ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಪ್ರಜಾವಾಣಿ @75: ಜನರ ನೋವಿಗೆ ಮಿಡಿವ ಪ್ರಾಣಮಿತ್ರ
ಪ್ರಜಾವಾಣಿ @75: ಜನರ ನೋವಿಗೆ ಮಿಡಿವ ಪ್ರಾಣಮಿತ್ರ
Published 16 ಜೂನ್ 2023, 19:35 IST
Last Updated 16 ಜೂನ್ 2023, 19:35 IST
ಅಕ್ಷರ ಗಾತ್ರ

ಜಾತ್ಯತೀತ ಮನೋಭಾವ, ಸಾಮಾಜಿಕ ಸೌಹಾರ್ದ, ದೀನದಲಿತರ ಹಿತಾಸಕ್ತಿಯ ಹಂಬಲ, ಮಹಿಳಾ ಅಭ್ಯುದಯ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆ – ಇವು, ‘ಪ್ರಜಾವಾಣಿ’ಯ ಎಪ್ಪತ್ತೈದು ವರ್ಷಗಳ ಪಯಣದಲ್ಲಿ ಹಾಸುಹೊಕ್ಕಾಗಿರುವುದಕ್ಕೆ ನೂರಾರು ನಿದರ್ಶನಗಳನ್ನು ನೆನಪಿಸಿಕೊಳ್ಳಬಹುದು. ಆ ನಿದರ್ಶನಗಳನ್ನೆಲ್ಲ ಒಟ್ಟಿಗಿಟ್ಟು ನೋಡಿದರೆ, ಅದು ‘ಪ್ರಜಾವಾಣಿ’ ನಡೆದುಬಂದ ಹಾದಿಯಾಗಿರುವುದು ಮಾತ್ರವಲ್ಲದೆ, ಸ್ವತಂತ್ರ ಭಾರತದ ಸಾಮಾಜಿಕ ಚರಿತ್ರೆಯೂ– ವಿಶೇಷವಾಗಿ ಕರ್ನಾಟಕದ ಚರಿತ್ರೆಯೂ– ಆಗಿದೆ

‘ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ – ‘ಬಂಡಾಯ’ ಸಂಘಟನೆಗೆ ಡಿ.ಆರ್‌. ನಾಗರಾಜ್‌ ನೀಡಿದ ಈ ಧ್ಯೇಯವಾಕ್ಯವನ್ನು ‘ಪತ್ರಿಕೆಯಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂದು ಬದಲಿಸಿದರೆ, ಅದು ‘ಪ್ರಜಾವಾಣಿ’ ಪತ್ರಿಕೆ ನಡೆದುಬಂದ ಹಾದಿಯನ್ನೇ ಹೇಳಿದಂತಾಗುತ್ತದೆ. 

ಜನರ ನೋವಿಗೆ ಮಿಡಿಯುವುದು ಪತ್ರಿಕೆಯೊಂದಕ್ಕೆ ನೇರವಾಗಿ ಸಂಬಂಧಿಸಿದ ಹೊಣೆಗಾರಿಕೆಯಲ್ಲ. ಸಮಾಜದಲ್ಲಿನ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ಜನರ ಮುಂದಿಡುವುದು ಪತ್ರಿಕೆಯ ಕೆಲಸ. ಈ ‘ಕನ್ನಡಿ ಕೆಲಸ’ದ ಅಂತಿಮ ಉದ್ದೇಶವೂ ಸಮಾಜದ ಕಾಳಜಿಯೇ ಆಗಿರುವುದರಿಂದ, ಪತ್ರಿಕೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಭಿನ್ನವಾಗಿ ನೋಡುವುದು ಅಸಾಧ್ಯ. ಪತ್ರಿಕಾಧರ್ಮ ಎನ್ನುವುದು ಜನರ ಕಾಳಜಿಯ ವಕ್ತಾರಿಕೆಗಿಂತಲೂ ಭಿನ್ನವಾದುದೇನಲ್ಲ.

ಜಾತ್ಯತೀತ ಮನೋಭಾವ, ಸಾಮಾಜಿಕ ಸೌಹಾರ್ದ, ದೀನದಲಿತರ ಹಿತಾಸಕ್ತಿಯ ಹಂಬಲ, ಮಹಿಳಾ ಅಭ್ಯುದಯ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆ – ಇವು, ‘ಪ್ರಜಾವಾಣಿ’ಯ ಎಪ್ಪತ್ತೈದು ವರ್ಷಗಳ ಪಯಣದಲ್ಲಿ ಹಾಸುಹೊಕ್ಕಾಗಿರುವುದಕ್ಕೆ ನೂರಾರು ನಿದರ್ಶನಗಳನ್ನು ನೆನಪಿಸಿಕೊಳ್ಳಬಹುದು. ಆ ನಿದರ್ಶನಗಳನ್ನೆಲ್ಲ ಒಟ್ಟಿಗಿಟ್ಟು ನೋಡಿದರೆ, ಅದು ‘ಪ್ರಜಾವಾಣಿ’ ನಡೆದುಬಂದ ಹಾದಿಯಾಗಿರುವುದು ಮಾತ್ರವಲ್ಲದೆ, ಸ್ವತಂತ್ರ ಭಾರತದ ಸಾಮಾಜಿಕ ಚರಿತ್ರೆಯೂ– ವಿಶೇಷವಾಗಿ ಕರ್ನಾಟಕದ ಚರಿತ್ರೆಯೂ– ಆಗಿದೆ.

ಸಾಮಾಜಿಕ ಹೊಣೆಗಾರಿಕೆ ಕೇವಲ ‘ಪ್ರಜಾವಾಣಿ’ಗೆ ಮೀಸಲಾದುದಲ್ಲ. ಸಾಮಾಜಿಕ ಕಾಳಜಿ ಪತ್ರಿಕೋದ್ಯಮದ ಅವಿಭಾಜ್ಯ ಅಂಗವೇ ಆಗಿದೆ. ಆದರೆ, ದೀನದಲಿತರ ಸಮಸ್ಯೆಗಳಿಗೆ ‘ಪ್ರಜಾವಾಣಿ’ ಸ್ಪಂದಿಸಿದಂತೆ ಮತ್ತೊಂದು ಕನ್ನಡ ಪತ್ರಿಕೆ ಸ್ಪಂದಿಸಿದ ಉದಾಹರಣೆಯಿಲ್ಲ. ದಲಿತ ಸಂಘಟನೆ ಮತ್ತು ಚಳವಳಿಯ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಷ್ಟು ವರದಿ–ವಿಶ್ಲೇಷಣೆಗಳು ಬೇರೆಲ್ಲೂ ಪ್ರಕಟಗೊಂಡಿಲ್ಲ. ಇದಕ್ಕೆ ಉದಾಹರಣೆಯಾಗಿ, ‘ದಲಿತರ ಮೇಲೆ ದೌರ್ಜನ್ಯವಾದಾಗಲೆಲ್ಲಾ ಸಂಪಾದಕೀಯವನ್ನು ಬರೆದ ಪತ್ರಿಕೆ ‘ಪ್ರಜಾವಾಣಿ’ ಒಂದೇ. ನಾನು ಪ್ರಾರಂಭದಲ್ಲಿ ದಲಿತರ ಮೇಲೆ ಬರೆದ ಸಂಪಾದಕೀಯಗಳನ್ನು ಕತ್ತರಿಸಿ ಜೋಡಿಸಿಡುತ್ತಿದ್ದೆ. ಅವು ತಿಂಗಳಿಗೆ ನಾಲ್ಕು–ಐದು ಆಗತೊಡಗಿದಾಗ ಬಿಟ್ಟುಬಿಟ್ಟೆ. ದಲಿತರ ಮತ್ತು ಮಹಿಳೆಯರ ಮೇಲೆ ಅಷ್ಟೊಂದು ದೌರ್ಜನ್ಯಗಳು ಈ ನಾಡಿನಲ್ಲಿ ನಡೆದಿವೆ, ನಡೆಯುತ್ತಿವೆ. ಈ ಎಲ್ಲಾ ಘಟನೆಗಳು ಮನುಷ್ಯ ಕುಲಕ್ಕೆ ಆದ ಗಾಯವೆಂದು, ನಂಬಿರುವ ‘ಪ್ರಜಾವಾಣಿ’, ಆ ಕುರಿತ  ವರದಿಗಳೊಂದಿಗೆ ಸಮಾಜ ಮತ್ತು ಆಳುವ ಸರ್ಕಾರವನ್ನು ಎಚ್ಚರಿಸುವುದನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಿಕೊಂಡು ಬಂದಿದೆ’ ಎನ್ನುವ ಕವಿ ಸುಬ್ಬು ಹೊಲೆಯಾರ್‌ ಅವರ ಮಾತುಗಳನ್ನು ಗಮನಿಸಬಹುದು. ‘ಪ್ರಜಾವಾಣಿ ಪತ್ರಿಕೆ ವಾಣಿಜ್ಯದ ಲೆಕ್ಕಾಚಾರಗಳನ್ನು ಮೀರಿ ಮಾನವೀಯ ಜೀವಸ್ಪಂದನ, ಮಹಿಳೆ, ಮಕ್ಕಳು, ಆರೋಗ್ಯ, ವಿಜ್ಞಾನ, ಸಾಹಿತ್ಯ, ಪರಿಸರ, ಪ್ರಾಣಿಪಕ್ಷಿ, ಗಾಳಿ, ನೀರು, ಭೂಮಿ... ಈ ಎಲ್ಲಾ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಸಾಗುತ್ತಿದೆ ಎಂದು ಭಾವಿಸುತ್ತೇನೆ. ‘ಸದಾ ಎಚ್ಚರವಾಗಿರು. ನಿನಗೆ ಎಲ್ಲವೂ ತಿಳಿಯುತ್ತದೆ’ ಎನ್ನುವ ಬುದ್ಧನ ಮಾತಿನ ಹಾಗೆ, ಒಂದು ಪತ್ರಿಕೆ ದಿನ ಬೆಳಗಾದರೆ ನಮ್ಮನ್ನಿಲ್ಲಿ ಮತ್ತೆ ಮತ್ತೆ ಎಚ್ಚರಿಸುತ್ತದೆ ಎನ್ನುವುದು ನನ್ನ ಅಭಿಮಾನದ ಮಾತು’ ಎನ್ನುವ ಸುಬ್ಬು ಅವರ ಮಾತನ್ನು (ನ. 03, 2022) ಪತ್ರಿಕೆಯೊಂದಿಗೆ ದೀನ–ದಲಿತ ಸಮುದಾಯ ಹೊಂದಿರುವ ನಂಟಿನಂತೆಯೂ ನೋಡಬಹುದು.

ಪ್ರಜಾವಾಣಿ ಮತ್ತು ಸಾಮಾಜಿಕ ನ್ಯಾಯ
ಪ್ರಜಾವಾಣಿ ಮತ್ತು ಸಾಮಾಜಿಕ ನ್ಯಾಯ

ಎದೆಗೆ ಬಿದ್ದ ಪತ್ರಿಕೆ

1953ರ ದಸರೆಯ ದಿನಗಳು. ಕುಸ್ತಿ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಬಂದ ಹರಿಜನ ಪೈಲ್ವಾನರ ಮೇಲೆ ಸವರ್ಣೀಯ ಜೆಟ್ಟಿಗಳು ಮತ್ತು ಅವರ ಬೆಂಬಲಿಗರು ದಾಳಿ ನಡೆಸಿದ್ದರು. ಉದ್ರಿಕ್ತರ ಗುಂಪನ್ನು ಚದುರಿಸಲಿಕ್ಕಾಗಿ ಪೊಲೀಸರು ಗುಂಡು ಹಾರಿಸಿದಾಗ, ಮೂವರು ಸಾವಿಗೀಡಾಗಿದ್ದರು (ನಂತರದಲ್ಲಿ ಸತ್ತವರ ಸಂಖ್ಯೆ ಐದಕ್ಕೇರಿತು). ಆ ಘಟನೆಯ ಬಗ್ಗೆ 1953, ಅ. 9ರ ಸಂಚಿಕೆಯಲ್ಲಿ ‘ಮೈಸೂರಿನಲ್ಲಿ ಗೋಳೀಬಾರು; ಮೂರು ಮಂದಿ ಮರಣ’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿದ ಪತ್ರಿಕೆ, ನಂತರದ ದಿನಗಳಲ್ಲಿ ಆ ಪ್ರಕರಣದ ಬಗ್ಗೆ ಸಾಲು ಸಾಲು ವರದಿಗಳನ್ನು ಪ್ರಕಟಿಸಿತ್ತು. 1993ರ ಮಾರ್ಚ್‌ 25ರಂದು ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಜಾತಿಕಲಹ ಹಿಂಸೆಯ ರೂಪು ತಳೆದು, ಮೂವರು ದಲಿತರ ಹತ್ಯೆ ನಡೆದಿತ್ತು. ಆ ಪ್ರಕರಣವನ್ನು ವಿರೋಧಿಸಿ ನಂಜನಗೂಡಿನಲ್ಲಿ ಏ. 26ರಂದು ನಡೆದ ದಲಿತರ ಮೆರವಣಿಗೆ ಹಿಂಸಾರೂಪು ತಳೆದಾಗ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಸಾವಿಗೀಡಾಗಿದ್ದರು. ಬದನವಾಳು ಹತ್ಯೆ ಹಾಗೂ ನಂಜನಗೂಡಿನ ಗೋಲಿಬಾರ್‌ ಬಗ್ಗೆ ಸರಣಿ–ವರದಿ ಲೇಖನಗಳ ಜೊತೆಗೆ ಸಂಪಾದಕೀಯವನ್ನೂ ಬರೆದಿದ್ದ ಪತ್ರಿಕೆ ಸಾಮಾಜಿಕ ಸೌಹಾರ್ದ ನೆಲೆಗೊಳ್ಳುವ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ದಿಸೆಯಲ್ಲಿ ಸರ್ಕಾರ–ಸಮಾಜದ ಗಮನಸೆಳೆಯುವ ಕೆಲಸ ಮಾಡಿತ್ತು.

1987ರ ಆಗಸ್ಟ್‌ 2 ಕರ್ನಾಟಕದ ಚರಿತ್ರೆಯಲ್ಲೊಂದು ಕರಾಳ ದಿನ. ಬೆಳಗಾವಿ ಜಿಲ್ಲೆಯ ಬೆಂಡಿಕೇರಿಯಲ್ಲಿ, ಜೋಳದ ಕಡ್ಡಿ ಕಳವಿನ ಆರೋಪದ ಮೇರೆಗೆ ಐವರು ದಲಿತರಿಗೆ ಮಲ ತಿನ್ನಿಸಲಾಗಿತ್ತು. ಈ ಪ್ರಕರಣದ ಬಗ್ಗೆ ವರದಿ–ಲೇಖನಗಳನ್ನು ಪ್ರಕಟಿಸಿದ ಪತ್ರಿಕೆ, ವರ್ಷದ ನಂತರವೂ ಪ್ರಕರಣ ತಾರ್ಕಿಕ ಅಂತ್ಯ ಮುಟ್ಟದೆಹೋದಾಗ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನೂ ಮಾಡಿತ್ತು. ಬೆಂಡಿಕೇರಿಯಂತಹುದೇ ಪ್ರಕರಣ 1988ರ ಜನವರಿ 29ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ತತ್ತೂರಿನಲ್ಲಿ ನಡೆಯಿತು. ದೇವಸ್ಥಾನದಲ್ಲಿ ಪೂಜೆ ಮಾಡಿಕೊಡಲು ಒತ್ತಾಯಿಸಿದ ಚಂದ್ರಪ್ಪ ಎನ್ನುವ ನಿಮ್ನ ವರ್ಗದ ಕೃಷಿ ಕಾರ್ಮಿಕನನ್ನು ಊರವರು ರಸ್ತೆಯ ಪಕ್ಕದ ಟೆಲಿಫೋನ್‌ ಕಂಬಕ್ಕೆ ಕಟ್ಟಿ ಚಪ್ಪಲಿಯಲ್ಲಿ ಹೊಡೆದಿದ್ದರು. ಮಲ ಮೆತ್ತಿದ ಚಪ್ಪಲಿಯನ್ನು ಬಾಯಿಗೆ ತುರುಕಿದ್ದರು. ಈ ಪ್ರಕರಣದ ಬಗ್ಗೆ ಫೆ. 5ರಂದು ವರದಿ ಪ್ರಕಟಿಸಿದ ‘ಪ್ರಜಾವಾಣಿ’, ಘಟನೆಯನ್ನು ಖಂಡಿಸಿ ಫೆ. 6ರಂದು ಸಂಪಾದಕೀಯ ಬರೆಯಿತು. ‘ಚಿತ್ರಹಿಂಸೆ ಆಂಶಿಕವಾಗಿ ನಿಜವಾಗಿದ್ದರೂ ಅದು ಊಹಾತೀತ ಮತ್ತು 21ನೇ ಶತಮಾನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಸಮಾಜಕ್ಕೆ ಕಳಂಕಪ್ರಾಯ’ ಎಂದು ಅಭಿಪ್ರಾಯಪಟ್ಟಿತು. ‘ದೌರ್ಜನ್ಯ ಎಲ್ಲೇ ನಡೆಯಲಿ, ಅದನ್ನು ತಡೆಗಟ್ಟಲು ಅವಶ್ಯವಾದ ಬಲ ಬರಬೇಕಾದರೆ ಜನರಲ್ಲಿ ಆಗಬೇಕಾಗಿರುವುದು ಹೃದಯ ಪರಿವರ್ತನೆ. ಇದರಲ್ಲಿ ರಾಜಕೀಯ ಪಕ್ಷಗಳ ಜವಾಬ್ದಾರಿಯೂ ಇದೆ. ಒಂದು ಪಕ್ಷದ ಯಾರಾದರೂ ಸದಸ್ಯರು ಇಂತಹ ಅಪರಾಧ ಎಸಗಿದ ನಂತರ ಅಂತಹವರಿಗೆ ಆ ಪಕ್ಷ ಮಾತ್ರವಲ್ಲದೆ ಇತರ ಪಕ್ಷಗಳೂ ಆಶ್ರಯ ಕೊಡಕೂಡದೆಂಬ ನೀತಿಸಂಹಿತೆಯನ್ನು ಅವು ಹಾಕಿಕೊಳ್ಳುವುದು ಪರಿಣಾಮಕಾರಕವಾಗಬಲ್ಲದು.’ ಪತ್ರಿಕೆಯ ಈ ಕಳಕಳಿ ಮತ್ತು ಆಶಯ ಇಂದಿಗೂ ರಾಜಕೀಯ ಪಕ್ಷಗಳಿಗೆ ಕಿವಿಮಾತಿನಂತಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಸಮೀಪದ ಹಂಗರಹಳ್ಳಿ ಗ್ರಾಮದ ಕ್ವಾರಿಯೊಂದರಲ್ಲಿ ಕಾರ್ಮಿಕರ ಕಾಲಿಗೆ ಸರಪಳಿ ಹಾಕಿ ದುಡಿಸುತ್ತಿದ್ದ ಪ್ರಕರಣ 2000 ಇಸವಿಯಲ್ಲಿ ಬೆಳಕಿಗೆ ಬಂದಾಗ, ನಾಗರಿಕ ಜಗತ್ತು ಬೆಚ್ಚಿಬಿದ್ದಿತ್ತು. 15 ಕೆ.ಜಿ. ತೂಕದ ಸರಪಳಿಯಿಂದ ಕಾಲುಗಳನ್ನು ಬಿಗಿದಿದ್ದ ಐವರು ಜೀತಗಾರರನ್ನು ಬಂಧಮುಕ್ತಗೊಳಿಸಿದ ವರದಿ ಜೂನ್‌ 24, 2000 ಇಸವಿಯ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿತ್ತು. ಅದೇ ದಿನ ‘ಅಮಾನುಷ ಕೃತ್ಯ’ ಶೀರ್ಷಿಕೆಯಲ್ಲಿ ಸಂಪಾದಕೀಯ ಪ್ರಕಟಿಸಿದ್ದ ಪತ್ರಿಕೆ, ‘ತಾಲ್ಲೂಕಿನ ತಹಸೀಲ್ದಾರ್‌, ಪೊಲೀಸರು ಹಾಗೂ ಚುನಾಯಿತ ಪ್ರತಿನಿಧಿಗಳು ಇಷ್ಟು ದಿನ ಈ ಬರ್ಬರ ಪದ್ಧತಿಯನ್ನು ಹೇಗೆ ಮತ್ತು ಏಕೆ ಸಹಿಸಿಕೊಂಡು ಬಂದರು’ ಎಂದು ಪ್ರಶ್ನಿಸಿತ್ತು. ಮಾನವೀಯತೆಗೆ ಮಸಿ ಬಳಿಯುವ ಹಾಗೂ ವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸರ್ಕಾರವನ್ನು ಆಗ್ರಹಿಸಿತ್ತು (ಈ ಪ್ರಕರಣದ ಆರೋಪಿಗಳು ಹದಿನಾರು ವರ್ಷಗಳ ವಿಚಾರಣೆಯ ನಂತರ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಯಾದರು).

ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆಸೇವೆ ಆಚರಣೆಯ ವಿರುದ್ಧ ನಡೆದ ಜನಜಾಗೃತಿ ಆಂದೋಲನದಲ್ಲಿ ಪತ್ರಿಕೆಯದು ಪ್ರಮುಖ ಪಾತ್ರ. ಮೌಢ್ಯಾಚರಣೆಯ ವಿರುದ್ಧ ಸತತವಾಗಿ ವರದಿಗಳನ್ನು ಪ್ರಕಟಿಸಿದ ಪತ್ರಿಕೆ, 1986ರ ಮಾರ್ಚ್‌ 22ರಂದು ಸಂಪಾದಕೀಯವನ್ನೂ ಬರೆದಿತ್ತು. ಬೆತ್ತಲೆಸೇವೆಯಂಥ ಅಂಧಶ್ರದ್ಧೆಯನ್ನು ಬಲಪ್ರಯೋಗದಿಂದ ಹೋಗಲಾಡಿಸಲು ಪ್ರಯತ್ನಿಸುವುದು ನಕಾರಾತ್ಮಕ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದ ಪತ್ರಿಕೆ, ಇಂಥ ಅಂಧಶ್ರದ್ಧೆಗಳ ನಿವಾರಣೆಗೆ ದೀರ್ಘಾವಧಿಯ ಶೈಕ್ಷಣಿಕ–ವೈಜ್ಞಾನಿಕ ಕಾರ್ಯಕ್ರಮಗಳ ಅಗತ್ಯವನ್ನು ಪ್ರತಿಪಾದಿಸಿತ್ತು. ಮಾರ್ಚ್‌ 11ರಂದು ಪೊಲೀಸ್‌ ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ಭಕ್ತರಿಂದ ನಡೆದ ಹಲ್ಲೆಯನ್ನು ಸಂಪಾದಕೀಯ ಬರಹದಲ್ಲಿ ವಿರೋಧಿಸಿದ್ದ ಪತ್ರಿಕೆ, ‘ತಲೆತಲಾಂತರಗಳಿಂದ ನಡೆದು ಬಂದು ಒಂದು ವರ್ಗದ ಜನರಲ್ಲಿ ಪ್ರಬಲವಾಗಿ ಬೇರೂರಿ ಹೋಗಿರುವ ಕಂದಾಚಾರಗಳನ್ನು ಒಂದೆರಡು ತಿಂಗಳು ಅಥವಾ ಒಂದೆರಡು ದಿನಗಳಲ್ಲಿ ಅವರ ಎದುರು ನಿಂತು ಬಲವಂತದಿಂದ ತಡೆಗಟ್ಟಲು ಸಾಧ್ಯವೆನ್ನುವುದೂ ಒಂದು ಕುರುಡು ನಂಬಿಕೆ’ ಎಂದು ಹೇಳಿತ್ತು.

ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ದಲಿತರು ನಿವೇಶನದ ಜಾಗಕ್ಕಾಗಿ 1940ರ ಮೇ 25ರಂದು ಅಂದಿನ ದಿವಾನ ಮಿರ್ಜಾ ಇಸ್ಮಾಯಿಲ್‌ ಅವರಿಗೆ ಅರ್ಜಿ ಕೊಟ್ಟಿದ್ದರು. ನಲವತ್ತು ವರ್ಷಗಳಾದರೂ ನಿವೇಶನ ದೊರೆಯದೆ ಹೋದಾಗ, ಕಚೇರಿಗಳನ್ನು ಎಡತಾಕಿದ್ದು ಫಲ ಕೊಡದೆ ಹೋದಾಗ, 1979ರ ಅಕ್ಟೋಬರ್‌ 17ರಂದು ಸತ್ಯಾಗ್ರಹ ಆರಂಭಿಸಿದರು. ದಲಿತರ ವಸತಿ ಸಮಸ್ಯೆ ಕುರಿತಂತೆ, ‘ನಲವತ್ತು ವರ್ಷಗಳಾದರೂ ನೆಲಕಾಣದ ತಗಡೂರು ದಲಿತರು’ ಶೀರ್ಷಿಕೆಯ ದೇವನೂರ ಮಹಾದೇವರ ಬರಹ ‘ಸಾ‍ಪ್ತಾಹಿಕ ಪುರವಣಿ’ಯ ಡಿ. 9, 1979ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಇದೇ ದೇವನೂರರು ಅತಿಥಿ ಸಂಪಾದಕರಾಗಿ ರೂಪಿಸಿದ 2012ರ ಏಪ್ರಿಲ್‌ 14ರ ಸಂಚಿಕೆ ‘ಪ್ರಜಾವಾಣಿ’ ಇತಿಹಾಸದಲ್ಲಿ ಮಾತ್ರವಲ್ಲ, ಭಾರತೀಯ ಪತ್ರಿಕೋದ್ಯಮದಲ್ಲೇ ಒಂದು ವಿಶಿಷ್ಟ ‍ಪ್ರಯೋಗ. ದಲಿತರ ಬದುಕು ಮತ್ತು ಚಿಂತನೆಯನ್ನು ಒಳಗೊಂಡ ‘ದಲಿತ ವಿಶೇಷ’ ಸಂಚಿಕೆಯನ್ನು ಓದುಗರು ಉತ್ಸಾಹದಿಂದ ಸ್ವಾಗತಿಸಿದ್ದರು. ‘ಸಮಾನತೆ ಕನಸನ್ನು ಮತ್ತೆ ಕಾಣುತ್ತ...’ ಶೀರ್ಷಿಕೆಯ ಸಂಪಾದಕೀಯದಲ್ಲಿ ದೇವನೂರರು, ಜಾತೀಯತೆಯಿಂದ ಮತ್ತೆ ಮತ್ತೆ ಗಾಯಗೊಳ್ಳುತ್ತಿದ್ದರೂ ದಲಿತರು ಸಹನೆ ಕಳೆದುಕೊಳ್ಳದಿರುವುದನ್ನು ಬಹು ಅರ್ಥಪೂರ್ಣವಾಗಿ ದಾಖಲಿಸಿದ್ದರು. ದೇವನೂರರ ಸಂಪಾದಕೀಯ ಶೀರ್ಷಿಕೆಯನ್ನೇ ತಲೆಬರಹವನ್ನಾಗಿಸಿಕೊಂಡು, ‘ದಲಿತ ಸಂಚಿಕೆ’ಯ ಎಲ್ಲ ಬರಹಗಳು ಪುಸ್ತಕ ರೂಪದಲ್ಲಿ ‘ಪ್ರಜಾವಾಣಿ ಪ್ರಕಾಶನ’ದಿಂದ ಪ್ರಕಟಗೊಂಡಿವೆ. ಈ ಪ್ರಯೋಗಶೀಲತೆಯ ಮುಂದುವರಿದ ಭಾಗವಾಗಿ, 2015ರ ಏಪ್ರಿಲ್ 12ರ 6 ಪುಟಗಳ ‘ಮುಕ್ತಛಂದ’ ಪುರವಣಿ ‘ಅಂಬೇಡ್ಕರ್‌ ವಿಶೇಷ ಸಂಚಿಕೆ’ಯಾಗಿ ಪ್ರಕಟಗೊಂಡಿದ್ದನ್ನು ಗಮನಿಸಬಹುದು.

ಪ್ರಜಾವಾಣಿ ಮತ್ತು ಸಾಮಾಜಿಕ ನ್ಯಾಯ
ಪ್ರಜಾವಾಣಿ ಮತ್ತು ಸಾಮಾಜಿಕ ನ್ಯಾಯ

ಸಂವಾದ ಸಂಸ್ಕೃತಿಯ ‘ಅನುಭವ ಮಂಟಪ’

ನಾಡು–ನುಡಿ ಹಾಗೂ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ನಿರಂತರವಾಗಿ ಸಂವಾದಗಳನ್ನು ನಡೆಸಿಕೊಂಡು ಬಂದಿದೆ ಹಾಗೂ ಆ ಮಾತುಕತೆಗಳಲ್ಲಿ ವಿಷಯತಜ್ಞರ ಜೊತೆಗೆ ಸಾಮಾನ್ಯ ಓದುಗರೂ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಅಂಥ ಎರಡು ಅಪೂರ್ವ ಸಂವಾದಗಳು: ‘ವಚನ ಸಾಹಿತ್ಯ ಸಂವಾದ’ ಹಾಗೂ ‘ಜಾತಿ ಸಂವಾದ’.

2012ರ ಡಿಸೆಂಬರ್‌ 3ರಿಂದ 2013ರ ಮೇ 27ರವರೆಗೆ, ವಾರಕ್ಕೊಮ್ಮೆ, 26 ಕಂತುಗಳಲ್ಲಿ ಕಾಲ ಪ್ರಕಟಗೊಂಡ ‘ಜಾತಿ ಸಂವಾದ’ದಲ್ಲಿ ಬರಹಗಾರರು, ಕಲಾವಿದರು, ವಿದ್ವಾಂಸರೊಂದಿಗೆ ಜನಸಾಮಾನ್ಯರೂ ಪಾಲ್ಗೊಂಡರು. ಗೋಪಾಲ್‌ ಗುರು ಮತ್ತು ಸುಂದರ್‌ ಸರುಕ್ಕೈ ಈ ಸಂವಾದದ ಸಮನ್ವಯಕಾರರು. ಜಾತಿಯನ್ನು ಮಾಧ್ಯಮವೊಂದರಲ್ಲಿ ಮುಕ್ತವಾಗಿ ಚರ್ಚಿಸಿದ್ದು ಭಾರತೀಯ ಪತ್ರಿಕೋದ್ಯಮದಲ್ಲೊಂದು ಅಪೂರ್ವ ಪ್ರಯೋಗ. ಪತ್ರಿಕೆಯ ಓದುಗರು ತಮ್ಮ ಜಾತಿ ಅನುಭವಗಳನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹಂಚಿಕೊಂಡರು. ನೂರಾರು ಓದುಗರು ಉತ್ಸಾಹದಿಂದ ಪಾಲ್ಗೊಂಡ ಈ ಸಂವಾದ, ಜಾತಿಗೆ ಸಂಬಂಧಿಸಿದ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸೂಕ್ಷ್ಮಗಳನ್ನು ಅನಾವರಣಗೊಳಿಸಿತು. ಈ ಸಂವಾದದ ಬರಹಗಳನ್ನು ‘ಪ್ರಜಾವಾಣಿ ಪ್ರಕಾಶನ’ 2014ರಲ್ಲಿ ‘ಜಾತಿ ಸಂವಾದ’ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು, ಈ ಕೃತಿ ಜಾತಿಯ ಬಗ್ಗೆ ನಡೆಯುವ ಸಂಶೋಧನೆಗಳಿಗೆ ಬಹು ಮುಖ್ಯವಾದ ಆಕರವಾಗಿದೆ.

ಎಚ್‌.ಎಸ್. ಶಿವಪ್ರಕಾಶ್‌ ಅವರ ‘ವಚನ ಸಾಹಿತ್ಯ ಮತ್ತು ಜಾತಿ ವಿರೋಧ’ (2013, ಮಾರ್ಚ್‌ 14) ಅಂಕಣ ಬರಹ ಚರ್ಚೆಯ ರೂಪು ಪಡೆದು, ನಾಡಿನ ಅನೇಕ ಬರಹಗಾರರು ವಚನಕಾರರ ಜಾತಿಮೀಮಾಂಸೆಗೆ ಸಂಬಂಧಿಸಿದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಪ್ರೇರಣೆಯಾಯಿತು. ಸುಮಾರು ಎರಡೂವರೆ ತಿಂಗಳ ಕಾಲ ನಡೆದ ಈ ಸಂವಾದ, ಜಾತಿವಿರೋಧಕ್ಕೆ ಸಂಬಂಧಿಸಿದ ವಚನಕಾರರ ಒಲವು ನಿಲುವುಗಳನ್ನು ಮರುಪರಿಶೀಲನೆಗೊಳಪಡಿಸಿತು. ‘ವಚನಗಳಲ್ಲಿ ಆಧ್ಯಾತ್ಮಿಕತೆ ಮತ್ತು ಸಾಮಾಜಿಕತೆ’ ಎನ್ನುವ ಎಚ್‌.ಎಸ್. ಶಿವಪ್ರಕಾಶರ ಬರಹದೊಂದಿಗೇ ಕೊನೆಗೊಂಡ ಈ ಸಂವಾದದಲ್ಲಿ ಪ್ರಕಟಗೊಂಡ ಇಪ್ಪತ್ತೇಳು ಲೇಖನಗಳನ್ನು ‘ವಚನ ಸಾಹಿತ್ಯ ಸಂವಾದ’ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ ಪ್ರಕಾಶನ’ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ (2014). ಡಾ. ಎಂ.ಎಂ. ಕಲಬುರ್ಗಿ, ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ, ಮೊಗಳ್ಳಿ ಗಣೇಶ್‌, ಚಂದ್ರಶೇಖರ ಕಂಬಾರ, ಕೆ.ವಿ. ಅಕ್ಷರ, ದೇವನೂರ ಮಹಾದೇವ ಈ ಸಂವಾದದಲ್ಲಿ ಭಾಗಿಯಾದ ಕೆಲವರು. ಈ ಕೃತಿಗೆ ಬರೆದ ಮುನ್ನುಡಿಯಲ್ಲಿ, ‘ಪ್ರಜಾವಾಣಿ ಪತ್ರಿಕೆಯು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಜನಪರ ನಿಲುವುಗಳನ್ನು ಕುರಿತ ತನ್ನ ಬದ್ಧತೆಯಿಂದ ಕರ್ನಾಟಕದ ಇನ್ನಾವ ಪತ್ರಿಕೆಯೂ ಪಡೆಯದ ವಿಶ್ವಾಸಾರ್ಹತೆಯನ್ನು ಪಡೆದುಕೊಂಡಿದೆ’ ಎಂದು ಡಾ. ಎಂ.ಎಸ್‌. ಆಶಾದೇವಿ ಅಭಿಪ್ರಾಯಪಟ್ಟಿದ್ದಾರೆ. ಅವರ ಮಾತು, ವಚನ ಸಂವಾದದ ಮಹತ್ವದೊಂದಿಗೆ ಪತ್ರಿಕೆಯ ಅನನ್ಯತೆಯನ್ನೂ ಹೇಳುವಂತಹದ್ದು.

ಸಾಪ್ತಾಹಿಕ
ಸಾಪ್ತಾಹಿಕ

ಸಾಹಿತ್ಯ–ಸಂಘಟನೆಗೆ ಒತ್ತು

‘ಪ್ರಜಾವಾಣಿ’ಯ ದೀಪಾವಳಿ ಕಥಾಸ್ಪರ್ಧೆ ಕನ್ನಡ ಕಥಾಲೋಕಕ್ಕೆ ಹೊಸ ಕ್ಷಿತಿಜವನ್ನು ರೂಪಿಸುವುದರ ಜೊತೆಗೆ, ದಲಿತಕೇರಿಗಳ ಧ್ವನಿಗಳಿಗೂ ಗಾಳಿ–ಬೆಳಕಾಗಿ ಪರಿಣಮಿಸಿತು. ಮೊಗಳ್ಳಿ ಗಣೇಶ್‌ರ ‘ಒಂದು ಹಳೆಯ ಚಡ್ಡಿ’, ‘ಬುಗುರಿ’, ‘ಬತ್ತ’ದಂಥ ಅತ್ಯುತ್ತಮ ಕಥೆಗಳು, ಅಮರೇಶ ನುಗಡೋಣಿಯವರ ‘ಹೊತ್ತು ಮೂಡುವ ಸಮಯ’, ‘ತಮಂಧದ ಕೇಡು’, ‘ಧರೆ ಉರಿದರೆ’, ‘ನೀರು ತಂದವರು’ ರೀತಿಯ ಅನನ್ಯ ಕಥೆಗಳು ಬೆಳಕು ಕಂಡಿದ್ದು ‘ಪ್ರಜಾವಾಣಿ’ ದೀಪಾವಳಿ ಸಂಚಿಕೆಗಳಲ್ಲಿಯೇ. ಬೊಳುವಾರು, ಅಬ್ದುಲ್‌ ರಶೀದ್‌, ಬಿ.ಎಲ್‌. ವೇಣು, ಮಂಜುನಾಥ್‌ ಲತಾ, ಹನೂರು ಚನ್ನಪ್ಪರಂಥ ಅಲ್ಪಸಂಖ್ಯಾತ–ದಲಿತ ಸಮುದಾಯಗಳ ಕಥನಕಾರರ ಪ್ರಯೋಗಗಳಿಗೂ ದೀಪಾವಳಿ ಸಂಚಿಕೆಗಳು ವೇದಿಕೆಯಾದವು. ದೇವನೂರರ ‘ಒಡಲಾಳ’ ಕಥೆ ಪ್ರಕಟಗೊಂಡಿರುವುದೂ ‘ಪ್ರಜಾವಾಣಿ’ಯ ದೀಪಾವಳಿ ವಿಶೇಷಾಂಕದಲ್ಲೇ. ಕನ್ನಡದ ಅತ್ಯುತ್ತಮ ಕಥೆಗಳ ಸಾಲಿಗೆ ಸೇರುವ ‘ಬುಗುರಿ’ (1990), ‘ತಮಂಧದ ಕೇಡು’ (1994), ‘ಒಡಲಾಳ’ (1978) ರೀತಿಯ ಕಥೆಗಳು ಪ್ರಕಟಗೊಂಡ ಸಂದರ್ಭದಲ್ಲಿ, ಅವು ಭಾಷೆ ಹಾಗೂ ಸಂವೇದನೆಗಳ ದೃಷ್ಟಿಯಿಂದ ಹೊಚ್ಚ ಹೊಸದಾಗಿದ್ದವು. ಈ ಕಥೆಗಳ ಕಾವು–ಬೆಳಕಿನಲ್ಲಿ ನೂರಾರು ಕಥೆಗಳು ನಂತರದ ವರ್ಷಗಳಲ್ಲಿ ರೂಪುಗೊಂಡು ಕನ್ನಡ ಕಥನ ಪರಂಪರೆಗೆ ಹೊಸ ಕಸುವು ದೊರೆಯಿತು. ಈ ಎಲ್ಲ ಕಥೆಗಳು ಪತ್ರಿಕೆಯ ಬದಲಾಗಿ ನೇರವಾಗಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದರೆ ಈ ಮಟ್ಟಿಗೆ ಮನ್ನಣೆ ಪಡೆಯುತ್ತಿದ್ದವೆ ಹಾಗೂ ಓದುಗರ ಗಮನಸೆಳೆಯುತ್ತಿದ್ದವೆ? ಈ ಪ್ರಶ್ನೆಗೆ ಉತ್ತರ ಭಿನ್ನವಾಗಿರುವುದು ಸಾಧ್ಯವಿದೆಯಾದರೂ, ಕನ್ನಡ ಕಥಾಪರಂಪರೆ ಸಮೃದ್ಧಗೊಳ್ಳುವಲ್ಲಿ ಹಾಗೂ ಹೊಸ ಪ್ರಯೋಗಗಳನ್ನು ಗುರ್ತಿಸುವಲ್ಲಿ ‘ಪ್ರಜಾವಾಣಿ’ಯ ದೀಪಾವಳಿ ಸಂಚಿಕೆಗಳು ಹಾಗೂ ‘ಸಾಪ್ತಾಹಿಕ ಪುರವಣಿ’ ಮಹತ್ವದ ಪಾತ್ರ ವಹಿಸಿರುವುದನ್ನು ಯಾರೂ ಅಲ್ಲಗಳೆಯಲಾಗದು. ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆ, ಬರಹಗಾರರಾಗಿ ತಮಗೆ ತಂದುಕೊಟ್ಟ ಆತ್ಮವಿಶ್ವಾಸ ಹಾಗೂ ಐಡೆಂಟಿಟಿಯ ಕುರಿತು ಮೊಗಳ್ಳಿ, ಅಮರೇಶ್‌, ಬೆಸಗರಹಳ್ಳಿ ರಾಮಣ್ಣ ಸೇರಿದಂತೆ ಅನೇಕರು ಬಹಿರಂಗವಾಗಿಯೇ ಆಡಿರುವ ಮಾತುಗಳು, ಹಿಂದುಳಿದ ವರ್ಗಗಳ ಬರಹಗಾರರಿಗೆ ‘ಪ್ರಜಾವಾಣಿ’ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತಾ ಬಂದಿರುವುದಕ್ಕೆ ಉದಾಹರಣೆಯಂತಿವೆ.

ಸಾಹಿತ್ಯದ ಜೊತೆಗೆ ಸಂಘಟನೆಯ ನೆಲೆಗಟ್ಟಿನಲ್ಲೂ ‘ಪ್ರಜಾವಾಣಿ’ ದಲಿತರ ಪಾಲಿಗೆ ಆಪ್ತಮಿತ್ರನಂತಿದೆ. ‘ದಲಿತ ಸಂಘರ್ಷ ಸಮಿತಿ’ ಹಾಗೂ ‘ಬಂಡಾಯ ಸಂಘಟನೆ–ಚಳವಳಿ’ಯ ಏಳುಬೀಳುಗಳಿಗೆ ಪತ್ರಿಕೆ ಸಾಕ್ಷಿಪ್ರಜ್ಞೆಯ ರೂಪದಲ್ಲಿ ಸ್ಪಂದಿಸಿದೆ. ‘ದಲಿತ ಸಂಘರ್ಷ ಸಮಿತಿ’ಯಲ್ಲಿ ಒಡಕುಂಟಾದಾಗ, ಜಿಲ್ಲಾ ಮಟ್ಟದಲ್ಲಿ ಸಂಘಟನೆಯ ಸ್ಥಿತಿಗತಿ ಕುರಿತ ಸಮೀಕ್ಷೆ ರೂಪದ ವಿಶ್ಲೇಷಣೆಗಳ ಸರಣಿ 1997ರಲ್ಲಿ ಪ್ರಕಟಗೊಂಡಿತ್ತು. ಆ ಬರಹಗಳಲ್ಲಿ, ಸಮಿತಿಯ ಶಕ್ತಿ ಹಾಗೂ ದೌರ್ಬಲ್ಯಗಳ ವಿಶ್ಲೇಷಣೆಯೊಂದಿಗೆ, ಈ ಸಂಘಟನೆಯ ಅಗತ್ಯದ ಕುರಿತ ಕಾಳಜಿಯೂ ಇತ್ತು. 2022ರ ಡಿಸೆಂಬರ್‌ 6ರಂದು ಬೆಂಗಳೂರಿನಲ್ಲಿ ನಡೆದ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ – ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶ’ದ ಬಗ್ಗೆ ‘ಪ್ರಜಾವಾಣಿ’ ಸಂಪಾದಕೀಯ (ಡಿ. 8) ಬರೆದು, ‘ಕೋಮುದ್ವೇಷದ ಮಾತು–ಚಟುವಟಿಕೆಗಳು ಎಲ್ಲೆಡೆ ತುಂಬಿರುವ ಸಂದರ್ಭದಲ್ಲಿ, ಸಂವಿಧಾನದ ನೆಲೆಗಟ್ಟಿನಲ್ಲಿ ಬಹುತ್ವಕ್ಕೆ ಹಂಬಲಿಸುವ ಸಮಾನಮನಸ್ಕರು ಒಂದೆಡೆ ಸೇರಿ ಚರ್ಚಿಸುವುದು ಆಶಾದಾಯಕ ಸಂಗತಿ’ ಎಂದು ಅಭಿಪ್ರಾಯಪಟ್ಟಿತ್ತು. 

1957, ಅ.13ರ ಸಂಚಿಕೆಯಲ್ಲಿ ಪ್ರಕಟಗೊಂಡ ಪುಟ್ಟ ಸುದ್ದಿ ಹೀಗಿದೆ: ‘ಬೆಂಗಳೂರು, ಅ. 12: ಮೈಸೂರು ರಾಜಕೀಯ ಪರಿಸ್ಥಿತಿಯ ಬಗ್ಗೆ ನಿನ್ನೆ ಬಿಡದಿಯಲ್ಲಿ ಆಚಾರ್ಯ ವಿನೋಬಾ ಭಾವೆಯವರು ಪ್ರಾರ್ಥನಾ ಸಭೆಯಲ್ಲಿ ಮಾಡಿದ ಭಾಷಣದ ವರದಿಯನ್ನು ‘ಪ್ರಜಾವಾಣಿ’ಯಲ್ಲಿ ನೋಡಿದ ವಿನೋಬಾರವರು, ‘ಇದು ಪ್ರಜಾವಾಣಿಯಲ್ಲ, ಪ್ರಜಾಶಕ್ತಿ’ ಎಂದು ತಿಳಿಸಿದರೆಂದು ‘ಪ್ರಜಾವಾಣಿ’ ಕಾರ್ಯಾಲಯಕ್ಕೆ ಇಂದು ಭೇಟಿಯಿತ್ತ ಭೂದಾನ ಕಾರ್ಯಕರ್ತರು ತಿಳಿಸಿದರು’.

ಕಳೆದ ಏಳೂವರೆ ದಶಕಗಳ ಅವಧಿಯಲ್ಲಿ ‘ಪ್ರಜಾವಾಣಿ’ ಸಾಗಿಬಂದ ಹಾದಿಯನ್ನು ಸೂಚಿಸುವಂತಿರುವ ಮೇಲಿನ ಟಿಪ್ಪಣಿಗಳೇ, ವಿನೋಬಾ ಅವರು ಹೇಳಿದ ‘ಪ್ರಜಾಶಕ್ತಿ’ ಎನ್ನುವ ಮಾತು ಉತ್ಪ್ರೇಕ್ಷೆಯದಲ್ಲ ಎನ್ನುವುದನ್ನು ಮನದಟ್ಟು ಮಾಡುವಂತಿವೆ.

ದಲಿತ ವಿಶೇಷ ಸಂಚಿಕೆ

ಇಂಥ ವಿಶೇಷ ಸಂಚಿಕೆಯನ್ನು ‘ಪ್ರಜಾವಾಣಿ’ ಮಾತ್ರ ಮಾಡಲು ಸಾಧ್ಯ. ಇದರಿಂದ ನಮ್ಮನ್ನು ಯಾರೂ ಕರೆದುಕೊಂಡು ಹೋಗದ ದಾರಿಯಲ್ಲಿ ಕರೆದುಕೊಂಡು ಹೋಗಿದ್ದೀರಿ. ಈ ದಾರಿಯ ಪರಿಚಯ ನಮಗೆ ಈಗಾಗಲೇ ಆಗಬೇಕಿತ್ತು. ದುರ್ದೈವದಿಂದ ಇದುವರೆಗೂ ಯಾರೂ ಮಾಡಿಲ್ಲ.

ಡಾ. ಪಾಟೀಲ ಪುಟ್ಟಪ್ಪ, ಹುಬ್ಬಳ್ಳಿ
ಏಪ್ರಿಲ್ 15, 2012

ಸಂಪಾದಕೀಯ
ಸಂಪಾದಕೀಯ

ಸಂಪಾದಕೀಯಗಳೆಂಬ ಸಾಲುದೀಪಗಳು

ಜಾತಿ–ಧರ್ಮದ ಹೆಸರಿನಲ್ಲಿ ಅಮಾನವೀಯ ಘಟನೆಗಳು ವರದಿಯಾದಾಗಲೆಲ್ಲ ‘ಪ್ರಜಾವಾಣಿ’ ಸಂಪಾದಕೀಯ ಬರೆದಿದೆ, ಶಾಂತಿ–ಸೌಹಾರ್ದ ಈ ಮಣ್ಣಿನ ಮೂಲಗುಣ ಎನ್ನುವುದನ್ನು ನೆನಪಿಸುವ ಕೆಲಸ ಮಾಡಿದೆ. ದಶಕಗಳ ಹಿಂದಿನ ಬದನವಾಳು, ಬೆಂಡಿಗೇರಿ, ತತ್ತೂರು ಘಟನೆಗಳು ಮಾತ್ರವಲ್ಲ – ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಆಸುಪಾಸಿನಲ್ಲಿ ನಡೆದ ಜಾತಿವಿಷದ ವಿದ್ಯಮಾನಗಳ ಬಗ್ಗೆಯೂ ‘ಪ್ರಜಾವಾಣಿ’ ‍ಬಿಡುಗಣ್ಣಾಗಿದೆ. ದಲಿತ ಮಹಿಳೆ ನೀರು ಕುಡಿದ ಕಾರಣಕ್ಕಾಗಿ ಚಾಮರಾಜನಗರ ಜಿಲ್ಲೆಯ ಹೆಗ್ಗೋಠಾರ ಗ್ರಾಮದಲ್ಲಿ, ಬೀದಿ ಟ್ಯಾಂಕ್‌ನಲ್ಲಿನ ನೀರನ್ನು ಖಾಲಿ ಮಾಡಿ ಶುದ್ಧೀಕರಿಸಲಾಗಿತ್ತು. ಆ ಘಟನೆಗೆ ಸ್ಪಂದಿಸಿದ್ದ ಪತ್ರಿಕೆ, ‘ತೊಳೆಯಬೇಕಾದುದು ನೀರಿನ ಮೂಲಗಳನ್ನಲ್ಲ, ಮಲಿನಗೊಂಡಿರುವ ಜಾತೀಯ ಮನಸ್ಸುಗಳನ್ನು’ ಎಂದು ಸಂಪಾದಕೀಯದಲ್ಲಿ (ನ. 22, 2022) ಹೇಳಿತ್ತು. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ, ದೇವರ ಕೋಲು ಮುಟ್ಟಿದ ಪರಿಶಿಷ್ಟ ಜಾತಿಯ ಬಾಲಕನ ಮೇಲೆ ನಡೆದ ಹಲ್ಲೆ ಮತ್ತು ಸಂತ್ರಸ್ತನ ಕುಟುಂಬಕ್ಕೆ ಒಡ್ಡಲಾದ ಸಾಮಾಜಿಕ ಬಹಿಷ್ಕಾರದ ಬೆದರಿಕೆಯ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕೀಯ (2022ರ ಸೆ. 22), ‘ಜಾತೀಯತೆಯನ್ನು ತೊಡೆದುಹಾಕುವುದು ಸ್ವಾತಂತ್ರ್ಯಾನಂತರದ ಎಪ್ಪತ್ತೈದು ವರ್ಷಗಳ ನಂತರವೂ ಸಾಧ್ಯವಾಗದಿರುವುದು ದುರದೃಷ್ಟಕರ. ಜಾತಿರೋಗದಿಂದ ನರಳುವ ಮನಸ್ಸುಗಳು ಸಮಾಜವನ್ನು ಮತ್ತೆ ಮತ್ತೆ ಗಾಯಗೊಳಿಸುತ್ತಿವೆ. ಇಂಥ ಪ್ರಯತ್ನಗಳು ಸಾಮಾಜಿಕ ಆರೋಗ್ಯಕ್ಕೆ ಧಕ್ಕೆ ತರುವುದು ಮಾತ್ರವಲ್ಲ, ದೇಶದ ಅಭಿವೃದ್ಧಿಗೂ ಮಾರಕ’ ಎಂದು ಕಳವಳ ವ್ಯಕ್ತಪಡಿಸಿತ್ತು.

ಶಿವಮೊಗ್ಗದ ಮಾರಿಕಾಂಬಾ ಜಾತ್ರೆ ಹಾಗೂ ಉಡುಪಿ ಜಿಲ್ಲೆಯ ಕಾಪುವಿನ ಮಾರಿ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳ ವಹಿವಾಟಿಗೆ ವಿರೋಧ ವ್ಯಕ್ತವಾದಾಗ, ‘ದೇಶದ ಯಾವುದೇ ಭಾಗದಲ್ಲಿ ಹಿಂದೂಗಳಿಗೆ ವ್ಯಾಪಾರ ಮಾಡಲು ಅವಕಾಶವಿರುವಂತೆಯೇ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮದವರಿಗೂ ಅವಕಾಶವಿದೆ. ಸಂವಿಧಾನ ಕಲ್ಪಿಸಿರುವ ಈ ವ್ಯವಸ್ಥೆಗೆ ಯಾರಿಂದಲಾದರೂ ಅಡ್ಡಿಯುಂಟಾದರೆ ಅಂಥವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಸಂಪಾದಕೀಯ (ಮಾರ್ಚ್ 22, 2022) ಬರೆದಿದ್ದ ಪತ್ರಿಕೆ, ‘ನಾಡಿನ ಅನೇಕ ಜಾತ್ರೆಗಳು ಧಾರ್ಮಿಕ ಸಾಮರಸ್ಯದ ಪ್ರಯೋಗಶಾಲೆಗಳಾಗಿವೆ. ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳು ಬೆರೆತು ಜಾತ್ರೆಗಳ, ಧಾರ್ಮಿಕ ಆಚರಣೆಗಳ ಶೋಭೆ‌ ಹೆಚ್ಚಿಸುವ ಹಲವು ಜೀವಂತ ಉದಾಹರಣೆಗಳು ಕರ್ನಾಟಕದಲ್ಲಿವೆ. ಅಂಥ ಸಾಮರಸ್ಯವನ್ನು ಕದಡುವ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರವೃತ್ತಿ ಖಂಡನೀಯ’ ಎಂದು ಅಭಿಪ್ರಾಯಪಟ್ಟಿತ್ತು.

 ‘ಜಾತಿ ಸಂವಾದ’.
‘ಜಾತಿ ಸಂವಾದ’.

ಸಂವಾದ ಸಂಸ್ಕೃತಿಯ ‘ಅನುಭವ ಮಂಟಪ’

ನಾಡು–ನುಡಿ ಹಾಗೂ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ನಿರಂತರವಾಗಿ ಸಂವಾದಗಳನ್ನು ನಡೆಸಿಕೊಂಡು ಬಂದಿದೆ ಹಾಗೂ ಆ ಮಾತುಕತೆಗಳಲ್ಲಿ ವಿಷಯತಜ್ಞರ ಜೊತೆಗೆ ಸಾಮಾನ್ಯ ಓದುಗರೂ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಅಂಥ ಎರಡು ಅಪೂರ್ವ ಸಂವಾದಗಳು: ‘ವಚನ ಸಾಹಿತ್ಯ ಸಂವಾದ’ ಹಾಗೂ ‘ಜಾತಿ ಸಂವಾದ’.

2012ರ ಡಿಸೆಂಬರ್‌ 3ರಿಂದ 2013ರ ಮೇ 27ರವರೆಗೆ, ವಾರಕ್ಕೊಮ್ಮೆ, 26 ಕಂತುಗಳಲ್ಲಿ ಕಾಲ ಪ್ರಕಟಗೊಂಡ ‘ಜಾತಿ ಸಂವಾದ’ದಲ್ಲಿ ಬರಹಗಾರರು, ಕಲಾವಿದರು, ವಿದ್ವಾಂಸರೊಂದಿಗೆ ಜನಸಾಮಾನ್ಯರೂ ಪಾಲ್ಗೊಂಡರು. ಗೋಪಾಲ್‌ ಗುರು ಮತ್ತು ಸುಂದರ್‌ ಸರುಕ್ಕೈ ಈ ಸಂವಾದದ ಸಮನ್ವಯಕಾರರು. ಜಾತಿಯನ್ನು ಮಾಧ್ಯಮವೊಂದರಲ್ಲಿ ಮುಕ್ತವಾಗಿ ಚರ್ಚಿಸಿದ್ದು ಭಾರತೀಯ ಪತ್ರಿಕೋದ್ಯಮದಲ್ಲೊಂದು ಅಪೂರ್ವ ಪ್ರಯೋಗ. ಪತ್ರಿಕೆಯ ಓದುಗರು ತಮ್ಮ ಜಾತಿ ಅನುಭವಗಳನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹಂಚಿಕೊಂಡರು. ನೂರಾರು ಓದುಗರು ಉತ್ಸಾಹದಿಂದ ಪಾಲ್ಗೊಂಡ ಈ ಸಂವಾದ, ಜಾತಿಗೆ ಸಂಬಂಧಿಸಿದ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸೂಕ್ಷ್ಮಗಳನ್ನು ಅನಾವರಣಗೊಳಿಸಿತು. ಈ ಸಂವಾದದ ಬರಹಗಳನ್ನು ‘ಪ್ರಜಾವಾಣಿ ಪ್ರಕಾಶನ’ 2014ರಲ್ಲಿ ‘ಜಾತಿ ಸಂವಾದ’ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು, ಈ ಕೃತಿ ಜಾತಿಯ ಬಗ್ಗೆ ನಡೆಯುವ ಸಂಶೋಧನೆಗಳಿಗೆ ಬಹು ಮುಖ್ಯವಾದ ಆಕರವಾಗಿದೆ.

ಎಚ್‌.ಎಸ್. ಶಿವಪ್ರಕಾಶ್‌ ಅವರ ‘ವಚನ ಸಾಹಿತ್ಯ ಮತ್ತು ಜಾತಿ ವಿರೋಧ’ (2013, ಮಾರ್ಚ್‌ 14) ಅಂಕಣ ಬರಹ ಚರ್ಚೆಯ ರೂಪು ಪಡೆದು, ನಾಡಿನ ಅನೇಕ ಬರಹಗಾರರು ವಚನಕಾರರ ಜಾತಿಮೀಮಾಂಸೆಗೆ ಸಂಬಂಧಿಸಿದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಪ್ರೇರಣೆಯಾಯಿತು. ಸುಮಾರು ಎರಡೂವರೆ ತಿಂಗಳ ಕಾಲ ನಡೆದ ಈ ಸಂವಾದ, ಜಾತಿವಿರೋಧಕ್ಕೆ ಸಂಬಂಧಿಸಿದ ವಚನಕಾರರ ಒಲವು ನಿಲುವುಗಳನ್ನು ಮರುಪರಿಶೀಲನೆಗೊಳಪಡಿಸಿತು. ‘ವಚನಗಳಲ್ಲಿ ಆಧ್ಯಾತ್ಮಿಕತೆ ಮತ್ತು ಸಾಮಾಜಿಕತೆ’ ಎನ್ನುವ ಎಚ್‌.ಎಸ್. ಶಿವಪ್ರಕಾಶರ ಬರಹದೊಂದಿಗೇ ಕೊನೆಗೊಂಡ ಈ ಸಂವಾದದಲ್ಲಿ ಪ್ರಕಟಗೊಂಡ ಇಪ್ಪತ್ತೇಳು ಲೇಖನಗಳನ್ನು ‘ವಚನ ಸಾಹಿತ್ಯ ಸಂವಾದ’ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ ಪ್ರಕಾಶನ’ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ (2014). ಡಾ. ಎಂ.ಎಂ. ಕಲಬುರ್ಗಿ, ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ, ಮೊಗಳ್ಳಿ ಗಣೇಶ್‌, ಚಂದ್ರಶೇಖರ ಕಂಬಾರ, ಕೆ.ವಿ. ಅಕ್ಷರ, ದೇವನೂರ ಮಹಾದೇವ ಈ ಸಂವಾದದಲ್ಲಿ ಭಾಗಿಯಾದ ಕೆಲವರು. ಈ ಕೃತಿಗೆ ಬರೆದ ಮುನ್ನುಡಿಯಲ್ಲಿ, ‘ಪ್ರಜಾವಾಣಿ ಪತ್ರಿಕೆಯು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಜನಪರ ನಿಲುವುಗಳನ್ನು ಕುರಿತ ತನ್ನ ಬದ್ಧತೆಯಿಂದ ಕರ್ನಾಟಕದ ಇನ್ನಾವ ಪತ್ರಿಕೆಯೂ ಪಡೆಯದ ವಿಶ್ವಾಸಾರ್ಹತೆಯನ್ನು ಪಡೆದುಕೊಂಡಿದೆ’ ಎಂದು ಡಾ. ಎಂ.ಎಸ್‌. ಆಶಾದೇವಿ ಅಭಿಪ್ರಾಯಪಟ್ಟಿದ್ದಾರೆ. ಅವರ ಮಾತು, ವಚನ ಸಂವಾದದ ಮಹತ್ವದೊಂದಿಗೆ ಪತ್ರಿಕೆಯ ಅನನ್ಯತೆಯನ್ನೂ ಹೇಳುವಂತಹದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT