ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಮಹಾರಾಷ್ಟ್ರ ಲೋಕ ಕಣ: ಗೊಂದಲದ ಗೂಡು

Published 25 ಏಪ್ರಿಲ್ 2024, 19:53 IST
Last Updated 25 ಏಪ್ರಿಲ್ 2024, 19:53 IST
ಅಕ್ಷರ ಗಾತ್ರ
ದೇಶದಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳು ಇರುವುದು ಉತ್ತರ ಪ್ರದೇಶದಲ್ಲಿ, ಆನಂತರದ ಸ್ಥಾನ ಮಹಾರಾಷ್ಟ್ರದ್ದು. ಅತ್ತ ಮಧ್ಯಭಾರತ ಮತ್ತು ಇತ್ತ ಪಶ್ಚಿಮ ಭಾರತಕ್ಕೆ ಸೇರುವ ಈ ದೊಡ್ಡ ರಾಜ್ಯವು ಲೋಕಸಭೆಗೆ 48 ಸಂಸದರನ್ನು ಚುನಾಯಿಸಿ ಕಳುಹಿಸುತ್ತದೆ. ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಬಿಜೆಪಿ–ಶಿವಸೇನಾ ಮೈತ್ರಿಕೂಟವು ಕ್ರಮವಾಗಿ 42 ಮತ್ತು 41 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಈ ಅಂಕಿಗಳನ್ನು ನೋಡಿದರೆ ಈ ಬಾರಿಯೂ ಬಿಜೆಪಿ–ಶಿವಸೇನಾ ಮೈತ್ರಿಕೂಟವು ಏಕಪಕ್ಷೀಯವಾಗಿ ಗೆಲ್ಲುತ್ತದೆ ಎಂದೆನಿಸದೆ ಇರದು. ಆದರೆ, ಹಾಗೆ ಅಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ 2019ರ ನಂತರ ಮಹಾರಾಷ್ಟ್ರದ ರಾಜಕೀಯ ಸಮೀಕರಣವೇ ಬದಲಾಗಿ ಹೋಗಿದೆ.

ಮಹಾರಾಷ್ಟ್ರದಲ್ಲಿ ಈ ಹಿಂದಿನ, ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಒಟ್ಟಿಗೇ ಕಣಕ್ಕೆ ಇಳಿದಿದ್ದವು. ಮರಾಠಾ ಮೀಸಲಾತಿಯ ಹೋರಾಟ ಮತ್ತು ತೀವ್ರ ಬರದ ಹೊರತಾಗಿಯೂ ಈ ಮೈತ್ರಿಕೂಟವು 41 ಕ್ಷೇತ್ರಗಳಲ್ಲಿ ಜಯಗಳಿಸಲು ಸಾಧ್ಯವಾಗಿತ್ತು. ಆನಂತರ 2019ರ ಅಕ್ಟೋಬರ್‌ನಲ್ಲಿ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಶಿವಸೇನಾ ಮತ್ತು ಬಿಜೆಪಿ ಮಧ್ಯೆ ಬಿರುಕು ಮೂಡಿತ್ತು. ಮೈತ್ರಿಕೂಟಕ್ಕೆ ಬಹುಮತವಿದ್ದರೂ ಸರ್ಕಾರ ರಚಿಸುವಲ್ಲಿ ವಿಫಲವಾಯಿತು. ಬದಲಾದ ಪರಿಸ್ಥಿತಿಯಲ್ಲಿ ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಸೇರಿ ಮೈತ್ರಿಕೂಟ ರೂಪಿಸಿ, ಸರ್ಕಾರ ರಚಿಸಿದವು. ಆ ಸರ್ಕಾರವನ್ನು ಮಹಾ ವಿಕಾಸ ಆಘಾಡಿ (ಎಂವಿಎ) ಎಂದು ಕರೆಯಲಾಯಿತು. ಅದು ಮಹಾರಾಷ್ಟ್ರದ ರಾಜಕಾರಣದಲ್ಲಿ ಹೊಸ ರಾಜಕೀಯ ಸಂಯೋಜನೆಯಾಯಿತು.

ಆನಂತರ ಶಿವಸೇನಾವನ್ನು ಛಿದ್ರಮಾಡಿದ ಬಿಜೆಪಿ ಮತ್ತೆ ಸರ್ಕಾರ ರಚಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಲೋಕಸಭಾ ಚುನಾವಣೆಯ ಮೇಲೆ ವರ್ಷದ ಹಿಂದೆಯೇ ಕಣ್ಣಿರಿಸಿದ್ದ ಬಿಜೆಪಿ ಶರದ್ ಪವಾರ್ ಅವರ ಎನ್‌ಸಿಪಿಯನ್ನೂ ಒಡೆಯಿತು. ಪರಿಣಾಮವಾಗಿ ಮಹಾರಾಷ್ಟ್ರದಲ್ಲಿನ ಈಗಿನ ಸರ್ಕಾರದ ಪಾಲುದಾರರು ಶಿವಸೇನಾ–ಎನ್‌ಸಿಪಿ (ಅಜಿತ್ ಬಣ)–ಬಿಜೆಪಿ. ಇದರ ಜತೆಯಲ್ಲೇ ಶಿವಸೇನಾ (ಉದ್ಧವ್ ಬಣ), ಎನ್‌ಸಿಪಿ (ಶರದ್ ಬಣ) ಎಂಬ ಎರಡು ಹೊಸ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ. ಇಲ್ಲಿ ಈ ಹಿಂದೆ ಪ್ರಬಲ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಈಗ ಮಿತ್ರಪಕ್ಷಗಳ ಆಣತಿಯಂತೆ ನಡೆಯುವ ಮಟ್ಟಕ್ಕೆ ಕುಸಿದಿದೆ.

ಈ ಎಲ್ಲಾ ಬೆಳವಣಿಗೆಗಳ ಕಾರಣದಿಂದಲೇ ಈ ಚುನಾವಣೆಯು ತೀರಾ ಸಂಕೀರ್ಣ ಎಂಬಂತಾಗಿದೆ. ಇಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಗಳು ಮಾತ್ರ ಕಣಕ್ಕೆ ಇಳಿದಿದ್ದರೂ, ಪ್ರತಿ ಲೋಕಸಭಾ ಕ್ಷೇತ್ರದ ಪರಿಸ್ಥಿತಿ–ಸಮೀಕರಣ–ಹೊಂದಾಣಿಕೆ ಪರಸ್ಪರ ಭಿನ್ನವಾಗಿಯೇ ಇದೆ. ‘ಇಲ್ಲಿನ 48 ಕ್ಷೇತ್ರಗಳನ್ನೂ ಪ್ರತ್ಯೇಕವಾಗಿಯೇ ನೋಡಬೇಕಾಗುತ್ತದೆ. ಹೆಸರಿಗಷ್ಟೇ ಎರಡು ಮೈತ್ರಿಕೂಟವಿದ್ದರೂ ಒಂದೆಡೆ ಪರಸ್ಪರ ಸೆಣೆಸುತ್ತಿರುವ ಪಕ್ಷಗಳು, ಇನ್ನೊಂದು ಕ್ಷೇತ್ರದಲ್ಲಿ ತೆರೆಮರೆಯ ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ಫಲಿತಾಂಶವನ್ನು ಊಹಿಸುವುದು ಕಷ್ಟ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಲೋಕಸಭಾ ಚುನಾವಣೆಗೆ ಇನ್ನೂ ವರ್ಷವಿದೆ ಎನ್ನುವಾಗಲೇ ರಾಜ್ಯ ಬಿಜೆಪಿ ಘಟಕವು ಅದಕ್ಕೆ ಸಿದ್ಧತೆ ನಡೆಸಿತ್ತು. ಎನ್‌ಸಿಪಿಯ ಅಜಿತ್ ಪವಾರ್ ಅವರನ್ನು ತನ್ನತ್ತ ಸೆಳೆದುಕೊಂಡಿತು. ಆ ಮೂಲಕ ಶರದ್ ಪವಾರ್ ಅವರ ಎನ್‌ಸಿಪಿಯನ್ನು ದುರ್ಬಲಗೊಳಿಸಿತು. ಅದಕ್ಕೂ ಮೊದಲೇ ಶಿವಸೇನಾವನ್ನು ದುರ್ಬಲಗೊಳಿಸಿಯಾಗಿತ್ತು. ಇವುಗಳ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ ಈಗ ಬಿಜೆಪಿಯೇ ಅತ್ಯಂತ ಪ್ರಬಲ ಪಕ್ಷ ಎನಿಸಿದೆ. ಯಾವುದೇ ಮೈತ್ರಿಕೂಟ ಹೆಚ್ಚು ಸ್ಥಾನ ಗೆದ್ದರೂ, ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇರುವುದು ಬಿಜೆಪಿಗೆ ಮಾತ್ರ ಎಂದು ತಜ್ಞರು ಅಂದಾಜಿಸುತ್ತಾರೆ.

ಇನ್ನೊಂದೆಡೆ ಈ ಬಾರಿಯ ಹೊಂದಾಣಿಕೆ ರಾಜಕಾರಣ ಎಷ್ಟು ಗೋಜಲು–ಗೋಜಲಾಗಿದೆ ಎಂಬುದು ಈಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಆಘಾಡಿ (ವಿಬಿಎ) ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನೊಟ್ಟಿಗೆ ಮೈತ್ರಿ ಮಾಡಿಕೊಂಡಿದೆ. ವಿಬಿಎ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ನಾಲ್ಕು ಕ್ಷೇತ್ರಗಳಲ್ಲಿ ಬೆಂಬಲಿಸಿದೆ. ಆದರೆ ಆ ಕ್ಷೇತ್ರಗಳಲ್ಲಿ ಮರಾಠಾ ಹೋರಾಟಗಾರರ ಪಕ್ಷ ಜನರಂಗದ ಜತೆಗೂ ವಿಬಿಎ ಮೈತ್ರಿಮಾಡಿಕೊಂಡಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಆದರೆ ಈಗ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿರುವುದು ಬಿಜೆಪಿ ಪರ ವರ್ಸಸ್‌ ಬಿಜೆಪಿ ವಿರುದ್ಧ ಎಂಬುದರ ಆಧಾರದಲ್ಲಿ. ವಿಬಿಎ ಆಗಲೀ, ಜನರಂಗವಾಗಲೀ ಬಿಜೆಪಿಯನ್ನು ಪ್ರಬಲವಾಗಿ ವಿರೋಧಿಸಿಯೇ ಇಲ್ಲ. ಅಂತಹ ಸಂದರ್ಭದಲ್ಲಿ ಯಾವುದೇ ಪ್ರಬಲ ಪಕ್ಷ ಬಿಜೆಪಿ ವಿರುದ್ಧ ಕಣಕ್ಕೆ ಇಳಿಯದೇ ಇರುವುದು, ಬಿಜೆಪಿಗೆ ಅನುಕೂಲವಾಗಲಿ. ಇದರ ಅರಿವಿದ್ದೂ ಕಾಂಗ್ರೆಸ್‌ ನಾಲ್ಕೂ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದು, ಬದಲಿಗೆ ಕಾಂಗ್ರೆಸ್‌ ಅನ್ನು ವಿಬಿಎ ಬೆಂಬಲಿಸುತ್ತಿರುವುದು ಒಂದು ಕ್ಷೇತ್ರದಲ್ಲಿ ಮಾತ್ರ. ಇದು ಕಾಂಗ್ರೆಸ್‌ಗೆ, ಅಂತಿಮವಾಗಿ ಇಂಡಿಯಾ ಮೈತ್ರಿಕೂಟಕ್ಕೆ ನಷ್ಟವೇ ಸರಿ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಬಿಜೆಪಿಯು ಶಿವಸೇನಾ ಮತ್ತು ಎನ್‌ಸಿಪಿ (ಅಜಿತ್ ಬಣ) ಜೊತೆಗೆ ಇನ್ನೂ ನಾಲ್ಕಾರು ಪಕ್ಷಗಳ ಒಟ್ಟಿಗೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಯು ರಾಜ್‌ ಠಾಕ್ರೆಯ ಎಂಎನ್‌ಎಸ್‌ ಒಟ್ಟಿಗೆ ಮೈತ್ರಿ ಮಾಡಿಕೊಂಡಿದೆ. ಎಂಎನ್‌ಎಸ್‌ ಎರಡು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯುವುದಾಗಿ ಪಟ್ಟು ಹಿಡಿದಿದೆ. ಆದರೆ ಈ ಸಂಬಂಧ ಇನ್ನೂ ಒಪ್ಪಂದ ಅಂತಿಮವಾಗಿಲ್ಲ. ಅಲ್ಲದೆ, ದನಗಾಹಿ ಸಮುದಾಯದ ಪಕ್ಷ ಆರ್‌ಎಸ್‌ಪಿ ಒಟ್ಟಿಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಶರದ್ ಪವಾರ್ ಭದ್ರಕೋಟೆಯಾದ ಬಾರಾಮತಿಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು (ಅಜಿತ್ ಪತ್ನಿ ಸುನೇತ್ರಾ ಪವಾರ್) ಆರ್‌ಎಸ್‌ಪಿ ಬೆಂಬಲಿಸಿದೆ. ಆದರೆ ಬೇರೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ತನ್ನದೇ ಪ್ರಬಲರನ್ನು ಕಣಕ್ಕೆ ಇಳಿಸಿದೆ. ಇದು ಬಿಜೆಪಿಗೆ ಮಾರಕವಾಗಲಿದೆ ಎಂದೇ ಎಣಿಸಲಾಗಿದೆ. ಹೀಗೆ ಎರಡೂ ಮೈತ್ರಿಕೂಟಗಳಲ್ಲಿನ ಹೊಸ ಮಿತ್ರಪಕ್ಷಗಳು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಹಲವೆಡೆ ಮಾರಕವೇ ಆಗಿವೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಎಲ್ಲಾ ಪಕ್ಷಗಳಿಗೂ ಇದು ಹೊಸ ಸ್ವರೂಪದ ರಾಜಕೀಯ ಪರಿಸ್ಥಿತಿ ಆಗಿದೆ. ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳು ಒಡೆದು, ನಾಲ್ಕಾಗಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ ತಮಗೆ ಪೂರಕ ವಲ್ಲದ ಮೈತ್ರಿ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡಿವೆ. ಇಂತಹ ಗೊಂದಲಕಾರಿ ಸನ್ನಿವೇಶದಲ್ಲಿ ಮತದಾರ ತನ್ನ ನಿರ್ಣಯವನ್ನು ಹೇಗೆ ಮಾಡುತ್ತಾನೆ ಎಂಬುದನ್ನು ಫಲಿತಾಂಶವೇ ಹೇಳಬೇಕಷ್ಟೆ.

ಕುತೂಹಲ ಕೆರಳಿಸಿದ ಬಾರಾಮತಿ

ಶರದ್‌ ಪವಾರ್ ಅವರ ಎನ್‌ಸಿಪಿಯ ಭದ್ರಕೋಟೆ ಎಂದೇ ಹೇಳಲಾಗುವ ಬಾರಾಮತಿಯಲ್ಲಿ, ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಕಣಕ್ಕೆ ಇಳಿದಿದ್ದಾರೆ. ಆದರೆ ಅವರ ವಿರುದ್ಧ ಪವಾರ್ ಕುಟುಂಬದ ಸುನೇತ್ರಾ ಪವಾರ್ ಅವರನ್ನೇ ಬಿಜೆಪಿಯು ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ. ಜತೆಗೆ ಈ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ದನಗಾಹಿ ಸಮುದಾಯದ ಆರ್‌ಎಸ್‌ಪಿ ಒಟ್ಟಿಗೆ ಮೈತ್ರಿ ಮಾಡಿಕೊಂಡಿದೆ. ಇವೆಲ್ಲವೂ ಸುಪ್ರಿಯಾ ಅವರಿಗೆ ಮಾರಕವಾಗಲಿದೆ ಎಂದು ಅಂದಾಜಿಸಲಾಗಿದೆ. ಸುನೇತ್ರಾ ಅವರು ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಬಿಜೆಪಿ ನಾಯಕರು.

ಆದರೆ ಇಲ್ಲಿನ ಜನರು ಶರದ್ ಪವಾರ್ ಅವರ ಕೈಬಿಡುವುದಿಲ್ಲ ಎಂಬುದು ಶರದ್ ಪವಾರ್ ಬಣದ ಎನ್‌ಸಿಪಿ ನಾಯಕರ ನಂಬಿಕೆ. ಇದರೊಟ್ಟಿಗೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಾಗಿತ್ತು. ಸ್ವತಃ ನರೇಂದ್ರ ಮೋದಿ ಅವರೇ ಅಜಿತ್ ಮತ್ತು ಸುನೇತ್ರಾ ಅವರನ್ನು ಮಹಾಭ್ರಷ್ಟರು ಎಂದು ಕರೆದಿದ್ದರು ಮತ್ತು ₹25,000 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಅಂತಹ ಸುನೇತ್ರಾ ಅವರನ್ನೇ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕೆ ಇಳಿಸಿದ್ದು, ಹಿನ್ನಡೆಯೇ ಸರಿ ಎಂದು ಅರ್ಥೈಸಲಾಗುತ್ತಿದೆ. ಬುಧವಾರವಷ್ಟೇ ಮುಂಬೈ ಪೊಲೀಸರು ಸುನೇತ್ರಾ ಅವರಿಗೆ ಈ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ನೀಡಿದ್ದಾರೆ.  ಶರದ್‌ ಬಣದವರು ಇದನ್ನು, ‘ಬಿಜೆಪಿಯ ವಾಷಿಂಗ್‌ ಮೆಷಿನ್‌ ಮತ್ತೆ ಕೆಲಸ ಮಾಡಿದೆ’ ಎಂದು ಟೀಕಿಸುತ್ತಿದ್ದಾರೆ. ಇದು ಸುನೇತ್ರಾ ಅವರಿಗೆ ಮಾರಕವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

  • 48: ಒಟ್ಟು ಕ್ಷೇತ್ರಗಳು

  • 5: ಏಪ್ರಿಲ್‌ 19ರ ಮೊದಲ ಹಂತದಲ್ಲಿ ಮತದಾನ ನಡೆದ ಕ್ಷೇತ್ರಗಳ ಸಂಖ್ಯೆ

  • 8: ಏಪ್ರಿಲ್‌ 26ರ ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ

  • 11: ಮೇ 7ರ ಮೂರನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ

  • 11: ಮೇ 13ರ ಮೂರನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ

  • 13: ಮೇ 20ರ ಮೂರನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT