವಿಕಾಸವಾಗಿತ್ತು. 

ಗೊಂಡ್ವಾನಾ ಮಹಾಖಂಡದಿಂದ ಭಾರತ ಉಪಖಂಡವು ಬೇರ್ಪಟ್ಟು, ಯುರೇಷ್ಯಾ ಖಂಡದತ್ತ ಚಲಿಸುತ್ತಿದ್ದ ಕಾಲವದು. ಈಗಿನ ಭಾರತದ ಪಶ್ಚಿಮ ಭಾಗ, ಈಗಿನ ಪಾಕಿಸ್ತಾನದಲ್ಲಿ ‘ವಾಸುಕಿ ಇಂಡಿಕಸ್‌’ ಯಥೇಚ್ಛವಾಗಿದ್ದವು. ಭಾರತ ಉಪಖಂಡವು ಯುರೇಷ್ಯಾ ಖಂಡಕ್ಕೆ ಜತೆಯಾದ ನಂತರ ಈ ಹಾವುಗಳು ಯುರೇಷ್ಯಾಗೂ ದಾಟಿಕೊಂಡವು. ನಂತರದಲ್ಲಿ ಆಫ್ರಿಕಾ ಖಂಡಕ್ಕೂ ಹೋದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಹಾವು ಭಾರತದಲ್ಲೇ ವಿಕಾಸವಾಗಿದ್ದರಿಂದಲೂ ಅದಕ್ಕೆ ಭಾರತದ್ದೇ ಹೆಸರು ಇಡಲಾಗಿದೆ ಎಂಬುದು ವಿಜ್ಞಾನಿಗಳ ವಿವರಣೆ.

ಈ ಹಾವಿಗೆ ನಮ್ಮ ಕಾಲದ ವಾಸುಕಿ ಎಂಬ ಹೆಸರು ಇಡಲಾಗಿದೆ. ಆದರೆ ಈ ಹಾವಿನ ಪ್ರಭೇದ ಸಂಪೂರ್ಣವಾಗಿ ಅಳಿದುಹೋಗಿ 4.63 ಕೋಟಿ ವರ್ಷಗಳ ನಂತರ ಆಧುನಿಕ ಮಾನವ ‘ಹೋಮೊ ಸೆಪಿಯನ್ಸ್‌’ ವಿಕಾಸವಾಗಿದ್ದು.

ಗರಿಷ್ಠ ಉಷ್ಣಾಂಶ

‘ವಾಸುಕಿ ಇಂಡಿಕಸ್‌’ ಎಲ್ಲಾ ಹಾವುಗಳಂತೆ ತಣ್ಣನೆಯ ರಕ್ತದ ಸರೀಸೃಪವಾಗಿತ್ತು. ಹೀಗಾಗಿ ಅದಕ್ಕೆ ಅತಿಬಿಸಿಯ ಅವಶ್ಯಕತೆ ಇತ್ತು. ಅದು ಬದುಕಿದ್ದ ಅವಧಿಯಲ್ಲಿ, ಅಂದರೆ ಸುಮಾರು 4.7 ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲ್ಮೈ ಸರಾಸರಿ ಉಷ್ಣಾಂಶವೂ ಅಧಿಕವಾಗೇ ಇದ್ದಿರಬೇಕು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ತಣ್ಣನೆಯ ರಕ್ತದ ಇಷ್ಟು ದೈತ್ಯ ಹಾವೊಂದು ಜೀವಿಸಬೇಕಾದರೆ 27 ಡಿಗ್ರಿ ಸೆಲ್ಸಿಯಸ್‌ನಿಂದ 28.5 ಡಿಗ್ರಿ ಸೆಲ್ಸಿಯಸ್‌ನಷ್ಟಾದರೂ ಸರಾಸರಿ ಉಷ್ಣಾಂಶ ಇರಬೇಕಿತ್ತು. ಇದು ಭೂಮಿಯ ಈಗಿನ ಸರಾಸರಿ ಉಷ್ಣಾಂಶಕ್ಕಿಂತ ಕಡಿಮೆ. ಬಹುಶಃ 4.7 ಕೋಟಿ ವರ್ಷಗಳ ಹಿಂದೆ ಭೂಮಿಯ ಭೂಮಿಯ ಮೇಲ್ಮೈ ಉಷ್ಣಾಂಶ ಈಗಿನದಕ್ಕಿಂತ ಹೆಚ್ಚೇ ಇದ್ದಿರಬೇಕು ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ. ‘ವಾಸುಕಿ ಇಂಡಿಕಸ್‌’ ಬದುಕಿದ್ದ ಅವಧಿಗಿಂತ 1.5 ಕೋಟಿ ವರ್ಷಗಳಷ್ಟು ಹಿಂದೆಯೇ ಡೈನೊಸಾರ್‌ಗಳು ಅಳಿದು ಹೋಗಿದ್ದವು. ವಿವಿಧ ಕಾರಣಗಳಿಂದಾಗಿ ಭೂಮಿಯ ಮೇಲಿನ ಉಷ್ಣಾಂಶ ಇಳಿಕೆಯಾಗಿದ್ದೇ ಡೈನೊಸಾರ್‌ಗಳು ಅಳಿದುಹೋಗಲು ಕಾರಣ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅತಿಹೆಚ್ಚು ಉಷ್ಣಾಂಶದಲ್ಲಿ ಬದುಕಿದ್ದ ‘ವಾಸುಕಿ ಇಂಡಿಕಸ್‌’ ಉಷ್ಣಾಂಶ ಇಳಿಕೆಯಾಗಿದ್ದರಿಂದಲೇ ಅಳಿದು ಹೋಯಿತೇ ಎಂಬುದರತ್ತ ಈಗ ಸಂಶೋಧನೆ ಮುಂದುವರಿದಿದೆ.

ಆಧಾರ: ‘ಸೈಂಟಿಫಿಕ್‌ ರಿಪೋರ್ಟ್‌’ನಲ್ಲಿ ಪ್ರಕಟವಾದ ಸುನೀಲ್‌ ವಾಜಪೇಯಿ ಮತ್ತು ದೇವಜಿತ್ ದತ್ತಾ ಅವರ ಸಂಶೋಧನಾ ವರದಿ, ಪಿಐಬಿ ಪತ್ರಿಕಾ ಪ್ರಕಟಣೆ, ರಾಯಿಟರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT