ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ– ಅಗಲ | ಸಕ್ಕರೆ, ಉಪ್ಪಿನಲ್ಲೂ ಪ್ಲಾಸ್ಟಿಕ್‌
ಆಳ– ಅಗಲ | ಸಕ್ಕರೆ, ಉಪ್ಪಿನಲ್ಲೂ ಪ್ಲಾಸ್ಟಿಕ್‌
ಆಹಾರ ಪದಾರ್ಥಗಳಲ್ಲಿವೆ ಅಪಾಯಕಾರಿ ಮೈಕ್ರೊಪ್ಲಾಸ್ಟಿಕ್‌ ಕಣಗಳು
ಫಾಲೋ ಮಾಡಿ
Published 25 ಆಗಸ್ಟ್ 2024, 22:30 IST
Last Updated 25 ಆಗಸ್ಟ್ 2024, 22:30 IST
Comments
ವರ್ಷದಿಂದ ವರ್ಷಕ್ಕೆ ಜಗತ್ತಿನಲ್ಲಿ ಪ್ಲಾಸ್ಲಿಕ್ ಉತ್ಪಾದನೆ ಹೆಚ್ಚುತ್ತಲೇ ಇದೆ. 1950ರಲ್ಲಿ ಜಾಗತಿಕ ಮಟ್ಟದಲ್ಲಿ 20 ಲಕ್ಷ ಟನ್‌ ಪ್ಲಾಸ್ಟಿಕ್ ಉತ್ಪಾದನೆ ಮಾಡಲಾಗುತ್ತಿತ್ತು. 2021ರ ಹೊತ್ತಿಗೆ ಅದು 39 ಕೋಟಿ ಟನ್‌ಗಳಿಗೆ ಹೆಚ್ಚಳವಾಗಿದೆ. ಪ್ಲಾಸ್ಟಿಕ್ ಬಳಕೆ ಹೆಚ್ಚಿದಂತೆಲ್ಲ ಪ್ಲಾಸ್ಟಿಕ್ ತ್ಯಾಜ್ಯವೂ ಜಾಸ್ತಿಯಾಗುತ್ತಿದೆ. ಕಳವಳಕಾರಿ ಸಂಗತಿ ಎಂದರೆ, ಪ್ಲಾಸ್ಟಿಕ್‌ ಈಗ ಅತಿ ಸೂಕ್ಷ್ಮ ಕಣಗಳ ರೂಪದಲ್ಲಿ (ಮೈಕ್ರೊಪ್ಲಾಸ್ಟಿಕ್‌) ನಾವು ಸೇವಿಸುವ ಆಹಾರ ವಸ್ತುಗಳಲ್ಲಿ ಬೆರೆತುಹೋಗಿದೆ. ಭಾರತದಲ್ಲಿ ಬಳಸಲಾಗುವ ಉಪ್ಪು ಮತ್ತು ಸಕ್ಕರೆಗಳಲ್ಲಿ ಮೈಕ್ರೊಪ್ಲಾಸ್ಟಿಕ್‌ ಕಣಗಳು ಪತ್ತೆಯಾಗಿವೆ ಎಂದು ನವದೆಹಲಿಯ ‘ದ ಜಸ್ಟ್ ಎನ್ವಿರಾನ್‌ಮೆಂಟ್ ಚಾರಿಟಬಲ್ ಟ್ರಸ್ಟ್‌’ನ ‘ಟಾಕ್ಸಿಕ್ಸ್ ಲಿಂಕ್’ ಸಂಸ್ಥೆ ನಡೆಸಿರುವ ಇತ್ತೀಚಿನ ಅಧ್ಯಯನ ಹೇಳಿದೆ. 

ಪ್ಲಾಸ್ಟಿಕ್ ತ್ಯಾಜ್ಯವು ಮಣ್ಣಿನಲ್ಲಿ ಕರಗದೇ ರಾಸಾಯನಿಕ, ಜೈವಿಕ ಅಂಶಗಳಿಂದ ಸಣ್ಣ ಸಣ್ಣ ಕಣಗಳಾಗಿ ಬದಲಾಗುತ್ತದೆ. ಇದುವೇ ಮೈಕ್ರೊಪ್ಲಾಸ್ಟಿಕ್ ಅಥವಾ ನ್ಯಾನೊ ಪ್ಲಾಸ್ಟಿಕ್. ಅತಿಸೂಕ್ಷ್ಮ ಪ್ಲಾಸ್ಟಿಕ್ ಕಣಗಳನ್ನು ಮೈಕ್ರೊಪ್ಲಾಸ್ಟಿಕ್ ಎನ್ನಲಾಗುತ್ತದೆ. ಈ ಕಣಗಳ ಗಾತ್ರ 5 ಮಿಲಿಮೀಟರ್‌ನಿಂದ ಒಂದು ಮೈಕ್ರಾನ್‌ನಷ್ಟು (µm) ಇರುತ್ತದೆ.         

ಮೈಕ್ರೊಪ್ಲಾಸ್ಟಿಕ್ ಇಂದು ಸರ್ವವ್ಯಾಪಿಯಾಗಿದ್ದು, ನೀರು, ಮಣ್ಣು, ಗಾಳಿಯಷ್ಟೇ ಅಲ್ಲದೇ ಜೀವರಾಶಿಯಲ್ಲೂ ಅಸ್ತಿತ್ವ ಕಂಡುಕೊಂಡಿದೆ; ಆಹಾರದಲ್ಲೂ ಸೇರಿರುವ ಅದು, ಮೀನು, ಕುಡಿಯುವ ನೀರು, ಪಾನೀಯಗಳು ಮತ್ತು ಜೇನುತುಪ್ಪದಲ್ಲೂ ಇದೆ. ಜತೆಗೆ ಆಹಾರ ಸರಪಳಿಗೂ ಪ್ರವೇಶ ಪಡೆದಿದೆ ಎಂದು ವಿವಿಧ ಅಧ್ಯಯನಗಳಿಂದ ತಿಳಿದುಬಂದಿದೆ. ಪಾಲಿಎಥಿಲೀನ್(ಪಿಇ), ಪಾಲಿಪ್ರೊಪೈಲೀನ್ (ಪಿಪಿ), ಪಾಲಿಎಥಿಲೀನ್ ಟೆರೆಫ್ತಲೇಟ್ (ಪಿಇಟಿ), ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಮುಂತಾದ ಪಾಲಿಮರ್‌ಗಳ ಅಂಶಗಳು ಇರುವುದು ಪತ್ತೆಯಾದರೆ, ಅದರಲ್ಲಿ ಮೈಕ್ರೊಪ್ಲಾಸ್ಟಿಕ್ ಇದೆ ಎಂದು ಅರ್ಥ. ಅವು ಜೀವಿಗಳಲ್ಲಿ ಮತ್ತು ಜೀವ ಇಲ್ಲದ ವಸ್ತುಗಳಲ್ಲಿ ಸಂಯೋಜನೆಗೊಂಡು, ವಿವಿಧ ಪ್ರಮಾಣಗಳಲ್ಲಿ ಕಂಡುಬರುತ್ತದೆ.

ಉಪ್ಪಿನಲ್ಲಿ ಹೇಗೆ ಬಂತು ಪ್ಲಾಸ್ಟಿಕ್‌?:

2017ರಲ್ಲಿ ಎಂಟು ರಾಷ್ಟ್ರಗಳ 17 ಉ‍ಪ್ಪಿನ ಬ್ರ್ಯಾಂಡ್‌ಗಳನ್ನು ಅಧ್ಯಯನ ಮಾಡಿದಾಗ, ಎಲ್ಲ ಬ್ರ್ಯಾಂಡ್‌ಗಳಲ್ಲಿಯೂ ಮೈಕ್ರೊಪ್ಲಾಸ್ಟಿಕ್‌ನ ಅಂಶಗಳು ಪತ್ತೆಯಾಗಿದ್ದವು. ಒಂದು ಕೆಜಿ ಉಪ್ಪಿನಲ್ಲಿ 28 ಮೈಕ್ರೊಪ್ಲಾಸ್ಟಿಕ್ ಕಣಗಳು (ಪಿಇ ಮತ್ತು ಪಿಪಿ) ಪತ್ತೆಯಾಗಿದ್ದವು.‌ 2018ರಲ್ಲಿ ಟರ್ಕಿಯ 15 ಉಪ್ಪಿನ ಬ್ರ್ಯಾಂಡ್‌ಗಳನ್ನು ಅಧ್ಯಯನ ಮಾಡಿದಾಗ, ಎಲ್ಲದರಲ್ಲಿಯೂ ಮೈಕ್ರೊಪ್ಲಾಸ್ಟಿಕ್ ಕಣಗಳು ಪತ್ತೆಯಾಗಿದ್ದವು. ಒಂದು ಕೆ.ಜಿಯಲ್ಲಿ 248 ಮೈಕ್ರೊಪ್ಲಾಸ್ಟಿಕ್ ಕಣಗಳಿದ್ದವು (ಪಿಇ ಮತ್ತು ಪಿಪಿ). ಪ್ರದೇಶದಿಂದ ಪ್ರದೇಶಕ್ಕೆ ಉಪ್ಪಿನಲ್ಲಿರುವ ಮೈಕ್ರೊಪ್ಲಾಸ್ಟಿಕ್ಸ್ ಪ್ರಮಾಣದಲ್ಲಿ ವ್ಯತ್ಯಾಸ ಇದೆಯಾದರೂ, ಅಧ್ಯಯನಕ್ಕೊಳಪಡಿಸಲಾದ ಎಲ್ಲ ದೇಶ, ಎಲ್ಲ ಬ್ರ್ಯಾಂಡ್‌ಗಳ ಉಪ್ಪಿನಲ್ಲೂ ವಿವಿಧ ಗಾತ್ರ, ವಿವಿಧ ಸಾಂದ್ರತೆಯಲ್ಲಿ ಅವುಗಳ ಅಸ್ತಿತ್ವ ಇರುವುದು ಖಚಿತವಾಗಿದೆ. ಭಾರತದಲ್ಲಿ, ಒಂದು ಕೆ.ಜಿ. ಸಮುದ್ರದ ಉಪ್ಪಿನಲ್ಲಿ 32–366 ಮೈಕ್ರೊಪ್ಲಾಸ್ಟಿಕ್‌ ಕಣಗಳು (ಪಿಪಿ, ಪಿಇ, ಪಿಇಟಿ, ಪಿವಿಸಿ, ನೈಲಾನ್) ಇರುವುದು ಪತ್ತೆಯಾಗಿದ್ದು, ಅವುಗಳ ಗಾತ್ರವು 100 ಮೈಕ್ರಾನ್‌ನಿಂದ – 5,000 ಮೈಕ್ರಾನ್‌ವರೆಗೆ ಇದೆ.

ಉಪ್ಪಿನಲ್ಲಿ ಮೈಕ್ರೊಪ್ಲಾಸ್ಟಿಕ್ ಸೇರಲು ನೀರಿನಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವೇ ಮುಖ್ಯ ಕಾರಣ. ಬಟ್ಟೆ, ವೈಯಕ್ತಿಕ ಸ್ವಚ್ಛತೆ ಸಾಧನಗಳು ಮತ್ತು ಸೌಂದರ್ಯವರ್ಧಕ ಸಾಧನಗಳ ಮೂಲಕವೂ ಅದು ಉಪ್ಪಿನಲ್ಲಿ ಸೇರುತ್ತದೆ. ಉಪ್ಪು ಉತ್ಪಾದನೆಯ ಜಾಗ ಮತ್ತು ಅಲ್ಲಿನ ಪರಿಸರದ ಕೊಡುಗೆಯೂ ಇದರಲ್ಲಿದೆ.   

ಸಕ್ಕರೆಯಲ್ಲಿ ಮೈಕ್ರೊಪ್ಲಾಸ್ಟಿಕ್‌ ಕಣಗಳು:

ಜಗತ್ತಿನಾದ್ಯಂತ ಸಕ್ಕರೆಯ ಉತ್ಪಾದನೆ ಮತ್ತು ಬಳಕೆ ಹೆಚ್ಚಾಗುತ್ತಿದ್ದು, ಏಷ್ಯಾದಲ್ಲಿ ಅತಿ ಹೆಚ್ಚು ಬಳಕೆ ಮಾಡಲಾಗುತ್ತಿದೆ. 2030ರ ಹೊತ್ತಿಗೆ ಜಗತ್ತಿನಲ್ಲಿ ಉತ್ಪಾದನೆಯಾಗುವ ಅರ್ಧದಷ್ಟು ಸಕ್ಕರೆಯು ಏಷ್ಯಾದಲ್ಲಿಯೇ ಬಳಕೆಯಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಪ್ಯಾಕ್ ಮಾಡಲಾದ ಮತ್ತು ಪ್ಯಾಕ್ ಮಾಡಿಲ್ಲದ ಸಕ್ಕರೆಯಲ್ಲಿ ಮೈಕ್ರೊಪ್ಲಾಸ್ಟಿಕ್ (ಅತಿ ಸಾಂದ್ರತೆಯ ಪಿಇ) ಇರುವುದು ಬಾಂಗ್ಲಾದೇಶ ಮತ್ತು ಜರ್ಮನಿಯಲ್ಲಿ ನಡೆಸಿದ ಅಧ್ಯಯನಗಳಿಂದ ಸಾಬೀತಾಗಿದೆ. ಕಬ್ಬು ಅರೆಯುವ ಪ್ರಕ್ರಿಯೆ, ಶುದ್ಧೀಕರಣ, ಸಕ್ಕರೆಯ ಪ್ಯಾಕೇಜಿಂಗ್ ಮುಂತಾದ ಹಂತಗಳಲ್ಲಿ ಸಕ್ಕರೆಯಲ್ಲಿ ಮೈಕ್ರೊಪ್ಲಾಸ್ಟಿಕ್‌ ಕಣಗಳು ಸೇರಿರುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ತಿಳಿಸಿವೆ.

ಭಾರತದ ಸ್ಥಿತಿಗತಿ:

ಉಪ್ಪು ಮತ್ತು ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಭಾರತೀಯರ ದೇಹದೊಳಗೆ ಪ್ರತಿನಿತ್ಯವೂ ಮೈಕ್ರೊಪ್ಲಾಸ್ಟಿಕ್ ಕಣಗಳು ಸೇರುತ್ತಿವೆ. ಸಾವಯವ ಉಪ್ಪನ್ನು ಬಳಸುವವರಿಗಿಂತ ಪ್ಯಾಕ್ ಮಾಡಿದ ಮತ್ತು ಅಯೋಡಿನ್‌ಯುಕ್ತ ಉಪ್ಪನ್ನು ಸೇವಿಸುವವರ ದೇಹಕ್ಕೆ ಹೆಚ್ಚು ಮೈಕ್ರೊಪ್ಲಾಸ್ಟಿಕ್‌ ಕಣಗಳು ಸೇರುತ್ತಿವೆ. 

ಉಪ್ಪಿನಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳ ಅಸ್ತಿತ್ವದ ಬಗ್ಗೆ ಭಾರತದಲ್ಲಿ ಕೆಲವೇ ಕೆಲವು ಅಧ್ಯಯನಗಳು ನಡೆದಿವೆ. ಸಮುದ್ರದ ಉಪ್ಪು, ರಾಕ್ ಸಾಲ್ಟ್, ಕೆರೆ ಉಪ್ಪು ಮತ್ತು ವಾಣಿಜ್ಯ ಉಪ್ಪನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಎಲ್ಲ ಉಪ್ಪುಗಳಲ್ಲೂ ಮೈಕ್ರೊಪ್ಲಾಸ್ಟಿಕ್‌ಗಳು ಇರುವುದು ಪತ್ತೆಯಾಗಿದೆ. ಎಲ್ಲ ಉಪ್ಪುಗಳಲ್ಲಿಯೂ ಪಿಇ ಮತ್ತು ಪಿಇಟಿ ಪ್ರಮುಖವಾಗಿದ್ದು, ವಿವಿಧ ಪ್ರಾಂತ್ಯಗಲ್ಲಿ ವಿವಿಧ ಸಾಂದ್ರತೆಯಲ್ಲಿ ಅವು ಉಪ್ಪಿನಲ್ಲಿ ಸಂಯೋಜನೆಗೊಂಡಿವೆ. ಸಕ್ಕರೆಯಲ್ಲಿನ ಮೈಕ್ರೊಪ್ಲಾಸ್ಟಿಕ್‌ಗಳ ಇರುವಿಕೆ ಪತ್ತೆ ಹಚ್ಚಲು ದೇಶದಲ್ಲಿ ಈವರೆಗೆ ಅಧ್ಯಯನ ನಡೆದಿರಲಿಲ್ಲ.

ತಡೆಗಟ್ಟುವ ಕಾರ್ಯ 

ಮೈಕ್ರೊಪ್ಲಾಸ್ಟಿಕ್‌ಗಳು ಅತಿ ಸೂಕ್ಷ್ಮ ಕಣಗಳಾಗಿರುವುದರಿಂದ, ಅವುಗಳ ಪ್ರಮಾಣ ಅಧ್ಯಯನಗಳಲ್ಲಿ ಹೇಳಿರುವುದಕ್ಕಿಂತಲೂ ಹೆಚ್ಚಿರುವ ಸಾಧ್ಯತೆಯೂ ಇದೆ. ಉಪ್ಪು ಮತ್ತು ಸಕ್ಕರೆ ಸೇರಿದಂತೆ, ಆಹಾರ ಪದಾರ್ಥಗಳಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳ ಇರುವಿಕೆಯ ಬಗ್ಗೆ ಪರಿಶೀಲನೆ ನಡೆಸಲು ಮತ್ತು ಅದನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲ. ಆದಾಗ್ಯೂ, ಹಲವು ದೇಶಗಳು ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿದ್ದು, ಮೈಕ್ರೊಪ್ಲಾಸ್ಟಿಕ್‌ಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಅಧ್ಯಯನದಲ್ಲಿ ತೊಡಗಿವೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಎಫ್‌ಡಿಎ) ಆಹಾರ ಪದಾರ್ಥಗಳಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳ ಇರುವಿಕೆಯ ಬಗ್ಗೆ ಸಮೀಕ್ಷೆ ಆರಂಭಿಸಿದ್ದು, ಅವುಗಳನ್ನು ತಡೆಗಟ್ಟಲು ವ್ಯವಸ್ಥೆಯೊಂದನ್ನು ರೂಪಿಸಲು ಹೊರಟಿದೆ.

ಆಹಾರದ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳು ಸೇರದಂತೆ ಮಾಡಲು ಅಧ್ಯಯನದಲ್ಲಿ ಹಲವು ಕ್ರಮಗಳನ್ನು ಸೂಚಿಸಲಾಗಿದೆ. ಮೈಕ್ರೊಪ್ಲಾಸ್ಟಿಕ್ ಬಿಡುಗಡೆಗೆ ಆಸ್ಪದವಿಲ್ಲದಂತೆ ತ್ಯಾಜ್ಯ ನೀರು ಸಂಸ್ಕರಣೆ ಮಾಡುವುದು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮ ಪದ್ದತಿಗಳನ್ನು ಅಳವಡಿಸಿಕೊಳ್ಳುವುದು, ಆಹಾರದ ಪ್ಯಾಕೇಜಿಂಗ್ ಮತ್ತು ಸಂಸ್ಕರಣೆಗೆ ಪರ್ಯಾಯ ವಿಧಾನ ಬಳಸುವುದು ಇವುಗಳಲ್ಲಿ ಮುಖ್ಯವಾದವು. 

ಆಹಾರದಲ್ಲಿ ಮೈಕ್ರೊ‌ಪ್ಲಾಸ್ಟಿಕ್‌...

ಆರಂಭದಲ್ಲಿ ನಡೆದ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಸಮುದ್ರದ ಆಹಾರಗಳಲ್ಲಿ ಮೈಕ್ರೊಪ್ಲಾಸ್ಟಿಕ್‌ ಕಣಗಳು ಇರುವುದು ಪತ್ತೆಯಾಗಿತ್ತು. ಆದರೆ, ಇತ್ತೀಚಿನ ಹಲವು ಅಧ್ಯಯನಗಳು ತರಕಾರಿ, ಹಣ್ಣು, ಮಾಂಸ, ಜೇನುತುಪ್ಪ ಮತ್ತು ಪ್ಯಾಕ್‌ ಮಾಡಿದ ಆಹಾರಗಳಲ್ಲಿ ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ಇರುವುದರ ಬಗ್ಗೆ ಬೆಳಕು ಚೆಲ್ಲಿವೆ. 

* ಸಮುದ್ರ ಆಹಾರ: ಮೀನು, ಚಿಪ್ಪುಮೀನು (ಶೆಲ್‌ಫಿಶ್‌) ಹಾಗೂ ಇನ್ನಿತರ ಜಲಚರಗಳಲ್ಲಿ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಇರುವುದು ಹಲವು ಅಧ್ಯಯನಗಳಿಂದ ಪತ್ತೆಯಾಗಿತ್ತು. ಈ ವರ್ಷ ಪೋರ್ಚುಗಲ್‌ನಲ್ಲಿ ನಡೆದ ಅಧ್ಯಯನವೊಂದು, ನಾಲ್ಕು ಪ್ರಮುಖ ಬ್ರ್ಯಾಂಡ್‌ಗಳ, ಡಬ್ಬಿಯಲ್ಲಿ ತುಂಬಿಸಿಟ್ಟ ಸಮುದ್ರ ಆಹಾರ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್‌ ಕಣಗಳಿರುವುದನ್ನು ದೃಢಪಡಿಸಿದೆ. ಈ ಹಿಂದೆ ಸಿಂಗಪುರ, ಥಾಯ್ಲೆಂಡ್‌, ಕೆನಡಾ, ಜರ್ಮನಿ, ಜಪಾನ್‌, ಇರಾನ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನಡೆದಿರುವ ಅಧ್ಯಯನಗಳು ಕೂಡ ಇದನ್ನೇ ಹೇಳಿವೆ 

* ಹಣ್ಣು ಮತ್ತು ತರಕಾರಿ: ಹಣ್ಣು ಮತ್ತು ತರಕಾರಿಗಳಲ್ಲಿ ಮೈಕ್ರೊ ಪ್ಲಾಸ್ಟಿಕ್‌ ಕಣಗಳಿವೆಯೇ ಎಂಬ ಬಗ್ಗೆ ಇತ್ತೀಚೆಗಷ್ಟೇ ಅಧ್ಯಯನಗಳು ನಡೆಯುತ್ತಿವೆ. 2020ರಲ್ಲಿ ಇಟಲಿಯ ಕಟಾನಿಯಾ ಮಾರುಕಟ್ಟೆಯಿಂದ ಖರೀದಿಸಿದ್ದ ಆ್ಯಪಲ್‌, ಮರಸೇಬು, ಕ್ಯಾರೆಟ್‌, ಬ್ರಾಕೊಲಿ, ತರಕಾರಿ, ಸೊಪ್ಪು, ಆಲೂಗಡ್ಡೆಗಳಲ್ಲಿ ಮೈಕ್ರೊ ಮತ್ತು ನ್ಯಾನೊ ಪ್ಲಾಸ್ಟಿಕ್‌ ಕಣಗಳು ಇರುವುದು ಪತ್ತೆಯಾಗಿತ್ತು. 2023ರಲ್ಲಿ ಟರ್ಕಿಯ ಮಾರುಕಟ್ಟೆಗಳಲ್ಲಿ ಖರೀದಿಸಿದ ಆ್ಯಪಲ್‌, ಮರಸೇಬು, ಟೊಮೆಟೊ, ಈರುಳ್ಳಿ, ಆಲೂಗಡ್ಡೆ ಸೌತೆಕಾಯಿಯಲ್ಲೂ ಪ್ಲಾಸ್ಟಿಕ್‌ ಕಣಗಳಿರುವುದು ಕಂಡು ಬಂದಿತ್ತು

* ಧಾನ್ಯಗಳು: 2022ರಲ್ಲಿ ಇಂಡೊನೇಷ್ಯಾದಲ್ಲಿ ನಡೆಸಿದ ಅಧ್ಯಯನದಲ್ಲಿ ಅಕ್ಕಿಯಲ್ಲಿ ಪಿವಿಸಿ, ಪಿಇ ಕಣಗಳು ಇರುವುದು ಪತ್ತೆಯಾಗಿತ್ತು

* ಪಾನೀಯಗಳು: 2022ರಲ್ಲಿ //14 ದೇಶಗಳಲ್ಲಿ ನಡೆದ ಅಧ್ಯಯನದಲ್ಲಿ 20ರಿಂದ 80 ಎಂಎಲ್‌ನಷ್ಟು ಬಿಯರ್‌ನಲ್ಲಿ ಪ್ಲಾಸ್ಟಿಕ್‌ ಕಣಗಳು ಇರುವುದು ಪತ್ತೆಯಾಗಿತ್ತು//. ಅಲ್ಲದೇ, ಗ್ರೀನ್‌ ಟೀ, ಬ್ಲ್ಯಾಕ್‌ ಟೀ ಸೇರಿದಂತೆ ವಿವಿಧ ಬಗೆಯ ಚಹಾಗಳಲ್ಲೂ ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ಇರುವುದು ತಿಳಿದುಬಂದಿತ್ತು. 2020ರಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಅಧ್ಯಯನವು  ಹಾಲು, ಸಂಸ್ಕರಿಸಿದ ಹಾಲು, ಹಸುವಿನ ಹಾಲಿನ ಪುಡಿ ಹಾಗೂ ಅದರ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್‌ ಕಣಗಳು ಇರುವುದನ್ನು ಗುರುತಿಸಿತ್ತು. ತಂಪು ಪಾನೀಯ, ಶಕ್ತಿವರ್ಧಕ ಪೇಯಗಳಲ್ಲೂ ‌ಪ್ಲಾಸ್ಟಿಕ್‌ ಕಣಗಳು ಕಂಡು ಬಂದಿದ್ದವು

* ಜೇನುತುಪ್ಪ: 2020ರಲ್ಲಿ ಸ್ವಿಟ್ಜರ್ಲೆಂಡ್‌ ಸೇರಿದಂತೆ ಆರು ರಾಷ್ಟ್ರಗಳಿಂದ ಸಂಗ್ರಹಿಸಿದ ಜೇನುತುಪ್ಪ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಎಲ್ಲ ಮಾದರಿಗಳಲ್ಲೂ ಮೈಕ್ರೊಪ್ಲಾಸ್ಟಿಕ್‌ ಅಂಶ ಪತ್ತೆಯಾಗಿದ್ದವು

* ಮಾಂಸ: 2020ರಲ್ಲಿ ನಡೆದ ಮತ್ತೊಂದು ಅಧ್ಯಯನ ಕೋಳಿ ಮಾಂಸದಲ್ಲಿ ಪ್ಲಾಸ್ಟಿಕ್‌ ಕಣಗಳಿರುವುದನ್ನು ಪತ್ತೆ ಹಚ್ಚಿತ್ತು

* ಕುಡಿಯುವ ನೀರು: ಕುಡಿಯುವ ನೀರಿನಲ್ಲೂ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳಿರುವುದು ಪತ್ತೆಯಾಗಿದೆ. ಈ ವರ್ಷ ಭಾರತದಲ್ಲೇ ನಡೆದ ಅಧ್ಯಯನದಲ್ಲಿ ಇದು ದೃಢಪಟ್ಟಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ಖರೀದಿ ಮಾಡಿದ ರಾಷ್ಟ್ರೀಯ ಮತ್ತು ಸ್ಥಳೀಯ ಬ್ರ್ಯಾಂಡ್‌ಗಳ ಬಾಟಲಿ ನೀರನ್ನು ಪರಿಶೀಲನೆಗೆ ಒಳಪಡಿಸಿದಾಗ ಇದು ಪತ್ತೆಯಾಗಿದೆ. ಟಾಕ್ಸಿಕ್ಸ್‌ ಲಿಂಕ್‌ 2021ರಲ್ಲಿ ಕೈಗೊಂಡಿದ್ದ ಅಧ್ಯಯನದಲ್ಲಿ ಗೋವಾದ ವಿವಿಧ ಕಡೆಗಳ 11 ನಲ್ಲಿ ನೀರಿನ ಮಾದರಿಗಳಲ್ಲೂ ಪ್ಲಾಸ್ಟಿಕ್‌ ಕಣಗಳಿರುವುದು ಕಂಡುಬಂದಿತ್ತು. 2017ರಲ್ಲಿ ಐದು ಖಂಡಗಳ ಆರು ವಲಯಗಳ 157 ನಲ್ಲಿ ನೀರಿನ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಈ ಪೈಕಿ ಶೇ 83 ಮಾದರಿಗಳಲ್ಲಿ 0–1 ಮೈಕ್ರೊಮೀಟರ್‌ ಗಾತ್ರದ ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳಿರುವುದು ಪತ್ತೆಯಾಗಿತ್ತು   

ಆರೋಗ್ಯದ ಮೇಲೆ ಪರಿಣಾಮ

ಮೈಕ್ರೊಪ್ಲಾಸ್ಟಿಕ್‌ ಕಣಗಳಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಸ‌ದ್ಯಕ್ಕೆ ಹೆಚ್ಚು ಮಾಹಿತಿ ಲಭ್ಯವಿಲ್ಲ. ಆದರೆ, ಮೈಕ್ರೊಪ್ಲಾಸ್ಟಿಕ್‌ ಕಣಗಳು ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗಬಲ್ಲದು ಎಂಬುದನ್ನು ಹಲವು ಅಧ್ಯಯನಗಳು ಹೇಳಿವೆ. ವಿವಿಧ ಸಂಯೋಜಕಗಳನ್ನು ಹೊಂದಿರುವ ಪ್ಲಾಸ್ಟಿಕ್‌ನ ಅತಿಸೂಕ್ಷ್ಮಕಣಗಳು ಸಂಕೀರ್ಣ ರಾಸಾಯನಿಕ ಮಿಶ್ರಣಗಳಾಗಿರುತ್ತವೆ. ಈ ರಾಸಾಯನಿಕಗಳು ಸುಲಭವಾಗಿ ರಕ್ತ, ನರಗಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಶೇಖರಣೆಗೊಳ್ಳಬಹುದು. ಈ ಮಿಶ್ರಣಗಳು ಅಪಾಯಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡಬಲ್ಲವು. ಇದು ವಿವಿಧ ರೀತಿಯ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ವರದಿ ಹೇಳಿದೆ.  

ಮೈಕ್ರೊಪ್ಲಾಸ್ಟಿಕ್‌ ಕಣಗಳು ಮತ್ತು ಅದರ ರಾಸಾಯನಿಕಗಳು ವಿವಿಧ ಹಾರ್ಮೋನ್‌ಗಳಿಗೆ ಸಂಬಂಧಿಸಿದ ಕೋಶಗಳ ಮೇಲೆ ಪ್ರಭಾವ ಬೀರಬಹುದು ಮತ್ತು ಇದು ಹಾರ್ಮೋನ್‌ಗಳನ್ನು ಸ್ರವಿಸುವ ಗ್ರಂಥಿಯನ್ನು (ನಿರ್ನಾಳ ಗ್ರಂಥಿ) ಹಾಳುಗೆಡವಬಲ್ಲುದು ಎಂದು 2020ರಲ್ಲಿ ನಡೆದ ಅಧ್ಯಯನವೊಂದರ ವರದಿ ಹೇಳಿತ್ತು. 2019ರಲ್ಲಿ ನಡೆದಿದ್ದ ಅಧ್ಯಯನ ಕೂಡ, ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಹಾರ್ಮೋನುಗಳ ಉತ್ಪಾದನೆ ಮತ್ತು ನಿಯಂತ್ರಣದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಮತ್ತು ಇದರಿಂದ ವಿವಿಧ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಿತ್ತು.

ಪ್ರಮುಖ ಶಿಫಾರಸುಗಳು

l ಮೈಕ್ರೊಪ್ಲಾಸ್ಟಿಕ್‌ ಮಾಲಿನ್ಯದ ಮೂಲ ಮತ್ತು ಮಾರ್ಗವನ್ನು ಪತ್ತೆ ಹಚ್ಚಲು ಸಂಶೋಧನೆಗೆ ಬೆಂಬಲ ನೀಡುವುದು

l ಮೈಕ್ರೊಪ್ಲಾಸ್ಟಿಕ್‌ ಕಣಗಳ ಪತ್ತೆಗೆ ಪ್ರಮಾಣಿತ ಪರೀಕ್ಷಾ ಶಿಷ್ಟಾಚಾರ ರೂಪಿಸುವುದು

l ಮೈಕ್ರೊಪ್ಲಾಸ್ಟಿಕ್‌ ಕಣಗಳು ಜನರ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಮತ್ತು ಅವು ಹೆಚ್ಚಿರುವ ಆಹಾರ ಪದಾರ್ಥಗಳ ಬಳಕೆಯ ಮೇಲೆ ಕಡಿವಾಣ ಹೇರುವ ಬಗ್ಗೆ ಪರಿಶೀಲನೆ

l ಆಹಾರದ ಪದಾರ್ಥಗಳಲ್ಲಿನ ಮೈಕ್ರೊಪ್ಲಾಸ್ಟಿಕ್‌ ಕಣಗಳ ಪ್ರಮಾಣ ಅಪಾಯಕಾರಿ ಮಟ್ಟ ಮುಟ್ಟದಂತೆ ನಿಯಂತ್ರಿಸಲು ಮಾನದಂಡಗಳನ್ನು ರೂಪಿಸುವುದು ಮತ್ತು ಉಪ್ಪು ಮತ್ತು ಸಕ್ಕರೆ ಸೇರಿದಂತೆ ಎಲ್ಲ ಆಹಾರ ಪದಾರ್ಥಗಳ ಮೈಕ್ರೊಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಆಹಾರ ಸುರಕ್ಷತಾ ಸಂಸ್ಥೆಗಳಿಂದ ನಿರಂತರ ಮತ್ತು ಸಮಗ್ರ ಮೇಲ್ವಿಚಾರಣೆ ನಡೆಸುವುದು

ಮನುಷ್ಯನ ದೇಹದಲ್ಲಿ...

ಮನುಷ್ಯನ ದೇಹದ ವಿವಿಧ ಅಂಗಗಳಲ್ಲೂ ಮೈಕ್ರೊಪ್ಲಾಸ್ಟಿಕ್‌ ಕಣಗಳು ಸಂಗ್ರಹಗೊಂಡಿವೆ ಎಂದು ಹೇಳುತ್ತದೆ ಅಧ್ಯಯನ. ಮಾನವ ಸೇವಿಸುವ ಗಾಳಿ, ತಿನ್ನುವ ಆಹಾರ, ಕುಡಿಯುವ ಪಾನೀಯಗಳ ಮೂಲಕ ಅತಿ ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ದೇಹವನ್ನು ಸೇರುತ್ತಿವೆ. 

ಮಾನವನ ದೇಹದಲ್ಲಿ ಎಲ್ಲೆಲ್ಲಿ, ಎಷ್ಟು ಮೈಕ್ರೊಪ್ಲಾಸ್ಟಿಕ್‌ ಕಣಗಳ ಸಂಗ್ರಹ? 

ಕೂದಲು (ಪ್ರತಿ ದಿನ 3.5 ಕಣ)

ಕಫ (ಪ್ರತಿ ಎಂಎಲ್‌ನಲ್ಲಿ1.875–9.175 )

ಜೊಲ್ಲು ರಸ (ಪ್ರತಿ ವ್ಯಕ್ತಿಯಲ್ಲಿ 0.33)

ಶ್ವಾಸಕೋಶ (ಪ್ರತಿ ಗ್ರಾಂನಲ್ಲಿ 0.69–0.84)

ಶ್ವಾಸಕೋಶದ ಗಾಳಿಚೀಲವನ್ನು ಆವರಿಸಿರುವ ತೆಳುವಾದ ದ್ರವ (ಪ್ರತಿ ಎಂಎಲ್‌ನಲ್ಲಿ 9.18–2.45)

ಗುಲ್ಮ (ಸ್ಪ್ಲೀನ್‌) (ಪ್ರತಿ ಗ್ರಾಂನಲ್ಲಿ 0.4–2.2)

ಲಿವರ್‌ (ಪ್ರತಿ ಗ್ರಾಂನಲ್ಲಿ 0–1.5)

ಕಿಡ್ನಿ (ಪ್ರತಿ ಗ್ರಾಂನಲ್ಲಿ 0–0.3)

ಕರುಳು (ಪ್ರತಿ ಗ್ರಾಂನಲ್ಲಿ 0–0.3)

ರಕ್ತ (ಪ್ರತಿ ಎಂಎಲ್‌ನಲ್ಲಿ 1.6 ಮೈಕ್ರೊ ಗ್ರಾಂನಷ್ಟು)

ಎದೆಹಾಲು (ಪ್ರತಿ ಗ್ರಾಂನಲ್ಲಿ 0–2.05ರಷ್ಟು ಮೈಕ್ರೊಪ್ಲಾಸ್ಟಿಕ್‌ ಕಣಗಳು)

ಗರ್ಭ ಪೊರೆ (ಪ್ರತಿ ಎಂಎಲ್‌ನಲ್ಲಿ 0.093–16.13 ಮೈಕ್ರೊಗ್ರಾಂ)

//ಶಿಶು// (ಪ್ರತಿ ಎಂಎಲ್‌ನಲ್ಲಿ 0–12 ಮೈಕ್ರೊಗ್ರಾಂ)

ಮಲ (ಪ್ರತಿ ಎಂಎಲ್‌ನಲ್ಲಿ 0.093–16.13 ಮೈಕ್ರೊಗ್ರಾಂ)

ಉಪ್ಪು (ಸಾಂಕೇತಿಕ ಚಿತ್ರ)

ಉಪ್ಪು (ಸಾಂಕೇತಿಕ ಚಿತ್ರ) 

ಸಕ್ಕರೆ ( ಸಾಂದರ್ಭಿಕ ಚಿತ್ರ)

ಸಕ್ಕರೆ ( ಸಾಂದರ್ಭಿಕ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT