ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ-ಅಗಲ | ಹರಿಯಾಣ: ಬದಲಾಗುತ್ತಿದೆಯೇ ರಾಜಕೀಯ ಸಮೀಕರಣ...

Published 11 ಮೇ 2024, 0:30 IST
Last Updated 11 ಮೇ 2024, 0:30 IST
ಅಕ್ಷರ ಗಾತ್ರ

ಹರಿಯಾಣದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮೂವರು ಪಕ್ಷೇತರ ಶಾಸಕರು ಬೆಂಬಲ ವಾಪಸ್‌ ಪಡೆದದ್ದು ಈಗಾಗಲೇ ಹಳೆಯ ವಿಚಾರ. ಸರ್ಕಾರ ಅಲ್ಪಮತಕ್ಕೆ ಜಾರಿದ್ದರೂ, ಅದು ಇನ್ನೂ ನಾಲ್ಕು ತಿಂಗಳವರೆಗೆ ಸುರಕ್ಷಿತ. ಬಿಜೆಪಿ ಸರ್ಕಾರ ಸುರಕ್ಷಿತ ಎಂದಾದರೂ, ಈ ಕ್ಷಿಪ್ರ ಬೆಳವಣಿಗೆ ಬೇರೆಯದ್ದೇ ರಾಜಕೀಯ ಸಮೀಕರಣವನ್ನು ಸೂಚಿಸುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ಈ ಸಮೀಕರಣ ಪರಿಣಾಮಕಾರಿಯೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲು ಲೋಕಸಭಾ ಚುನಾವಣೆಯ ಫಲಿತಾಂಶದವರೆಗೂ ಕಾಯಬೇಕು. ಆದರೆ ಈ ಬೆಳವಣಿಗೆಯು ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಪ್ರಭಾವಿಸುತ್ತದೆ ಎಂದೇ ಹೇಳಲಾಗುತ್ತಿದೆ.

ಹರಿಯಾಣದ ಬಿಜೆಪಿ ಸರ್ಕಾರ ಅಸ್ಥಿರವಾಗಿದೆ. ಸರಳ ಬಹುಮತವನ್ನು ಕಳೆದುಕೊಂಡು ಅಲ್ಪಮತಕ್ಕೆ ಜಾರಿದೆ. ಇದೇ ವರ್ಷದ ಮಾರ್ಚ್‌ನಲ್ಲೂ ಇಂಥದ್ದೇ ಸ್ಥಿತಿಯನ್ನು ರಾಜ್ಯ ಬಿಜೆಪಿ ಸರ್ಕಾರ ಎದುರಿಸಿತ್ತು. ಆಗ ಸರ್ಕಾರ ಬೀಳುವ ಸ್ಥಿತಿ ಎದುರಾಗಿತ್ತು. ಈಗಲೂ ಅಂಥದ್ದೇ ಸ್ಥಿತಿ ಬಂದಿದೆ. ಆದರೆ ತಾಂತ್ರಿಕ ಕಾರಣದಿಂದ ಸರ್ಕಾರ ಉಳಿದುಕೊಂಡಿದೆ. ಆ ತಾಂತ್ರಿಕ ಕಾರಣದಿಂದ ಇನ್ನೂ ನಾಲ್ಕು ತಿಂಗಳವರೆಗೆ ಸರ್ಕಾರ ಉಳಿಯಬಹುದು. ಅಷ್ಟರ ವೇಳೆಗೆ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದೆ. ಹೀಗಾಗಿ ಹರಿಯಾಣದಲ್ಲಿ ಸರ್ಕಾರ ಬದಲಾಗುವ ಯಾವ ಸಾಧ್ಯತೆಯೂ ಈಗ ಇಲ್ಲ. ಆದರೆ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಲೋಕಸಭಾ ಚುನಾವಣೆ ಎಂದರೆ ತಪ್ಪಾಗಲಾರದು.

ಇದೇ ಮಾರ್ಚ್‌ನಲ್ಲಿ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಜಾರಿದ್ದು ಲೋಕಸಭಾ ಚುನಾವಣೆಯ ಕಾರಣದಿಂದಲೇ. 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತವೇನೂ ದೊರೆತಿರಲಿಲ್ಲ. 90 ಶಾಸಕರ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 46 ಶಾಸಕರ ಅಗತ್ಯವಿತ್ತು. ಆದರೆ ಬಿಜೆಪಿ ಗೆದ್ದಿದ್ದು 41ರಲ್ಲಿ ಮಾತ್ರ. ಇನ್ನೊಂದೆಡೆ ಕಾಂಗ್ರೆಸ್‌ 30 ಕ್ಷೇತ್ರಗಳಿಂದ ಆರಿಸಿಬಂದಿತ್ತು. ಆಗ ಬಿಜೆಪಿ ನೆರವಿಗೆ ಬಂದಿದ್ದು ಜೆಜೆಪಿ. ದುಷ್ಯಂತ್ ಸಿಂಗ್‌ ಚೌಟಾಲಾ ಅವರ ಜೆಜೆಪಿಯ 10 ಶಾಸಕರು ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ, ಬಿಜೆಪಿ ಸರ್ಕಾರ ರಚಿಸಿತು.

ಕೃಷಿ ಪ್ರಧಾನ ಸಮುದಾಯದ ಜಾಟರ ಮತಗಳನ್ನೇ ನೆಚ್ಚಿಕೊಂಡಿರುವ ಜೆಜೆಪಿಗೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು ಇರುಸುಮುರುಸು ಉಂಟುಮಾಡಿದರೂ, ಮೈತ್ರಿ ಮುರಿದುಬೀಳುವ ಹಂತಕ್ಕೆ ಅದು ಹೋಗಲಿಲ್ಲ. ಆದರೆ ಎರಡೂ ಪಕ್ಷಗಳ ನಡುವಣ ಸಂಬಂಧ ಹಳಸಿತ್ತು. ಪ್ರತಿಭಟನೆಗಾಗಿ ದೆಹಲಿಯತ್ತ ಹೊರಟಿದ್ದ ರೈತರನ್ನು ಹರಿಯಾಣ ಸರ್ಕಾರ ನಡೆಸಿಕೊಂಡ ರೀತಿ, ಜೆಜೆಪಿಯ ಮತಬುಟ್ಟಿಯನ್ನು ಸಡಿಲಗೊಳಿಸಿತ್ತು. ಅದು ಮುಂದಿನ ಚುನಾವಣೆಗಳಲ್ಲಿ ಜೆಜೆಪಿಗೆ ಮುಳುವಾಗುವ ಸಂಭವವಿತ್ತು ಎಂದೇ ಆಗ ರಾಜಕೀಯ ತಜ್ಞರು ವಿಶ್ಲೇಷಿಸಿದ್ದರು.

ಅಂತಹ ಪರಿಸ್ಥಿತಿಯ ಮಧ್ಯೆಯೇ ಲೋಕಸಭೆ ಚುನಾವಣೆ ಎದುರಾಯಿತು. ಈ ಬಾರಿ ಎನ್‌ಡಿಎಯ ಬಲ 400 ಸ್ಥಾನಗಳ ಗಡಿದಾಟುವ ಗುರಿ ಹಾಕಿಕೊಂಡಿದ್ದ ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ಸಣ್ಣ–ಪುಟ್ಟ ಪಕ್ಷಗಳ ಜತೆಗೂ ಮೈತ್ರಿಗೆ ಮುಂದಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಜೆಪಿ ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದವು. ರಾಜ್ಯ ವಿಧಾನಸಭೆಯಲ್ಲಿರುವ ಮೈತ್ರಿಯನ್ನು ಲೋಕಸಭೆಗೂ ವಿಸ್ತರಿಸಲು ಬಿಜೆಪಿ ಯತ್ನಿಸಿತು. ಹರಿಯಾಣದಲ್ಲಿರುವ 10 ಕ್ಷೇತ್ರಗಳ ಪೈಕಿ 9ರಲ್ಲಿ ಬಿಜೆಪಿ, 1ರಲ್ಲಿ ಜೆಜೆಪಿ ಸ್ಪರ್ಧಿಸುವ ಪ್ರಸ್ತಾವವನ್ನು ಇರಿಸಿತು. ಆ ಪ್ರಸ್ತಾಪವನ್ನು ಕಡಾಖಂಡಿತವಾಗಿ ತಿರಸ್ಕರಿಸಿದ ಜೆಜೆಪಿ ರಾಜ್ಯ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆಯಿತು. ಅಲ್ಪಮತಕ್ಕೆ ಜಾರಿದ ಸರ್ಕಾರವನ್ನು, ಆರು ಪಕ್ಷೇತರರು ಎಚ್‌ಎಲ್‌ಪಿಯ ಒಬ್ಬ ಶಾಸಕನ ಬೆಂಬಲ ಪಡೆದು ಬಿಜೆಪಿ ಉಳಿಸಿಕೊಂಡಿತು. ಆಗ ಬಿಜೆಪಿ ಸರ್ಕಾರವು ವಿಶ್ವಾಸಮತ ಸಾಬೀತುಪಡಿಸುವಂತೆ ಕಾಂಗ್ರೆಸ್‌ ಒತ್ತಾಯಿಸಿತ್ತು. ಮುಖ್ಯಮಂತ್ರಿಯನ್ನು ಬದಲಿಸಿದ ಬಿಜೆಪಿ, ಮಾರ್ಚ್‌ 12ರಂದು ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತು ಮಾಡಿತು.

ಹೀಗೆ ಒಮ್ಮೆ ಬಹುಮತ ಸಾಬೀತು ಮಾಡಿದ ನಂತರ ಮುಂದಿನ ಆರು ತಿಂಗಳವರೆಗೆ, ಮತ್ತೆ ಬಹುಮತ ಸಾಬೀತು ಮಾಡುವ ಅವಶ್ಯಕತೆ ಇರುವುದಿಲ್ಲ. ಅಂತಹ ಒಂದು ರಕ್ಷಣೆಯನ್ನು ಕಾನೂನು ಯಾವುದೇ ಸರ್ಕಾರಕ್ಕೂ ನೀಡಿದೆ. ಈಗ ಮತ್ತೆ ಅಲ್ಪಮತಕ್ಕೆ ಜಾರಿದ್ದರೂ ಬಿಜೆಪಿ ಸರ್ಕಾರಕ್ಕೆ ರಕ್ಷಣೆ ಇರುವುದು ಈ ಕಾನೂನಿನಿಂದಲೇ.

ಹೀಗಾಗಿಯೇ ಕಾಂಗ್ರೆಸ್‌ ಈಗ ವಿಶ್ವಾಸಮತ ಸಾಬೀತುಪಡಿಸುವಂತೆ ಆಗ್ರಹಿಸುತ್ತಿಲ್ಲ. ಬದಲಿಗೆ ನೈತಿಕತೆ ಆಧಾರದಲ್ಲಿ ಬಿಜೆಪಿಯೇ ಸರ್ಕಾರವನ್ನು ತ್ಯಾಗ ಮಾಡಬೇಕು ಮತ್ತು ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು ಎಂದು ಹೇಳಿಬಿಟ್ಟಿದೆ. ಇನ್ನೊಂದೆಡೆ ವಿಶ್ವಾಸಮತ ಸಾಬೀತಿಗೆ ಆಗ್ರಹಿಸಿ ಜೆಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿತ್ತು. ಆರು ತಿಂಗಳ ಅವಧಿವರೆಗೆ ಅದು ಸಾಧ್ಯವಿಲ್ಲ ಎಂದು ರಾಜ್ಯಪಾಲ ಭಂಡಾರು ದತ್ತಾತ್ರೇಯ ಅವರು ಸ್ಪಷ್ಟಪಡಿಸಿಯೂ ಆಯಿತು. ಮಾಜಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ‘ನಮ್ಮ ಸರ್ಕಾರ ಅಪಾಯದಲ್ಲಿ ಇಲ್ಲ. ಜೆಜೆಪಿಯ ಮೂವರು ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ನಾವು ಸುಲಭವಾಗಿ ಬಹುಮತ ಸಾಬೀತು ಮಾಡುತ್ತೇವೆ’ ಎಂದು ಹೇಳಿಕೆ ನೀಡಿದರು.

ಆದರೆ ಈ ಎಲ್ಲಾ ಬೆಳವಣಿಗೆಗಳಿಗಿಂತ ಈಗ ಹೆಚ್ಚು ಚರ್ಚಿತವಾಗುತ್ತಿರುವ ವಿಷಯವೆಂದರೆ, ಮೂವರು ಪಕ್ಷೇತರ ಶಾಸಕರು ಬಿಜೆಪಿ ತೊರೆದದ್ದು ಏಕೆ ಎಂಬುದು. ‘ರಾಜ್ಯದಲ್ಲಿ ಬಿಜೆಪಿ ದುರ್ಬಲ ವಾಗುತ್ತಿರುವುದನ್ನು ಇದು ಸೂಚಿಸುತ್ತದೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ವಿರುದ್ಧದ ಗಾಳಿ ಜೋರಾಗಿದೆ. ಅದು ಹರಿಯಾಣದಲ್ಲೂ ಬೀಸುತ್ತಿದೆ. ಬಿಜೆಪಿಯೇತರ ಪಕ್ಷಗಳಿಗೆ ಇದು ಅರಿವಾಗಿದೆ. ಹೀಗಾಗಿಯೇ ಅವು ಬಿಜೆಪಿಯಿಂದ ದೂರ ಸರಿಯುತ್ತಿವೆ’ ಎಂದು ಸಿಪಿಎಂ ಹರಿಯಾಣ ಘಟಕ ವಿಶ್ಲೇಷಿಸಿದೆ. ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಲೋಕಸಭಾ ಚುನಾವಣೆಯ ಫಲಿತಾಂಶವಷ್ಟೇ ಹೇಳಬಲ್ಲದು.

ಗುರುಗ್ರಾಮದ ಮಹಿರಾ ಹೋಮ್ಸ್‌ ಕಂಪನಿಯ 5,000 ಫ್ಲ್ಯಾಟ್‌ಗಳು ಅನರ್ಹ ಎಂದು ರೇರಾ ಘೋಷಿಸಿದೆ. ಫ್ಲ್ಯಾಟ್‌ ಖರೀದಿದಾರರ ನೆರವಿಗೆ ಬಿಜೆಪಿ ಸರ್ಕಾರ ಬರುತ್ತಿಲ್ಲ ಎಂದುಆ ಜನರು ಮತದಾನ ಬಹಿಷ್ಕರಿಸಿದ್ದಾರೆ. ಸರ್ಕಾರದ ಆಡಳಿತ ವೈಖರಿಯ ವಿರುದ್ಧ ರಾಜ್ಯದಾದ್ಯಂತ ಇಂತಹ ಹಲವು ಪ್ರತಿಭಟನೆಗಳು ನಡೆಯುತ್ತಿವೆ

ಗುರುಗ್ರಾಮದ ಮಹಿರಾ ಹೋಮ್ಸ್‌ ಕಂಪನಿಯ 5,000 ಫ್ಲ್ಯಾಟ್‌ಗಳು ಅನರ್ಹ ಎಂದು ರೇರಾ ಘೋಷಿಸಿದೆ. ಫ್ಲ್ಯಾಟ್‌ ಖರೀದಿದಾರರ ನೆರವಿಗೆ ಬಿಜೆಪಿ ಸರ್ಕಾರ ಬರುತ್ತಿಲ್ಲ ಎಂದು
ಆ ಜನರು ಮತದಾನ ಬಹಿಷ್ಕರಿಸಿದ್ದಾರೆ. ಸರ್ಕಾರದ ಆಡಳಿತ ವೈಖರಿಯ ವಿರುದ್ಧ ರಾಜ್ಯದಾದ್ಯಂತ ಇಂತಹ ಹಲವು ಪ್ರತಿಭಟನೆಗಳು ನಡೆಯುತ್ತಿವೆ

ಜೆಜೆಪಿಗೆ ಅಸ್ತಿತ್ವದ ಕಳವಳ

ಹರಿಯಾಣದಲ್ಲಿ ಜೆಜೆಪಿ ಅತ್ಯಂತ ಪ್ರಮುಖ ಪ್ರಾದೇಶಿಕ ಪಕ್ಷ. ಜಾಟರ ಮತಗಳನ್ನೇ ನೆಚ್ಚಿಕೊಂಡಿರುವ ಈ ಪಕ್ಷಕ್ಕೆ ರೈತರ ಬೆಂಬಲವೂ ಇದೆ. ಐದು ಲೋಕಸಭಾ ಕ್ಷೇತ್ರಗಳಲ್ಲಿ ಜಾಟರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್‌ ಮತ್ತು ಹರಿಯಾಣದ ರೈತರು ಹೋರಾಟ ಆರಂಭಿಸಿದ ಹೊಸದರಲ್ಲಿ ಜೆಜೆಪಿಯು ಕೇಂದ್ರದ ಬಿಜೆಪಿ ಪರವಾಗಿಯೇ ಇತ್ತು. ಆದರೆ ಹೋರಾಟ ತೀವ್ರಗೊಂಡ ಬಳಿಕ ಮತ್ತು ರೈತರ ಹೋರಾಟಕ್ಕೆ ಸರ್ಕಾರವು ಸ್ಪಂದಿಸದೇ ಇದ್ದಾಗ ಜೆಜೆಪಿ ತನ್ನ ನಿಲುವನ್ನು ಬದಲಿಸಿತ್ತು. ರೈತ ಹೋರಾಟದಲ್ಲಿ ಭಾಗಿಯಾಗಿದ್ದ ಜಾಟರನ್ನು ರಾಜ್ಯ ಬಿಜೆಪಿ ನಾಯಕರು ಅವಹೇಳನ ಮಾಡಿದ್ದರು. ಬಿಜೆಪಿಯೊಂದಿಗೆ ಮೈತ್ರಿಯಲ್ಲಿದ್ದ ಜೆಜೆಪಿಗೆ ಈ ಎಲ್ಲವೂ ಮುಳುವಾಗಿದ್ದವು. ಅದರ ಜತೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಬಿಜೆಪಿ ಪ್ರಸ್ತಾಪ ಮುಂದಿರಿಸಿದಾಗ, ಜೆಜೆಪಿಗೆ ಕಾಡಿದ್ದು ಅಸ್ತಿತ್ವದ ಪ್ರಶ್ನೆ.

ತಕ್ಷಣವೇ ಮೈತ್ರಿಯಿಂದ ಹೊರಬಂದ ಜೆಜೆಪಿ ಲೋಕಸಭೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿತು. ಜೆಜೆಪಿ ಮುಖ್ಯಸ್ಥ ದುಷ್ಯಂತ್ ಸಿಂಗ್‌ ಚೌಟಾಲಾ, ‘ಸ್ವಾಭಿಮಾನಕ್ಕೆ ಧಕ್ಕೆ ಮಾಡಿಕೊಂಡು ಮೈತ್ರಿಯಲ್ಲಿ ಇರಲು ಸಾಧ್ಯವಿಲ್ಲ. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜಾಟರಿಗೆ ಮತ್ತು ರೈತರಿಗೆ ಅವಮಾನ ಮಾಡಿದ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಘೋಷಿಸಿದರು. ಅಂತೆಯೇ ಎಲ್ಲಾ 10 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು. ಒಟ್ಟು, ಜಾಟ್‌ ಸಮುದಾಯದ ಮತಗಳು ಬಿಜೆಪಿಯಿಂದ ದೂರ ಸರಿದಿವೆ ಎಂಬುದನ್ನೇ ಇದು ಸೂಚಿಸುತ್ತದೆ. ಇದು ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ ಅಭ್ಯರ್ಥಿ ದೀಪಿಂದರ್ ಸಿಂಗ್ ಹೂಡಾ ಪ್ರಚಾರ ರ‍್ಯಾಲಿ. ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ಕಾಂಗ್ರೆಸ್‌ 9ರಲ್ಲಿ, ಎಎಪಿ 1 ಕ್ಷೇತ್ರದಲ್ಲಿ ಕಣಕ್ಕೆ ಇಳಿದಿವೆ. ಈ ಎರಡೂ ಪಕ್ಷಗಳ ಪರವಾಗಿ ಎಡಪಕ್ಷಗಳೂ ಪ್ರಚಾರ ನಡೆಸುತ್ತಿವೆ.

ಕಾಂಗ್ರೆಸ್‌ ಅಭ್ಯರ್ಥಿ ದೀಪಿಂದರ್ ಸಿಂಗ್ ಹೂಡಾ ಪ್ರಚಾರ ರ‍್ಯಾಲಿ. ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ಕಾಂಗ್ರೆಸ್‌ 9ರಲ್ಲಿ, ಎಎಪಿ 1 ಕ್ಷೇತ್ರದಲ್ಲಿ ಕಣಕ್ಕೆ ಇಳಿದಿವೆ. ಈ ಎರಡೂ ಪಕ್ಷಗಳ ಪರವಾಗಿ ಎಡಪಕ್ಷಗಳೂ ಪ್ರಚಾರ ನಡೆಸುತ್ತಿವೆ.

ಆಡಳಿತ ವಿರೋಧಿ ಅಲೆಯೇ...

ಲೋಕಸಭಾ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ನಡೆಯುವುದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೊ ವ್ಯಾಪಕವಾಗಿ ಹರಿದಾಡಿತ್ತು. ಬಿಜೆಪಿ ಬಾವುಟ ಇರುವ ಕಾರುಗಳ ಮೇಲೆ ಜನರು ದಾಳಿ ನಡೆಸುತ್ತಿರುವ ವಿಡಿಯೊ ಅದಾಗಿತ್ತು. ‘ಬಿಜೆಪಿ ಆಡಳಿತದ ಬಗ್ಗೆ ಜನರು ಬೇಸತ್ತು ಹೋಗಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ’ ಎಂದು ಆ ವಿಡಿಯೊಕ್ಕೆ ವಿವರಣೆ ನೀಡಲಾಗಿತ್ತು. ಅದು ಹಳೆಯ ವಿಡಿಯೊ, ಅದನ್ನು ಈಗ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್‌ಚೆಕ್‌ ಘಟಕವು ಫ್ಯಾಕ್ಟ್‌ಚೆಕ್‌ ಪ್ರಕಟಿಸಿತ್ತು.

ಆದರೆ ಆನಂತರದ ದಿನಗಳಲ್ಲಿ ಅಂತಹ ಹತ್ತಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಬಂದವು. ಮತ ಕೇಳಲು ಬಂದ ಬಿಜೆಪಿ ಅಭ್ಯರ್ಥಿಗಳನ್ನು ಪ್ರಶ್ನಿಸುವ, ಅವರ ವಾಹನಗಳ ಮೇಲೆ ದಾಳಿ ನಡೆಸುವ, ಅವರನ್ನು ಅಟ್ಟಾಡಿಸಿಕೊಂಡು ಹೋಗುವ, ಅಭ್ಯರ್ಥಿಗಳ ಮೇಲೆ ದಾಳಿ ನಡೆಸುವ ವಿಡಿಯೊಗಳೂ ಬಂದವು. ಆ ಎಲ್ಲಾ ವಿಡಿಯೊಗಳು ಹರಿಯಾಣದ್ದು ಎಂಬ ವಿವರಣೆ ಹೊಂದಿದ್ದವು. ಈ ವಿಡಿಯೊಗಳನ್ನು ಯಾವ ಫ್ಯಾಕ್ಟ್‌ಚೆಕ್‌ ಸಹ ನಿರಾಕರಿಸಲಿಲ್ಲ. ಆದರೆ ಇವು ನಿಜವಾದ ವಿಡಿಯೊಗಳು ಎಂದು ‘ಇಂಡಿಯಾ’ ಮೈತ್ರಿಕೂಟದ ಮಿತ್ರಪಕ್ಷಗಳು ಹೇಳಿದವು. ಜೆಜೆಪಿಯೂ ಇದೇ ಮಾತನ್ನು ಹೇಳುತ್ತಿದೆ.

‘ಬಿಜೆಪಿ ಪರವಾಗಿ ಮತ ಕೇಳಲು ಹೋದವರಿಗೆ ಜನರಿಂದ ಏಟು ಬೀಳುತ್ತಿದೆ. ರೈತರು ಮತ್ತು ಜಾಟರನ್ನು ಸರ್ಕಾರ ನಡೆಸಿಕೊಂಡ ರೀತಿಯ ಬಗ್ಗೆ ಜನರಿಗೆ ಸಿಟ್ಟಿದೆ. ಅದನ್ನು ಈ ರೀತಿ ಹೊರಹಾಕುತ್ತಿದ್ದಾರೆ’ ಎಂದು ಜೆಜೆಪಿಯ ಚೌಟಾಲಾ ಹೇಳಿಕೆ ನೀಡಿದ್ದರು. ಆ ಪ್ರಕಾರ ಜಾಟರು ಪ್ರಧಾನವಾಗಿರುವ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮತ ಕೇಳಲು ಬರುವ ಅಭ್ಯರ್ಥಿಗಳನ್ನು ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಇದನ್ನು ಬಿಜೆಪಿಯ ಮಾಧ್ಯಮಗಳು ತೋರಿಸುವುದಿಲ್ಲ ಎಂದೂ ಅವರು ಹೇಳಿದ್ದರು.

‘ಇಂಡಿಯಾ’ ಮೈತ್ರಿಕೂಟದಲ್ಲಿರುವ ಎಡಪಕ್ಷಗಳೂ ಇದನ್ನೇ ಹೇಳುತ್ತಿವೆ. ‘ಬಿಜೆಪಿ ಅಭ್ಯರ್ಥಿಗಳಿಗೆ ಜನರು ಕಪ್ಪುಬಾವುಟ ತೋರಿಸುತ್ತಿದ್ದಾರೆ. 2019ರಲ್ಲಿ ಪುಲ್ವಾಮಾ ದಾಳಿಯ ಅಲೆಯಲ್ಲಿ ಬಿಜೆಪಿ ಹತ್ತೂ ಕ್ಷೇತ್ರಗಳನ್ನು ಗೆದ್ದುಕೊಂಡುಬಿಟ್ಟಿತು. ನಂತರದ ಕೆಲವೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 75 ಸ್ಥಾನ ಗೆಲ್ಲುತ್ತೇವೆ ಎಂದು ಘೊಷಿಸಿಕೊಂಡಿತ್ತು. ಆದರೆ ಗೆದ್ದಿದ್ದು 41 ಮಾತ್ರ. ಈಗ ಪುಲ್ವಾಮದಂತಹ ಅಲೆ ಇಲ್ಲ. ಬದಲಿಗೆ ರೈತ ಹೋರಾಟ, ಎಂಎಸ್‌ಪಿಗೆ ಕಾನೂನು ಬೆಂಬಲ ಮತ್ತು ಅಗ್ನಿವೀರ ಯೋಜನೆಯ ಅಲೆ ಬಿಜೆಪಿಗೆ ವಿರುದ್ಧವಾಗಿ ಬೀಸುತ್ತಿದೆ. 10 ಕ್ಷೇತ್ರಗಳ ಪೈಕಿ ಬಿಜೆಪಿ ಐದು ಕ್ಷೇತ್ರಗಳನ್ನಾದರೂ ಕಳೆದುಕೊಳ್ಳಲಿದೆ. ಅಷ್ಟು ಆಡಳಿತ ವಿರೋಧಿ ಅಲೆ ಇದೆ’ ಎಂದು ಸಿಪಿಎಂ ಹೇಳಿದೆ.

ಬಿಜೆಪಿ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಯ ಪರಿಣಾಮವಾಗಿಯೇ ಪಕ್ಷೇತರ ಶಾಸಕರು ಬಿಜೆಪಿಯ ಸಖ್ಯ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT