ಬೊಜ್ಜು ಈಗ ಜಾಗತಿಕ ಸಮಸ್ಯೆಯಾಗಿದೆ. ಭಾರತದಲ್ಲೂ ಜನಾರೋಗ್ಯಕ್ಕೆ ದೊಡ್ಡ ಕಂಟಕವಾಗಿದೆ. ದೇಶದಲ್ಲಿ ಬೊಜ್ಜಿನ ಸಮಸ್ಯೆ ಮೂರು ಪಟ್ಟು ಹೆಚ್ಚಾಗಿದ್ದು, ಜನರಲ್ಲಿ ಮಧುಮೇಹ, ರಕ್ತದೊತ್ತಡ, ಹೃದ್ರೋಗ ಮುಂತಾದ ಕಾಯಿಲೆಗಳು ಹೆಚ್ಚುತ್ತಿವೆ. ಬೊಜ್ಜಿನ ಮೂಲ ಆಹಾರ ಪದ್ಧತಿಯಲ್ಲಿದೆ. ಅಧಿಕ ಉಪ್ಪು, ಸಕ್ಕರೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯು ಸ್ಥೂಲಕಾಯಕ್ಕೆ ಕಾರಣವಾಗುವುದಲ್ಲದೆ, ತೀವ್ರಗತಿಯಲ್ಲಿ ಕಾಯಿಲೆಗಳು ಹೆಚ್ಚಾಗಲು ಕಾರಣವಾಗಿದೆ.
ಪ್ರಸ್ತುತ ಭಾರತದಲ್ಲಿ ತಲಾ ಅಡುಗೆ ಎಣ್ಣೆ ಬಳಕೆಯ ಪ್ರಮಾಣ ವಾರ್ಷಿಕವಾಗಿ 20 ಕೆ.ಜಿ.ಗೂ ಅಧಿಕ ಇದೆ ಎನ್ನಲಾಗಿದೆ. ಐಸಿಎಂಆರ್ ಪ್ರಕಾರ, ತಲಾ ಅಡುಗೆ ಎಣ್ಣೆ ಬಳಕೆ ವಾರ್ಷಿಕ ಮಿತಿ 12 ಕೆ.ಜಿ., ಡಬ್ಲ್ಯುಎಚ್‌ಒ ಪ್ರಕಾರ ತಲಾ 13 ಕೆ.ಜಿ. ಇರಬೇಕು.
ದೊಡ್ಡವರಲ್ಲಿ ಮಾತ್ರವಲ್ಲ, ಮಕ್ಕಳಲ್ಲೂ ಸ್ಥೂಲಕಾಯದ ಸಮಸ್ಯೆ ಹೆಚ್ಚುತ್ತಿದೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಕುರುಕಲು ತಿಂಡಿಗಳ ಅತಿಯಾದ ಸೇವನೆಯೂ ಮುಖ್ಯ ಕಾರಣ. ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಟಿ.ವಿ. ವೀಕ್ಷಿಸುತ್ತಾ ಕುರುಕಲು ತಿಂಡಿ ತಿನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಮಕ್ಕಳಿಗೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಆದ್ದರಿಂದ ಎಣ್ಣೆಯಲ್ಲಿ ಕರಿದ ತಿನಿಸುಗಳ ಸೇವನೆ ಕಡಿಮೆ ಮಾಡಬೇಕು. ಬಾಲ್ಯಾವಸ್ಥೆಯಲ್ಲಿ ಕಂಡು ಬರುವ ಸ್ಥೂಲಕಾಯವು ಬಹುಬೇಗ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ನಿದ್ರಾಹೀನತೆ, ಸಂಧಿವಾತ ಸೇರಿ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು..–ಡಾ.ಸಂಜಯ್ ಕೆ.ಎಸ್., ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.