ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | Electoral Bond : ಬಸ್‌ ಮಾರಾಟ ಒಪ್ಪಂದದ ಆಸುಪಾಸಿನಲ್ಲಿ ಬಾಂಡ್‌ ಖರೀದಿ
ಆಳ–ಅಗಲ | Electoral Bond : ಬಸ್‌ ಮಾರಾಟ ಒಪ್ಪಂದದ ಆಸುಪಾಸಿನಲ್ಲಿ ಬಾಂಡ್‌ ಖರೀದಿ
Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಒಂದು ಕಡೆ ಕೇಂದ್ರ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ ಮತ್ತು ಇದಕ್ಕಾಗಿ ‘ಫೇಮ್‌’ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನೊಂದೆಡೆ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮೇಘ ಎಂಜಿನಿಯರಿಂಗ್‌ ಆ್ಯಂಡ್‌ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ನ (ಎಂಇಐಎಲ್‌) ಅಧೀನ ಕಂಪನಿಯಾದ ಒಲೆಕ್ಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌ನ ವಹಿವಾಟುಗಳು ಗಗನಮುಖಿಯಾಗಿವೆ. ಅದಾಗಲೇ ಅಶೋಕ್‌ ಲೇಲ್ಯಾಂಡ್‌ ಹಾಗೂ ಟಾಟಾ ಮೋಟರ್ಸ್‌ ಕಂಪನಿಗಳು ಇ–ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದವು. ಆದರೆ, ಒಲೆಕ್ಟ್ರಾ ಈ ಎಲ್ಲ ಕಂಪನಿಗಳನ್ನು ಹಿಂದಿಕ್ಕಿದೆ.

2015ರಲ್ಲಿಯೇ ಈ ಕಂಪನಿಯು ಇ–ಬಸ್‌ಗಳನ್ನು ತಯಾರಿಸಲು ಆರಂಭಿಸಿತ್ತಾದರೂ ಬಸ್‌ಗಳಿಗಾಗಿ ಬೇಡಿಕೆ ಬಂದಿರಲಿಲ್ಲ. ಆ ವೇಳೆ ಈ ಕಂಪನಿಯ ಆಡಳಿತ ಮಂಡಳಿಯು ಬೇರೆಯದಿತ್ತು. ಆದರೆ, 2018ರಲ್ಲಿ ಎಂಇಐಎಲ್‌ ಕಂಪನಿಯು ಒಲೆಕ್ಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌ ಕಂಪನಿಯ ಶೇ 50.1ರಷ್ಟು ಷೇರುಗಳನ್ನು ಖರೀದಿಸುವ ಮೂಲಕ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಅಲ್ಲಿಂದ ಈಚೆಗೆ ಒಲೆಕ್ಟ್ರಾ ಕಂಪನಿಯು ಹಿಂದೆ ತಿರುಗಿ ನೋಡಿದ್ದೇ ಇಲ್ಲ. ವರ್ಷದಿಂದ ವರ್ಷಕ್ಕೆ ಬೇಡಿಕೆಗಳು ಹಲವು ಪಟ್ಟು ಏರಿಕೆಯಾಗಿವೆ. ವಿದ್ಯುತ್‌ ಚಾಲಿತ ಬಸ್‌ಗಳ ತಯಾರಿಕೆಯಲ್ಲಿ ಭಾರತದಲ್ಲಿಯೇ ಮೊದಲಿಗ ಎಂದು ಒಲೆಕ್ಟ್ರಾ ಹೇಳಿಕೊಳ್ಳುತ್ತಿದೆ.

ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳಿಂದ ಬೇಡಿಕೆ

ಮೊದಲೇ ಹೇಳಿದ ಹಾಗೆ, ಇ–ವಾಹನಗಳ ಬಳಕೆಗೆ ಕೇಂದ್ರ ಸರ್ಕಾರವು ಹೆಚ್ಚೆಚ್ಚು ಉತ್ತೇಜನ ನೀಡಿದೆ. ಇದಕ್ಕಾಗಿ ಹಲವು ಯೋಜನೆಗಳನ್ನೂ ಜಾರಿ ಮಾಡಿದೆ. ಇದರಲ್ಲಿ ‘ಫೇಮ್‌’ (ವಿದ್ಯುತ್‌ ಚಾಲಿತ–ಹೈಬ್ರಿಡ್‌ ವಾಹನಗಳ ತ್ವರಿತ ತಯಾರಿಕೆ ಮತ್ತು ಬಳಕೆ ಉತ್ತೇಜನ) ಪ್ರಮುಖವಾದುದು. ಈ ಯೋಜನೆಯ ಎರಡನೇ ಹಂತ ‘ಫೇಮ್‌ ಯೋಜನೆ 2’ ಈಗ ಜಾರಿಯಲ್ಲಿದೆ. 

ಬಿಜೆಪಿ ನೇತೃತ್ವದ ಹಲವು ರಾಜ್ಯ ಸರ್ಕಾರಗಳು ‘ಫೇಮ್‌ ಯೋಜನೆ 2’ ಯೋಜನೆಯ ಅಡಿಯಲ್ಲಿ ಇ–ಬಸ್‌ಗಳನ್ನು ಒಲೆಕ್ಟ್ರಾದಿಂದ ಖರೀದಿಸಿವೆ. ಐದು ವರ್ಷ ಅವಧಿಯ ಈ ಯೋಜನೆಯು ಇದೇ ಮಾರ್ಚ್‌ನಲ್ಲಿ ಕೊನೆಗೊಳ್ಳಲಿದೆ. ಆದರೆ, ಕೇಂದ್ರ ಸರ್ಕಾರವು ಈ ಯೋಜನೆಯನ್ನು ಏಪ್ರಿಲ್‌ನಿಂದ ಮೂರು ತಿಂಗಳ ಅವಧಿಗೆ ವಿಸ್ತರಿಸಿದೆ. ಕೆಲವು ರಾಜ್ಯ ಸರ್ಕಾರಗಳು ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯನ್ನು ಉತ್ತೇಜಿಸಲೂ ಈ ಕಂಪನಿಯ ಬಸ್‌ಗಳನ್ನು ಖರೀದಿಸುತ್ತಿದ್ದೇವೆ ಎಂದು ಹೇಳಿಕೊಂಡಿವೆ.

ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಗುಜರಾತ್‌, ಉತ್ತರಾಖಂಡ (2018ರಲ್ಲಿ ಒಲೆಕ್ಟ್ರಾದೊಂದಿಗೆ ಉತ್ತರಾಖಂಡ ಸರ್ಕಾರವು ₹700 ಕೋಟಿ ಮೊತ್ತದಲ್ಲಿ 500 ಬಸ್‌ಗಳಿಗೆ ಬೇಡಿಕೆ ಇರಿಸಿತ್ತು) – ಹೀಗೆ ಸಾಲು ಸಾಲು ರಾಜ್ಯ ಸರ್ಕಾರಗಳು ವಿದ್ಯುತ್‌ ಚಾಲಿತ ಬಸ್‌ಗಳನ್ನು ಪೂರೈಸುವಂತೆ ಒಲೆಕ್ಟ್ರಾದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ತೆಲಂಗಾಣ ಸರ್ಕಾರವು ಇದೇ ಕಂಪನಿಗೆ ಬೇಡಿಕೆ ಇಟ್ಟಿದೆ. ಈ ಸಮಯದಲ್ಲಿ ರಾಜ್ಯದಲ್ಲಿ ಬಿಆರ್‌ಎಸ್‌ ಸರ್ಕಾರ ಇತ್ತು. ಆಂಧ್ರ ಪ್ರದೇಶ ಸರ್ಕಾರವು ಬೇಡಿಕೆ ಇಟ್ಟಿದ್ದು, ಇಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ಅಧಿಕಾರದಲ್ಲಿದೆ.

ದೊಡ್ಡ ನೆಗೆತ: ಕಂಪನಿಯ ಬೇಡಿಕೆಗಳ ಸಂಖ್ಯೆಯಲ್ಲಿ ದೊಡ್ಡ ನೆಗೆತ ಕಂಡುಬಂದಿದ್ದು 2023ರಲ್ಲಿ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಇಲಾಖೆಯು ₹10,000 ಕೋಟಿಗೂ ಅಧಿಕ ಮೊತ್ತದ ಬೇಡಿಕೆಯೊಂದನ್ನು ಸಲ್ಲಿಸಿತು. 5,150 ವಿದ್ಯುತ್‌ ಚಾಲಿತ ಬಸ್‌ಗಳನ್ನು ತಯಾರಿಸಿಕೊಡುವಂತೆ ಕಂಪನಿಯನ್ನು ಕೇಳಿಕೊಂಡಿತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೂಡ ಒಲೆಕ್ಟ್ರಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 50 ವಿದ್ಯುತ್‌ ಚಾಲಿತ ಬಸ್‌ಗಳನ್ನು 2023ರ ಮಾರ್ಚ್‌ ಒಳಗೆ ಪೂರೈಸುವಂತೆ ಕರ್ನಾಟಕ ಸರ್ಕಾರವು ಕೇಳಿಕೊಂಡಿತ್ತು.

ವಿಸ್ತರಿಸಿದ ಕಂಪನಿ: ವಿದ್ಯುತ್‌ ಚಾಲಿತ ಬಸ್‌ಗಳನ್ನು ಮಾತ್ರ ತಯಾರಿಸುತ್ತಿದ್ದ ಕಂಪನಿಯು ವಿದ್ಯುತ್‌ ಚಾಲಿತ ಟಿಪ್ಪರ್‌ಗಳನ್ನೂ ತಯಾರಿಸಲು ಆರಂಭಿಸಿದೆ. ವಿದ್ಯುತ್ ಚಾಲಿತ ಟ್ರಕ್‌ಗಳನ್ನು ತಯಾರಿಸಲು ಚಿಂತನೆ ನಡೆಸಿದೆ. ತನ್ನ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ. ಇದಕ್ಕಾಗಿ ತೆಲಂಗಾಣದಲ್ಲಿ 150 ಎಕರೆ ಪ್ರದೇಶದಲ್ಲಿ ತಯಾರಿಕಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಈ ಮೂಲಕ ವಾರ್ಷಿಕವಾಗಿ 10,000 ವಿದ್ಯುತ್‌ ಚಾಲಿತ ಬಸ್‌ ಹಾಗೂ ಟ್ರಕ್‌ಗಳನ್ನು ತಯಾರಿಸುವುದು ಈ ಘಟಕ ಸ್ಥಾಪನೆಯ ಉದ್ದೇಶವಾಗಿದೆ.

ಚೀನಾ ಕಂಪನಿಯೊಂದಿಗೆ ಸಂಬಂಧ

ಚೀನಾದ ‘ಬಿಲ್ಡ್‌ ಯುವರ್‌ ಡ್ರೀಮ್‌’ (ಬಿವೈಡಿ) ಕಂಪನಿಯು ಭಾರತದಲ್ಲಿ ವಿದ್ಯುತ್‌ ಚಾಲಿತ ಬಸ್‌ಗಳ ತಯಾರಿಕೆಯನ್ನು ಎಂಇಐಎಲ್‌ ಜತೆಗೂಡಿ ಆರಂಭಿಸಿತ್ತು. ಎಂಇಐಎಲ್‌ನ ಮೂಲಕ ಒಲೆಕ್ಟ್ರಾ ಕಂಪನಿ ಪೂರೈಸಿದ ಇ–ಬಸ್‌ಗಳಲ್ಲಿ ಇದ್ದದ್ದು ಬಿವೈಡಿ ಕಂಪನಿಯ ತಂತ್ರಜ್ಞಾನ ಮತ್ತು ಉಪಕರಣಗಳು.

ಕಳೆದ ವರ್ಷವಷ್ಟೇ ಎಂಇಐಎಲ್‌ ಮತ್ತು ಬಿವೈಡಿ ಸಹಭಾಗಿತ್ವದಲ್ಲಿ
ಹೈದರಾಬಾದ್‌ನಲ್ಲಿ ವಿದ್ಯುತ್‌ಚಾಲಿತ ಕಾರುಗಳ ತಯಾರಿಕೆಗೆ ಘಟಕ ಸ್ಥಾಪಿಸುವ ಪ್ರಸ್ತಾವ ಸಲ್ಲಿಸಿದ್ದವು. ಕೇಂದ್ರ ಸರ್ಕಾರ ಆ ಪ್ರಸ್ತಾವವನ್ನು ತಿರಸ್ಕರಿಸಿತ್ತು. 

ಚೀನಾದ ಕಂಪನಿಯ ತಂತ್ರಜ್ಞಾನ ಬಳಸುತ್ತಿರುವ ಬಗ್ಗೆ ಎಂಇಐಎಲ್‌ ವಿರುದ್ಧವೂ ಆಕ್ಷೇಪ ವ್ಯಕ್ತವಾಗಿತ್ತು. ಆಗ ಎಂಇಐಎಲ್‌, ನಾವೀಗ ಬಿವೈಡಿ ಕಂಪನಿಯ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸುತ್ತಿಲ್ಲ ಎಂದು ಹೇಳಿತ್ತು.

ರಾಜ್ಯಗಳೊಂದಿಗೆ ಒಪ್ಪಂದ ಮತ್ತು ಬಾಂಡ್‌ ಖರೀದಿ

ಇ–ಬಸ್‌ ಖರೀದಿ ಸಂಬಂಧ ಒಲೆಕ್ಟ್ರಾ ಕಂಪನಿಯು ರಾಜ್ಯ ಸರ್ಕಾರಗಳ ಜತೆಗೆ ಒಪ್ಪಂದ ಮಾಡಿಕೊಂಡ ಅವಧಿಯಲ್ಲೇ ನೂರಾರು ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಎಂಇಐಎಲ್‌ ಖರೀದಿಸಿದೆ. ಇದನ್ನು ಬಸ್‌ ಖರೀದಿ ಒಪ್ಪಂದ ವರದಿಗಳು ಮತ್ತು ಚುನಾವಣಾ ಬಾಂಡ್‌ ಖರೀದಿ ವಿವರಗಳು ದೃಢಪಡಿಸುತ್ತವೆ

ತೆಲಂಗಾಣ

  • 2022ರ ಜುಲೈನಲ್ಲಿ ರಾಜ್ಯ ಸರ್ಕಾರವು ₹500 ಕೋಟಿ ಮೌಲ್ಯದಲ್ಲಿ 300 ಬಸ್‌ಗಳನ್ನು ಖರೀದಿಸಲು ಎಂಇಐಎಲ್‌ ಜತೆಗೆ ಒಪ್ಪಂದ ಮಾಡಿಕೊಂಡಿತು;

  • ₹50 ಕೋಟಿ/2022ರ ಜುಲೈನಲ್ಲಿ ಎಂಇಐಎಲ್‌ ಖರೀದಿಸಿದ ಚುನಾವಣಾ ಬಾಂಡ್‌ಗಳ ಮೊತ್ತ

  • 2023ರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರವು ₹1,000 ಕೋಟಿ ಮೌಲ್ಯದಲ್ಲಿ 550 ಬಸ್‌ಗಳನ್ನು ಖರೀದಿಸಲು ಎಂಇಐಎಲ್‌ ಜತೆಗೆ ಒಪ್ಪಂದ ಮಾಡಿಕೊಂಡಿತು;

  • ₹40 ಕೋಟಿ/2023ರ ಜನವರಿಯಲ್ಲಿ ಎಂಇಐಎಲ್‌ ಖರೀದಿಸಿದ ಚುನಾವಣಾ ಬಾಂಡ್‌ಗಳ ಮೊತ್ತ

ಆಂಧ್ರ ಪ್ರದೇಶ

  • 2021ರ ನವೆಂಬರ್‌ನಲ್ಲಿ ರಾಜ್ಯ ಸರ್ಕಾರವು ₹140 ಕೋಟಿ ವೆಚ್ಚದಲ್ಲಿ 100 ಬಸ್‌ಗಳನ್ನು ಖರೀದಿಸಲು ಎಂಇಐಎಲ್‌ ಜತೆಗೆ ಒಪ್ಪಂದ ಮಾಡಿಕೊಂಡಿತು;

  • ₹25 ಕೋಟಿ/2021ರ ಅಕ್ಟೋಬರ್‌ನಲ್ಲಿ ಎಂಇಐಎಲ್‌ ಖರೀದಿಸಿದ ಚುನಾವಣಾ ಬಾಂಡ್‌ಗಳ ಮೊತ್ತ

ಮಹಾರಾಷ್ಟ್ರ

ಬೆಸ್ಟ್‌–ಮುಂಬೈ ಮಹಾನಗರ ಸಾರಿಗೆ ಸಂಸ್ಥೆ

  • 2022ರ ಮೇನಲ್ಲಿ ಮುಂಬೈ ಮಹಾನಗರ ಸಾರಿಗೆ ಸಂಸ್ಥೆ ₹3,675 ಕೋಟಿ ವೆಚ್ಚದಲ್ಲಿ 2,100 ಬಸ್‌ಗಳನ್ನು ಖರೀದಿಸಲು ಎಂಇಐಎಲ್‌ ಜತೆಗೆ ಒಪ್ಪಂದ ಮಾಡಿಕೊಂಡಿತು;

  • ₹70 ಕೋಟಿ/2022ರ ಜನವರಿಯಲ್ಲಿ ಎಂಇಐಎಲ್‌ ಖರೀದಿಸಿದ್ದ ಚುನಾವಣಾ ಬಾಂಡ್‌ಗಳ ಮೊತ್ತ

  • 2024ರ ಫೆಬ್ರುವರಿಯಲ್ಲಿ ಮುಂಬೈ ಮಹಾನಗರ ಸಾರಿಗೆ ಸಂಸ್ಥೆ ₹4,000 ಕೋಟಿ ವೆಚ್ಚದಲ್ಲಿ 2,400 ಬಸ್‌ಗಳನ್ನು ಖರೀದಿಸಲು ಎಂಇಐಎಲ್‌ ಜತೆಗೆ ಒಪ್ಪಂದ ಮಾಡಿಕೊಂಡಿತು;

  • ₹160 ಕೋಟಿ/2023ರ ಅಕ್ಟೋಬರ್‌ನಲ್ಲಿ ಎಂಇಐಎಲ್‌ ಖರೀದಿಸಿದ್ದ ಚುನಾವಣಾ ಬಾಂಡ್‌ಗಳ ಮೊತ್ತ

  • 2023ರ ಜುಲೈನಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ₹10,000 ಕೋಟಿ ವೆಚ್ಚದಲ್ಲಿ 5,150 ಬಸ್‌ಗಳನ್ನು ಖರೀದಿಸಲು ಎಂಇಐಎಲ್‌ ಜತೆಗೆ ಒಪ್ಪಂದ ಮಾಡಿಕೊಂಡಿತು;

  • ₹216 ಕೋಟಿ/2023ರ ಏಪ್ರಿಲ್‌–ಜುಲೈನಲ್ಲಿ ಎಂಇಐಎಲ್‌ ಖರೀದಿಸಿದ್ದ ಚುನಾವಣಾ ಬಾಂಡ್‌ಗಳ ಮೊತ್ತ

ಗೋವಾ

  • 2021ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರವು ₹140 ಕೋಟಿ ವೆಚ್ಚದಲ್ಲಿ 100 ಬಸ್‌ಗಳನ್ನು ಖರೀದಿಸಲು ಎಂಇಐಎಲ್‌ ಜತೆಗೆ ಒಪ್ಪಂದ ಮಾಡಿಕೊಂಡಿತು;

  • ₹25 ಕೋಟಿ/2021ರ ಅಕ್ಟೋಬರ್‌ನಲ್ಲಿ ಎಂಇಐಎಲ್‌ ಖರೀದಿಸಿದ್ದ ಚುನಾವಣಾ ಬಾಂಡ್‌ಗಳ ಮೊತ್ತ

ಅಸ್ಸಾಂ

  • 2022ರ ಮೇನಲ್ಲಿ ರಾಜ್ಯ ಸರ್ಕಾರವು ₹151 ಕೋಟಿ ವೆಚ್ಚದಲ್ಲಿ 100 ಬಸ್‌ಗಳನ್ನು ಖರೀದಿಸಲು ಎಂಇಐಎಲ್‌ ಜತೆಗೆ ಒಪ್ಪಂದ ಮಾಡಿಕೊಂಡಿತು;

  • ₹70 ಕೋಟಿ/2022ರ ಜನವರಿಯಲ್ಲಿ ಎಂಇಐಎಲ್‌ ಖರೀದಿಸಿದ್ದ ಚುನಾವಣಾ ಬಾಂಡ್‌ಗಳ ಮೊತ್ತ

ಗುಜರಾತ್‌

  • 2022ರ ಜನವರಿಯಲ್ಲಿ ರಾಜ್ಯ ಸರ್ಕಾರವು 50 ಬಸ್‌ಗಳನ್ನು ಎಂಇಐಎಲ್‌ನಿಂದ ಖರೀದಿಸಿತು. ಅದಕ್ಕೂ ಮುನ್ನ 150 ಬಸ್‌ಗಳನ್ನು ಖರೀದಿಸಿತ್ತು;

  • ₹25 ಕೋಟಿ/2021ರ ಜನವರಿಯಲ್ಲಿ ಎಂಇಐಎಲ್‌ ಖರೀದಿಸಿದ್ದ ಚುನಾವಣಾ ಬಾಂಡ್‌ಗಳ ಮೊತ್ತ

ವರ್ಷ: ಕಂಪನಿಗೆ ಬಂದ ಬೇಡಿಕೆಗಳು (ಎಲೆಕ್ಟ್ರಾನಿಕ್ ಬಸ್‌ ಸಂಖ್ಯೆಯಲ್ಲಿ)

  • 2015ರಲ್ಲಿ ಒಲೆಕ್ಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌ ಕಂಪನಿಯು ಎಲೆಕ್ಟ್ರಾನಿಕ್ ಬಸ್‌ಗಳನ್ನು ತಯಾರಿಸಲು ಆರಂಭಿಸಿತು

  • 2018ರಲ್ಲಿ ಎಂಇಐಎಲ್‌ ಕಂಪನಿಯು ಒಲೆಕ್ಟ್ರಾ ಕಂಪನಿಯನ್ನು ಖರೀದಿಸಿತು. ‘9,000 ಬಸ್‌ಗಳನ್ನು ಪೂರೈಸಲು ನಮಗೆ ಬೇಡಿಕೆ ಬಂದಿದೆ’ ಎಂದು ಒಲೆಕ್ಟ್ರಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ವಿ. ಪ್ರದೀಪ್‌ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ 2023ರ ಸೆಪ್ಟೆಂಬರ್‌ನಲ್ಲಿ ಹೇಳಿದ್ದರು

  • ಇ–ಬಸ್‌ ಖರೀದಿ ಸಂಬಂಧ ಒಲೆಕ್ಟ್ರಾ ಕಂಪನಿಯು ವಿವಿಧ ರಾಜ್ಯ ಸರ್ಕಾರಗಳ ಜತೆಗೆ ಒಪ್ಪಂದ ಮಾಡಿಕೊಂಡ ಅವಧಿಗೂ ಒಂದೆರಡು ತಿಂಗಳು ಮುನ್ನವೇ ಹತ್ತಾರು ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಕೆಲವು ಸಂದರ್ಭಗಳಲ್ಲಿ ಒಪ್ಪಂದ ಆದ ತಿಂಗಳಿನಲ್ಲೇ ಬಾಂಡ್ ಖರೀದಿಸಿದೆ

ಆಧಾರ: ಪಿಟಿಐ, ಒಲೆಕ್ಟ್ರಾ ಕಂಪನಿಯ ವಾರ್ಷಿಕ ಹಾಗೂ ಇತರೆ ವರದಿಗಳು, ಚುನಾವಣಾ ಆಯೋಗಕ್ಕೆ ಎಸ್‌ಬಿಐ ನೀಡಿದ ಚುನಾವಣಾ ಬಾಂಡ್‌ಗಳ ಮಾಹಿತಿ, ಒಲೆಕ್ಟ್ರಾ ಕಂಪನಿಯ ಪತ್ರಿಕಾ ಪ್ರಕಟಣೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT