ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | 'ರಾಮಾಯಣ ಸರ್ಕಿಟ್‌' ಅಭಿವೃದ್ಧಿಗೆ ಅನುದಾನವೇ ಇಲ್ಲ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
Published 21 ಜನವರಿ 2024, 21:07 IST
Last Updated 21 ಜನವರಿ 2024, 21:07 IST
ಅಕ್ಷರ ಗಾತ್ರ

ರಾಮಾಯಣ ಕಾವ್ಯದಲ್ಲಿ ಉಲ್ಲೇಖಿಸಲಾದ ಪ್ರಮುಖ ಕ್ಷೇತ್ರಗಳನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ‘ರಾಮಾಯಣ ಸರ್ಕಿಟ್‌’ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರವು 2015ರಲ್ಲಿ ಘೋಷಿಸಿತ್ತು. ರಾಮಾಯಣದ ಸೀತಾ ಸ್ವಯಂವರ, ವನವಾಸ, ಅಸುರರ ವಧೆ, ವಾಲಿ–ಸುಗ್ರೀವರ ಯುದ್ಧ... ಮೊದಲಾದ ಘಟನೆಗಳಿಗೆ ಸಂಬಂಧಿಸಿದ 15 ಕ್ಷೇತ್ರಗಳನ್ನು ಕೇಂದ್ರ ಸರ್ಕಾರವು ಈ ಯೋಜನೆಗಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ ಯೋಜನೆ ಘೋಷಣೆಯಾಗಿ ಎಂಟು ವರ್ಷಗಳಾದರೂ 15 ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಅನುಮೋದನೆ ಮತ್ತು ಅನುದಾನ ದೊರೆತದ್ದು ಎರಡು ಕ್ಷೇತ್ರಗಳಿಗೆ ಮಾತ್ರ.

ಈ ಯೋಜನೆ ಅಡಿ ಆಯ್ಕೆ ಮಾಡಲಾದ ಕ್ಷೇತ್ರಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಮತ್ತು ಅದಕ್ಕಾಗಿ ಅಗತ್ಯವಿರುವ ಅನುದಾನದ ಬಗ್ಗೆ ಪ್ರಸ್ತಾವಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಸೂಚಿಸಿತ್ತು. ಈ ಪ್ರಕಾರ ರಾಜ್ಯ ಸರ್ಕಾರಗಳು ಸಲ್ಲಿಸಿದ್ದ ಪ್ರಸ್ತಾವಗಳನ್ನು ಪ್ರವಾಸೋದ್ಯಮ ಸಚಿವಾಲಯವು ಪರಿಗಣಿಸಿಲ್ಲ. ಈ ಸಂಬಂಧ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ವಿವಿಧ ಪಕ್ಷಗಳ ಸಂಸದರು ಈವರೆಗೆ 14 ಬಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರತಿ ಬಾರಿಯೂ ಸಚಿವಾಲಯವು, ಪ್ರಸ್ತಾವಗಳನ್ನು ಪರಿಗಣಿಸಲಾಗಿಲ್ಲ ಎಂದಷ್ಟೇ ಉತ್ತರ ನೀಡಿದೆ. ಆದರೆ ಏತಕ್ಕೆ ಎಂಬುದನ್ನು ಸಚಿವಾಲಯ ವಿವರಿಸಿಲ್ಲ.

‘ಪ್ರಸ್ತಾವ ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ಹಲವು ಬಾರಿ ಸೂಚಿಸಲಾಗಿತ್ತು. ಯೋಜನೆಯ ನಿಬಂಧನೆಗಳಿಗೆ ಒಳಪಟ್ಟ ಪ್ರಸ್ತಾವಗಳಿಗೆ ಅನುಮೋದನೆ ಸಿಗುತ್ತದೆ. ಯೋಜನೆಗೆ ತೆಗೆದಿರಿಸಿದ ಅನುದಾನ ಲಭ್ಯವಿದ್ದರಷ್ಟೇ ಅನುಮೋದನೆ ದೊರೆಯುತ್ತದೆ. ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದು, ಅದರ ಬಳಕೆ ತೃಪ್ತಿಕರವಾಗಿಲ್ಲದೇ ಇದ್ದರೆ ಅನುಮೋದನೆ ದೊರೆಯುವುದಿಲ್ಲ ಮತ್ತು ಹೆಚ್ಚುವರಿ ಅನುದಾನವೂ ದೊರೆಯುವುದಿಲ್ಲ’ ಎಂದು ಹೇಳಿದೆ. ತೀರಾ ಇತ್ತೀಚೆಗೆ ಅಂದರೆ 2023ರ ಡಿಸೆಂಬರ್ 18ರಂದು ಸಂಸತ್ತಿಗೆ ನೀಡಿರುವ ಉತ್ತರದಲ್ಲಿ, ‘ಉತ್ತರ ಪ್ರದೇಶದ ಚಿತ್ರಕೂಟ ಮತ್ತು ಅಯೋಧ್ಯೆ ಅಭಿವೃದ್ಧಿ ಪ್ರಸ್ತಾವಗಳಿಗೆ ಮಾತ್ರ ಅನುಮೋದನೆ ದೊರೆತಿದೆ. ಬೇರೆ ಯಾವುದೇ ಪ್ರಸ್ತಾವಗಳಿಗೆ ಅನುಮೋದನೆ ದೊರೆತಿಲ್ಲ’ ಎಂದು ಹೇಳಿದೆ.

ರಾಮಾಯಣ ಕಾವ್ಯದ ಪ್ರಕಾರ ಮಹತ್ವ ಪಡೆದ ಇನ್ನಿತರ ಕ್ಷೇತ್ರಗಳ ಅಭಿವೃದ್ಧಿಗೆ ಅನುಮೋದನೆ ಮತ್ತು ಅನುದಾನ ನೀಡುವಂತೆ ಅಥವಾ ಅವುಗಳನ್ನು ರಾಮಾಯಣ ಸರ್ಕಿಟ್‌ಗೆ ಸೇರಿಸುವಂತೆ ಹಲವು ರಾಜ್ಯಗಳು ಸಲ್ಲಿಸಿದ ಪ್ರಸ್ತಾವವನ್ನೂ ಕೇಂದ್ರ ಸರ್ಕಾರ ಅನುಮೋದಿಸಿಲ್ಲ.

ಬಿಹಾರದಲ್ಲಿನ ಬಕ್ಸಾರ್‌, ಸೀತಾಮಢೀ ಮತ್ತು ದರ್ಬಾಂಗ್‌ ಪ್ರದೇಶಗಳು ರಾಮಾಯಣದ ದೃಷ್ಟಿಯಿಂದ ಮಹತ್ವದ್ದಾಗಿವೆ. ರಾಮಾಯಣ ಸರ್ಕಿಟ್‌ ಅಡಿಯಲ್ಲಿ ಅವುಗಳ ಅಭಿವೃದ್ಧಿಗೆ ಸಲ್ಲಿಸಲಾಗಿದ್ದ ಪ್ರಸ್ತಾವಗಳು ಹಲವು ಬಾರಿ ತಿರಸ್ಕೃತವಾಗಿವೆ. ರಾಮಾಯಣ ಸರ್ಕಿಟ್‌ ಮತ್ತು ಸ್ವದೇಶಿ ದರ್ಶನ 2.0 ಯೋಜನೆ ಅಡಿಯಲ್ಲಿ ಈ ಪ್ರಸ್ತಾವಗಳನ್ನು ಕೇಂದ್ರ ತಿರಸ್ಕರಿಸಿತ್ತು. ನಂತರ ‘ಪ್ರಶಾದ್‌’ ಯೋಜನೆ ಅಡಿಯಲ್ಲಿ ಈ ಪ್ರಸ್ತಾವಗಳನ್ನು ಪರಿಗಣಿಸುವುದಾಗಿ ಬಿಹಾರ ಸರ್ಕಾರಕ್ಕೆ ಭರವಸೆ ನೀಡಿತ್ತು. ರಾಜ್ಯಸಭೆಯಲ್ಲೂ ಈ ಸಂಬಂಧ ಪ್ರವಾಸೋದ್ಯಮ ಸಚಿವಾಲಯವು ಲಿಖಿತ ಉತ್ತರ ನೀಡಿತ್ತು. ಆದರೆ ‘ಪ್ರಶಾದ್‌’ ಯೋಜನೆ ಅಡಿಯಲ್ಲೂ ಈ ಪ್ರಸ್ತಾವಗಳನ್ನು ಪರಿಗಣಿಸಿಲ್ಲ.

ಉತ್ತರ ಪ್ರದೇಶಕ್ಕಷ್ಟೇ ಅನುದಾನ ಬಿಡುಗಡೆ

* ರಾಮಾಯಣ ಸರ್ಕೀಟ್‌ ಯೋಜನೆಗೆ ಕೇಂದ್ರ ಸರ್ಕಾರವು ಆಯ್ಕೆ ಮಾಡಿದ್ದ ರಾಜ್ಯಗಳು ಮತ್ತು ಕ್ಷೇತ್ರಗಳು

  • ಉತ್ತರ ಪ್ರದೇಶ

1. ಅಯೋಧ್ಯೆ: ₹127.21 ಕೋಟಿ ಮಂಜೂರು ಮಾಡಿದೆ

2. ಚಿತ್ರಕೂಟ: ₹69.45 ಕೋಟಿ ಮಂಜೂರು ಮಾಡಿದೆ

3. ನಂದಿಗ್ರಾಮ:

4. ಶೃಂಗವೆರ್‌ಪುರ: ರಾಮ, ಸೀತೆ ಮತ್ತು ಲಕ್ಷ್ಮಣ ವನವಾಸದ ಸಂದರ್ಭದಲ್ಲಿ ಗಂಗಾನದಿಯನ್ನು ದಾಟಿದ ಪ್ರದೇಶ ಇದು ಎಂಬ ಪ್ರತೀತಿ ಇದೆ. ಈ ಪ್ರದೇಶದ ಅಭಿವೃದ್ಧಿ ಪ್ರಸ್ತಾವಕ್ಕೂ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ

  • ಬಿಹಾರ

5. ಸೀತಾಮಢೀ: ಜನಕ ರಾಜನಿಗೆ ಸೀತೆ ದೊರೆತ ಸ್ಥಳ ಎಂದು ಪರಿಗಣಿಸಲಾಗುವ ‘ಪುನೌರಾ ಧಾಮ’ ಸೀತಾಮಢೀ ಜಿಲ್ಲೆಯಲ್ಲಿದೆ. ಇದರ ಅಭಿವೃದ್ಧಿ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ

6–7: ಬಕ್ಸಾರ್ ಮತ್ತು ದರ್ಬಾಂಗಾ: ಜನಕ ರಾಜನ ರಾಜ್ಯ ಮತ್ತು ಸೀತೆಯ ಬಾಲ್ಯಕ್ಕೆ ಸಂಬಂಧಿಸಿದ ಹಲವು ಕ್ಷೇತ್ರಗಳು ಈ ಎರಡೂ ಜಿಲ್ಲೆಗಳಲ್ಲಿ ಇವೆ. ಇವುಗಳ ಅಭಿವೃದ್ಧಿಗೆ ಬಿಹಾರ ಸರ್ಕಾರ ಸಲ್ಲಿಸಿದ್ದ ಒಂದು ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಇನ್ನೊಂದು ಪ್ರಸ್ತಾವವನ್ನು ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಹೇಳಿತ್ತು. ಆದರೆ ಈವರೆಗಿನ ಯಾವ ಯೋಜನೆಯಲ್ಲೂ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿಲ್ಲ

  • ಮಧ್ಯಪ್ರದೇಶ

8. ಚಿತ್ರಕೂಟ: ಉತ್ತರ ಪ್ರದೇಶದ ಚಿತ್ರಕೂಟಕ್ಕೆ ನೀಡಲಾಗಿರುವ ಅನುದಾನದಲ್ಲಿಯೇ ಮಧ್ಯಪ್ರದೇಶದಲ್ಲಿನ ಚಿತ್ರಕೂಟದ ಭಾಗವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ

  • ಛತ್ತೀಸಗಢ

9. ಜಗದಲಪುರ: ಛತ್ತೀಸಗಢ ಸರ್ಕಾರದ ಪ್ರಸ್ತಾವದ ಪ್ರಕಾರ ಜಗದಲಪುರದ ‘ಕೋಟಮಸರ್ ಗುಹೆ’ಗಳಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ನೆಲೆಸಿದ್ದರು ಎಂಬ ನಂಬಿಕೆ ಇದೆ. ಈ ಕ್ಷೇತ್ರದ ಅಭಿವೃದ್ಧಿ ಸಂಬಂಧ ಛತ್ತೀಸಗಢ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ ಅನುಮೋದನೆ ದೊರೆತಿಲ್ಲ

  • ಒಡಿಶಾ

10. ಮಹೇಂದ್ರಗಿರಿ: ರಾಮನು ಜನಕನ ಅರಮನೆಯಲ್ಲಿ ಶಿವ ಧನುಸ್ಸನ್ನು ಮುರಿಯುವಾಗ ಪರಶುರಾಮ ಈ ಪರ್ವತದಲ್ಲಿ ತಪಸ್ಸಿನಲ್ಲಿದ್ದ ಎಂಬ ನಂಬಿಕೆ ಇದೆ. ಒಡಿಶಾ ಸರ್ಕಾರದ ಪ್ರಸ್ತಾವದಲ್ಲೂ ಇದನ್ನೇ ಉಲ್ಲೇಖಿಸಲಾಗಿದೆ. ಈ ಪರ್ವತದ ಅಭಿವೃದ್ಧಿಗೆ ಎಂದು ಸಲ್ಲಿಸಲಾಗಿದ್ದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ

  • ಮಹಾರಾಷ್ಟ್ರ

11. ನಾಗಪುರ: ಋಷಿ–ಮುನಿಗಳಿಗೆ ತೊಂದರೆ ನೀಡುತ್ತಿದ್ದ ಅಸುರರನ್ನು ನಿರ್ನಾಮ ಮಾಡುವುದಾಗಿ ರಾಮನು ಪಣತೊಟ್ಟ ತಪೋಗಿರಿ ನಾಗಪುರ ಜಿಲ್ಲೆಯಲ್ಲಿದೆ ಎಂದು ಜಿಲ್ಲಾ ಅಧಿಕೃತ ಜಾಲತಾಣದಲ್ಲಿ ವಿವರಿಸಲಾಗಿದೆ. ತಪೋಗಿರಿಯ ಅಭಿವೃದ್ಧಿಗೆ ಎಂದು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ ಅನುಮೋದನೆ ದೊರೆತಿಲ್ಲ

12. ನಾಸಿಕ್‌: ರಾಮಾಯಣ ಕಾವ್ಯದ ಪ್ರಕಾರ ರಾವಣನ ತಂಗಿ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ ಪ್ರದೇಶವೇ ನಾಶಿಕ್‌ ಅಥವಾ ನಾಸಿಕ್‌. ಈ ಪ್ರದೇಶದ ಅಭಿವೃದ್ಧಿಗೆ ಎಂದು ರೂಪಿಸಲಾಗಿದ್ದ ಪ್ರಸ್ತಾವಕ್ಕೂ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ

  • ತೆಲಂಗಾಣ

13.ಭದ್ರಾಚಲ: ರಾವಣನು ಸೀತೆಯನ್ನು ಅಪಹರಿಸಿದ ಅರಣ್ಯ ಪ್ರದೇಶವು ಭದ್ರಾಚಲದಲ್ಲಿದೆ ಎಂಬ ನಂಬಿಕೆ ಇದೆ. ಇಲ್ಲಿನ ಪರ್ಣಶಾಲಾವನ್ನು ಅಭಿವೃದ್ಧಿಪಡಿಸುವ ಪ್ರಸ್ತಾವಕ್ಕೆ ‘ರಾಮಾಯಣ ಸರ್ಕಿಟ್‌’ನಲ್ಲಿ ಅನುಮೋದನೆ ದೊರೆತಿಲ್ಲ. ‘ಪ್ರಶಾದ್‌’ ಯೋಜನೆ ಅಡಿಯಲ್ಲಿ 2022–23ನೇ ಸಾಲಿನಲ್ಲಿ ₹41.38 ಕೋಟಿ ಮಂಜೂರು ಮಾಡಲಾಗಿದೆ. ಆದರೆ ಮಂಜೂರಾದ ಹಣದಲ್ಲಿ ಈವರೆಗೆ (ಡಿಸೆಂಬರ್ 13, 2023) ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ

  • ಕರ್ನಾಟಕ

14. ಹಂಪಿ: ಹಂಪಿಯ ಆನೆಗುಂದಿಯು ಕಪಿಲರಾಜ ವಾಲಿಯ ರಾಜಧಾನಿಯಾಗಿತ್ತು ಎಂಬ ನಂಬಿಕೆ ಇದೆ. ಹನುಮಂತನ ಜನ್ಮಸ್ಥಳ ಎಂದು ನಂಬಲಾದ ಅಂಜನಾದ್ರಿಯೂ ಆನೆಗುಂದಿಯಲ್ಲಿದೆ. ಈ ಪ್ರದೇಶದ ಅಭಿವೃದ್ಧಿಯ ಪ್ರಸ್ತಾವಕ್ಕೂ ‘ರಾಮಾಯಣ ಸರ್ಕಿಟ್‌’ ಯೋಜನೆ ಸೇರಿ ಯಾವ ಯೋಜನೆ ಅಡಿಯಲ್ಲಿಯೂ ಅನುಮೋದನೆ ದೊರೆತಿಲ್ಲ

  • ತಮಿಳುನಾಡು

15. ರಾಮೇಶ್ವರ: ರಾಮಾಯಣ ಕಾವ್ಯದ ಹಲವು ಘಟನೆಗಳು ನಡೆಯುವುದು ರಾಮೇಶ್ವರದಲ್ಲಿ ಎಂಬ ನಂಬಿಕೆ ಇದೆ. ರಾಮನಾಥಸ್ವಾಮಿ ದೇವಾಲಯ, ರಾಮಪಾದ ಬೆಟ್ಟ, ಧನುಷ್ಕೋಡಿ... ಇವೆಲ್ಲವನ್ನೂ ಒಳಗೊಂಡ ಅಭಿವೃದ್ಧಿ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿಲ್ಲ

‘ವಾಲ್ಮೀಕಿ ನಗರ’ ಅಭಿವೃದ್ಧಿ ಪ್ರಸ್ತಾಪವಿಲ್ಲ

ರಾಮಾಯಣದ ಕರ್ತೃ ವಾಲ್ಮೀಕಿ ಮಹರ್ಷಿಯ ನೆಲೆ ಎಂದು ಪರಿಗಣಿಸಲಾದ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎಂದು ಬಿಹಾರ ಸರ್ಕಾರವು ಪ್ರವಾಸೋದ್ಯಮ ಸಚಿವಾಲಯವನ್ನು ಕೋರಿತ್ತು. ವಾಲ್ಮೀಕಿ ಆಶ್ರಮ, ಸೀತಾ ತಪೋವನ, ರಾಮನ ಅಶ್ವಮೇಧ ಯಾಗದ ಕುದುರೆಯನ್ನು ಲವ–ಕುಶರು ಕಟ್ಟಿಹಾಕಿದ ಪ್ರದೇಶ ಎಂದು ನಂಬಲಾದ ಸ್ಥಳಗಳನ್ನು ಒಳಗೊಂಡ ‘ವಾಲ್ಮೀಕಿ ನಗರ’ವನ್ನು ಅಭಿವೃದ್ಧಿಪಡಿಸಿ, ರಾಮಾಯಣ ಸರ್ಕಿಟ್‌ನಲ್ಲಿ ಅವುಗಳನ್ನು ಸೇರಿಸಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿತ್ತು.

ಆದರೆ ಸಂಸತ್ತಿಗೆ ನೀಡಿದ ಉತ್ತರದಲ್ಲಿ ಪ್ರವಾಸೋದ್ಯಮ ಸಚಿವಾಲಯವು, ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು ರಾಜ್ಯ ಸರ್ಕಾರಗಳ ಹೊಣೆ. ಹೀಗಿದ್ದೂ ಕೆಲವು ಯೋಜನೆಗಳಿಗೆ ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ. ಆದರೆ ವಾಲ್ಮೀಕಿ ನಗರ ಅಭಿವೃದ್ಧಿ ಪ್ರಸ್ತಾವವು ನಮ್ಮ ಪರಿಗಣನೆಯಲ್ಲಿ ಇಲ್ಲ ಎಂದು ಉತ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT