ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಪ್ರಜಾವಾಣಿ @75: ಕನ್ನಡ ನಾಡಿನ ಪರಿಸರವಾಣಿಯಾಗಿ ಪ್ರಜಾವಾಣಿ
ಪ್ರಜಾವಾಣಿ @75: ಕನ್ನಡ ನಾಡಿನ ಪರಿಸರವಾಣಿಯಾಗಿ ಪ್ರಜಾವಾಣಿ
Published 6 ಅಕ್ಟೋಬರ್ 2023, 23:53 IST
Last Updated 6 ಅಕ್ಟೋಬರ್ 2023, 23:53 IST
ಅಕ್ಷರ ಗಾತ್ರ

80ರ ದಶಕದ ಆರಂಭದಲ್ಲಿ ಕನ್ನಡ ಪ್ರಜ್ಞಾಕೊಳಕ್ಕೆ ಹೊಸ ನೀರು ಸೇರಿತು. ಅಮೆರಿಕದ ಪ್ರಿನ್ಸ್‌ಟನ್‌ನಿಂದ ಪ್ರೊ. ಅಮೂಲ್ಯ ರೆಡ್ಡಿ, ಹಾರ್ವರ್ಡ್‌ನಿಂದ ಡಾ. ಮಾಧವ ಗಾಡ್ಗೀಳ್‌, ಷಿಕ್ಯಾಗೊದಿಂದ ಡಾ. ಎಸ್‌.ಆರ್‌. ಹಿರೇಮಠ, ಮುಂಬೈಯಿಂದ ಡಾ. ಕುಸುಮಾ ಸೊರಬ, ದಿಲ್ಲಿಯಿಂದ ಪಾಂಡುರಂಗ ಹೆಗಡೆ ಎಲ್ಲರೂ ತಂತಮ್ಮೊಳಗೆ ಮಾತಾಡಿಕೊಂಡಂತೆ ಕರ್ನಾಟಕಕ್ಕೆ ಬಂದಿಳಿದರು. ಅದೇ ವೇಳೆಗೆ ಶುದ್ಧ ಗಾಳಿ, ಶುದ್ಧ ನೀರು ಮತ್ತು ಅರಣ್ಯ ಪರಿಸರ ರಕ್ಷಣೆಗೆ ಹೊಸ ಕಾನೂನುಗಳು ಒಂದೊಂದಾಗಿ ಜಾರಿಗೆ ಬರತೊಡಗಿದವು. ಕರ್ನಾಟಕದಲ್ಲೂ ‘ಮಾಲಿನ್ಯ ನಿಯಂತ್ರಣ ಮಂಡಳಿ’ ಅಸ್ತಿತ್ವಕ್ಕೆ ಬಂತು. ಪ್ರಜಾವಾಣಿಯೂ ‘ಪತ್ರಕರ್ತರಲ್ಲದ’ ವಿಷಯತಜ್ಞರನ್ನು ನೇಮಕ ಮಾಡಿಕೊಂಡು ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಯಿತು. ಕನ್ನಡ ಪತ್ರಿಕೋದ್ಯಮಕ್ಕೆ ಹೊಸದೆನಿಸಿದ ‘ವಿಜ್ಞಾನ ಮತ್ತು ಅಭಿವೃದ್ಧಿ ಕರೆಸ್ಪಾಂಡೆಂಟ್‌’, ‘ನುಡಿಚಿತ್ರ ಲೇಖಕ’ ಮುಂತಾದ ಹೊಸ ಹುದ್ದೆಗಳು ಸೃಷ್ಟಿಯಾದವು.

1981ರ ಜನವರಿ ತಿಂಗಳು. ಭಾರತದಲ್ಲಿ ಬೃಹತ್‌ ಅಣೆಕಟ್ಟುಗಳ ಸಾಧಕ ಬಾಧಕಗಳ ಚರ್ಚೆಗೆಂದು ಶಿರಸಿಯಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಿತು. ದಿಲ್ಲಿ, ಕೋಲ್ಕತಾ, ಪುಣೆ, ಹೈದರಾಬಾದ್‌ಗಳಿಂದ ವಿಜ್ಞಾನಿಗಳು, ಅರಣ್ಯ ತಜ್ಞರು, ಆಡಳಿತ ವಿಶಾರದರು ಮತ್ತು ಅರ್ಥಶಾಸ್ತ್ರ ಸಂಶೋಧಕರು ಭಾಗವಹಿಸಿದ ಈ ಸಮ್ಮೇಳನಕ್ಕೆ ಚಿಪ್ಕೊ ಖ್ಯಾತಿಯ ಸುಂದರಲಾಲ್‌ ಬಹುಗುಣ ಮತ್ತು ಚಂಡೀಪ್ರಸಾದ್‌ ಭಟ್‌ ಕೂಡ ಬಂದರು. ಸ್ವರ್ನವಲ್ಲಿ ಸರ್ವಜ್ಞೇಂದ್ರ ಸ್ವಾಮೀಜಿಯವರು ‘ಅರಣ್ಯಸೂಕ್ತ’ವನ್ನು ಪಠಿಸುವ ಮೂಲಕ ಆರಂಭವಾಗಿ ಡಾ. ಶಿವರಾಮ ಕಾರಂತರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನದ ಮೂಲಕವೇ ಕರ್ನಾಟಕದಲ್ಲಿ ವಿಧ್ಯುಕ್ತವಾಗಿ ಪರಿಸರ ಪ್ರಜ್ಞೆಯ ಅನಾವರಣವಾಯಿತು.

ನಿಜ, ಅದಕ್ಕಿಂತ ತುಸು ಮೊದಲೇ ಬೇಡ್ತಿ-ಅಘ ನಾಶಿನಿ ಚಳವಳಿಗಳು ನಡೆದವಾದರೂ ಅವೆಲ್ಲ ಆಸ್ತಿಪಾಸ್ತಿಯ ಮುಳುಗಡೆ, ಮರುವಸತಿ ಅಥವಾ ಪರಿಹಾರಗಳ ಸಾಧಕ-ಬಾಧಕಗಳಿಗಷ್ಟೇ ಸೀಮಿತವಾಗಿತ್ತು. ಯಾರ ಖಾಸಗೀ ಒಡೆತನಕ್ಕೂ ಸೇರಿರದ ಜೀವಮಂಡಲದ ಯೋಗಕ್ಷೇಮ ಕುರಿತ ಮೊದಲ ಬೌದ್ಧಿಕ ವಿಚಾರಮಂಥನ ಅದಾಗಿತ್ತು. ಪ್ರಕೃತಿಯ ಜೊತೆ ಸಹವರ್ತಿಯಾಗಿ ಮಾನವ ಅಭಿವೃದ್ಧಿ ಸಾಧ್ಯವೆ ಎಂಬ ಬಗ್ಗೆ ಚರ್ಚೆ ನಡೆದವು. ಎರಡು ದಿನಗಳ ಆ ಸಮ್ಮೇಳನದಲ್ಲಿ ‘ಪ್ರಜಾವಾಣಿ’ಯನ್ನು ಪ್ರತಿನಿಧಿಸಿದ ವರದಿಗಾರ ಕೂಡ ದಿಲ್ಲಿಯಲ್ಲಿ ಪರಿಸರ ವಿಜ್ಞಾನದಲ್ಲಿ ಪದವಿ ಪಡೆದ (ದೇಶದ ಮೊದಲ ತಂಡದ) ವಿದ್ಯಾರ್ಥಿಯೇ ಆಗಿದ್ದೊಂದು ವಿಶೇಷ.

‘ದೊಡ್ಡ ಅಣೆಕಟ್ಟುಗಳೆಂದರೆ ಒಂದು ರೂಪಾಯಿಯನ್ನು ಮುಳುಗಿಸಿ 70 ಪೈಸೆಯನ್ನು ಮೇಲಕ್ಕೆ ಎತ್ತಿದಷ್ಟೇ ವ್ಯಾವಹಾರಿಕ’ ಎಂದು ಕೋಲ್ಕತಾದ ಮಾನವಶಾಸ್ತ್ರಜ್ಞ ಪ್ರೊ. ಕೆ.ಸಿ. ಮಲ್ಹೋತ್ರ ಹೇಳಿದ್ದು ಪ್ರಜಾವಾಣಿಯ ಮುಖಪುಟದಲ್ಲಿ ಹೆಡ್‌ಲೈನ್‌ ಆಗಿದ್ದೇ ಪರಿಸರ ವೈಚಾರಿಕತೆ ಕುರಿತಂತೆ ಕನ್ನಡದ ಮೊದಲ ವರದಿಯಾಗಿ ದಾಖಲಾಯಿತು.

ಪಶ್ಚಿಮ ಘಟ್ಟಗಳ ಕುರಿತು ಸಾಪ್ತಾಹಿಕ ಪುರಾವಣಿಯಲ್ಲಿ 1986ರ ಮೇ 25ರಂದು ಪ್ರಕಟವಾಗಿದ್ದ ಲೇಖನಚಿತ್ರಗಳು :ಪ್ರಜಾವಾಣಿ ಆರ್ಕೈವ್

ಪಶ್ಚಿಮ ಘಟ್ಟಗಳ ಕುರಿತು ಸಾಪ್ತಾಹಿಕ ಪುರಾವಣಿಯಲ್ಲಿ 1986ರ ಮೇ 25ರಂದು ಪ್ರಕಟವಾಗಿದ್ದ ಲೇಖನ

ಚಿತ್ರಗಳು :ಪ್ರಜಾವಾಣಿ ಆರ್ಕೈವ್

ಎಂಬತ್ತರ ದಶಕವೆಂದರೆ ಚಳವಳಿಗಳ ದಶಕವೇ ಆಗಿತ್ತು. ಅದುವರೆಗಿನ ಎಂದಿನ ಕಾರ್ಮಿಕ ಚಳವಳಿ, ವಿದ್ಯಾರ್ಥಿ ಚಳವಳಿಗಳ ಸಾಲಿಗೆ ಹೊಸದಾಗಿ ದಲಿತ ಚಳವಳಿ, ರೈತ ಚಳವಳಿ, ಗ್ರಾಹಕ ಚಳವಳಿ, ಪರಿಸರ ಚಳವಳಿಗಳೂ ಸೇರಿ ಒಂದಕ್ಕೊಂದು ಪೂರಕವಾಗಿ, ಅನೇಕ ಬಾರಿ ಜಂಟಿಯಾಗಿ ಘೋಷಣೆಗಳನ್ನು ಹೊಮ್ಮಿಸುತ್ತಿದ್ದ ಕಾಲ. ತಿಂಗಳಿಗೆ ಒಂದಲ್ಲ ಒಂದು ಅಂಥ ಸಮಾವೇಶ ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ನಡೆಯುತ್ತಿತ್ತು. ಬಹಳಷ್ಟು ಮೆರವಣಿಗೆಗಳು ‘ಪ್ರಜಾವಾಣಿ’ ಕಚೇರಿಯ ಎದುರಿಗೇ ಸಾಗುತ್ತಿದ್ದವು.

‘ಬೇಡ್ತಿಗೆ ಅಣೆಕಟ್ಟು ಬೇಡವೆಂದರೆ ರಾಜ್ಯಕ್ಕೆ ವಿದ್ಯುತ್‌ ಶಕ್ತಿ ಬೇಡವೆ’ ಎಂದು ಕೇಳುತ್ತ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಪರಮಾಣು ವಿಜ್ಞಾನಿ ಡಾ. ರಾಜಾ ರಾಮಣ್ಣನವರ ಜೊತೆ ಸಮಾಲೋಚಿಸಿ ಬೇಡ್ತಿ ಪಕ್ಕದ ಕಾಳಿ ಕಣಿವೆಯಲ್ಲಿ ಹೊಸ ಪರಮಾಣು ಸ್ಥಾವರಕ್ಕೆ ಅಡಿಪಾಯ ಹಾಕಿದರು. ಭೂಗರ್ಭದಲ್ಲಿ ಆಳ ಬಿರುಕು ಇರುವ ಕಣಿವೆಯಲ್ಲಿ ಆಗಲೇ ಐದು ಅಣೆಕಟ್ಟು ಕಟ್ಟಲಾಗಿದ್ದು ಅಲ್ಲೇ ಅಣುಸ್ಥಾವರ ತಲೆ ಎತ್ತಿದರೆ ಭವಿಷ್ಯಕ್ಕೆ ಭಾರೀ ಅಪಾಯಕಾರಿ ಎಂದು ಡಾ. ಶಿವರಾಮ ಕಾರಂತರ ನೇತೃತ್ವದಲ್ಲಿ ಹೊಸ ಚಳವಳಿ ಆರಂಭವಾಯಿತು. ಸಮುದ್ರದಲ್ಲಿ ತೆಪ್ಪದ ಮೇಲೆ ಕಲ್ಲಿದ್ದಲ ಉಷ್ಣ ವಿದ್ಯುತ್‌ ಸ್ಥಾವರವನ್ನು ಹೂಡಲು ಸರಕಾರ ಸಿದ್ಧತೆ ನಡೆಸಿತು. ದಕ್ಷಿಣ ಕನ್ನಡದಲ್ಲಿ ಅದಕ್ಕೂ ವಿರೋಧ ಬಂತು. ಕಾಡು ಕಡಿದು ನೀಲಗಿರಿ ತೋಪು ಬೆಳೆಸುವ ವಿರುದ್ಧ ಚಿಪ್ಕೊ ಮಾದರಿಯ ಚಳವಳಿ (ಅದಕ್ಕೆ ‘ಅಪ್ಪಿಕೋ’ ಚಳವಳಿ ಎಂಬ ನಾಮಕರಣ ಪ್ರಜಾವಾಣಿ ಮೂಲಕವೇ ಆಗಿದ್ದು), ಶರಾವತಿ ಕಣಿವೆಯ ಸದಾಹಸಿರಿನ ಕಾಡನ್ನು ಮುಳುಗಿಸಿ ಟೇಲ್‌ರೇಸ್‌ ಅಣೆಕಟ್ಟನ್ನು ನಿರ್ಮಿಸುವ ಪ್ರಸ್ತಾವದ ವಿರುದ್ಧವೂ ಚಳವಳಿ ನಡೆಯಿತು. ಗುಜರಿ ಹಡಗುಗಳನ್ನು ಮಂಗಳೂರಿನ ತಣ್ಣೀರಬಾವಿ ಎಂಬಲ್ಲಿಗೆ ಸಾಗಿಸಿ ತಂದು ಒಡೆಯುವ ಯೋಜನೆಗೂ ವಿರೋಧ ಬಂತು. ಕೊಜೆಂಟ್ರಿಕ್ಸ್‌ಗೆ ವಿರೋಧ ಬಂತು, ಪಶ್ಚಿಮ ಘಟ್ಟದಲ್ಲಿ ಮ್ಯಾಂಗನೀಸ್‌ ಗಣಿಗಾರಿಕೆಗೆ ವಿರುದ್ಧ, ಹರಿಹರದ ಪಾಲಿಫೈಬರ್‌ ಕಾರ್ಖಾನೆಯ ಮಾಲಿನ್ಯದ ವಿರುದ್ಧ, ನೀಲಗಿರಿ ನೆಡುತೋಪುಗಳ ವಿರುದ್ಧ ಚಳವಳಿ ನಡೆದವು.

ಐತಿಹಾಸಿಕ ‘ಪಶ್ಚಿಮಘಟ್ಟ ಉಳಿಸಿ ಪಾದಯಾತ್ರೆ’, ಮಧ್ಯಪ್ರದೇಶದ ಹರ್ಸೂದ್‌ನಲ್ಲಿ ನಡೆದ ಬೃಹತ್‌ ‘ನರ್ಮದಾ ಬಚಾವೊ’ ಸಮಾವೇಶ, ಬ್ರಝಿಲ್‌ ದೇಶದ ರಿಯೊ ನಗರದಲ್ಲಿ ನಡೆದ ಪ್ರಥಮ ಪೃಥ್ವೀ ಶೃಂಗಸಭೆಗೆ ‘ಪ್ರಜಾವಾಣಿ’ ತನ್ನ ವರದಿಗಾರರನ್ನು ಕಳುಹಿಸಿತ್ತು. ವರದಿ ಅಷ್ಟೇ ಅಲ್ಲ, ಸಂಪಾದಕೀಯಗಳೂ ವಿಸ್ತೃತ ಲೇಖನಗಳೂ ‘ಸಾಪ್ತಾಹಿಕ ಪುರವಣಿ’ಗಳಲ್ಲಿ ಪ್ರಕಟವಾದವು. ದೀಪಾವಳಿಯ ವಿಶೇಷಾಂಕಗಳಲ್ಲೂ ಪರಿಸರದ ಮಹತ್ವವನ್ನು ಸಾರುವ ಲೇಖನ, ಪ್ರಬಂಧ, ಕವನಗಳು ಹೊಮ್ಮತೊಡಗಿದವು. ಅಂದಿನ ಪರಿಸರ ‘ಯೋಧ’ರ ಸಂಭ್ರಮ ಅದೆಷ್ಟಿತ್ತೆಂದರೆ ಡಾ. ಶಿವರಾಮ ಕಾರಂತರನ್ನೂ ಒತ್ತಾಯಿಸಿ 1988ರಲ್ಲಿ ಲೋಕಸಭಾ ಚುನಾವಣೆಯ ‘ಪರಿಸರ ಅಭ್ಯರ್ಥಿ’ಯಾಗಿ ನಿಲ್ಲಿಸಿ, ಗೆಲ್ಲಿಸಲಾಗದೆ ಸೋತರು.

90ರ ದಶಕದಲ್ಲಿ ಜಾಗತೀಕರಣದ ಸುನಾಮಿಯ ಜೊತೆಜೊತೆಗೇ ಕಲರ್‌ ಟಿ.ವಿ, ಕಂಪ್ಯೂಟರ್‌ ಶಿಕ್ಷಣ, ಹೊಸ ಉದ್ಯೋಗಾವಕಾಶಗಳ ಬಾಗಿಲು ತೆರೆದಾಗ ಹೋರಾಟಗಳಿಗೆ ಯುವಜನರೇ ಇಲ್ಲದಂತಾಗಿ ಎಲ್ಲ ತರಾವರಿ ಚಳವಳಿಗಳೂ ನೆಲ ಕಚ್ಚಿದವು. ಪ್ರತಿಭಟನೆಯೇ ಇಲ್ಲದಾದಾಗ ಒಂದರ ಮೇಲೊಂದರಂತೆ ಹೊಸ ಹೊಸ ಅಭಿವೃದ್ಧಿ ಯೋಜನೆಗಳು ಜಾರಿಗೆ ಬಂದವು.

ಪಶ್ಚಿಮ ಘಟ್ಟ ಸಂರಕ್ಷಣೆ ಸಂಬಂಧ 1987ರ 24ನೇ ಅಕ್ಟೋಬರ್‌ನ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿದ್ದ ‘ಪಶ್ಚಿಮಘಟ್ಟ ಉಳಿಸಿ ಅಭಿಯಾನ’ ಲೇಖನ

ಪಶ್ಚಿಮ ಘಟ್ಟ ಸಂರಕ್ಷಣೆ ಸಂಬಂಧ 1987ರ 24ನೇ ಅಕ್ಟೋಬರ್‌ನ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿದ್ದ ‘ಪಶ್ಚಿಮಘಟ್ಟ ಉಳಿಸಿ ಅಭಿಯಾನ’ ಲೇಖನ

ಪರಿಸರ ಕಾಳಜಿ ಎಂದರೆ ಕೇವಲ ಹೃದಯವಂತಿಕೆ, ಕವಿಮನಸ್ಸು, ನುಡಿಚಿತ್ರ ಕೌಶಲ ಅಷ್ಟೇ ಅಲ್ಲವಲ್ಲ! ವೈಜ್ಞಾನಿಕ ದೃಷ್ಟಿಕೋನ, ಅಭಿವೃದ್ಧಿಯ ಅಗತ್ಯಗಳು, ಜನನಾಯಕರ ಅನಿಸಿಕೆ, ಕಾನೂನಿನ ಇತಿಮಿತಿ, ನಿಖರ ಅಂಕಿಸಂಖ್ಯೆ ಎಲ್ಲವನ್ನೂ ಗಮನಿಸಿ ಸಮತೂಕದ ವಿಶ್ಲೇಷಣೆ ಕೂಡ ಬೇಕಾಗುತ್ತದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಡಾ. ಮಾಧವ ಗಾಡ್ಗೀಳ್‌ ಮತ್ತು ಕಸ್ತೂರಿ ರಂಗನ್‌ ವರದಿಗಳನ್ನು ಅಥವಾ ಆ ಘಟ್ಟಗಳಿಗೆ ‘ಯುನೆಸ್ಕೊ’ ಮಾನ್ಯತೆಯ ಪ್ರಸ್ತಾವನೆಯನ್ನು ಶಾಸನ ಸಭೆಯಲ್ಲಿ ಚರ್ಚೆಯನ್ನೇ ನಡೆಸದೆ ಮೂಲೆಗೊತ್ತಿದಾಗ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಖಡಕ್‌ ಸಂಪಾದಕೀಯಗಳು ಅನನ್ಯವೆನಿಸಿವೆ. ಅಂಥ ವಿವಾದಾತ್ಮಕ ಘಟನೆ ನಡೆದಾಗಲೆಲ್ಲ ಈ ಪತ್ರಿಕೆ ನಾಡಿನ ತಜ್ಞರಿಂದ ಲೇಖನವನ್ನು ಬರೆಸಿ ಪ್ರಕಟಿಸಿದೆ. ಜೊತೆಗೆ ಪರಿಸರ ಧ್ವಂಸದ ಅನೇಕ ಸತ್ಯನಿಷ್ಠುರ ತನಿಖಾ ಚಿತ್ರಣಗಳನ್ನು ‘ಪ್ರಜಾವಾಣಿ’ಯ ವರದಿಗಾರರು ಕಾಲಕಾಲಕ್ಕೆ ನೀಡುತ್ತಲೇ ಬಂದಿದ್ದಾರೆ. ‘ಕರ್ನಾಟಕ ದರ್ಶನ’ದಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಸ್ಯಾಂಕಿಕೆರೆಯ ದಡದಲ್ಲಿ ನಿರ್ಮಾಣವಾಗಲಿದ್ದ ಬಹುಮಹಡಿ ಕಟ್ಟಡ ನಿರ್ಮಾಣ ಅಡಿಪಾಯದಲ್ಲೇ ಸ್ಥಗಿತಗೊಂಡಿದೆ. ಗದಗ ಜಿಲ್ಲೆಯ ಮಾಗಡಿ ಕೆರೆ, ಮಂಡಗದ್ದೆ ಪಕ್ಷಿಧಾಮ ಸುತ್ತಲಿನ ಒತ್ತುವರಿಗೆ ತಡೆ ಬಿದ್ದಿದೆ. ಅಭಿವೃದ್ಧಿಯ ನೀಲನಕ್ಷೆಯಲ್ಲಿ ಭಲೇಭಲೇ ಎನ್ನುವಂಥ ಯೋಜನೆಗಳು ಅನುಷ್ಠಾನಕ್ಕೆ ಬಂದಾಗ ಅದೆಷ್ಟು ಅಧ್ವಾನದ್ದಾಗುತ್ತವೆ ಎಂಬುದನ್ನು ತೋರಿಸುವ ಬಹಳಷ್ಟು ಉದಾಹರಣೆಗಳು, ಸರಣಿ ಲೇಖನಗಳು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿವೆ. ರವೀಂದ್ರ ಭಟ್‌ ಅವರು ಕಾವೇರಿ ನದೀಪಾತ್ರದುದ್ದಕ್ಕೂ ಸಂಚರಿಸಿ ನೀಡಿದ ಸರಣಿ ವರದಿ, ಇಳಕಲ್‌ ಸುತ್ತಮುತ್ತಲಿನ ಕಲ್ಲುಗಣಿಗಳ ಅಧ್ವಾನ, ಮೈಸೂರು ಜಿಲ್ಲೆಯ ಬುಡಕಟ್ಟು ಜನರ ಸ್ಥಿತಿಗತಿ, ಹೂಳು ತುಂಬಿ ದುರ್ಗತಿಗೀಡಾದ ಜಲಾಶಯಗಳ ಸಮೀಕ್ಷೆ ಇವೆಲ್ಲ ‘ಪ್ರಜಾವಾಣಿ’ಯ ತನಿಖಾ ವರದಿಗಳ ಹೆಗ್ಗುರುತಾಗಿ ಉಳಿದಿವೆ. ನಾಡಿನ ಅರಣ್ಯ ಪರಿಸರದಲ್ಲಿ ನಡೆಯುತ್ತಿರುವ ತರಾವರಿ ಗೋಲ್‌ಮಾಲ್‌ಗಳ ಬಗ್ಗೆ ಜಿ.ಡಿ.ಯತೀಶ್‌ಕುಮಾರ್‌ ನೀಡುತ್ತ ಬಂದ ಅನೇಕ ವರದಿಗಳನ್ನು (ಉದಾ: ಭೀಮಗಢದಲ್ಲಿ ಅಕ್ರಮ ರೆಸಾರ್ಟ್‌ಗಳು) ಆಧರಿಸಿ ಸರಕಾರ ತಕ್ಷಣ ತುರ್ತುಕ್ರಮ ಕೈಗೊಂಡಿದ್ದೂ ಇದೆ. ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗ ಮತ್ತು ಕಪ್ಪತಗುಡ್ಡದ ಗಣಿಗಾರಿಕೆಗೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳೇ ಕುಮ್ಮಕ್ಕು ನೀಡಿರುವ ಬಗ್ಗೆ ಯತೀಶ್‌ ನಿರ್ಭೀತ ವರದಿ ನೀಡಿದ್ದರು. ಆನಂದ ತೀರ್ಥ ಪ್ಯಾಟಿ, ಗಾಣಧಾಳು ಶ್ರೀಕಂಠ ಇಬ್ಬರಿಗೂ ವಾರ್ತಾ ಇಲಾಖೆ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಸನ್ಮಾನಿಸಿತು. ಶಿಕ್ಷಕ ವೃತ್ತಿಯಲ್ಲಿರುವ ಗುರುರಾಜ್‌ ದಾವಣಗೆರೆ ಪ್ರಜಾವಾಣಿಗೆ ಬರೆದ ಲೇಖನಗಳ ಸಂಗ್ರಹ ‘ಹಸಿರು ಮನ್ವಂತರ’ ಕೃತಿಗೆ ಪ್ರಶಸ್ತಿಯೂ ಬಂತು.

ಇಂದು ಹೈಸ್ಕೂಲ್‌, ಕಾಲೇಜು, ವಿಶ್ವವಿದ್ಯಾಲಯಗಳವರೆಗಿನ ಅನೇಕ ತರಗತಿಗಳ ಪಠ್ಯಗಳಲ್ಲಿ ಪರಿಸರ ಪಾಠಗಳಿವೆ. ಅವುಗಳಲ್ಲಿ ಬಹುಮಟ್ಟಿನ ಲೇಖನಗಳೆಲ್ಲ ಈ ಮೊದಲು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದವುಗಳೇ ಆಗಿದೆ. ಕನ್ನಡ ನಾಡಿನಲ್ಲಿ ಪರಿಸರ ಸಾಕ್ಷರತೆಯನ್ನು ಪಸರಿಸುವಲ್ಲಿ ಪ್ರಜಾವಾಣಿಯ ಕೊಡುಗೆಯ ಬಗ್ಗೆ ಬೇರೆ ಉದಾಹರಣೆ ಬೇಕೆ?.

1989ರ ಸೆಪ್ಟೆಂಬರ್ 28ರಂದು ಮಧ್ಯಪ್ರದೇಶದ ಮರ್ಸೂದ್‌ನಲ್ಲಿ ನಡೆದಿದ್ದ ಬೃಹತ್ ಪರಿಸರ ಮೇಳ ಕುರಿತು 1989ರ ಅಕ್ಟೋಬರ್ 15ರಂದು ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದ್ದ ಲೇಖನ

1989ರ ಸೆಪ್ಟೆಂಬರ್ 28ರಂದು ಮಧ್ಯಪ್ರದೇಶದ ಮರ್ಸೂದ್‌ನಲ್ಲಿ ನಡೆದಿದ್ದ ಬೃಹತ್ ಪರಿಸರ ಮೇಳ ಕುರಿತು 1989ರ ಅಕ್ಟೋಬರ್ 15ರಂದು ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದ್ದ ಲೇಖನ

ಪರಿಣತರಿಂದ ಜಾಗೃತಿ

ಯಾವುದೇ ಹೊಸ ಯೋಜನೆಯ ಪ್ರಸ್ತಾಪ ಬಂದರೂ ‘ಪ್ರಜಾವಾಣಿ’ ಅದನ್ನು ಮೊದಲೇ ಗ್ರಹಿಸಿ ಅಂಥ ಯೋಜನೆಯ ಬಗ್ಗೆ ಗಾಡ್ಗೀಳ, ಸೆಸಿಲ್‌ ಸಾಲ್ಡಾನ್ಹಾ, ಅಮೂಲ್ಯ ರೆಡ್ಡಿಯಂಥ ವಿಜ್ಞಾನಿಗಳ, ಪರಿಸರ ತಜ್ಞರ, ಕಾನೂನು ತಜ್ಞರ ಮತ್ತು ಸ್ಥಳೀಯ ನಾಗರಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿ ಮಾಡುತ್ತಿತ್ತು. ‘ಸುಸ್ಥಿರ ಅಭಿವೃದ್ಧಿ’, ‘ಧಾರಣ ಶಕ್ತಿ’, ‘ಜೀವಜಾಲ’ ಮುಂತಾದ ಹೊಸ ಪರಿಕಲ್ಪನೆಗಳು ಮತ್ತು ಪದಪುಂಜಗಳು ಕನ್ನಡಕ್ಕೆ ಸೇರ್ಪಡೆಯಾದವು. ಪರಿಸರ ಚಳವಳಿಗಳಿಗೆ ಕೆಲವೊಮ್ಮೆ ಮುಂಬೆಳಕಾಗಿ, ಕೆಲವೊಮ್ಮೆ ಹಿಂಬೆಳಕಾಗಿ ‘ಪ್ರಜಾವಾಣಿ’ ಕನ್ನಡ ಸಮಾಜಕ್ಕೆ ಹೊಸ ಆಕರ ಸಾಹಿತ್ಯವನ್ನು ಸೃಷ್ಟಿಸತೊಡಗಿತ್ತು. ಚೆರ್ನೊಬಿಲ್‌ ದುರಂತ, ಭೋಪಾಲ ಅನಿಲ ದುರಂತಗಳ ವಿಸ್ತೃತ ವಿಶ್ಲೇಷಣೆಗಳನ್ನೂ ಓದುಗರಿಗೆ ನೀಡುತ್ತ ಬಂದಿತ್ತಷ್ಟೇ ಅಲ್ಲ, ಎಚ್‌.ಆರ್‌. ಕೃಷ್ಣಮೂರ್ತಿ, ಪಾಂಡುರಂಗ ಹೆಗಡೆ, ನರೇಂದ್ರ ರೈ ದೇರ್ಲ, ಯೆಲ್ಲಪ್ಪ ರೆಡ್ಡಿ, ಸುಮಂಗಲಾ ಮುಮ್ಮಿಗಟ್ಟಿ, ಸುರೇಶ್‌ ಹೆಬ್ಳೀಕರ್‌, ಸಂಜಯ್‌ ಗುಬ್ಬಿ, ಅನಂತ ಅಶೀಸರ, ಉಲ್ಲಾಸ್‌ ಕಾರಂತ ಮುಂತಾದವರ ಲೇಖನ, ಸಂದರ್ಶನಗಳನ್ನೂ ಪ್ರಕಟಿಸತೊಡಗಿತ್ತು.

ಕರ್ನಾಟಕದ ದರ್ಶನ

ಕರ್ನಾಟಕದ ದರ್ಶನ

ಕರ್ನಾಟಕದ ದರ್ಶನ

ಪರಿಸರ ಚಳವಳಿಗಳ ಅಬ್ಬರ ತಗ್ಗಿದರೂ ನೆಲಮಟ್ಟದಲ್ಲಿ ಅದರ ಕಾವು ಆರಿರಲಿಲ್ಲ. ಅದೇ ವೇಳೆಗೆ ‘ಕರ್ನಾಟಕ ದರ್ಶನ’ ಹೆಸರಿನ ಹೊಸ ವರ್ಣರಂಜಿತ ಪುರವಣಿಯನ್ನು ‘ಪ್ರಜಾವಾಣಿ’ ಪ್ರಾರಂಭಿಸಿತು. ಅದರ ಉಸ್ತುವಾರಿ ನನ್ನ ಹೆಗಲಿಗೇ ಬಂತು. ಈ ಮೂಲಕ ಜಿಲ್ಲಾಮಟ್ಟದ, ತಾಲ್ಲೂಕು ಮಟ್ಟದ ವರದಿಗಾರರಿಗಷ್ಟೇ ಅಲ್ಲ, ಯುವ ಫ್ರೀಲಾನ್ಸ್‌ ಬರಹಗಾರರಿಗೂ ಹೊಸ ಅವಕಾಶ ತೆರೆದಂತಾಗಿ ನಾಡಿನ ನಾಲ್ಕೂ ನಿಟ್ಟಿನಿಂದ ಪ್ರಕೃತಿ ವಿಶೇಷಗಳ ಕುರಿತು ನುಡಿಚಿತ್ರ, ಛಾಯಚಿತ್ರಗಳ ಸರಮಾಲೆಗಳೇ ಪ್ರಕಟವಾಗತೊಡಗಿದವು. ಜಾಹೀರಾತುಗಳ ದಟ್ಟಣೆ ಇಲ್ಲದ್ದರಿಂದ ಪುಟಸಂಯೋಜನೆಯಲ್ಲೂ ಹೊಸ ಹೊಸ ಪ್ರಯೋಗಗಳನ್ನು ನಡೆಸಲು ಸಾಧ್ಯವಾಯಿತು. ಸುಂದರ ಗಿರಿಶಿಖರ, ನದಿ- ಸರೋವರ, ಕರಾವಳಿ, ಅರಣ್ಯ, ಗಿಡಮೂಲಿಕೆ, ಪ್ರಾಣಿಪಕ್ಷಿ ಸಂಕುಲಗಳ ಸುಸ್ಥಿತಿ, ಅವನತಿಯ ಚಿಕಿತ್ಸಕ ದೃಷ್ಟಿಕೋನವುಳ್ಳ ಬರೆಹಗಳನ್ನು ಒದಗಿಸಲು ಪ್ರಜಾವಾಣಿಯ ವರದಿಗಾರರಿಗೂ ಫ್ರೀಲಾನ್ಸಿಗಳಿಗೂ ಪೈಪೋಟಿಯೇ ಏರ್ಪಟ್ಟಂತಾಗಿತ್ತು. ಅಕ್ಷರ ಬಲ್ಲವರಲ್ಲೆಲ್ಲ ಪರಿಸರ ಪ್ರಜ್ಞೆ ವ್ಯಕ್ತವಾಗತೊಡಗಿತ್ತು. ನೂರಾರು ಹೊಸ ಬರೆಹಗಾರರಿಗೆ ‘ಪ್ರಜಾವಾಣಿ’ಯೇ ಪ್ರಮುಖ ವೇದಿಕೆಯಾಗಿತ್ತು.

ಈ ಪುರವಣಿಯ ಕೊನೆಯ ಪುಟದ ‘ಕೃಷಿದರ್ಶನ’ದ ಮೂಲಕ ಸಾವಯವ ಕೃಷಿ, ದೇಸೀ ಬೀಜ ಸಂರಕ್ಷಣೆ, ಅಲ್ಪನೀರಿನ ಬೇಸಾಯ, ಕುಲಾಂತರಿ ತಂತ್ರಜ್ಞಾನದ ಅಪಾಯಗಳ ಬಗ್ಗೆ ಜಾಗೃತಿ ಮೂಡಿದ್ದೂ ಅಲ್ಲದೆ, ನಾರಾಯಣ ರೆಡ್ಡಿ, ಭರಮಗೌಡ್ರ, ಜಿ. ಕೃಷ್ಣಪ್ರಸಾದ್‌ ಬೆಳಕಿಗೆ ಬರುವಂತಾಯಿತು. ಕರ್ನಾಟಕ ಸರ್ಕಾರ ಸಾವಯವ ಕೃಷಿನೀತಿಯನ್ನು ಘೋಷಿಸುವಲ್ಲಿ ಈ ಪುರವಣಿ ಮಹತ್ತರ ಪಾತ್ರವನ್ನು ನಿರ್ವಹಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT