ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಭಾರತ: ಹಿರಿಯರಿಗಿಲ್ಲ ಆರ್ಥಿಕ ಭದ್ರತೆ

Published 3 ಅಕ್ಟೋಬರ್ 2023, 4:05 IST
Last Updated 3 ಅಕ್ಟೋಬರ್ 2023, 4:05 IST
ಅಕ್ಷರ ಗಾತ್ರ

ಒಂದು ಅಥವಾ ಎರಡು ಮಕ್ಕಳಿರುವ ಕುಟುಂಬ. ಕೊನೆಯ ಪಕ್ಷ ಒಂದು ಗಂಡು ಮಗುವಿದ್ದರೆ ಹೇಗೋ ಕೊನೆಗಾಲ ಕಳೆಯುತ್ತದೆ. ಎರಡೂ ಹೆಣ್ಣಾದರೆ ಕೊನೆಗಾಲಕ್ಕೆ ಕಷ್ಟ (ಈ ತಪ್ಪು ಕಲ್ಪನೆಗಳು ಭಾರತೀಯ ಕುಟುಂಬ ವ್ಯವಸ್ಥೆಯ ಸಮಸ್ಯೆ). ಇರುವ ಮಗ ಹೇಗೆ ನೋಡಿಕೊಳ್ಳುತ್ತಾನೋ ತಿಳಿಯದು. ಸೊಸೆ ಹೇಗೋ ಏನೋ. ಮಕ್ಕಳಿಂದ ದೂರ ಇರುವುದು ಭಾವನಾತ್ಮಕವಾಗಿ ಆಗದ ವಿಷಯ. ಒಂದೊಮ್ಮೆ ದೂರ ಇದ್ದರೂ ವೃದ್ಧಾಪ್ಯದ ಕಾರಣದಿಂದ ತಲೆದೋರುವ ಹಲವು ಸಮಸ್ಯೆಗಳು. ಈ ಹಂತದಲ್ಲಿ ಒಂದೊಮ್ಮೆ ಗಂಡನೋ ಹೆಂಡತಿಯೋ ತೀರಿ ಹೋದರೆ ವೃದ್ಧಾಪ್ಯದಲ್ಲಿ ಜೀವನ ಸಾಗಿಸುವುದು ಯುದ್ಧವೇ ಸರಿ. ಹೇಗೋ ಗಂಡ ಜೀವನ ನಡೆಸಿಯಾನು. ಆದರೆ, ಹೆಂಡತಿ ಒಬ್ಬಳೇ ಆದರಂತೂ ಪರಾವಲಂಬನೆಯೇ ದಾರಿ. ಹೀಗೆ ಸಾಲು ಸಾಲು ಆತಂಕಗಳು ವೃದ್ಧರದು. ಈ ಆತಂಕಕ್ಕೆ ಜಾತಿ, ಧರ್ಮದ ಮಿತಿಗಳಿಲ್ಲ. ಇಂತಹ ಕೌಟುಂಬಿಕ ಸಮಸ್ಯೆಗಳ ಮಧ್ಯೆಯೇ ಭಾರತದಲ್ಲಿ 2050ರ ಹೊತ್ತಿಗೆ ವೃದ್ಧರ ಸಂಖ್ಯೆ ಹೆಚ್ಚಾಗಲಿದೆ ಎನ್ನುವ ವಿಶ್ವಸಂಸ್ಥೆಯ ವರದಿಯೊಂದು ಬಂದಿದೆ.

ವೃದ್ಧಾಪ್ಯದ ಬಹುದೊಡ್ಡ ಸಮಸ್ಯೆ ಭಾವನಾತ್ಮಕವಾದುದು. ಈ ಸಮಸ್ಯೆಯಿಂದ ಹೊರಬರುವ ದಾರಿ, ಸ್ವಾವಲಂಬನೆ ಮಾತ್ರ. ಈ ಕಾರಣಕ್ಕಾಗಿಯೇ ಭಾರತ ಸರ್ಕಾರವು ಹಲವು ಯೋಜನೆಗಳನ್ನು ಜಾರಿ ಮಾಡಿದೆ. 60 ವರ್ಷ ಮೇಲ್ಪಟ್ಟವರಿಗಾಗಿಯೇ ವೃದ್ಧಾಪ್ಯ ವೇತನ ನೀಡುವಂಥ ಪಿಂಚಣಿ ಯೋಜನೆಯನ್ನು ಸರ್ಕಾರ ಜಾರಿಯಲ್ಲಿಟ್ಟಿದೆ. ಇದೊಂದೇ ಅಲ್ಲದೆ, 60 ವರ್ಷ ಮೇಲ್ಪಟ್ಟವರಿಗಾಗಿ ಹಲವು ಅನುಕೂಲಗಳನ್ನೂ ಸರ್ಕಾರ ಮಾಡಿಕೊಡುತ್ತದೆ; ಹಲವು ವಿನಾಯಿತಿ, ರಿಯಾಯಿತಿಗಳೂ ಇವೆ. ವೃದ್ಧಾಶ್ರಮ ವ್ಯವಸ್ಥೆಯನ್ನು ಕೂಡ ಸರ್ಕಾರ ಮಾಡುತ್ತಿದೆ.

ಭಾರತದಲ್ಲಿ ವೃದ್ಧರಿಗಾಗಿಯೇ ಇರುವ ಪಿಂಚಣಿಯೂ ಸೇರಿದಂತೆ ಹಲವು ಯೋಜನೆಗಳ ಬಗ್ಗೆ, ಹಲವು ಅನುಕೂಲಗಳ ಬಗ್ಗೆ ವಿಶ್ವಸಂಸ್ಥೆಯ ವರದಿಯಲ್ಲಿ ಚರ್ಚಿಸಲಾಗಿದೆ. ಭಾರತದ ಯೋಜನೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಅದು ಆಡಿದೆ. ಆದರೂ, ಯೋಜನೆಗಳ ರೂಪುರೇಷೆಗಳು ಇನ್ನಷ್ಟು ವಿಸ್ತಾರಗೊಳ್ಳುವ ಹಾಗೂ ಇನ್ನಷ್ಟು ಜನರಿಗೆ, ಮುಖ್ಯವಾಗಿ ಗ್ರಾಮೀಣ ಪ್ರದೇಶದವರಿಗೆ ತಲುಪುವಂತಾಗಬೇಕು ಎಂದೂ ಸಲಹೆ ನೀಡಿದೆ.

ಈ ಹಿನ್ನೆಲೆಯಲ್ಲಿ, 60 ವರ್ಷ ಮೇಲ್ಪಟ್ಟವರು ಸ್ವಾವಲಂಬಿಯಾಗಲು ಅವರಿಗೆ ವೃದ್ಧಾಪ್ಯ ವೇತನ ನೀಡುತ್ತಿರುವ ಕೇಂದ್ರ ಸರ್ಕಾರದ ‘ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ’ (ಐಜಿಎನ್‌ಒಎಪಿಎಸ್‌) ಹಾಗೂ ಕರ್ನಾಟಕ ಸರ್ಕಾರದ ‘ಸಂಧ್ಯಾ ಸುರಕ್ಷಾ ಯೋಜನೆ’ಗೆ ಇಂದಿನ ಚರ್ಚೆಯನ್ನು ಸೀಮಿತಗೊಳಿಸಿಕೊಳ್ಳಲಾಗಿದೆ.

ಯೋಜನೆಗಳಲ್ಲಿ ಇವೆ ಹಲವು ಸಮಸ್ಯೆಗಳು

ಈ ಎರಡೂ ಯೋಜನೆಗಳ ಬಗ್ಗೆ ಕರ್ನಾಟಕ ಸರ್ಕಾರವು 2020ರಲ್ಲಿ ‘ಕರ್ನಾಟಕದ ಹಿರಿಯ ನಾಗರಿಕರ ಸ್ಥಿತಿಗತಿ ಅಧ್ಯಯನ’ ವರದಿಯೊಂದನ್ನು ಸಿದ್ಧಪಡಿಸಿತ್ತು. ಯೋಜನೆಗಳಲ್ಲಿ ಇರುವ ಅನನುಕೂಲಗಳನ್ನು ವರದಿಯಲ್ಲಿ ಚರ್ಚಿಸಲಾಗಿತ್ತು ಮತ್ತು ಅವುಗಳಿಗೆ ಸೂಕ್ತ ಪರಿಹಾರವನ್ನೂ ಸೂಚಿಸಲಾಗಿತ್ತು. 

ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯಲ್ಲಿ 60ರಿಂದ 64 ವರ್ಷದ ಒಳಗಿನ ವೃದ್ಧರಿಗೆ ಪ್ರತಿ ತಿಂಗಳು ₹600 ನೀಡಲಾಗುತ್ತದೆ. 65–80 ವರ್ಷಗಳವರಿಗೆ  ₹1,000 ನೀಡಲಾಗುತ್ತದೆ. ಈ ಯೋಜನೆಯ ಫಲಾನುಭವಿಗಳು ಬಡತನ ರೇಖೆಗಿಂತ ಕಡಿಮೆ ಇರುವವರು ಆಗಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 65 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳಿಗೆ ₹1,200 ನೀಡಲಾಗುತ್ತದೆ. ಯೋಜನೆಯಲ್ಲಿ ಬಿಪಿಎಲ್‌ ಹಾಗೂ ಎಪಿಎಲ್‌ ಚೀಟಿ ಹೊಂದಿರುವವರೂ ಸೇರಿದ್ದಾರೆ. 

* ಎರಡೂ ಯೋಜನೆಗಳಲ್ಲಿ ನೀಡಲಾಗುವ ವೇತನದ ಮೊತ್ತ ತೀರಾ ಕಡಿಮೆ ಎನ್ನುವುದು ಹಲವು ಫಲಾನುಭವಿಗಳ ಅಸಮಾಧಾನ. ಇಂದಿನ ಜೀವನಮಟ್ಟಕ್ಕೆ ಹೋಲಿಸಿಕೊಂಡರೆ ಈ ಮೊತ್ತವು ತೀರಾ ಕಡಿಮೆಯಾಗಿದೆ. ವೃದ್ಧಾಪ್ಯದಲ್ಲಿ ಸಹಜವಾಗಿ ಬರುವ ಕಾಯಿಲೆಗಳಿಗೆ, ಅಗತ್ಯವಿರುವ ಔಷಧಗಳಿಗೆ ಈ ಮೊತ್ತ ಸಾಕಾಗುವುದಿಲ್ಲ. ಜೊತೆಗೆ ಅರ್ಜಿಯ ಜೊತೆಯಲ್ಲಿ ಕೆಲವು ಶುಲ್ಕಗಳನ್ನೂ ಪಾವತಿಸಬೇಕಾಗಿದೆ. ಇದು ಕೂಡ ಹೊರೆಯೇ ಆಗಿದೆ

* ಅರ್ಜಿ ಸಲ್ಲಿಸುವುದಕ್ಕೆ ವೃದ್ಧರು ತಾಲ್ಲೂಕು ಕಚೇರಿಗೆ ಬರಬೇಕಾಗುತ್ತದೆ. ವರದಿಯಲ್ಲಿ ಅಂದಾಜಿಸಿರುವ ಪ್ರಕಾರ ವೃದ್ಧರು ತಾಲ್ಲೂಕು ಕಚೇರಿಗೆ ತಲುಪಲು ಸುಮಾರು 6 ಕಿ.ಮೀ ದೂರ (ಸರಾಸರಿ) ಪ್ರಯಾಣಿಸಬೇಕಾಗುತ್ತದೆ. ಪದೇ ಪದೇ ಇಷ್ಟು ದೂರ ಪ್ರಯಾಣಿಸುವುದು ಅವರಿಗೆ ತ್ರಾಸದಾಯಕವಾಗಿದೆ

* ಈ ಯೋಜನೆಗಳ ಹೆಚ್ಚಿನ ಫಲಾನುಭವಿಗಳು ಅನಕ್ಷರಸ್ಥರು ಮತ್ತು ಗ್ರಾಮೀಣರು. ಜೊತೆಗೆ, ಈ ಯೋಜನೆಗಳ ಅರ್ಜಿಗಳು ಉದ್ದುದ್ದ ಇರುತ್ತವೆ. ಇದನ್ನು ಭರ್ತಿ ಮಾಡುವಲ್ಲಿ ವೃದ್ಧರು ಕಷ್ಟ ಎದುರಿಸುತ್ತಿದ್ದಾರೆ. ಅರ್ಜಿಯಲ್ಲಿ ನಮೂದಿಸಲೇಬೇಕಾಗಿರುವ ತಮ್ಮ ಹುಟ್ಟಿನ ದಿನಾಂಕವು ಹಲವು ವೃದ್ಧರಿಗೆ ನೆನಪಿನಲ್ಲಿ ಇರುವುದಿಲ್ಲ. ಇದು ಕೂಡ ಬಹುದೊಡ್ಡ ಸಮಸ್ಯೆಯಾಗಿದೆ

* ವೃದ್ಧರು ಒಬ್ಬೊಬ್ಬರೇ ಜೀವಿಸುತ್ತಿದ್ದರೆ ಅವರ ಸಂಕಷ್ಟಗಳ ಸಾಲು ಹೆಚ್ಚು ಬೆಳೆಯುತ್ತದೆ. ಒಂಟಿಯಾಗಿ ಅರ್ಜಿ ಸಲ್ಲಿಸಲು ಹೋಗಬೇಕಾಗುತ್ತದೆ. ನಿಗದಿತ ದಿನಾಂಕದ ಒಳಗೆ ಅವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ, ಈ ಎಲ್ಲ ಹಂತದಲ್ಲಿ ಮೊಬೈಲ್‌ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಮೊಬೈಲ್‌ ಇಲ್ಲದ ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ

* ಈ ಯೋಜನೆಗಳು ಇರುವ ಬಗ್ಗೆ ಗ್ರಾಮೀಣ ಭಾಗದವರಲ್ಲಿ ಅರಿವಿನ ಕೊರತೆ ಇದೆ. ಟಿ.ವಿ., ರೇಡಿಯೊ ಸೇರಿದಂತೆ ಸಮೂಹ ಮಾಧ್ಯಮಗಳಲ್ಲಿ ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡದಿರುವುದು ತೊಡಕಾಗಿದೆ. ಒಂದೊಮ್ಮೆ ಹಣ ಪಡೆದುಕೊಳ್ಳುತ್ತಿದ್ದರೂ ಈ ವೇತನ ಯಾಕಾಗಿ ಬರುತ್ತಿದೆ, ಯಾರು ನೀಡುತ್ತಿದ್ದಾರೆ ಎನ್ನುವ ಮಾಹಿತಿಯೂ ಹಲವರಿಗೆ ಇಲ್ಲ

* ವೃದ್ಧಾಪ್ಯ ವೇತನವು ಅರ್ಜಿ ಸಲ್ಲಿಸಿದ ಕೂಡಲೇ ಎಲ್ಲಾ ಫಲಾನುಭವಿಗಳಿಗೂ ದೊರೆಯುತ್ತಿಲ್ಲ. ಕೆಲವರಿಗೆ ಮುಂದಿನ ತಿಂಗಳೇ ಬರುತ್ತದೆ. ಕೆಲವರಿಗೆ ಎರಡು ತಿಂಗಳ ನಂತರ ಬರುತ್ತದೆ, ಇನ್ನೂ  ಕೆಲವರಿಗೆ ಮೂರು ತಿಂಗಳ ನಂತರ ಬರುತ್ತದೆ. ಹಣವು ನೇರ ಬ್ಯಾಂಕ್‌ ಖಾತೆಗೆ ಬರುತ್ತದೆ. 80 ವರ್ಷ ಮೇಲ್ಪಟ್ಟವರಿಗೆ ಬ್ಯಾಂಕ್‌ಗಳಿಗೆ ತೆರಳಲು ಕಷ್ಟವಾಗುತ್ತಿದೆ. ಜೊತೆಗೆ, ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಕಾರ್ಡ್‌ ಜೋಡಿಸಬೇಕಾಗಿದೆ. ಈ ಹಂತದಲ್ಲಿಯೇ ಹಲವು ಸಮಸ್ಯೆಗಳು ಎದುರಾಗುತ್ತಿವೆ

ಶಿಫಾರಸುಗಳು

* ಸೇವಾ ಸಿಂಧು ಸೇವೆಯನ್ನು ಉಚಿತ ಮಾಡಬೇಕು. ಜೊತೆಗೆ, ಅರ್ಜಿಗಳನ್ನು ಗ್ರಾಮ ಪಂಚಾಯಿತಿಗಳಲ್ಲೂ ನೀಡುವಂತಾಗಬೇಕು. ಈ ಯೋಜನಗೆಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು. ಹೀಗೆ ಮಾಡುವುದರಿಂದ ಯೋಜನೆಗಳಲ್ಲಿ ಇರುವ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ

* ಅರ್ಜಿಯ ನಮೂನೆಗಳು ಸರಳವಾಗಿರಬೇಕು. ವೃದ್ಧಾಪ್ಯ ವೇತನವು ಮನೆ ಬಾಗಿಲಿಗೆ ತಲುಪುವಂತಾಗಬೇಕು 

* ಯೋಜನೆಗಳ ಬಗ್ಗೆ ಅಥವಾ ಯೋಜನೆಯ ಜಾರಿಯ ಬಗ್ಗೆ ದೂರುಗಳಿದ್ದರೆ ಅದನ್ನು ನೀಡಲು ಸೂಕ್ತ ವ್ಯವಸ್ಥೆ ರೂಪಿಸಬೇಕು. ಹಿರಿಯ ನಾಗರಿಕರ ಸಂಖ್ಯೆ ಬಗ್ಗೆ ನಿಖರ ಮಾಹಿತಿ ದೊರೆಯುವಂತಾಗಬೇಕು. ಇದು ನೀತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ

* ವೃದ್ಧಾಪ್ಯ ವೇತನದ ಹಣವನ್ನು ಕನಿಷ್ಠ ₹2,000ಕ್ಕೆ ಹೆಚ್ಚಿಸಬೇಕು ಮತ್ತು ಈ ಹಣವನ್ನು ಮೂರು ನಾಲ್ಕು ವರ್ಷಗಳಿಗೊಮ್ಮೆ ಏರಿಸಬೇಕು

ವೃದ್ಧವಿಧವೆಯರ ಸಂಖ್ಯೆಯಲ್ಲಿ ಹೆಚ್ಚಳ

ಜನಸಂಖ್ಯೆಯಲ್ಲಿ ವೃದ್ಧರು ಹೆಚ್ಚಾಗುತ್ತಿದ್ದಾರೆ ಎಂದಾದರೆ, ವೃದ್ಧವಿಧವೆಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದೇ ಅರ್ಥ. ಇದಕ್ಕೆ ವೈಜ್ಞಾನಿಕ ಕಾರಣಗಳಿವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರ ಜೀವಿತಾವಧಿ ನಿರೀಕ್ಷೆಯು ಹೆಚ್ಚಿರುತ್ತದೆ. ಈ ಬಗ್ಗೆ ವಿಶ್ವಸಂಸ್ಥೆಯ ವರದಿಯಲ್ಲೂ ಉಲ್ಲೇಖ ಇದೆ. 

ಭಾರತದಂಥ ಕೌಟುಂಬಿಕ ವ್ಯವಸ್ಥೆಯಲ್ಲಿ ವೃದ್ಧವಿಧವೆಯರ ಸವಾಲುಗಳು ಹಲವು. ಗಂಡ ಇಲ್ಲದಿರುವುದು, ಮಕ್ಕಳು ದೂರದ ನಗರಗಳಲ್ಲಿ ಬದುಕು ಕಟ್ಟಿಕೊಂಡಿರುವುದು, ತಾನು ಏಕಾಂಗಿಯಾಗಿ ಗ್ರಾಮೀಣ ಭಾಗಗಳಲ್ಲಿ ಮನೆಯಲ್ಲಿ ಇರುವುದು ವೃದ್ಧವಿಧವೆಯ ಆತಂಕಗಳನ್ನು ಹೆಚ್ಚಿಸುತ್ತವೆ. ಆದ್ದರಿಂದ ಈ ಬಗ್ಗೆ ಸರ್ಕಾರವು ಹೆಚ್ಚಿನ ಗಮನ ಹರಿಸಬೇಕು ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ. 

ವೃದ್ಧವಿಧವೆಯರಲ್ಲಿ ಹೆಚ್ಚಿನ ಸಂಖ್ಯೆಯವರು ಅನಕ್ಷರಸ್ಥರೇ ಆಗಿರುತ್ತಾರೆ. ಉದ್ಯೋಗ ಮಾಡಿಲ್ಲದೇ ಇರುವವರೇ ಆಗಿರುತ್ತಾರೆ. ಹೆಚ್ಚಿನವರು ಆಸ್ತಿಯನ್ನೂ ಹೊಂದಿರುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಅವರಿಗೆ ಯಾವುದೇ ಆದಾಯ ಇರುವುದಿಲ್ಲ. ಇವರು ಪೂರ್ತಿಯಾಗಿ ಕುಟುಂಬದ ಮೇಲೆ ಅವಲಂಬಿತರಾಗಿರುತ್ತಾರೆ.

32% 2011ರ ಜನಗಣತಿಯ ಪ್ರಕಾರ ಭಾರತದಲ್ಲಿ 60 ವರ್ಷ ಮೇಲ್ಪಟ್ಟವರ‌ಲ್ಲಿ ವಿಧವೆಯ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT